ರಾಜ್ಯದಲ್ಲಿ 2 ತಿಂಗಳಲ್ಲಿ 5 ಚರ್ಚ್‍ಗಳ ಮೇಲೆ ದಾಳಿ: ಎಪಿಸಿಆರ್ ಸಂಶೋಧನಾ ವರದಿಯಲ್ಲಿ ಉಲ್ಲೇಖ

Update: 2021-12-05 18:40 GMT
ನ.28ರಂದು ಬೇಲೂರು ಚರ್ಚ್ ಗೆ ಪ್ರಾರ್ಥನೆಗೆ ಬಂದಿದ್ದವರ ಜೊತೆ ಸಂಘಪರಿವಾರದ ಕಾರ್ಯಕರ್ತರು ವಾಗ್ವಾದ ನಡೆಸುತ್ತಿರುವುದು

ಬೆಂಗಳೂರು: ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹಲ್ಲೆ, ದೌರ್ಜನ್ಯವೆಸಗುವ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದ್ದು, ಎರಡೇ ತಿಂಗಳಿನಲ್ಲಿ ಕ್ರೈಸ್ತರ ಐದು ಧಾರ್ಮಿಕ ಕೇಂದ್ರಗಳ ಮೇಲೆ ಬಲಪಂಥೀಯ ಗುಂಪುಗಳು ದಾಳಿ ನಡೆಸಿರುವ ಅಂಶ ಬೆಳಕಿಗೆ ಬಂದಿದೆ.

ರವಿವಾರ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್(ಎಪಿಸಿಆರ್), ಯುನೈಟೆಡ್ ಕ್ರಿಶ್ಚಿಯನ್ ಫೋರಂ ಹಾಗೂ ಯುನೈಟೆಡ್ ಅಗೈನ್‌ಸ್ಟ್‌ಹೇಟ್ ಸಂಘಟನೆಗಳ ಸಹಯೋಗದೊಂದಿಗೆ ಬಿಡುಗಡೆಗೊಳಿಸಿದ ‘‘ಭಾರತದಲ್ಲಿ ದಾಳಿಗೊಳಗಾದ ಕ್ರೈಸ್ತರು’’ ಸತ್ಯಶೋಧನ ವರದಿಯಲ್ಲಿ ರಾಜ್ಯದ ಆರು ಕಡೆಗಳಲ್ಲಿ ಕ್ರೈಸ್ತರ ಚರ್ಚ್‌ಗಳ ಮೇಲಿನ ದಾಳಿ ಪ್ರಕರಣಗಳನ್ನು ಉಲ್ಲೇಖಿಸಿದೆ. ಇವುಗಳ ಪೈಕಿ ಐದು ಚರ್ಚ್‌ಗಳ ಮೇಲೆ ದಾಳಿ ಎರಡೇ ತಿಂಗಳಿನಲ್ಲಿ ನಡೆದಿರುವುದು ಗಮನಾರ್ಹ.

ಇದೇ ಸಾಲಿನ ಜನವರಿ 3ರಂದು ಕೊಪ್ಪಳದ ಕೆಂಚಿನ ಡೋಣಿಯ ಅಬ್ಬಿಗೆರೆ ತಾಂಡಾದಲ್ಲಿ ಪಾದ್ರಿ ದೇವೇಂದ್ರ ಅವರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಆರು ಜನರ ತಂಡವೊಂದು ನಿಂದಿಸಿ ಹಲ್ಲೆ ನಡೆಸಿದೆ. ಈ ಸಂಬಂಧ ಆರು ಜನರ ವಿರುದ್ಧ ಕೊಪ್ಪಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಅ.10ರಂದು ಉಡುಪಿಯ ಪಾದ್ರಿ ಪ್ರಕಾಶ್ ಅವರನ್ನು ಚರ್ಚ್‌ನಲ್ಲಿ ಧಾರ್ಮಿಕ ಚಟುವಟಿಕೆ ನಡೆಸಲು ಬಲಪಂಥೀಯರ ಗುಂಪೊಂದು ಅಡ್ಡಿಪಡಿಸಿತು. ಆನಂತರ, ಇವರು ಮತಾಂತರ ಮಾಡುತ್ತಾರೆ ಎಂದು ನೀಡಿದ ಸುಳ್ಳು ದೂರಿನನ್ವಯ ಪಾದ್ರಿ ಪ್ರಕಾಶ್, ಜ್ಯೋತಿ ಸೇರಿದಂತೆ ಕ್ರೈಸ್ತ ಸಮುದಾಯದ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದರು.

ಇದೇ ದಿನದಂದು ಉತ್ತರ ಕನ್ನಡದ ಹಳಿಯಾಳದಲ್ಲಿ ಒಂದು ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದ್ದು, ಪಾದ್ರಿ ಸುರೇಶ್ ದೊಡ್ಮನಿ ಅವರನ್ನು ಮತೀಯವಾದಿಗಳು ನಿಂದಿಸಿ ಚರ್ಚ್‌ಗೆ ನುಗ್ಗಿದರು. ಬಳಿಕ ಮತಾಂತರ ಆರೋಪ ಮಾಡಿದರು. ಇದಾದ ಬಳಿಕ ನ.10ರಂದು ಇಲ್ಲಿನ ಬೆಳಗಾವಿ ನ್ಯೂ ಲೆಫ್ ಫೆಲೋಶಿಪ್ ಪಾದ್ರಿ ಕೆ.ಜೆ.ಲೆಮು ಚೆರಿಯನ್ ಅವರು ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುವ ವೇಳೆ ಏಕಾಏಕಿ ನುಗ್ಗಿದ ಬಲಪಂಥೀಯರ ಗುಂಪು, ಪ್ರಾರ್ಥನೆಗೆ ತಡೆಯೊಡ್ಡಿತು. ಆನಂತರ ಪೊಲೀಸರು ಚರ್ಚ್‌ಗೆ ಆಗಮಿಸಿ ದಾಖಲೆಗಳನ್ನು ಪರಿಶೀಲಿಸಿದರು.

ನ.14ರಂದು ರಾಜಧಾನಿ ಬೆಂಗಳೂರಿನ ರಾಜನ ಕುಂಟೆಯ ಪಾದ್ರಿ ಜಾನ್ ಶಾಮಿನ್ ಅವರು ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ 40ಕ್ಕೂ ಅಧಿಕ ಜನರ ಗುಂಪೊಂದು ದಾಳಿ ನಡೆಸಿದೆ. ಬಳಿಕ ಪಾದ್ರಿ ಸೇರಿದಂತೆ ಹಲವರ ಮೇಲೆ ದಾಳಿ, ಚರ್ಚಿನ ಹಲವು ವಸ್ತುಗಳನ್ನು ನಾಶಗೊಳಿಸಿದೆ.

ಇದೇ ದಿನದಂದು ಬಿಜೆಪಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅವರ ತಾಯಿಯನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿರುವ ಆರೋಪದ ಮೇಲೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಪಾದ್ರಿ ರಮೇಶ್ ಮೇಲೆ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿ, ಮಾನಸಿಕ ಹಿಂಸೆ ನೀಡಲಾಗಿದೆ ಎಂದು ಎಪಿಸಿಆರ್ ಹೇಳಿದೆ.

ಮತಾಂತರ: ಆರ್ಥಿಕವಾಗಿ ಹಿಂದುಳಿದ ಜನರನ್ನು ಆಮಿಷವೊಡ್ಡಿ ಪಾದ್ರಿಗಳು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಾರೆ ಎನ್ನುವ ಸುಳ್ಳು ವದಂತಿಗಳನ್ನು ಮುಂದಿಟ್ಟುಕೊಂಡು ಬಲಪಂಥೀಯ ಗುಂಪುಗಳು ಚರ್ಚ್ ಗಳ ಮೇಲಿನ ದಾಳಿ ಮುಂದುವರಿಸಿವೆ ಎನ್ನುವ ಅಂಶವೂ ವರದಿಯಲ್ಲಿ ಬಹಿರಂಗವಾಗಿದೆ. ಕರ್ನಾಟಕ ಮಾತ್ರವಲ್ಲದೆ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಕ್ರೈಸ್ತರು, ಚರ್ಚ್‌ಗಳ ಮೇಲಿನ ದಾಳಿಗಳು ವರದಿಯಾಗಿವೆ.

ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಿ:

‘ಸಂವಿಧಾನ ಈ ದೇಶದ ಪ್ರತಿವೊಬ್ಬ ನಾಗರೀಕನಿಗೂ ಸಮಾನ ಹಕ್ಕು ನೀಡಿದೆ.ಹೀಗಿರುವಾಗ ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಜತೆಗೆ, ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಬೇಕು'

-ಪಿ.ಉಸ್ಮಾನ್, ಅಧ್ಯಕ್ಷ ಎಪಿಸಿಆರ್ 

ಬಲವಂತದ ಮತಾಂತರ ಸಾಬೀತು ಮಾಡಿದರೆ ಎಲ್ಲ ಶಾಲೆ, ಆಸ್ಪತ್ರೆಗಳನ್ನು ಮುಚ್ಚುತ್ತೇವೆ

ಬಲವಂತದ ಮತಾಂತರ ಎನ್ನುವುದು ಕ್ರೈಸ್ತ ಧರ್ಮದಲ್ಲಿ ಇಲ್ಲ. ಯಾರೂ ಅದನ್ನು ನಡೆಸುತ್ತಲೂ ಇಲ್ಲ. ಒಂದು ವೇಳೆ ಅದನ್ನು ಯಾರಾದರೂ ಸಾಬೀತು ಮಾಡಿದ್ದೇ ಆದರೆ, ನಾವು ಎಲ್ಲ ಕ್ರೈಸ್ತ ಶಾಲೆ ಮತ್ತು ಆಸ್ಪತ್ರೆಗಳನ್ನು ಮುಚ್ಚುವುದಕ್ಕೆ ಸಿದ್ಧ. ಕೆಲವರು ಧಾರ್ಮಿಕ ಸಂಸ್ಥೆಗಳ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸುತ್ತಿದ್ದಾರೆ. ಸರಕಾರ ಜಾರಿಗೆ ತರಲು ಹೊರಟಿರುವ ಮತಾಂತರ ಕಾಯ್ದೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುವುದಕ್ಕೆ ಪೂರಕವಾಗಿದೆ. ಕ್ರೈಸ್ತರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿಸುವ ಸಂಚು ಇದರ ಹಿಂದಿದೆ.

-ಡಾ.ಪೀಟರ್ ಮಚಾದೋ, ಧರ್ಮಾಧ್ಯಕ್ಷ, ಬೆಂಗಳೂರು ಮಹಾಧರ್ಮ ಕ್ಷೇತ್ರ

Writer - -ಸಮೀರ್ ದಳಸನೂರು

contributor

Editor - -ಸಮೀರ್ ದಳಸನೂರು

contributor

Similar News