ಎದೆ ನೋವು ಹಿನ್ನೆಲೆ: ಆಸ್ಪತ್ರೆಗೆ ದಾಖಲಾದ ಪಾಕ್ ಆರಂಭಿಕ ಬ್ಯಾಟರ್ ಅಬಿದ್ ಅಲಿ
ಕರಾಚಿ, ಡಿ.21: ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗಲೇ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾಕಿಸ್ತಾನ ಟೆಸ್ಟ್ ಕ್ರಿಕೆಟಿನ ಆರಂಭಿಕ ಬ್ಯಾಟರ್ ಅಬಿದ್ ಅಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ತೀವ್ರ ನಿಗಾದಲ್ಲಿದ್ದಾರೆ.
ದೇಶೀಯ ಟೂರ್ನಮೆಂಟ್‌ನಲ್ಲಿ ಸೆಂಟ್ರಲ್ ಪಂಜಾಬ್ ಪರ ಆಡುತ್ತಿರುವ ಅಬಿದ್ ಎರಡು ಬಾರಿ ಎದೆ ನೋವು ಕಾಣಿಸಿಕೊಂಡ ಬಗ್ಗೆ ಮ್ಯಾನೇಜರ್‌ಗೆ ತಿಳಿಸಿದ ಬಳಿಕ ವೈದ್ಯಕೀಯ ಪರೀಕ್ಷೆಗಾಗಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
"ಇಂದು ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಾಗ ಅಬಿದ್ ಔಟಾಗದೆ 61 ರನ್ ಗಳಿಸಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಉತ್ತಮವೆಂದು ಭಾವಿಸಿದೆವು. ಅವರೀಗ ತೀವ್ರ ನಿಗಾದಲ್ಲಿದ್ದು ಕೆಲವು ಪರೀಕ್ಷೆಗಳಿಗೆ ಒಳಗಾಗಿದ್ದಾರೆ'' ಎಂದು ಮ್ಯಾನೇಜರ್ ಅಶ್ರಫ್ ಅಲಿ ಹೇಳಿದ್ದಾರೆ.
ಅಬಿದ್ ಈಗಾಗಲೇ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9,000 ರನ್ ಪೂರೈಸಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶ ಪ್ರವಾಸದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬಳಿಕ ಖೈಬರ್ ತಂಡವನ್ನು ತ್ಯಜಿಸಿ ಸೆಂಟ್ರಲ್ ಪಂಜಾಬ್‌ಗೆ ಸೇರ್ಪಡೆಯಾಗಿದ್ದರು.