ಶೋಷಿತರ ಪರ ಧ್ವನಿಯೆತ್ತಿದ ಯೇಸು

Update: 2021-12-24 09:16 GMT

‘‘ನಾನು ಬಂದಿರುವುದು ಧರ್ಮಿಷ್ಟರಿಗಲ್ಲ, ಪಾಪಿಷ್ಟರಿಗಾಗಿ’’ ಎಂಬ ಬೈಬಲ್ ಗ್ರಂಥದ ಮಾರ್ಕನ ಸುವಾರ್ತೆಯಲ್ಲಿ ಉಲ್ಲೇಖಿತ ಯೇಸು ಕ್ರಿಸ್ತರ ಮಾತುಗಳಲ್ಲಿ ಕ್ರಿಸ್‌ಮಸ್ ಘಟನೆಯ ನಿಜಾರ್ಥವು ಅಡಗಿದೆ. ಪ್ರಪಂಚವು ಕೋವಿಡ್ ಸೋಂಕಿನ ಭೀತಿಯಲ್ಲಿ ದಿನ ಕಳೆಯುತ್ತಿರುವ ಈ ಸಂದಿಗ್ಧ ಕಾಲದಲ್ಲಿ ಯೇಸುಕ್ರಿಸ್ತರ ಜನನದ ಕ್ರಿಸ್‌ಮಸ್ ಹಬ್ಬವು ರೋಗ, ಭೀತಿಗಳಿಂದ ಕಂಗೆಟ್ಟಿರುವ ಜನರಲ್ಲಿ ಕಿಂಚಿತ್ತಾದರೂ ಮಂದಹಾಸ ಮೂಡಿಸಿದರೆ, ಹೃನ್ಮನಗಳಲ್ಲಿ ಸಂತೃಪ್ತ ಜೀವನದ ಭರವಸೆಯು ಉದಯಿಸುವಂತೆ ಮಾಡಿದರೆ ಈ ವಿಷಮ ಕಾಲದಲ್ಲೂ ಕ್ರಿಸ್ತನ ಜನನದ ಆಚರಣೆ ಅರ್ಥಪೂರ್ಣ ಎನಿಸೀತು.

ಎರಡು ಸಾವಿರ ವರ್ಷಗಳ ಹಿಂದೆ ಕ್ರಿಸ್ತನ ಜನನ ಕಾಲದಲ್ಲಿ ಅವರು ಜನಿಸಿದ ಗಲಿಲೇಯ ಪ್ರಾಂತದ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಪರಿಸ್ಥಿತಿ ಶೋಚನೀಯವಾಗಿತ್ತು. ರೋಮನರ ಆಡಳಿತದ ಕೆಳಗೆ ಯೆಹೂದ್ಯರು ನಲುಗಿಹೋಗಿದ್ದರು. ಯೆಹೂದ್ಯ ನಾಯಕರು ರೋಮನರ ಕೀಲುಗೊಂಬೆಗಳಾಗಿದ್ದು, ತಮ್ಮ ಐಷಾರಾಮಿ ಜೀವನದಲ್ಲಿ ಮುಳುಗಿ, ಸಾಮಾನ್ಯ ಜನರನ್ನು ಕಾಲಕಸದಂತೆ ಕಾಣುತ್ತಿದ್ದರು. ಸಮಾಜದಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿತ್ತು. ಎಲ್ಲಾ ದಿಕ್ಕುಗಳಿಂದ ಶೋಷಣೆ ಹಾಗೂ ದಬ್ಬಾಳಿಕೆಗೆ ಗುರಿಯಾಗಿ ಜೀವನದ ಆಸೆಯೇ ಅವರಲ್ಲಿ ಬತ್ತಿ ಹೋಗಿತ್ತು. ಮಹಿಳೆಯರಂತೂ ಎರಡನೇ ದರ್ಜೆಯ ನಾಗರಿಕರಾಗಿ ‘ಬಳಸಿ ಬಿಸಾಕುವ ವಸ್ತು’ಗಳಂತೆ ಪರಿಗಣಿತವಾಗಿ ನೋವನ್ನುಂಡಿದ್ದರು. ಯೆಹೂದ್ಯ ಧಾರ್ಮಿಕ ನಾಯಕರು ರಾಜಕೀಯದಲ್ಲಿ ಕಂಠಮಟ್ಟ ಮುಳುಗಿಹೋಗಿದ್ದರು. ರಾಜಕಾರಣಿಗಳ ಹಂಗಿನಲ್ಲೇ ಇದ್ದು, ಸಾಮಾನ್ಯ ಜನರ ಮೇಲೆ ಹೊರಲಾರದಂತಹ ಧಾರ್ಮಿಕ ಹೊರೆಗಳನ್ನು ಹೊರಿಸಿ, ಅವರನ್ನು ಶೋಷಿಸುತ್ತಿದ್ದರು. ಒಟ್ಟಾರೆ, ಸುವಾರ್ತೆಕಾರನ ಮಾತುಗಳಲ್ಲೇ ಹೇಳುವುದಾದರೆ ಜನರು ಕುರುಬನಿಲ್ಲದ ಕುರಿಮಂದೆಯಂತೆ ಕಂಗೆಟ್ಟಿದ್ದರು.

ಶೋಷಿತ ಜನರ ಪರವಾಗಿ ಧ್ವನಿಯೆತ್ತಿ ಅವರನ್ನು ರೋಮನರ ದಬ್ಬಾಳಿಕೆಯಿಂದ ಹಾಗೂ ಧಾರ್ಮಿಕ ನಾಯಕರ ಶೋಷಣೆಯಿಂದ ಕಾಪಾಡಬಲ್ಲ ನಾಯಕನ ಆಗಮನಕ್ಕೆ ಅದು ಪರ್ವಕಾಲ. ಇತಿಹಾಸದ ವೇದಿಕೆ ಸಿದ್ಧವಾಗಿತ್ತು. ಶತಮಾನಗಳಿಂದ ಪ್ರವಾದಿ, ಮಹಾಪುರುಷರು ಮಹಾನಾಯಕನ ಬರುವಿಕೆಯ ಬಗ್ಗೆ ಮುಂಚಿತವಾಗಿಯೇ ತಿಳಿಸಿದ್ದರು. ಕಾಲ ಕೂಡಿ ಬಂದಾಗ, ರೋಮ್ ಚಕ್ರವರ್ತಿಗಳ ಹಾಗೂ ಯೆಹೂದ್ಯ ಅರಸರ ಅರಮನೆಯಲ್ಲಲ್ಲ, ಧಾರ್ಮಿಕ ನಾಯಕರ ಪೂಜಿತ ತಾಣಗಳಲ್ಲಲ್ಲ, ಬದಲಾಗಿ ಪ್ರಾಣಿಗಳ ವಾಸಸ್ಥಾನವಾದ ಕೊಟ್ಟಿಗೆಯಲ್ಲಿ ಅವರ ಜನನವಾಯಿತು. ಸಮಾಜ ಮತ್ತು ಧರ್ಮದ ಶೋಷಣೆಯಿಂದ ಮಾತು ಕಳೆದುಕೊಂಡು ಮೂಕರಾದ ಜನತೆಯೊಂದಿಗಿನ ಐಕ್ಯತೆಯನ್ನು ಸಾರಲು ಮೂಕ ಪ್ರಾಣಿಗಳ ಸಾಂಗತ್ಯದಲ್ಲಿ ಜನಿಸಿದರು ಎಂಬಂತೆ.

 ಅವರ ಜನನ ಅತ್ಯಂತ ದೀನ ಪರಿಸ್ಥಿತಿಯಲ್ಲಿ ಆಯಿತು. ಈ ಲೋಕದ ದೃಷ್ಟಿಯಲ್ಲಿ ಅತ್ಯಂತ ಅಶಕ್ತನಾಗಿ ಅವರು ಜನಿಸಿದರು. ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದ ದನಗಳ ಕೊಟ್ಟಿಗೆಯಲ್ಲಿ ದನಗಳು ತಿನ್ನುವ ಹುಲ್ಲೇ ಅವರಿಗೆ ಸುಪ್ಪತ್ತಿಗೆ, ಪ್ರಾಣಿಗಳ ಬಿಸಿಯುಸಿರೇ ಥರಗುಟ್ಟಿಸುವ ಚಳಿಯಲ್ಲಿ ಬೆಚ್ಚನೆಯ ಹೊದಿಕೆ. ಅದೇ ಆತನ ಇಚ್ಛೆಯಾಗಿತ್ತು. ಬಸವಳಿದು ಬೆಂಡಾಗಿದ್ದ ಜನತೆಯ ಧ್ವನಿಯಾಗಲು ಬಂದವರು ಅರಮನೆಯ ರತ್ನಖಚಿತ ತೊಟ್ಟಿಲಿನಲ್ಲಿ ಹುಟ್ಟಿ ಬರಲು ಸಾಧ್ಯವೇ?

ಅವರ ಆಗಮನದ ಸುದ್ದಿಯು ಪ್ರಥಮವಾಗಿ ತಲುಪಿದ್ದು ದೀನರಿಗೇ. ಬಡ ಕುರುಬರು ತಮ್ಮ ಕುರಿಮಂದೆಗೆ ಒಳ್ಳೆಯ ಮೇವನ್ನು ಹುಡುಕಿ ಅಲೆದಾಡುತ್ತಿದ್ದು, ಅವರು ತಂಗಿದ್ದ ಹುಲ್ಲುಗಾವಲಲ್ಲಿ, ಯೇಸುವಿನ ಜನನದ ಪ್ರಥಮ ವಾರ್ತೆಯು ಅವರಿಗೆ ಲಭಿಸಿತು. ಪ್ರಕೃತಿಯನ್ನು, ತಮ್ಮ ಮಂದೆಯನ್ನು ಸಂಶಯಿಸದೇ ಪೂರ್ಣವಿಶ್ವಾಸವಿಟ್ಟಿದ್ದ ಕುರುಬರು ತಮಗೆ ದೊರೆತ ವಾರ್ತೆಯನ್ನು ಸಂಶಯಿಸಲೇ ಇಲ್ಲ. ತಕ್ಷಣ ಹೊರಟು, ಗೋದಲಿಯಲ್ಲಿದ್ದ ನವಜಾತ ಶಿಶುವಿಗೆ ಭೇಟಿಯಿತ್ತು, ಅವರಲ್ಲಿ ತಮ್ಮ ವಿಮೋಚಕನನ್ನು ಕಂಡರವರು. ವಿಮೋಚಕನ ಆಗಮನವನ್ನು ಕಂಡ ಅವರ ಆನಂದಕ್ಕೆ ಮಿತಿ ಇಲ್ಲವಾಯಿತು.

ಯೇಸುವಿನ ಮೂವತ್ತಮೂರು ವರ್ಷಗಳ ಇಹಲೋಕದ ಜೀವನ ದೀನ ದಲಿತರ ಸಾಂಗತ್ಯದಲ್ಲಿ ಅವರಂತೆಯೇ ಒಬ್ಬರಾಗಿ ಕಳೆಯಿತು. ಬಡ ಗೃಹಿಣಿ ತಾಯಿ ಮರಿಯ, ನಜರೇತಿನಲ್ಲಿ ಬಡತನದ ಜೀವನ. ಬಡಗಿಯಾಗಿ ಬೆವರು ಹರಿಸಿದ ಕೆಲಸ, ಜೀವನ ನಿರ್ವಹಣೆಗೆ ಸಾಕಾಗುವಷ್ಟು ಮಾತ್ರ ಆದಾಯ. ನರಿಗಳಿಗೆ ಗುಹೆಗಳುಂಟು, ಆಕಾಶದ ಪಕ್ಷಿಗಳಿಗೆ ಗೂಡುಗಳುಂಟು, ಆದರೆ ನರಪುತ್ರನಿಗೆ ತಲೆಯಿಡುವುದಕ್ಕೂ ಸ್ಥಳವಿಲ್ಲ ಎಂಬ ಅವರ ಮಾತುಗಳಲ್ಲೇ ಅವರ ದೀನ ಜೀವನ ರೀತಿ ತಿಳಿದುಬರುತ್ತದೆ.

‘‘ನಿನ್ನ ಗೆಳೆಯರು ಯಾರೆಂದು ಹೇಳು, ನೀನು ಯಾರೆಂದು ಹೇಳುತ್ತೇನೆ ಎಂಬ ಮಾತಿದೆ. ದೀನ ದಲಿತರ ವಿಮೋಚಕನಾಗಿ ಹುಟ್ಟಿದ ಯೇಸುವಿನ ಗೆಳೆಯರು ಮತ್ತು ಆಪ್ತರು ಯಾರು ಎಂದು ತಿಳಿದರೆ ಯೇಸುವನ್ನು ಅರಿಯಲು ಸಾಧ್ಯ. ಅವರ ಹನ್ನೆರಡು ಜನ ಪ್ರೇಷಿತರಲ್ಲಿ ನಾಲ್ಕಾರು ಮೀನು ಹಿಡಿಯುವ ಬೆಸ್ತರು, ಒಬ್ಬ ರೋಮನರಿಗಾಗಿ ಸುಂಕ ವಸೂಲಿ ಮಾಡುವವ, ಒಬ್ಬ ರೋಮನರ ಆಳ್ವಿಕೆಯ ವಿರುದ್ಧ ಹೋರಾಟ ನಡೆಸುತ್ತಿದ್ದವ, ಇನ್ನಿತರರು ಸಮಾಜದ ಸಾಮಾನ್ಯ ವ್ಯಕ್ತಿಗಳಾಗಿದ್ದು ಯಾವ ವಿಶೇಷತೆಯನ್ನೂ ಅವರು ಹೊಂದಿರಲಿಲ್ಲ, ಯಾವ ಬಿರುದು ಬಾವಲಿಗಳೂ ಅವರಿಗಿರಲಿಲ್ಲ. ಅತ್ಯಾಚಾರಕ್ಕೆ ಬಲಿಯಾಗಿ, ಶಿಕ್ಷೆಗೊಳಪಡಲಿದ್ದ ಸಂತ್ರಸ್ತ ಮಹಿಳೆಯ ಕುರಿತು ‘‘ನಿಮ್ಮಲ್ಲಿ ಪಾಪ ಮಾಡದವರು ಈ ಮಹಿಳೆಯ ಮೇಲೆ ಪ್ರಥಮ ಕಲ್ಲನ್ನು ತೂರಲಿ’’ ಎಂದು ಯೆಹೂದ್ಯ ಮುಖಂಡರಿಂದ ಆಕೆಯನ್ನು ಅವರು ರಕ್ಷಿಸಿದರು. ಯೇಸುವಿನ ಜೀವಮಾನಕಾಲದಲ್ಲಿ ಒಮ್ಮೆಯೂ ಹೆರೋದನ ಅರಮನೆಯೊಳಕ್ಕೆ ಕಾಲಿರಿಸಿದ ಅಥವಾ ರಾಜ ಮನೆತನದವರೊಂದಿಗೆ ಸಖ್ಯವನ್ನು ಬೆಳೆಸಿದ ಉಲ್ಲೇಖಗಳಿಲ್ಲ. ಬದಲಾಗಿ ಅವರ ಸಖ್ಯ ಬೆಳೆಸಿದ್ದು ಬಡವರು, ದೀನರು, ಕುಷ್ಠ ರೋಗಿಗಳು, ಕುಂಟರು, ಕುರುಡರು, ಮಕ್ಕಳು, ಸಂತ್ರಸ್ತ ಮಹಿಳೆಯರು, ಸಮಾಜದಿಂದ ಬಹಿಷ್ಕೃತರು ಹಾಗೂ ಬಲಿಷ್ಠರಿಂದ ತುಳಿತಕ್ಕೆ ಒಳಗಾದ ಜನರೊಂದಿಗೆ.

ಯೇಸುವಿನ ರಾಷ್ಟ್ರಭಕ್ತಿ ಪ್ರಶ್ನಾತೀತ. ಆದರೆ, ಜನರ ಮೇಲೆ ನಡೆಯುತ್ತಿದ್ದ ರಾಜಕೀಯ ದಬ್ಬಾಳಿಕೆಯನ್ನು ಸ್ಪಷ್ಟವಾಗಿ ಖಂಡಿಸಿದರು. ಕುಕೃತ್ಯಗಳಲ್ಲಿ ತೊಡಗಿದ್ದ ಹೆರೋದರಸನನ್ನು ಮೋಸಗೊಳಿಸುವ ನರಿ ಎಂದು ಟೀಕಿಸಿದರು. ಅನ್ಯಾಯವಾಗಿ ತಮ್ಮನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದ ರೋಮ್‌ನ ರಾಜ್ಯಪಾಲ ಪೊಂತ್ಸಿಯಸ್ ಪಿಲಾತನಿಗೆ ‘‘ಮೇಲಿನಿಂದ ಕೊಟ್ಟ ಹೊರತು, ನನ್ನ ಮೇಲೆ ನಿನಗೆ ಯಾವ ಅಧಿಕಾರವು ಇರುತ್ತಿರಲಿಲ್ಲ’’ ಎಂದು ಉತ್ತರ ಕೊಟ್ಟರು. ತನ್ನ ಕೆನ್ನೆಗೆ ಹೊಡೆದ ಸೈನಿಕನಿಗೆ ‘‘ನಾನು ತಪ್ಪಾಗಿ ಮಾತನಾಡಿದ್ದರೆ, ನನ್ನ ತಪ್ಪನ್ನು ತೋರಿಸಿಕೊಡು; ಇಲ್ಲವಾದರೆ, ನನ್ನನ್ನೇಕೆ ಹೊಡೆಯುತ್ತೀ?’’ ಎಂದು ವೈಯಕ್ತಿಕ ಅನ್ಯಾಯದ ವಿರುದ್ಧವೂ ಯೇಸು ಪ್ರತಿಭಟಿಸಿದರು.

ಈ ಅಶಕ್ತ ದೀನ ವಿಮೋಚಕನು ಸಮಾಜದ ಅನ್ಯಾಯ, ಅಸಮಾನತೆ ಹಾಗೂ ಅನೀತಿಯ ರೀತಿ-ನೀತಿಗಳನ್ನು ಮತ್ತು ಆದ್ಯತೆಗಳನ್ನು ತಲೆಕೆಳಗಾಗಿಸುವ ದೀಕ್ಷೆ ತೊಟ್ಟವರು ಎಂದು ಯೇಸುವಿನ ಜನನಕ್ಕೆ ಮುಂಚಿತವಾಗಿಯೇ ತಿಳಿದಿತ್ತು. ಯೇಸುವನ್ನು ತನ್ನ ಉದರದಲ್ಲಿ ಹೊತ್ತು ಗರ್ಭಿಣಿಯಾಗಿದ್ದ ಮಾತೆ ಮರಿಯ ‘‘ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು, ಏರಿಸಿಹನು ಉನ್ನತಿಗೆ ದೀನದಲಿತರನು. ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ, ಹೊರದೂಡಿರುವನು ಸಿರಿವಂತರನು ಬರಿಗೈಯಲಿ’’ (ಲೂಕನ ಸುವಾರ್ತೆ) ಎಂದು ನುಡಿದಿದ್ದಳು. ದೀನ ದಲಿತರೊಂದಿಗೆ ಕೈಜೋಡಿಸಿ, ಅವರ ಹೋರಾಟವನ್ನು ತನ್ನ ಹೋರಾಟವನ್ನಾಗಿ ಮಾಡಿ, ಅನ್ಯಾಯ, ಅನೀತಿ ಮತ್ತು ಶೋಷಣೆಯನ್ನು ಹೋಗಲಾಡಿಸಿ ಜಗಕ್ಕೆಲ್ಲ ಶಾಂತಿ, ನೆಮ್ಮದಿಯನ್ನು ತರುವ ಹೊಸ ಭರವಸೆಯನ್ನು ಕ್ರಿಸ್‌ಮಸ್ ಹಬ್ಬ ಮನುಜಕುಲಕ್ಕೆ ನೀಡಿದೆ.

Writer - ಫಾದರ್ ಚೇತನ್, ಉಡುಪಿ

contributor

Editor - ಫಾದರ್ ಚೇತನ್, ಉಡುಪಿ

contributor

Similar News