ವಡೋದರ: ರಾಸಾಯನಿಕ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: 4 ವರ್ಷದ ಬಾಲಕಿ ಸಹಿತ ನಾಲ್ವರು ಸಾವು
ವಡೋದರ, ಡಿ. 24: ಗುಜರಾತ್‌ನ ವಡೋದರ ಜಿಐಡಿಸಿ ಪ್ರದೇಶದಲ್ಲಿ ಇರುವ ರಾಸಾಯನಿಕ ಕಾರ್ಖಾನೆಯಲ್ಲಿ ಶುಕ್ರವಾರ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ನಾಲ್ಕು ವರ್ಷದ ಬಾಲಕಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಅಲ್ಲದೆ 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಘಟನೆಯಲ್ಲಿ ಬಾಲಕಿ, 65 ವರ್ಷದ ವೃದ್ಧ, ಓರ್ವ ಯುವಕ ಹಾಗೂ 30 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.
‘‘ಬೆಳಗ್ಗೆ 9.30ಕ್ಕೆ ಈ ಸ್ಫೋಟ ಸಂಭವಿಸಿತು. 15 ಮಂದಿ ಗಾಯಗೊಂಡರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಲ್ಲಿ ನಾಲ್ವರು ಆಸ್ಪತ್ರೆಗೆ ಕರೆದೊಯ್ಯುವಾಗ ಹಾಗೂ ಚಿಕಿತ್ಸೆಯ ಸಂದರ್ಭ ಮೃತಪಟ್ಟರು’’ ಎಂದು ಮಕರಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಾಜಿದ್ ಬಲೋಚ್ ಹೇಳಿದ್ದಾರೆ. ಘಟನೆಯಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರಲ್ಲಿ ಕಾರ್ಮಿಕರು, ಸ್ಫೋಟ ಸಂಭವಿಸಿದ ಸಂದರ್ಭ ಆ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದ ಜನರು ಕೂಡ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.
‘‘ನಾಲ್ವರು ಸುಟ್ಟ ಗಾಯಗಳಿಂದ ಅಥವಾ ಸ್ಫೋಟದಿಂದ ಉದ್ಭವಿಸಿದ ತುಣುಕುಗಳು ಅಪ್ಪಳಿಸಿರುವುದರಿಂದ ಸಾವನ್ನಪ್ಪಿದ್ದಾರೆ. ಸ್ಫೋಟದ ಕುರಿತು ತನಿಖೆ ನಡೆಸಲು ವಿಧಿವಿಜ್ಞಾನ ತಜ್ಞರ ತಂಡ ಸ್ಥಳಕ್ಕೆ ಧಾವಿಸಿದೆ’’ ಎಂದು ಬಲೋಚ್ ತಿಳಿಸಿದ್ದಾರೆ.