ಈ ಮುಖಭಂಗ ಅನಿವಾರ್ಯವಾಗಿತ್ತೇ?

Update: 2022-01-09 19:30 GMT

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ ಒಕ್ಕೂಟ ಸರಕಾರದ ಸೂತ್ರ ಹಿಡಿದ ನಂತರ ಭಾರತದ ನಾನಾ ಕಡೆ ತಮ್ಮದೇ ಆದ ರೀತಿಯಲ್ಲಿ ನೊಂದ ಜೀವಿಗಳ ಏಳಿಗೆಗಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಇನ್ನಿಲ್ಲದ ಕಿರುಕುಳ ಆರಂಭವಾಗಿದೆ. ಅದರಲ್ಲೂ ಅಸಹಾಯಕ ಮಕ್ಕಳ ಕಣ್ಣೀರು ಒರೆಸುವ ಮದರ್ ತೆರೇಸಾ ಅವರು ಕಟ್ಟಿದ ಸಂಸ್ಥೆಯೂ ಇವರ ಕೆಂಗಣ್ಣಿಗೆ ಗುರಿಯಾಗಿದೆ.


ಸಂವಿಧಾನ ವಿರೋಧಿಯಾದ ಕೋಮುವಾದಿ ಕಾರ್ಯಸೂಚಿಯನ್ನು ಜಾರಿಗೆ ತರಲು ಹೋಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿದೆ. ಅಂತರ್‌ರಾಷ್ಟ್ರೀಯ ಒತ್ತಡಕ್ಕೆ ಮಣಿದು ಕೋಲ್ಕತಾದ ಮದರ್ ತೆರೇಸಾ ಅವರು ಸ್ಥಾಪಿಸಿದ ಮಿಶನರಿಸ್ ಆಫ್ ಚಾರಿಟಿ ಸಂಸ್ಥೆಗೆ ವಿದೇಶಿ ದೇಣಿಗೆ ಸಂಬಂಧ ನಿರ್ಬಂಧವನ್ನು ವಾಪಸ್ ಪಡೆದಿದೆ. ಇದು ತನ್ನಿಂದ ತಾನೇ ಕೈಗೊಂಡ ತೀರ್ಮಾನವಲ್ಲ. ಈ ಕುರಿತು ಬ್ರಿಟನ್ ಸಂಸತ್ತಿನಲ್ಲಿ ಪ್ರಸ್ತಾಪವಾಗಿ ತೀವ್ರ ಆಕ್ಷೇಪ ವ್ಯಕ್ತವಾದ ನಂತರ ಹಾಗೂ ಇತರ ದೇಶಗಳು ಒತ್ತಡಕ್ಕೆ ಮಣಿದ ಸರಕಾರ ಈ ತೀರ್ಮಾನ ದಿಂದ ಹಿಂದೆ ಸರಿದಿದೆ.

ನಾಗರಿಕ ಸಮಾಜದಲ್ಲಿ ಇಂಥ ದುಡುಕಿನ ತೀರ್ಮಾನಗಳಿಂದ ಉಂಟಾಗುವ ಅಂತರ್‌ರಾಷ್ಟ್ರೀಯ ಪರಿಣಾಮಗಳ ಅರಿವಿಲ್ಲದ, ಆಡಳಿತದ ಅನುಭವವಿಲ್ಲದ ಸರಕಾರದ ಈ ಕ್ರಮದಿಂದ ಜಾಗತಿಕವಾಗಿ ಭಾರತದ ಹೆಸರಿಗೆ ಕಳಂಕ ಹಚ್ಚಿದಂತಾಗಿದೆ.
ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ ಒಕ್ಕೂಟ ಸರಕಾರದ ಸೂತ್ರ ಹಿಡಿದ ನಂತರ ಭಾರತದ ನಾನಾ ಕಡೆ ತಮ್ಮದೇ ಆದ ರೀತಿಯಲ್ಲಿ ನೊಂದ ಜೀವಿಗಳ ಏಳಿಗೆಗಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಇನ್ನಿಲ್ಲದ ಕಿರುಕುಳ ಆರಂಭವಾಗಿದೆ. ಅದರಲ್ಲೂ ಅಸಹಾಯಕ ಮಕ್ಕಳ ಕಣ್ಣೀರು ಒರೆಸುವ ಮದರ್ ತೆರೇಸಾ ಅವರು ಕಟ್ಟಿದ ಸಂಸ್ಥೆಯೂ ಇವರ ಕೆಂಗಣ್ಣಿಗೆ ಗುರಿಯಾಗಿದೆ.

ಸಾಮಾನ್ಯವಾಗಿ ಎನ್‌ಜಿಒಗಳೆಂದು ಕರೆಯಲ್ಪಡುವ ಈ ಸ್ವಯಂ ಸೇವಾ ಸಂಸ್ಥೆಗಳು ಸಮಾಜದಿಂದ ಮತ್ತು ಸರಕಾರದಿಂದ ನಿರ್ಲಕ್ಷಿಸಲ್ಪಟ್ಟ ಜನ ವರ್ಗಗಳ ನಡುವೆ ಕೆಲಸ ಮಾಡುತ್ತವೆ. ಅನಾಥ ಮಕ್ಕಳ ಪುನರ್ವಸತಿ, ಲೈಂಗಿಕ ಕಾರ್ಯಕರ್ತೆಯರ ಬದುಕಿಗೆ ಒಂದು ಸುರಕ್ಷಿತ ನೆಲೆ ಕಲ್ಪಿಸುವುದು, ಮಾನವ ಹಕ್ಕುಗಳ ಪರವಾಗಿ ಹೋರಾಡುವುದು, ಜಲ ಸಂರಕ್ಷಣೆ, ಪರಿಸರ ರಕ್ಷಣೆ, ತಳ ಸಮುದಾಯಗಳ ಏಳಿಗೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಎನ್‌ಜಿಒಗಳು ಸೇವೆ ಸಲ್ಲಿಸುತ್ತಾ ಬಂದಿವೆ. ಇದಕ್ಕಾಗಿ ವಿದೇಶದಿಂದ ಹರಿದು ಬರುವ ನಿಧಿಯನ್ನು ಪಡೆಯುತ್ತವೆ. ಅನೇಕ ಬಾರಿ ಸರಕಾರವೂ ಇವರ ನೆರವನ್ನು ಪಡೆಯುತ್ತದೆ. ವಿದೇಶಗಳಿಂದ ಹಣ ಪಡೆಯುವ ಸಂಸ್ಥೆಗಳು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ (ಎಫ್‌ಸಿಆರ್‌ಎ) ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಕೋಲ್ಕತಾದಲ್ಲಿ ಮದರ್ ತೆರೇಸಾ ಅವರು ಸ್ಥಾಪಿಸಿದ ಮಿಷನರೀಸ್ ಆಫ್ ಚಾರಿಟಿಯ ನೋಂದಣಿಯನ್ನು ನವೀಕರಿಸಲು ಮೋದಿ ಸರಕಾರ ಇತ್ತೀಚೆಗೆ ನಿರಾಕರಿಸಿತು. ಹೀಗೆ ನಿರಾಕರಿಸಲ್ಪಟ್ಟ ಸಂಸ್ಥೆಗಳಲ್ಲಿ ಲೆಪ್ರಸಿ ಮಿಷನ್, ಭಾರತೀಯ ವೈದ್ಯಕೀಯ ಸಂಘ ( ಐಎಂಎ) ಆಕ್ಸ್‌ಫಾಮ್ ಇಂಡಿಯಾ ಮುಂತಾದ ಸಂಸ್ಥೆಗಳು ಸೇರಿವೆ.
ಮದರ್ ತೆರೇಸಾ ಅವರು ಸ್ಥಾಪಿಸಿದ ಮಿಷನರೀಸ್ ಆಫ್ ಚಾರಿಟಿ ಸೇರಿದಂತೆ ಕೆಲ ಸಂಸ್ಥೆಗಳು ಸಮಾಜದ ದಿಕ್ಕು ದೆಸೆಯಿಲ್ಲದ ನಿರ್ಲಕ್ಷಿತ ಜನ ವರ್ಗಗಳ ನಡುವೆ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿವೆ. ಮದರ್ ತೆರೇಸಾ ಅವರ ಸಾವಿನ ನಂತರವೂ ಕೂಡ ಅವರು ಸ್ಥಾಪಿಸಿದ ಮಿಷನರೀಸ್ ಆಫ್ ಚಾರಿಟಿ ಸಂಸ್ಥೆ ಕೋಲ್ಕತಾ ಮಾತ್ರವಲ್ಲ ಭಾರತದ ಅನೇಕ ಕಡೆ ತಬ್ಬಲಿ ಮಕ್ಕಳಿಗೆ ಒಂದು ನೆಲೆ ಕಲ್ಪಿಸಲು ಹಾಗೂ ಕಡು ಬಡವರು ಮತ್ತು ನಿರ್ಗತಿಕರಿಗೆ, ವಯೋವೃದ್ಧರಿಗೆ ಸಲ್ಲಿಸುತ್ತ ಬಂದ ಸೇವೆಯನ್ನು ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಕೊಂಡಾಡುತ್ತಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಕಮ್ಯುನಿಸ್ಟ್ ನಾಯಕ ಜ್ಯೋತಿ ಬಸು ಅವರು ಮಾತ್ರವಲ್ಲ ಹಿಂದಿನ ಪ್ರಧಾನಿಗಳಾದ ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಮದರ್ ತೆರೇಸಾ ಅವರ ಸೇವೆಯ ಬಗ್ಗೆ ವಿಶೇಷ ಗೌರವಾದರ ಹೊಂದಿದ್ದರು.

ಈಗ ಉಂಟಾದ ಸಮಸ್ಯೆಯೇನಂದರೆ ಒಕ್ಕೂಟ ಸರಕಾರ ಕೆಲವು ಸ್ವಯಂ ಸೇವಾ ಸಂಸ್ಥೆಗಳಿಗೆ ನೋಂದಣಿ ನಿರಾಕರಿಸಿದೆ. ಇನ್ನು ಕೆಲ ಸಂಸ್ಥೆಗಳಿಗೆ ನೋಂದಣಿ ನವೀಕರಿಸಲು ಒಪ್ಪಿಗೆ ನೀಡಿಲ್ಲ. ನೋಂದಣಿ ನಿರಾಕರಿಸಿದ ಪರಿಣಾಮವಾಗಿ ಈ ಸಂಸ್ಥೆಗಳಿಗೆ ವಿದೇಶಗಳಿಂದ ನೆರವು ಹರಿದು ಬರುವುದು ಸ್ಥಗಿತಗೊಂಡಿದೆ. ಸುಮಾರು 22 ಸಾವಿರಕ್ಕಿಂತಲೂ ಹೆಚ್ಚು ನೋಂದಣಿ ಆಗಿರುವ ಸ್ವಯಂ ಸೇವಾ ಸಂಸ್ಥೆಗಳು ಭಾರತದಲ್ಲಿವೆ. ಕಳೆದ 2021ರಲ್ಲಿ ಕೆಲವು ಸಂಸ್ಥೆಗಳು ನೋಂದಣಿ ನವೀಕರಣಕ್ಕೆ ಅರ್ಜಿ ಸಲ್ಲಿಸಿರಲಿಲ್ಲ. ಇನ್ನು 179 ಸ್ವಯಂ ಸೇವಾ ಸಂಸ್ಥೆಗಳ ನೋಂದಣಿ ನವೀಕರಣ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ಮದರ್ ತೆರೇಸಾ ಮತ್ತು ಇತರ ಸ್ವಯಂ ಸೇವಾ ಸಂಸ್ಥೆಗಳ ಮೇಲೆ ಮೋದಿ ನೇತೃತ್ವದ ಬಿಜೆಪಿ ಸರಕಾರ ವಕ್ರದೃಷ್ಟಿ ಬೀರಿರುವದೇಕೆ? ಇದಕ್ಕೆ ಒಂದು ಕಾರಣ ಆರೆಸ್ಸೆಸ್ ಮದರ್ ತೆರೇಸಾ ಮತ್ತು ಇತರ ಎನ್‌ಜಿಒಗಳನ್ನು ಮೊದಲಿನಿಂದಲೂ ವಿರೋಧಿಸುತ್ತ ಬಂದಿದೆ. ಸೇವೆಯ ಹೆಸರಿನಲ್ಲಿ ಮತಾಂತರ ಮಾಡುತ್ತಾರೆ ಎಂಬ ಅತ್ಯಂತ ವ್ಯವಸ್ಥಿತ ಅಪಪ್ರಚಾರವನ್ನು ಕೋಮುವಾದಿ ಶಕ್ತಿಗಳು ಮಾಡುತ್ತ ಬಂದಿವೆ. ಎರಡನೆಯದಾಗಿ 2002ರಲ್ಲಿ ಗುಜರಾತ್‌ನಲ್ಲಿ ಅಲ್ಪಸಂಖ್ಯಾತರ ಹತ್ಯಾಕಾಂಡ ನಡೆದಾಗ ಸಾವಿರಾರು ಜನ ಬೀದಿಗೆ ಬಿದ್ದರು. ಹೀಗೆ ಬೀದಿಗೆ ಬಿದ್ದವರ ನೆರವಿಗೆ ಬಂದವರು ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಯಕರ್ತರು. ಹತ್ಯಾಕಾಂಡದ ಪ್ರಕರಣಗಳ ತನಿಖೆಗಾಗಿ ಆಗ್ರಹಿಸಿ ಕೋರ್ಟ್ ಮೆಟ್ಟಿಲೇರಿದವರು ಹೆಸರಾಂತ ನ್ಯಾಯವಾದಿ ತೀಸ್ತಾ ಸೆಟಲ್ವಾಡ್ (ಇವರದು ಕೂಡ ಒಂದು ಎನ್‌ಜಿಒ ಇದೆ). ಹೀಗಾಗಿ ಬಿಜೆಪಿಗೆ ವಿಶೇಷವಾಗಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಎನ್‌ಜಿಒಗಳ ಮೇಲೆ ಒಳಗೊಳಗೆ ತುಂಬಾ ಸಿಟ್ಟಿದೆ. ನಾಗಪುರದ ಗುರುಗಳು ಇದನ್ನೇ ಕಾಯುತ್ತಿದ್ದರು. ಇವರೆಲ್ಲ ಸೇರಿ ತಮಗೆ ಅಡ್ಡಿಯಾದ ಸ್ವಯಂ ಸೇವಾ ಸಂಸ್ಥೆಗಳ ನೆರವಿನ ಮೂಲವನ್ನೇ ಸ್ಥಗಿತಗೊಳಿಸಲು ಈ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

ಬಹಳ ಚಿಕ್ಕ ವಯಸ್ಸಿನಲ್ಲಿ ಕ್ರೈಸ್ತ ಧರ್ಮದ ಗುರುಗಳ ಅಣತಿಯಂತೆ ಸೇವೆ ಸಲ್ಲಿಸಲು ವಿದೇಶದಿಂದ ಕೋಲ್ಕತಾಗೆ ಬಂದ ಮದರ್ ತೆರೇಸಾ ಆರಂಭದಲ್ಲಿ ಕುಷ್ಠರೋಗಿಗಳ ಸೇವೆಯಲ್ಲಿ ತೊಡಗಿದರು. ಆಗ ಯಾವುದೇ ವ್ಯಕ್ತಿಗೆ ಕುಷ್ಠರೋಗ ಬಂದರೆ ಯಾವುದೇ ಚಿಕಿತ್ಸೆ ನೀಡದೇ ಊರಾಚೆ ಬಿಸಾಕಿ ಬರುತ್ತಿದ್ದರು. ಅಲ್ಲಿ ಅವರು ನರಳಿ ನರಳಿ ಸಾಯುತ್ತಿದ್ದರು. ಇದನ್ನು ಗಮನಿಸಿದ ಮದರ್ ತೆರೇಸಾ ಊರಾಚೆ ಬಿಸಾಕಲ್ಪಟ್ಟವರನ್ನು ಹುಡುಕಿ ಕರೆ ತಂದು ಚಿಕಿತ್ಸೆ ನೀಡಿ ಗುಣಪಡಿಸುತ್ತಿದ್ದರು. ಮದರ್ ತೆರೇಸಾ ಅವರ ಈ ಸೇವೆಯನ್ನು ಕಂಡರೆ ಆಗದ ಸಮಾಜದ ಸಂಪ್ರದಾಯವಾದಿ ಶಕ್ತಿಗಳು ಮದರ್ ತೆರೇಸಾ ಅವರ ಮೇಲೆ ಕಲ್ಲುಗಳನ್ನು ಬಿಸಾಕಿ, ಸಗಣಿ ಎಸೆದು ಸೇವೆಗೆ ಅಡ್ಡಿಪಡಿಸುತ್ತಿದ್ದರು. ಆದರೆ ನಿರಾಶರಾಗದ ಮದರ್ ತರೆಸಾ ತಮ್ಮ ಸೇವೆಯನ್ನು ಮುಂದುವರಿಸಿ ಬಹು ಎತ್ತರಕ್ಕೆ ಬೆಳೆದರು. ಲಕ್ಷಾಂತರ ಮಕ್ಕಳ, ನಿರ್ಲಕ್ಷಿತರ ಬದುಕಿಗೆ ಬೆಳಕಾದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಕೂಡ ಜಗತ್ತಿನ ಅತ್ಯಂತ ದೊಡ್ಡ ಸ್ವಯಂ ಸೇವಕ ಸಂಸ್ಥೆ ಎಂದು ಹೇಳಿಕೊಳ್ಳುತ್ತ ಬಂದಿದೆ. ಅದು ಕೂಡ ವಿದೇಶದಿಂದ ಕೋಟ್ಯಾಂತರ ರೂಪಾಯಿ ನೆರವನ್ನು ಪಡೆಯುತ್ತಿದೆ. 1989ರಲ್ಲಿ ಭಾರತ ಅಭಿವೃದ್ಧಿ ಮತ್ತು ಪರಿಹಾರ ನಿಧಿ (ಐಡಿಆರ್‌ಎಫ್) ಎಂಬ ಸಂಸ್ಥೆಯನ್ನು ಅಮೆರಿಕದಲ್ಲಿ ನೋಂದಣಿ ಮಾಡಿಸಲಾಗಿದೆ. 2000ನೇ ಇಸವಿಯಲ್ಲಿ ಈ ಸಂಸ್ಥೆ ಸಂಗ್ರಹಿಸಿದ ಮೊತ್ತ 3.8 ಮಿಲಿಯನ್ ಡಾಲರ್. ಈ ಸಂಸ್ಥೆಗೂ ಸಂಘ ಪರಿವಾರಕ್ಕೂ ಇರುವ ಸಂಬಂಧವನ್ನು ಔಟ್ ಲುಕ್ (22-7-2002) ವಾರ ಪತ್ರಿಕೆ ಬಹಿರಂಗ ಪಡಿಸಿತು. ಇದನ್ನು ಐಡಿಆರ್‌ಎಫ್ ನಿರಾಕರಿಸಿದರೂ ಇದಕ್ಕೂ ಸಂಘ ಪರಿವಾರಕ್ಕೂ ಇರುವ ಸಂಬಂಧವನ್ನು ದಾಖಲೆಗಳು ಖಚಿತಪಡಿಸಿವೆ.
ಆರೆಸ್ಸೆಸ್ ವಿದೇಶದಿಂದ ಪಡೆಯುವ ಕೋಟ್ಯಾಂತರ ರೂಪಾಯಿಗಳ ಮೇಲೆ ಮತ್ತು ಆ ಹಣವನ್ನು ಕೋಮು ದ್ವೇಷದ ರಾಜಕೀಯಕ್ಕೆ ಬಳಸಿಕೊಳ್ಳುವದರ ಮೇಲೆ ಯಾವುದೇ ನಿರ್ಬಂಧ ವಿಧಿಸದ ಒಕ್ಕೂಟ ಸರಕಾರ ನಿರ್ಗತಿಕರ ಸೇವೆಯಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಗಳ ಕತ್ತು ಹಿಸುಕಲು ಹೊರಟಿದೆ.

ಭಾರತದಲ್ಲಿ ಕೆಲಸ ಮಾಡುವ ಸ್ವಯಂ ಸೇವಾ ಸಂಸ್ಥೆಗಳ ಚಟುವಟಿಕೆಗಳ ಬಗ್ಗೆ ಪ್ರಗತಿಪರ ಎಡಪಂಥೀಯ ವಲಯಗಳಲ್ಲೂ ಕೆಲ ಅಸಮಾಧಾನ ಇದ್ದರೂ ಕೂಡ ಸಮಾಜವನ್ನು ಕೋಮು ಆಧಾರದಲ್ಲಿ ಒಡೆಯುವ ಛಿದ್ರಕಾರಿ ಚಟುವಟಿಕೆಗಳ ವಿರುದ್ಧ ಮತ್ತು ಸಮಾಜದ ನಿರ್ಲಕ್ಷಿತ ಸಮುದಾಯಗಳ ಸೇವೆಯಲ್ಲಿ ಈ ಸಂಸ್ಥೆಗಳು ದೃಢವಾಗಿ ನಿಂತಿವೆ. ಕೆಲ ಸಂಸ್ಥೆಗಳ ಸೂತ್ರಧಾರರು ವಿದೇಶಿ ನೆರವು ಪಡೆದು ಐಷಾರಾಮಿ ಜೀವನ ನಡೆಸುತ್ತಾರೆಂಬ ಆರೋಪಗಳೂ ಇವೆ. ಅದೇನೇ ಇರಲಿ ಮದರ್ ತೆರೇಸಾ ರಂಥವರು ಸ್ಥಾಪಿಸಿದ ಸಂಸ್ಥೆಯ ಬಾಗಿಲು ಹಾಕಿಸಲು ಹೊರಟ ಮೋದಿ ಸರಕಾರದ ನಡೆ ಸಮರ್ಥನಿಯವಲ್ಲ.
ಒಂದೆಡೆ ಮುಸ್ಲಿಮರ ಪ್ರಾರ್ಥನೆಗೆ ಅಡ್ಡಿ, ಇನ್ನೊಂದು ಕಡೆ ಲವ್ ಜಿಹಾದ್ ಹೆಸರಿನಲ್ಲಿ ಹಾದಿ ಬೀದಿಗಳಲ್ಲಿ ಗೂಂಡಾಗಿರಿ, ಮಗದೊಂದು ಕಡೆ ಮತಾಂತರ ವಿರೋಧ ದ ಹೆಸರಿನಲ್ಲಿ ಪುಂಡಾಟಿಕೆ, ದಕ್ಷಿಣ ಕನ್ನಡದಲ್ಲಿ ಕೊರಗಜ್ಜನ ವೇಷ ಹಾಕಿದ್ದರೆಂದು ಸುಳ್ಳು ಸುದ್ದಿ ಹರಡಿ ಅಶಾಂತಿಗೆ ಯತ್ನ, ಪಠ್ಯಪುಸ್ತಕದಲ್ಲಿ ಜೈನ ಸಮುದಾಯದ ಇತಿಹಾಸದ ಪಾಠಗಳಿಗೆ ಕತ್ತರಿ ಪ್ರಯೋಗ , ಸಿಖ್ ಸಮುದಾಯದ ಮೇಲೆ ಭಯೋತ್ಪಾದಕತೆಯ ಗೂಬೆ ಕೂರಿಸುವ ಯತ್ನ, ಪ್ರಧಾನಿ ಭದ್ರತಾ ಲೋಪದ ನೆಪ ಮುಂದೆ ಮಾಡಿ ಪಂಜಾಬ್‌ನ ದಲಿತ ಮುಖ್ಯಮಂತ್ರಿಯ ಎತ್ತಂಗಡಿಗೆ ಮಸಲತ್ತು ಹೀಗೆ ಭಾರತದ ಅಲ್ಪಸಂಖ್ಯಾತ ಮತ್ತು ತಳ ಸಮುದಾಯಗಳು ನೆಮ್ಮದಿಯಿಂದ ಉಸಿರಾಡಲಾಗದಂತಹ ವಾತಾವರಣ ನಿರ್ಮಿಸಲಾಗುತ್ತಿದೆ. ಇಂಥ ಹುಚ್ಚಾಟಗಳೇ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಇವರಿಗೆ ತಿರುಗು ಬಾಣವಾಗಿ ಪರಿಣಮಿಸಿದರೆ ಅಚ್ಚರಿ ಪಡಬೇಕಾಗಿಲ್ಲ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ