ಪ್ರಧಾನಿ ಮೋದಿ ಭೇಟಿ ಹಿನ್ನೆಲೆ: ವಾರಣಾಸಿಯ ಮಸೀದಿಗೆ ಕೇಸರಿ ಬಣ್ಣ ಬಳಿದ ಆಡಳಿತ
ವಾರಣಾಸಿ: ಡಿಸೆಂಬರ್ 13 ರಂದು ಪ್ರಧಾನಿ ನರೇಂದ್ರ ಮೋದಿ ಅವರ ನಿರೀಕ್ಷಿತ ಭೇಟಿಗೆ ಮುನ್ನ ಇಲ್ಲಿನ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಮಸೀದಿಗೆ ಅಧಿಕಾರಿಗಳು "ಕೇಸರಿ" ಬಣ್ಣ ಬಳಿದಿದ್ದಾರೆ ಎಂದು ಮಸೀದಿ ಸಮಿತಿಯ ಸದಸ್ಯರು ತಿಳಿಸಿದ್ದಾಗಿ newindianexpress.com ವರದಿ ಮಾಡಿದೆ.
ಈ ಪ್ರಕರಣದ ಕುರಿತು ಅಧಿಕಾರಿಗಳು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿರದಿದ್ದರೂ ಈ ಹಿಂದೆ, ರಸ್ತೆಯಲ್ಲಿರುವ ಎಲ್ಲಾ ಕಟ್ಟಡಗಳಿಗೆ ಏಕರೂಪದ ತಿಳಿಗುಲಾಬಿ ಬಣ್ಣವನ್ನು ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಈ ಹಿಂದೆ ಹೇಳಿಕೆ ನೀಡಿದ್ದರು.
ಮುಸ್ಲಿಂ ಸಮುದಾಯದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ನಂತರ, ಬುಲನಾಳ ಪ್ರದೇಶದಲ್ಲಿ ಇರುವ ಮಸೀದಿಗೆ ಮತ್ತೆ ಬಿಳಿ ಬಣ್ಣ ಬಳಿಯಲಾಗುತ್ತಿದೆ ಎಂದು ವರದಿ ತಿಳಿಸಿದೆ. ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿಯ ಮುಹಮ್ಮದ್ ಇಜಾಝ್ ಇಸ್ಲಾಹಿ, "ಮಸೀದಿಯು ಮೊದಲು ಬಿಳಿ ಬಣ್ಣದ್ದಾಗಿತ್ತು. ಬಳಿಕ ಅದಕ್ಕೆ ಕೇಸರಿ ಬಣ್ಣ ಬಳಿಯಲಾಗಿತ್ತು. ಈ ಕುರಿತು ಮಸೀದಿ ಸಮಿತಿಯ ಸಲಹೆ ಪಡೆದಿಲ್ಲ" ಎಂದು ಹೇಳಿದರು.
ಪಿತೂರಿಯಡಿ ಈ ಕೃತ್ಯವನ್ನು ಎಸಗಲಾಗಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಕಾಶಿ ವಿಶ್ವನಾಥ ದೇವಸ್ಥಾನದ ಕಚೇರಿಗೆ ಆಕ್ಷೇಪಣೆಯನ್ನು ಸಲ್ಲಿಸಿದ್ದೆವು ಎಂದರು. ಬಳಿಕ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಆಕ್ಷೇಪಣೆ ಸಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ ಆಡಳಿತವು ಇದನ್ನು ಅರ್ಥ ಮಾಡಿಕೊಂಡು ಮಸೀದಿಗೆ ಬಿಳಿ ಬಣ್ಣ ಬಳಿಯುತ್ತಿದೆ ಎಂದು ಅವರು ಹೇಳಿದರು.