ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ನಿವಾಸಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

Update: 2021-11-15 16:01 GMT

ಹೊಸದಿಲ್ಲಿ,ನ.15: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ನೈನಿತಾಲದ ನಿವಾಸದಲ್ಲಿ ಸೋಮವಾರ ದಾಂಧಲೆ ನಡೆಸಿದ ದುಷ್ಕಮಿಗಳು ಬೆಂಕಿ ಹಚ್ಚಿದ್ದಾರೆ. ‘ಹಿಂದುತ್ವ’ವನ್ನು ಮೂಲಭೂತವಾದಿ ಇಸ್ಲಾಮಿಕ್ ಗುಂಪುಗಳೊಂದಿಗೆ ಹೋಲಿಸಿ ವಿವಾದವನ್ನು ಸೃಷ್ಟಿಸಿರುವ ಖುರ್ಷಿದ್ ಅವರ ಅಯೋಧ್ಯೆ ಕುರಿತು ನೂತನ ಕೃತಿಯು ಕೆಲವು ದಿನಗಳ ಹಿಂದೆ ಬಿಡುಗಡೆಗೊಂಡಿತ್ತು.

ಬೆಂಕಿಯ ದೊಡ್ಡ ಜ್ವಾಲೆಗಳು,ಸುಟ್ಟು ಕರಕಲಾದ ಬಾಗಿಲುಗಳು ಮತ್ತು ಹಾನಿಗೀಡಾದ ಕಿಟಕಿಗಳನ್ನು ಹಾಗೂ ಇಬ್ಬರು ವ್ಯಕ್ತಿಗಳು ನೀರನ್ನು ಎರಚಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವುದನ್ನು ಖುರ್ಷಿದ್ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಚಿತ್ರಗಳು ತೋರಿಸಿವೆ.

‘ಈ ಕೃತ್ಯವನ್ನು ಮಾಡಿರುವ ನನ್ನ ಸ್ನೇಹಿತರಿಗಾಗಿ ಈ ಬಾಗಿಲುಗಳನ್ನು ತೆರೆಯಲು ಬಯಸಿದ್ದೇನೆ. ಇದು ಹಿಂದುಧರ್ಮವಲ್ಲ ಎಂದು ನಾನು ಹೇಳುವುದು ಈಗಲೂ ತಪ್ಪಾಗುತ್ತದೆಯೇ ’ ಎಂದು ಖುರ್ಷಿದ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಖುರ್ಷಿದ್ ಅವರು ತನ್ನ ‘ಸನ್‌ರೈಸ್ ಓವರ್ ಅಯೋಧ್ಯಾ: ನೇಷನ್‌ಹುಡ್ ಇನ್ ಅವರ್ ಟೈಮ್ಸ್’ ಕೃತಿಯನ್ನು ಬಿಡುಗಡೆಗೊಳಿಸಿದಾಗಿನಿಂದಲೂ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಪುಸ್ತಕದ ಅಧ್ಯಾಯವೊಂದರಲ್ಲಿ ‘ಇತ್ತೀಚಿನ ವರ್ಷಗಳ ಐಸಿಸ್ ಮತ್ತು ಬೋಕೊ ಹರಾಮ್‌ನಂತಹ ಜಿಹಾದಿ ಇಸ್ಲಾಂ ಗುಂಪುಗಳನ್ನೇ ಹೋಲುವ ಎಲ್ಲ ಮಾನದಂಡಗಳಿಂದಲೂ ಹಿಂದುತ್ವದ ರಾಜಕೀಯ ಆವೃತ್ತಿಯು ಸಾಧುಸಂತರಿಗೆ ಗೊತ್ತಿರುವ ಸನಾತನ ಧರ್ಮ ಮತ್ತು ಶಾಸ್ತ್ರೀಯ ಹಿಂದು ಧರ್ಮವನ್ನು ಪಕ್ಕಕ್ಕೆ ತಳ್ಳಿದೆ ’ಎಂದು ಹೇಳಲಾಗಿದೆ.

ಖುರ್ಷಿದ್ ಅವರ ಬರಹ ಹಿಂದುಗಳ ಭಾವನೆಗಳಿಗೆ ನೋವನ್ನುಂಟು ಮಾಡಿದೆ ಎಂದು ಹೇಳಿರುವ ಬಿಜೆಪಿ,ಮುಸ್ಲಿಂ ಮತಗಳನ್ನು ಸೆಳೆಯಲು ಕಾಂಗ್ರೆಸ್ ಪಕ್ಷವು ಕೋಮು ರಾಜಕೀಯವನ್ನು ನಡೆಸುತ್ತಿದೆ ಎಂದು ಆರೋಪಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News