ಕೇಂದ್ರದ ಮುಂಗಡ ಪತ್ರ-ಸರಕಾರವು ಅವಕಾಶಗಳನ್ನು ಕಳೆದುಕೊಂಡಿತೇ?
2020-22ರ ಎರಡು ವರ್ಷಗಳ ಕೋವಿಡ್ ಮಹಾಮಾರಿಯ ಹೊಡೆತಕ್ಕೆ ಹಳಿತಪ್ಪಿದ ದೇಶದ ಆರ್ಥಿಕತೆಯನ್ನು ಮತ್ತೆ ಪ್ರಗತಿ ಪಥದತ್ತ ಒಯ್ಯಲು ಕೆಲವು ಪ್ರಮುಖವಾದ ಕ್ರಮಗಳನ್ನು ಈ ವರ್ಷದ ಬಜೆಟಿನಲ್ಲಿ ಸರಕಾರ ಕೈಗೊಳ್ಳುವ ನಿರೀಕ್ಷೆ ಇತ್ತು. ಅತ್ಯಂತ ಕಷ್ಟಕಾಲದಲ್ಲಿ ದೂರಾಲೋಚನೆಯ ಸುಧಾರಣೆಗಳೂ ಬೇಕಾಗಿದ್ದವು. ಈ ಸುಧಾರಣೆಗಳು ನಿರ್ದಿಷ್ಟವಾಗಿ ನಾಲ್ಕು ಗುರಿಗಳನ್ನು ಹೊಂದಿರಬೇಕು: ಅಲ್ಪಾ ವಧಿಯಲ್ಲಿ ಬೇಡಿಕೆಯನ್ನು ಹೆಚ್ಚಿಸುವುದು, ಮಧ್ಯಮಾವಧಿಯಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು, ದೀರ್ಘಕಾಲದಲ್ಲಿ ಆರ್ಥಿಕ ಅಸಮಾನತೆಗಳನ್ನು ಕಡಿತಗೊಳಿಸುವುದು ಮತ್ತು ಇವುಗಳನ್ನು ಸಾಧಿಸಲು ಅಗತ್ಯವಾದ ನಿರ್ದಿಷ್ಟ ಕಾರ್ಯಪ್ರಣಾಳಿಗಳು. 2022ರ ಬಜೆಟ್ ಈ ನಿಟ್ಟಿನಲ್ಲಿ ಏನು ಕ್ರಮಗಳನ್ನು ಕೈಗೆತ್ತಿಕೊಂಡಿದೆ ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಬಹಳ ಕಷ್ಟ. ತಮ್ಮ ಭಾಷಣದ ಆರಂಭದಲ್ಲಿ ಮಾನ್ಯ ವಿತ್ತಮಂತ್ರಿಯವರು ತಮ್ಮ ಬಜೆಟು ನಾಲ್ಕು ಆಧಾರಸ್ತಂಭಗಳ ಮೇಲೆ ನಿಂತಿದೆ ಎಂದಿದ್ದಾರೆ: ಪ್ರಧಾನ ಮಂತ್ರಿಯವರ ‘ಗತಿಶಕ್ತಿ’ ಯೋಜನೆ, ಎಲ್ಲರನ್ನೊಳಗೊಂಡ ಪ್ರಗತಿ, ಇಂಧನದ ಬದಲಾವಣೆ ಮತ್ತು ಹೂಡಿಕೆಗೆ ಹಣಕಾಸು. ಅವುಗಳ ಜೊತೆಗೇ ದೇಶದ ‘ಅಮೃತ ಕಾಲ’ ದ ಆರಂಭಕ್ಕೆ ಅಗತ್ಯವಾದ ‘ನೀಲ ನಕಾಶೆ’ಯನ್ನು ಈ ಬಜೆಟಿನಲ್ಲಿ ತೆರೆದಿಡಲಾಗುವುದು ಎಂದಿದ್ದಾರೆ. ಆದರೆ ಆ ನೀಲ ನಕಾಶೆ ಯಾವುದು ಎಂಬುದು ಸ್ಪಷ್ಟವಾಗಿಲ್ಲ.
ಹದಗೆಟ್ಟಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸುಧಾರಣೆ, ಉದ್ಯೋಗ ಕಳಕೊಂಡವರಿಗೆ ಕನಿಷ್ಠ ಸಂಪಾದನೆಯ ದಾರಿ, ಸಾಮಾಜಿಕ ಭದ್ರತೆ, ಎರಡು ವರ್ಷಗಳಿಂದ ವಿದ್ಯೆಯಿಂದ ವಂಚಿತರಾದ ಮಕ್ಕಳಿಗೆ ಉಚಿತವಾಗಿ ಕಲಿಯಲು ಅವಕಾಶ ನೀಡುವ ಯೋಜನೆಗಳ ಬಗ್ಗೆ ಬಜೆಟ್ ಪ್ರಸ್ತಾವಿಸಿಲ್ಲ. ದೇಶದ ಸರ್ವತೋಮುಖ ಪ್ರಗತಿಗೆ ಈ ರಂಗಗಳ ಬಗ್ಗೆ ಆದ್ಯತೆ ನೀಡಬೇಕಾಗಿತ್ತು.
ಈಗಾಗಲೇ ಅನೇಕ ತಜ್ಞರ ವರದಿಗಳು ಹೇಳಿರುವಂತೆ ಇತ್ತೀಚೆಗಿನ ವರ್ಷಗಳಲ್ಲಿ ಆರ್ಥಿಕ ಅಸಮಾನತೆಗಳು ಮತ್ತಷ್ಟು ತೀವ್ರಗೊಂಡಿವೆ. ಅಸಮಾನತೆಗಳನ್ನು ಕಡಿಮೆಮಾಡಲು ಎರಡು ಮಾರ್ಗಗಳಿವೆ: ತಳಮಟ್ಟದಲ್ಲಿರುವ ಜನಸಾಮಾನ್ಯರಿಗೆ ಆರ್ಥಿಕ ಸಹಾಯ ನೀಡುವುದು ಎರಡನೆಯದು, ಆರ್ಥಿಕವಾಗಿ ಅತ್ಯಂತ ಮೇಲ್ಮಟ್ಟದಲ್ಲಿರುವವರಿಗೆ ತೆರಿಗೆ ಹೆಚ್ಚಿಸುವ ಮೂಲಕ ಸಹಾಯ ನೀಡಲು ಅಗತ್ಯವಾದ ಸಂಪನ್ಮೂಲವನ್ನು ಜೋಡಿಸುವುದು. ಈ ಕ್ರಮಗಳ ಮೂಲಕ ಬೇಡಿಕೆಯು ಹೆಚ್ಚಾಗುವುದಲ್ಲದೆ ಉತ್ಪಾದನಾ ಚಟುವಟಿಕೆಗೆ ಉತ್ತೇಜನ ಲಭಿಸುತ್ತದೆ. ಆಗ ಇನ್ನೂ ಹೆಚ್ಚು ಉದ್ಯೋಗಗಳ ಸೃಷ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರದ ಬಜೆಟ್ ಕಾರ್ಯೋನ್ಮುಖವಾಗಬಹುದೆಂಬ ನಿರೀಕ್ಷೆ ಪ್ರಬಲವಾಗಿತ್ತು.
ಕೆಲವು ಕ್ರಮಗಳು ಉಲ್ಲೇಖನಾರ್ಹ. ಹೊಸತಾಗಿ ಆರಂಭವಾಗುವ ಉದ್ದಿಮೆಗಳಿಗೆ ತೆರಿಗೆ ವಿನಾಯಿತಿಯನ್ನು 2023ರ ತನಕ ಮುಂದುವರಿಸಲಾಗಿದೆ, ಎಂಎಸ್ ಎಂಇಗಳ ಸಾಲಗಳ ಭದ್ರತೆಗೆ ಹೆಚ್ಚು ಹಣ, ಬೆಳೆಯುತ್ತಿರುವ ನಗರಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಯೋಜನೆಗಳು, 2 ಲಕ್ಷ ಅಂಗನವಾಡಿಗಳ ಬೆಳವಣಿಗೆ, ಮೂಲಸೌಕರ್ಯಗಳ ( ಉದಾ: ರಾಷ್ಟ್ರೀಯ ಹೆದ್ದಾರಿ) ಅಭಿವೃದ್ಧಿಗೆ ಉತ್ತೇಜನ-ಮುಂತಾದವು ಅಗತ್ಯವಾದ ಕ್ರಮಗಳು.
ಬಂಡವಾಳ ಹೂಡಿಕೆ ಹೆಚ್ಚಾದಷ್ಟು ಆರ್ಥಿಕತೆ ಚಟುವಟಿಕೆ ಹೆಚ್ಚುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ 5.54 ಲಕ್ಷ ಕೋಟಿಯಷ್ಟು ಅಂದಾಜಿಸಿದ್ದ ಬಂಡವಾಳ ಹೂಡಿಕೆಯನ್ನು ಪ್ರಸಕ್ತ ಬಜೆಟಿನಲ್ಲಿ 7.50 ಲಕ್ಷ ಕೋಟಿ ರೂ.ಗೆ ಏರಿಸಲಾಗಿದೆ.
ವಿಶೇಷ ಆರ್ಥಿಕ ವಲಯ ಕಾನೂನನ್ನು ರದ್ದುಪಡಿಸಿ ಹೊಸತೊಂದು ಕಾನೂನನ್ನು ತರುವ ಇರಾದೆ ಸರಕಾರಕ್ಕಿದೆ. ಆ ಮೂಲಕ ರಾಜ್ಯ ಸರಕಾರಗಳನ್ನು ಅಭಿವೃದ್ಧಿಯೋಜನೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಸರಕಾರದ ಉದ್ದೇಶ ಎಂದಿದ್ದಾರೆ ಹಣಕಾಸು ಸಚಿವೆ. ಹೊಸ ಕಾನೂನನ್ನು ಜಾರಿಗೆ ತರುವಾಗ ಜನಾಭಿಪ್ರಾಯವನ್ನು ಪರಿಗಣಿಸಬಹುದೆಂದು ಸಾಮಾಜಿಕ ಕಾರ್ಯಕರ್ತರ ವಿಶ್ವಾಸ.
ಒಟ್ಟಿನಲ್ಲಿ ಕೆಲವೊಂದು ಸುಧಾರಣಾತ್ಮಕ ಕ್ರಮಗಳನ್ನು ಒಳಗೊಂಡ ಈವರ್ಷದ ಬಜೆಟ್‌ನಲ್ಲಿ ಸರಕಾರವು ತನಗಿರುವ ಅವಕಾಶಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡಿಲ್ಲ ಅನಿಸುತ್ತದೆ. ಹೀಗಾಗಿ ದೇಶದ ಮೂಲ ಸಮಸ್ಯೆಗಳಿಗೆ ಪರಿಹಾರ ಲಭಿಸುವಲ್ಲಿ ಮತ್ತೆ ಹಿಂಜರಿಕೆ ಉಂಟಾಗಬಹುದು.