ಸಿಡ್ನಿ ಪೊಯಿಟರ್ : ಹೊಳೆಯುವುದನ್ನು ನಿಲ್ಲಿಸಿದ ರಸ್ತೆ ನಕ್ಷತ್ರ
2002ರಲ್ಲಿ ‘ಟ್ರೈನಿಂಗ್ ಡೇ’ ಸಿನೆಮಾದಲ್ಲಿನ ಅಭಿನಯಕ್ಕಾಗಿ ಉತ್ತಮ ನಟ ಆಸ್ಕರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ ಡೆಂಝಿಲ್ ವಾಶಿಂಗ್ಟನ್ ‘‘ಸಿಡ್ನಿ ನಾನು ಯಾವಾಗಲೂ ನಿಮ್ಮನ್ನು ಬೆನ್ನಟ್ಟುತ್ತಿದ್ದೆ. ನಿಮ್ಮ ಹೆಜ್ಜೆಗಳನ್ನು ಅನುಸರಿಸುತ್ತಿದ್ದೆ, ಸರ್ ನೀವು ಸಾಧಿಸದೇ ಇರುವುದು ಏನೂ ಇಲ್ಲ’’ ಎಂದು ಭಾವುಕನಾಗಿ ನುಡಿದರು. ಅವರು ಪ್ರಸ್ತಾಪಿಸಿದ ಸಿಡ್ನಿ ಪೊಯಿಟರ್ (7-1-2022) ತಮ್ಮ 94 ವಯಸ್ಸಿನಲ್ಲಿ ತೀರಿಕೊಂಡಿದ್ದಾರೆ. ಸಿಡ್ನಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ ಅಮೆರಿಕದ ಮೊದಲ ಆಫ್ರಿಕನ್-ಅಮೆರಿಕನ್ ನಟ. ಅವರು ಸಿನೆಮಾ ಬದುಕು ಪ್ರವೇಶಿಸಿ ಅಂದಾಜು 15 ವರ್ಷಗಳ ನಂತರ 1963ರಲ್ಲಿ ‘ಲಿಲ್ಲೀಸ್ ಆಫ್ ದ ಫೀಲ್ಡ್’ ಸಿನೆಮಾದಲ್ಲಿನ ನಿವೃತ್ತ ಸೇನಾಧಿಕಾರಿ ಪಾತ್ರಕ್ಕೆ ಆಸ್ಕರ್ ಮತ್ತು ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಪಡೆದಿದ್ದರು. ಅವರು ಆಸ್ಕರ್ ಪಡೆದ ಮೊದಲ ಆಫ್ರೋ-ಅಮೆರಿಕನ್ ನಟ. 38 ವರ್ಷಗಳ ನಂತರ ಎರಡನೇ ಬಾರಿ ಡೆಂಝಿಲ್‌ವಾಶಿಂಗ್ಟನ್‌ಗೆ ಲಭಿಸಿತು. ಇದು ಆಸ್ಕರ್‌ನ ಹೆಗ್ಗಳಿಕೆಯಲ್ಲ ಅಥವಾ ಅದನ್ನು ಪಡೆದವರು ಎನ್ನುವ ಮೇಲರಿಮೆಯೂ ಅಲ್ಲ. ಬದಲಿಗೆ ಅಮೆರಿಕದಂತಹ ಶೋಷಕ, ಬಂಡವಾಳಶಾಹಿ ದೇಶದಲ್ಲಿ ತಾಂತ್ರಿಕವಾಗಿ ಗುಲಾಮಗಿರಿಯಿಂದ ಮುಕ್ತವಾದರೂ ಮಾನಸಿಕವಾಗಿ ಇನ್ನೂ ಆ ಫ್ಯೂಡಲ್ ಧೋರಣೆಯ ಕ್ರೌರ್ಯವನ್ನು ಮುಂದುವರಿಸಿಕೊಂಡು ಬರುತ್ತಿರುವುದನ್ನು ತೋರಿಸುತ್ತದೆ. 1960, 1970ರ ದಶಕದ ಹಾಲಿವುಡ್‌ನಲ್ಲಿ ಆಫ್ರೋ-ಅಮೆರಿಕನ್ ಕಲಾವಿದರು ಇಲ್ಲವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಇತ್ತು. ಅ ಕುರಿತು ಸಿಡ್ನಿ ಪ್ರತಿ ಸಿನೆಮಾದಲ್ಲಿ ಅಭಿನಯಿಸಿದಾಗಲೂ ಆ ಎರಡು ಕೋಟಿ ಆಫ್ರೋ-ಅಮೆರಿಕನ್‌ರನ್ನು ಪ್ರತಿನಿಧಿಸುತ್ತಿದ್ದೇನೆ ಎನ್ನುವ ಭಾವನೆ ವುೂಡುತ್ತದೆ’’ ಎಂದು ಬರೆಯುತ್ತಾರೆ.
ಅಲ್ಲಿಯವರೆಗೂ ಆ ಸೋಕಾಲ್ಡ್ ಜಗಮಗಿಸುವ ಹಾಲಿವುಡ್‌ನಲ್ಲಿ ಕಪ್ಪುವರ್ಣದ ಕಲಾವಿದರನ್ನು ಬಿಳಿಯರ ಬಾಡಿಗಾರ್ಡ್ ಗಳಾಗಿ, ಬಫೂನುಗಳಂತೆ, ಸುಫಾರಿ ಹಂತಕರಾಗಿ, ಕಳ್ಳತನ, ದರೋಡೆ ಮಾಡುವ ನಕರಾತ್ಮಕ ಪಾತ್ರಗಳಿಗೆ ಮಾತ್ರ ಸೀಮಿತಗೊಳಿಸಲಾಗುತ್ತಿತ್ತು. ತಂತ್ರಜ್ಞರು, ನಿರ್ದೇಶಕರು ಇರಲಿಲ್ಲ. ಐವತ್ತರ ದಶಕದಲ್ಲಿ ಸಿಡ್ನಿ ಸಿನೆಮಾರಂಗದಲ್ಲಿ ಪ್ರವೇಶ ಮಾಡಿದಾಗ ಈ ತಾರತಮ್ಯದ ಬಿಸಿಯನ್ನು ಅನುಭವಿಸಬೇಕಾಯಿತು. ‘‘ಆದರೆ ಈ ಪಡಿಯಚ್ಚು ಪಾತ್ರಗಳನ್ನು ನಾನು ಅಭಿನಯಿಸುವುದಿಲ್ಲ’’ ಎಂದ ಪೊಯಿಟರ್ 1958 ರಲ್ಲಿ ಬಿಡುಗಡೆಯಾದ ‘The Defiant Ones’ ಸಿನೆಮಾದ ಮೂಲಕ ಈ ಟಾಬೂವನ್ನು ಮುರಿದರು. ‘‘ಸಿನೆಮಾ ಹಾಲ್‌ನಿಂದ ಹೊರಬರುವ ಪ್ರತಿಯೊಬ್ಬ ಪ್ರೇಕ್ಷಕನಿಗೆ ಮನುಷ್ಯರಿಗೂ ಬೆಲೆ ಇದೆ, ಗೌರವವಿದೆ ಎನ್ನುವ ಭಾವನೆ ತುಂಬಿಕೊಂಡಿರಬೇಕು. ಅಂತಹ ಪಾತ್ರಗಳನ್ನು ಮಾತ್ರ ನಾನು ಆಯ್ಕೆ ಮಾಡಿಕೊಳ್ಳುತ್ತೇನೆ’’ ಎಂದ ಸಿಡ್ನಿ ಪೊಯಿಟರ್ ಮುಂದೆ ಆಫ್ರೋ- ಅಮೇರಿಕನ್‌ರ ಘನತೆಯ ಪ್ರತಿನಿಧಿಯಾಗಿದ್ದು ಚಾರಿತ್ರಿಕವಾಗಿದೆ. ‘‘ಎಂತಹ ಸಂದರ್ಭದಲ್ಲಿಯೂ ಜನಾಂಗ ನೀತಿಯನ್ನು, ವರ್ಣಬೇಧ ನೀತಿಯನ್ನು ಪ್ರತಿಪಾದಿಸುವ ಸಿನೆಮಾಗಳಲ್ಲಿ ಅಭಿನಯಿಸುವುದಿಲ್ಲ’’ ಎಂದು ಸ್ಪಷ್ಟವಾಗಿ ನುಡಿದ ಸಿಡ್ನಿ ಅಲ್ಲಿನ ಬಿಳಿಯರ ಅಹಮಿಕೆಯ ಬೆಲೂನಿಗೆ ತಮ್ಮದೇ ರೀತಿಯಲ್ಲಿ ಸೂಜಿ ಚುಚ್ಚಿದರು. ಓಫ್ರಾ ವಿನ್ಫ್ರಿಯವರೊಂದಿಗೆ ಮಾತನಾಡುತ್ತಾ ‘‘ನಾನು ಸಿನೆಮಾ ಜಗತ್ತಿನಲ್ಲಿ ಪ್ರವೇಶಿಸಲು ಹೆಣಗುತ್ತಿರುವ ಸಂದರ್ಭದಲ್ಲಿ ಪಾತ್ರವೊಂದಕ್ಕೆ 750 ಡಾಲರ್‌ನ ಆಫರ್ ಬಂದಿತ್ತು. ಅಲ್ಲಿ ದಫೇದಾರನೊಬ್ಬನ ಮಗಳನ್ನು ಕೊಂದು ತನ್ನ ಮನೆಯ ಅಂಗಳದಲ್ಲಿ ಬಿಸಾಡುತ್ತಾರೆ. ಆದರೂ ಆತ ನೋಡಿಕೊಂಡು ಮೌನವಾಗಿರುತ್ತನೆ. ಇದು ನನಗೆ ಒಪ್ಪಿಗೆಯಾಗಲಿಲ್ಲ. ಆ ಪಾತ್ರವು ನನಗೆ ಮೆಚ್ಚುಗೆಯಾಗದ ಕಾರಣ ತಿರಸ್ಕರಿಸಿದೆ. ಆದರೆ ನಿರ್ದೇಶಕ ‘ಅದರಲ್ಲಿ ರೇಸಿಸಂ ಎಲ್ಲಿದೆ? ಒಂದು ಪಾತ್ರ ಮಾತ್ರ’ ಎಂದು ನನಗೆ ಹೇಳಿದ. ಆತನಿಗೆ ತನ್ನ ಮನಸ್ಸಿನ ತಳಮಳ ಅರ್ಥವಾಗಿರಲಿಲ್ಲ’’ ಎನ್ನುತ್ತಾರೆ. ಇದು ಸತ್ಯ. ನಮ್ಮಲ್ಲಿ ಹೇಗೆ ದಲಿತರ ಆತಂಕ ಮೇಲ್ಜಾತಿ ಪ್ರಗತಿಪರರಿಗೆ ಅರ್ಥವಾಗುವುದಿಲ್ಲವೋ ಹಾಗೆ. ಮರ್ಲಿನ್ ಬಾಂಡ್ರೋ ಅತ್ಯಾಚಾರಿಯ ಪಾತ್ರವನ್ನು ಅದ್ಭುತವಾಗಿ ಮೆಥಡ್ ಅಭಿನಯದ ಮೂಲಕ ಮುದಗೊಳಿಸಬಲ್ಲ. ಬಿಳಿಯನಾದ ಆತನಿಗೆ ಅದು ನಟನೆ ಮಾತ್ರ. ಆದರೆ ಸಿಡ್ನಿಗೆ ಅದು ಕೇವಲ ಪಾತ್ರವಲ್ಲ. ಅದು ಗತಕಾಲದ ದುಸ್ವಪ್ನ. ಮತ್ತೆ ಮತ್ತೆ ತನ್ನ ಸಮುದಾಯವನ್ನು ನಿಗ್ಗರ್, ನೀಗ್ರೋ ಎಂದು ಅವಮಾನಿಸಿದ ಆ ಭಯಂಕರ ದಿನಗಳನ್ನು ನೆನಪಿಸುತ್ತದೆ. ಸಿಡ್ನಿಗೆ ಈ ಕಗ್ಗತ್ತಲಿನ ಜಗತ್ತಿನಿಂದ ಬಿಡುಗಡೆಬೇಕು. ಎಂತಹ ಹೊಣೆಗಾರಿಕೆಯನ್ನು ನಿಭಾಯಿಸಿದರು ಎಂದು ನೆನೆದಾಗ ಬೆರಗಾಗುತ್ತದೆ. ಉದಾಹರಣೆಗೆ 1950ರಲ್ಲಿ ಬಿಡುಗಡೆಯಾದ No Way Out , ಸಿನೆಮಾದಲ್ಲಿ ಬಿಳಿಯ ಜನಾಂಗೀಯವಾದಿ ರೋಗಿಯನ್ನು ಗುಣಪಡಿಸುವ ತರುಣ ವೈದ್ಯನ ಪಾತ್ರದಲ್ಲಿ ಅಭಿನಯಿಸಿದ್ದರು. 38 ವರ್ಷಗಳ ನಂತರ ಪ್ರಕಟಗೊಂಡ ಲಂಕೇಶರ ‘ಮುಟ್ಟಿಸಿಕೊಂಡವನು’ ಕತೆ ಆ ಸಿನೆಮಾವನ್ನು ನೆನಪಿಸುತ್ತದೆ.
1965ರಲ್ಲಿ ಬಿಡುಗಡೆಯಾದ A Patch of Blue ಸಿನೆಮಾದಲ್ಲಿ ಅಭಿನಯಿಸಿದ ಸಿಡ್ನಿಯ ವಿದ್ಯಾವಂತ ಆಫೀಸ್ ಕೆಲಸಗಾರನ ಪಾತ್ರ ಮತ್ತು ಅಂಧ ಬಿಳಿಯ ಮಹಿಳೆಯ ಪಾತ್ರದ ನಡುವಿನ ಸಂಬಂಧವು ಹೊಸ ನಿರೂಪಣೆಯನ್ನು ಸೃಷ್ಟಿಸಿತು. In the Heat of the Night ಸಿನೆಮಾದಲ್ಲಿನ ಫಿಲೆಡೆಲ್ಫಿಯಾದ ಡಿಟೆಕ್ಟಿವ್ ಟಿಬ್ಸ್ ಪಾತ್ರದಲ್ಲಿ ಸಿಡ್ನಿ ಶತಮಾನಗಳಿಂದ ಕಪ್ಪುಜನರು ಅನುಭವಿಸಿದ ಯಾತನೆ, ಅವಮಾನವನ್ನು ತೊಳೆದು ಹಾಕುವಂತೆ ಅಭಿನಯಿಸಿದ್ದರು. ಇವರನ್ನು ನೀಗ್ರೋ ಎಂದು ಇತರ ಸಹೋದ್ಯೋಗಿಗಳು ಅವಮಾನಿಸುವಾಗ ಅವರ ಈ ರೇಸಿಸಂ ಅನ್ನು ಪ್ರತಿಭಟಿಸುತ್ತಾ ‘‘ನನ್ನ ಹೆಸರು ಮಿ.ಟಿಬ್ಸ್’’ ಎಂದು ಆತ್ಮಘನತೆಯಿಂದ ಹೇಳುವ ಪಾತ್ರದಲ್ಲಿ ಸಿಡ್ನಿ ಅಭಿನಯಿಸಿರಲಿಲ್ಲ. ಆ ಪಾತ್ರವನ್ನೇ ಜೀವಿಸಿದ್ದರು. ಕೊನೆಗೂ ಬೂದಿ ಮಾತ್ರ ಬೇಯುವ ನೋವನ್ನು ಬಲ್ಲದು ಅಲ್ಲವೇ? ಈ ಸಿನೆಮಾದ ಬಿಳಿಯ ಪ್ಲಾಂಟೇಷನ್ ಉದ್ಯಮಿಯು ಮಿ.ಟಿಬ್ಸ್‌ನ ಕೆನ್ನಗೆ ಹೊಡೆದಾಗ ತತ್‌ಕ್ಷಣ ಟಿಬ್ಸ್ ಮರಳಿ ಆ ಬಿಳಿಯನ ಕೆನ್ನೆಗೆ ಬಾರಿಸುತ್ತಾನೆ. ಇದು ಶತಮಾನಗಳ ಚಾಟಿ ಏಟಿನ ಆ ಕ್ರೌರ್ಯಕ್ಕೆ ಉಳಿ ಪೆಟ್ಟು ಕೊಟ್ಟಂತಿತ್ತು.
ಇದೆಲ್ಲದರ ನಡುವೆಯೂ ಅಮೆರಿಕದ ದಕ್ಷಿಣ ಭಾಗದಲ್ಲಿ ಸಿಡ್ನಿ ಸಿನೆಮಾಗಳಿಗೆ ವಿತರಕರು ಸಿಗುವುದು ದುಸ್ತರವಾಗುತ್ತಿತ್ತು ಮತ್ತು ಬಿಳಿಯರ ಮಾಲಕತ್ವದ ಸ್ಟುಡಿಯೋಗಳ ನಿರ್ಮಾಣದ ಸಿನೆಮಾಗಳಲ್ಲಿ ಅಭಿನಯಿಸಬೇಕಾಗುತ್ತಿತ್ತು. ಅನೇಕ ಸಂದರ್ಭಗಳಲ್ಲಿ ಸಿಡ್ನಿಯವರಿಗೆ ರೋಮ್ಯಾಂಟಿಕ್ ಪಾತ್ರಗಳನ್ನು ಕೊಡಲು ಹಿಂಜರಿಯುತ್ತಿದ್ದರು. ಆದರೆ ಈ ಎಲ್ಲಾ ರೇಸಿಸಂ ಟಾಬೂಗಳನ್ನು ಹಿಮ್ಮಟ್ಟಿಸಿದ ಪೊಯಿಟರ್ ನೀವು ಕೊಡದಿದ್ದರೆ ನಾನು ನಿಲ್ಲುವೆನೇನು ಎಂಬಂತೆ ವೈದ್ಯ, ಪೊಲೀಸ್, ಸೈನ್ಯಾಧಿಕಾರಿ, ಡಿಟೆಕ್ಟಿವ್, ಶಿಕ್ಷಕ ದಂತಹ ಪಾತ್ರಗಳಲ್ಲಿ ಮಿಂಚಿದರು ಮಾತ್ರವಲ್ಲ ಬಿಳಿಯರ ಏಕಾಧಿಪತ್ಯಕ್ಕೆ ತಡೆ ಒಡ್ಡಿದರು. ಆಫ್ರೋ- ಅಮೇರಿಕನ್ ಸಮುದಾಯವು ಘನತೆಯನ್ನು ಮರಳಿ ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೂ ಅದೇ ಸಮುದಾಯದ ಕೆಲವರು ‘‘ಸಿಡ್ನಿ ಕೇವಲ ಶುದ್ಧೀಕರಿಸಿದ ಪಾತ್ರಗಳಲ್ಲಿ ಅಭಿನಯಿಸುತ್ತಾರೆ, ಬಿಳಿಯರ ಜಗತ್ತಿನಲ್ಲಿ ಒಬ್ಬ ಸಂಭಾವಿತ ಕಪ್ಪುವರ್ಣೀಯನಂತೆ ಕಾಣುತ್ತಾರೆ, ಈತನಿಗೆ ಪ್ರೇಯಸಿಯಿಲ್ಲ, ಮದುವೆಯಿಲ್ಲ. ಬಿಳಿಯರಿಗೆ ಶರಣರಾಗಿದ್ದಾರೆ ಎಂದು ಟೀಕಿಸಿದರು. ಇದರಿಂದ ನೊಂದ ಸಿಡ್ನಿ ಕೆಲ ಕಾಲ ತಮ್ಮ ತವರೂರು ಬಹಮಾಸ್‌ಗೆ ಮರಳಿ ಬಣ್ಣದ ಜಗತ್ತಿನಿಂದ ಕಣ್ಮರೆಯಾಗಿದ್ದರು. 2000ರಲ್ಲಿ ಓಫ್ರಾ ವಿನ್ಫ್ರಿಯವರಿಗೆ ನೀಡಿದ ಸಂದರ್ಶನದಲ್ಲಿ ‘‘ನನ್ನ ಮೇಲೆ ಬಲು ದೊಡ್ಡ ಜವಾಬ್ದಾರಿಯಿತ್ತು. ಟೀಕೆಗಳನ್ನು ನಾನು ಸ್ವೀಕರಿಸುತ್ತೇನೆ, ಆ ಹೊಣೆಗಾರಿಕೆಯನ್ನು ನಾನು ಗೌರವಿಸಿದ್ದೇನೆ ಎಂಬುದಕ್ಕೆ ನನ್ನ ಬದುಕೇ ಸಾಕ್ಷಿಯಾಗಿದೆ. ನನ್ನ ಹಿಂದೆ ಅನೇಕರು ಅನುಸರಿಸುವಂತಹ ವಾತಾವರಣ ನಿರ್ಮಿಸಲು ನಾನು ಕೆಲ ನಿರ್ದಿಷ್ಟ ಸಂಗತಿಗಳನ್ನು ನೆರವೇರಿಸಲೇಬೇಕಾಗಿತ್ತು’’ ಎಂದು ಮಾರ್ಮಿಕವಾಗಿ ಉತ್ತರಿಸುತ್ತಾರೆ.
ಕೇವಲ ಕಲಾವಿದರಾಗಿ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳದ ಸಿಡ್ನಿ ಮಾನವ ಹಕ್ಕುಗಳ ಹೋರಾಟಗಾರರಾಗಿದ್ದರು. 1963ರ ‘ವಾಷಿಂಗ್ಟನ್ ಮಾರ್ಚ್’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 1964ರಲ್ಲಿ ಮೂವರು ತರುಣ ಮಾನವ ಹಕ್ಕುಗಳ ಹೋರಾಟಗಾರರನ್ನು ಕೊಲೆ ಮಾಡಿದಾಗ ಮಿಸಿಸ್ಸಿಪ್ಪಿಗೆ ಹೋಗಿ ಪ್ರತಿಭಟಿಸಿದ್ದರು. ಅನೇಕ ಸಂದರ್ಭಗಳಲ್ಲಿ ಸಂದರ್ಶಕರು ಸಿಡ್ನಿಯವರಿಗೆ ಕೇವಲ ರೇಸಿಸಂ ಕುರಿತೇ ಪ್ರಶ್ನಿಸುತ್ತಿದ್ದರು. ಇದು ಅವರಿಗೆ ಬೇಸರವನ್ನುಂಟು ಮಾಡುತ್ತಿತ್ತು. ‘‘ನನಗೆ ಬದುಕಿನ ಕುರಿತು ಮಾತನಾಡಲು ಅನೇಕ ವಿಷಯಗಳಿವೆ’’ ಎನ್ನುತ್ತಿದ್ದ ಸಿಡ್ನಿ ಒಬ್ಬ ಮಾನವತಾವಾದಿಯಾಗಿದ್ದರು.
2011ರಲ್ಲಿ ನಿರ್ದೇಶಕ ಟೊರಂಟಿನೋ ‘‘ಸಿನೆಮಾ ಇತಿಹಾಸದಲ್ಲಿ ಕೆಲವೇ ಕಲಾವಿದರು ಮಾತ್ರ ಗುರುತಿಸಲ್ಪಡುತ್ತಾರೆ. ಅವರ ಬಣ್ಣದ ಬದುಕು ಮುಂದಿನ ದಶಕಗಳ ಕಾಲ ಸಿನೆಮಾ ಜಗತ್ತನ್ನು ಪ್ರಭಾವಿಸಿರುತ್ತದೆ... ಸಿನೆಮಾಗಳಿಗೆ ಸಂಬಂಧಿಸಿ ಹೇಳಬೇಕೆಂದರೆ ಇಲ್ಲಿ ಪೊಯಿಟರ್ ಮುಂಚಿನ ಜಗತ್ತು, ಪೊಯಿಟರ್ ನಂತರದ ಹಾಲಿವುಡ್ ಮಾತ್ರ ಇರುತ್ತದೆ’’ ಎಂದು ಹೇಳುತ್ತಾನೆ.
ಸಿಡ್ನಿ ಪೊಯಿಟರ್‌ಗೆ ಭಾವಪೂರ್ಣ ನಮನಗಳು
ಜೈ ಭೀಮ್ ಕಾಮ್ರೇಡ್