22 ರಾಜ್ಯಗಳಲ್ಲಿ ಶಾಲೆ ಪುನರಾರಂಭ : ಶೇಕಡ 92 ಶಿಕ್ಷಕರಿಗೆ ಕೋವಿಡ್ ಲಸಿಕೆ

Update: 2021-11-03 03:43 GMT

ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕ ಹರಡುವುದನ್ನು ತಡೆಯಲು ವಿಧಿಸಿದ ನಿರ್ಬಂಧಗಳಿಂದಾಗಿ ಮುಚ್ಚಿದ್ದ ಶಾಲೆಗಳನ್ನು 22 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುನರಾರಂಭಿಸಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಅಂತೆಯೇ ದೇಶಾದ್ಯಂತ ಶೇಕಡ 92ರಷ್ಟು ಶಿಕ್ಷಕರಿಗೆ ಕೋವಿಡ್-19 ವಿರುದ್ಧದ ಲಸಿಕೆ ನೀಡಲಾಗಿದೆ ಎಂದು ಹೇಳಿದೆ.

ಶಾಲೆಗಳ ಪುನರಾರಂಭ ಮತ್ತು ಸಿಬ್ಬಂದಿಯ ಲಸಿಕೆ ಸ್ಥಿತಿಗತಿ ಕುರಿತ ಪ್ರಗತಿ ಪರಿಶೀಲನೆ ನಡೆಸಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಶಿಕ್ಷಣ ಸಂಸ್ಥೆಗಳನ್ನು ಸಹಜ ಸ್ಥಿತಿಗೆ ತರುವಂತೆ ಕರೆ ನೀಡಿದರು.

"ಶಾಲೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಕೌಶಲ ಕೇಂದ್ರಗಳಲ್ಲಿನ ಬೋಧನಾ ಮತ್ತು ಬೋಧಕೇತರ ಸಿಬ್ಬಂದಿಯ ಲಸಿಕೆ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ದೇಶಾದ್ಯಂತ ಕ್ಷಿಪ್ರಗತಿಯಲ್ಲಿ ಲಸಿಕೆ ನೀಡಿಕೆ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳು ಸಹಜ ಸ್ಥಿತಿಗೆ ಮರಳುವುದನ್ನು ನಾವು ಎದುರು ನೋಡುತ್ತಿದ್ದೇವೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಶೇಕಡ 92ರಷ್ಟು ಬೋಧಕ ಸಿಬ್ಬಂದಿಗೆ ಲಸಿಕೆ ನೀಡಲಾಗಿದ್ದು, ಕೇಂದ್ರ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡ 96ರಷ್ಟು ಪ್ರಗತಿಯಾಗಿದೆ. ದೇಶಾದ್ಯಂತ ಬೋಧಕೇತರ ಸಿಬ್ಬಂದಿ ಪೈಕಿ ಶೇಕಡ 86ರಷ್ಟು ಮಂದಿ ಲಸಿಕೆ ಸುರಕ್ಷೆ ಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ದೆಹಲಿ, ಹರ್ಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕೇರಳ ಮತ್ತು ಅಸ್ಸಾಂ ಸೇರಿದಂತೆ 22 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳು ಒಂದರಿಂದ 12ನೇ ತರಗತಿವರೆಗೆ ಕೂಡಾಶಾಲೆ ತೆರೆದಿವೆ ಎಂದು ವಿವರಿಸಿದ್ದಾರೆ.

ಜಮ್ಮು-ಕಾಶ್ಮೀರ, ಒಡಿಶಾ, ಅರುಣಾಚಲ ಪ್ರದೇಶ, ಗೋವಾ ಮತ್ತು ಪುದುಚೇರಿಯಲ್ಲಿ 9ರಿಂದ 12ನೇ ತರಗತಿಗಳು ಆರಂಭವಾಗಿವೆ. ಲಡಾಖ್, ಗುಜರಾತ್, ಪಂಜಾಬ್, ನಾಗಾಲ್ಯಾಂಡ್ ಮತ್ತು ಜಾರ್ಖಂಡ್‌ನಲ್ಲಿ 6 ರಿಂದ 12ನೇ ತರಗತಿ ಆರಂಭವಾಗಿದ್ದು. ಪಶ್ಚಿಮ ಬಂಗಾಳ ಮತ್ತು ಮಣಿಪುರ ಮಾತ್ರ ಇನ್ನೂ ಶಾಲೆ ಆರಂಭಿಸಬೇಕಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News