ಮೌನ ಮುರಿಯಬಹುದೇ ‘ಹಾಥರಸ್’?
ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ನಡೆದ ಕ್ಷೇತ್ರಗಳು ಜಾಟರ ಪಾಳೆಪಟ್ಟುವಾಗಿದ್ದರೆ, ಎರಡನೇ ಹಂತದ ಮತದಾನದ ಕ್ಷೇತ್ರಗಳು ಮುಸ್ಲಿಮರ ಕೋಟೆಯಾಗಿತ್ತು. ಮೂರನೇ ಹಂತದ ಚುನಾವಣೆ ನಡೆಯುವ ಬುಂದೇಲ್ ಖಂಡ ಮತ್ತು ಸುತ್ತಲಿನ ಕ್ಷೇತ್ರಗಳಲ್ಲಿ ದಲಿತರು ಮತ್ತು ಹಿಂದುಳಿದ ಜಾತಿಗಳ ಮತದಾರರೇ ನಿರ್ಣಾಯಕರು.
ಉತ್ತರಪ್ರದೇಶ ರಾಜ್ಯ ಮತ್ತು ಭಾರತೀಯ ಜನತಾ ಪಕ್ಷ- ಎರಡಕ್ಕೂ ಮಹತ್ವಪೂರ್ಣ ತಿರುವು ನೀಡಿರುವುದು 2017ರ ವಿಧಾನಸಭಾ ಚುನಾವಣೆ. ಆ ಚುನಾವಣೆಯಲ್ಲಿ ಜಾಟರ ಪಾಳೆಪಟ್ಟುವಿಗೆ ಮತ್ತು ಮುಸ್ಲಿಮರ ಕೋಟೆಗೆ ದಾಳಿ ಮಾಡಿ ತನ್ನ ಪತಾಕೆ ಹಾರಿಸಿದ್ದ ಬಿಜೆಪಿ, ಬುಂದೇಲ್ ಖಂಡದಲ್ಲಿಯೂ ತನ್ನ ಆಧಿಪತ್ಯ ಸ್ಥಾಪಿಸಿತ್ತು. ನಾಳೆ ಮೂರನೇ ಹಂತದ ಚುನಾವಣೆ ನಡೆಯುತ್ತಿರುವ 59 ಕ್ಷೇತ್ರಗಳಲ್ಲಿ 49 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬೀಗಿತ್ತು.( ಬುಂದೇಲ್ ಖಂಡದ ಎಲ್ಲ 19 ಕ್ಷೇತ್ರಗಳು ಸೇರಿವೆ). ಬಿಎಸ್‌ಪಿ ಮತ್ತು ಎಸ್‌ಪಿ ಎರಡೂ ಧೂಳೀಪಟವಾಗಿ ಹೋಗಿತ್ತು.
ಈ ಹಿನ್ನೆಲೆಯಲ್ಲಿ ಬಿಜೆಪಿ ಕಳೆದುಕೊಳ್ಳುವುದೆಷ್ಟು? ಅದು ಕಳೆದುಕೊಂಡಿದ್ದು ಯಾರ ಮತದ ಬುಟ್ಟಿಗೆ ಬೀಳಲಿದೆ? ಎಂಬ ಪ್ರಶ್ನೆಗೆ ಜನ ನೀಡುವ ಉತ್ತರ ರವಿವಾರ ಸಂಜೆ ಮತಪೆಟ್ಟಿಗೆಯೊಳಗೆ ಸೇರಲಿದೆ.
ಬಿಜೆಪಿಗೆ ಖಂಡಿತ ಕಳೆದ ಬಾರಿಯ ಗೆಲುವನ್ನು ಪುನರಾವರ್ತಿಸಲು ಸಾಧ್ಯವಾಗಲಾರದು. ಬಿಎಸ್‌ಪಿ ಕೂಡಾ ಕಳೆದ ಹತ್ತು ವರ್ಷಗಳಲ್ಲಿ ನಿಧಾನವಾಗಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಾ ಬಂದಿದೆ. ಅಖಿಲೇಶ್ ಯಾದವ್ ಅಪ್ಪನ ರಾಜಕೀಯ ವಾರಸುದಾರನಾದ ನಂತರ ಸಮಾಜವಾದಿ ಪಕ್ಷದ ಬಗ್ಗೆ ಮತದಾರರಿಗಿದ್ದ ಭಯ, ಅಪನಂಬಿಕೆಗಳು ಕಡಿಮೆಯಾಗುತ್ತಾ ಬಂದಿವೆ. ಕುಟುಂಬದೊಳಗಿನ ಪ್ರತಿರೋಧವೂ ಕರಗಿದೆ.
ಉತ್ತರಪ್ರದೇಶದಲ್ಲಿ ಆಡಳಿತ ಪಕ್ಷವಾಗಿದ್ದ ಕಾಲದಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿ ನೆಲೆ ಕಂಡುಕೊಳ್ಳಲಾಗಿರಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಸ್ಥಾಪಿಸಿದ್ದ ರಿಪಬ್ಲಿಕನ್ ಪಾರ್ಟಿ ಸಕ್ರಿಯವಾಗಿದ್ದಈ ಪ್ರದೇಶದಲ್ಲಿ ರಾಮಮನೋಹರ ಲೋಹಿಯಾ ಅವರ ಸಂಯುಕ್ತ ಸೋಷಲಿಸ್ಟ್ ಪಾರ್ಟಿ ಕೂಡಾ ಕೆಲವು ಕ್ಷೇತ್ರಗಳನ್ನು ಗೆದ್ದಿತ್ತು.
2012ರ ವಿಧಾನಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಾಯಕಲ್ಪ ನೀಡಬೇಕೆಂದು ನಿರ್ಧರಿಸಿದ್ದ ರಾಹುಲ್ ಗಾಂಧಿ ಇಲ್ಲಿಂದಲೇ ತನ್ನ ಮಿಷನ್ ಪ್ರಾರಂಭಿಸಿದ್ದು. ಹಿಂದಿನ ನಾಲ್ಕೈದು ವರ್ಷಗಳ ಅವಧಿಯಲ್ಲಿ ರಾಹುಲ್ ಬುಂದೇಲ್ ಖಂಡವನ್ನು ಕರ್ಮಭೂಮಿಯನ್ನಾಗಿ ಮಾಡಿದ್ದರು. ದಲಿತರ ಮನೆಗಳಲ್ಲಿ ವಾಸ್ತವ ಹೂಡಿದ್ದರು,ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಎರಡು ಬಾರಿ ಕರೆದುಕೊಂಡು ಬಂದಿದ್ದರು.
ಸುಮಾರು 8,000 ಕೋಟಿ ರೂಪಾಯಿಯ ಬುಂದೇಲ್ ಖಂಡ ಪ್ಯಾಕೇಜನ್ನು ಕೇಂದ್ರ ಸರಕಾರದಿಂದ ಮಂಜೂರು ಮಾಡಿಸಿದ್ದರು. ನರೇಗಾ ಮತ್ತು ಸಂಸದರ ಅಭಿವೃದ್ಧಿ ನಿಧಿಯಿಂದ ಸಾವಿರಾರು ಕೋಟಿ ರೂಪಾಯಿ ತಂದು ಇಲ್ಲಿ ಸುರಿದಿದ್ದರು. ಆದರೆ ಯಥಾ ಪ್ರಕಾರ 2012ರ ಚುನಾವಣೆಯಲ್ಲಿನ ಹಿನ್ನಡೆಯ ನಂತರ ರಾಹುಲ್ ಯಥಾಪ್ರಕಾರ ಇಲ್ಲಿನ ಪ್ರಯೋಗವನ್ನು ಮರೆತುಬಿಟ್ಟಿದ್ದರು. ಈಗ ಪ್ರಿಯಾಂಕಾ ಗಾಂಧಿ ಅಣ್ಣ ಬಿಟ್ಟುಹೋದ ಜಾಗದಿಂದ ಮತ್ತೆ ಪಕ್ಷ ಕಟ್ಟುವ ಪ್ರಯತ್ನ ನಡೆಸಿದ್ದಾರೆ.
ಲೋಧ್ ಸಮುದಾಯ ಕೂಡಾ ಇಲ್ಲಿ ಗಣನೀಯ ಪ್ರಮಾಣದಲ್ಲಿರುವುದರಿಂದ ಬಿಜೆಪಿ ಲೋದ್ ಜಾತಿಗೆ ಸೇರಿರುವ ಉಮಾಭಾರತಿಯವರನ್ನು ಮಧ್ಯಪ್ರದೇಶದಿಂದ ಇಲ್ಲಿಗೆ ಕರೆತಂದು ಚುನಾವಣೆಗೆ ನಿಲ್ಲಿಸಿತ್ತು. ಆ ವರ್ಷ ಎರಡೂ ಪಕ್ಷಗಳಿಗೆ ನಿರೀಕ್ಷೆಯ ಫಲ ಸಿಕ್ಕಿರಲಿಲ್ಲ. ಸಮಾಜವಾದಿ ಪಕ್ಷ 37 ಸ್ಥಾನಗಳನ್ನು ಗೆದ್ದು ಕೊನೆಗೆ ಅಖಿಲೇಶ್ ಾದವ್ ಮುಖ್ಯಮಂತ್ರಿಯಾಗಿದ್ದರು.
ಇಲ್ಲಿ ದಲಿತರ ಜೊತೆಯಲ್ಲಿ ನಿರ್ಣಾಯಕರಾಗಿರುವ ಹಿಂದುಳಿದ ವರ್ಗ ಹಲವು ಜಾತಿಗಳಲ್ಲಿ ಹಂಚಿಹೋಗಿದೆ. ಹಿಂದುಳಿದ ಜಾತಿಗಳಲ್ಲಿ ಯಾದವರದ್ದೇ ದೊಡ್ಡ ಸಂಖ್ಯೆಯಾದರೂ ಲೋದ್, ಕುರ್ಮಿ, ನಿಶಾದ್, ಕುಶಾವ, ಶಾಕ್ಯ, ಸೈನಿ ಮೊದಲಾದ ಇತರ ಜಾತಿಗಳೂ ಇವೆ. ಬಿಜೆಪಿ ಕಣ್ಣಿಟ್ಟಿರುವುದು ಈ ಯಾದವೇತರ ಜಾತಿಗಳ ಮೇಲೆ. ಕಳೆದ ಚುನಾವಣೆಯಲ್ಲಿ ಈ ತಂತ್ರ ಬಿಜೆಪಿಗೆ ಫಲ ಕೂಡಾ ನೀಡಿತ್ತು. 2017ರ ಚುನಾವ ಣೆಯಲ್ಲಿ ನರೇಂದ್ರ ಮೋದಿ ಯವರೇ ಇಲ್ಲಿಗೆ ಬಂದು ‘ಮಿಷನ್ ಬುಂದೇಲ್ ಖಂಡ’ ಘೋಷಿಸಿ ಇಲ್ಲಿಂದಲೇ ಪರಿವರ್ತನಾ ಯಾತ್ರೆ ಪ್ರಾರಂಭಿಸಿದ್ದರು. ಈ ಬಾರಿಯ ಚುನಾ ವಣೆಯಲ್ಲಿಯೂ ನರೇಂದ್ರಮೋದಿ, ಅಮಿತ್ ಶಾ, ರಾಜ್‌ನಾಥ್ ಸಿಂಗ್, ಯೋಗಿ ಅದಿತ್ಯನಾಥ್ ಸೇರಿದಂತೆ ಘಟಾನುಘಟಿ ನಾಯಕರು ಇಲ್ಲಿ ಪ್ರಚಾರ ಮಾಡಿ ಹೋಗಿದ್ದರು.
ಮಧ್ಯಪ್ರದೇಶದ ಗಡಿಭಾಗದ ಏಳು ಜಿಲ್ಲೆಗಳನ್ನೊಳಗೊಂಡ ಬುಂದೇಲ್ ಖಂಡ ಬಂಜರುಭೂಮಿಯ ಬರಪೀಡಿತ ಹಿಂದುಳಿದ ಪ್ರದೇಶ. ಮೂರು ಕಡೆಗಳಲ್ಲಿ ಇದನ್ನು ಮಧ್ಯಪ್ರದೇಶ ಆವರಿಸಿಕೊಂಡಿದೆ. ಮಳೆಗಾಲದಲ್ಲಿಯೂ ಇಲ್ಲಿ ಮಳೆ ಬರುವುದು ಅಪರೂಪ. 2012ರಲ್ಲಿ ಈ ಊರುಗಳಲ್ಲಿ ಸುತ್ತಾಡುತ್ತಿದ್ದಾಗ ಕಂಡದ್ದು ಮನೆಮನೆಗಳಲ್ಲಿಯೂ ಇರುವ ನಿರುದ್ಯೋಗಿಗಳು, ಇವರಲ್ಲಿ ವಯಸ್ಸಾದವರೇ ಹೆಚ್ಚು. ಸ್ವಲ್ಪ ಗಟ್ಟಿಮುಟ್ಟಾಗಿದ್ದವರು ದಿಲ್ಲಿ, ಪಂಜಾಬ್, ಗುಜರಾತ್ ರಾಜ್ಯಗಳಿಗೆ ವಲಸೆ ಹೋಗುತ್ತಾರೆ. ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಆತ್ಮಹತ್ಯೆಗಳು ನಡೆಯುವ ಪ್ರದೇಶ ಇದಾಗಿದೆ.
ಬಹಳಷ್ಟು ಯೋಜನೆಗಳು, ಪ್ಯಾಕೇಜ್‌ಗಳನ್ನು ಇಲ್ಲಿ ತಂದು ಸುರಿಯಲಾಗಿದ್ದರೂ ಅದರ ಲಾಭ ಜನರಿಗೆ ತಲುಪಿದ್ದು ಕಡಿಮೆ. ಆ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳ ಕೂಟದಲ್ಲಿ ರಾಹುಲ್ ಭಯ್ಯಾ, ಮಾಯಾವತಿ ಬೆಹೆನ್, ಉಮಾಭಾರತಿ ದೀದಿಯ ಹಿಂಬಾಲಕರೂ ಇದ್ದಾರೆ ಎಂದು ಅಲ್ಲಿನ ಜಲೌನದಲ್ಲಿ ಸ್ವಯಂಸೇವಾ ಸಂಸ್ಥೆಯ ಮುಖ್ಯಸ್ಥ ಹೇಳಿದ್ದರು.
ಎಂಬತ್ತರ ದಶಕದ ನಂತರ ಬಿಎಸ್‌ಪಿ ಬಹಳ ಶೀಘ್ರವಾಗಿ ಮತ್ತು ಸುಲಭದಲ್ಲಿ ಇಲ್ಲಿನ ರಾಜಕಾರಣವನ್ನು ಕೈಗೆ ತೆಗೆದುಕೊಂಡಿತ್ತು. ರಿಪಬ್ಲಿಕ್ ಪಾರ್ಟಿಯ ಜೊತೆಯಲ್ಲಿದ್ದ ಮತದಾರರು ಬಿಎಸ್‌ಪಿ ಸೇರಿಕೊಂಡಿದ್ದರು. ಕಳೆದ ಹತ್ತು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಪ್ರಾರಂಭದಲ್ಲಿ ಇವರ ಜೊತೆಗಿದ್ದ ಯಾದವೇತರ ಜಾತಿಗಳು ಒಂದೊಂದಾಗಿ ಕೈ ಬಿಟ್ಟು ಹೋಗುತ್ತಿವೆ. ಈ ಪ್ರದೇಶದಲ್ಲಿ ಯಾದವರ ನಂತರದ ಪ್ರಬಲ ಜಾತಿ ಕುಶಾವ್ಹಾಗಳು. ಒಂದು ಕಾಲದಲ್ಲಿ ಮಾಯಾವತಿಗೆ ಸಮೀಪವರ್ತಿಗಳಾಗಿದ್ದ ಬಿಎಸ್‌ಪಿಯ ಮುಸ್ಲಿಮ್ ನಾಯಕ ನಜೀಬುದ್ದೀನ್ ಸಿದ್ದೀಕಿ ಮತ್ತು ಬಾಬು ಸಿಂಗ್ ಕುಶಾವ್ಹಾ ಸೇರಿ ಇಲ್ಲಿ ಬಿಎಸ್‌ಪಿಯನ್ನು ಕಟ್ಟಿ ಬೆಳೆಸಿದರು. ಭ್ರಷ್ಟಾಚಾರದ ಆರೋಪದಲ್ಲಿ ಮಾಯಾವತಿ ಬಾಬುಸಿಂಗ್ ಕುಶಾವ್ಹಾರನ್ನು ಪಕ್ಷದಿಂದ ವಜಾ ಮಾಡಿದ ನಂತರ ಅವರು ಬಿಜೆಪಿ ಸೇರಿದ್ದರು, ಭಿನ್ನಾಭಿಪ್ರಾಯಗಳಿಂದಾಗಿ ಸಿದ್ದೀಕಿಯವರೂ ಬೆಹನ್‌ಜಿಯನ್ನು ಬಿಟ್ಟು ಹೋಗಿದ್ದರು. ಅವರಿಬ್ಬರ ನಿರ್ಗಮನದ ನಂತರ ಮಾಯಾವತಿಗೆ ಇಲ್ಲಿ ಪಕ್ಷಕ್ಕೆ ಸೇನಾಪತಿಗಳಿಲ್ಲದ ಹಾಗಾಗಿದೆ.
ಮೂರನೇ ಹಂತದ ಚುನಾವಣೆ ನಡೆಯಲಿರುವ ಈಟಾವ, ಮೈನ್ ಪುರಿ, ಅಹೌರಿಯಾ, ಕನೌಜ್, ಫಿರೋಝಾಬಾದ್, ಫಾರೂಕ್‌ಬಾದ್ ಜಿಲ್ಲೆಗಳಲ್ಲಿ ಯಾದವರ ಪ್ರಾಬಲ್ಯವಿದೆ. ಮುಲಾಯಂಸಿಂಗ್ ಅವರ ಹುಟ್ಟೂರು ಸೈಪಯಿ ಇರುವುದು ಕೂಡಾ ಈಟಾವ ಜಿಲ್ಲೆಯಲ್ಲಿ.
ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲ ಈ ಪ್ರದೇಶದ ಶಾಂತಿ ಮತ್ತು ಸುವ್ಯವಸ್ಥೆ ಕದಡಿಹೋಗುವುದನ್ನು ಮತ್ತು ಮಾಯಾವತಿ ಅಧಿಕಾರಕ್ಕೆ ಬಂದಾಗೆಲ್ಲ ಅದು ನಿಯಂತ್ರಣಕ್ಕೆ ಬಂದಿರುವುದನ್ನು ಇಲ್ಲಿನ ಜನ ಅನುಭವಿಸಿ ತಿಳಿದುಕೊಂಡಿದ್ದಾರೆ. ಈ ಶಾಂತಿ ಪ್ರಿಯ ಜನರ ಮನವೊಲಿಸುವ ಉದ್ದೇಶದಿಂದಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ‘ಬುಲ್ ಡೋಝರ್’ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಕೋಮುವಾದದ ಕನ್ನಡಕ ಹಾಕಿಕೊಂಡಿರುವ ಬುಲ್ ಡೋಝರ್ ಚಾಲಕನ ಉದ್ದೇಶವನ್ನು ಕೂಡಾ ಜನ ಅರ್ಥಮಾಡಿಕೊಂಡಿರಬಹುದು.
ಮೂರನೇ ಹಂತದ ಮತದಾನ ನಡೆಯುವ 59 ಕ್ಷೇತ್ರಗಳಲ್ಲಿ ಇಡೀ ದೇಶದ ಜನರ ಗಮನಸೆಳೆದಿರುವ ಕ್ಷೇತ್ರ ದಲಿತ ಬಾಲಕಿಯ ಅತ್ಯಾಚಾರ ನಡೆದು ನಿಗೂಢ ರೀತಿಯಲ್ಲಿ ಸಾವಿಗೀಡಾದ ಹಾಥರಸ್. ಒಂದು ಕಾಲದಲ್ಲಿ ಬಿಎಸ್‌ಪಿಯ ಸುಭದ್ರ ಕ್ಷೇತ್ರವಾಗಿದ್ದ ಹಾಥರಸ್‌ಮೀಸಲು ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು. ಈ ಬಾರಿ ಬಿಜೆಪಿ ಹಾಲಿ ಶಾಸಕನ ಬದಲಿಗೆ ಬಿಜೆಪಿ ಆಗ್ರಾದಿಂದ ದಲಿತ ಮಹಿಳೆಯನ್ನು ತಂದು ಅಭ್ಯರ್ಥಿ ಮಾಡಿದೆ. ಅತ್ಯಾಚಾರಕ್ಕೀಡಾಗಿ ಸಾವನಪ್ಪಿದ್ದ ಬಾಲಕಿಯ ತಾಯಿಯನ್ನೇ ತಮ್ಮ ಪಕ್ಷದ ಅಭ್ಯರ್ಥಿ ಮಾಡಲು ಪ್ರಿಯಾಂಕಾ ಗಾಂಧಿ ಮಾಡಿದ ಪ್ರಯತ್ನಕ್ಕೆ ಫಲಸಿಗದೆ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಎಸ್‌ಪಿ ಮತ್ತು ಆಪ್ ಪಕ್ಷಗಳು ಕಣದಲ್ಲಿದ್ದರೂ ಸ್ಪರ್ಧೆ ಬಿಜೆಪಿ ಮತ್ತು ಬಿಎಸ್‌ಪಿ ನಡುವೆ. ಈಗಾಗಲೇ ಎರಡು ಪಕ್ಷಗಳ ನಡುವಿನ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಗಾಳಿ ಸುದ್ದಿಗಳು ಹಾರಾಡುತ್ತಿವೆ. ಹಾಥರಸ್ ಸಂತ್ರಸ್ತ ಬಾಲಕಿಗೆ ರಾಜಕೀಯ ನ್ಯಾಯ ಸಿಗುವ ಸಾಧ್ಯತೆ ಕಡಿಮೆ ಎನ್ನುತ್ತಿದೆ ಸ್ಥಳೀಯ ವರದಿಗಳು.
ಉತ್ತರಪ್ರದೇಶದ ಮತದಾರರ ಮನೋಗತವನ್ನು ಅರ್ಥಮಾಡಿಕೊಳ್ಳಲು ಹಾಥರಸ್ ಕ್ಷೇತ್ರದ ಫಲಿತಾಂಶ ನೆರವಾಗಬಹುದು.
ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ, ಆರು ಮಹಡಿಗಳ ಬೃಹತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಆ್ಯಸ್ಟ್ರೋ ಟರ್ಪ್ ಹಾಕಿ ಮೈದಾನ ಮತ್ತು ಒಲಿಂಪಿಕ್ ಗುಣಮಟ್ಟದ ಈಜುಕೊಳವನ್ನೊಳಗೊಂಡ ಕ್ರೀಡಾ ಸಂಕೀರ್ಣ, 1,000 ಆಸನ ಸಾಮರ್ಥ್ಯದ ಹವಾನಿಯಂತ್ರಿತ ಸಭಾಂಗಣ, ಆಧುನಿಕ ಸಹಕಾರಿ ಆಡಳಿತ ತರಬೇತಿ ಕೇಂದ್ರ ಅಂದಾಜು ರೂ.70 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಚೌಧರಿ ಚರಣ್ ಸಿಂಗ್ ಪದವಿ ಕಾಲೇಜು, ಪಂಚತಾರಾ ಸೌಲಭ್ಯವನ್ನೊಳಗೊಂಡ ಅತಿಥಿ ಗೃಹ, ಲಯನ್ ಸಫಾರಿ..ಇನ್ನು ಏನೇನೋ..
ಇವೆಲ್ಲವು ಇರುವುದು ಉತ್ತರ ಪ್ರದೇಶದ ಅತಿ ಹಿಂದುಳಿದ ಪ್ರದೇಶವಾದ ಬುಂದೇಲ್ ಖಂಡ ವ್ಯಾಪ್ತಿಯಲ್ಲಿ ಬರುವ ಈಟಾವ ಜಿಲ್ಲೆಯ ಸೈಫಯಿ ಎಂಬ ಪಟ್ಟಣದಲ್ಲಿ. ಮೂರನೇ ಹಂತದ ಮತದಾನ ನಡೆಯುವ 59 ಕ್ಷೇತ್ರಗಳಲ್ಲಿ ಈಟಾವ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳೂ ಸೇರಿವೆ.
2012ರ ವಿಧಾನ ಸಭಾ ಚುನಾವಣಾ ಸಮೀಕ್ಷೆಗಾಗಿ ಹೋಗಿದ್ದ ನಾನು, ಸೈಫಯಿ ಎಂಬ ಸಣ್ಣ ಪಟ್ಟಣದಲ್ಲಿ ಇವೆಲ್ಲವನ್ನು ಕಂಡು ದಂಗಾಗಿ ಹೋಗಿದ್ದೆ. ಈಟಾವ ಜಿಲ್ಲೆಗೆ ಸೇರಿರುವ ಅಂದಾಜು ಆರು ಸಾವಿರ ಜನಸಂಖ್ಯೆಯ ಈ ಪಟ್ಟಣದಲ್ಲಿ ಮುಲಾಯಂ ಸಿಂಗ್ ಎಂಬ ನಾಯಕ ಹುಟ್ಟಿದ್ದ ಕಾರಣಕ್ಕಾಗಿಯೇ ಅಲ್ಲಿ ಸ್ವರ್ಗ ಧರೆಗಿಳಿದು ಬಂದಿತ್ತು. ನಾನು ನೋಡುವ ಹೊತ್ತಿಗೆ ಆಗಲೇ ಸೈಫಯಿ ತನ್ನ ವೈಭವವನ್ನು ಕಳೆದುಕೊಂಡಿತ್ತು. ಅಲ್ಲಿನ ಹಳೆಯ ವೈಭವವನ್ನು ಮೆಲುಕುಹಾಕುತ್ತಾ ನನಗೆ ತೋರಿಸುತ್ತಿದ್ದ ಸ್ಥಳೀಯ ಪತ್ರಕರ್ತ ಪ್ರದೀಪ್ ಅವಸ್ಥಿ ‘ ಮುಲಾಯಂ ಎಲ್ಲವನ್ನೂ ಮಾಡಿದರು, ಇದನ್ನು ರಾಜಧಾನಿ ಮಾಡಲಾಗಿಲ್ಲ’ ಎಂದಿದ್ದರು ನಗುತ್ತಾ ವ್ಯಂಗ್ಯದಿಂದ.
ಅದನ್ನು ನೋಡುತ್ತಿದ್ದಾಗ ಬಿಹಾರದಲ್ಲಿ ಲಾಲುಪ್ರಸಾದ್ ಅವರ ಹುಟ್ಟೂರು ಫುಲ್ ವಾರಿಯಾಕ್ಕೆ ಹೋಗಿದ್ದು ನೆನಪಾಯಿತು. ಲಾಲು ಮುಖ್ಯಮಂತ್ರಿಯಾಗಿದ್ದಾಗ ಇಡೀ ಬಿಹಾರದಲ್ಲಿ ಇಲ್ಲದ್ದನ್ನೆಲ್ಲ ತಮ್ಮ ಹುಟ್ಟೂರಿಗೆ ಕೊಡುಗೆ ನೀಡಿದ್ದರು. ಶಾಲೆ, ಆಸ್ಪತ್ರೆ, ಹೆಲಿಪ್ಯಾಡ್ ಮಾತ್ರವಲ್ಲ ಹೇಮಾ ಮಾಲಿನಿಯ ಕೆನ್ನೆಯಷ್ಟು ನುಣುಪಾದ ರಸ್ತೆಗಳೂ ಅಲ್ಲಿದ್ದವು.
ಮುಖ್ಯಮಂತ್ರಿಯಾಗಿದ್ದ ಮೂರು ಅವಧಿಯಲ್ಲಿ ಈ ಪುಟ್ಟ ಪಟ್ಟಣಕ್ಕೆ ಮುಲಾಯಂ ನೂರಾರು ಕೋಟಿ ಸುರಿದ್ದಿದ್ದರು. ಆದರೆ 2012ರ ಹೊತ್ತಿಗೆ ಇಡೀ ಪಟ್ಟಣ ಪಾಳು ಬಿದ್ದ ಸ್ಥಿತಿಯಲ್ಲಿತ್ತು. ಮುಲಾಯಂ ಅಧಿಕಾರದಲ್ಲಿದ್ದಾಗ ಅಮಿತಾಭ್ ಬಚ್ಚನ್‌ನಿಂದ ಐಶ್ಚರ್ಯರೈ ವರೆಗೆ ಬಾಲಿವುಡ್ ತಾರೆಯರು, ಅಂಬಾನಿ-ಬಿರ್ಲಾಗಳು, ಬಿರ್ಜು ಮಹಾರಾಜ್ ಅವರಿಂದ ಅಮ್ಜದ್ ಅಲಿ ವರೆಗಿನ ಖ್ಯಾತ ಕಲಾವಿದರೆಲ್ಲರೂ ಅಲ್ಲಿಗೆ ಹೋಗಿದ್ದರು. ಅಮರ್ ಸಿಂಗ್ ಜೊತೆಗಿನ ಸ್ನೇಹದ ದಿನಗಳು ಮುರಿದು ಬಿದ್ದ ನಂತರ ಸೈಫಯಿ ಉತ್ಸವವೇ ನಿಂತು ಹೋಗಿ ವಿಐಪಿಗಳ ಆಗಮನನಕ್ಕಾಗಿಯೇ ನಿರ್ಮಿಸಲಾಗಿದ್ದ ವಿಮಾನ ನಿಲ್ದಾಣ ಬಿಕೋ ಅನಿಸುತ್ತಿತ್ತು.
ವಿಚಿತ್ರವೆಂದರೆ ಅಂಬೇಡ್ಕರ್ ಪಾರ್ಕ್, ಪ್ರತಿಮೆಗಳ ಸ್ಥಾಪನೆಯ ಮೂಲಕ ಮುಖ್ಯಮಂತ್ರಿ ಮಾಯಾವತಿ ಮಾಡಿರುವ ದುಂದುವೆಚ್ಚದಷ್ಟು ನೇತಾಜಿಯ ಅಧಿಕಾರಾವಧಿಯಲ್ಲಿ ಹುಟ್ಟೂರಿಗೆ ಹರಿದ ಹಣದ ಹುಚ್ಚು ಹೊಳೆ ಸುದ್ದಿಯಾಗಿರಲಿಲ್ಲ.
ಸೈಫಯಿ ಇರುವ ಜಸ್ವಂತ್ ನಗರದ ವಿಧಾನಸಭಾ ಕ್ಷೇತ್ರದ ಪಕ್ಕದಲ್ಲಿಯೇ ಇರುವ ಬರ್ತಾನ ಮೀಸಲು ಕ್ಷೇತ್ರದಲ್ಲಿ ಯಮುನಾ ಮತ್ತು ಚಂಬಲ್ ನದಿ ಸಂಗಮದ ದಂಡೆಯಲ್ಲಿ ಚಕರ ನಗರ ಎನ್ನುವ ಊರಿದೆ. ಮೂರು ಕಡೆ ನದಿನೀರಿನಿಂದ ಸುತ್ತುವರಿದಿರುವ ಆ ಊರಲ್ಲಿ ಒಂದೇ ಒಂದು ಪಕ್ಕಾ ರಸ್ತೆ ಇರಲಿಲ್ಲ. ಶಾಲೆ ಎಂಟು ಕಿ.ಮೀ. ದೂರದಲ್ಲಿತ್ತು. ಒಂದು ಲಕ್ಷದಷ್ಟು ಜನಸಂಖ್ಯೆಯ ಆ ಊರಿನ ಮಕ್ಕಳಿಗೆ ಹೈಸ್ಕೂಲ್ ನಂತರ ಕಲಿಯುವ ಅವಕಾಶವೇ ಇರಲಿಲ್ಲ. ಸೈಫಯಿ ಮತ್ತು ಚಕರನಗರ ಒಂದೇ ಜಿಲ್ಲೆಯಲ್ಲಿದ್ದರೂ ಎರಡು ಊರುಗಳ ನಡುವೆ ಭೂಮಿ-ಆಕಾಶದಷ್ಟು ಅಂತರ ಇತ್ತು. ಮುಲಾಯಂ ಸಿಂಗ್ ಹುಟ್ಟೂರಿನ ಅಭಿವೃದ್ಧಿಯ ಹೆಸರಲ್ಲಿ ದುಂದುವೆಚ್ಚವನ್ನಷ್ಟೇ ಮಾಡಿರಲಿಲ್ಲ, ಅವರು ಮುಖ್ಯಮಂತ್ರಿಯಾಗಿದ್ದಾಗ ಚಂಬಲ್ ಕಣಿವೆಯ ಭಾಗವೇ ಆಗಿರುವ ಈಟಾವ ಜಿಲ್ಲೆಯನ್ನು ಗೂಂಡಾರಾಜ್ ಮಾಡಿದ್ದರು. ಗೂಂಡಾಗಳಿಂದ ಆ ಪಟ್ಟಣವನ್ನು ಮುಕ್ತಗೊಳಿಸಿದ್ದೇ ಮುಲಾಯಂಸಿಂಗ್ ನಂತರ 2007ರಲ್ಲಿ ಮುಖ್ಯಮಂತ್ರಿಯಾದ ಮಾಯಾವತಿಯವರು, ‘ಬೆಹೆನ್ ಜಿನೇ ಈಟಾವಕೋ ಸಾಫ್ ಕರ್ ದಿಯಾ, ಅಬ್ ಲೋಗೋಂಕೋ ಬಂದೂಕ್ ಕಾ ಜರೂರತ್ ನಹಿ’ ಎಂದಿದ್ದರು ಸ್ಥಳೀಯ ವ್ಯಾಪಾರಿಗಳು.
ಡಕಾಯಿತರ ಹಾವಳಿಯಿಂದಾಗಿ ಬಂದೂಕು ಇಟ್ಟುಕೊಳ್ಳುವುದು ಈ ಜಿಲ್ಲೆಯ ಜನರಿಗೆ ರೂಢಿಯಾಗಿತ್ತು. ನಂತರದ ದಿನಗಳಲ್ಲಿ ಡಕಾಯಿತರ ಹಾವಳಿ ಕಡಿಮೆಯಾದರೂ ಬಂದೂಕಿನ ಸಂಗವನ್ನು ಜನ ಬಿಟ್ಟಿರಲಿಲ್ಲ. ಸುಮ್ಮನೆ ಊರಲ್ಲಿ ಸುತ್ತಾಡಿದಾಗ ಬಂದೂಕು ಹೆಗಲಿಗೆ ಹಾಕಿಕೊಂಡು ತಿರುಗಾಡುತ್ತಿರುವ ದೃಶ್ಯ ಅಲ್ಲಿನ ರಸ್ತೆಗಳಲ್ಲಿ ಸಾಮಾನ್ಯವಾಗಿತ್ತು. ಬಹಳಷ್ಟು ಸರಕಾರಿ ಕಚೇರಿಗಳಲ್ಲಿ ಬಂದೂಕುಧಾರಿಗಳಿಗೆ ಒಳಗೆ ಪ್ರವೇಶ ಇಲ್ಲ ಎನ್ನುವ ಫಲಕಗಳಿದ್ದವು. ಮಾಯಾವತಿಯವರು ಅಧಿಕಾರಕ್ಕೆ ಬರುವ ಮೊದಲು ಅತ್ಯಂತ ಹೆಚ್ಚು ಬಂದೂಕುಗಳನ್ನು ಹೊಂದಿದ್ದ ಜಿಲ್ಲೆ ಈಟಾವ ಆಗಿತ್ತಂತೆ. ಮುಲಾಯಂ ಸಿಂಗ್ ಕಾಲದಲ್ಲಿ ಬಹಳಷ್ಟು ಮನೆಗಳಲ್ಲಿ ಬಂದೂಕುಗಳಿದ್ದವು. ಮಾಯಾವತಿ ಸರಕಾರ ಬಂದ ನಂತರ ಹಿಂದಿನ ಭಯಭೀತ ವಾತಾವರಣ ಇಲ್ಲ ಎನ್ನುತ್ತಿದ್ದರು.
ಮುಖ್ಯಮಂತ್ರಿ ಮಾಯಾವತಿ ಬಹುಪಾಲು ಗೂಂಡಾಗಳನ್ನು ಜೈಲಿಗೆ ಅಟ್ಟಿದ್ದರು, ಕೆಲವರು ಪೊಲೀಸ್ ಎನ್ ಕೌಂಟರ್‌ಗಳಿಗೆ ಬಲಿಯಾಗಿದ್ದರು. ಈ ಕೃತಜ್ಞತೆಯಿಂದಲೇ ಯಾದವ ಜಾತಿ ಜನರ ಬಾಹುಳ್ಯ ಇರುವ ಜಿಲ್ಲೆಯ ಮೂರು ವಿಧಾನಸಭಾ ಚುನಾವಣೆಯಲ್ಲಿ 2007ರಲ್ಲಿ ಮಾಯಾವತಿಯವರ ಬಿಎಸ್‌ಪಿ ಗೆದ್ದಿತ್ತು.
ಈಟಾವ ಜಿಲ್ಲೆಗೆ ಮತ್ತು ಮುಲಾಯಂ ಸಿಂಗ್ ಯಾದವ್ ಕುಟುಂಬಕ್ಕೆ ಹೊಸ ರಾಜಕೀಯ ವಾರಸುದಾರರಾಗಿರುವ ಅಖಿಲೇಶ್ ಸಿಂಗ್ ಯಾದವ್ ಕಾಲದಲ್ಲಿ ಬೀಸಲಿರುವ ಬದಲಾವಣೆಯ ಗಾಳಿಯ ಬಗ್ಗೆ ಅಲ್ಲಿನ ಜನರಿಗೂ ನಿರೀಕ್ಷೆಗಳಿರಬಹುದು.