ಸಾಪೇಕ್ಷ ಸಿದ್ಧಾಂತಕ್ಕೆ ಸಾವಿಲ್ಲವೇ?
ಐನ್‌ಸ್ಟೈನ್‌ನ ಸಾಪೇಕ್ಷತಾ ಸಿದ್ಧಾಂತ ಪ್ರಕಟವಾದಂದಿನಿಂದ ಇಂದಿನವರೆಗೂ ಅದರ ಮೇಲೆ ಸಾವಿರಾರು ಚರ್ಚೆಗಳು, ಗೋಷ್ಠಿಗಳು, ಉಪನ್ಯಾಸಗಳು ಮತ್ತು ಪ್ರಯೋಗಗಳು ನಡೆಯುತ್ತಲೇ ಇವೆ. ಒಂದು ತತ್ವ ಅಥವಾ ಸಿದ್ಧಾಂತಕ್ಕಿರುವ ಗಟ್ಟಿತನವನ್ನು ಅಥವಾ ಪ್ರಸ್ತುತತೆಯನ್ನು ಇದು ಎತ್ತಿ ತೋರಿಸುತ್ತದೆ. ಈಗಿನ ದಿನಗಳಲ್ಲಿ ಐನ್‌ಸ್ಟೈನ್‌ನ ಸಿದ್ಧಾಂತವು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪುನಃ ಚರ್ಚಿತವಾಗುತ್ತಿದೆ. ಅಂತರಾಷ್ಟ್ರೀಯ ತಂಡವೊಂದು ಡಬಲ್ ಪಲ್ಸರ್ ಸಿಸ್ಟಮ್(ಜೋಡಿ ನಕ್ಷತ್ರಗಳ ಜೀವನದ ಕೊನೆ ಭಾಗ) ಕುರಿತು 16 ವರ್ಷಗಳ ಕಾಲ ನಡೆಸಿದ ಕಠಿಣ ಪರೀಕ್ಷೆಯ ಸಹಾಯದಿಂದ ಐನ್‌ಸ್ಟೈನ್‌ನ ಸಿದ್ಧಾಂತವನ್ನು ಪುನಃ ಸಾಬೀತು ಪಡಿಸಿದೆ. ಡಬಲ್ ಪಲ್ಸರ್ ಸಿಸ್ಟಮ್‌ನ ಅವಲೋಕನವು ಸಾಮಾನ್ಯ ಸಾಪೇಕ್ಷತೆಗೆ ಇನ್ನೂ ಸಾವಿಲ್ಲ ಎಂದು ತೋರಿಸುತ್ತದೆ.
ಸಿ.ಎಸ್.ಐ.ಆರ್.ಒ(ಸಿಸ್ರೋ) ಸಂಸ್ಥೆಯು ಆಸ್ಟೇಲಿಯಾದ ಪಾರ್ಕ್ಸ್ ಸೇರಿದಂತೆ ಪ್ರಪಂಚದಾದ್ಯಂತದ ಮುರ್ರಿಯಾಂಗ್ ರೇಡಿಯೊ ಟೆಲಿಸ್ಕೋಪ್‌ಗಳನ್ನು ಬಳಸಿ ಸಾಪೇಕ್ಷತಾ ಸಿದ್ಧಾಂತವು ಇಂದಿಗೂ ನಿಜವಾಗಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಐನ್‌ಸ್ಟೈನ್ ಅವರ ಸಾಪೇಕ್ಷತಾ ಸಿದ್ಧಾಂತವನ್ನು ಅರ್ಥೈಸಿಕೊಳ್ಳಲು ನಮಗಿನ್ನೂ ಸಾಧ್ಯವಾಗದೇ ಇರುವ ಸಂದರ್ಭದಲ್ಲಿ ಸಿಸ್ರೋದ ತಜ್ಞರ ವಾದವು ಹೇಗೆ ಜನಮನ ತಲುಪುತ್ತದೆ ಎಂಬುದು ಬಹಳ ಮುಖ್ಯವಾಗಿದೆ. ಪ್ರಸ್ತುತ ಸಿಸ್ರೋದ ವಾದವನ್ನು ಗ್ರಹಿಸಿಕೊಳ್ಳಬೇಕಾದರೆ ಐನ್‌ಸ್ಟೈನ್ ಅವರ ಮೂಲ ಸಾಪೇಕ್ಷತಾ ಸಿದ್ಧಾಂತವನ್ನು ಅರ್ಥೈಸಿಕೊಳ್ಳಲೇಬೇಕು. ಐನ್‌ಸ್ಟೈನ್ ಅವರು ಎರಡು ಸಾಪೇಕ್ಷತಾ ಸಿದ್ಧಾಂತಗಳನ್ನು ಮಂಡಿಸಿದ್ದಾರೆ. 1905ರಲ್ಲಿ ವಿಶಿಷ್ಟ ಸಾಪೇಕ್ಷತಾ ಸಿದ್ಧಾಂತವನ್ನು ಮತ್ತು 1915ರಲ್ಲಿ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತವನ್ನು ಮಂಡಿಸಿದರು. ವಿಶಿಷ್ಟ ಸಾಪೇಕ್ಷತಾ ಸಿದ್ಧಾಂತದ ಪ್ರಕಾರ ವೇಗೋತ್ಕರ್ಷವಿಲ್ಲದ ಎಲ್ಲಾ ವೀಕ್ಷಕರಿಗೂ ಭೌತಶಾಸ್ತ್ರದ ಮೂಲ ನಿಯಮಗಳು ಒಂದೇ ರೀತಿಯಾಗಿರುತ್ತವೆ ಮತ್ತು ಆ ವೀಕ್ಷಕರ ವೇಗ ಎಷ್ಟೇ ಇರಲಿ ಅಥವಾ ಬೆಳಕಿನ ಮೂಲದ ವೇಗ ಎಷ್ಟೇ ಇರಲಿ ನಿರ್ವಾತದಲ್ಲಿ ಎಲ್ಲಾ ವೀಕ್ಷಕರಿಗೂ ಬೆಳಕಿನ ವೇಗ ಒಂದೇ ಆಗಿರುತ್ತದೆ. ಈ ಸಿದ್ಧಾಂತದ ಪ್ರಕಾರ ಚಲನೆಗೆ ನಿರಪೇಕ್ಷತೆ ಎಂಬುದಿಲ್ಲ. ಆದರೆ ಒಂದು ವಸ್ತುವಿನ ಚಲನೆಯನ್ನು ಇನ್ನೊಂದು ವಸ್ತುವಿಗೆ ಸಾಪೇಕ್ಷವಾಗಿ ಹೋಲಿಸಿ ನಿರ್ಧರಿಸಬಹುದು. ಈ ವಿಶಿಷ್ಟ ಸಾಪೇಕ್ಷತಾ ಸಿದ್ಧಾಂತದಿಂದ ಕೆಲವು ವಿಚಿತ್ರ ಫಲಿತಾಂಶಗಳು ಹೊರಬಿದ್ದವು. ಐನ್‌ಸ್ಟೈನ್ 1915ರಲ್ಲಿ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತವನ್ನು ಮುಂದಿಟ್ಟರು. ಇದು ಗುರುತ್ವ ಕುರಿತಾದ ಸಿದ್ಧಾಂತವಾಗಿದ್ದು, ಗುರುತ್ವ ಮತ್ತು ವೇಗೋತ್ಕರ್ಷವನ್ನು ಸಮಾನವಾಗಿ ಅರ್ಥೈಸಬಹುದೆಂದು ಐನ್‌ಸ್ಟೈನ್ ತಿಳಿಸಿದರು. ಒಂದು ವೇಗೋತ್ಕರ್ಷಿತ ವ್ಯವಸ್ಥೆಯಲ್ಲಿ ಕಾಣುವ ವಿದ್ಯಮಾನಗಳು ಗುರುತ್ವ ಕ್ಷೇತ್ರದಲ್ಲಿ ವಿರಮಿಸುವ ವ್ಯವಸ್ಥೆಯಲ್ಲಿರುವುದಕ್ಕೆ ಅನನ್ಯವಾಗಿವೆ ಎಂಬುದು ಈ ಸಿದ್ಧಾಂತದ ಸಾರ. ಈ ನಿಮಯದ ಪ್ರಕಾರ ಗುರುತ್ವ ಕ್ಷೇತ್ರವೊಂದರಲ್ಲಿ ಸಾಗುವ ಬೆಳಕಿನ ಕಿರಣಗಳು, ಬಲವು ಕ್ರಿಯಾಶೀಲವಾಗಿರುವ ದಿಕ್ಕಿನತ್ತ ವಿಚಲಿಸಬೇಕು. ಈ ನಿಯಮಕ್ಕೆ ಪುರಾವೆ ಎಂಬಂತೆ 1919ರಲ್ಲಿ ನಡೆದ ಸೂರ್ಯಗ್ರಹಣ ಸಮಯದಲ್ಲಿ ದೂರದ ನಕ್ಷತ್ರಗಳಿಂದ ಬಂದ ಬೆಳಕಿನ ಕಿರಣಗಳು ಸೂರ್ಯನ ಸಮೀಪ ಹಾದು ಹೋಗುವಾಗ ಸೂರ್ಯನ ಗುರುತ್ವ ಪ್ರಭಾವದಿಂದ ವಿಚಲಿಸಿದ್ದನ್ನು ಪ್ರಾಯೋಗಿಕವಾಗಿ ವೀಕ್ಷಿಸಿ ದಾಖಲಿಸಲಾಗಿತ್ತು.
ಸಾಮಾನ್ಯ ಸಾಪೇಕ್ಷತೆಯು ಆಧುನಿಕ ಭೌತಶಾಸ್ತ್ರದಲ್ಲಿ ಬಳಸಲಾಗುವ ಗುರುತ್ವಾಕರ್ಷಣೆಯ ವಿವರಣೆಯಾಗಿದೆ. ಬಾಹ್ಯಾಕಾಶ ಮತ್ತು ಸಮಯದ ಜ್ಯಾಮಿತೀಯ ಅಂಶಗಳನ್ನು ನಾಲ್ಕು ಆಯಾಮದ ಸ್ಪೇಸ್‌ಟೈಮ್ ಎಂದೂ ಕರೆಯಲಾಗುತ್ತದೆ. ಆದಾಗ್ಯೂ, ಬಾಹ್ಯಾಕಾಶ ಗಾತ್ರದ ಅಳತೆಗಳಲ್ಲಿ ಪ್ರಾಯೋಗಿಕ ದತ್ತಾಂಶದೊಂದಿಗೆ ಸ್ಥಿರವಾದ ಸರಳವಾದ ಸಿದ್ಧಾಂತವಾಗಿದ್ದರೂ, ಸಾಮಾನ್ಯ ಸಾಪೇಕ್ಷತೆಯನ್ನು ನಮ್ಮ ಬ್ರಹ್ಮಾಂಡದ ಅತ್ಯಂತ ಚಿಕ್ಕ ಮಾಪಕಗಳಲ್ಲಿ ಅಂದರೆ ಕ್ವಾಂಟಮ್ ಭೌತಶಾಸ್ತ್ರದ ನಿಯಮಗಳೊಂದಿಗೆ ಸಮನ್ವಯಗೊಳಿಸಲಾಗುವುದಿಲ್ಲ.
ಆಸ್ಟ್ರೇಲಿಯಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಮತ್ತು ಸಿಸ್ರೋ ಇವುಗಳು ಜಂಟಿಯಾಗಿ ನಡೆಸಿದ ಸಂಶೋಧನಾ ತಂಡದ ಸದಸ್ಯರಾದ ಡಾ. ಡಿಕ್ ಮ್ಯಾಂಚೆಸ್ಟರ್ ಅವರು ‘‘ಈ ಫಲಿತಾಂಶವು ಬ್ರಹ್ಮಾಂಡದ ಬಗ್ಗೆ ನಮ್ಮ ತಿಳುವಳಿಕೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ’’ ಎಂದು ಹೇಳಿರುವುದು ಇಂದಿನ ಪೀಳಿಗೆಗೆ ಸಾಪೇಕ್ಷತಾ ಸಿದ್ಧಾಂತವನ್ನು ಸುಲಭವಾಗಿ ತಿಳಿಸಲು ಸಾಧ್ಯವಾಗಬಹುದು ಎಂಬ ಆಶಾಭಾವನೆ ಮೂಡಿದೆ.
ಸಾಮಾನ್ಯ ಸಾಪೇಕ್ಷತೆಯ ಸಿದ್ಧಾಂತವು ಬ್ರಹ್ಮಾಂಡದಲ್ಲಿ ಗುರುತ್ವಾ ಕರ್ಷಣೆಯು ಹೇಗೆ ದೊಡ್ಡ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸುತ್ತದೆ, ಆದರೆ ಕ್ವಾಂಟಮ್ ಮೆಕ್ಯಾನಿಕ್ಸ್ ಸರ್ವೋಚ್ಚವಾದ ಪರಮಾಣು ಪ್ರಮಾಣದಲ್ಲಿ ಅದು ಒಡೆಯುತ್ತದೆ ಎಂದು ಮ್ಯಾಂಚೆಸ್ಟರ್ ವಿವರವಾಗಿ ಹೇಳುತ್ತಾರೆ. ಐನ್‌ಸ್ಟೈನ್‌ನ ಸಿದ್ಧಾಂತವು ಇನ್ನೂ ನಿಜವಾಗಿದೆಯೇ ಎಂದು ನೋಡಲು ಆಗಾಗ ಅದನ್ನು ನಿಗದಿತ ಪ್ರಮಾಣದಲ್ಲಿ ಪರೀಕ್ಷಿಸುವ ಮಾರ್ಗಗಳನ್ನು ನಾವು ಕಂಡುಹಿಡಿಯಬೇಕಾಗಿದೆ. ಅದೃಷ್ಟವಶಾತ್, ಡಬಲ್ ಪಲ್ಸರ್ ಎಂದು ಕರೆಯಲ್ಪಡುವ ವಿದ್ಯಮಾನವನ್ನು ಸರಿಯಾಗಿ ಅಧ್ಯಯನ ಮಾಡಲು ಆಸ್ಟ್ರೇಲಿಯಾದ ಪಾರ್ಕ್ಸ್ ಬಳಿಯಿರುವ ಕಾಸ್ಮಿಕ್ ಪ್ರಯೋಗಾಲಯವು ಹೆಚ್ಚು ಸಹಾಯ ಮಾಡಿದೆ ಎಂದು ಡಾ. ಡಿಕ್ ಮ್ಯಾಂಚೆಸ್ಟರ್ ಹೇಳಿದ್ದಾರೆ. ‘‘ಕಳೆದ 16 ವರ್ಷಗಳಲ್ಲಿ ಡಬಲ್ ಪಲ್ಸರ್‌ನ ನಮ್ಮ ಅವಲೋಕನಗಳು ಐನ್‌ಸೈನ್‌ನ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದೊಂದಿಗೆ ವಿಸ್ಮಯಕಾರಿಯಾಗಿ ಸ್ಥಿರವಾಗಿದೆ ಎಂದು ಸಾಬೀತಾಯಿತು’’ ಅವರು ಹೇಳುತ್ತಾರೆ.
ಅವರು ಅದನ್ನು ಹೇಗೆ ಸಾಬೀತುಪಡಿಸಿದರು? ಎಂಬುದನ್ನು ತಿಳಿಯುವುದು ಅಗತ್ಯ. SR B1913+16 ಹೆಸರಿನ ಮೊದಲ ಬೈನರಿ ಪಲ್ಸರ್ ಸಿಸ್ಟಮ್‌ನ್ನು 1975ರಲ್ಲಿ ಗುರುತಿಸಲಾಯಿತು. ಡಬಲ್ ಪಲ್ಸರ್ ಸಿಸ್ಟಮ್ PSR J0737&3039A/Bಯನ್ನು 2003ರಲ್ಲಿ ಗುರುತಿಸಲಾಯಿತು ಮತ್ತು ಇದು ಬೈನರಿ ಕಕ್ಷೆಯಲ್ಲಿ ಎರಡು ಪಲ್ಸರ್‌ಗಳನ್ನು ಹೊಂದಿರುವ ಏಕೈಕ ವ್ಯವಸ್ಥೆಯಾಗಿ ಉಳಿದಿದೆ. ಇದು ಸಾಮಾನ್ಯ ಸಾಪೇಕ್ಷತೆಯನ್ನು ಪರೀಕ್ಷಿಸಲು ಅಪರೂಪದ ಅವಕಾಶವನ್ನು ನೀಡಿತು.
ಡಬಲ್ ಪಲ್ಸರ್ ವ್ಯವಸ್ಥೆಯು ಗಡಿಯಾರದ ಸೆಕೆಂಡ್ ಮುಳ್ಳಿನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಎರಡು ಪರಿಭ್ರಮಿಸುವ ಪಲ್ಸರ್‌ಗಳು ದಟ್ಟವಾದ ನ್ಯೂಟ್ರಾನ್ ನಕ್ಷತ್ರಗಳು, ಬಲವಾದ ಗುರುತ್ವಾಕರ್ಷಣೆಯ ಕ್ಷೇತ್ರಗಳನ್ನು ರಚಿಸುತ್ತವೆ ಮತ್ತು ನಿಯಮಿತ ಸಮಯದ ಮಧ್ಯಂತರದಲ್ಲಿ ರೇಡಿಯೊ ತರಂಗಗಳನ್ನು ಹೊರಸೂಸುತ್ತವೆ. ಅವು ತುಂಬಾ ಸ್ಥಿರವಾದ ಮತ್ತು ಅತ್ಯಂತ ವೇಗವಾದ ತಿರುಗುವಿಕೆಯ ಸಮಯವನ್ನು ಸಹ ಹೊಂದಿವೆ.
ಡಬಲ್ ಪಲ್ಸರ್ ವ್ಯವಸ್ಥೆಯಲ್ಲಿರುವ ನಕ್ಷತ್ರಗಳು ಪ್ರತಿ 2.5 ಗಂಟೆಗಳಿಗೊಮ್ಮೆ ಕಕ್ಷೆಯನ್ನು ಪೂರ್ಣಗೊಳಿಸುತ್ತವೆ. ಒಂದು ಪಲ್ಸರ್ ಪ್ರತಿ ಸೆಕೆಂಡಿಗೆ 45 ಬಾರಿ ತಿರುಗುತ್ತದೆ ಮತ್ತು ಇನ್ನೊಂದು ಸೆಕೆಂಡಿಗೆ ಕೇವಲ 2.8 ಬಾರಿ ತಿರುಗುತ್ತದೆ. ಸಾಮಾನ್ಯ ಸಾಪೇಕ್ಷತೆಯ ಪ್ರಕಾರ, ವ್ಯವಸ್ಥೆಯಲ್ಲಿನ ತೀವ್ರ ವೇಗವರ್ಧನೆಯು ಬಾಹ್ಯಾಕಾಶ ಸಮಯದ ವೇಗವನ್ನು ತಗ್ಗಿಸುತ್ತದೆ ಮತ್ತು ಅದನ್ನು ನಿಧಾನಗೊಳಿಸುವ ತರಂಗಗಳನ್ನು ಕಳುಹಿಸುವುದರಿಂದ ಎರಡು ಪಲ್ಸರ್‌ಗಳು 85 ಮಿಲಿಯನ್ ವರ್ಷಗಳಲ್ಲಿ ಘರ್ಷಣೆಗೊಳ್ಳುತ್ತವೆ ಎಂದು ಊಹಿಸಲಾಗಿದೆ. ಆದರೆ ಅಂತಹ ದೀರ್ಘಾವಧಿಯ ಪ್ರಮಾಣದಲ್ಲಿ ಈ ಶಕ್ತಿಯ ನಷ್ಟವನ್ನು ಕಂಡುಹಿಡಿಯುವುದು ಕಷ್ಟ.
ತಿರುಗುವ ಪಲ್ಸರ್‌ಗಳ ತಿರುಗುವಿಕೆಯಿಂದ ರೇಡಿಯೊ ತರಂಗಗಳು ಉಂಟಾಗುತ್ತವೆ. ಅದು ಗಡಿಯಾರದಂತಹ ಲಯಬದ್ಧ ಶಬ್ದದಂತಹ (ಟಿಕ್ ಟಿಕ್ ಟಿಕ್) ಈ ಸಣ್ಣ ಬದಲಾವಣೆಗಳನ್ನು ಪತ್ತೆಹಚ್ಚಲು ಪರಿಪೂರ್ಣ ಸಾಧನವಾಗಿದೆ. ದ್ರವ್ಯರಾಶಿಯಿಂದ ತಿರುಗುವಿಕೆಯನ್ನು ಸ್ಥಿರಗೊಳಿಸುವಿಕೆಯೊಂದಿಗೆ ಪಲ್ಸರ್‌ಗಳು ಗುರುತ್ವಾಕರ್ಷಣೆಯ ಸಿದ್ಧಾಂತಗಳನ್ನು ಪರೀಕ್ಷಿಸಲು ಸಹಾಯವಾಗುತ್ತದೆ. ಆ ಲಯಬದ್ಧ ಶಬ್ದಗಳ ಆಗಮನದ ಸಮಯದಲ್ಲಿ ಸಣ್ಣ ವ್ಯತ್ಯಾಸಗಳ ಮಾಪನ ಮಾಡಲು ತಂಡವು ಸಕ್ರಿಯವಾಗಿ ಶ್ರಮಿಸಿದೆ.
ಸ್ವಿನ್‌ಬರ್ನ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಮತ್ತು ARC ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಗ್ರಾವಿಟೇಶನಲ್ ವೇವ್ಸ್ (OzGrav) ನಿಂದ ಸಂಶೋಧನಾ ತಂಡದ ಸದಸ್ಯ ಅಸೋಸಿಯೇಟ್ ಪ್ರೊಫೆಸರ್ ಆಡಮ್ ಡೆಲ್ಲರ್, ‘‘ಪಲ್ಸರ್‌ಗಳಿಂದ ಹೊರಡುವ ಈ ತರಂಗಾಂತರವು ಭೂಮಿಯನ್ನು ತಲುಪಲು ಸುಮಾರು 2,400 ವರ್ಷಗಳನ್ನು ತೆಗೆದುಕೊಳ್ಳುತ್ತದೆ’’ ಎಂದು ವಿವರಿಸುತ್ತಾರೆ.
‘‘ನಾವು 16 ವರ್ಷಗಳಲ್ಲಿ ಈ ಗಡಿಯಾರದ ಶಬ್ದದಂತಹ 20 ಶತಕೋಟಿಗೂ ಹೆಚ್ಚು ನಿಖರವಾದ ತರಂಗಾಂತರ ಆಗಮನದ ಸಮಯವನ್ನು ರೂಪಿಸಿದ್ದೇವೆ’’ ಎಂದು ಡೆಲ್ಲರ್ ಹೇಳುತ್ತಾರೆ. ನಕ್ಷತ್ರಗಳು ಎಷ್ಟು ದೂರದಲ್ಲಿವೆ ಎಂದು ಹೇಳಲು ಇದು ಇನ್ನೂ ಸಾಕಾಗುವುದಿಲ್ಲ ಮತ್ತು ಸಾಮಾನ್ಯ ಸಾಪೇಕ್ಷತೆಯನ್ನು ಪರೀಕ್ಷಿಸಲು ನಾವು ಅದನ್ನು ತಿಳಿದುಕೊಳ್ಳಬೇಕಾಗಿದೆ.
ಪ್ರಪಂಚದಾದ್ಯಂತ ಹರಡಿರುವ ದೂರದರ್ಶಕಗಳ ಜಾಲವಾದ ವೆರಿ ಲಾಂಗ್ ಬೇಸ್‌ಲೈನ್ ಅರೇಯಿಂದ ಡೇಟಾವನ್ನು ಸೇರಿಸುವ ಮೂಲಕ ಸಂಶೋಧನಾ ತಂಡವು ಪ್ರತಿ ವರ್ಷ ನಕ್ಷತ್ರದ ಸ್ಥಾನಗಳಲ್ಲಿ ಸಣ್ಣ ಕಂಪನವನ್ನು ಗುರುತಿಸಲು ಸಾಧ್ಯವಾಯಿತು. ಇದನ್ನು ಭೂಮಿಯಿಂದ ಆ ನಕ್ಷತ್ರದ ದೂರವನ್ನು ನಿರ್ಧರಿಸಲು ಬಳಸಬಹುದು. 16 ವರ್ಷಗಳ ಅಂತಿಮ ಫಲಿತಾಂಶವು ಐನ್‌ಸ್ಟೈನ್ ಸಿದ್ಧಾಂತವನ್ನು ಹೊಂದಿದೆ ಎಂದು ತೋರಿಸಿದೆ. ಫಲಿತಾಂಶಗಳು ಶೇ. 99.99ರಷ್ಟು ಸಾಮಾನ್ಯ ಸಾಪೇಕ್ಷತೆಯ ಮುನ್ಸೂಚನೆಗಳಿಗೆ ಅನುಗುಣವಾಗಿವೆ ಎಂದು ತಂಡವು ಹೆಮ್ಮೆಯಿಂದ ಹೇಳಿದೆ. ‘‘ನಾವು ಭವಿಷ್ಯದಲ್ಲಿ ಹೊಸ ರೇಡಿಯೋ ದೂರದರ್ಶಕಗಳು ಮತ್ತು ಹೊಸ ದತ್ತಾಂಶ ವಿಶ್ಲೇಷಣೆಯನ್ನು ಬಳಸಿಕೊಂಡು ಸಾಮಾನ್ಯ ಸಾಪೇಕ್ಷತೆಯ ದೌರ್ಬಲ್ಯವನ್ನು ಗುರುತಿಸಲು ಆಶಿಸುತ್ತೇವೆ. ಅದು ನಮ್ಮನ್ನು ಇನ್ನೂ ಉತ್ತಮವಾದ ಗುರುತ್ವಾಕರ್ಷಣೆಯ ಸಿದ್ಧಾಂತಕ್ಕೆ ಕರೆದೊಯ್ಯುತ್ತದೆ’’ ಎಂದು ಡೆಲ್ಲರ್ ಹೇಳುತ್ತಾರೆ.
ಡಬಲ್ ಪಲ್ಸರ್ ವ್ಯವಸ್ಥೆಯು ಗುರುತ್ವಾಕರ್ಷಣೆಯ ಸಿದ್ಧಾಂತಗಳನ್ನು ಪರೀಕ್ಷಿಸಲು ಒಂದು ಅನನ್ಯ ಸಾಧನವಾಗಿ ಉಳಿದಿದೆ ಮತ್ತು ತಂಡವು ಕಾಲಕಾಲಕ್ಕೆ ಐನ್‌ಸ್ಟೈನ್‌ನ ಸಿದ್ಧಾಂತವನ್ನು ಸಾಬೀತು ಮಾಡಲು ಅದನ್ನು ಬಳಸುವುದನ್ನು ಮುಂದುವರಿಸಲು ಯೋಜಿಸಿದೆ. ಕಾಲಕಾಲಕ್ಕೆ ನಡೆಯುವ ಇಂತಹ ಅಧ್ಯಯನಗಳಿಂದ ವೈಜ್ಞಾನಿಕ ತತ್ವಗಳ ಮರುಚಿಂತನೆ ಮತ್ತು ಮರುಪ್ರಯೋಗದಿಂದ ಹೊಸ ಹೊಸ ಹೊಳಹುಗಳ ಮೂಲಕ ನಮ್ಮ ಚಿಂತನೆಗಳನ್ನು ಮೊನಚಾಗುತ್ತವೆ ಮತ್ತು ಭವಿಷ್ಯದ ಕುರಿತ ಹೊಸ ಮಾರ್ಗಗಳು ದೊರೆಯುತ್ತವೆ.