ಅಸಮಾನತೆಯಲ್ಲಿ ವಸಾಹತು ಯುಗಕ್ಕೆ ಮರಳುತ್ತಿರುವ ಭಾರತ

Update: 2021-12-11 09:17 GMT
ಸಾಂದರ್ಭಿಕ ಚಿತ್ರ

ಜಾಗತಿಕ ಅಸಮಾನತೆ ವರದಿ (ಡಬ್ಲ್ಯುಐಆರ್) ಯನ್ನು ಜಗತ್ತಿನಲ್ಲಿರುವ ಅಸಮಾನತೆಗಳ ಮಟ್ಟದ ಕುರಿತ ಅತ್ಯಂತ ವಿಶ್ವಾಸಾರ್ಹ ಮತ್ತು ಸಮಗ್ರ ವರದಿ ಎಂಬುದಾಗಿ ಪರಿಗಣಿಸಲಾಗಿದೆ. ನೂತನ, ಅಂದರೆ 2022ರ ಜಾಗತಿಕ ಅಸಮಾನತೆ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಇದು ಭಾರತದಲ್ಲಿ ನೆಲೆಸಿರುವ ಅಗಾಧ ಪ್ರಮಾಣದ ಅಸಮಾನತೆಯನ್ನು ಅನಾವರಣಗೊಳಿಸಿದೆ. ವರದಿಯಲ್ಲಿ ಹೇಳಲಾಗಿರುವಂತೆ, ಭಾರತದಲ್ಲಿ ಸಂಪತ್ತು ಮತ್ತು ಆದಾಯದ ಅಸಮಾನತೆಗಳ ಮಟ್ಟವು ಈ ವಿಷಯದಲ್ಲಿ ಅತ್ಯಂತ ಕಳಪೆ ನಿರ್ವಹಣೆ ಹೊಂದಿರುವ ದೇಶಗಳ ಮಟ್ಟಕ್ಕೆ ಸಮವಾಗಿದೆ.

 ಭಾರತದಲ್ಲಿ ಸಂಪತ್ತಿನಲ್ಲಿ ತಳ ಭಾಗದ ಶೇ. 50 ಕುಟುಂಬಗಳ ಪಾಲು ಕೇವಲ ಶೇ. 6 ಎಂದು ವರದಿಯ ಅಂಕಿಅಂಶಗಳು ಹೇಳುತ್ತವೆ. ಅದೇ ವೇಳೆ, ಸಂಪತ್ತಿನಲ್ಲಿ ಅಗ್ರ ಶೇ. 10 ಕುಟುಂಬಗಳ ಪಾಲು ಶೇ. 65 ಆಗಿದೆ. ಇದು ನಿಜವಾಗಿಯೂ ಅತ್ಯಂತ ಹೆಚ್ಚು. ಎಲ್ಲದಕ್ಕಿಂತಲೂ ಹೆಚ್ಚಿನ ಆಘಾತಕಾರಿ ಸಂಗತಿಯೆಂದರೆ, ಭಾರತದ ಸಂಪತ್ತಿನಲ್ಲಿ ಅಗ್ರ ಒಂದು ಶೇಕಡಾ ಕುಟುಂಬಗಳ ಪಾಲು ಬರೋಬ್ಬರಿ ಶೇ. 33. ವರಮಾನ ಅಸಮಾನತೆಯ ಬಗ್ಗೆ ಹೇಳುವುದಾದರೆ, ಭಾರತದ ಒಟ್ಟು ವರಮಾನದಲ್ಲಿ ಕೆಳ ಶೇ. 50 ಕುಟುಂಬಗಳ ಪಾಲು ಕೇವಲ ಶೇ. 13. ಅದೇ ವೇಳೆ, ಅಗ್ರ ಶೇ. 10 ಕುಟುಂಬಗಳ ಪಾಲು ಬರೋಬ್ಬರಿ ಶೇ. 57. ಅದೂ ಅಲ್ಲದೆ, ಆದಾಯದಲ್ಲಿ ಉನ್ನತ ಒಂದು ಶೇಕಡಾ ಕುಟುಂಬಗಳ ಪಾಲು ಶೇ. 22.

ಇಲ್ಲಿ ಒಂದು ವಿಷಯವನ್ನು ಗಮನಿಸಬೇಕಾಗಿದೆ. ಭಾರತದ ಒಟ್ಟಾರೆ ಆದಾಯ ಮಟ್ಟವು ಅತಿ ಹೆಚ್ಚು ಪ್ರಮಾಣದ ಅಸಮಾನತೆಯಿರುವ ಹಲವು ದೇಶಗಳ ಆದಾಯಕ್ಕಿಂತ ಕಡಿಮೆಯಾಗಿದೆ. ಹಾಗಾಗಿ, ಭಾರತದಲ್ಲಿ ಈ ಅಸಮಾನತೆಯು ಹೆಚ್ಚಿನ ಕುಟುಂಬಗಳ ಮೂಲ ಅವಶ್ಯಕತೆಗಳನ್ನೇ ನಿರಾಕರಿಸುತ್ತದೆ. ಈ ಕಾರಣಕ್ಕಾಗಿ, ಸಂಪತ್ತು ಮತ್ತು ಆದಾಯಗಳ ಅಸಮಾನತೆಯು ಎಲ್ಲ ದೇಶಗಳಲ್ಲಿ ಕಡಿಮೆಯಾಗಬೇಕಾಗಿರುವುದು ನಿಜವಾದರೂ, ಭಾರತದಂತಹ ದೇಶಗಳಲ್ಲಿ ಅದರ ಅಗತ್ಯ ಅತಿ ಹೆಚ್ಚಾಗಿದೆ.

ಇನ್ನೊಂದು ವಿಷಯವನ್ನು ಗಮನಿಸುವುದಾದರೆ, ಭಾರತದಲ್ಲಿನ ಅಸಮಾನತೆಯ ಮಟ್ಟವು ವಸಾಹತುಶಾಹಿ ಕಾಲದಲ್ಲಿ ದಾಖಲಾದ ಅತಿ ಹೆಚ್ಚಿನ ಅಸಮಾನತೆ ಮಟ್ಟಕ್ಕೆ ಮರಳುತ್ತಿರುವುದು ಎಲ್ಲರಿಗೂ ಗೊತ್ತಿರುವಂತೆ, ಬ್ರಿಟಿಷರು ಅನ್ಯಾಯ ಮತ್ತು ಅಸಮಾನತೆಯನ್ನೇ ಆಧಾರವಾಗಿಸಿಕೊಂಡು ಆಳ್ವಿಕೆ ನಡೆಸುತ್ತಿದ್ದರು. ಇದರ ಪರಿಣಾಮವಾಗಿ ಅದು ಅತ್ಯಂತ ಹೆಚ್ಚಿನ ಮಟ್ಟದ ಅಸಮಾನತೆ ನೆಲೆಸಿತ್ತು. ಜಾಗತಿಕ ಅಸಮಾನತೆ ವರದಿಯು ಹೇಳುವಂತೆ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ದಶಕಗಳ ನಂತರದ ಅವಧಿಯಲ್ಲಿ ಅತ್ಯಂತ ಗರಿಷ್ಠ ಪ್ರಮಾಣದಲ್ಲಿದ್ದ ಅಸಮಾನತೆಯು ನಿಧಾನವಾಗಿ ಕಡಿಮೆಯಾಯಿತು. ಆದರೆ, 1990ರ ದಶಕದಲ್ಲಿ ಹೊಸ ತಿರುಚಲ್ಪಟ್ಟ ಆರ್ಥಿಕ ನೀತಿಗಳ ಕಾರಣದಿಂದಾಗಿ ಅಸಮಾನತೆಗಳ ಮಟ್ಟವು ಮತ್ತೆ ಮೇಲೇರಲು ಆರಂಭಿಸಿತು. ಈ ನೀತಿಗಳು ಮತ್ತು ಆಗ ಅಸ್ತಿತ್ವದಲ್ಲಿದ್ದ ಅಸಮಾನತೆಗಳು ಕಾಲ ಕಳೆದಂತೆ ಕೆಟ್ಟದಾಗಿ ಬೆಳೆಯಲಾರಂಭಿಸಿದವು.

ಸರಕಾರಗಳು ಅನುಸರಿಸುತ್ತಿರುವ ಅಭಿವೃದ್ಧಿ ಮಾನದಂಡಗಳು ಮತ್ತು ಆರ್ಥಿಕ ನೀತಿಗಳಿಂದಾಗಿ ದೇಶದ ಅಸಮಾನತೆಯ ಮಟ್ಟವು ವಸಾಹತುಶಾಹಿ ಆಡಳಿತದ ಕಾಲದಲ್ಲಿದ್ದ ಮಟ್ಟಕ್ಕೆ ಮರಳುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಖಂಡಿತವಾಗಿಯೂ ಈ ಅವಮಾನಕಾರಿ ಪ್ರವೃತ್ತಿಯನ್ನು ತಡೆದು ಅಸಮಾನತೆಗಳನ್ನು ಕಡಿಮೆ ಮಾಡಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಲು ಇದು ಸಕಾಲ.

ಕೊನೆಯದಾಗಿ, ಅಸಮಾನತೆಗಳ ಮೇಲೆ ನಿಗಾ ಇಡಲು ಅಗತ್ಯವಾದ ಅಂಕಿ-ಅಂಶಗಳ ಗುಣಮಟ್ಟವು ಇತ್ತೀಚಿನ ದಿನಗಳಲ್ಲಿ ಕಳಪೆಯಾಗುತ್ತಿದೆ ಎಂದು ಜಾಗತಿಕ ಅಸಮಾನತೆ ವರದಿಯು ಹೇಳಿದೆ. ಈ ಹಿಂದೆ, ಭಾರತವು ಅಭಿವೃದ್ಧಿಶೀಲ ದೇಶಗಳಲ್ಲೇ ಶ್ರೇಷ್ಠ ಅಂಕಿಸಂಖ್ಯೆ ದಾಖಲು ವ್ಯವಸ್ಥೆಗಳನ್ನು ಹೊಂದಿತ್ತು. ಭಾರತದಲ್ಲಿನ ಹೆಚ್ಚುತ್ತಿರುವ ಅಸಮಾನತೆಗಳು, ಶೋಷಣೆ ಮತ್ತು ಅನ್ಯಾಯಗಳನ್ನು ಅನಾವರಣಗೊಳಿಸಬಲ್ಲ ಮಾಹಿತಿಯನ್ನೇ ಮರೆ ಮಾಡುವುದು ಈಗಿನ ಆಳುವ ವರ್ಗಗಳ ಹೊಸ ತಂತ್ರಗಾರಿಕೆ ಎಂಬಂತೆ ಕಂಡು ಬರುತ್ತದೆ.

ಭಾರತದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯ ಸ್ವಾತಂತ್ರ್ಯ ಹೋರಾಟಗಾರರು ಅತ್ಯುನ್ನತ ತ್ಯಾಗಗಳನ್ನು ಮಾಡಿರುವುದು ಇದಕ್ಕಾಗಿಯೇ ಎನ್ನುವ ಭಾವನೆ ಹುಟ್ಟುತ್ತದೆ. ನಾವು 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವಾಗ ಭಾರತದಲ್ಲಿ ವಸಾಹತುಶಾಹಿ ಕಾಲದಲ್ಲಿ ಇದ್ದಂತಹ ಅಸಮಾನತೆಗಳ ಮಟ್ಟವೇ ನೆಲೆಸಿದೆ. ಈ ಅವಮಾನಕರ ವಾಸ್ತವವನ್ನು ಬದಲಿಸಲು ಏನಾದರೂ ಮಾಡಲೇಬೇಕಾಗಿದೆ.

(ಭರತ್ ಡೋಗ್ರಾ ‘ಕ್ಯಾಂಪೇನ್ ಟು ಸೇವ್ ಅರ್ತ್ ನೌ’ನ ಗೌರವ ಸಂಚಾಲಕರಾಗಿದ್ದಾರೆ)

ಕೃಪೆ: countercurrents.org

Writer - ಭರತ್ ಡೋಗ್ರಾ

contributor

Editor - ಭರತ್ ಡೋಗ್ರಾ

contributor

Similar News