ಎಸೆಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷಾ ಶುಲ್ಕ 35 ರೂ. ಹೆಚ್ಚಳ

Update: 2021-12-07 02:07 GMT

ಬೆಂಗಳೂರು: ಶಾಲೆ ಮತ್ತು ಕಾಲೇಜುಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಶಾಲಾ ಮಕ್ಕಳ ಪೋಷಕರಿಗೂ ಲಸಿಕೆ ಕಡ್ಡಾಯಗೊಳಿಸಿರುವ ಬಗ್ಗೆ ಆಕ್ಷೇಪಗಳು ಕೇಳಿ ಬಂದಿರುವ ಬೆನ್ನಲ್ಲೇ 2021-22ನೇ ಸಾಲಿನ ಪೂರ್ವ ಸಿದ್ಧತಾ ಪರೀಕ್ಷಾ ಶುಲ್ಕವನ್ನು 35 ರೂ.ಗಳಷ್ಟು ಹೆಚ್ಚಳ ಮಾಡಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಅನುಮತಿ ನೀಡಿರುವ ರಾಜ್ಯ ಸರಕಾರವು ಆದೇಶ ಹೊರಡಿಸಿದೆ.

ಸಾಗಾಣಿಕೆ ದರದಲ್ಲಿನ ಹೆಚ್ಚಳ ಮತ್ತು ಪರೀಕ್ಷಾ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಇತರ ಕಾರ್ಯಗಳಿಗೆ ಖರ್ಚು ವೆಚ್ಚ ಹೆಚ್ಚಾಗಿರುವುದನ್ನು ಮುಂದಿರಿಸಿಕೊಂಡಿರುವ ಸರಕಾರವು 2021-22ನೇ ಸಾಲಿಗೆ ಪ್ರತಿ ವಿದ್ಯಾರ್ಥಿಗೆ ಪರೀಕ್ಷಾ ಶುಲ್ಕವನ್ನು 25 ರೂ.ನಿಂದ 60 ರೂ.ಗೆ ಹೆಚ್ಚಿಸಿ ಶುಲ್ಕ ಹೆಚ್ಚಳವನ್ನು ಸಮರ್ಥಿಸಿಕೊಂಡಿದೆ. 2022ರ ಫೆಬ್ರವರಿ ಮೊದಲನೇ ವಾರದಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಿದೆ. ಪೂರ್ವ ಸಿದ್ಧತಾ ಮತ್ತು ಮುಖ್ಯ ಪರೀಕ್ಷಾ ಶುಲ್ಕವನ್ನೂ ವಿದ್ಯಾರ್ಥಿಗಳಿಂದ ಒಟ್ಟಿಗೆ ಪಡೆಯಲು ಸರಕಾರವು ಆದೇಶಿಸಿದೆ.

  2019ರ ಮಾರ್ಚ್ ಮತ್ತು ಎಪ್ರಿಲ್‌ನಲ್ಲಿ ನಡೆಸಿದ್ದ ಎಸೆಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷಾ ಶುಲ್ಕವನ್ನು 25 ರೂ.ಗೆ ನಿಗದಿಪಡಿಸಲಾಗಿತ್ತು. 2020-21ನೇ ಸಾಲಿನಲ್ಲಿ ಎರಡನೇ ಅಲೆಯು ರಾಜ್ಯಾದ್ಯಂತ ವ್ಯಾಪಿಸಿದ್ದ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಿರಲಿಲ್ಲ. ಇದೀಗ 2021-22ನೇ ಸಾಲಿಗೆ ನಡೆಯಲಿರುವ ಎಸೆಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷಾ ಶುಲ್ಕವನ್ನು ಪ್ರತಿ ವಿದ್ಯಾರ್ಥಿಗೆ 25 ರೂ.ಗಳಿಂದ 60 ರೂ.ಗೆ ಹೆಚ್ಚಳ ಮಾಡಿದೆ. 2021ರ ಡಿಸೆಂಬರ್ 6ರಂದು ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. ಇದರ ಪ್ರತಿ ‘thefile.in’ಗೆ ಲಭ್ಯವಾಗಿದೆ.

 2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿನ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ 2021ರ ಆಗಸ್ಟ್ 23ರಿಂದ ಭೌತಿಕವಾಗಿ ತರಗತಿ ಆರಂಭವಾಗಿವೆ.

ಶಾಲೆಗಳು ಭೌತಿಕವಾಗಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿರುವುದರಿಂದ 2021-22ನೇ ಸಾಲಿಗೆ ಎಸೆಸೆಲ್ಸಿ ಮುಖ್ಯ ಪರೀಕ್ಷಾ ಪದ್ಧತಿ, ಪ್ರಶ್ನೆ ಪತ್ರಿಕೆ ವಿನ್ಯಾಸ, ಪೂರ್ವ ಸಿದ್ಧತಾ ಪರೀಕ್ಷೆ ವಿಧಾನ, ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಸ್ವೀಕೃತಿ ಹಾಗೂ ಪರೀಕ್ಷಾ ಖರ್ಚು ವೆಚ್ಚಗಳ ಕುರಿತು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷೆ ಮಂಡಳಿಯು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

 ಪ್ರಸ್ತುತ ಸಾಗಾಣಿಕೆ ದರದಲ್ಲಿನ ಹೆಚ್ಚಳ ಮತ್ತು ಪರೀಕ್ಷಾ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಇತರ ಕಾರ್ಯಗಳಿಗೆ ಖರ್ಚು ವೆಚ್ಚ ಹೆಚ್ಚಾಗಿರುವುದನ್ನು ಮುಂದಿರಿಸಿಕೊಂಡಿರುವ ಸರಕಾರವು 2021-22ನೇ ಸಾಲಿಗೆ ಪ್ರತಿ ವಿದ್ಯಾರ್ಥಿಗೆ ಪರೀಕ್ಷಾ ಶುಲ್ಕವನ್ನು 25 ರೂ.ನಿಂದ 60 ರೂ.ಗೆ ಹೆಚ್ಚಿ ಸುವುದು ಸೂಕ್ತ,’ ಎಂದು ಮಂಡಳಿಯು ಪ್ರಸ್ತಾವ ಸಲ್ಲಿಸಿತ್ತು ಎಂಬುದು ಆದೇಶದಿಂದ ತಿಳಿದು ಬಂದಿದೆ.

 ಶುಲ್ಕ ವಿನಾಯಿತಿ ಪಡೆಯುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಶುಲ್ಕ ಪಾವತಿಸುವ ಸಾಮಾನ್ಯ ವಿದ್ಯಾರ್ಥಿಗಳು ಒಟ್ಟು 1.60 ಲಕ್ಷದಷ್ಟಿದ್ದಾರೆ. ಈ ವಿದ್ಯಾರ್ಥಿಗಳಿಂದ 60 ರೂ. ನಂತೆ ಪರೀಕ್ಷಾ ಶುಲ್ಕ ಪಡೆದಲ್ಲಿ ಇದರಿಂದ 96.00 ಲಕ್ಷ ರೂ. ನಿರೀಕ್ಷಿಸಬಹುದು ಎಂದು ಸರಕಾರವು ಅಂದಾಜಿಸಿದೆ. ಶುಲ್ಕ ಪಾವತಿಸುವ ವಿದ್ಯಾರ್ಥಿಗಳಿಂದ 96 ಲಕ್ಷ ಮತ್ತು ಇತರ ಇಲಾಖೆಗಳಿಂದ ಮರುಭರಣವಾಗುವ 372 ಲಕ್ಷ ಒಟ್ಟಾರೆ 468 ಲಕ್ಷ ರೂ.ಗಳನ್ನು ಪರೀಕ್ಷಾ ಶುಲ್ಕವಾಗಿ ಪಡೆಯಬಹುದು ಎಂದು ಸರಕಾರವು ಲೆಕ್ಕಾಚಾರ ಮಾಡಿರುವುದು ಆದೇಶದಿಂದ ಗೊತ್ತಾಗಿದೆ.

  ಪ್ರಶ್ನೆ ಪತ್ರಿಕೆಯ ಮುದ್ರಣ, ಸರಬರಾಜು ಕಾರ್ಯಕ್ಕೆ (ರಾಜ್ಯ ಹಂತದಿಂದ ಜಿಲ್ಲಾ ಹಂತಕ್ಕೆ) ಅಂದಾಜು 8 ಲಕ್ಷ ವಿದ್ಯಾರ್ಥಿಗಳಿಗೆ 400 ಲಕ್ಷ ರೂ. ವೆಚ್ಚವಾಗಲಿದೆ. ಪ್ರಶ್ನೆ ಪತ್ರಿಕೆಗಳನ್ನು ಬಿಇಒ ಕಚೇರಿಯಿಂದ ಶಾಲೆಗಳಿಗೆ ರವಾನಿಸಲು (15,000 ಶಾಲೆಗಳು, ಪ್ರತಿ ರೂಟ್‌ಗೆ 8 ಶಾಲೆಗಳಂತೆ) ಒಂದು ರೂಟ್‌ಗೆ 1,400 ರೂ.ನಂತೆ 6 ದಿನಗಳಿಗೆ 158 ಲಕ್ಷ ರೂ., ಮಾರ್ಗಾಧಿಕಾರಿಗಳ ಸಂಭಾವನೆ (ಪ್ರತಿ ಮಾರ್ಗಕ್ಕೆ ಇಬ್ಬರಂತೆ, ಪ್ರತಿ ಮಾರ್ಗಾಧಿಕಾರಿಗೆ 150 ರೂ.ನಂತೆ) 34 ಲಕ್ಷ ಸೇರಿ ಒಟ್ಟು 592 ಲಕ್ಷ ರೂ. ವೆಚ್ಚವಾಗಲಿದೆ ಎಂದು ಮಂಡಳಿಯು ಲೆಕ್ಕಾಚಾರವನ್ನು ಸರಕಾರದ ಮುಂದಿಟ್ಟಿರುವುದು ಆದೇಶದಿಂದ ಗೊತ್ತಾಗಿದೆ.

 2021-22ನೇ ಸಾಲಿನ ಎಸೆಸೆಲ್ಸಿ ಪಠ್ಯವಸ್ತುವಿನಲ್ಲಿ ಶೇ.20ರಷ್ಟನ್ನು ಕಡಿತಗೊಳಿಸಿ 2021ರ ಡಿಸೆಂಬರ್ 4ರಂದು ಆದೇಶ ಹೊರಡಿಸಿದೆ. 2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಭೌತಿಕವಾಗಿ 2 ತಿಂಗಳು ವಿಳಂಬವಾಗಿ ಪ್ರಾರಂಭವಾಗಿರುವುದರಿಂದ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಒಟ್ಟಾರೆ ಪಠ್ಯವಸ್ತುವಿನಲ್ಲಿ ಶೇ.20ರಷ್ಟು ಕಡಿತಗೊಳಿಸಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಈಗಾಗಲೇ ಆದೇಶ ಹೊರಡಿಸಿರುವುದನ್ನು ಸ್ಮರಿಸಬಹುದು.

 2019-20ನೇ ಸಾಲಿನ ಪ್ರಶ್ನೆ ಪತ್ರಿಕೆಯ ಮಾದರಿಯಲ್ಲಿ ಬದಲಾವಣೆ ಮಾಡದೇ ಪ್ರಶ್ನೆ ಪತ್ರಿಕೆಯು ಕಠಿಣತೆಯ ಮಟ್ಟ ಕಡಿಮೆ ಮಾಡಿದೆ. 2019-20ನೇ ಸಾಲಿನಲ್ಲಿದ್ದಂತೆ ಪ್ರಥಮ ಭಾಷೆಗೆ ಗರಿಷ್ಠ 100 ಅಂಕಗಳಿಗೆ ಹಾಗೂ ಉಳಿದ 5 ವಿಷಯಗಳಿಗೆ ಗರಿಷ್ಠ 80 ಅಂಕಗಳಿಗೆ 3 ಗಂಟೆಯ ಕಾಲಾವಕಾಶ ನೀಡಿ ಸರಳ ಹಾಗೂ ಸುಲಭವಾಗಿ ಉತ್ತರಿಸಲು ಅವಕಾಶ ನೀಡಬಹುದು ಎಂದು ಮಂಡಳಿಯು ಪ್ರಸ್ತಾವನೆಯಲ್ಲಿ ವಿವರಿಸಿದೆ.

124 ಲಕ್ಷ ರೂ. ಕೊರತೆ

ಎಲ್ಲ ಪರೀಕ್ಷಾ ಪ್ರಕ್ರಿಯೆಗೆ ಅಂದಾಜಿಸಲಾದ 592 ಲಕ್ಷ ರೂ.ಗಳಲ್ಲಿ ಪರೀಕ್ಷಾ ಶುಲ್ಕವಾಗಿ ಪಡೆಯುವ 468 ಲಕ್ಷ ರೂ.ಗಳನ್ನು ಕಳೆದರೆ ಇನ್ನೂ 124 ಲಕ್ಷ ರೂ. ಕೊರತೆ ಉಂಟಾಗುತ್ತದೆ ಎಂದು ಮಂಡಳಿಯು ಪ್ರಸ್ತಾವದಲ್ಲಿ ವಿವರಿಸಿದೆ. ಇಲಾಖೆಗಳಿಂದ ಪರೀಕ್ಷೆ ನಡೆಸುವ ಪೂರ್ವದಲ್ಲಿಯೇ ಮರುಭರಣ ಪಡೆಯಲಾಗದ 372.00 ಲಕ್ಷ ರೂ. ಕೊರತೆ ಮೊತ್ತ 124.00 ಲಕ್ಷ ಸೇರಿ ಒಟ್ಟಾರೆ 496 ಲಕ್ಷ ರೂ.ಗಳನ್ನು ಮಂಡಳಿಯ ಎಸೆಸೆಲ್ಸಿ ವಿಭಾಗದಲ್ಲಿ ಲಭ್ಯವಿರುವ ಅನುದಾನದಲ್ಲಿ ಭರಿಸಬಹುದು ಎಂದು ಮಂಡಳಿಯು ಹೇಳಿದೆ.

ಅದೇ ರೀತಿ ಶುಲ್ಕ ವಿನಾಯಿತಿ ಪಡೆಯುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಶುಲ್ಕ ಪಾವತಿಸುವ ಸಾಮಾನ್ಯ ವಿದ್ಯಾರ್ಥಿಗಳಿಂದ ಪೂರ್ವ ಸಿದ್ಧತಾ ಪರೀಕ್ಷಾ ಪರೀಕ್ಷೆ ಶುಲ್ಕ ಹಾಗೂ ಮುಖ್ಯ ಪರೀಕ್ಷೆಯ ಶುಲ್ಕವನ್ನು ಒಟ್ಟಿಗೇ ಸ್ವೀಕರಿಸಬಹುದು ಎಂಬ ಪ್ರಸ್ತಾವದಲ್ಲಿ ಹೇಳಲಾಗಿದೆ.

Writer - ಜಿ. ಮಹಾಂತೇಶ್

contributor

Editor - ಜಿ. ಮಹಾಂತೇಶ್

contributor

Similar News