ಉಗಿಯಂತ್ರದಿಂದ ಇತಿಹಾಸದ ದಿಕ್ಕು ಬದಲಿಸಿದ ಜೇಮ್ಸ್ ವಾಟ್
ಎರಡೂವರೆ ಶತಮಾನಗಳ ಹಿಂದೆ ಒಬ್ಬ ಗುಲಾಮ ವ್ಯಾಪಾರಿಯ ಮಗ ಬೇರೆಯೇ ದಿಕ್ಕು ಹಿಡಿದು, ಆಧುನಿಕ ಉಗಿಯಂತ್ರ ಕಂಡುಹಿಡಿದಿರದಿದ್ದರೆ ಯುರೋಪಿನ ಕೈಗಾರಿಕಾ ಕ್ರಾಂತಿಯು ತಡವಾಗುತ್ತಿತ್ತು. ಪರಿಣಾಮವಾಗಿ ಇತಿಹಾಸ ಬೇರೆಯೇ ದಿಕ್ಕು ಹಿಡಿಯುತ್ತಿತ್ತು. ಸಾಮಾಜಿಕ-ಆರ್ಥಿಕ-ರಾಜಕೀಯ ಸಂರಚನೆಯೇ ಬೇರೆಯಾಗಿರುತ್ತಿತ್ತು.
ಇಂದು (ಜನವರಿ 19) ಮಹಾನ್ ಸಂಶೋಧಕ ಜೇಮ್ಸ್ ವಾಟ್ ಹುಟ್ಟಿದ ದಿನ.
ಚುಕು ಬುಕು ರೈಲುಗಳು ಓಡಾಡುತ್ತಿದ್ದ ಸಮಯದಲ್ಲಿ ಶಾಲೆಗೆ ಹೋಗುತ್ತಿದ್ದ ಮಕ್ಕಳಿಗೆ ವಿಜ್ಞಾನದಲ್ಲಿ ಒಂದು ಪಾಠವಿತ್ತು. ಅದು ಉಗಿ ಮತ್ತು ಹೊಗೆ ಉಗುಳುತ್ತಾ ಓಡುವ ಈ ರೈಲಿನ ಉಗಿ ಇಂಜಿನ್ ಹುಟ್ಟಿಗೆ ಕಾರಣನಾದ ವ್ಯಕ್ತಿಯ ಕುರಿತ ಕತೆ. ಒಂದು ದಿನ ಒಬ್ಬ ಯುವಕ ಚಹಾ ಮಾಡಲೆಂದು ಕಿಟ್ಲಿಯಲ್ಲಿ (ಕೆಟಲ್) ನೀರು ಕಾಯಿಸುತ್ತಿರುತ್ತಾನೆ. ಯಾಕೋ ಈ ಅಧಿಕಪ್ರಸಂಗಿ ಆದರ ಮೂತಿಗೆ ಬಿರಡೆಯೊಂದನ್ನು ಸಿಕ್ಕಿಸಿರುತ್ತಾನೆ. ನೀರು ಕುದಿದು ಒಳಗಿನ ಒತ್ತಡ ಹೆಚ್ಚಾದಾಗ ಬಿರಡೆ ಟಪ್ಪೆಂದು ಹಾರಿ, ಉಗಿ ಬುಸ್ಸೆಂದು ಹೊರಗೆ ಬರುತ್ತದೆ. ಆಗ ಉಗಿಯ ಶಕ್ತಿಯ ಬಗ್ಗೆ ಆತನಿಗೆ ಅರಿವಾಗಿ ಅದನ್ನು ಹೇಗೆ ದುಡಿಸಬಹುದು ಎಂದು ಯೋಚಿಸುತ್ತಾನೆ ಮತ್ತು ಉಗಿಯಂತ್ರವನ್ನು ಕಂಡುಹಿಡಿಯುತ್ತಾನೆ! ಆತನೇ ಜೇಮ್ಸ್ ವಾಟ್.
ಇಂದು ಡೀಸೆಲ್, ವಿದ್ಯುತ್ ಇಂಜಿನಿನ ರೈಲುಗಳನ್ನು ಮಾತ್ರ ಕಂಡಿರುವ ಈಗಿನ ವಿದ್ಯಾರ್ಥಿಗಳಿಗೆ ಈ ಪಾಠವೂ ಇಲ್ಲ. ಈ ಜೇಮ್ಸ್ ವಾಟ್ ಯಾರು ಎಂದೂ ಅವರಿಗೆ ಗೊತ್ತಿರಲಾರದು. ಕಳೆದ ಶತಮಾನದ ಆರಂಭದಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಾರ್ವಜನಿಕ ಸಾರಿಗೆ ಒದಗಿಸಿದ ಮಂಗಳೂರಿನ ಶಂಕರ್ ವಿಠಲ್ ಮತ್ತು ಮಂಜುನಾಥ ಮೋಟಾರ್ ಟ್ರಾನ್ಸ್‌ಪೋರ್ಟ್‌ನ ಮೊದಲ ಬಸ್ಸುಗಳು, ಪ್ರಪಂಚದ ಮೊದಲ ಕಾರುಗಳು ಕೂಡಾ ಉಗಿ ಶಕ್ತಿಯಿಂದ ಓಡಾಡುತ್ತಿದ್ದವಂತೆ ಎಂದು ಹೇಳಿದರೆ ಅವರಿಗೆ ಇನ್ನೂ ಅಚ್ಚರಿಯಾದೀತು.
ಅದಿರಲಿ. ಆ ಕತೆ ನಿಜವಲ್ಲ ಕಾಲ್ಪನಿಕ ಎಂದು ಕೆಲವರು ಹೇಳುತ್ತಾರೆ. ಇದು ಅರ್ಧ ಸತ್ಯ. ಇದೂ ನ್ಯೂಟನ್‌ನ ಸೇಬಿನ ಕತೆಯಂತೆಯೇ! ಜೇಮ್ಸ್ ವಾಟ್‌ಗೂ ಹಿಂದೆ ಉಗಿ ಯಂತ್ರಗಳು ಇದ್ದವು. ಆದರೆ, ಅವು ಉತ್ಪಾದಿಸುವ ಶಕ್ತಿಯ ಬಹುಭಾಗ ಅವುಗಳನ್ನು ಬಿಸಿ ಮಾಡುವುದು ಮತ್ತು ತಣ್ಣಗಾಗಿಸುವುದಕ್ಕೇ ಖರ್ಚಾಗುತ್ತಿತ್ತು. ಅವು ಹೆಚ್ಚು ಕಡಿಮೆ ಪ್ರಯೋಜನವೇ ಇರಲಿಲ್ಲ. ಜೇಮ್ಸ್ ವಾಟ್‌ನಿಗೆ ಉಗಿ ಮತ್ತು ಶಾಖದ ಚಲನೆಯ ಬಗ್ಗೆ ಸರಿಯಾಗಿ ಅರ್ಥವಾದದ್ದೇ ಈ ಕೆಟಲ್ ಘಟನೆಯಿಂದ. ಆ ಥಿಯರಿ ಬಳಸಿಯೇ ಆತ ಆಧುನಿಕ ಉಗಿಯಂತ್ರ ತಯಾರಿಸಿದ್ದು; ಅದನ್ನು ಮತ್ತೆ ಮತ್ತೆ ಸುಧಾರಿಸಿ ಎಲ್ಲಾ ಕಡೆ ಬಳಸಬಹುದಾದ ರೂಪಕ್ಕೆ ತಂದದ್ದು. ಅದೊಂದು ದೊಡ್ಡ ಸಾಹಸದ ಕತೆ. ಒಂದು ವೇಳೆ ಜೇಮ್ಸ್ ವಾಟ್ ಉಗಿ ಇಂಜಿನನ್ನು ಕಂಡುಹಿಡಿಯದೇ ಇದ್ದಿದ್ದರೆ ಏನಾಗುತ್ತಿತ್ತು? ಮುಂದೆ ಯಾರಾದರೂ ಕಂಡು ಹಿಡಿಯುತ್ತಿದ್ದರು ಎಂಬುದು ನಿಜ. ಆದರೆ, ಇತಿಹಾಸ ಹಿಡಿದ ದಾರಿ ವಿಳಂಬವಾಗುತ್ತಿತ್ತು ಮತ್ತು ಅದು ಈಗಿನದಕ್ಕಿಂತ ಬೇರೆಯೇ ದಾರಿ ಹಿಡಿಯುತ್ತಿತ್ತು. ಪೆಟ್ರೋಲಿಯಂ ಬಳಸುವ ಒಳ ಉರಿ (ಇಂಟರ್ನಲ್ ಕಂಬಶನ್) ಇಂಜಿನುಗಳು, ವಿದ್ಯುತ್, ಅಣುಶಕ್ತಿಯಿಂದ ನಡೆಯುವ ಇಂಜಿನ್‌ಗಳ ಈ ಯುಗದಲ್ಲಿ ಇದರ ಮಹತ್ವವನ್ನು ತಿಳಿಯಬೇಕೆಂದರೆ, ಈಗ ಪೆಟ್ರೋಲಿಯಂ, ವಿದ್ಯುತ್ ಏಕಾಏಕಿ ಇಲ್ಲವಾದರೆ ಏನಾಗಬಹುದು ಎಂದು ಊಹಿಸಬೇಕಾಗುತ್ತದೆ.
ಉಗಿಯಂತ್ರಕ್ಕೆ ಮೊದಲು- ಸಾರಿಗೆ, ಮಿಲ್ಲುಗಳು, ಕಾರ್ಖಾನೆಗಳು ಎಲ್ಲದರಲ್ಲೂ ಪ್ರಾಣಿಗಳ ಮತ್ತು ಮಾನವ ಶಕ್ತಿಯನ್ನು ಬಳಸಲಾಗುತ್ತಿತ್ತು. ಅವುಗಳ ಜಾಗದಲ್ಲಿ ಉಗಿ ಇಂಜಿನುಗಳು ಬಂದವು. ಇದು ಕೈಗಾರಿಕಾ ಕ್ರಾಂತಿಗೆ ಕಾರಣವಾಯಿತು. ಇಂಗ್ಲೆಂಡಿನಲ್ಲಿ ಆರಂಭವಾದ ಈ ಕ್ರಾಂತಿ ಬೇಗನೆ ಇಡೀ ಯುರೋಪಿಗೆ ಹಬ್ಬಿತು. ಹಳೆಯ ಕಾರ್ಮಿಕರ ಜಾಗದಲ್ಲಿ ಹೊಸ ಕೌಶಲಗಳ ಕಾರ್ಮಿಕ ವರ್ಗ ಹುಟ್ಟಿಕೊಂಡಿತು. ಅದರ ಜೊತೆ ನವ ಬಂಡವಾಳಶಾಹಿಯೂ ಹುಟ್ಟಿತು. ಯಂತ್ರ ಹೊಂದಿದ್ದ ಕೆಲವ್ಯಕ್ತಿಗಳು ಹೆಚ್ಚು ಹೆಚ್ಚು ಬೆಳೆದು ಪ್ರಭುತ್ವಕ್ಕಿಂತಲೂ ಹೆಚ್ಚು ಹಣವಂತರಾದರು. ಇದು ಪ್ರಜಾಪ್ರಭುತ್ವಕ್ಕೆ ಚಾಲನೆ ನೀಡುವುದರ ಜೊತೆಗೆ ಹೊಸ ರೀತಿಯ ಶೋಷಣೆಯ ಹುಟ್ಟಿಗೆ ಕಾರಣವಾಯಿತು. ಮಾನವ ಶಕ್ತಿಯನ್ನು ಯಂತ್ರ ಶಕ್ತಿ ಆಕ್ರಮಿಸಿದುದರಿಂದ ಮಾನವನಿಗಿಂತ ಯಂತ್ರಗಳ ಬೆಲೆ ಹೆಚ್ಚಾಯಿತು. ಈ ಹೊಸ ಸಂಬಂಧಗಳ ಬಗ್ಗೆ ಕಾರ್ಲ್ ಮಾರ್ಕ್ಸ್ ಹುಟ್ಟುಹಾಕಿದ ಥಿಯರಿಯು ವಿಶ್ವದಾದ್ಯಂತ ಹರಡಿ, ರಶ್ಯ ಸೇರಿದಂತೆ ಹಲವು ದೇಶಗಳಲ್ಲಿ ರಾಜಕೀಯ ಸ್ವರೂಪವನ್ನೇ ಬದಲಿಸಿತು. ಉಗಿ ಹಡಗುಗಳು, ಉಗಿರೈಲುಗಳು ಇತ್ಯಾದಿ ಬಂದದ್ದೇ ಸಾರಿಗೆಯ ವೇಗ, ಪ್ರಮಾಣಗಳಲ್ಲಿ ಬಹುಪಾಲು ಹೆಚ್ಚಳವಾಯಿತು. ಸಾಮ್ರಾಜ್ಯಶಾಹಿಯನ್ನು ವಿಸ್ತರಿಸಿ, ರಕ್ಷಿಸುವುದಕ್ಕೆ, ಬೇರೆ ದೇಶಗಳ ಶೋಷಣೆಗೆ ಅನುಕೂಲವಾಯಿತು. ಭಾರತದ ಹತ್ತಿಯು ಮೂರು ಕಾಸಿಗೆ ಇಂಗ್ಲೆಂಡಿನ ಬರ್ಮಿಂಗ್‌ಹ್ಯಾಮ್‌ನ ಉಗಿಯಂತ್ರದ ಬಟ್ಟೆ ಮಿಲ್ಲುಗಳಿಗೆ ಹೋಗಿ ಆಲ್ಲಿನ ಸಿದ್ಧ ಬಟ್ಟೆ ಹತ್ತು ಕಾಸಿಗೆ ಭಾರತಕ್ಕೆ ಬಂದದ್ದು, ಇಲ್ಲಿನ ರೈತರು ಮಾತ್ರವಲ್ಲ; ಸಾಂಪ್ರದಾಯಿಕ ನೇಕಾರಿಕೆ ಹೊಡೆತ ತಿಂದದ್ದು; ಅದೇ ಹೊತ್ತಿಗೆ ಇಂಗ್ಲೆಂಡಿನ ಕಾರ್ಮಿಕರು ಕೆಲಸ ಕಳೆದುಕೊಂಡದ್ದು: ಈ ವಿದ್ಯಮಾನಗಳು ಹುಟ್ಟುಹಾಕಿದ ಸಾಮಾಜಿಕ ಬದಲಾವಣೆ ಮತ್ತು ಕೊಳೆತ... ಇತ್ಯಾದಿಗಳನ್ನು ಉದಾಹರಣೆಯಾಗಿ ನೋಡಬಹುದು. ಈ ರೀತಿಯಲ್ಲಿ ಅನೇಕ ಊಹೆ ಮತ್ತು ತರ್ಕಗಳನ್ನು ಮಾಡಲು ಸಾಧ್ಯವಿದೆ. ಆದುದರಿಂದಲೇ ಆದಿ ಮಾನವನು ಬೆಂಕಿಯ ಉಪಯೋಗ ಕಂಡುಕೊಂಡು, ನಂತರ ಚಕ್ರ ಮತ್ತು ಆಯುಧಗಳನ್ನು ತಯಾರಿಸಿದ ಬಳಿಕದ ಅತ್ಯಂತ ಕ್ರಾಂತಿಕಾರಿ ಸಂಶೋಧನೆ ಈ ಉಗಿಯಂತ್ರ ಎಂದು ವಾದಿಸಬಹುದು. ಅದಕ್ಕಾಗಿ ಜೇಮ್ಸ್ ವಾಟ್ ನಮ್ಮ ನೆನಪಿಗೆ ಅರ್ಹನಾಗುತ್ತಾನೆ.
ಇಂಗ್ಲೆಂಡಿನ ಪ್ರಜೆಯಾದ ಜೇಮ್ಸ್ ವಾಟ್ ಹುಟ್ಟಿದ್ದು 19, ಜನವರಿ, 1736ರಲ್ಲಿ- ಸ್ಕಾಟ್ಲೆಂಡಿನ ಗ್ರೀನ್ ನೋಕ್ ಎಂಬಲ್ಲಿ. ತಂದೆ ಗುಲಾಮರ ವ್ಯಾಪಾರಿಯಾಗಿ ಸಾಕಷ್ಟು ಹಣ ಮಾಡಿದ್ದ. ತಾಯಿಯೂ ಶ್ರೀಮಂತ ಕುಟುಂಬದವರು. ಇವರದ್ದು ಸಾಂಪ್ರದಾಯಿಕ ಧಾರ್ಮಿಕ ಕುಟುಂಬವಂತೆ. ಮನುಷ್ಯರನ್ನು ಪ್ರಾಣಿಗಳಂತೆ ಮಾರುವವರದ್ದು ಯಾವ ಧರ್ಮವೋ!? ಆದರೆ, ವಾಟ್ ಅವರ ದಾರಿ ಹಿಡಿಯಲಿಲ್ಲ. ಧಾರ್ಮಿಕನೂ ಆಗದೆ ಸಂಶೋಧನಕನಾದ. ಗಟ್ಟಿ ವ್ಯಕ್ತಿತ್ವದ, ಕಲಿತವಳಾದ ತಾಯಿಯೇ ಇವನ ಮೊದಲ ಗುರು. ನಂತರ ಶಾಲೆಯಲ್ಲಿ ಇವನಿಗೆ ಲ್ಯಾಟಿನ್ ಗೀಟಿನ್ ತಲೆಗೆ ಹತ್ತಲಿಲ್ಲ. ಹತ್ತಿದ್ದು ಗಣಿತ ಮತ್ತು ಯಂತ್ರ ಜ್ಞಾನ ಮಾತ್ರ. ಬಾಲ್ಯದಲ್ಲಿ ಅನಾರೋಗ್ಯದಿಂದಿದ್ದು, ಜೀವನದ ಉದ್ದಕ್ಕೂ ಆಗಾಗ ತಲೆ ನೋವಿನ ತೊಂದರೆಗೆ ಒಳಗಾದವನು.
ಅವನಿಗೆ 18 ವರ್ಷವಾದಾಗ ತಾಯಿ ತೀರಿಕೊಂಡಳು. ನಂತರ ತಂದೆಯೂ ತೀರಿಕೊಂಡ. ನಂತರ ಇಂಗ್ಲೆಂಡಿಗೆ ಬಂದ ವಾಟ್‌ನ ಜೀವನ ಬದಲಾದುದು ಗ್ಲಾಸ್ಗೋ ವಿಶ್ವವಿದ್ಯಾನಿಲಯಕ್ಕೆ ವಿದೇಶಿ ದಾನಿಯೊಬ್ಬ ನೀಡಿದ ಬಾಹ್ಯಾಕಾಶ ಉಪಕರಣಗಳು ಬಂದಾಗ. ಅದನ್ನು ಜೋಡಿಸಿ, ನೋಡಿಕೊಳ್ಳಲು, ಉಳಿದ ವೈಜ್ಞಾನಿಕ ಉಪಕರಣಗಳನ್ನು ದುರಸ್ತಿ ಮಾಡಲು ಯಂತ್ರಜ್ಞನೊಬ್ಬನ ಅಗತ್ಯವಿತ್ತು. ಅದರಲ್ಲಿ ನಿಪುಣನಾಗಿದ್ಧ ವಾಟ್ ಆ ಕೆಲಸಕ್ಕೆ ಸೇರಿ ಜೊತೆಗೆ ಪದವಿ ಪಡೆದ. ವಿಜ್ಞಾನಿಗಳ ಸಂಪರ್ಕದಿಂದ ಇನ್ನಷ್ಟು ಬೆಳೆದ. ಮೂವರು ಪ್ರಾಧ್ಯಾಪಕರು ಅವನಿಗೆ ವಿಶ್ವವಿದ್ಯಾನಿಲಯದಲ್ಲಿಯೇ ಒಂದು ಸ್ವಂತ ಕಾರ್ಯಶಾಲೆ ಆರಂಭಿಸಿ ಸಂಶೋಧನೆ ನಡೆಸಲು ಅವಕಾಶ ನೀಡಿದರು.
1763ರಲ್ಲಿ ಇವನ ಗೆಳೆಯನೊಬ್ಬ ಉಗಿಯಿಂದ ನಡೆಯುತ್ತಿದ್ಧ 50 ವರ್ಷ ಹಳೆಯ ನೀರಿನ ಪಂಪೊಂದನ್ನು ದುರಸ್ತಿ ಮಾಡಲು ಕರೆದ. ಹಿಂದಿನ ನೂರು ವರ್ಷಗಳಿಂದಲೂ ಗಣಿಗಳಿಂದ ನೀರೆತ್ತಲು ಉಗಿ ಪಂಪುಗಳನ್ನು ಬಳಸಲಾಗುತ್ತಿತ್ತು. ಅವು ಎಷ್ಟು ಅದಕ್ಷವಾಗಿದ್ದವು ಎಂದರೆ, ಆಗಿನಿಂದಲೂ ಆವುಗಳ ವಿನ್ಯಾಸದಲ್ಲಿ ಎಳ್ಳಷ್ಟೂ ಬದಲಾವಣೆ ಆಗಿರಲಿಲ್ಲ. ವಾಟ್ ಮೂಲಭೂತ ತತ್ವದಲ್ಲೇ ಕ್ರಾಂತಿಕಾರಿ ಬದಲಾವಣೆ ತಂದು ವಿನ್ಯಾಸವನ್ನೇ ಪೂರ್ಣವಾಗಿ ಬದಲಿಸಿ ಹೊಸ ಸಂಶೋಧನೆಯನ್ನೇ ಮಾಡಿದ. ಇದು ಸಾಕಾರವಾದದ್ದು 1765ರಲ್ಲಿ. ಈ ಕುರಿತ ತಾಂತ್ರಿಕ ವಿವರಗಳನ್ನು ಇಲ್ಲಿ ಹೇಳಲು ಹೋಗುವುದಿಲ್ಲ. ವ್ಯಾಪಾರದಲ್ಲಿ ತಲೆಯೇ ಇಲ್ಲದಿದ್ದ ವಾಟ್, ಬೋಲ್ಟನ್ ಎಂಬವನ ಜೊತೆ ಸೇರಿ ಕಂಪೆನಿಯೊಂದನ್ನು ಸ್ಥಾಪಿಸಿದ. ಮುಂದಿನ ಕೆಲವು ವರ್ಷಗಳಲ್ಲಿ ಹಲವಾರು ವಿನ್ಯಾಸ, ಮಾದರಿಗಳ ಬಳಿಕ 1776ರಲ್ಲಿ ಅಂತಿಮ ಮಾದರಿ ಹಲವಾರು ಕಡೆ ನೆಲೆಗೊಂಡಿತು. ನಂತರವೂ ಸುಧಾರಣೆ ಮುಂದುವರಿಸಿದ. ಅವನ ಎಲ್ಲಾ ಮಾದರಿಗಳು ಇಂಗ್ಲೆಂಡಿನ ವಸ್ತು ಸಂಗ್ರಹಾಲಯಗಳಲ್ಲಿ ಇಂದಿಗೂ ಇವೆ. ಅದಕ್ಕಾಗಿ ಅವನು ಪಟ್ಟ ಶ್ರಮ ಅಷ್ಟಿಷ್ಟಲ್ಲ. ನಂತರ ಹಣವನ್ನೂ ಮಾಡಿದ. ಆದರೆ, ಅವನು ಮತ್ತು ಬೋಲ್ಟನ್‌ಗೆ ಬರಬೇಕಾದ ಹಣದಲ್ಲಿ ಹತ್ತು ಶೇಕಡಾ ಕೂಡ ಪಾವತಿ ಆಗದೇ ಇದ್ದುದರಿಂದ ಇಬ್ಬರೂ ಕಷ್ಟಕ್ಕೆ ಬಿದ್ದಿದ್ದರು. ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಿ ಹೋರಾಡಬೇಕಾಯಿತು. ಮೊದಲ ಹೆಂಡತಿ ತೀರಿದ ಬಳಿಕ ಎರಡನೇ ಮದುವೆಯಾದ ವಾಟ್‌ನಿಗೆ ನಾಲ್ವರು ಮಕ್ಕಳು. ಸಾಕಷ್ಟು ತೃಪ್ತ ಕುಟುಂಬವಾದುದರಿಂದ ಗಳಿಸಿದ ಹಣವನ್ನು ಬೇರೆ ಸಂಶೋಧನೆಗಳಿಗೆ ಬಳಸುವುದು ಅವನಿಗೆ ಸಾಧ್ಯವಾಯಿತು.
ಗ್ಲಾಸ್ಗೋ ವಿಶ್ವವಿದ್ಯಾನಿಲಯಕ್ಕೆ ಸೇರುವ ಮೊದಲು ಅವನು ಸರ್ವೇಯರ್ ಮತ್ತು ಸಿವಿಲ್ ಇಂಜಿನಿಯರ್ ಆಗಿ ಎಂಟು ವರ್ಷ ಕೆಲಸ ಮಾಡಿದ್ದುದರಿಂದ ಅತ್ಯುತ್ತಮ ನಕ್ಷೆಗಾರನಾಗಿದ್ದ. ಈತನ ತಾಂತ್ರಿಕ ವಿವರಗಳ ನಕ್ಷೆಗಳು ಇಂದಿಗೂ ಇದ್ದು, ಮುಂದಿನ ಸುಧಾರಣೆಗೆ ಮೂಲಾಧಾರಗಳಾಗಿದ್ದವು.
ನಂತರ ಅವನು ಇತರ ಕೆಲವು ಸಂಶೋಧನೆಗಳನ್ನು ಮಾಡಿದರೂ, ಅವು ಉಗಿ ಇಂಜಿನ್‌ನಷ್ಟು ಪ್ರಸಿದ್ಧಿಯಾಗಿಲ್ಲ. ನಂತರ ಸೈಕ್ಲೋಸ್ಟೈಲ್ ಎಂಬ ಹೆಸರಿನಲ್ಲಿ ಜೆರಾಕ್ಸ್ ಬರುವ ತನಕ ಇದ್ದ ಪ್ರತಿ ತೆಗೆಯುವ ಯಂತ್ರವನ್ನು ಮೊದಲು ತಯಾರಿಸಿದವನು ಇವನೇ. ನಂತರ ರಸಾಯನ ಶಾಸ್ತ್ರದಲ್ಲಿ ಆಸಕ್ತಿ ತಳೆದ ವಾಟ್, ಬಟ್ಟೆ ಬ್ಲೀಚ್ ಮಾಡುವ ರಾಸಾಯನಿಕ ಕಂಡುಹಿಡಿದ. ಇದರಿಂದ ಜಾಗತಿಕ ಮಾರುಕಟ್ಟೆ ಇದ್ದ ಇಂಗ್ಲೆಂಡಿನ ಜವಳಿ ಉದ್ಯಮಕ್ಕೆ ಬಹಳ ಅನುಕೂಲವಾಯಿತು. ಇವನು ಭೌತಶಾಸ್ತ್ರದಂತೆ ಖಗೋಳಶಾಸ್ತ್ರದಲ್ಲಿಯೂ ಸಂಶೋಧನೆ ಮಾಡಿದ್ದಾನೆ. ಸಮಾಂತರ ಚಲನೆಯ ಸಿದ್ಧಾಂತ (ಥಿಯರಿ ಆಫ್ ಪ್ಯಾರಲಲ್ ಮೋಶನ್) ಇವನದ್ದೇ. ನಾವೀಗ ಶಕ್ತಿಯನ್ನು ಅಳೆಯಲು ಬಳಸುವ ಹಾರ್ಸ್‌ಪವರ್ (ಅಶ್ವಶಕ್ತಿ) ಪರಿಕಲ್ಪನೆ ಇವನದ್ದೇ. ವಿದ್ಯುತ್ ಶಕ್ತಿ ಅಳೆಯುವ ವಾಟ್ಸ್ ಇರುವುದೂ ಇವನ ಹೆಸರಲ್ಲಿ.
ಸಾಮಾನ್ಯವಾಗಿ ವಿಜ್ಞಾನಿಗಳು ಎಡೆಬಿಡಂಗಿಗಳು, ಅಸೂಯಿಗಳು, ಅಹಂಕಾರಿಗಳಾಗಿರುವುದುಂಟು. ವಾಟ್ ಸಜ್ಜನ, ಪ್ರಾಮಾಣಿಕ, ತತ್ವಶಾಸ್ತ್ರಜ್ಞನಂತೆ ಬದುಕಿದ್ದ ಎಂದು ದಾಖಲಾಗಿದೆ. ಇಂದು ಅವನ ಪ್ರತಿಮೆಗಳು ಬ್ರಿಟನ್ ಮತ್ತು ಯುರೋಪಿನ ಎಲ್ಲಾ ಕಡೆ ಇವೆ. ಎಲ್ಲಾ ಆವಿಷ್ಕಾರಗಳು ಇಷ್ಟವನ್ನೂ, ಅನಿಷ್ಟವನ್ನೂ ಜೊತೆಗೆ ಹೊತ್ತುಕೊಂಡು ಹುಟ್ಟುತ್ತವೆ. ವಾಟ್ ಸಂಶೋಧನೆಯೂ ಇದಕ್ಕೆ ಹೊರತಲ್ಲ. ಆದರೆ ಇಂದು- ವಿಶ್ವದ ಇತಿಹಾಸದ ಗತಿ ಬದಲಿಸಿದ ಜೇಮ್ಸ್ ವಾಟ್‌ನನ್ನು ಇತಿಹಾಸವೇ ಮರೆಯುತ್ತಿರುವುದು ಕಾಲದ ಗುಣ.