ಮತಾಂತರ ನಿಷೇಧ: ವ್ಯಕ್ತಿ ಸ್ವಾತಂತ್ರದ ಕಗ್ಗೊಲೆ

Update: 2021-12-27 05:09 GMT

ಇದೀಗ ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ತರಲಾಗಿದೆ. ಈ ಕಾಯ್ದೆಯು ಕರಾಳ ಮುಖಗಳನ್ನು ಹೊಂದಿದ್ದು ನೇರವಾಗಿ ದಲಿತರನ್ನು ಹತ್ತಿಕ್ಕುವ ಕುತಂತ್ರದ ಕಾಯ್ದೆಯಾಗಿದೆ. ಕ್ರೈಸ್ತರು, ಮುಸಲ್ಮಾನರು ಮತ್ತು ದಲಿತರು ಒಬ್ಬರನ್ನೊಬ್ಬರು ಬೆರೆಯದೆ ಇರುವ ಹಾಗೆ ಮಾಡಿರುವ ಷಡ್ಯಂತ್ರದ ಕಾಯ್ದೆ ಇದಾಗಿದೆ.

ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಿಂದಲೂ ಈ ದೇಶಾದ್ಯಂತ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆ ನಡೆಯುತ್ತಲೇ ಇದೆ. ಅದಲ್ಲದೆ ಇದೀಗ ರಾಜ್ಯದಲ್ಲಿಯೂ ಮತಾಂತರ ನಿಷೇಧ ಕಾಯ್ದೆ ಜನರ ಅಭಿಪ್ರಾಯವನ್ನೇ ಕಲೆ ಹಾಕದೆ ವಿಧಾನಸಭೆಯಲ್ಲಿ ಬಿಲ್ಲನ್ನು ಪಾಸ್ ಮಾಡಲಾಗಿದೆ.

  ಈ ಹಿಂದೆ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರಕಾರ ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳ ನಿಯಂತ್ರಣ ವಿಧೇಯಕ ಜಾರಿಗೆ ತರಲು ಸಿದ್ದವಾಗಿತ್ತು. ಆ ಮೂಲಕ ಮಠಗಳನ್ನು ಸರಕಾರದ ವ್ಯಾಪ್ತಿಗೆ ತರಬೇಕೆಂಬುದು ಅವರ ಉದ್ದೇಶವಾಗಿತ್ತು. ಸರ್ವೋಚ್ಚ ನ್ಯಾಯಾಲಯ ಈ ಸಂಬಂಧ ನಿರ್ದೇಶನ ನೀಡಿತ್ತು. ಅದರಂತೆಯೇ ರಾಜ್ಯ ಸರಕಾರ ನಡೆದುಕೊಳ್ಳಲು ಮುಂದಾಗುತ್ತಿರುವ ಬೆನ್ನಲ್ಲೇ ದಿವಂಗತ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರು ಸೊಲ್ಲೆತ್ತುತ್ತಿದ್ದಂತೆ ಯಾಕೊ ಸರಕಾರ ಆ ಮಸೂದೆಯಿಂದ ಹಿಂದೆ ಸರಿಯಿತು. ವಿಶ್ವೇಶತೀರ್ಥ ಸ್ವಾಮೀಜಿಯವರು ಅಂದು ಹೇಳಿದ್ದೇನು? ‘ಮಠ ಮಸೂದೆ ಬೇಡ, ಅದರ ಬದಲಾಗಿ ಮತಾಂತರ ನಿಷೇಧ ಕಾಯ್ದೆ ತನ್ನಿ’ ಎಂದು. ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದ ಹಾಗೆ ತುಂಬಾ ದಿನಗಳಿಂದಲೂ ಧ್ವನಿ ಕೇಳಿ ಬರುತ್ತಲೇ ಇದೆ. ಅದರಲ್ಲೂ ತುದಿಗಾಲಿನಲ್ಲಿ ನಿಂತು ಹೋರಾಟ ನಡೆಸಿದ್ದು ವಿಶ್ವೇಶತೀರ್ಥ ಸ್ವಾಮೀಜಿಗಳು. ಅಂದು 2008 ಅಕ್ಟೋಬರ್ 4 ರಂದು ಬೆಂಗಳೂರಿನಲ್ಲಿ ಬೀದಿಗಿಳಿದು ಹೋರಾಟ ನಡೆಸಿದ್ದರು. ಆ ಸಂದರ್ಭದಲ್ಲಿ ಬಿಜೆಪಿ ಸರಕಾರದಲ್ಲಿ ಯಡಿಯೂರಪ್ಪನವರು ಅಧೀಕಾರದಲ್ಲಿದ್ದರು. ಆಗಲೇ ಇವರು ಅಂದಿನ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಮತಾಂತರ ತಡೆಗೆ ಕಠಿಣ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದರು. ಈ ವಿಷಯವಾಗಿ ಇತರ ಜನಾಂಗದ ಮಠಾಧೀಶರು ಕೂಡ ಮತಾಂತರ ನಿಷೇಧ ಕಾಯ್ದೆ ತರುವುದರ ಪರವಾಗಿ ಬೆಂಬಲವಾಗಿದ್ದರು.

ಪ್ರಸ್ತುತ ಸಮಾಜದಲ್ಲಿ ಮತಾಂತರ ನಿಷೇಧ ಕಾಯ್ದೆ ಬೇಕೊ? ಅಥವಾ ಬೇಡವೊ? ಎಂಬ ಚರ್ಚೆಗಾಗಲಿ ಅಥವಾ ಅದರ ಹಿನ್ನೆಲೆಯನ್ನು ತಿಳಿದುಕೊಳ್ಳುವ ಗೋಜಿಗೆ ಸರಕಾರ ಹೋಗೆ ಇಲ್ಲ. ಅವರಿಗೆ ಅದರ ಅಗತ್ಯವೂ ಇಲ್ಲ. ಸ್ವಾತಂತ್ರ ಪೂರ್ವದಲ್ಲಿಯೆ ಕೆಲವು ರಾಜ ಸಂಸ್ಥಾನಗಳು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದುಕೊಂಡಿದ್ದವು. ಭಾರತ ಬ್ರಿಟಿಷ್ ಆಡಳಿತದಲ್ಲಿ ಮತಾಂತರ ನಿಷೇಧ ಕಾಯ್ದೆ ಇರಲಿಲ್ಲ. ಆದರೆ ಅನೇಕ ರಾಜ ಸಂಸ್ಥಾನಗಳು ತಮ್ಮದೇ ಮತಾಂತರ ನಿಷೇಧ ಕಾಯ್ದೆಗಳನ್ನು ಹೊಂದಿದ್ದವು. ಉದಾಹರಣೆಗೆ ರಾಯಗಢ ರಾಜ್ಯ ಮತಾಂತರ ಕಾಯ್ದೆ 1936, ಪಾಟ್ನಾ ಧಾರ್ಮಿಕ ಸ್ವಾತಂತ್ರ ಕಾಯ್ದೆ 1942, ಸರ್ಗುಜಾ ಸ್ಟೇಟ್ ಅಪೋಸ್ಟಸಿ ಆ್ಯಕ್ಟ್ 1945 ಮತ್ತು ಉದಯಪುರ ಸ್ಟೇಟ್ ಆ್ಯಂಡ್ ಕನ್ವರ್ಶನ್ ಆ್ಯಕ್ಟ್ 1946 ಇಂತವೆ ಕಾಯ್ದೆಗಳು ಬಿಕಾನೇರ್ ಜೋದ್‌ಪುರ, ಕಾಲಾಹುಂಡಿ ಮತ್ತು ಕೋಟಾ ಸಂಸ್ಥಾನಗಳಲ್ಲಿ ಜಾರಿಯಲ್ಲಿದ್ದವು. ಆದರೆ ಇವರ ಕಾಯ್ದೆಗಳು ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವುದಕ್ಕೆ ವಿರುದ್ಧವಾಗಿದ್ದವು. ಇದರ ಜೊತೆಗೆ ದಲಿತರನ್ನು ಅಸ್ಪಶ್ಯರನ್ನಾಗಿಯೇ ಒಳಗಿಟ್ಟುಕೊಳ್ಳುವ ಕುತಂತ್ರರಾಜ ಸಂಸ್ಥಾನದ ಸಂದರ್ಭದಲ್ಲಿಯೂ ಇತ್ತು. ಕ್ರೈಸ್ತ ಧರ್ಮಕ್ಕೆ ಹೋದರೆ ಇವರು ಸ್ವತಂತ್ರರಾಗುತ್ತಾರೆ, ಇವರು ಗುಲಾಮರಾಗಿಯೇ ಇರಬೇಕು ಎಂಬ ಮನಸ್ಥಿತಿ ರಾಜರಿಗೂ ಕೂಡ ಇತ್ತು.

ಸ್ವಾತಂತ್ರಾ ನಂತರ ಮತಾಂತರ ನಿಷೇಧ ಕಾಯ್ದೆಗಳನ್ನು ರಚಿಸುವ ಹೊಣೆಗಾರಿಕೆಯನ್ನು ಸಂಸತ್ತು ತೆಗೆದುಕೊಂಡಿತು. 1954ರಲ್ಲಿ ‘ದ ಇಂಡಿಯನ್ ಕನ್ವರ್ಶನ್ ಬಿಲ್’ ಮತ್ತು 1960ರಲ್ಲಿ ಬ್ಯಾಕ್ವಾರ್ಡ್ ಕಮ್ಯುನಿಟೀಸ್ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಬೆಂಬಲ ಸಿಗದ ಕಾರಣ ಎರಡೂ ಮಸೂದೆಗಳು ಬಿದ್ದು ಹೋದವು. 1979ರ ಉದ್ದೇಶಿತ ಧಾರ್ಮಿಕ ಸ್ವಾತಂತ್ರ ಮಸೂದೆಯನ್ನು ಅಲ್ಪ ಸಂಖ್ಯಾತರ ಆಯೋಗವೇ ವಿರೋಧಿಸಿತು. ಮಸೂದೆ ಪಕ್ಷಪಾತದಿಂದ ಕೂಡಿತ್ತೆಂಬುದು ಆಯೋಗದ ಆರೋಪವಾಗಿತ್ತು.1969-68ರಲ್ಲಿ ಒರಿಸ್ಸಾ ಮತ್ತು ಮಧ್ಯಪ್ರದೇಶದ ಧರ್ಮ ಸ್ವಾತಂತ್ರ ಕಾಯ್ದೆ 1978ರಲ್ಲಿ ಜಾರಿಗೆ ಬಂದಿತು. ಈ ಎಲ್ಲಾ ಕಾಯ್ದೆಗಳು ಒತ್ತಾಯದ ಅಥವಾ ಆಮಿಷದ ಮತಾಂತರವೆಂದು ಕ್ರೈಸ್ತರನ್ನು ಮತ್ತು ದಲಿತರನ್ನು ಗುರಿಯಾಗಿಸಿತು.

 ಮತಾಂತರಕ್ಕೆ ಸಂಬಂಧಿಸಿದ ಹಾಗೆ ವಿರಾಟ್ ಸ್ವರೂಪ ಪಡೆದುಕೊಂಡ ರಾಜ್ಯವೆಂದರೆ ಅದು ತಮಿಳುನಾಡು. ಮತಾಂತರ ಅತೀ ಹೆಚ್ಚು ಚರ್ಚೆಯಾಗಿದ್ದು ಅಲ್ಲೇ. 1981 ಫೆಬ್ರವರಿಯಲ್ಲಿ ತಮಿಳುನಾಡಿನ ತಿರುವನೇಲ್‌ವೇಲಿ ಜಿಲ್ಲೆಯ ಮೀನಾಕ್ಷಿಪುರದಲ್ಲಿ ಸಾಮೂಹಿಕ ಮತಾಂತರ ಕಾರ್ಯ ನಡೆಯಿತು. ನೂರಾರು ದಲಿತರ ಕುಟುಂಬಗಳು ಇಸ್ಲಾಮ್ ಧರ್ಮ ಸ್ವೀಕರಿಸಿದರು. ಆ ಸಂದರ್ಭದಲ್ಲಿ ಅದು ದೇಶದಾದ್ಯಂತ ಸಾರ್ವತ್ರಿಕ ಚರ್ಚಾ ವಿಷಯವೂ ಆಗಿತ್ತು. ಆ ಘಟನೆ ಹಿಂದೂ ಧರ್ಮಕ್ಕೆ ಬರಸಿಡಿಲು ಬಡಿದಂತಾಯಿತು. ಮೀನಾಕ್ಷಿಪುರಂ ದಲಿತರು ಏಕೆ ಮತಾಂತರಗೊಂಡರು? ಅವರನ್ನು ಮತಾಂತರಕ್ಕೆ ದೂಡಿದ ಸಮಸ್ಯೆ ಯಾವುದು? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುತ್ತವೆ. ದಲಿತರ ಕುಟುಂಬಗಳ ಒಂದು ಸಾವಿರ ಪೈಕಿ ಇಸ್ಲಾಮ್ ಧರ್ಮಕ್ಕೆ ನಿಷ್ಠೆ ತೋರಿಸುತ್ತಾರೆ. 180 ದಲಿತ ಕುಟುಂಬಗಳು ಇಸ್ಲಾಮ್‌ಗೆ ಮತಾಂತರಗೊಳ್ಳುವ ಮೂಲಕ ತಮ್ಮ ಧಾರ್ಮಿಕ ನಂಬಿಕೆಯನ್ನೇ ಬದಲಾಯಿಸಿಕೊಳ್ಳುತ್ತಾರೆ.ಇದಕ್ಕೆ ಕಾರಣ ದಲಿತರಿಗೆ ಹಿಂದೂ ಧರ್ಮದಲ್ಲಿ ಯಾವುದೇ ಸ್ಥಾನಮಾನ ಇಲ್ಲದಿರುವುದು ಮತ್ತು ಅವರಿಂದಾಗುವ ಶೋಷಣೆ. ಮೇಲ್ವರ್ಗದ ಥೀವಾರ (ಮಾರವಾಡಿ)ರಿಂದ ದಲಿತರಿಗೆ ಅತಿಯಾದ ಶೋಷಣೆಯಾಗುತ್ತಿತ್ತು. ಮೀನಾಕ್ಷಿಪುರಂ ಸುತ್ತಮುತ್ತ ಜಾತೀಯತೆ ಮತ್ತು ಜಾತಿ ನಿಂದನೆ ಅಧಿಕವಾಗಿತ್ತು. ಥಿವಾರ ಮತ್ತು ಮುಸ್ಲಿಮರ ನಡುವೆ ಹಾಗೂ ಥಿವಾರ ಮತ್ತು ದಲಿತರ ನಡುವೆ ಸಂಘರ್ಷವಾಗುತ್ತಿತ್ತು. ದಲಿತರಿಗೆ ಪ್ರತ್ಯೇಕ ಕೊಳವೆ ಭಾವಿಗಳಿದ್ದು, ದಲಿತೇತರ ಬೀದಿಗಳಲ್ಲಿ ಕೊಳವೆ ಬಾವಿಯಿಂದ ನೀರನ್ನು ತೆಗೆಯಲು ಬಿಡುತ್ತಿರಲಿಲ್ಲ. ಇಂತಹ ಅಸಮಾನ ಮನೋಭಾವನೆಯೇ ಮತಾಂತರಕ್ಕೆ ಕಾರಣವಾಯಿತು. ಹಾಗಾಗಿ ಅಲ್ಲಿದ್ದ ಎಲ್ಲಾ ದಲಿತರು ಮುಸ್ಲಿಮರಾಗಿ ಹೋದರು. ಈ ಪ್ರಕರಣ ಇಡೀ ತಮಿಳುನಾಡು ವಿಧಾನಸಭೆ ಮತ್ತು ಕೇಂದ್ರದ ಸಂಸತ್ತಿನಲ್ಲಿ ಚರ್ಚೆಗೆ ಬಂತು. ಹಿರಿಯ ರಾಜಕೀಯ ಮುಖಂಡರು ಮತ್ತು ಪತ್ರಕರ್ತರಾದ ಪಿ. ಸಾಹಿನಾಥ್ ಸೇರಿದಂತೆ ಅನೇಕರು ಮೀನಾಕ್ಷಿಪುರಂಗೆ ಭೇಟಿ ನೀಡಿದರು. ಅನೇಕ ಸ್ವಯಂ ಸೇವಕರು, ಸಮಾಜ ಸೇವಕರು ಮತ್ತು ಸತ್ಯಶೋಧನ ಸಮಿತಿಗಳ ಸದಸ್ಯರು ಮೀನಾಕ್ಷಿಪುರಂ ಹಾದಿ ತುಳಿದರು. ಇಸ್ಲಾಮ್‌ಗೆ ಮತಾಂತರ ಹೊಂದಿದ ಈ ವಿಷಯ ತಿಳಿದ ವಿಎಚ್‌ಪಿಯವರಿಗೆ ಬಾಯಿಯಲ್ಲಿ ಕೆಂಡವಿಟ್ಟಂತಾಯಿತು. ಇಸ್ಲಾಮ್‌ಗೆ ಮತಾಂತರ ಹೊಂದಿದ ಜನರನ್ನು ಮತ್ತೆ ಹಿಂದೂಧರ್ಮಕ್ಕೆ ಸೇರಿಸಿಕೊಳ್ಳಲು ‘‘ಮರು ಮತಾಂತರ’’ ಕಾರ್ಯವನ್ನು ಏರ್ಪಡಿಸಿತು. ಆದರೆ ಯಾವೊಬ್ಬ ದಲಿತನೂ ಮರು ಮತಾಂತರವಾಗಲು ಇಚ್ಚಿಸಲಿಲ್ಲ. ಇಂತಹ ಪ್ರಕರಣಗಳನ್ನು ಗಮನಿಸಿದ ಕೇಂದ್ರ ಸರಕಾರ, ಮಧ್ಯಪ್ರದೇಶ, ಒರಿಸ್ಸಾ, ಅರುಣಾಚಲ ಪ್ರದೇಶಗಳಲ್ಲಿ ಧರ್ಮಾಂತರ ನಿಯಂತ್ರಿಸುವ ಸಲುವಾಗಿ ಕಾಯ್ದೆ ರೂಪಿಸಲು ರಾಜ್ಯಗಳಿಗೆ ನಿರ್ದೇಶನ ನೀಡಿತು. ತಮಿಳುನಾಡು ಕೂಡ ಮತಾಂತರ ನಿಷೇಧ ಕಾಯ್ದೆ ತರಲು ಮುಂದಾಯಿತು. ಹಾಗಾಗಿ ಒತ್ತಾಯದ ಧಾರ್ಮಿಕ ಮತಾಂತರ ನಿಷೇದಾಜ್ಞೆಯನ್ನು ರಾಜ್ಯಪಾಲರು 2002 ಅಕ್ಟೋಬರ್ 2ರಂದು ಘೋಷಿಸಿದರು. ಅದನ್ನು ಮುಂದೆ ರಾಜ್ಯ ವಿಧಾನಸಭೆ ಅಂಗೀಕರಿಸಿತು. ಈ ಎಲ್ಲಾ ಕಾಯ್ದೆಗಳು ಒತ್ತಾಯದ ಮತಾಂತರ ಶಿಕ್ಷಾರ್ಹ ಅಪರಾಧ ಎಂದು ಹೇಳಿದವು. ಯಾಕೆಂದರೆ ಮತಾಂತರ ವಾದವರು ಹೆಚ್ಚಿನವರು ದಲಿತರೇ ಆಗಿದ್ದರು. ಹಿಂದೂ ಅಲ್ಪಸಂಖ್ಯಾತ ಮತ್ತು ಪಾಲಕತ್ವ ಕಾಯ್ದೆ 1956 (ಸೆಕ್ಷನ್ 6), ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ1956 (ಸೆಕ್ಷನ್ 7, 8, 9, 11, 18, 24) ಹಿಂದೂ ವಿವಾಹ ಕಾಯ್ದೆ 1955 (ಸೆಕ್ಷನ್ 13 (2), 13 (ಎ) ಮತ್ತು ಹಿಂದೂ ಉತ್ತರಾಧಿಕಾರ ಕಾಯ್ದೆ (ಸೆಕ್ಷನ್ 26) ಈ ಎಲ್ಲಾ ಕಾಯ್ದೆಗಳ ಉದ್ದೇಶಗಳು ಹಿಂದೂಗಳನ್ನು ಕ್ರೈಸ್ತ ಧರ್ಮ ಮತ್ತು ಇಸ್ಲಾಮ್ ಧರ್ಮಗಳಿಗೆ ಮತಾಂತರ ಹೊಂದುವವರನ್ನು ತಡೆಯುವುದು ಒಂದು ಉದ್ದೇಶವಾದರೆ, ಮತಾಂತರ ಹೊಂದಿರುವವರನ್ನು ಮತ್ತೆ ಸ್ವಧರ್ಮಕ್ಕೆ ಕರೆ ತರುವುದು ಮತ್ತೊಂದು ಉದ್ದೇಶವಾಗಿತ್ತು.

 ಇದೀಗ ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ತರಲಾಗಿದೆ. ಈ ಕಾಯ್ದೆಯು ಕರಾಳ ಮುಖಗಳನ್ನು ಹೊಂದಿದ್ದು ನೇರವಾಗಿ ದಲಿತರನ್ನು ಹತ್ತಿಕ್ಕುವ ಕುತಂತ್ರದ ಕಾಯ್ದೆಯಾಗಿದೆ. ಕ್ರೈಸ್ತರು, ಮುಸಲ್ಮಾನರು ಮತ್ತು ದಲಿತರು ಒಬ್ಬರನ್ನೊಬ್ಬರು ಬೆರೆಯದೆ ಇರುವ ಹಾಗೆ ಮಾಡಿರುವ ಷಡ್ಯಂತ್ರದ ಕಾಯ್ದೆ ಇದಾಗಿದೆ. ಇದರಿಂದ ಬೌದ್ಧರು ಕೂಡ ಹೊರತಲ್ಲ ಎಂಬುದನ್ನು ಕೂಡ ಗಮನದಲ್ಲಿರಿಸಿಕೊಳ್ಳಬೇಕು. ಈ ಹಿಂದೆ ಉತ್ತರ ಪ್ರದೇಶದಲ್ಲಿ ಮುಸ್ಲಿಮ್ ಸಮುದಾಯವನ್ನು, ಕೇರಳದಲ್ಲಿ ಕ್ರೈಸ್ತರನ್ನು, ಹಿಂದೂ ಧರ್ಮಕ್ಕೆ ಮತಾಂತರಿಸಿದ್ದು ದೇಶದ ಮಟ್ಟಿಗೆ ಬಹುದೊಡ್ಡ ಮಟ್ಟದ ಚರ್ಚೆ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಎಲ್ಲರಿಗೂ ಹಕ್ಕಿರುವುದರಿಂದ, ಅವರವರ ಧಾರ್ಮಿಕ ಸ್ವಾತಂತ್ರ, ಅವರವರಿಗೆ ಬಿಟ್ಟಿದ್ದು. ಬೇರೆ ಧರ್ಮದಿಂದ ಹಿಂದೂ ಧರ್ಮಕ್ಕೆ ಬರುವವರಿಗೆ ಯಾವುದೇ ಅಡ್ಡಿ ಆತಂಕಗಳಿಲ್ಲ. ಆದರೆ ಹಿಂದೂ ಧರ್ಮದಿಂದ ಹೊರ ಹೋಗುವವರಿಗೆ ಇಲ್ಲಿ ಅಡಚಣೆಗಳಿವೆ. ಇದೇ ಹಿಂದುತ್ವ ರಾಜಕಾರಣ. ಕರ್ನಾಟಕದ ಮಟ್ಟಿಗೆ ಬಿಲ್ ಹೇಗಿದೆ ಎಂದರೆ ಬೇರೆ ಧರ್ಮದ ವ್ಯಕ್ತಿಯ ಬಳಿ ಸ್ನೇಹಿತನೊಬ್ಬ ಗಿಫ್ಟ್ ತೆಗೆದುಕೊಳ್ಳುವುದಕ್ಕೂ ಇಲ್ಲಿ ಕಡಿವಾಣವಿದೆ. ಇಂತಹ ಕೆಟ್ಟ ಬಿಲ್ಲನ್ನು ಇಲ್ಲಿ ಪರಿಚಯಿಸಲಾಗಿದೆ. ಇದು ದಲಿತರಿಗೆ ನೇರ ಪರಿಣಾಮವನ್ನುಂಟು ಮಾಡುವುದು ಒಂದು ಕಡೆ ಇಟ್ಟು ಮತ್ತೊಂದೆಡೆ ಯೋಚಿಸುವುದಾದರೆ ಗುಂಪು ಗಲಭೆಗೆ ಇದು ನೇರ ಹಿಂದೂ ಸಂಘಟನೆಗಳಿಗೆ ಕುಮ್ಮಕ್ಕು ನೀಡುತ್ತದೆ. ಜರ್ಮನ್‌ನಿಂದ ಸ್ಟುವರ್ಟ್ ಸ್ಟೇನ್ಸ್ ಎಂಬವರು ಒರಿಸ್ಸಾದ ತಿಯೋಂಜಿಹಾರ್ ಜಿಲ್ಲೆಗೆ ಬಂದು ಬಡವರ ಸೇವೆ ಮಾಡುತ್ತಿದ್ದರು. ಅವರು ಕ್ರೈಸ್ತರಾಗಿದ್ದರು ಎಂಬ ಕಾರಣಕ್ಕೆ ನೀವು ಮತಾಂತರಿಗಳೆಂದು 1999ರಲ್ಲಿ ಹಿಂದೂ ಸಂಘಟನೆಗಳು ಅವರು ಮತ್ತು ಅವರ ಎರಡು ಮಕ್ಕಳನ್ನು ಜೀಪಿನಲ್ಲಿ ಕಟ್ಟಿ ಜೀವಂತ ಸುಟ್ಟು ಬಿಟ್ಟರು. 2008ರಲ್ಲಿ ಕ್ರೈಸ್ತ ಸನ್ಯಾಸಿಯೋರ್ವಳನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರು ಅತ್ಯಾಚಾರವೆಸಗಿ ಕೊಂದರು.ಇಂತಹ ಗುಂಪು ಗಲಭೆ ಮತ್ತು ಹಿಂಸಾಚಾರಕ್ಕೆ ಕರ್ನಾಟಕದ ಬಿಲ್ ಬಳಕೆಯಾಗಬಹುದು ಎಂಬುದನ್ನು ಇದು ಸೂಚಿಸುತ್ತಿದೆ. ಕ್ರೈಸ್ತರು ಮತ್ತು ಮುಸಲ್ಮಾನರು ಇಲ್ಲಿ ಹಿಂಸೆಗೆ ತುತ್ತಾದರೂ ಸಹಿತ ದಲಿತರು ಮಾತ್ರ ಕಾಯ್ದೆಯ ಮೊದಲ ಬಲಿಪಶುಗಳು. ಅಸ್ಪಶ್ಯರಾಗಿಯೇ, ಗುಲಾಮರಂತೆಯೇ ಒಂದು ಹೊಂಡದಲ್ಲಿ ಕೊಳೆತು ನಾರುವ ಜನಾಂಗವಾಗಿ ಮಾಡಬೇಕೆಂಬ ಕಾರಣಕ್ಕೆ ಇದನ್ನು ತರಲಾಗಿದೆ. ಇದರಿಂದಾಚೆಗೆ ನೋಡುವುದಾದರೆ ಇದೊಂದು ವ್ಯಕ್ತಿ ಸ್ವಾತಂತ್ರದ ಕಗ್ಗೊಲೆಯೂ ಆಗಿದೆ.

Writer - ಹಾರೋಹಳ್ಳಿ ರವೀಂದ್ರ

contributor

Editor - ಹಾರೋಹಳ್ಳಿ ರವೀಂದ್ರ

contributor

Similar News