ಪ್ರತಿಪಕ್ಷಗಳ ಏಕತೆಯೊಂದೇ ಉಳಿದ ದಾರಿ

Update: 2021-11-07 19:30 GMT

ಚುನಾವಣೆಯ ಮೂಲಕ ದೊರೆತ ಅಧಿಕಾರವನ್ನು ಬಳಸಿಕೊಂಡು ಬಹುತ್ವ ಭಾರತದ ಅಡಿಪಾಯಕ್ಕೆ ಬಾಂಬಿಡುತ್ತಿರುವ ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಟ್ಟರೆ ಮಾತ್ರ ಭಾರತದ ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡಬಹುದು. ಮುಂಬರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಪ್ರತಿಪಕ್ಷಗಳು ಒಂದಾದರೆ ಮಾತ್ರ ಬಿಜೆಪಿಯ ಜೈತ್ರಯಾತ್ರೆಯನ್ನು ತಡೆಯಬಹುದಾಗಿದೆ.


ಜನಸಾಮಾನ್ಯರ ಜೀವನಮಟ್ಟ ಕುಸಿಯುತ್ತಿದೆ. ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆಯಿಂದ ನಿತ್ಯದ ಬದುಕು ಅಸಹನೀಯವಾಗಿದೆ. ಕೊರೋನ ಎರಡು ಸಲ ಅಪ್ಪಳಿಸಿತು. ಅದನ್ನು ಸರಿಯಾಗಿ ನಿಭಾಯಿಸಲಾಗದ ಸರಕಾರ ಅವೈಜ್ಞಾನಿಕವಾದ ಲಾಕ್ ಡೌನ್ ಹೇರಿತು. ಪರಿಣಾಮವಾಗಿ ಆರ್ಥಿಕ ಪರಿಸ್ಥಿತಿ ಹಳಿ ತಪ್ಪಿತು. ಕೈಯಲ್ಲಿನ ಉದ್ಯೋಗ ಕಳೆದುಕೊಂಡು ಜನ ಬೀದಿಗೆ ಬಿದ್ದಿದ್ದಾರೆ. ರಾಷ್ಟ್ರೀಯ ನಗರೀಕರಣ ಯೋಜನೆಯ ಹೆಸರಿನಲ್ಲಿ ಸರಕಾರದ ಆಸ್ತಿಯನ್ನು ಗುತ್ತಿಗೆಗೆ ನೀಡಿ ಮುಂದಿನ ಆರು ವರ್ಷಗಳಲ್ಲಿ ಆರು ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಸರಕಾರ ಮುಂದಾಗಿದೆ.

ಭಾರತದ ಅಧಿಕಾರ ಸೂತ್ರವನ್ನು 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಿಡಿದಾಗ ಅನೇಕ ಪ್ರಜ್ಞಾವಂತರಲ್ಲಿ ಮೂಡಿದ ಆತಂಕ ನಿಜವಾಗುತ್ತಿದೆ. ಆ ಬದಲಾವಣೆ ಬರೀ ರಾಜಕೀಯ ಅಧಿಕಾರ ಹಸ್ತಾಂತರ ಆಗಿರಲಿಲ್ಲ. ವಿವಿಧ ಸಮುದಾಯ, ಭಾಷೆಗಳಿಗೆ, ಧರ್ಮಗಳಿಗೆ ಸೇರಿದ ಭಾರತದ ಕೋಟ್ಯಂತರ ಜನರ ಬದುಕು ಇನ್ನು ಮುಂದೆ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ ಎಂಬ ಆತಂಕ, ಭೀತಿ ಎಲ್ಲೆಡೆ ಆವರಿಸಿದೆ.

ಕಳೆದ 70 ವರ್ಷಗಳಲ್ಲಿ ಅಪಾರ ಪರಿಶ್ರಮದಿಂದ ಗಳಿಸಿದ ಸಂಪತ್ತನ್ನು ಈ ರೀತಿ ಖಾಸಗಿ ರಂಗದ ಮಾರಾಟ ಮಾಡುವುದನ್ನು ಜನ ಪ್ರಶ್ನಿಸಬಾರದು ಎಂದು ಅವರನ್ನು ಮತಾಂಧತೆ, ಕೋಮು ದ್ವೇಷದ ವಿಷ ಸಾಗರದಲ್ಲಿ ಮುಳುಗಿಸಲಾಗುತ್ತಿದೆ.

ರಾಷ್ಟ್ರೀಯ ನಗರೀಕರಣದ ಹೆಸರಿನಲ್ಲಿ 1.6 ಲಕ್ಷ ಕೋಟಿ ರೂ. ಮೌಲ್ಯದ 26,700 ಕಿ.ಮೀ. ಹೆದ್ದಾರಿ, 1.4 ಲಕ್ಷ ಕೋಟಿ ಮೌಲ್ಯದ ರೈಲು ನಿಲ್ದಾಣಗಳು ಮತ್ತು 150 ರೈಲುಗಳು, 67 ಲಕ್ಷ ಕೋಟಿ ಮೌಲ್ಯದ 42,300 ವಿದ್ಯುತ್ ವಾಹಕ ಲೈನುಗಳು, ಇವುಗಳಲ್ಲದೆ ವಿಮಾನ ನಿಲ್ದಾಣಗಳು ಸೇರಿ ಎಲ್ಲವನ್ನೂ ಗುತ್ತಿಗೆ ನೀಡಲು ಈ ಸರಕಾರ ಹೊರಟಿದೆ.ಗುತ್ತಿಗೆಗೆ ಕೊಡುವುದೆಂದರೆ ಸಾರ್ವಜನಿಕ ಸಂಪತ್ತನ್ನು ಖಾಸಗಿ ರಂಗದ ಅಂಬಾನಿ, ಅದಾನಿಯಂತಹ ರಣ ಹದ್ದುಗಳಿಗೆ ಅಗ್ಗದ ಬೆಲೆಗೆ ಬಿಟ್ಟಿಯಾಗಿ ಕೊಡುವುದು.

ಮುಂದಿನ ಲೋಕಸಭಾ ಚುನಾವಣೆ 2023-24ರಲ್ಲಿ ನಡೆಯಲಿದೆ. ಅದಕ್ಕಿಂತ ಮೊದಲು ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಹಾಗೂ ಮಣಿಪುರ ರಾಜ್ಯಗಳ ವಿಧಾನಸಭೆಗೆ ಬರುವ ವರ್ಷ ಮೊದಲ ತಿಂಗಳಲ್ಲಿ ಚುನಾವಣೆ ನಡೆಯಲಿದೆ.
ಚುನಾವಣೆಯನ್ನು ಶತಾಯ ಗತಾಯ ಗೆಲ್ಲಲು ಬಿಜೆಪಿ ಅದರಲ್ಲೂ ವಿಶೇಷವಾಗಿ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಷಡ್ಯಂತ್ರ ರೂಪಿಸಿದೆ.

ಇದು ಕೊನೆಗೆ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗಳ ವಿನಾಶದತ್ತ ಭಾರತವನ್ನು ಕೊಂಡೊಯ್ಯುತ್ತದೆ. ಇದನ್ನು ತಡೆಯವುದು ಬರೀ ಹೋರಾಟದಿಂದ ಮಾತ್ರ ಸಾಧ್ಯವಿಲ್ಲ. ಹೋರಾಟದ ಜೊತೆಗೆ ಚುನಾವಣೆ ಮೂಲಕ ಅವರು ಪಡೆದ ರಾಜಕೀಯ ಅಧಿಕಾರವನ್ನು ಕಿತ್ತುಕೊಳ್ಳಬೇಕಾಗಿದೆ. ಇದಕ್ಕಾಗಿ ಅದೇ ಚುನಾವಣಾ ಅಸ್ತ್ರವನ್ನು ಬಳಸಬೇಕಾಗಿದೆ.

ಕಳೆದ 2017ರ ವಿಧಾನಸಭಾ ಚುನಾವಣೆಯಲ್ಲೂ ಈ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಂತಹ ಜನಪ್ರಿಯತೆ ಹೊಂದಿರಲಿಲ್ಲ. ಆದರೆ ಪ್ರತಿಪಕ್ಷಗಳ ಅನೈಕ್ಯತೆ ಬಿಜೆಪಿಗೆ ವರದಾನವಾಯಿತು. ಅನೇಕ ಕಡೆ ಬಹುಕೋನ ಸ್ಪರ್ಧೆ ಏರ್ಪಟ್ಟು ಬಿಜೆಪಿ ವಿರೋಧಿ ಮತಗಳು ವಿಭಜನೆಗೊಂಡವು. ಇದರ ಲಾಭ ಬಿಜೆಪಿಗೆ ಆಯಿತು. ಆದರೆ, ಪಶ್ಚಿಮ ಬಂಗಾಳ ಮತ್ತು ದಿಲ್ಲಿಯಲ್ಲಿ ಮಾತ್ರ ಮಮತಾ ಬ್ಯಾನರ್ಜಿ ಹಾಗೂ ಅರವಿಂದ ಕೇಜ್ರಿವಾಲ್ ಬಿಜೆಪಿಗೆ ಸರಿಯಾದ ಪಾಠ ಕಲಿಸಿದರು. ಆದರೆ, ಉತ್ತರ ಪ್ರದೇಶದಂತಹ ರಾಜ್ಯ ಮಾಯಾವತಿ ಅವರ ಬಿಎಸ್ಪಿ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳ ನಡುವಿನ ಒಡಕಿಂದ ಬಿಜೆಪಿ ಗೆದ್ದು ಆದಿತ್ಯನಾಥ್‌ನಂಥವರು ಆ ರಾಜ್ಯದ ಮುಖ್ಯಮಂತ್ರಿ ಆಗುವಂತಾಯಿತು.

ಕೋವಿಡ್ 2ನೇ ಅಲೆ ಬಂದ ನಂತರ ನಡೆದ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಕೊರೋನ ಎರಡನೇ ಅಲೆಯಲ್ಲಿ ಸಾವಿರಾರು ಅಮಾಯಕರು ಸರಕಾರದ ನಿರ್ಲಕ್ಷದಿಂದ ಸಾವಿಗೀಡಾದ ಬಗ್ಗೆ ಜನಸಾಮಾನ್ಯರಲ್ಲಿ ಆಕ್ರೋಶವಿದೆ. ಇದರ ಜೊತೆಗೆ ಕಳೆದ ಒಂದು ವರ್ಷದಿಂದ ರಾಜಧಾನಿ ದಿಲ್ಲಿಯಲ್ಲಿ ನಡೆದಿರುವ ಐತಿಹಾಸಿಕ ರೈತ ಹೋರಾಟ ಸರಕಾರಕ್ಕೆ ದಿಗಿಲು ಉಂಟು ಮಾಡಿದೆ. ಇದರ ಜೊತೆಗೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವನ ಪುತ್ರ ರೈತರ ಮೇಲೆ ಕಾರು ಹರಿಸಿದ ಪರಿಣಾಮವಾಗಿ ನಾಲ್ವರು ಅಸು ನೀಗಿದ ಘಟನೆಯಿಂದ ಬಿಜೆಪಿ ಕಂಗಾಲಾಗಿರುವುದು ನಿಜ.

ಆದರೆ, ಇದೇ ಕಾರಣದಿಂದ ಬಿಜೆಪಿಯು ಉತ್ತರ ಪ್ರದೇಶ ಮತ್ತು ಇತರ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಳ್ಳುತ್ತದೆ ಎಂದು ಯಾರಾದರೂ ಅಂದುಕೊಂಡರೆ ಅದು ಮೂರ್ಖತನವಾಗುತ್ತದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಏಕಾಂಗಿಯಾಗಿ ಎದುರಿಸುವ ಉತ್ಸಾಹದಲ್ಲಿರುವ ಕಾಂಗ್ರೆಸ್ ಅದರಲ್ಲೂ ಪ್ರಿಯಾಂಕಾ ಗಾಂಧಿಯವರು ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆ ನಡೆದಲ್ಲಿಗೆ ಹೋಗಿ ನೊಂದ ಕುಟುಂಬದವರ ಕಣ್ಣೀರು ಒರೆಸಿದ್ದು ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.40ರಷ್ಟು ಟಿಕೆಟ್ ನೀಡುವುದಾಗಿ ಘೋಷಿಸಿದ್ದು ನಿಜಕ್ಕೂ ದಿಟ್ಟ ಕ್ರಮಗಳಾಗಿವೆ.

ಆದರೆ, ಇದು ತುಂಬಾ ತಡವಾಯಿತು. ಚುನಾವಣೆ ಹೊತ್ತಿಗೆ ಇದು ಜನರಿಗೆ ತಲುಪಿ ಫಲ ನೀಡುವ ಸಾಧ್ಯತೆ ಕಡಿಮೆ. ಇದರ ಜೊತೆಗೆ ಇತರ ಬಿಜೆಪಿಯೇತರ ಪಕ್ಷಗಳ ಜೊತೆ ಚುನಾವಣಾ ಹೊಂದಾಣಿಕೆ ಅಗತ್ಯವಾಗಿದೆ.

ಚುನಾವಣೆಯ ಮೂಲಕ ದೊರೆತ ಅಧಿಕಾರವನ್ನು ಬಳಸಿಕೊಂಡು ಬಹುತ್ವ ಭಾರತದ ಅಡಿಪಾಯಕ್ಕೆ ಬಾಂಬಿಡುತ್ತಿರುವ ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಟ್ಟರೆ ಮಾತ್ರ ಭಾರತದ ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡಬಹುದು. ಮುಂಬರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಪ್ರತಿಪಕ್ಷಗಳು ಒಂದಾದರೆ ಮಾತ್ರ ಬಿಜೆಪಿಯ ಜೈತ್ರಯಾತ್ರೆಯನ್ನು ತಡೆಯಬಹುದಾಗಿದೆ.

ಕಾಂಗ್ರೆಸನ್ನು ಬಿಟ್ಟರೆ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ವಿರೋಧಿಸುವ ಇನ್ನೆರಡು ಪಕ್ಷಗಳೆಂದರೆ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಮತ್ತು ಮುಲಾಯಂ ಸಿಂಗ್ ಯಾದವರ ಸಮಾಜವಾದಿ ಪಕ್ಷ. ಇವರೆಡೂ ಪಕ್ಷಗಳು ಪರಸ್ಪರ ಎದುರಾಳಿಗಳಾಗಿವೆ. ಚುನಾವಣೆಯಲ್ಲಿ ಪರಸ್ಪರ ಎದುರು ಬದುರಾಗಿ ಸ್ಪರ್ಧಿಸುತ್ತವೆ. ಹೀಗಾಗಿ ಬಿಜೆಪಿ ವಿರೋಧಿ ಮತಗಳು ಸಹಜವಾಗಿ ವಿಭಜನೆಯಾಗುತ್ತವೆ. ಯಾದವ ಸಮುದಾಯದವರು ಸಮಾಜವಾದಿ ಪಕ್ಷದ ಪರವಾಗಿ ಮತ್ತು ದಲಿತರು ಅದರಲ್ಲೂ ಜಾಟರು ಬಹುಜನ ಸಮಾಜ ಪಕ್ಷವನ್ನು ಬೆಂಬಲಿಸುತ್ತಾರೆ. ಮುಸ್ಲಿಮರು ಬಹುತೇಕ ಸಮಾಜವಾದಿ ಪಕ್ಷದ ಪರವಾಗಿ ನಿಲ್ಲ್ಲುವುದರಿಂದ ಅದರ ಬಲ ಹೆಚ್ಚಾಗುತ್ತದೆ. ಆದರೆ, ಬಹುಮತ ಸಾಧ್ಯವಾಗುವುದಿಲ್ಲ. ಹೀಗೆ ಈ ಒಡಕಿನ ಪರಿಣಾಮವಾಗಿ ಬಿಜೆಪಿ ಮತ್ತೆ ಗೆಲ್ಲುವ ಎಲ್ಲ ಸಾಧ್ಯತೆ ಇರುವುದನ್ನು ತಳ್ಳಿ ಹಾಕಲಾಗುವುದಿಲ್ಲ.

ಉತ್ತರಾಖಂಡ, ಗೋವಾ, ಮಣಿಪುರಗಳಲ್ಲೂ ಪ್ರತಿಪಕ್ಷಗಳು ಒಂದುಗೂಡಿದರೆ ಬಿಜೆಪಿಗೆ ಪಾಠ ಕಲಿಸಲು ಸಾಧ್ಯವಾಗುತ್ತದೆ. ಉತ್ತರ ಪ್ರದೇಶ ಭಾರತದ ಅತ್ಯಂತ ದೊಡ್ಡ ರಾಜ್ಯ. ಅಲ್ಲಿನ ಚುನಾವಣಾ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮವನ್ನು ಬೀರುತ್ತದೆ. ಅದನ್ನು ಹೇಗಾದರೂ ಉಳಿಸಿಕೊಳ್ಳಲು ಬಿಜೆಪಿ ಅದರಲ್ಲೂ ವಿಶೇಷವಾಗಿ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಹರ ಸಾಹಸ ಮಾಡುತ್ತಿದೆ.

ಅಲ್ಲಿ ಮುಲಾಯಂ ಮತ್ತು ಅಖಿಲೇಶ್ ಯಾದವರ ಸಮಾಜವಾದಿ ಪಕ್ಷ, ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ,ಕಾಂಗ್ರೆಸ್ ಪಕ್ಷ,ರಾಷ್ಟ್ರೀಯ ಲೋಕದಳಗಳು ಒಂದಾಗಿ ಚುನಾವಣೆ ಎದುರಿಸಿದರೆ ಆದಿತ್ಯನಾಥ್‌ಮಾತ್ರವಲ್ಲ, ಅವರ ದಿಲ್ಲಿ ಬಾಸ್‌ಗಳು ಏನೇ ಸರ್ಕಸ್ ಮಾಡಿದರೂ ಚುನಾವಣೆಯಲ್ಲಿ ಗೆದ್ದು ಅಧಿಕಾರ ಉಳಿಸಿಕೊಳ್ಳುವುದು ಸುಲಭವಲ್ಲ. ಕಳೆದ ಬಾರಿ ಜಯಶಾಲಿಯಾದ ಬಿಜೆಪಿ ಪಡೆದ ಮತಗಳು ಶೇ.39.6. ಪ್ರತಿಪಕ್ಷಗಳು ಒಂದಾಗಿ, ಬಿಜೆಪಿ ವಿರೋಧಿ ಮತಗಳ ವಿಭಜನೆಯನ್ನು ತಪ್ಪಿಸಿದರೆ ಖಂಡಿತ ಬಿಜೆಪಿಯನ್ನು ಉತ್ತರ ಪ್ರದೇಶದಲ್ಲಿ ಸೋಲಿಸಬಹುದು.

ಅದರೆ ಪ್ರತಿಪಕ್ಷಗಳು ಒಂದಾಗದಂತೆ ಮೋದಿ, ಅಮಿತ್ ಶಾ, ಆದಿತ್ಯನಾಥ್ ನಾನಾ ಮಸಲತ್ತು ಮಾಡುತ್ತಾರೆ. ಪ್ರತಿಪಕ್ಷ ನಾಯಕರನ್ನು ಹೆದರಿಸಲು ಸಿಬಿಐ, ಜಾರಿ ನಿರ್ದೇಶನಾಲಯದಂತಹ ಅಸ್ತ್ರಗಳನ್ನು ಪ್ರಯೋಗಿಸುತ್ತಾರೆ. ಈ ಹುನ್ನಾರ ಎದುರಿಸಿ ಒಂದು ಗೂಡಿದರೆ ಮಾತ್ರ ಪ್ರತಿಪಕ್ಷಗಳಿಗೆ ಒಳ್ಳೆಯ ಅವಕಾಶವಿದೆ.

 2004ರಲ್ಲಿ ಮತ್ತು ಅದಕ್ಕಿಂತ ಮೊದಲು ಬಿಜೆಪಿ ಕೇಂದ್ರದ ಅಧಿಕಾರ ಸೂತ್ರ ಹಿಡಿಯುವುದನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕರಾಗಿದ್ದ ಹರಕಿಷನ್ ಸಿಂಗ್ ಸುರ್ಜಿತ್ ಮತ್ತು ಜ್ಯೋತಿ ಬಸು. ಆಗ ರಾಜಕೀಯ ವಲಯದಲ್ಲಿ ಮತ್ತು ಮಾಧ್ಯಮಗಳಲ್ಲಿ ಸುರ್ಜಿತರನ್ನು ಚಾಣಕ್ಯ ಎಂದು ಕರೆಯಲಾಗುತ್ತಿತ್ತು. ಆಗ ಪ್ರತಿಪಕ್ಷಗಳ ಪ್ರಮುಖ ನಾಯಕರಾಗಿದ್ದ ಸೋನಿಯಾ ಗಾಂಧಿ, ಮುಲಾಯಂ ಸಿಂಗ್ ಯಾದವ್, ಲಾಲೂ ಪ್ರಸಾದ್ ಯಾದವ್, ವಿ.ಪಿ.ಸಿಂಗ್, ಕರುಣಾನಿಧಿ ಮುಂತಾದವರು ಕಾಮ್ರೇಡ್ ಸುರ್ಜಿತ್ ಮಾತಿಗೆ ಬಹಳ ಬೆಲೆ ಕೊಡುತ್ತಿದ್ದರು. ಆದರೆ ಸುರ್ಜಿತ್ ಮತ್ತು ಜ್ಯೋತಿ ಬಸು ಅವರ ನಿರ್ಗಮನದ ನಂತರ ಪರಿಸ್ಥಿತಿ ಬದಲಾಯಿತು. ಅದೇನೇ ಇರಲಿ ಈಗಲೂ ಬಿಜೆಪಿಯೇತರ ಪ್ರತಿಪಕ್ಷಗಳು ಒಂದು ನಿರ್ದಿಷ್ಟ, ಕನಿಷ್ಠ ಕಾರ್ಯಕ್ರಮದಡಿ ಒಂದುಗೂಡಿ ಮುಂಬರುವ ಚುನಾವಣೆಯನ್ನು ಎದುರಿಸಿದರೆ ಫ್ಯಾಶಿಸ್ಟ್ ಶಕ್ತಿಗಳನ್ನು ಹಿಮ್ಮೆಟ್ಟಿಸಬಹುದು.

ಸ್ವಾತಂತ್ರಾ ನಂತರದ ಭಾರತದ ಇತಿಹಾಸವನ್ನು ಅವಲೋಕಿಸಿದರೆ ಯಾವುದೇ ಬಲಾಢ್ಯ ಪಕ್ಷ ಅಧಿಕಾರದ ಮದದಿಂದ ಪ್ರಜಾಪ್ರಭುತ್ವ ವಿರೋಧಿ ದಮನ ಕಾಂಡ ನಡೆಸಿದರೆ ಅದನ್ನು ಮಣಿಸಲು ಪ್ರತಿಪಕ್ಷ ಏಕತೆಯಿಂದ ಮಾತ್ರ ಸಾಧ್ಯವಾಗಿದೆ.
1977ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮೊದಲ ಬಾರಿ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಿದ್ದು ವಿರೋಧ ಪಕ್ಷಗಳ ಚುನಾವಣಾ ಪೂರ್ವ ಮೈತ್ರಿಯಿಂದ ಮಾತ್ರ. 2004-2009ರಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಎದುರಿಸಿದ್ದು ಉಳಿದ ಸಮಾನ ಮನಸ್ಕ ಪ್ರತಿಪಕ್ಷಗಳ ಒಗ್ಗಟ್ಟಿನಿಂದ ಎಂಬುದನ್ನು ಮರೆಯಬಾರದು.
ಬಿಜೆಪಿಗೆ ಆರೆಸ್ಸೆಸ್‌ನ ಬಹುದೊಡ್ಡ ಕಾರ್ಯಕರ್ತರ ಪಡೆ ಇದೆ. ಚಿಕ್ಕ ಮಗುವಾಗಿದ್ದಾಗಿನಿಂದ ಶಾಖೆಗೆ ಸೇರಿಸಿಕೊಂಡು ಬೆಳಸುತ್ತಾರೆ.

ಹೀಗೆ ಬೆಳೆದವರು ಕಾರ್ಯಾಂಗ, ನ್ಯಾಯಾಂಗ, ಶೈಕ್ಷಣಿಕ ಕ್ಷೇತ್ರ, ಸೇನೆ, ಪೊಲೀಸ್ ಎಲ್ಲೆಡೆ ನುಸುಳಿದ್ದಾರೆ. ಯಾವುದೇ ಸರಕಾರ ಬಂದರೂ ಇವರು ತಮ್ಮ ಅಜೆಂಡಾ ಜಾರಿಗೆ ತರುತ್ತಾರೆ. 70 ವರ್ಷಗಳ ಹಿಂದೆ ಸಾವರ್ಕರ್ ಒಂದು ಮಾತನ್ನು ಸ್ಪಷ್ಟವಾಗಿ ಹೇಳಿದ್ದರು. ಅದೇನೆಂದರೆ ಸೇನೆ, ಪೊಲೀಸ್, ಸರಕಾರ ಎಲ್ಲೆಡೆ ನಮ್ಮವರು ಸೇರಿಕೊಳ್ಳಬೇಕು ಎಂದಿದ್ದರು. ಬಿಜೆಪಿ ಕೇವಲ ಒಂದು ರಾಜಕೀಯ ಪಕ್ಷವಲ್ಲ. ಅದು ಆರೆಸ್ಸೆಸ್ ರಾಜಕೀಯ ವೇದಿಕೆ. ಅದನ್ನು ಎದುರಿಸುವ ಸಂಘಟನೆಗಳು ಅದಕ್ಕಿಂತ ಮಿಗಿಲಾದ ಕಾರ್ಯಕರ್ತರ ಪಡೆ ಕಟ್ಟಿ ಸೈದ್ಧಾಂತಿಕ ತರಬೇತಿ ನೀಡಬೇಕು.

ಹಳ್ಳಿ ಹಳ್ಳಿಗೂ ಹೋಗಿ ಭಾರತ ಎದುರಿಸುತ್ತಿರುವ ಸಮಸ್ಯೆಗಳು, ಬೆಲೆ ಏರಿಕೆ, ರೈತರ ಸಮಸ್ಯೆ, ದಲಿತರ ಮೇಲೆ ನಡೆಯುವ ದೌರ್ಜನ್ಯ, ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಬಗ್ಗೆ ವಿವರಿಸಿ ಹೇಳಬೇಕು. ಸಂಘಪರಿವಾರ ಸೃಷ್ಟಿಸಿದ ಸುಳ್ಳುಗಳನ್ನು ಬಯಲುಗೊಳಿಸಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಗಳನ್ನು ಸೋಲಿಸುವ ಮೂಲಕ ರಾಜಕೀಯ ಅಧಿಕಾರದಿಂದ ಅವುಗಳನ್ನು ದೂರವಿಡಬೇಕು. ಕಾಂಗ್ರೆಸ್, ಜೆಡಿಎಸ್‌ನಂತಹ ಪಕ್ಷಗಳಲ್ಲೂ ಸಂಘಪರಿವಾರದ ಬೆಂಬಲಿಗರಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳಿದ್ದಾರೆ. ಅಂತಹವರನ್ನೆಲ್ಲ ಗುರುತಿಸಿ ಹೊರದಬ್ಬಬೇಕು. ಕಾಂಗ್ರೆಸ್ ಸರಕಾರ ಇದ್ದಾಗಲೂ ಒಳ ನುಸುಳಿ ತಮ್ಮ ಅಜೆಂಡಾ ಜಾರಿಗೆ ತರುವ ಅಪಾಯದ ಬಗ್ಗೆ ಸೆಕ್ಯುಲರ್ ಪಕ್ಷಗಳು ಎಚ್ಚರವಾಗಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕೋಮುವಾದಿ, ಫ್ಯಾಶಿಸ್ಟ್ ಶಕ್ತಿಗಳನ್ನು ರಾಜಕೀಯ ಅಧಿಕಾರದಿಂದ ಹೊರಗಿಡಲು ಕಾಂಗ್ರೆಸ್ ಸೇರಿದಂತೆ ಜಾತ್ಯತೀತ ಪ್ರತಿಪಕ್ಷಗಳು ಒಂದಾಗಿ ಮುಂಬರುವ ಚುನಾವಣೆಯನ್ನು ಎದುರಿಸಬೇಕಾಗಿದೆ.

 ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅವಳಿ ಶತ್ರುಗಳು ಎಂಬ ಹಳೆಯ ರಾಜಕೀಯ ನಿಲುವನ್ನು ಬಿಟ್ಟು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಿ ಮನುವಾದಿ ಫ್ಯಾಶಿಸ್ಟ್ ವ್ಯವಸ್ಥೆಯನ್ನು ಹೇರಲು ಹೊರಟಿರುವ ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಒಂದಾಗಿ ಚುನಾವಣೆಯನ್ನು ಎದುರಿಸಿ ಆ ಶಕ್ತಿಗಳನ್ನು ಸೋಲಿಸುವುದು ತುರ್ತು ಅಗತ್ಯವಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News