‘ಜೈ ಭೀಮ್’ ಸಿನೆಮಾ ಮತ್ತು ಸಮಾಜಕ್ಕೆ ಬೇಕಾಗಿರುವ ಒಳ್ಳೆಯ ಮನುಷ್ಯರು

Update: 2021-11-16 19:30 GMT

ಭಾಗ-2

ಎಲ್ಲ ಮನುಷ್ಯರೂ ಏಕೆ ಒಳ್ಳೆಯವರಲ್ಲ

ಸಿನೆಮಾ ನೋಡುಗರನ್ನು ಹೀಗೆಲ್ಲ ವ್ಯಾಕುಲ ಗೊಳಿಸುತ್ತದೆಯಾದರೂ, ಸಿನೆಮಾದ ಆಚೆಗೆ ಹಲವು ಸಂಗತಿಗಳನ್ನು ಚರ್ಚಿಸಬೇಕೆನ್ನಿಸುತ್ತದೆ. ಹಲವು ದಿನಗಳಿಂದ ನನ್ನನ್ನು ಕಾಡುತ್ತಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳಲು ಈ ಸಿನೆಮಾ ಸಣ್ಣ ಸಹಾಯ ಮಾಡಿದೆ ಅನ್ನಿಸುತ್ತದೆ. ಡಾ.ಬಿ.ಆರ್ ಅಂಬೇಡ್ಕರರು ಸಂವಿಧಾನ ರಚಿಸಿ, ಮಂತ್ರಿಯಾಗಿ ಕೆಲಸ ಮಾಡಿದ ಮೇಲೂ ಯಾಕೆ ಬೌದ್ಧ ಧರ್ಮವನ್ನು ಅಪ್ಪಿಕೊಂಡರು? ದಮನಿತ ಸಮುದಾಯಗಳಿಗೆ ಪ್ರಮುಖ ಮಾನವ ಹಕ್ಕುಗಳಾದ ಘನತೆಯಿಂದ ದುಡಿವ, ಕೆಲಸ ಮಾಡುವ, ಹಂಚಿ ಉಣ್ಣುವ, ತಾರತಮ್ಯವಿಲ್ಲದೆ ಒಳಗೊಂಡು ಬಾಳುವ ಸಮಾಜವಾದಿ ಆಶಯಗಳನ್ನು ಸಂವಿಧಾನದ ಮೂಲಕ ನೀಡಿದ ಮೇಲೂ ಬುದ್ಧನೇ ಏಕೆ ಅವರನ್ನು ಕಾಡಿದ? ಈ ಪ್ರಶ್ನೆಗೆ ಉತ್ತರ ಸರಳವಲ್ಲ. ಆದರೂ ಬಾಬಾಸಾಹೇಬರ ‘ಬುದ್ಧ ಆ್ಯಂಡ್ ಹಿಸ್ ದಮ್ಮ’ ಮತ್ತು ‘ಬುದ್ಧ ಆರ್ ಕಾರ್ಲ್‌ಮಾರ್ಕ್ಸ್’ ಕೃತಿಗಳಲ್ಲಿ ಹಾಗೂ ಅವರ ಹಲವು ಭಾಷಣಗಳಲ್ಲಿ ಈ ಕುರಿತು ಪ್ರಸ್ತಾಪಿಸಿದ್ದಾರಾದರೂ ಮನುಷ್ಯನನ್ನು ರೂಪಿಸುವ, ನಿಯಂತ್ರಿಸುವ ಶಕ್ತಿ ಕಾನೂನುಗಳ ಆಚೆಗೂ ಇದೆ ಎಂದು ಅವರಿಗೆ ಅನ್ನಿಸಿರಬೇಕು. ಅಂತಹ ಶಕ್ತಿಯನ್ನು ವಕೀಲ ಚಂದ್ರುವಿಗೆ ಆತನ ಎಡಪಂಥೀಯ ಸಂಘಟನೆ ಮತ್ತು ಸಿದ್ಧಾಂತ ನೀಡಿರಬಹುದು. ಐಜಿ ಪರಮೇಶ್ವರಪ್ಪನಿಗೆ, ತೀರ್ಪು ಬರೆದ ನ್ಯಾಯಾಧೀಶರಿಗೆ, ಹಣ ಕೊಡುತ್ತೇನೆಂದರೂ ಮಾರಿಕೊಳ್ಳದ ಸಣ್ಣಮ್ಮನಿಗೆ, ಸಾಯುವಷ್ಟು ಹಿಂಸೆ ಕೊಟ್ಟರೂ ಮಾಡದ ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸುವ ಕೆಂಪರಾಜುವಿಗೆ, ಹೋರಾಟ ಮಾಡಬೇಕೆಂದು ಅನ್ನಿಸಿದ ಟೀಚರಮ್ಮನಿಗೆ ಯಾವ ಸಿದ್ಧಾಂತವಿತ್ತು? ಇವರೆಲ್ಲ ಯಾಕೆ ಅನ್ಯಾಯವನ್ನು ಪ್ರತಿಭಟಿಸಬೇಕೆಂದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಹೋರಾಡುತ್ತಾರೆ? ಸಂವಿಧಾನ ಹಾಗೆ ಹೇಳಿದೆ ಅದಕ್ಕೆ ಹಾಗೆ ನಡೆದುಕೊಂಡರು ಅದರಲ್ಲೇನು ವಿಶೇಷ ಅಂದುಕೊಂಡು ನಾವು ಸುಮ್ಮನಾಗಬಹುದು. ಹಾಗಿದ್ದರೆ ಸಮಾಜದ ಉಳಿದ ಜನರೇಕೆ ಹಾಗೆ ಯೋಚಿಸುವುದಿಲ್ಲ ಎಂಬ ಪ್ರಶ್ನೆಗೆ ಸಿನೆಮಾದಲ್ಲಿ ಉತ್ತರಗಳಿಲ್ಲ. ಈ ಪ್ರಶ್ನೆಗೆ ಉತ್ತರ ಬಹಳ ಸುಲಭದಲ್ಲಿ ಸಿಗುವುದೂ ಇಲ್ಲ.

ಕವಿ, ನಾಟಕಕಾರ ಬ್ರೆಕ್ಟ್ ಅನೇಕ ಕಡೆ ಮನುಷ್ಯತ್ವ ಮೆರೆವ ನಾಝಿಗಳ ಕುರಿತು ಪ್ರಸ್ತಾಪಿಸುತ್ತಾನೆ. ಜೀವಭಯದಿಂದ ತಲೆ ತಪ್ಪಿಸಿಕೊಂಡು ದೇಶಾಂತರ ಓಡಿ ಹೋಗುವವರಿಗೆ ಗಡಿ ದಾಟುವುದಕ್ಕೆ ಸಹಾಯ ಮಾಡುವ ನಾಝಿ ಸೈನಿಕರ ಪ್ರಸ್ತಾಪಗಳು ಅವನ ಕೃತಿಗಳಲ್ಲಿ ಬರುತ್ತವೆ. ಚಾರ್ಲಿಯ ಸಿನೆಮಾಗಳಲ್ಲೂ ಸಿರಿವಂತರ ವರ್ಗ ಧೋರಣೆ ಮೀರಿದ ಪಾತ್ರಗಳು ಬರುತ್ತವೆ. ಯಾಕೆ ಹೀಗೆ? ಸಿದ್ಧ ವ್ಯಾಖ್ಯಾನಗಳನ್ನು ತಿರುಗು ಮುರುಗಾಗಿಸುವ ಬೆರಗುಗಳಲ್ಲೇ ಕಲೆಯ ಯಶಸ್ಸು ಇದೆಯೋ ಅಥವಾ ಮನುಷ್ಯರು ಇರುವುದೇ ಹೀಗೆಯೋ? ಪತಿತರೊಳಗೆ ನಿಷ್ಠಾವಂತರು, ಸಿನಿಕರ ನಡುವೆ ಶ್ರದ್ಧೆ ಇರುವವರು ಎದ್ದು ಬಂದು ಬಿಡುತ್ತಾರಲ್ಲ ಅವರು ಹಾಗಾಗಲು ಕಾರಣಗಳೇನು? ದೋಸ್ತೋವಸ್ಕಿ, ಹೆಮಿಂಗ್ವೆ, ಮಾರ್ಕ್ವೆಜ್ ಮುಂತಾದವರು ಮನುಷ್ಯನ ಪ್ರವೃತ್ತಿಗಳನ್ನು ಹಿಡಿದು ಒಳ್ಳೆಯತನ ಮತ್ತು ಕೆಟ್ಟತನಗಳನ್ನು ವ್ಯಾಖ್ಯಾನಿಸಲು ಪ್ರಯತ್ನಿಸಿದ್ದಾರೆ? ಹಾಗಿದ್ದರೆ ಮನುಷ್ಯರ ಮೂಲ ಪ್ರವೃತ್ತಿಗಳಲ್ಲಿ ಒಬ್ಬರಿಂದೊಬ್ಬರಿಗೆ ವ್ಯತ್ಯಾಸಗಳಿರಲು ಕಾರಣಗಳೇನು? ಮನುಷ್ಯರಲ್ಲಿ ಕೆಲವರನ್ನು ಕೆಟ್ಟವರನ್ನಾಗಿಯೂ, ಕೆಲವರನ್ನು ಒಳ್ಳೆಯವರನ್ನಾಗಿಯೂ ರೂಪಿಸಲು ಕಾರಣಗಳೇನು? ಧರ್ಮ, ಸಂಸ್ಕಾರ ಇತ್ಯಾದಿ ಮಾತುಗಳನ್ನು ಇನಾರ್ಗ್ಯಾನಿಕ್ ಚಿಂತಕರು, ಪಂಡಿತರು ಹೇಳುತ್ತಾರೆ. ಅಲ್ಲೂ ಇದೇ ಪ್ರಶ್ನೆ ಹುಟ್ಟುತ್ತದೆ. ರಾಬರ್ಟ್ ಪ್ಲಾಮಿನ್, ವಲೇರಿ ನೊಪಿಕ್ ಮುಂತಾದ ತಳಿ ವಿಜ್ಞಾನಿಗಳು ವರ್ತನೆಗಳ ಮೇಲೆ ಅನುವಂಶೀಯತೆಯನ್ನು ನಿರ್ಧರಿಸುವ ಜೀನುಗಳ ಪ್ರಭಾವ ಎಷ್ಟಿದೆ ಎಂಬುದರ ಕುರಿತು ಕೆಲಸ ಮಾಡುತ್ತಿದ್ದಾರೆ. ಪರ್ಸ್ಪೆಕ್ಟಿವ್ಸ್ ಆನ್ ಸೈಕೊಲಾಜಿಕಲ್ ಸೈನ್ಸ್; ರೆಪ್ಲಿಕೇಟೆಡ್ ಫೈಂಡಿಂಗ್ಸ್ ಫ್ರಮ್ ಬಿಹೇವಿಯರಲ್ ಜೆನೆಟಿಕ್ಸ್’ ಮುಂತಾದ ಬರಹಗಳಲ್ಲಿ ಈ ಕುರಿತು ಹಲವು ಸಂಗತಿಗಳನ್ನು ದಾಖಲಿಸಿದ್ದಾರೆ. ಬಹುಪಾಲು ಸಾರಿ ಇವರು ಕೂಡ ಪರಿಸರವು ಮನುಷ್ಯರ ಮೇಲೆ ನಿರ್ಣಾಯಕ ಪ್ರಭಾವ ಬೀರುತ್ತದೆ ಎಂಬುದನ್ನು ಒಪ್ಪುತ್ತಾರೆ.

ಎಡಪಂಥೀಯ ಪ್ರಮೇಯಗಳು ಸಾಮಾಜಿಕ ಪರಿಸರವನ್ನು ಸರಿಮಾಡಿದರೆ ಮನುಷ್ಯರು ಒಳ್ಳೆಯವರಾಗುತ್ತಾರೆ, ಜವಾಬ್ದಾರಿಯುತರಾಗಿರುತ್ತಾರೆ ಎನ್ನುತ್ತವೆ. ಹಾಗೆಲ್ಲ ಏನೂ ಇಲ್ಲ ಎಂದು ಬ್ರೆಕ್ಟ್, ಗ್ರಾಮ್ಷಿ ತಕರಾರು ಹೇಳುತ್ತಾರೆ. ಅಲ್ಲಿನ ಕ್ರೌರ್ಯದ ಬಗ್ಗೆಯೂ ಬರೆದಿದ್ದಾರೆ. ಕಾನೂನು ಮತ್ತು ಶಿಕ್ಷೆಗಳ ಮೂಲಕ ಮನುಷ್ಯರನ್ನು ಒಳ್ಳೆಯವರನ್ನಾಗಿಸಲು ಸಾಧ್ಯ ಎನ್ನುವವರಿದ್ದಾರೆ. ಕಠಿಣ ಶಿಕ್ಷೆಗಳಿರುವ ಸಮಾಜದಲ್ಲೇ ಕಾನೂನುಭಂಗಿಸುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. (‘ಜೈ ಭೀಮ್’ ಸಿನೆಮಾ ಕೂಡ ಇದೇ ಮಾದರಿಯದು.) ಸಡಿಲ ಕಾನೂನುಗಳಿರುವ, ಉದಾರವಾದಿ ಸಮಾಜಗಳಾದ ಸ್ಕಾಂಡಿನೇವಿಯನ್ ದೇಶಗಳ ಆಡಳಿತ ವ್ಯವಸ್ಥೆ, ನಾಗರಿಕರ ವರ್ತನೆಗಳು ಮಾದರಿ ಎಂದು ‘ಹ್ಯೂಮನ್ ಕೈಂಡ್’ ಕೃತಿ ಬರೆದ ರುಟ್ಗರ್ ಬ್ರೆಗ್‌ಮನ್ ಮತ್ತು ‘ಫ್ಯೂಚರ್ ಆಫ್ ನೇಶನ್ಸ್’ ಬಗ್ಗೆ ಮಾತನಾಡುತ್ತಿರುವ ಹರಾರಿ ಹೇಳುತ್ತಾರೆ. ಉತ್ತರ ಯುರೋಪಿನ ಈ ದೇಶಗಳು ಅತ್ತ ಪೂರ್ಣ ಬಂಡವಾಳಿಗ ಮೆರೆತದ ದೇಶಗಳೂ ಅಲ್ಲ, ಎಡಪಂಥೀಯ ಪ್ರಮೇಯಗಳ ದೇಶಗಳೂ ಅಲ್ಲ. ಹಾಗಿದ್ದರೆ ಅವರು ಉಳಿದವರಿಗಿಂತ ತುಸು ಭಿನ್ನವಾಗಲು ಕಾರಣವೇನು? ಅಲ್ಲಿ ಆಡಳಿತ ನಡೆಸಿದ ಪ್ರಭುತ್ವಗಳು, ಅಲ್ಲಿನ ಭೌಗೋಳಿಕತೆ, ಸಂಪನ್ಮೂಲಗಳ ಲಭ್ಯತೆ-ಅಲಭ್ಯತೆ ಇವಷ್ಟೇ ಕಾರಣವೆ? ಬಹುಶಃ ಇದರ ಆಚೆಗೆ ಬೇರೇನೊ ಇದೆ. ಅದನ್ನು ಹುಡುಕಬೇಕು. ಮನುಷ್ಯರನ್ನು ಒಳ್ಳೆಯವರನ್ನಾಗಿಸುವುದು ಹೇಗೆ?

ನೆನಪು ಮತ್ತು ಕನಸುಗಳುಳ್ಳ ಮನುಷ್ಯರು ರೂಪುಗೊಂಡ ಮೇಲೆ ನಿರಂತರವಾಗಿ ಮನುಷ್ಯರು ಒಳ್ಳೆಯವರಾಗಿರಬೇಕು ಎಂದು ಪ್ರಯತ್ನಿಸಲಾಗಿದೆ. ಸಾಮೂಹಿಕ ವಾಸದ ನೆಲೆಗಳು ರೂಪುಗೊಂಡ ನಂತರ ಪ್ರವೃತ್ತಿಗಳನ್ನು ಪಳಗಿಸಿ ಹೊಂದಿಕೊಂಡು ಹೋಗಲು ಬೇಕಾದ ಒಳ್ಳೆಯತನದ ಅಗತ್ಯವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿರಬೇಕು. ಆ ನಂತರ ಹಾಡು, ಕಾವ್ಯ, ಕತೆ, ಬರವಣಿಗೆ ರೂಪುಗೊಂಡ ಮೇಲೆ ನಿರಂತರವಾಗಿ ಮನುಷ್ಯನನ್ನು ಪಳಗಿಸಲು ಪ್ರಯತ್ನಿಸಲಾಗಿದೆ. ಇವರೆಲ್ಲರ ಮುಂದೆ ಇದ್ದ ದೊಡ್ಡ ಸವಾಲು, ‘ಮನುಷ್ಯರನ್ನು ಒಳ್ಳೆಯವರನ್ನಾಗಿಸುವುದು ಹೇಗೆ?’ ಎಂಬುದೇ ಆಗಿದೆ. ತುಸು ಮಟ್ಟಿಗೆ ಇದನ್ನು ರಾಮ ಮನೋಹರ ಲೋಹಿಯಾ ಅವರು ಮಾರ್ಕ್ಸ್, ‘ಗಾಂಧಿ ಆ್ಯಂಡ್ ಸೋಷಿಯಲಿಸಂ’ ಕೃತಿಯಲ್ಲಿ ಚರ್ಚಿಸಲು ಪ್ರಯತ್ನಿಸಿದ್ದಾರೆ. (ಪೂರ್ಣಚಂದ್ರ ತೇಜಸ್ವಿಯವರು ಗಾಂಧಿವಾದ ಮತ್ತು ಸಮಾಜವಾದ ಎಂಬ ಭಾಗವನ್ನು ಅನುವಾದಿಸಿದ್ದಾರೆ.) ಅದರಲ್ಲಿ ಅವರು ಸಮಾಜಗಳಲ್ಲಿ ಅಸ್ತಿತ್ವದಲ್ಲಿರುವ ಅನೇಕ ವ್ಯವಸ್ಥೆಗಳಲ್ಲಿ ಮನುಷ್ಯ ಒಳ್ಳೆಯವನಾಗಿರಬೇಕಾದ ಅಗತ್ಯ ಇಲ್ಲ, ಹಾಗಿದ್ದರೆ ಏನು ಮಾಡಬೇಕು? ವ್ಯಕ್ತಿಗೆ ಒಳ್ಳೆಯವನಾಗಿರಬಹುದಾದ ಸಾಧ್ಯತೆಯನ್ನು ಉಂಟು ಮಾಡುವುದು ಮಾತ್ರವಲ್ಲ, ಒಳ್ಳೆಯವನಾಗಿರಬೇಕಾದ ಅನಿವಾರ್ಯವನ್ನು ತಂದು ಕೊಡುವ ವ್ಯವಸ್ಥೆಯನ್ನು ರೂಪಿಸಬೇಕು...

ಒಂದು ನಿರ್ದಿಷ್ಟ ಮಾರ್ಗವನ್ನನುಸರಿಸಿದರೆ ಎಲ್ಲವೂ ತಂತಾನೆ ಒಳ್ಳೆಯದಾಗುತ್ತದೆ ಎಂದು ಎಲ್ಲ ಸಂತರೂ ಹೇಳುತ್ತಾ ಬಂದಿದ್ದಾರೆ. ಒಂದು ವ್ಯವಸ್ಥೆಯನ್ನು ಕುರಿತು ಮನಸ್ಸಿನಲ್ಲೇ ಯೋಚಿಸಿ, ಅದನ್ನು ಕಾಗದದ ಮೇಲೆ ವಿಸ್ತೃತಗೊಳಿಸಿ, ಅದಕ್ಕನುಗುಣವಾಗಿ ಸಮಾಜವನ್ನು ತಿದ್ದುವುದರಲ್ಲೇ ಈ ಸಂತರು ತೃಪ್ತರಾಗುತ್ತಾರೆ: ಆದರೆ ಅಂತಹವರು ಅನಿವಾರ್ಯವಾಗಿ ಸೋತಿದ್ದಾರೆ. ಅದಕ್ಕಾಗಿ ಮಾಡಬೇಕಾದ ಕೆಲಸವೆಂದರೆ, ಮಾನವ ವ್ಯಕ್ತಿತ್ವದ ಕೆಲವು ಒಳಿತುಗಳನ್ನು ತೆಗೆದುಕೊಂಡು ಒಂದು ವ್ಯವಸ್ಥೆಯನ್ನಾಗಿ ಮಾಡಿ ಒಳ್ಳೆಯತನವನ್ನು ಅತ್ಯಗತ್ಯ ಅನಿವಾರ್ಯತೆಯನ್ನಾಗಿ ಮಾಡಬೇಕು ಎನ್ನುತ್ತಾರೆ. ಅದಕ್ಕೆ ಅವರು ಗಾಂಧಿ ಸಮಾಜವಾದದಲ್ಲಿ ಪರಿಹಾರವಿದೆ ಎನ್ನುತ್ತಾರೆ. ಈ ಕುರಿತು ಅನೇಕರಿಗೆ ತಕರಾರುಗಳಿವೆ. ಇಲ್ಲಿ ಅದರ ಚರ್ಚೆಯ ಅಗತ್ಯವಿಲ್ಲ 

Writer - ನೆಲ್ಲುಕುಂಟೆ ವೆಂಕಟೇಶ್

contributor

Editor - ನೆಲ್ಲುಕುಂಟೆ ವೆಂಕಟೇಶ್

contributor

Similar News