ಮರೆಯಬಾರದ ಮಹಾ ಮಾರಣಹೋಮ
ಎಲ್ಲವೂ ಡಿಜಿಟಲೀಕರಣಗೊಂಡಿರುವ ಜಗತ್ತಿನಲ್ಲಿ ಯುವ ಜನಾಂಗವು ಮುಂದಿನ ದಶಕಗಳಲ್ಲಿ ವಿಶ್ವದ ಉಳಿವು-ಅಳಿವಿಗೆ ಸಂಬಂಧಿಸಿದ ಮಹತ್ವಪೂರ್ಣ ನಿರ್ಧಾರಗಳನ್ನು ತೆಗೆದುಕೊಳ್ಳಲಿರುವುದರಿಂದ ಇಂದಿನ ಯುವಜನತೆಗೆ ವರ್ತಮಾನದ ಅರಿವು ಎಷ್ಟು ಮುಖ್ಯವೋ ಗತ ಇತಿಹಾಸದ ಅರಿವು ಕೂಡ ಅಷ್ಟೇ ಮುಖ್ಯವಾಗುತ್ತದೆ. ಇಂದಿಗೆ ಕೇವಲ ಎಂಟು ದಶಕಗಳ ಹಿಂದೆ ಜರ್ಮನಿಯಲ್ಲಿ ನಡೆದ ಯೆಹೂದಿಗಳ ಸಾಮೂಹಿಕ ನರಮೇಧದ ಹಾಗೂ ಹಿಟ್ಲರ್‌ನ ಆಜ್ಞಾನುವರ್ತಿಗಳಾಗಿ ನಾಝಿಗಳು ಹರಿಸಿದ ನೆತ್ತರಿನ ಹೊಳೆಯ ಭಯಾನಕತೆಯ ಅರಿವು ಇಂದಿನ ಬಹುತೇಕ ಯುವ ಜನತೆಗೆ ಇಲ್ಲ ಎಂಬ ಆಘಾತಕಾರಿ ಅಂಶ ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ.
ಅಂತರ್‌ರಾಷ್ಟ್ರೀಯ ಶಿಕ್ಷಣ ದಿನ, ಅಂತರ್‌ರಾಷ್ಟ್ರೀಯ ಮಹಿಳಾ ದಿನ ಇತ್ಯಾದಿ ಹಲವು ಅಂತರ್‌ರಾಷ್ಟ್ರೀಯ ದಿನಾಚರಣೆಗಳು ನಮಗೆ ಪರಿಚಿತವಾದರೂ ಅಂತರ್‌ರಾಷ್ಟ್ರೀಯ ಮಹಾವಿನಾಶ ಸ್ಮತಿ ದಿನದ ಬಗ್ಗೆ ಬಹಳ ಮಂದಿ ಕೇಳಿರಲಾರರು. ಪ್ರತಿವರ್ಷ ಜನವರಿ 27ರಂದು ಇಂತಹ ಒಂದು ದಿನವನ್ನು ಆಚರಿಸಲಾಗುತ್ತದೆ. ಆದರೆ ಹಲವು ಅಂತರ್‌ರಾಷ್ಟ್ರೀಯ ದಿನಾಚರಣೆಗಳಂತೆ ಇದು ಸಂತಸದ, ಸಂಭ್ರಮದ ದಿನಾಚರಣೆಯಲ್ಲ. ಬದಲಾಗಿ ಮಾನವ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದು ಅಧ್ಯಾಯವನ್ನು ಜಗತ್ತಿಗೆ ಜ್ಞಾಪಿಸಿ ಮುಂದೆ ಎಂದೂ (‘ನೆವರ್ ಅಗೈನ್’) ಇಂತಹ ಒಂದು ಅಧ್ಯಾಯ ಮರುಕಳಿಸದಂತೆ ಜಗತ್ತು ಎಚ್ಚರವಹಿಸಬೇಕೆಂದು ವಿಶ್ವದ ಎಲ್ಲ ದೇಶಗಳ ಎಲ್ಲ ನಾಯಕರಿಗೆ, ನಾಗರಿಕರಿಗೆ ಜ್ಞಾಪಿಸುವ ದಿನ.
1941-1945ರ ನಡುವೆ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ತನ್ನ ನಾಝಿವಾದದ ಉನ್ಮಾದದಲ್ಲಿ ಅಂದಾಜು ಅರುವತ್ತು ಲಕ್ಷ ಯೆಹೂದಿಗಳ ಸಾಮೂಹಿಕ ನರಮೇಧ ನಡೆಸಿದ. ಹಿಟ್ಲರ್‌ನ ಆಜ್ಞಾನುವರ್ತಿಯಾಗಿ ನಾಝಿ ಸೇನೆ ಕೇವಲ ಯೆಹೂದಿಗಳನ್ನಷ್ಟೇ ಅಲ್ಲ, ನಾಝಿ ರಾಜಕೀಯ ಸಿದ್ಧಾಂತವನ್ನು ಒಪ್ಪದ ಎಲ್ಲರನ್ನೂ ಮರಣ ಶಿಬಿರಗಳಲ್ಲಿ ಕೊಂದದ್ದಷ್ಟೇ ಅಲ್ಲದೆ ಸಮಾಜದಲ್ಲಿ ಬದುಕಲು ಅನರ್ಹರು ಎಂದು ನಾಝಿಗಳು/ಹಿಟ್ಲರ್ ಪರಿಗಣಿಸಿದ್ದ ದೈಹಿಕ ಅಥವಾ ಮಾನಸಿಕ ‘ವಿಕಲಾಂಗ’ರನ್ನು, ಸಲಿಂಗಕಾಮಿಗಳನ್ನು ಕೂಡ ಅದು ಕೊಂದುಹಾಕಿತು.
ಅರುವತ್ತು ಲಕ್ಷ ಮಂದಿಯ ಸಾಮೂಹಿಕ ಹತ್ಯೆ ಅಂದರೆ ಬಹಳಷ್ಟು ಮಂದಿಗೆ ಅದೊಂದು ಸಂಖ್ಯೆಯಾಗಿಯಷ್ಟೇ ಕಾಣಬಹುದು. ಆದರೆ 2021ರ ಜನಗಣತಿಯ ಪ್ರಕಾರ, ಎಂಟು ಮಂಗಳೂರು ನಗರ ಅಥವಾ ಮೂವತ್ತಾರು ಉಡುಪಿಯಂತಹ ನಗರಗಳ ಎಲ್ಲರನ್ನೂ ನಾಲ್ಕು ವರ್ಷಗಳ ಅವಧಿಯಲ್ಲಿ ಸಾಮೂಹಿಕವಾಗಿ, ಗ್ಯಾಸ್ ಚೇಂಬರಿಂಗ್‌ನಂತಹ ಭಯಾನಕ ವಿಧಾನಗಳಲ್ಲಿ ಕೊಲ್ಲುವುದನ್ನು ಕಲ್ಪಿಸಿಕೊಳ್ಳಿ. ಆಗ ನಾಝಿಗಳು ನಡೆಸಿದ ನರಮೇಧ, ಮಹಾವಿನಾಶ (ಹೋಲೊಕಾಸ್ಟ್) ಯಾವ ರೀತಿಯದೆಂಬುದು ಅರ್ಥವಾದೀತು.
ಇಲ್ಲಿ ಗಮನಿಸಬೇಕಾದ ಅಂಶ: ಅಷ್ಟೊಂದು ಜನರ ಹತ್ಯೆ ನಡೆದದ್ದು ಅಣುಬಾಂಬ್ ಅಥವಾ ನ್ಯೂಕ್ಲಿಯರ್ ಬಾಂಬ್‌ಗಳಿಂದಾಗಿ ಅಲ್ಲ; ಬದಲಾಗಿ ಜನಾಂಗೀಯ ದ್ವೇಷ ಹಾಗೂ ಅಸಹನೆಯಿಂದಾಗಿ. ಎಪ್ಪತ್ತೈದು ವರ್ಷಗಳ ಹಿಂದೆ ನಡೆದ ಮಾನವ ಇತಿಹಾಸದ ಈ ಮಹಾ ದುರಂತವನ್ನು ಜ್ಞಾಪಿಸಿಕೊಳ್ಳುವುದು ಎಂದಿಗಿಂತಲೂ ಇಂದು ಯಾಕೆ ಮುಖ್ಯ ಎಂಬ ಬಗ್ಗೆ ಭಾರತದಲ್ಲಿ ಇಸ್ರೇಲ್‌ನ ರಾಯಭಾರಿ ನೂರ್ ಜಿಲಾನ್, ಜರ್ಮನಿಯ ರಾಯಭಾರಿ ವಾಲ್ಟರ್ ಜೆ. ಲಿಂಡ್‌ನರ್ ಮತ್ತು ಹೊಸದಿಲ್ಲಿಯಲ್ಲಿ ಯುನೆಸ್ಕೊದ ನಿರ್ದೇಶಕರಾಗಿರುವ ಎರಿಕ್ ಫಾಲ್ಟ್ ಲೇಖನವೊಂದರಲ್ಲಿ ವಿವರಿಸಿದ್ದಾರೆ.
ಎಲ್ಲವೂ ಡಿಜಿಟಲೀಕರಣಗೊಂಡಿರುವ ಜಗತ್ತಿನಲ್ಲಿ ಯುವ ಜನಾಂಗವು ಮುಂದಿನ ದಶಕಗಳಲ್ಲಿ ವಿಶ್ವದ ಉಳಿವು-ಅಳಿವಿಗೆ ಸಂಬಂಧಿಸಿದ ಮಹತ್ವಪೂರ್ಣ ನಿರ್ಧಾರಗಳನ್ನು ತೆಗೆದುಕೊಳ್ಳಲಿರುವುದರಿಂದ ಇಂದಿನ ಯುವಜನತೆಗೆ ವರ್ತಮಾನದ ಅರಿವು ಎಷ್ಟು ಮುಖ್ಯವೋ ಗತ ಇತಿಹಾಸದ ಅರಿವು ಕೂಡ ಅಷ್ಟೇ ಮುಖ್ಯವಾಗುತ್ತದೆ. ಇಂದಿಗೆ ಕೇವಲ ಎಂಟು ದಶಕಗಳ ಹಿಂದೆ ಜರ್ಮನಿಯಲ್ಲಿ ನಡೆದ ಯೆಹೂದಿಗಳ ಸಾಮೂಹಿಕ ನರಮೇಧದ ಹಾಗೂ ಹಿಟ್ಲರ್‌ನ ಆಜ್ಞಾನುವರ್ತಿಗಳಾಗಿ ನಾಝಿಗಳು ಹರಿಸಿದ ನೆತ್ತರಿನ ಹೊಳೆಯ ಭಯಾನಕತೆಯ ಅರಿವು ಇಂದಿನ ಬಹುತೇಕ ಯುವ ಜನತೆಗೆ ಇಲ್ಲ ಎಂಬ ಆಘಾತಕಾರಿ ಅಂಶ ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ನಾಝಿವಾದದ ಕುರಿತು ಅಂಕಿ-ಸಂಖ್ಯೆಗಳನ್ನು ಸಂಗ್ರಹಿಸಿರುವ ‘ದಿ ಆ್ಯಂಟಿ-ಡಿಫಮೇಶನ್ ಲೀಗ್ ಗ್ಲೋಬಲ್ 100’ ಎಂಬ ಸಂಘಟನೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ, ಯೆಹೂದಿ ವಿರೋಧಿ/ಜನಾಂಗ ವಿರೋಧಿ (ಆ್ಯಂಟಿ ಸೆಮೆಟಿಕ್) ಭಾವನೆಗಳನ್ನು ಹೊಂದಿರುವ ಜನರ ಸಂಖ್ಯೆ ಆಘಾತಕಾರಿಯಾಗಿದೆ: ಸಮೀಕ್ಷೆಗೊಳಪಡಿಸಲಾದ 1.09 ಬಿಲಿಯನ್ ಜನರ ಪೈಕಿ ನಾಲ್ಕನೇ ಒಂದು ಭಾಗಕ್ಕಿಂತಲೂ ಹೆಚ್ಚು ಮಂದಿ ಇಂದಿಗೂ ಯೆಹೂದಿ ವಿರೋಧಿ ಭಾವನೆಗಳನ್ನು, ದ್ವೇಷಪೂರಿತ ಮನೋಧರ್ಮವನ್ನು ಹೊಂದಿದವರಾಗಿದ್ದಾರೆ. ಏಶ್ಯದಲ್ಲಿ ಸಮೀಕ್ಷೆಗೊಳಪಡಿಸಲಾದವರ ಪೈಕಿ ಶೇ. 23ರಷ್ಟು ಮಂದಿ ಮಾತ್ರ ಯೆಹೂದಿಗಳ ನರಮೇಧದ ಬಗ್ಗೆ ಕೇಳಿಬಲ್ಲವರು ಮತ್ತು ಅಂತಹ ಹತ್ಯೆಯ ಒಂದು ಮಾರಣಹೋಮ ನಡೆದಿತ್ತು ಎಂಬುದನ್ನು ಅವರು ನಂಬುತ್ತಾರೆ. ಉತ್ತರ ಅಮೆರಿಕ ಮತ್ತು ಯುರೋಪಿನ ಯುವಜನತೆಯ ಅರ್ಧ ಭಾಗಕ್ಕಿಂತಲೂ ಕಡಿಮೆ ಮಂದಿಗೆ ಅಂತಹ ಒಂದು ಸಾಮೂಹಿಕ ಹತ್ಯೆ ನಡೆದಿತ್ತು ಎಂದು ಗೊತ್ತೇ ಇಲ್ಲ! ಭಾರತದ ಜನಸಂಖ್ಯೆಯ ಗಣನೀಯ ಭಾಗ ಯುವಜನತೆಯಾಗಿರುವುದರಿಂದ ಮತ್ತು ಇವರು ದ್ವೇಷ ಹರಡುವ/ಜನಾಂಗವಾದಿ/ಧಾರ್ಮಿಕ ಸಿದ್ಧಾಂತಗಳಿಗೆ ಬಹಳ ಬೇಗನೆ ಮರುಳಾಗುವ ಸಾಧ್ಯತೆಯಿರುವುದರಿಂದ ಏಶ್ಯಕ್ಕೆ ಸಂಬಂಧಿಸಿದ ಈ ಅಂಕಿ-ಸಂಖ್ಯೆಗಳು ಬಹಳ ಮುಖ್ಯವಾಗುತ್ತವೆ ಎಂದು ಹೇಳಲಾಗಿದೆ.
ಇಂದು ಫೇಸ್‌ಬುಕ್, ಯೂಟ್ಯೂಬ್ ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳು ನಿರ್ದಿಷ್ಟ ಜನಸಮುದಾಯಗಳ ವಿರುದ್ಧ ಅಸಹನೆ ಹಾಗೂ ದ್ವೇಷ ಹರಡುವ ಪ್ರಮುಖ ಸಾಧನಗಳಾಗಿವೆ. ಇಂಟರ್‌ನೆಟ್ ಬಳಕೆದಾರರಲ್ಲಿ ಬಹುಸಂಖ್ಯಾತರಾಗಿರುವ ಹದಿಹರೆಯದವರು, ಯುವಕ ಯುವತಿಯರು, ಗಾಳಿಮಾತುಗಳನ್ನು, ಸುಳ್ಳುಸುದ್ದಿಗಳನ್ನು, ತಪ್ಪು ಮಾಹಿತಿಗಳನ್ನು ರವಾನಿಸುವ ಸಂದೇಶವಾಹಕರಾದಲ್ಲಿ ಸಂಭವಿಸಬಹುದಾದ ದುರಂತ ಕಲ್ಪನಾತೀತವಾದುದು. ಯಾಕೆಂದರೆ ದ್ವೇಷ, ಅಸಹನೆಯ ಒಂದು ಮಾತು, ಒಂದು ಸುಳ್ಳುಸುದ್ದಿ ಸಮಾಜದಲ್ಲಿ ಹೇಗೆ ಕಿಚ್ಚು ಹರಡುತ್ತದೆಂಬುದಕ್ಕೆ ಇತಿಹಾಸದಲ್ಲಿ ಸಾಕಷ್ಟು ಪುರಾವೆಗಳಿವೆ. ಜರ್ಮನಿಯಲ್ಲಿ ನಡೆದ ನರಮೇಧ ಕೂಡ ಗಾಳಿಮಾತು, ಸುಳ್ಳುಸುದ್ದಿ ವದಂತಿಗಳ ಮೂಲಕವೇ ಆರಂಭವಾಯಿತು ಎನ್ನಲಾಗಿದೆ. ಅಂತರ್ ರಾಷ್ಟ್ರೀಯ ಮಹಾವಿನಾಶ ಸ್ಮತಿ ದಿನದಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ ಮಾತುಗಳು ಇಲ್ಲಿ ಗಮನಾರ್ಹ: ‘‘ವರ್ಜಿನಿಯಾದ ಶಾರ್ಲಟ್ ವಿಲ್ ಬೀದಿಗಳಿಂದ ಆರಂಭಿಸಿ ಟೆಕ್ಸಾಸ್‌ನ ಕೊಲಿವಿಲ್‌ನ ಒಂದು ಸಿನೆಗಾಗ್‌ನವರೆಗೆ ದ್ವೇಷ ಹೊರಟುಹೋಗುವುದಿಲ್ಲ; ಅದು ಅಡಗಿ ಕುಳಿತಿರುತ್ತದೆ ಮಾತ್ರವೆಂದು ನಮಗೆ ಸತತವಾಗಿ ಹಾಗೂ ಯಾತನಾಮಯವಾಗಿ ಪುನಃ ಪುನಃ ಜ್ಞಾಪಿಸಲಾಗುತ್ತಿದೆ. ಜನಾಂಗೀಯ ದ್ವೇಷದ, ಯೆಹೂದಿ ವಿರೋಧಿ ಭಾವನೆಗಳ ವಿರುದ್ಧವಾಗಿ ನೇರವಾಗಿ ಧ್ವನಿ ಎತ್ತುವುದು ಹಾಗೂ ಮತಾಂಧತೆ ಮತ್ತು ದ್ವೇಷ ನಮ್ಮ ದೇಶದಲ್ಲಾಗಲಿ ಅಥವಾ ವಿಶ್ವದ ಯಾವುದೇ ಭಾಗದಲ್ಲಾಗಲಿ ತಲೆ ಎತ್ತದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಆಗಿದೆ.
ಮಹಾವಿನಾಶದ (ಹೋಲೊಕಾಸ್ಟ್) ಕುರಿತು ನಾವು ಸ್ಪಷ್ಟವಾಗಿ ಜನರಿಗೆ ತಿಳಿಸಿ ಹೇಳಬೇಕು ಮತ್ತು ಇತಿಹಾಸವನ್ನು ಅವಜ್ಞೆಗೊಳಪಡಿಸುವ, ಅಲ್ಲಗಳೆಯುವ, ತಿರುಚುವ ಮತ್ತು ಪರಿಷ್ಕರಿಸುವ ಪ್ರಯತ್ನಗಳನ್ನು ವಿಫಲಗೊಳಿಸಬೇಕು...’’
ನಾಝಿಗಳು ನಡೆಸಿದ ಮಹಾ ಮಾರಣಹೋಮವನ್ನು ಕೆಲವು ಶಕ್ತಿಗಳು ಈಗ ಅಲ್ಲಗಳೆಯಲು ಪ್ರಯತ್ನಿಸುತ್ತಿವೆ; ಇಂತಹ ಪ್ರಯತ್ನಗಳು ಯಶಸ್ವಿಯಾಗದಂತೆ ತಡೆಯಬೇಕಾಗಿದೆ ಮತ್ತು ಆ ಮೂಲಕ ಮುಕ್ತ, ಸ್ವತಂತ್ರ ಸಮಾಜಗಳನ್ನು ಬಲಪಡಿಸುವ ಮೂಲಭೂತ ಮೌಲ್ಯಗಳಾದ ನ್ಯಾಯ, ಸಮಾನತೆ ಹಾಗೂ ವಿವಿಧತೆಯನ್ನು, ಬಹುತ್ವವನ್ನು ಎತ್ತಿ ಹಿಡಿಯಬೇಕಾಗಿದೆ ಎಂಬುದು ಅಧ್ಯಕ್ಷ ಬೈಡನ್‌ರವರ ಮಾತುಗಳ ಆಶಯವಾಗಿದೆ.
ಇತಿಹಾಸದಿಂದ, ಇತಿಹಾಸದ ಗತ ದುರಂತಗಳಿಂದ ಪಾಠ ಕಲಿಯದವರು ನಾಶವಾಗಿ ಹೋಗುತ್ತಾರೆ ಎಂಬ ಮಾತು ಎಂದಿಗಿಂತ ಇಂದು ಹೆಚ್ಚು ನಿಜವಾಗುತ್ತಿದೆ. ಆದರೆ ಹೀಗೆ ಪಾಠ ಕಲಿಯದ ನಾಯಕರಿಂದಾಗಿ ನರಕಯಾತನೆ ಅನುಭವಿಸುವವರು ಅಮಾಯಕರಾಗಿರುತ್ತಾರೆ ಎಂಬುದು ದುರಂತಗಳ ದುರಂತವಲ್ಲವೇ?