‘ಜೈ ಭೀಮ್’ ಸಿನೆಮಾ ಮತ್ತು ಸಮಾಜಕ್ಕೆ ಬೇಕಾಗಿರುವ ಒಳ್ಳೆಯ ಮನುಷ್ಯರು

Update: 2021-11-15 19:30 GMT

ಹಿಂದಿನ ಕಾವ್ಯ, ಪುರಾಣಗಳಲ್ಲಿ ಕೊಲ್ಲುವ ಮೊದಲು ಅವರನ್ನು ವಿಲನ್ ಮಾಡಬೇಕೆಂಬುದು ನಿಯಮ. ಅದಕ್ಕಾಗಿಯೇ ರಾಕ್ಷಸ, ಅಸುರ ಹೀಗೆ ಕಥೆ ಕಟ್ಟಲಾಗಿದೆ ಎಂಬುದು ಕ್ಲೀಷೆಯ ಮಾತು. ಇವು ಕಥೆಗಳಷ್ಟೇ ಅಲ್ಲ ಸಿದ್ಧಾಂತಗಳೂ ಹೌದು. ಈ ಸಿದ್ಧಾಂತಗಳು ದುಡಿವ ಜನರ ಮೇಲೆ ಯಾವ ಆಕ್ರಮಣಕ್ಕಿಂತಲೂ ಭೀಕರ ಪರಿಣಾಮವನ್ನುಂಟು ಮಾಡಿವೆ. ಅಧಿಕಾರಸ್ಥರ ಇಂತಹ ಹುನ್ನಾರಗಳನ್ನು ಕವಿ ನಾಟಕಕಾರರು ಹೇಳುತ್ತಾ ಬಂದಿದ್ದಾರೆ. ಇದೇ ಥಿಯರಿಯನ್ನೇ ಈಗಿನ ಬಹುತೇಕ ಸಿನೆಮಾ ಮುಂತಾದ ಮಾಧ್ಯಮಗಳು ಮಾಡುತ್ತಿವೆ. ದಮನಕ್ಕೆ ಬಳಸುವ ದುರುಳೀಕರಣದ ರಾಜಕಾರಣವು ಹೇಗೆ ಬಳಕೆಯಾಗುತ್ತಿದೆ ಎಂದು ‘ಜೈ ಭೀಮ್’ ಸಿನೆಮಾ ಸೂಕ್ಷ್ಮವಾಗಿ ವಿವರಿಸುತ್ತದೆ. ಖುಷಿಗೂ ದುಃಖಕ್ಕೂ ಬಲಿ ಬೀಳುವ ಕುರಿ, ಕೋಳಿ ಬಲಿಯಂತೆ ತಬ್ಬಲಿ ಸಮುದಾಯಗಳ ಬದುಕು ಇದೆ.


 ಭಾಗ-1

‘ಜೈ ಭೀಮ್’ ಸಿನೆಮಾ ನೋಡಿದೆ. ಸಿನೆಮಾದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಗಳು ಸಿನೆಮಾ ನೋಡಲೇಬೇಕಾದ ಅನಿವಾರ್ಯವನ್ನು ಸೃಷ್ಟಿಸಿದ್ದವು. ಸಾಮಾಜಿಕ ವೇದಿಕೆಗಳಲ್ಲಿ ಕ್ರಿಯಾಶೀಲರಾಗಿರುವ ಬಹುತೇಕರು ಈ ಸಿನೆಮಾ ನೋಡಿರುವುದರಿಂದ ಕತೆ ಬಹುತೇಕರಿಗೆ ಗೊತ್ತಿದೆ. ಸಿನೆಮಾ ಬಿಡುಗಡೆಯಾದ ಮೇಲೆ ಅನೇಕರು ತಾವು ಕೂಡ ಇಂತಹದೇ ಕಷ್ಟಗಳನ್ನು ಕಂಡ ಮತ್ತು ಉಂಡ ನೆನಪುಗಳನ್ನು ದಾಖಲಿಸುತ್ತಿದ್ದಾರೆ. ವಾಸ್ತವ ಸಂಗತಿಯನ್ನು ಆಧರಿಸಿ ನೇಯ್ಗೆಗೊಂಡ ತಮಿಳಿನ ‘ಜೈ ಭೀಮ್’ ಭಾರತೀಯ ಭಾಷೆಗಳ ಸಿನೆಮಾ ವೇದಿಕೆಗಳ ಜನರಿಗೆ ಹೊಸ ದಾರಿಯತ್ತ ಹೊರಳಬಹುದಾದ ಸಾಧ್ಯತೆಗಳನ್ನು ತೋರಿಸುತ್ತಿದೆ. ಡಿಗ್ಲಾಮರಸ್‌ಗೊಳಿಸಲಾದ ಪಾತ್ರಗಳ ಮೇಲೆ ಕ್ಯಾಮರಾವನ್ನು ಹೆಚ್ಚು ಫೋಕಸ್ ಮಾಡಿದ್ದರೂ ಚಿತ್ರ ಗೆದ್ದಿದೆ. ಮಧ್ಯಮ ವರ್ಗದ ಪ್ರಧಾನವಾದ ರಸ ಮೀಮಾಂಸೆಗೆ ಭಂಗ ಬರುವಂತಿದ್ದರೂ ಚಿತ್ರ ಗೆಲ್ಲುತ್ತಿರುವುದನ್ನು ನೋಡಿದರೆ ಆಧುನಿಕ ಭಾರತದ ನಾಗರಿಕತೆಗಳಲ್ಲಿನ ಮಧ್ಯಮ ವರ್ಗಗಳು ತೀವ್ರ ಪಲ್ಲಟಗಳಲ್ಲಿ ಸಿಲುಕಿಕೊಂಡಿರುವ ಸಂಕೇತದಂತೆ ಕಾಣುತ್ತದೆ.

 ‘ಭಕ್ತ ಕುಂಬಾರ’, ‘ಬೇಡರ ಕಣ್ಣಪ್ಪ’ಮುಂತಾದ ಸಿನೆಮಾಗಳಲ್ಲಿ ಭಕ್ತಿ, ಶ್ರದ್ಧೆ ಎಂಬುದು ಪ್ರಧಾನ ಟೂಲಾಗಿ ಕೆಲಸ ಮಾಡಿತ್ತು. ಕಾಯಕದ ಜೊತೆಗೆ ನಿಷ್ಕಲ್ಮಶ ಭಕ್ತಿ ಇದ್ದರೆ ದೇವರು ತನ್ನ ಕಡೆ ತಿರುಗುತ್ತಾನೆ ಎಂಬ ತತ್ವವು ಕನಕದಾಸರ ಕಾಲದಿಂದಲೂ ಇದೆ. ಕುವೆಂಪು ಅವರ ಜಲಗಾರನಲ್ಲೂ ಇದೆ. 12ನೇ ಶತಮಾನದ ಶರಣರಲ್ಲೂ ತುಸು ಮಟ್ಟಿಗೆ ಈ ತತ್ವವಿದೆ. ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಹೇಳುವ ಸಂಗ್ರಾಹಕ ಸಂಸ್ಕೃತಿಗೆ ಪ್ರತಿಯಾಗಿ ಕಾಯಕ, ಭಕ್ತಿ ಮತ್ತು ಮುಕ್ತಿ ಎಂಬುದು ಉತ್ಪಾದಕ ಸಂಸ್ಕೃತಿಗಳ ಮೀಮಾಂಸೆ. ಜೈನ-ಬೌದ್ಧ ಮೀಮಾಂಸೆಗಳಲ್ಲಿ ಮೋಕ್ಷಕ್ಕೆ ಪ್ರಧಾನ ಪಾತ್ರವಿದೆ. ಇಲ್ಲಿ ಧರ್ಮ ಎಂದರೆ ಯಾವುದು? ಕೊಲ್ಲುವ, ಆಳುವ ರಾಜರ ಧರ್ಮವೊ? ಸಮುದಾಯಗಳನ್ನು ವಿಭಜಿಸಿ ತಾರತಮ್ಯಗಳನ್ನು ಮಾಡಿದ ಪುರೋಹಿತಶಾಹಿಯದು ಧರ್ಮವೊ? ಯಾವುದು ನಿಜ ಧರ್ಮ ಎಂಬ ಪ್ರಶ್ನೆಯನ್ನು ‘ಜೈ ಭೀಮ್’ ಸಿನೆಮಾವು ಸೂಕ್ಷ್ಮವಾಗಿ ಮುಂದಿಟ್ಟು ನೋಡುಗರ ಒಳಗನ್ನು ಚಿತ್ತು ಮಾಡುತ್ತದೆ. ಶಾಸ್ತ್ರ, ಪುರಾಣ, ಕಾವ್ಯ, ಮಹಾಕಾವ್ಯಗಳನ್ನು ಓದಿ, ಕೇಳಿ, ನೋಡಿ, ಆಡಿ ಅವುಗಳನ್ನು ಬಹುಪಾಲು ಸಾರಿ ಲಾಭಕ್ಕೆ ಬಳಸಿಕೊಳ್ಳುತ್ತಿರುವ ಮಾಲಕ ಸಮುದಾಯಗಳ ನಡವಳಿಕೆಯ ಎದುರು ಅಂದಂದಿಗೆ ಮಾತ್ರ ದುಡಿದು ಬದುಕುವ ಬುಡಕಟ್ಟು ಜನರ ಧರ್ಮ ಮುಖಕ್ಕೆ ಎಸೆದು ಕೇಳುತ್ತದೆ ನಿಜವಾದ ಧರ್ಮ ಅಂದರೆ ಯಾವುದು ಎಂದು. ಹಣಕ್ಕೆ ಮಾರಿಕೊಳ್ಳದ ಸಣ್ಣಮ್ಮ, ಪ್ರಾಣ ಪಣಕ್ಕಿಟ್ಟು ಹಾವು ಹಿಡಿದು ಹಣ ಪಡೆಯದ, ಸಾಯುವಂತೆ ಹಿಂಸೆ ಕೊಟ್ಟರೂ ಕಳ್ಳತನದ ಪಟ್ಟ ಕಟ್ಟಿಕೊಳ್ಳಲು ಒಪ್ಪದ ಕೆಂಪರಾಜು ಹೇಳುತ್ತಿರುವ ಧರ್ಮ ಯಾವುದು? ಪಾಠ, ಪ್ರವಚನ ಯಾವುದೂ ಗೊತ್ತಿಲ್ಲದ, ಮಠ, ಮಂದಿರ, ಧರ್ಮಗುರುಗಳ ನೆರಳಿಲ್ಲದ ಜನರ ಎದೆಯ ದನಿಯನ್ನು ಆಧರಿಸಿದ ಧರ್ಮ ಎಲ್ಲಿ ರೂಪುಗೊಂಡಿತು? ಯಾವಾಗ ರೂಪುಗೊಂಡಿತು? ಯಾಕೆ ರೂಪುಗೊಂಡಿತು? ಸಿನೆಮಾದಲ್ಲಂತೂ ಇಡೀ ಸಮುದಾಯದೊಳಗೆ ಕೇಡುಗಳೇ ಇಲ್ಲವೆಂಬಂತೆ ಚಿತ್ರಿಸಲಾಗಿದೆ. ಇದು ತುಸು ಉತ್ಪ್ರೇಕ್ಷೆಯೂ ಇರಬಹುದು. ಆದರೆ ಕಾಡುಗಳಲ್ಲಿ, ಅಂಚುಗಳಲ್ಲಿ ಬದುಕುವ ಜನರಿಗೆ ಹಣದ ದಾಹ ಬಂದು ಬಿಟ್ಟರೆ ಏನಾಗಬಹುದು ಎಂದು ಊಹಿಸಲೂ ಆಗದು.

‘ಜೈ ಭೀಮ್’ ಸಿನೆಮಾ ಪ್ರಧಾನ ಧಾರೆಯದೆಂದು ಹೇಳಲಾಗುವ ಕಲೆಗಳ ರಸ ತತ್ವವನ್ನು ತುಸು ಬದಲಿಸಲು ಪ್ರಯತ್ನಿಸಿದೆ. ಈ ಪ್ರಯತ್ನವನ್ನು ಕಳೆದ ಏಳೆಂಟು ದಶಕಗಳಿಂದ ಹಲವರು ಮಾಡುತ್ತಿದ್ದರೂ ಈ ಸಿನೆಮಾದಲ್ಲಿ ಅದನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲಾಗಿದೆ. ಆದರೂ ಸೂರ್ಯ, ಪ್ರಕಾಶ್ ರೈ ಅಂತಹವರು ಇಲ್ಲದೆ ಬುಡಕಟ್ಟು ಸಮುದಾಯಗಳ ಜನರೇ ಈ ಪಾತ್ರಗಳನ್ನು ನಿರ್ವಹಿಸಿದ್ದರೆ ಹೇಗಿರುತ್ತಿತ್ತು? ಆಗಲೂ ಸಿನೆಮಾ ಪಾಸಾಗುತ್ತಿತ್ತೆ? ಎಂಬ ಪ್ರಶ್ನೆಯ ಕುರಿತೂ ಕನ್ನಡದಲ್ಲಿ ಚರ್ಚೆಗಳು ನಡೆಯುತ್ತಿವೆ. ಕಲೆಗೆ ಬೆವರ ಸ್ಪರ್ಶವಿಲ್ಲದಂತೆ ಮಾಡುವ ಪ್ರಯತ್ನದ ಹಿಂದೆ ಒಂದು ರಾಜಕಾರಣವಿದೆ. ಏಕೆಂದರೆ; ಬೆವರನ್ನು ನಂಬಿ ಬದುಕುವ ಜನರು ವ್ಯಗ್ರಗೊಳ್ಳಬಾರದು, ಬಂದದ್ದನ್ನು ಅನುಭವಿಸಿ ಬದುಕಬೇಕು. ‘‘ನೋಡು ನಮ್ಮದ್ಯಾವ ದೊಡ್ಡ ಕಷ್ಟ, ಅಂತಂತಹ ಸೀತೆ, ಕುಂತಿ, ಪಾಂಡವರಿಗೆ ಕಷ್ಟ ತಪ್ಪಲಿಲ್ಲ, ರಾಮ, ಕೃಷ್ಣ, ಶಿವರು ಏನು ಕಡಿಮೆ ನೋವು ಉಂಡಿದ್ದಾರೆಯೆ?’’ ಇದು ಸಾಮಾನ್ಯವಾಗಿ ಹೇಳುವ, ಹೇಳಿಕೊಳ್ಳುವ ಮಾತು. ಇದನ್ನು ಸಾಮಾನ್ಯವಾಗಿ ಅಧ್ಯಾತ್ಮ ಎಂದು ವ್ಯಾಖ್ಯಾನಿಸಿ ವಿವರಿಸಲಾಗುತ್ತದೆ. ನಿಜಾರ್ಥದಲ್ಲಿ ಇದು ಅಧ್ಯಾತ್ಮವಲ್ಲ, ಭೌತಿಕ ರಾಜಕಾರಣದ ಮಾದರಿ. ವ್ಯಕ್ತಿ ಅಥವಾ ಸಮುದಾಯಗಳನ್ನು ದುರುಳೀಕರಿಸಿ ಅವರ ಚೈತನ್ಯ ಸಮಸ್ತವನ್ನೂ ಕೊಂದು ಬಿಡುವ ಅಥವಾ ನಾಶ ಮಾಡುವುದಕ್ಕೆ ಬೇಕಾದ ವೇದಿಕೆಯನ್ನು ಒದಗಿಸಿಕೊಳ್ಳಲು ಕಾವ್ಯ-ನಾಟಕ, ತದನಂತರ ಕತೆ-ಗಿತೆ ಮುಂತಾದ ಟೂಲುಗಳನ್ನು ಬಳಸಿಕೊಳ್ಳಲಾಗಿದೆ. ಮಹಾಭಾರತದಲ್ಲಿ ಪಾಂಡವರನ್ನು ಕೊಲ್ಲಲು ದುರ್ಯೋಧನನು ವಿರೋಚನನೆಂಬ ವಾಸ್ತುಶಿಲ್ಪಿಯನ್ನು ಬಳಸಿ ಅರಗಿನ ಮನೆಯನ್ನು ಕಟ್ಟಿಸುತ್ತಾನೆ. (ಈ ವಿರೋಚನ, ಮಯ ಇವರೆಲ್ಲ ದ್ರಾವಿಡರೋ ಇಲ್ಲ ಕೋಟೆ ಕಟ್ಟಿಕೊಂಡು ಬದುಕುತ್ತಿದ್ದ ನಾಗರೋ ಅಥವಾ ಆಸ್ಟ್ರೊ ಏಷಿಯಾಟಿಕ್ ಇರಬೇಕು. ಬಹುತೇಕ ವಿದ್ವಾಂಸರು ಇವರನ್ನು ಶಂಬರರು ಎಂದೂ ಕರೆದಿದ್ದಾರೆ.) ಅಸಾಮಾನ್ಯ ವಾಸ್ತುಶಿಲ್ಪಿಗಳಾದ ಇವರನ್ನು ಪಾಂಡವರು ವಿಪರೀತ ದಮನಿಸಿದ ಹಾಗೆ ಕಾಣುತ್ತದೆ. ಖಾಂಡವವನ ದಹನದಲ್ಲಿ ದಹಿಸಿ ಹೋದ ಜನ ಇವರೇ.

ತಂದೆಯೊಡನೆ ಸಮಾಲೋಚನೆ ಮಾಡಿಯೇ ಅರಗಿನ ಅರಮನೆ ಕಟ್ಟಿಸಿದ ದುರ್ಯೋಧನ ಪಾಂಡವರು ನಿದ್ದೆ ಮಾಡುವಾಗ ಬೆಂಕಿ ಹಚ್ಚಿರೆಂದು ಸೂಚಿಸಿರುತ್ತಾನೆ. ದುರ್ಯೋಧನನ ರಹಸ್ಯ ಕಾರ್ಯಸೂಚಿಯ ಗುಟ್ಟು ತಿಳಿದ ಪಾಂಡವರು ಸುಮ್ಮನೆ ಅಲ್ಲಿಂದ ಹೋಗುವುದಿಲ್ಲ. ಆಶ್ರಯ ಬಯಸಿ ಬಂದ ಬೇಡತಿ ಮತ್ತು ಆಕೆಯ ಐವರು ಮಕ್ಕಳನ್ನು ಆ ಮನೆಯೊಳಗೆ ಮಲಗಿಸಿ, ಪುರೋಚನನೂ ಸೇರಿದಂತೆ ಬೇಡತಿ ಮತ್ತವಳ ಮಕ್ಕಳು ಸುಟ್ಟು ಸಾಯುವುದನ್ನು ನೋಡಿಕೊಂಡು ಹೋಗುತ್ತಾರೆ. ಈ ಕಾರ್ಯಸೂಚಿಯ ಜವಾಬ್ದಾರಿಯನ್ನು ಧರ್ಮರಾಯನೇ ವಹಿಸುತ್ತಾನೆ. ಇಲ್ಲಿ ಬೇಡತಿ ಮತ್ತು ಆಕೆಯ ಮಕ್ಕಳು ವಿನಾಕಾರಣ ಸತ್ತರೆ ಅವರ ಬಗ್ಗೆ ಕರುಣೆ ಹುಟ್ಟಬಹುದಲ್ಲ, ಅದಕ್ಕಾಗಿ ಅವರು ವಿಪರೀತ ತಿಂದು, ಕುಡಿದು ಮನುಷ್ಯಾವಸ್ಥೆಯನ್ನು ಮೀರಿದ್ದರು ಎಂದು ದುರುಳೀಕರಿಸಲಾಗುತ್ತದೆ. ಅವರ ಜೀವಕ್ಕೆ ಬೆಲೆಯಿಲ್ಲದಾಗುತ್ತದೆ.

ಹಿಂದಿನ ಕಾವ್ಯ, ಪುರಾಣಗಳಲ್ಲಿ ಕೊಲ್ಲುವ ಮೊದಲು ಅವರನ್ನು ವಿಲನ್ ಮಾಡಬೇಕೆಂಬುದು ನಿಯಮ. ಅದಕ್ಕಾಗಿಯೇ ರಾಕ್ಷಸ, ಅಸುರ ಹೀಗೆ ಕಥೆ ಕಟ್ಟಲಾಗಿದೆ ಎಂಬುದು ಕ್ಲೀಷೆಯ ಮಾತು. ಇವು ಕಥೆಗಳಷ್ಟೇ ಅಲ್ಲ ಸಿದ್ಧಾಂತಗಳೂ ಹೌದು. ಈ ಸಿದ್ಧಾಂತಗಳು ದುಡಿವ ಜನರ ಮೇಲೆ ಯಾವ ಆಕ್ರಮಣಕ್ಕಿಂತಲೂ ಭೀಕರ ಪರಿಣಾಮವನ್ನುಂಟು ಮಾಡಿವೆ. ಅಧಿಕಾರಸ್ಥರ ಇಂತಹ ಹುನ್ನಾರಗಳನ್ನು ಕವಿ ನಾಟಕಕಾರರು ಹೇಳುತ್ತಾ ಬಂದಿದ್ದಾರೆ. ಇದೇ ಥಿಯರಿಯನ್ನೇ ಈಗಿನ ಬಹುತೇಕ ಸಿನೆಮಾ ಮುಂತಾದ ಮಾಧ್ಯಮಗಳು ಮಾಡುತ್ತಿವೆ. ದಮನಕ್ಕೆ ಬಳಸುವ ದುರುಳೀಕರಣದ ರಾಜಕಾರಣವು ಹೇಗೆ ಬಳಕೆಯಾಗುತ್ತಿದೆ ಎಂದು ‘ಜೈ ಭೀಮ್’ ಸಿನೆಮಾ ಸೂಕ್ಷ್ಮವಾಗಿ ವಿವರಿಸುತ್ತದೆ. ಖುಷಿಗೂ ದುಃಖಕ್ಕೂ ಬಲಿ ಬೀಳುವ ಕುರಿ, ಕೋಳಿ ಬಲಿಯಂತೆ ತಬ್ಬಲಿ ಸಮುದಾಯಗಳ ಬದುಕು ಇದೆ.

ಆಡಳಿತಕ್ಕೊಳಪಟ್ಟ ದೇಶಗಳನ್ನು ನಾಗರಿಕಗೊಳಿಸುವ ಹೊಣೆಗಾರಿಕೆ ತನ್ನ ಮೇಲಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದ ಬ್ರಿಟಿಷರೂ ಈ ಸಮುದಾಯಗಳನ್ನು ‘ಕ್ರಿಮಿನಲ್ ಟ್ರೈಬ್ಸ್’ ಎಂದು ಹೇಳಿ ದಮನ ಮಾಡಲು ಪರವಾನಿಗೆ ಸೃಷ್ಟಿಸಿಕೊಂಡರು. ಇದರ ಜೊತೆಯಲ್ಲಿ ಈ ಜನರ ಕುರಿತು ವ್ಯಾಪಕ ಅಧ್ಯಯನಗಳಲ್ಲಿ ತೊಡಗಿದರು. ಬುಡಕಟ್ಟುಗಳ ಕುರಿತ ಅಧ್ಯಯನ ಕಲೊನಿಯಲ್ ಸಂದರ್ಭದಲ್ಲಿ ನಡೆದಷ್ಟು ಮತ್ಯಾವುದೆ ಕಾಲದಲ್ಲಿ ನಡೆದಿಲ್ಲ. ಈ ಅಧ್ಯಯನಗಳ ಹಿಂದೆ ಏನೇನು ಉದ್ದೇಶಗಳಿದ್ದವೊ? ‘ಜೈ ಭೀಮ್’ ಚಿತ್ರದಲ್ಲಿ ಪೊಲೀಸರು, ಮಾಲಕ ಜಾತಿಗಳ ಮುಖಂಡರು ಬುಡಕಟ್ಟು ಜನರಿಗೆ ಮನಸ್ಸು, ಆತ್ಮ ಸಾಕ್ಷಿ, ಸ್ವಾಭಿಮಾನ, ವ್ಯಕ್ತಿತ್ವ ಇದೆ ಎಂಬ ಭಾವನೆ ಇಲ್ಲದೆ ವರ್ತಿಸುತ್ತಾರಲ್ಲ ಎಂಬ ಮಾತುಗಳನ್ನು ಹೇಳಿದರೆ ಅದರಲ್ಲಿ ಹೊಸದೇನಿದೆ ಎಂದು ಕೇಳುವ ಜನರೇ ಹೆಚ್ಚಿದ್ದಾರೆ. ಇಲಿ, ಮೊಲ, ಹಂದಿ ಹಿಡಿದು ತಿನ್ನುವುದು, ಕೂಲಿ ಮಾಡುವುದು, ಜೇನು ಕೀಳುವುದು, ಹಾವು ಹಿಡಿಯುವುದು ಹೀಗೆ ಕಾಡು-ನಾಡನ್ನು ಅವಲಂಬಿಸಿ ಬದುಕುವ ಸಮುದಾಯವು ಅಧಿಕಾರಸ್ಥರ ದುರುಳತನಕ್ಕೆ ಬಲಿಯಾಗಿ ಛಿದ್ರವಾಗಿ ಹೋಗುವ ಬದುಕಿನ ಕತೆಯನ್ನು ಸಿನೆಮಾ ಮಾಡಲಾಗಿದೆ. ಇದರಲ್ಲಿ ತಾನೆ ಏನು ವಿಶೇಷವಿದೆ?. ಬ್ರಿಟಿಷರ ವಿರುದ್ಧ ಬುಡಕಟ್ಟು ಜನರು ಹೋರಾಟ ಕಟ್ಟಿದ ಮೇಲೆ, ಬಾಬಾ ಸಾಹೇಬರ ಸಂವಿಧಾನವನ್ನು ದೇಶ ಅಂಗೀಕರಿಸಿದ ಮೇಲೆ ಹಲವಾರು ಬಾರಿ ಈ ರೀತಿಯ ಸಿನೆಮಾಗಳನ್ನು ಮಾಡುವ ಕೆಲಸ ಮಾಡಲಾಗಿದೆ. ಆದರೂ ‘ಜೈ ಭೀಮ್’ ಸಿನೆಮಾ ತನ್ನ ಸಹಜ ಅಭಿನಯದ ಮೂಲಕ, ಘಟನೆಗಳ ಸಹಜ ನಿರೂಪಣೆಯ ಮೂಲಕ ಗಮನ ಸೆಳೆಯುತ್ತದೆ. ಇದೂ ವಿಶೇಷವೇನಲ್ಲ. ಕಮರ್ಶಿಯಲ್ ಉದ್ದೇಶಕ್ಕಾಗಿ ಸಿನೆಮಾ ಮಾಡುವಾಗ ಇದೆಲ್ಲ ಮಾಡಲೇಬೇಕು.

ಲಾಕಪ್ಪಿನಲ್ಲಾಗುವ ಕೆಂಪರಾಜನ ಕೊಲೆಗೆ ನಿಜವಾದ ಕಾರಣ ಗಳೇನು? ನುರಿತ ದರೋಡೆಕೋರರು, ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಮತ್ತು ಕದ್ದ ಒಡವೆಗಳನ್ನು ಕೊಂಡು ಮಾರಿ ಕೊಬ್ಬಿ ಹೋಗಿರುವ ಉತ್ತರದ ವ್ಯಾಪಾರಿ. ಈ ಮೂವರ ಹಣದ ದಾಹಕ್ಕೆ ಬುಡಕಟ್ಟು ಕುಟುಂಬಗಳು ಮತ್ತು ಸಮುದಾಯಗಳು ತತ್ತರಿಸಿ ಹೋಗುತ್ತವೆ. ಅನೇಕರು ತಬ್ಬಲಿಗಳಾಗಿ ಹೋಗುತ್ತಾರೆ. ಅಕ್ಷರ ಜ್ಞಾನವಿಲ್ಲದ, ಜಾತಿಸಮಾಜಗಳ ಆಚೆಗೆ ಬದುಕುವ ಬುಡಕಟ್ಟು ಜನಗಳಿಗೆ ಬಾಬಾ ಸಾಹೇಬರ ಸಂವಿಧಾನದ ಫಲ ಸಿಗಲು 45 ವರ್ಷಗಳಷ್ಟು ದೀರ್ಘ ಕಾಲ ತೆಗೆದುಕೊಳ್ಳಲು ಕಾರಣ ಯಾರು? ಇದರ ಪಾಪಪ್ರಜ್ಞೆಯನ್ನು ಯಾರ್ಯಾರು ಹೊರಬೇಕು? ಸಿನೆಮಾದ ಪ್ರಧಾನ ಪಾತ್ರವಾದ ವಕೀಲ ಮತ್ತು ನಗರದ ವಕೀಲರವರೆಗೆ ಪ್ರಕರಣವನ್ನು ತಂದ ಟೀಚರಮ್ಮ, ವಿಶೇಷ ಪ್ರಕರಣದ ವಿಚಾರಣೆ ನಡೆಸಲು ಒಪ್ಪಿದ ಉಚ್ಚ ನ್ಯಾಯಾಲಯದ ದ್ವಿ ಸದಸ್ಯ ಪೀಠ ಮತ್ತು ಪ್ರಕರಣದ ಕುರಿತು ತನಿಖೆ ಮಾಡಿ ವರದಿ ನೀಡುವ ಐಜಿ ಪರಮೇಶ್ವರಪ್ಪ ಇವರು ಹತಾಶೆಗಳ ನಡುವೆ ಭರವಸೆ ಹುಟ್ಟಿಸುವ ವ್ಯಕ್ತಿಗಳು. ಇವರು ಹಾಗೆ ನಡೆದುಕೊಳ್ಳಲು ನಮ್ಮ ಸಂವಿಧಾನದ ಆಶಯಗಳು ಕಾರಣ ಎನ್ನುವುದು ಸರಿ. ಸಂವಿಧಾನ ಪೂರ್ವಯುಗದಲ್ಲಿ ಕೊಂದೆಸೆದರೂ ವಿಚಾರಣೆ ಇಲ್ಲದೆ ಮುಗಿದು ಹೋಗುತ್ತಿದ್ದ ಪ್ರಕರಣವು ಸಂವಿಧಾನದ ಕಾರಣಕ್ಕಾಗಿ ಸಿನಿಕರ ಮತ್ತು ಮಾರಿಕೊಂಡವರ ನಡುವೆ ಶ್ರದ್ಧೆಯಿರುವ ಜನರ ಕಾರಣಕ್ಕಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ವಿಚಾರಣೆ ನಡೆಸಲು, ತನಿಖೆ ಮಾಡಲು ಮತ್ತು ಶಿಕ್ಷೆ ವಿಧಿಸಲು ಪ್ರಬಲ ಕಾರಣ ಬಾಬಾ ಸಾಹೇಬರು ನೀಡಿದ ಸಂವಿಧಾನ. ಹಾಗಾಗಿ ಸಿನೆಮಾಕ್ಕೆ ‘ಜೈ ಭೀಮ್’ ಎಂದು ಹೆಸರು. ಸೇವಿಯರ್ ರೀತಿಯ ಪಾತ್ರ, ಸಿದ್ಧ ಸೂತ್ರ, ಇದರಲ್ಲೇನಿದೆ ವಿಶೇಷ? ಹೀಗಿದ್ದರೆ ಹೇಗಿರುತ್ತಿತ್ತು? ಇತ್ಯಾದಿ ಚರ್ಚೆಗಳು ಕನ್ನಡದಲ್ಲೂ ನಡೆಯುತ್ತಿವೆ. ಚರ್ಚೆ ಒಳ್ಳೆಯದೇ. ಇಷ್ಟು ಚರ್ಚೆಗಳಾಗುವಂತೆ ನೋಡಿಕೊಂಡಿರುವ ಸಿನೆಮಾ ನೋಡಿದ ಜನರನ್ನು ತೀವ್ರವಾಗಿ ಕಲಕಿದೆ ಎಂದರ್ಥ. ಹಾಗಾಗಿ ಗೆದ್ದಿದೆ.

ರಸದ ರಾಜಕಾರಣ                                                    
  ಕಲೆಗೆ ಸಂಬಂಧಿಸಿದಂತೆ ರಸದ ರಾಜಕಾರಣವು ಗ್ರೀಕ್ ಮತ್ತು ಭಾರತದಂತಹ ಪ್ರಾಚೀನ ನಾಗರಿಕತೆಗಳಲ್ಲಿ ಅನೂಹ್ಯ ರೀತಿಯಲ್ಲಿ ಕೆಲಸ ಮಾಡಿದೆ. ರಾಜ-ರಾಣಿಯರ, ದೇವ-ದೇವತೆಗಳ, ಸಿರಿವಂತರ ಕಣ್ಣೊಳಗೆ ದುಃಖವುಕ್ಕಿಸಿ ಸಾಮಾನ್ಯ ಜನರಿಗೆ ತಾವು ಬದುಕಿನ ನರಕದಲ್ಲಿದ್ದೇವೆ ಎಂಬ ಭಾವವನ್ನು ತಣಿಸಲು, ಸಣ್ಣ ಸಮಾಧಾನವನ್ನು ಸೃಷ್ಟಿಸಲು ಕಾವ್ಯ-ನಾಟಕ ಮುಂತಾದ ಟೂಲುಗಳನ್ನು ಬಹುತೇಕ ಸಾರಿ ಬಳಸಿಕೊಳ್ಳಲಾಗಿದೆ. ‘ಸಬ್ಲೈಮ್’ ಮುಂತಾದ ಕಲಾಮೀಮಾಂಸೆಗಳನ್ನು ನೋಡಿದರೆ ಪಶ್ಚಿಮವೂ ಇಂತಹ ರಾಜಕಾರಣವನ್ನು ಮಾಡಿದೆ. ಅಲ್ಲಿ ನಿಧಾನಕ್ಕೆ ಬೆವರಿನ ವಾಸನೆ ಇರುವ ನಾಯಕರು ಪ್ರವೇಶ ಪಡೆದರು. ನಮ್ಮಲ್ಲಿ ಬೆವರಿನ ವಾಸನೆಗೆ ವೇದಿಕೆ ಸಿಕ್ಕಿದ್ದು ಕಡಿಮೆ. ಅತ್ತರ ವಾಸನೆ ಮೂಲಕವೇ ಜನಮಾನಸವನ್ನು ಹದಗೊಳಿಸಲು ಪ್ರಯತ್ನಿಸಲಾಗಿದೆ. ಗ್ರೀಕ್ ದುರಂತ ಕಾವ್ಯ ನಾಟಕಗಳ ಕುರಿತು ಸೂಕ್ಷ್ಮ ಒಳನೋಟಗಳನ್ನು ಸಿ.ಎಮ್. ಬೌರ ತನ್ನ ಹಿರಾಯಿಕ್ ಪೊಯೆಟ್ರಿ ಎಂಬ ಕೃತಿಯಲ್ಲಿ ನೀಡುತ್ತಾನೆ.

ಸಂಸ್ಕೃತ ಸಾಹಿತ್ಯದಲ್ಲಿ ‘ಮೃಚ್ಛಕಟಿಕ’ದಂತಹ ಒಂದೆರಡು ನಾಟಕಗಳನ್ನು ಬಿಟ್ಟರೆ ಬಹುಪಾಲು ಕೃತಿಗಳ ನಾಯಕ ಪಾತ್ರಗಳಿಗೆ ಅತ್ತರ ವಾಸನೆಯಿದೆ. ಸಮಾಜ ಇವರನ್ನು ದೊಡ್ಡ ಜನರು ಎಂದು ಕರೆಯುವಂತೆ ಮಾಡಲಾಗಿದೆ. ಅಂತಹ ದೊಡ್ಡ ಜನರ ಕಣ್ಣೊಳಗೆ ಹುಟ್ಟುವ ಕಂಬನಿ, ಮನಸ್ಸಿನ ನಿಟ್ಟುಸಿರುಗಳು ಜನರ ಕಷ್ಟಗಳನ್ನು, ದಮನಗಳನ್ನು ಸಹ್ಯಗೊಳಿಸಿಕೊಂಡು ಬರುವಂತೆ ಮಾಡಿವೆ. ಮನುಷ್ಯನ ಅಭಿವ್ಯಕ್ತಿ ಜಗತ್ತಿಗೆ ಕರುಣೆಯ ರಸತತ್ವವನ್ನು ನೀಡಿದ ಬುದ್ಧ ಮತ್ತು ವಿಷಾದ ತತ್ವ ನೀಡಿದ ಮಹಾ ಕವಿ ವಾಲ್ಮೀಕಿಯರನ್ನು ಮರೆತು ರಸ ಮೀಮಾಂಸೆಯ ಕುರಿತು ಮಾತನಾಡಲಾಗದು. ಕರುಣೆ ಮತ್ತು ವಿಷಾದಗಳು ನಮ್ಮ ಸಂಸ್ಕೃತಿಗಳ ಅತ್ಯುತ್ತಮ ಕೊಡುಗೆಗಳು. ಈ ಎರಡರಲ್ಲೂ ಎದೆಯ ದನಿಗೆ ಪೂರಕವಾದ ಧರ್ಮವಿದೆ. ಆಶ್ಚರ್ಯವೆಂದರೆ ಈ ಎರಡೂ ಪ್ರಮೇಯಗಳನ್ನು ಆಚಾರ್ಯರುಗಳು ನಿರ್ಲಕ್ಷಿಸಿದರು. ಸಾಧ್ಯವಾದ ಕಡೆಗಳಲ್ಲಿ ವಿರೋಧಿಸಿದರು. ಇಂತಹ ಕಡೆ ಧರ್ಮ ತತ್ವವು ಎರಡು ಹೋಳಾಗಿ ಹೋಗುತ್ತದೆ. ಆ ಎರಡು ಹೋಳುಗಳನ್ನು ಜೈ ಭೀಮ್ ಸಿನೆಮಾ ಸೂಕ್ಷ್ಮವಾಗಿ ವಿವರಿಸುತ್ತದೆ

Writer - ನೆಲ್ಲುಕುಂಟೆ ವೆಂಕಟೇಶ್

contributor

Editor - ನೆಲ್ಲುಕುಂಟೆ ವೆಂಕಟೇಶ್

contributor

Similar News