ಪುನೀತ್ ಇಲ್ಲದೆ ತಬ್ಬಲಿಗಳಾದ ಅಲಕ್ಷ್ಯಕ್ಕೊಳಗಾದ ಹೆಣ್ಣು ಮಕ್ಕಳು, ಮಹಿಳೆಯರು

Update: 2021-10-30 04:32 GMT

ಮೈಸೂರು: ನಾಯಕ ನಟ ಪುನೀತ್ ರಾಜ್‌ಕುಮಾರ್ ನಿಧನದಿಂದ ನೊಂದ ಅಲಕ್ಷ್ಯಕ್ಕೊಳಗಾದ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ತಬ್ಬಲಿಗಳಾಗಿದ್ದು, ಶಕ್ತಿಧಾಮದಲ್ಲೀಗ ನೀರವ ಮೌನ ಆವರಿಸಿದೆ.

ಸಮಾಜದಲ್ಲಿ ನೊಂದ ಅವಮಾನಕ್ಕೊಳಗಾದ ಮಹಿಳೆಯರು ಮತ್ತು ನಿರ್ಲಕ್ಷಿತ ಮಕ್ಕಳ ಜೀವನೋಪಾಯಕ್ಕಾಗಿ ಅಂದು ಡಾ.ರಾಜ್‌ಕುಮಾರ್ ಅವರು ಸ್ಥಾಪಿಸಿದ್ದ ಶಕ್ತಿಧಾಮದಲ್ಲಿನ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಪುನೀತ್ ರಾಜ್‌ಕುಮಾರ್ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದರು. ಇಲ್ಲಿನ ಮಕ್ಕಳ ಶಿಕ್ಷಣ ಸೇರಿದಂತೆ ಅವರ ಬದುಕು ಕಟ್ಟಿಕೊಡಲು ರಾಜ್ ಕುಟುಂಬ ನಿರಂತರ ಸೇವೆ ಸಲ್ಲಿಸುತ್ತಿತ್ತು.

ಪುನೀತ್ ರಾಜ್‌ಕುಮಾರ್ ಅವರಂತೂ ಪ್ರತಿ ವರ್ಷ ಅವರ ತಾಯಿ ಪಾರ್ವತಮ್ಮ ಅವರ ಹುಟ್ಟು ಹಬ್ಬದ ದಿನ ಮತ್ತು ತಂದೆಯವರ ಜನ್ಮದಿನದಂದು ಶಕ್ತಿಧಾಮಕ್ಕೆ ಬಂದು ಇಲ್ಲಿನ ಮಕ್ಕಳೊಂದಿಗೆ ಊಟ ಮಾಡಿ ತಂದೆ ತಾಯಿಯ ಜನುಮದಿನವನ್ನು ಆಚರಿಸುತ್ತಿದ್ದರು. ಇನ್ನು ಮುಂದೆ ಪುನೀತ್ ನೆನಪು ಮಾತ್ರ.

ಪುನೀತ್ ಲಾಕ್ ಡೌನ್ ನಂತರ ಶಕ್ತಿ ಧಾಮಕ್ಕೆ ಭೇಟಿ ನೀಡಿರಲಿಲ್ಲ. 2019ರಲ್ಲಿ ಶಕ್ತಿಧಾಮದ ಆವರಣದಲ್ಲಿ ನಿರ್ಮಾಣವಾದ ನೂತನ ಕೌಶಲ್ಯ ಕಟ್ಟಡದ ಉದ್ಘಾಟನೆಗೆ ಬಂದಿದ್ದರು ಎಂದು ಶಕ್ತಿಧಾಮದ ಟ್ರಸ್ಟಿ ಸುಮನಾ ಪುನೀತ್ ನೆನೆದು ಭಾವುಕರಾದರು.

ಪುನೀತ್ ಮತ್ತು ಅವರ ಪತ್ನಿ ಅಶ್ವಿನಿ ವಿದೇಶಕ್ಕೆ ಹೋಗಿ ಬಂದರೆ ಅಲ್ಲಿಂದ ತರುತ್ತಿದ್ದ ದೊಡ್ಡ ದೊಡ್ಡ ಬಿಸ್ಕಟ್ ಮತ್ತು ಚಾಕೊಲೇಟ್‌ಗಳನ್ನು ಮಕ್ಕಳಿಗೆ ನೀಡಿ ಸಂತಸ ಪಡುತ್ತಿದ್ದರು. ಪುನೀತ್ ಮಕ್ಕಳೊಂದಿಗೆ ಸರಳವಾಗಿ ಇರುತ್ತಿದ್ದರು. ಇಲ್ಲಿನ ಮಕ್ಕಳಿಗೆ ಪುನೀತ್ ಕಂಡರೆ ಬಹಳ ಪ್ರೀತಿ. ಮುಂದಿನ ತಿಂಗಳು ಇನೊಓಂೀಸಿಸ್ ಸಂಸ್ಥೆಯವರು ಕಟ್ಟಿಸಿಕೊಟ್ಟಿದ್ದ ಕಟ್ಟಡ ಉದ್ಘಾಟನೆಗೆ ಪುನೀತ್ ರಾಜ್ ಕುಮಾರ್ ಬರಬೇಕಿತ್ತು. ಆದರೆ, ವಿ ಅವರನ್ನು ಬಾರದ ಲೋಕಕ್ಕೆ ಕರೆದುಕೊಂಡು ಹೋಗಿರುವುದು ಅತ್ಯಂತ ನೋವುಂಟು ಮಾಡಿದೆ ಎಂದು ದುಃಖಿತರಾದರು.

ಪುನೀತ್ ನಿಧನಕ್ಕೆ ಶನಿವಾರ ಶಕ್ತಿಧಾಮದಲ್ಲಿ ಸಂತಾಪ ಏರ್ಪಡಿಸಲಾಗಿದೆ. ನಮ್ಮ ಸಂಸ್ಥೆಯ ಜಯದೇವ್, ದೊರೆ ಭಗವಾನ್, ಜಯಮಾಲಾ, ಕೆಂಪಯ್ಯ ಟ್ರಸ್ಟಿಗಳಾಗಿದ್ದು, ಮಕ್ಕಳು ಸೇರಿದಂತೆ ನೊಂದವರು ಸಂತಾಪ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

► ಶಕ್ತಿ ಮೀರಿ ಮಕ್ಕಳಿಗೆ ಸಹಾಯ

ರಾಜ್ ಕುಟುಂಬ ಶಕ್ತಿ ಮೀರಿ ಇಲ್ಲಿನ ಮಕ್ಕಳಿಗೆ ಸಹಾಯ ಮಾಡುತ್ತಿತ್ತು. ಇಲ್ಲಿ ಒಂದನೇ ತರಗತಿಯಿಂದ ಇಂಜಿನಿಯರಿಂಗ್‌ವರೆಗೆ ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಅವರಿಗೆಲ್ಲಾ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಪುನೀತ್ ಸಹಾಯ ಮಾಡುತ್ತಿದ್ದರು. ಅವರ ತಂದೆ ಸ್ಥಾಪಿಸಿದ ಶಕ್ತಿ ಧಾಮಕ್ಕೆ ಪಾರ್ವತಮ್ಮ ಅಧ್ಯಕ್ಷರಾಗಿದ್ದರು. ಅವರ ನಿಧನಾ ನಂತರ ಶಿವರಾಜ್ ಕುಮಾರ್ ಪತ್ನಿ ಗೀತಾ ಅಧ್ಯಕ್ಷರಾಗಿದ್ದಾರೆ. ರಾಜ್ ಕುಟುಂಬದ ಮೂವರೂ ಮಕ್ಕಳು ನಮಗೆ ಸಹಾಯ ಮಾಡುತ್ತಿದ್ದರು ಎಂದು ಶಕ್ತಿಧಾಮದ ಟ್ರಸ್ಟಿ ಸುಮನಾ ನೆನೆದರು.

Writer - ನೇರಳೆ ಸತೀಶ್ ಕುಮಾರ್

contributor

Editor - ನೇರಳೆ ಸತೀಶ್ ಕುಮಾರ್

contributor

Similar News