ಅಳಿವಿನ ಬಿಕ್ಕಟ್ಟಿಗೆ ಭಾಷಾ ವೈವಿಧ್ಯವೇ ಕೀಲಿಕೈ
ಪ್ರಸ್ತುತ ನಮ್ಮ ಗ್ರಹ ಎದುರಿಸುತ್ತಿರುವ ಬಹು ದೊಡ್ಡ ಸಮಸ್ಯೆ ಎಂದರೆ ಅಳಿವಿನ ಬಿಕ್ಕಟ್ಟು. ಬಹುತೇಕ ಜೀವಿಗಳು ಅಳಿದುಹೋಗಿವೆ ಮತ್ತು ಕೆಲವು ಜೀವಿಗಳು ಅಳಿವಿನಂಚಿನಲ್ಲಿವೆ. ಅಳಿವಿನ ಬಿಕ್ಕಟ್ಟಿನಿಂದಾಗಿ ಪ್ರತಿಯೊಂದು ರಾಷ್ಟ್ರವೂ ಬಹುದೊಡ್ಡ ಸಂಪತ್ತನ್ನು ಕಳೆದುಕೊಳ್ಳುತ್ತಿದೆ. ಇದನ್ನು ಉಳಿಸಿಕೊಳ್ಳಲು ಪ್ರತಿ ದೇಶವೂ ಶ್ರಮಿಸುತ್ತಿದೆ. ಕಾಲಕಾಲಕ್ಕೆ ಅಳಿವಿನಂಚಿನಲ್ಲಿರುವ ಜೀವಿಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸುತ್ತದೆ. ಅಂತಹ ಜೀವಿಗಳನ್ನು ರಕ್ಷಿಸಲು ಮುಂದಾಗಬೇಕೆಂಬ ವರದಿಗಳು ಜಾಗತಿಕ ಮಟ್ಟದಲ್ಲಿ ಮಂಡನೆಯಾಗುತ್ತವೆ. ಹವಾಮಾನ ಬದಲಾವಣೆಯ ಪ್ರಭಾವದಿಂದಾಗಿ ಜಗತ್ತಿನ ಜೀವವೈವಿಧ್ಯ ತಾಣಗಳು ಅಪಾಯಕ್ಕೆ ಸಿಲುಕಿವೆ. ಸುಮಾರು 17 ಸಾವಿರಕ್ಕೂ ಹೆಚ್ಚು ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ಅಳಿವಿನಂಚಿನಲ್ಲಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಆದರೆ ಜೀವವೈವಿಧ್ಯದ ಮಹತ್ವ ಯಾರಿಗೆ ತಲುಪಬೇಕಾಗಿತ್ತೋ ಅವರಿಗೆ ತಲುಪುತ್ತಿಲ್ಲ. ಅಂದರೆ ಆಯಾ ಪ್ರಾದೇಶಿಕವಾರು ಜನಸಾಮಾನ್ಯರಿಗೆ ಇಂತಹ ಅಮೂಲ್ಯ ಮಾಹಿತಿ ತಲುಪುತ್ತಿಲ್ಲದಿರುವುದೇ ಈ ದುರಂತಕ್ಕೆ ಕಾರಣವಾಗಿರಲೂಬಹುದು.
‘‘ಜೀವವೈವಿಧ್ಯ ಸಂರಕ್ಷಣಾ ತಂತ್ರಗಳು ಕೇವಲ ಜಾಗತಿಕ ಭಾಷೆಗಳಲ್ಲಿ ಮಾತ್ರ ಪ್ರಕಟವಾಗುತ್ತಿವೆ. ಆದರೆ ಸ್ಥಳೀಯ ಭಾಷೆಗಳಲ್ಲಿ ಪ್ರಕಟವಾಗುವುದು ವಿರಳ. ಪ್ರಕಟವಾದರೂ ಕೇವಲ ಒಂದೋ ಎರಡೋ ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಈ ಪತ್ರಿಕೆಗಳಾಗಲೀ, ಮಾಹಿತಿಗಳಾಗಲೀ ಜನಸಾಮಾನ್ಯರನ್ನು ತಲುಪದೆ ಜೀವವೈವಿಧ್ಯ ನಾಶವಾಗುತ್ತದೆ’’ ಎಂದು ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾನಿಲಯದ ಪ್ರಮುಖ ಲೇಖಕರು ಹಾಗೂ ಅಧ್ಯಯನಕಾರರಾದ ಡಾ.ತಾತ್ಸುಯೊ ಅಮಾನೊ ಅಭಿಪ್ರಾಯ ಪಡುತ್ತಾರೆ. ಪರಿಣಾಮಕಾರಿ ಸಂರಕ್ಷಣಾ ನಿರ್ಧಾರಕಗಳು ಕೇವಲ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಲಭ್ಯ ಇವೆ. ಜಗತ್ತಿನ ಇನ್ನುಳಿದ ಭಾಷೆಗಳಲ್ಲಿ ಇಂತಹ ಮಾಹಿತಿಗಳು ತುಂಬಾ ವಿರಳವಾಗಿ ದೊರೆಯುತ್ತವೆ. ಸ್ಥಳೀಯ ಅಥವಾ ಪ್ರಾದೇಶಿಕ ಭಾಷೆಗಳಲ್ಲಿನ ಮಾಹಿತಿಯ ಅಲಭ್ಯತೆಯು ವೈಜ್ಞಾನಿಕ ಪುರಾವೆಗಳನ್ನು ಒದಗಿಸುವಲ್ಲಿ ವಿಫಲವಾಗುತ್ತದೆ. ಹಾಗಾಗಿ ಸಂರಕ್ಷಣಾ ತಂತ್ರಗಳು ಎಲ್ಲರಿಗೂ ಲಭ್ಯವಾಗುವುದಿಲ್ಲ ಎನ್ನುತ್ತಾರೆ ತಾತ್ಸುಯೊ ಅಮಾನೊ. ಸ್ಥಳೀಯ ಜನರು ಮತ್ತು ಸ್ಥಳೀಯ ಭಾಷೆಯನ್ನು ಹೊರತುಪಡಿಸಿ ಜೀವವೈವಿಧ್ಯ ಸಂರಕ್ಷಣೆ ಎಂಬುದು ಹಗಲು ಕಂಡ ಬಾವಿಗೆ ರಾತ್ರಿ ಬೀಳುವಂತಾಗುತ್ತದೆ. ಏಕೆಂದರೆ ಮನುಷ್ಯರೂ ಸ್ಥಳೀಯ ಪರಿಸರದ ಭಾಗವಾಗಿರುವುದರಿಂದ ಜೀವವೈವಿಧ್ಯ ರಕ್ಷಿಸುವಲ್ಲಿ ಅವರನ್ನೂ ಪರಿಗಣಿಸುವುದು ಬಹಳ ಮುಖ್ಯ.
ತಾತ್ಸುಯೊ ಅಮಾನೊ ಅವರು ತಮ್ಮ ಜೀವವೈವಿಧ್ಯ ಸಂರಕ್ಷಣೆಯ ಕೊಂಡಿ ಎಲ್ಲಿ ಕಳಚಿದೆ ಎಂಬ ಮೂಲವನ್ನು ಕಂಡುಹಿಡಿದಿದ್ದಾರೆ. ಅದಕ್ಕಾಗಿ ಅವರು 60 ಜನರ ತಂಡದೊಂದಿಗೆ ಜಗತ್ತಿನ ವಿವಿಧ ಜೀವವೈವಿಧ್ಯ ತಾಣಗಳು ಹಾಗೂ ಅಲ್ಲಿನ ಸ್ಥಳೀಯ ಭಾಷೆಯಲ್ಲಿನ ಸಂರಕ್ಷಣಾ ನಿರ್ದೇಶನಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಜಗತ್ತಿನ ಪ್ರಮುಖ ಭಾಷೆಗಳಾದ ಇಂಗ್ಲಿಷ್, ಸ್ಪ್ಯಾನಿಶ್‌ನಂತಹ ಭಾಷೆಗಳಲ್ಲಿ ಇಂತಹ ವೈಜ್ಞಾನಿಕ ಸಂರಕ್ಷಣಾ ಬರಹಗಳು ಹೆಚ್ಚು ಪ್ರಕಟಗೊಳ್ಳುತ್ತವೆ. ಇಂತಹ ಜಾಗತಿಕ ಭಾಷೆಗಳನ್ನು ಬಳಸಲಾಗದ ಜಗತ್ತಿನ ಬಹುತೇಕ ಭಾಗಗಳು ಜೀವವೈವಿಧ್ಯ ಕೇಂದ್ರಗಳಾಗಿವೆ. ಇತರ ಭಾಷೆಗಳ ಸಾಕ್ಷಗಳನ್ನು ನೋಡಲು, ತಿಳಿಯಲು ವಿಫಲವಾದಾಗ ಸಂರಕ್ಷಣೆಯ ಗಮನವು ನಿರ್ಲಕ್ಷಿತಗೊಳ್ಳುತ್ತದೆ ಎಂಬುದು ತಾತ್ಸುಯೊ ಅಮಾನೊ ಅವರ ಅಧ್ಯಯನದ ಸಾರ.
ಜೀವವೈವಿಧ್ಯ ಸಂರಕ್ಷಿಸುವಲ್ಲಿ ಭಾಷಾ ವೈವಿಧ್ಯವು ಎಷ್ಟು ಮುಖ್ಯ ಎಂಬುದನ್ನು ಅವರ ಅಧ್ಯಯನ ವರದಿ ತಿಳಿಸುತ್ತದೆ. ಸಾಂಸ್ಕೃತಿಕ ವೈವಿಧ್ಯವು ವೈಜ್ಞಾನಿಕ ಸಂಶೋಧನೆಗಳ ಪೋಷಣೆಯಲ್ಲಿ ಎಷ್ಟು ಮುಖ್ಯ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಕೇವಲ ಭಾಷಾ ಅಭಿಮಾನವೊಂದಿದ್ದರೆ ಸಾಲದು. ಇಂತಹ ವೈಜ್ಞಾನಿಕ ಸಂಗತಿಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಲಿಪ್ಯಂತರಗೊಳಿಸುವ ಹಾಗೂ ಮಾಹಿತಿಯನ್ನು ಪ್ರಾದೇಶಿಕ ಜನತೆಯ ಹೃದಯಕ್ಕೆ ತಲುಪಿಸಿದಾಗ ಮಾತ್ರ ಇಂತಹ ಅಳಿವಿನ ಬಿಕ್ಕಟ್ಟುಗಳನ್ನು ನಿವಾರಿಸಬಹುದು. ಜಾಗತಿಕ ಸವಾಲುಗಳನ್ನು ಪ್ರಪಂಚದ ಮೂಲೆಮೂಲೆಗೂ ಆಯಾ ಭಾಷಾ ಸೊಗಡಿನ ಹಿನ್ನೆಲೆಯಲ್ಲಿ ತಲುಪಿಸಿದಾಗ ಸಂರಕ್ಷಣೆಯ ಶ್ರಮ ಸಾರ್ಥಕವಾಗುತ್ತದೆ. ಜೊತೆಗೆ ಭಾಷೆಯೂ ಅಭಿವೃದ್ಧಿಯಾಗುತ್ತದೆ. ಸಾಂಸ್ಕೃತಿಕ ವೈವಿಧ್ಯ ಮತ್ತು ಜೀವ ವೈವಿಧ್ಯಗಳು ಪರಸ್ಪರ ಸಂಬಂಧ ಹೊಂದಿವೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಪ್ರತಿ ಭೌಗೋಳಿಕ ಪ್ರದೇಶದ ಸಾಂಸ್ಕೃತಿಕತೆಯು ಅಲ್ಲಿನ ಜೀವವೈವಿಧ್ಯ ರಕ್ಷಿಸಲು ಸಾಕಷ್ಟು ವ್ಯವಸ್ಥೆಗಳನ್ನು ಒಳಗೊಂಡಿದೆ. ವಿವಿಧ ಆಚರಣೆಗಳ ಮೂಲಕ ಜೀವವೈವಿಧ್ಯ ಕಾಪಾಡಲು ಅಗತ್ಯ ಕ್ರಮಗಳನ್ನು ಅನುಸರಿಸುತ್ತವೆ. ಹಬ್ಬಗಳ ಹೆಸರಿನಲ್ಲಿ ಕಾಲಕಾಲಕ್ಕೆ ನಡೆಯುವ ಆಚರಣೆಗಳು ಜೀವವೈವಿಧ್ಯ ರಕ್ಷಿಸುತ್ತವೆ. ಸುಗ್ಗಿಯ ದಿನಗಳಲ್ಲಿ ಹೊಲಕ್ಕೆ ಚರಗ ಚೆಲ್ಲುವಿಕೆಯನ್ನು ಇಲ್ಲಿ ಉದಾಹರಿಸಬಹುದು. ಇಂತಹ ಅನೇಕ ಆಚರಣೆಗಳು ಜೀವವೈವಿಧ್ಯ ರಕ್ಷಿಸಲು ಸಹಕಾರಿಯಾಗಿವೆ.
ಇತ್ತೀಚಿನ ವರ್ಷಗಳಲ್ಲಿ ಭಾಷಾ ಏಕರೂಪೀಕರಣ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ. ಪ್ರಾದೇಶಿಕತೆಯನ್ನು, ಸ್ಥಳೀಯ ಭಾಷಾ ಸಂಪತ್ತನ್ನು ಹಾಗೂ ಸ್ಥಳೀಯ ಸಾಂಸ್ಕೃತಿಕತೆಯನ್ನು ಮಟ್ಟ ಹಾಕುವ ಹುನ್ನಾರ ಎಂಬುದು ಸ್ಪಷ್ಟ. ಸ್ಥಳೀಯ ಭಾಷೆಗಳು ಅಪಾಯದಲ್ಲಿವೆ ಎಂಬುದನ್ನು ಒತ್ತಿ ಹೇಳಬೇಕಾದ ಅಗತ್ಯವಿಲ್ಲ. ಪ್ರಕೃತಿ ಸಂರಕ್ಷಣೆ ಕೇವಲ ವಿದ್ಯಾವಂತರಿಂದ ಮಾತ್ರ ಸಾಧ್ಯವಿಲ್ಲ ಎಂಬುದು ಅರಿವಿಗೆ ಬಂದಿದೆ. ಸ್ಥಳೀಯ ಅನಕ್ಷರಸ್ಥರು ಹಾಗೂ ನವ ಸಾಕ್ಷರರು ಸಹ ಪ್ರಕೃತಿ ರಕ್ಷಕರೇ ಆಗಿದ್ದಾರೆ. ಪ್ರಕೃತಿಯನ್ನು ಸಂರಕ್ಷಿಸುವ ಮತ್ತು ಮಾನವ ಸಂಸ್ಕೃತಿಗಳ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳದೆ ಹೋದರೆ ಜೀವವೈವಿಧ್ಯ ಎಂಬ ಪದವನ್ನು ಶಬ್ದಕೋಶದಿಂದ ತೆಗೆದುಹಾಕಬೇಕಾಗಬಹುದು. ಜನಾಂಗಶಾಸ್ತ್ರದ ಪ್ರಕಾರ ಪ್ರಪಂಚದ ಶೇಕಡಾ 50ರಷ್ಟು ಭಾಷೆಗಳು ಅಳಿವಿನಂಚಿನಲ್ಲಿವೆ ಎಂದು ಅಂದಾಜಿಸಲಾಗಿದೆ. ಪ್ರತಿ ಎರಡು ವಾರಗಳಿಗೊಮ್ಮೆ ಒಂದು ಭಾಷೆ ಕಣ್ಮರೆಯಾಗುತ್ತಿದೆ. ಇಲ್ಲಿ ಕೇವಲ ಭಾಷೆ ಮಾತ್ರ ಕಣ್ಮರೆಯಾಗುತ್ತಿಲ್ಲ. ಆ ಭಾಷೆಯನ್ನಾಡುವ ಜನರ ಸಂಸ್ಕೃತಿಯೂ ನಶಿಸುತ್ತದೆ. 2011ರ ಭಾರತದ ಜನಗಣತಿ ಪ್ರಕಾರ ಭಾರತದಲ್ಲಿ 19,500ಕ್ಕೂ ಹೆಚ್ಚು ಮಾತೃಭಾಷೆಗಳಿವೆ. ಅದರಲ್ಲಿ 10 ಸಾವಿರ ಹಾಗೂ ಅದಕ್ಕೂ ಹೆಚ್ಚು ಜನರು ಮಾತನಾಡುವ 121 ಭಾಷೆಗಳು ಭಾರತದಲ್ಲಿವೆ.
ಭಾರತದ ಸಂವಿಧಾನವು 8ನೇ ಪರಿಚ್ಛೇದದ ಅಡಿಯಲ್ಲಿ 22 ಭಾಷೆಗಳನ್ನು ಅಂಗೀಕೃತಗೊಳಿಸಿದೆ. ವೈವಿಧ್ಯಮಯ ಭಾಷಾ ಸಂಸ್ಕೃತಿಯನ್ನು ಹೊಂದಿದ ಭಾರತದಲ್ಲಿ ಎಲ್ಲಾ ವೈಜ್ಞಾನಿಕ ಮಾಹಿತಿಯು ಎಲ್ಲಾ ಭಾಷೆಗಳಲ್ಲಿ ಲಭ್ಯವಿಲ್ಲದಿರುವುದು ದುರಂತ. ಭಾಷೆ ಮತ್ತು ಸಾಂಪ್ರದಾಯಿಕ ಜ್ಞಾನದ ನಡುವೆ ಮೂಲಭೂತ ಸಂಬಂಧವಿದೆ ಎಂದು ಯುನೆಸ್ಕೋ ಹೇಳಿದೆ. ಸ್ಥಳೀಯ ಸಮುದಾಯಗಳು ಸ್ಥಳೀಯ ಪರಿಸರದ ಬಗ್ಗೆ ಆಳವಾದ ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತವೆ. ಒಂದು ಸಮುದಾಯವು ಇನ್ನೊಂದು ಭಾಷೆಗೆ ಬದಲಾದಾಗ ಅದು ತನ್ನ ಸಂಸ್ಕೃತಿಯ ಜೊತೆಗೆ ಪರಿಸರದ ಜ್ಞಾನವನ್ನು ಕಳೆದುಕೊಳ್ಳುತ್ತದೆ ಎಂದು ಯುನೆಸ್ಕೋ ಕಳವಳಪಡುತ್ತದೆ. ಸ್ಥಳೀಯ ಭಾಷೆಗಳು ಜೀವವೈವಿಧ್ಯದ ನಷ್ಟವನ್ನು ಕಡಿಮೆ ಮಾಡುವ ತಂತ್ರಗಳನ್ನು ಅಳವಡಿಸಿಕೊಳ್ಳಲು ಮತ್ತು ವಿಕಸಿಸಲು ಉತ್ತಮ ಸಾಮರ್ಥ್ಯ ಹೊಂದಿವೆ. ಸ್ಥಳೀಯ ಭಾಷೆ ಮಾತ್ರ ಜೀವವೈವಿಧ್ಯದ ಸಮರ್ಥನೀಯ ಸಂರಕ್ಷಣೆ ಮತ್ತು ನಿರ್ವಹಣೆಗೆ ಪರಿಣಾಮಕಾರಿ ಸಾಧನವಾಗಬಹುದು ಎಂಬುದು ವೇದ್ಯವಾಗಿದೆ. ಭಾಷಾಭಿಮಾನ ಎನ್ನುವುದು ಕೇವಲ ಮೆರವಣಿಗೆಯಾಗಬಾರದು. ಈಗ ಮತ್ತೊಂದು ಕನ್ನಡ ರಾಜ್ಯೋತ್ಸವ ಬಂದಿದೆ. ಕನ್ನಡ ನಾಡು ನುಡಿಯ ಏಳಿಗೆಗೆ ಶ್ರಮಿಸುವ ಅನೇಕ ಸರಕಾರಿ ಹಾಗೂ ಸರಕಾರೇತರ ಸಂಸ್ಥೆಗಳಿವೆ. ಇವುಗಳ ಕಾರ್ಯವು ಇನ್ನಷ್ಟು ವಿಸ್ತರಿಸಬೇಕಾದ ಅಗತ್ಯ ಇದೆ. ಕನ್ನಡ ನೆಲದಲ್ಲಿ ಕನ್ನಡ ಮಾತನಾಡೋಣ ಎಂದರಷ್ಟೇ ಸಾಲದು.
ಕನ್ನಡವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕಾದರೆ ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡ ರಾರಾಜಿಸುವಂತಾಗಬೇಕು. ಇಂದು ಅಂತರ್ಜಾಲದಲ್ಲಿನ ಬಹುತೇಕ ಮಾಹಿತಿ ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿದೆ. ಅಂತಹ ಎಲ್ಲಾ ಮಾಹಿತಿ ಕನ್ನಡದಲ್ಲಿ ದೊರೆಯುವಂತಾಗಬೇಕು. ವಿದೇಶದಲ್ಲಿ ನೆಲೆಸಿದ ಕನ್ನಡಿಗರಿಗೆ ತಮ್ಮ ಮೂಲ ಭೌಗೋಳಿಕ ಪ್ರದೇಶದ ವೈವಿಧ್ಯಮಯ ಮಾಹಿತಿಯು ಪ್ರಾದೇಶಿಕ ಭಾಷೆಯಲ್ಲಿ ದೊರೆತಾಗ ಅವರಲ್ಲೂ ಸಹಜವಾಗಿ ಭಾಷಾಭಿಮಾನ ಮೂಡುತ್ತದೆ. ಮುಂದಿನ ಪೀಳಿಗೆಗೆ ಭಾಷಾ ಸಂಸ್ಕೃತಿಯನ್ನು ವರ್ಗಾಯಿಸಲು ಸಹಾಯಕವಾಗುತ್ತದೆ. ಅನ್ಯಭಾಷಾ ಬೋರ್ಡ್‌ಗಳನ್ನು ಕಿತ್ತುಹಾಕುವುದಷ್ಟೇ ಕನ್ನಡಪರ ಸಂಘಟನೆಗಳ ಕಾರ್ಯವಾಗಬಾರದು. ಅದರ ಜೊತೆಗೆ ಈ ಹಿನ್ನೆಲೆಯಲ್ಲಿ ಕನ್ನಡ ಪರ ಸಂಸ್ಥೆಗಳು ಹಾಗೂ ಸಂಘಟನೆಗಳು ಜೀವವೈವಿಧ್ಯದ ಸಂರಕ್ಷಣೆಗೆ ಪೂರಕವಾದ ವೈಜ್ಞಾನಿಕ ಮಾಹಿತಿಗಳನ್ನು ಕನ್ನಡದಲ್ಲಿ ರೂಪಿಸುವಂತಹ ಹಾಗೂ ಅದನ್ನು ಡಿಜಿಟಲೀಕರಣಗೊಳಿಸುವಂತಹ ಬಹುದೊಡ್ಡ ಕಾರ್ಯಕ್ಕೆ ಮುಂದಾಗಬೇಕಿದೆ. ಈ ವರ್ಷದ ಕನ್ನಡ ರಾಜ್ಯೋತ್ಸವ ಅರ್ಥಪೂರ್ಣವಾಗಬೇಕಾದರೆ, ವೈಜ್ಞಾನಿಕ ಸಂರಕ್ಷಣೆಯ ವರದಿಗಳು, ನಿರ್ಣಯಗಳು, ಅಧ್ಯಯನಗಳ ಸಾರಗಳು ಸ್ಥಳೀಯ ಭಾಷೆಯಲ್ಲಿ ಬರಲಿ, ಆ ಮೂಲಕ ನಮ್ಮ ಜ್ಞಾನ ಎಲ್ಲೆಡೆ ಪಸರಿಸುವಂತಾಗಲಿ ಎಂಬುದೇ ನಮ್ಮ ಆಶಯ.