ಈ ರಾಜ್ಯದ ಸಾರಿಗೆ ಬಸ್ ಚಾಲಕ ಹುದ್ದೆಯಲ್ಲಿ 33 ಶೇ. ಮಹಿಳಾ ಮೀಸಲಾತಿ!
ಹೊಸದಿಲ್ಲಿ, ಅ.31: ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ದಿನೇ ದಿನೇ ಕುಸಿಯುತ್ತಿರುವ ಬೆನ್ನಲ್ಲೇ ದಿಲ್ಲಿ ನಗರ ಸಾರಿಗೆಯ ಎಲ್ಲ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್‌ಗಳಾಗಿ ಪರಿವರ್ತಿಸುವುದಾಗಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಪ್ರಕಟಿಸಿದ್ದಾರೆ. ದಿಲ್ಲಿಯನ್ನು ಮಾಲಿನ್ಯ ಮುಕ್ತಗೊಳಿಸಲು ಕೇಜ್ರಿವಾಲ್ ಸರಕಾರ ಎಲ್ಲ ಪ್ರಯತ್ನಗಳನ್ನೂ ನಡೆಸಲಿದೆ ಎಂದು ಅವರು ಹೇಳಿದ್ದಾರೆ.
ಇ- ಸಾರಿಗೆ ವ್ಯವಸ್ಥೆ ಮೂಲಕ ದಿಲ್ಲಿಯನ್ನು ಹಸಿರು ರಾಜಧಾನಿಯಾಗಿ ಮಾಡುವುದಾಗಿ ಭರವಸೆ ನಿಡಿರುವ ಅವರು, ಬಸ್ಸುಗಳ ಚಾಲಕ ಹುದ್ದೆಯಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ನೀಡಲು ಕೂಡಾ ಇಲಾಖೆ ನಿರ್ಧರಿಸಿದೆ ಎಂದು ಸಂಡೇ ಸ್ಟ್ಯಾಂಡರ್ಡ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
ಮೊದಲ ಹಂತವಾಗಿ ಇ-ಆಟೊ ಪರ್ಮೀಟ್ ನೀಡಿಕೆಯಲ್ಲಿ ಮಹಿಳೆಯರಿಗೆ ಶೇಕಡ 33 ಮೀಸಲಾತಿ ನೀಡಲಾಗುತ್ತಿದೆ. ಮಹಿಳೆಯರು ಸರಕಾರಿ ಸಾರಿಗೆ ಸೇವೆಗೆ ಸೇರುವಂತೆ ಮತ್ತು ಚಾಲಕರಾಗಿ ವೃತ್ತಿ ನಿರ್ವಹಿಸುವಂತೆ ಮಾಡುವ ನೀಡುವ ನಿಟ್ಟಿನಲ್ಲಿ ಸಬಲೀಕರಿಸಲು ಸರಕಾರ ಮುಂದಾಗಿದೆ. ಎಲ್ಲ ಎಲೆಕ್ಟ್ರಿಕ್ ಬಸ್‌ಗಳಿಗೆ ಮಹಿಳಾ ಚಾಲಕರನ್ನೇ ನಿಯೋಜಿಸುವ ಇವಿ ನೀತಿಗೆ ಕೂಡಾ ಅವಕಾಶ ಕಲ್ಪಿಸಲಾಗಿದೆ. ಭವಿಷ್ಯದಲ್ಲಿ ಎಲ್ಲ ಇ-ಬಸ್‌ಗಳು ಮಹಿಳಾ ಚಾಲಕರನ್ನು ಹೊಂದಿರುತ್ತವೆ ಎಂದು ವಿವರಿಸಿದರು.
ಆದರೆ ಇತ್ತೀಚೆಗೆ ಡಿಟಿಸಿ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಿದ ಮಹಿಳೆಯರನ್ನು ತಿರಸ್ಕರಿಸಲಾಗಿದೆ ಎಂಬ ಬಗ್ಗೆ ಗಮನಸೆಳೆದಾಗ, "ಅರ್ಹತಾ ಮಾನದಂಡದ ಪ್ರಕಾರ, ಡಿಟಿಸಿ ಚಾಲಕರ ಎತ್ತರ 5.3 ಅಡಿ ತರಬೇಕು. ಆದರೆ ಈ ಮಾನದಂಡದಲ್ಲಿ ಹಲವು ಮಹಿಳಾ ಆಕಾಂಕ್ಷಿಗಳು ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಈ ಆಕಾಂಕ್ಷಿಗಳು ಎಲ್ಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದು, ಘನ ವಾಹನಗಳ ಚಾಲನೆಗೆ ಲೈಸನ್ಸ್ ಕೂಡಾ ಪಡೆದಿದ್ದಾರೆ. ಈ ಅಹವಾಲುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಇದೀಗ ಕನಿಷ್ಠ ಎತ್ತರವನ್ನು 5 ಅಡಿ ಎಂದು ಪರಿಷ್ಕರಿಸಿದೆ ಎಂದರು.