ಒಮೈಕ್ರಾನ್: ಆತಂಕಕಾರಿಯೇ?

Update: 2021-12-04 19:30 GMT

ಜಾಗತಿಕ ಚಟುವಟಿಕೆಗಳು ಹಂತ ಹಂತವಾಗಿ ಪ್ರಾರಂಭವಾದವು ಎನ್ನುತ್ತಿದ್ದಂತೆಯೇ ಮತ್ತೊಂದು ರೂಪಾಂತರಿ ವೈರಸ್‌ನ ಭೀತಿ ಎಲ್ಲೆಡೆ ಹರಡುತ್ತಿದೆ. ಚಟುವಟಿಕೆಗಳು ವೇಗಕ್ಕೆ ತಡೆಯೊಡ್ಡಲು ಹೊಸ SARS-CoV-2ರ ರೂಪಾಂತರವು ಹೊರಹೊಮ್ಮಿದೆ. ಇದಕ್ಕೆ ಒಮೈಕ್ರಾನ್ ಎಂದು ಹೆಸರಿಸಲಾಗಿದ್ದು, ಮೊದಲ ಬಾರಿಗೆ ನವೆಂಬರ್ 11ರಂದು ಬೋಸ್ಟ್‌ವಾನದಲ್ಲಿ ಪತ್ತೆಯಾಗಿದೆ. ಇದರಲ್ಲಿ ಆಶ್ಚರ್ಯಪಡುವಂತಹದ್ದು ಏನಿಲ್ಲ. ಏಕೆಂದರೆ ವೈರಸ್‌ಗಳ ಹರಡುವಿಕೆ ಇಂದು ನಿನ್ನೆಯದಲ್ಲ. ಭೂಮಿಯ ಮೇಲೆ ಜೀವಿಗಳ ಉಗಮವಾದಾಗಿನಿಂದ ವೈರಸ್‌ಗಳು ಭೂಮಿಯ ಮೇಲೆ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿವೆ. ಅಂತೆಯೇ ಕಳೆದೆರಡು ವರ್ಷಗಳಿಂದ ಜಗತ್ತನ್ನು ಬಹುವಾಗಿ ಭಾಧಿಸಿದ ಕೋವಿಡ್ ವೈರಸ್ ಸಹ ಒಂದು ವಿಧದ SARS ವೈರಸ್ ಅಷ್ಟೆ. ಪ್ರಪಂಚದ ಯಾವುದೇ ಭಾಗದಲ್ಲಿ SARS ವೈರಸ್ ಅತಿರೇಕವಾಗಿ ಹರಡಬಹುದು ಎಂದು ತಜ್ಞರು ಎಚ್ಚರಿಸುತ್ತಲೇ ಇದ್ದರು. ರೂಪಾಂತರಿ ವೈರಸ್‌ನ ಸಂಭಾವ್ಯ ಅಪಾಯಗಳು ಹೆಚ್ಚು ಎಂಬುದು ಅವರ ಕಾಳಜಿಗೆ ಕಾರಣ. ಕೋವಿಡ್-19ರ ವೈರಸ್‌ಗೆ ಈಗಾಗಲೇ ಜಗತ್ತಿನೆಲ್ಲೆಡೆ ಲಸಿಕೆ ಲಭ್ಯವಿದ್ದು, ಬಹುತೇಕ ದೇಶಗಳು ದೇಶವಾಸಿಗಳಿಗೆ ಲಸಿಕೆ ನೀಡುವ ಕಾರ್ಯದಲ್ಲಿ ಬ್ಯುಸಿಯಾಗಿವೆ.

ಲಸಿಕೆ ಹಾಕಿಸಿಕೊಂಡರೆ ವೈರಸ್‌ನ ಭೀತಿ ಕಾಡದು ಎಂಬುದು ಒಂದು ಗುಂಪಿನ ತಜ್ಞರ ವಾದ. ಆದರೆ ಈಗ ನೀಡಿದ ಲಸಿಕೆಯು ಈಗಿನ ವೈರಸ್‌ನ ಅಪಾಯಗಳನ್ನು ತಡೆಯಲು ಮಾತ್ರ ಸಾಧ್ಯ, ರೂಪಾಂತರಿ ವೈರಸ್‌ನ ಅಪಾಯಗಳನ್ನು ತಡೆಯಲು ಶಕ್ತವಲ್ಲ ಎಂಬುದನ್ನು ಕೆಲ ತಜ್ಞರು ಹೇಳುತ್ತಿದ್ದಾರೆ. ಆದಾಗ್ಯೂ ಇಂತಹ ವಿಷಮ ಪರಿಸ್ಥಿತಿಯಲ್ಲಿ ಲಸಿಕೆ ಸಂಗ್ರಹಣೆ ಮತ್ತು ಜಾಗತಿಕ ಯೋಜನೆಯಾಗಿ ಬಹುತೇಕ ರಾಷ್ಟ್ರಗಳು ಮೂರನೇ ಡೋಸ್‌ಗಳನ್ನು ಹೊರತರುತ್ತಿರುವಾಗ, ಲಸಿಕೆ ದರಗಳು ಜೂಜಾಡುತ್ತಿರುವಾಗಲೇ ಪ್ರಪಂಚದ ಇತರ ಭಾಗಗಳಲ್ಲಿ ವೈರಸ್ ಹರಡುವಿಕೆಯು ಅನಿಯಂತ್ರಿತವಾಗಿದೆ.
ಬೋಸ್ಟ್‌ವಾನದಲ್ಲಿ, ಕೇವಲ ಶೇ.20 ಜನಸಂಖ್ಯೆಯು ಸಂಪೂರ್ಣವಾಗಿ ಲಸಿಕೆಯನ್ನು ಹೊಂದಿದೆ ಮತ್ತು ದೇಶವು ಡೆಲ್ಟಾ ಅಲೆಯ ಬಾಲದಲ್ಲಿದೆ. ಇತರ ದಕ್ಷಿಣ ಆಫ್ರಿಕನ್ ದೇಶಗಳಂತೆ, ಬೋಸ್ಟ್‌ವಾನವು ಹೆಚ್ಚಿನ ಪ್ರಮಾಣದಲ್ಲಿ ಎಚ್‌ಐವಿ ಸೋಂಕುಗಳನ್ನು ಹೊಂದಿದ್ದು, ಇದು SARS-CoV-2 ರೂಪಾಂತರಗಳನ್ನು ಉಂಟುಮಾಡಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಎಚ್‌ಐವಿಯೊಂದಿಗೆ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುವ ಜನರು ಹಲವಾರು ವಾರಗಳವರೆಗೆ ಕೋವಿಡ್-19 ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ದೀರ್ಘಕಾಲದ ಸೋಂಕು ರೂಪಾಂತರಗಳ ಹೊರಹೊಮ್ಮುವಿಕೆಯ ಕಾರ್ಯವಿಧಾನಗಳಲ್ಲಿ ಒಂದಾಗಿದೆ. ಕಳೆದ ಜೂನ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನವು, ಎಚ್‌ಐವಿ ಹೊಂದಿರುವ ವ್ಯಕ್ತಿಗಳಿಂದ SARS-CoV-2 ಹರಡುತ್ತದೆ ಎಂಬುದು ದೃಢಗೊಳಿಸಿದೆ. 216 ದಿನಗಳವರೆಗೆ SARS-CoV-2 ಅನ್ನು ಹೊಂದಿದ್ದ 36 ವರ್ಷದ ಎಚ್‌ಐವಿ ಮಹಿಳೆಯಲ್ಲಿ ರೂಪಾಂತರ ವೈರಸ್ ಪತ್ತೆಯಾದ ಬಗ್ಗೆ ವರದಿಯಾಗಿದೆ. ಜೂನ್ ತಿಂಗಳಿಂದ ಇಲ್ಲಿಯವರೆಗೆ ವೈರಸ್ 30ಕ್ಕೂ ಹೆಚ್ಚು ರೂಪಾಂತರಗಳನ್ನು ಹೊಂದಿರುವುದಾಗಿ ತಿಳಿದುಬಂದಿದೆ. ವಿಶ್ವಾದ್ಯಂತ ಎಚ್‌ಐವಿಯೊಂದಿಗೆ ವಾಸಿಸುವ 37.7 ಮಿಲಿಯನ್ ಜನರಲ್ಲಿ, ಶೇ.65ಕ್ಕಿಂತ ಹೆಚ್ಚು ಜನರು ಆಫ್ರಿಕಾದ ಸಹರಾ ಪ್ರಾಂತದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರಲ್ಲಿ ಸುಮಾರು 8 ಮಿಲಿಯನ್ ಜನರು ಪರಿಣಾಮಕಾರಿ ಆಂಟಿರೆಟ್ರೋವೈರಲ್ ಚಿಕಿತ್ಸೆಯನ್ನು ಪಡೆಯುವುದಿಲ್ಲ. ಆಫ್ರಿಕಾವು B.1.1.529 Omicronನಂತಹ ರೂಪಾಂತರ ವೈರಸ್‌ಗಳ ಸಂತಾನೋತ್ಪತ್ತಿಯ ನೆಲವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ನವೆಂಬರ್ 26ರಂದು, ಹೊಸ ರೂಪಾಂತರವನ್ನು ಗ್ರೀಕ್ ಅಕ್ಷರವಾದ ಒಮೈಕ್ರಾನ್‌ನೊಂದಿಗೆ ಹೆಸರಿಸಿದೆ ಮತ್ತು ಅದನ್ನು ಕಾಳಜಿಯ ರೂಪಾಂತರವೆಂದು ವರ್ಗೀಕರಿಸಿದೆ. ಆದರೆ ಕಳೆದ ರವಿವಾರ ಬಿಡುಗಡೆಯಾದ ನವೀಕರಣದಲ್ಲಿ, ಒಮೈಕ್ರಾನ್ ವ್ಯಕ್ತಿಯಿಂದ ವ್ಯಕ್ತಿಗೆ ಹೆಚ್ಚು ಸುಲಭವಾಗಿ ಹರಡುತ್ತದೆಯೇ ಅಥವಾ ಇತರ ರೂಪಾಂತರಗಳಿಗಿಂತ ಹೆಚ್ಚು ತೀವ್ರವಾದ ರೋಗವನ್ನು ಉಂಟುಮಾಡುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಡಬ್ಲೂಎಚ್‌ಒ ಹೇಳಿದೆ. ವಿಜ್ಞಾನಿಗಳು ದೃಢವಾದ ಪುರಾವೆಗಳನ್ನು ಸಂಗ್ರಹಿಸಲು ಒಂದು ವಾರಗಳ ಕಾಲ ಗಡುವು ತೆಗೆದುಕೊಂಡಿದ್ದರು.

ಒಮೈಕ್ರಾನ್ ಹೆಚ್ಚು ವೇಗವಾಗಿ ಹರಡಬಹುದು ಮತ್ತು ಸೌಮ್ಯವಾದ ಕಾಯಿಲೆಗೆ ಕಾರಣವಾಗಬಹುದು ಎಂದು ಪ್ರಾಥಮಿಕ ಮಾಹಿತಿಯು ಸೂಚಿಸುತ್ತದೆ. ಆಫ್ರಿಕಾದಲ್ಲಿ ವರದಿಯಾದ ಸೋಂಕುಗಳು ಸೌಮ್ಯವಾದ ರೋಗವನ್ನು ಹೊಂದಿರುವುದಾಗಿ ವರದಿ ಮಾಡಿವೆ. ಒಮೈಕ್ರಾನ್ ವಿರುದ್ಧ ಪ್ರಸ್ತುತ ಲಸಿಕೆಗಳು ಪರಿಣಾಮಕಾರಿಯಾಗುತ್ತವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರೂಪಾಂತರಗಳನ್ನು ನಿರೀಕ್ಷಿಸಲು ವಿನ್ಯಾಸಗೊಳಿಸಲಾದ ಚಿಕಿತ್ಸಾಲಯದಲ್ಲಿ ಈಗಾಗಲೇ ಎರಡು ಬೂಸ್ಟರ್‌ಗಳನ್ನು ಪರೀಕ್ಷಿಸಲಾಗುತ್ತಿದೆ. ಒಮೈಕ್ರಾನ್ ಹೇಗೆ ವರ್ತಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಜಗತ್ತು ಕಾಯುತ್ತಿರುವಾಗ, ಆಸ್ಟ್ರೇಲಿಯಾ, ಯುಎಸ್, ಕೆನಡಾ, ಯುಕೆ, ಯುರೋಪ್, ಹಾಂಗ್‌ಕಾಂಗ್ ಮತ್ತು ಜಪಾನ್ ಸೇರಿದಂತೆ ಹಲವಾರು ದೇಶಗಳು ದಕ್ಷಿಣ ಆಫ್ರಿಕಾದ ರಾಷ್ಟ್ರಗಳಿಂದ ಬಹುತೇಕ ತಕ್ಷಣದ ಪ್ರಯಾಣದ ನಿಷೇಧಗಳನ್ನು ಘೋಷಿಸಿವೆ. ಆದರೆ ಡೆಲ್ಟಾಕ್ಕಿಂತ ಒಮೈಕ್ರಾನ್ ಹೆಚ್ಚು ಹರಡಬಹುದಾದರೂ, ಪ್ರಯಾಣ ನಿಷೇಧಗಳು ನಿಧಾನವಾಗುತ್ತವೆ. ಹೊಸ ತಳಿಯ ಆಮದು ನಿಲ್ಲುವುದಿಲ್ಲ ಎಂದು ಲಂಡನ್ ಸ್ಕೂಲ್ ಆಫ್ ಹೈಜೀನ್ ಮತ್ತು ಟ್ರಾಪಿಕಲ್ ಮೆಡಿಸಿನ್‌ನ ಸಾಂಕ್ರಾಮಿಕ ರೋಗಗಳ ರೋಗಶಾಸ್ತ್ರಜ್ಞ ಅಸೋಸಿಯೇಟ್ ಪ್ರೊಫೆಸರ್ ಆಡಮ್ ಕುಚಾರ್ಸ್ಕಿ ಟ್ವೀಟ್ ಮಾಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಐದು ಪ್ರಕರಣಗಳು ಸೇರಿದಂತೆ ಆಫ್ರಿಕಾವನ್ನು ಹೊರತುಪಡಿಸಿ ಅನೇಕ ದೇಶಗಳಲ್ಲಿ ಈ ರೂಪಾಂತರವು ಈಗಾಗಲೇ ವರದಿಯಾಗಿದೆ. ಬಿ.ಬಿ.ಸಿ. ಸಂದರ್ಶನದಲ್ಲಿ, ಆಫ್ರಿಕನ್ ವ್ಯಾಕ್ಸಿನ್ ಡೆಲಿವರಿ ಅಲೈಯನ್ಸ್ ನ ಸಹ-ಅಧ್ಯಕ್ಷ ಡಾ. ಅಯೋಡೆ ಅಲಕಿಜಾ, ‘‘ಹೊಸ ರೂಪಾಂತರದ ಹೊರಹೊಮ್ಮುವಿಕೆ ಸಂಪೂರ್ಣವಾಗಿ ಅನಿವಾರ್ಯ, ಏಕೆಂದರೆ ಜಗತ್ತು ಎಲ್ಲಾ ದೇಶಗಳಿಗೆ ಸಮಾನವಾಗಿ ಲಸಿಕೆ ಹಂಚಲು ವಿಫಲವಾಗಿದೆ’’ ಎಂದು ಹೇಳಿದ್ದಾರೆ. ಲಸಿಕೆಗಳನ್ನು ಸಂಗ್ರಹಿಸಿರುವ ಶ್ರೀಮಂತ ದೇಶಗಳು ಈಗ ಆಫ್ರಿಕನ್ನರನ್ನು ಹೊರಗಿಡಲು ಬಯಸುತ್ತವೆ’’ ಎಂದು ಅವರು ಹೇಳಿದರು.

‘‘ಇದು ಸಮಾನ, ತುರ್ತು ಮತ್ತು ತ್ವರಿತ ರೀತಿಯಲ್ಲಿ ಲಸಿಕೆ ಹಾಕುವಲ್ಲಿ ವಿಶ್ವದ ವಿಫಲತೆಯ ಪರಿಣಾಮವಾಗಿದೆ’’ ಎಂದು ಅಲಕಿಜಾ ಹೇಳುತ್ತಾರೆ. ‘‘ಇದು ವಿಶ್ವದ ಹೆಚ್ಚಿನ ಆದಾಯದ ದೇಶಗಳ ಸಂಗ್ರಹಣೆಯ ಫಲಿತಾಂಶವಾಗಿದೆ. ಈ ಪ್ರಯಾಣದ ನಿಷೇಧಗಳು ರಾಜಕೀಯವನ್ನು ಆಧರಿಸಿವೆಯೇ ಹೊರತು ವಿಜ್ಞಾನದ ಮೇಲೆ ಅಲ್ಲ. ಇದು ತಪ್ಪು’’ಎಂದು ಅವರು ಇಡೀ ಜಗತ್ತನ್ನು ಎಚ್ಚರಿಸಿದ್ದಾರೆ. 1.2 ಶತಕೋಟಿ ಒಟ್ಟು ಜನಸಂಖ್ಯೆಯ ಶೇ. 10 ಜನರು ಮಾತ್ರ ಕೋವಿಡ್-19 ಲಸಿಕೆಯ ಒಂದು ಡೋಸ್ ಅನ್ನು ಪಡೆದಿರುವ ಖಂಡದಲ್ಲಿ ಒಮೈಕ್ರಾನ್ ಹೊರಹೊಮ್ಮಿದೆ. ಮಲೇಶ್ಯದ ಮೊನಾಶ್ ವಿಶ್ವವಿದ್ಯಾನಿಲಯದ ಜೆಫ್ರಿ ಚೀಹ್ ಸ್ಕೂಲ್ ಆಫ್ ಮೆಡಿಸಿನ್ ಮತ್ತು ಹೆಲ್ತ್ ಸೈನ್ಸಸ್‌ನ ವೈರಾಲಜಿಸ್ಟ್ ಡಾ. ವಿನೋದ್ ಬಾಲಸುಬ್ರಮಣ್ಯಂ, ‘‘ಪ್ರತಿ ಬಾರಿ ಯಾರೊಬ್ಬರ ದೇಹದಲ್ಲಿ ವೈರಸ್ ಪುನರಾವರ್ತನೆಯಾದಾಗ, ಅದು ಹೊಸದಾಗಿ ರೂಪಾಂತರಗೊಳ್ಳುವ ಸಾಧ್ಯತೆಯಿದೆ’’ ಎಂದು ಹೇಳಿದ್ದಾರೆ. ಇದು ಸಂಖ್ಯೆಗಳ ಆಟ ಎಂದು ಅವರು ಹೇಳುತ್ತಾರೆ. ನಾವು ಲಸಿಕೆ ಅಸಮಾನತೆಯನ್ನು ತ್ವರಿತವಾಗಿ ಪರಿಹರಿಸದಿದ್ದರೆ, ಬಹುಶಃ ತಿಂಗಳುಗಳು ಅಥವಾ ವರ್ಷಗಳವರೆಗೆ ಸಾಂಕ್ರಾಮಿಕ ರೋಗದಿಂದ ನಮ್ಮವರ ನಿರ್ಗಮನವನ್ನು ನೋಡಬೇಕಾಗುತ್ತದೆ ಎಂದು ಹೇಳಿರುವುದು ಪ್ರಸ್ತುತ ಲಸಿಕಾ ವಿತರಣೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ.
ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುವ ಜನರು ರೂಪಾಂತರಗಳನ್ನು ವೇಗಗೊಳಿಸಬಹುದು ಎಂದು ಪುರಾವೆಗಳು ಸೂಚಿಸುತ್ತವೆ. ಚೀನಾದ ವುಹಾನ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಾಗಿನಿಂದ, SARS-CoV-2 ಯಾದೃಚ್ಛಿಕ ರೂಪಾಂತರಗಳನ್ನು ಪಡೆದುಕೊಳ್ಳುತ್ತಿದೆ. ಇತ್ತೀಚಿನ ತಿಂಗಳುಗಳಲ್ಲಿ ಒಮೈಕ್ರಾನ್‌ನಂತಹ ಹಲವಾರು ಹೊಸ ರೂಪಾಂತರಗಳನ್ನು ಗಮನಿಸಲಾಗಿದೆ. ಅವುಗಳಲ್ಲಿ ಕೆಲವು ವೈರಸ್ ಹೇಗೆ ವರ್ತಿಸುತ್ತದೆ ಎಂಬುದರಲ್ಲಿ ಗಮನಾರ್ಹ ಬದಲಾವಣೆಗಳನ್ನು ಉಂಟುಮಾಡುತ್ತದೆ. ಇತ್ತೀಚೆಗೆ ಕರ್ನಾಟಕದಲ್ಲೂ ಒಮೈಕ್ರಾನ್ ವೈರಸ್ ಪತ್ತೆಯಾಗಿದ್ದು ಇಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸುಖ ಭೋಜನ ನೀಡುತ್ತಿದೆ. ಆದರೆ ಇದು ಎಷ್ಟು ಸಾಂಕ್ರಾಮಿಕವಾಗಿದೆ? ಇದರಿಂದ ಆದ ತೊಂದರೆಗಳೇನು? ಇದು ನಿಜಕ್ಕೂ ಪ್ರಾಣಾಂತಿಕವಾಗಿದೆಯೇ? ಎಂಬ ಪ್ರಶ್ನೆಗಳು ಕಾಡುತ್ತಿವೆ. ಸದ್ಯಕ್ಕೆ ಅದು ಹರಡದಿದ್ದರೂ ಎಲೆಕ್ಟ್ರಾನಿಕ್ ಮಾಧ್ಯಮಗಳಂತೂ ಇದನ್ನು ಎಲ್ಲೆಡೆ ಹರಡಿಸುವ ಧಾವಂತದಲ್ಲಿರುಂತೆ ಕಾಣುತ್ತದೆ. ಒಂದು ವೈರಸ್ ಕಾಣಿಸಿಕೊಂಡ ನಂತರ ಅದರ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ಮಾಡುವುದು ಅಗತ್ಯವಾಗಿದೆ. ಆಸ್ಪತ್ರೆ ಸಿಬ್ಬಂದಿಯಲ್ಲಿ ಕಾಣಿಸಿಕೊಂಡ ವೈರಸ್ ಅವರ ದೇಹದ ಮೇಲೆ ಬೀರಿದ ಪರಿಣಾಮವೇನು? ಅದರಿಂದ ಅವರಿಗೇನಾದರೂ ತೊಂದರೆಗಳಾಗಿವೆಯಾ? ಹರಡುವಿಕೆಯ ವೇಗ ಹೇಗಿದೆ? ಒಮೈಕ್ರಾನ್‌ನ ಲಕ್ಷಣಗಳೇನು? ಅದು ಯಾವ ವಯೋಮಾನದವರಿಗೆ ಹೆಚ್ಚು ಬಾಧಿಸುತ್ತದೆ? ಈಗ ಲಸಿಕೆ ಹಾಕಿಸಿಕೊಂಡವರಿಗೆ ಬಾಧಿಸುತ್ತದೆಯೋ ಅಥವಾ ಹಾಕಿಸಿಕೊಳ್ಳದವರಿಗೆ ಬಾಧಿಸುತ್ತಿದೆಯೋ? ಅದಕ್ಕೆ ಇರುವ ಪರಿಹಾರೋಪಾಯಗಳೇನು? ಮುಂತಾದ ಪ್ರಶ್ನೆಗಳಿಗೆ ಉತ್ತರವಿನ್ನೂ ಕಂಡುಕೊಳ್ಳಬೇಕಾಗಿದೆ.

ವೈರಸ್ ವಿಕಸನವು ಹೇಗೆ? ಯಾವಾಗ? ಮತ್ತು ಯಾರಲ್ಲಿ? ಸಂಭವಿಸುತ್ತದೆ ಎಂಬುದನ್ನು ವಿಜ್ಞಾನಿಗಳು ಇನ್ನೂ ಕಂಡುಕೊಂಡಿಲ್ಲ. ಆದರೆ ಈ ಹೊಸ ರೂಪಾಂತರಗಳ ಹಿನ್ನೆಲೆಯಲ್ಲಿ, ತ್ವರಿತ ಲಸಿಕೆಯ ತ್ವರಿತ ಸರಬರಾಜು ಅಗತ್ಯವಿದೆ. ವೈರಸ್‌ನ ರೂಪಾಂತರಗಳು ಸಾರ್ವಕಾಲಿಕ ಮತ್ತು ಯಾದೃಚ್ಛಿಕವಾಗಿರುತ್ತವೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ ಜನರಲ್ಲಿ ರೂಪಾಂತರ ವೈರಸ್‌ಗಳು ಹೆಚ್ಚು ಪರಿಣಾಮ ಬೀರಬಹುದು ಎಂದು ಕೆಲವು ತಜ್ಞರು ಊಹಿಸುತ್ತಾರೆ. ಪರಿಣಾಮಗಳ ಪ್ರಭಾವ ಕೇವಲ ಊಹೆ ಮಾತ್ರ ಎಂಬುದು ಗಮನಾರ್ಹ.
ದೇಶದಲ್ಲಿ 18 ವಯೋಮಾನಕ್ಕೂ ಮೇಲ್ಪಟ್ಟ ಶೇ. 90ರಷ್ಟು ಜನರು ಮೊದಲನೇ ಡೋಸ್ ಲಸಿಕೆ ಪಡೆದಿದ್ದಾರೆ. ಎರಡನೇ ಡೋಸ್‌ಗಾಗಿ ಲಕ್ಷಾಂತರ ಜನರು ಕಾಯುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಒಮೈಕ್ರಾನ್ ಯಾರಿಗೆ ಯಾವ ರೀತಿ ತೊಂದರೆ ನೀಡುತ್ತದೆ ಎಂಬ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಒಂದು ಮಾಹಿತಿಯ ಪ್ರಕಾರ ಲಸಿಕೆಯಿಂದಾಗಿ ಜನರಲ್ಲಿ ಕೋವಿಡ್‌ನ ಪ್ರತಿಕಾಯಗಳು ಸೃಷ್ಟಿಯಾಗಿರುವುದರಿಂದ ಒಮೈಕ್ರಾನ್ ಅಷ್ಟೊಂದು ಪ್ರಭಾವ ಬೀರುವುದಿಲ್ಲ ಎಂದು ಹೇಳಲಾಗಿದೆ. ಕಳೆದ ಒಂದು ವಾರದ ಪರಿಸ್ಥಿತಿಗಳನ್ನು ಗಮನಿಸಿದರೆ ಒಮೈಕ್ರಾನ್ ಬಗ್ಗೆ ಜನತೆ ಭಯ ಪಡುವ ಅಗತ್ಯವಿಲ್ಲ. ಒಂದಿಷ್ಟು ಮುನ್ನೆಚ್ಚರಿಕೆ ವಹಿಸಿದರೆ ಸಾಕೆನಿಸುತ್ತದೆ

Writer - ಆರ್.ಬಿ.ಗುರುಬಸವರಾಜ

contributor

Editor - ಆರ್.ಬಿ.ಗುರುಬಸವರಾಜ

contributor

Similar News