ಮರೀಚಿಕೆಯಾಗುತ್ತಿರುವ ಸಾಮಾಜಿಕ ನ್ಯಾಯ
ಎಲ್ಲಾ ಕ್ಷೇತ್ರ ಮತ್ತು ಹಕ್ಕುಗಳಲ್ಲಿ ಭೇದಭಾವ ಮಾಡದೆ ಎಲ್ಲಾ ಪ್ರಜೆಗಳಿಗೂ ಸಮಾನವಾಗಿ ಹಂಚಿಕೆ ಮಾಡುವುದು ಮತ್ತು ಮೇಲು ಕೀಳು ಎನ್ನದೆ ಎಲ್ಲರನ್ನೂ ಸಮಭಾವದಿಂದ ಕಾಣುವುದನ್ನು ಸಾಮಾಜಿಕ ನ್ಯಾಯ ಎಂದು ಸರಳವಾಗಿ ಹೇಳಬಹುದು. ಎಲ್ಲಾ ಕ್ಷೇತ್ರಗಳು ಎಂದರೆ ಉದ್ಯೋಗ, ಶಿಕ್ಷಣ, ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ಎಲ್ಲಾ ರಂಗಗಳು ಎಂದರ್ಥ. ಇವೆಲ್ಲವುಗಳು ಎಲ್ಲರನ್ನೂ ಒಳಗೊಂಡು, ಎಲ್ಲರಿಗೂ ಸಮವಾಗಿ ಹಂಚಿಕೆಯಾದಾಗ ಮಾತ್ರ ಸಾಮಾಜಿಕ ನ್ಯಾಯ ಲಭಿಸಿದಂತಾಗುತ್ತದೆ. ಹಾಗೂ ಸಾಮಾಜಿಕ ನ್ಯಾಯದ ಗುರಿ ‘ಸಮಾನತೆ’ಯಾಗಿದ್ದು ಅದನ್ನು ತಲುಪಿದಂತಾಗುತ್ತದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯೊಂದಿಗೆ ಸಾಮಾಜಿಕ ಸಮಾನತೆಯ ಪರಿಕಲ್ಪನೆಯೂ ಹಾಸುಹೊಕ್ಕಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಅರ್ಥಪೂರ್ಣ ಹಾಗೂ ಗೌರವಯುತವಾದ ಜೀವನವನ್ನು ಸಾಗಿಸುವುದೇ ಸಾಮಾಜಿಕ ನ್ಯಾಯ.
ಸಮ ಸಮಾಜದ ನಿರ್ಮಾಣ ಆಗಬೇಕು ಎಂಬ ಕೂಗಿಗೆ ಒಂದು ದೊಡ್ಡ ಇತಿಹಾಸವೇ ಇದೆ. ಸಾಮಾಜಿಕ ನ್ಯಾಯ ಎಂದಾಕ್ಷಣ ನಮಗೆ ಬಾಬಾಸಾಹೇಬ್ ಅಂಬೇಡ್ಕರ್‌ರವರು ಅಸ್ಪಶ್ಯತೆಯ ನಿವಾರಣೆಗಾಗಿ ನಡೆಸಿದ ಹೋರಾಟಗಳು ನೆನಪಾಗುತ್ತವೆ. ಸಾಮಾಜಿಕ ನ್ಯಾಯದ ಕಲ್ಪನೆ ಮೂಲತಃ ಯುರೋಪ್ ರಾಷ್ಟ್ರಗಳಿಂದ ಬಂದದ್ದು. ಭಾರತದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣ ಅಡಿಪಾಯವನ್ನು ಹಾಕಿದರು. ಅವರು ಸಾಮಾಜಿಕ ಸಮಾನತೆಗಾಗಿ ಬಹು ದೊಡ್ಡ ಕ್ರಾಂತಿಯನ್ನು ಮಾಡಿದರು. ಆನಂತರ ಬಾಬಾಸಾಹೇಬರು ಸಾಮಾಜಿಕ ನ್ಯಾಯದ ಅತಿ ದೊಡ್ಡ ವೈಚಾರಿಕ ಮತ್ತು ತೀಕ್ಷ್ಣವಾದ ಹೋರಾಟಗಳನ್ನು ನಡೆಸಿದರು. ಅಲ್ಲಿಂದ ಇಲ್ಲಿಯವರೆಗೂ ದಶಕಗಳೇ ಕಳೆದು ಹೋಗಿವೆ. ಆದರೂ ಸಾಮಾಜಿಕ ನ್ಯಾಯ ಎಂಬುದು ಇಂದಿಗೂ ಕನಸಿನ ಮಾತಾಗಿಯೇ ಉಳಿದಿದೆಯೇ ಹೊರತು ಸಮ ಸಮಾಜದ ಕನಸು ನಿಲುಕದ ನಕ್ಷತ್ರವಾಗಿದೆ. ಭಾರತದ ಸಂವಿಧಾನವು ಸಮಾನ ಅವಕಾಶ ಮತ್ತು ತಾರತಮ್ಯ ರಹಿತ ಕಾನೂನು, ನೀತಿ ಹಾಗೂ ಯೋಜನೆಗಳ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಸಾಧಿಸುವ ಅತ್ಯಂತ ಶ್ರೇಷ್ಠ ಉದ್ದೇಶವನ್ನು ಒಳಗೊಂಡಿದೆ. ಸಂವಿಧಾನದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಅಗ್ರಗಣ್ಯ ಸ್ಥಾನವನ್ನು ನೀಡಲಾಗಿದೆ. ಸಾಮಾಜಿಕ ನ್ಯಾಯದ ತತ್ವವನ್ನು ಸಂವಿಧಾನದ ಪೀಠಿಕೆ, ಅನುಚ್ಛೇದ 14, 15, 16, 38, 39, 46, 330ರಿಂದ 342ರಲ್ಲಿ ಅಳವಡಿಸಲಾಗಿದೆ. ಅಸಮಾನತೆಯನ್ನು ಉತ್ತೇಜಿಸುವಂತಹ ಯಾವುದೇ ಕೃತ್ಯಕ್ಕೂ ನಮ್ಮ ಸಂವಿಧಾನದಲ್ಲಿ ಅವಕಾಶವನ್ನು ನೀಡಲಾಗಿಲ್ಲ. ಸಾಂವಿಧಾನಿಕ ನ್ಯಾಯಾಲಯಗಳ ಪ್ರತಿಯೊಂದು ತೀರ್ಪು ಕೂಡ ಸಾಮಾಜಿಕ ನ್ಯಾಯದ ತತ್ವವನ್ನು ಪಾಲಿಸಬೇಕಾಗುತ್ತದೆ ಮತ್ತು ಅದರ ಎಲ್ಲಾ ತೀರ್ಪುಗಳೂ ಇದನ್ನೇ ಪ್ರತಿಬಿಂಬಿಸಬೇಕಾಗುತ್ತದೆ. ನಮ್ಮ ಸಂವಿಧಾನದ ತತ್ವಗಳು ಸಾಮಾಜಿಕ ನ್ಯಾಯದ ಬದ್ಧತೆಯನ್ನು ಹೊಂದಿದ್ದರೂ ಸಂವಿಧಾನದ ಆಶಯದ ಗುರಿಯನ್ನು ಈವರೆಗೆ ತಲುಪಿದ್ದೇವೆಯೇ? ಎನ್ನುವ ವಿಚಾರ ಸಾಮಾಜಿಕ ನ್ಯಾಯ ಮತ್ತು ಸಮ ಸಮಾಜದ ಕಲ್ಪನೆಯಲ್ಲಿರುವ ಎಲ್ಲರನ್ನು ಕಾಡುವ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಪ್ರತಿ ಹಂತದಲ್ಲಿಯೂ ಸಮಾನತೆಯು ಜನರನ್ನು ಒಂದುಗೂಡಿಸಿದರೆ ಅಸಮಾನತೆಯು ಜನರನ್ನು ವಿಘಟಿಸುತ್ತದೆ. ಜನರ ನಡುವೆ ಅಸಮಾನತೆಯು ಪರಸ್ಪರರಲ್ಲಿ ದ್ವೇಷ ಮತ್ತು ಅಸೂಯೆಗಳನ್ನು ಬಿತ್ತುತ್ತದೆ. ಅಪಾರಾಧಗಳು ಹಾಗೂ ಜನರ ನೈತಿಕ ಅವನತಿಗೂ ಕಾರಣವಾಗುತ್ತದೆ. ಸಾಮಾಜಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂಬಂಧಗಳನ್ನು ಬೆಸೆಯದೆ ಸಮ ಸಮಾಜದ ನಿರ್ಮಾಣ ಅಸಾಧ್ಯ.
ಹಸಿದ ವ್ಯಕ್ತಿಯು ಯಾವ ಬೋಧನೆಯನ್ನು ಅಥವಾ ತತ್ವವನ್ನು ಕೇಳಲಾರ ಎಂಬುದು ಸಾರ್ವಕಾಲಿಕ ಸತ್ಯ. ಸಾಮಾಜಿಕ ಅಸಮಾನತೆ ಮತ್ತು ಅದರ ಬೆಳವಣಿಗೆಯೇ ಜಗತ್ತಿನ ಎಲ್ಲಾ ಸಾಮಾಜಿಕ ಕ್ರಾಂತಿಗಳ ಮೂಲ ಎಂಬುದನ್ನು ಮರೆಯಬಾರದು. ಎಲ್ಲಿ ಸಮಾನತೆಯ ಭಾವನೆ ಇರುತ್ತದೋ ಅಲ್ಲಿ ಅಸೂಯೆಯ ಭಾವನೆಗೆ ಅವಕಾಶವಿರುವುದಿಲ್ಲ. ಸಾಮಾಜಿಕ ನ್ಯಾಯ ಮತ್ತು ಸಮಾನತೆ ಒಂದೇ ನಾಣ್ಯದ ಎರಡು ಮುಖಗಳು. ದೇಶದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಇವುಗಳು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ. ಸಾಮಾಜಿಕ ನ್ಯಾಯಕ್ಕಿಂತ ವೈಯಕ್ತಿಕ ಸಂಪತ್ತು ಗಳಿಸುವಿಕೆ, ಲಾಬಿಗಳು, ದೇಶದ ಸಂಪತ್ತು ಕೆಲ ವ್ಯಕ್ತಿಗಳಲ್ಲಿ ಮಾತ್ರ ಕ್ರೋಡೀಕರಣವಾಗುವುದು, ರಾಜಕೀಯ ಏಕಸ್ವಾಮ್ಯತೆಗಳು ಮುಖ್ಯವೇ?
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ಸಾಮಾಜಿಕ ಅಸಮಾನತೆ ಹೋಗಲಾಡಿಸಿ ಎಂಬ ಕೂಗು ಇಂದಿಗೂ ನಿಂತಿಲ್ಲ. ಅದು ನಿರಂತರವಾಗಿ ನಡೆಯುತ್ತಲೇ ಇದೆ. ವಿವಿಧ ಕ್ಷೇತ್ರಗಳಲ್ಲೂ ತುಳಿತಕ್ಕೆ ಒಳಗಾದ ಶೂದ್ರರು, ಅಸ್ಪಶ್ಯರು, ಅಲ್ಪಸಂಖ್ಯಾತರು ಹಾಗೂ ಬುಡಕಟ್ಟು ಸಮುದಾಯದವರು ಸಾಂವಿಧಾನಿಕ ಉದ್ದೇಶಿತ ಪ್ರಾತಿನಿಧ್ಯದಿಂದ ವಂಚಿತರಾಗುವ ಪ್ರಕ್ರಿಯೆ ಮುಂದುವರಿದೇ ಇದೆ. ನ್ಯಾಯದ ಪರಿಕಲ್ಪನೆಯು ಕೂಡ ಸಮಾನತೆಯ ಪರಿಕಲ್ಪನೆಗೆ ಹತ್ತಿರದಲ್ಲಿದೆ. ಏಕೆಂದರೆ ಸಾಮಾಜಿಕ ಗುಂಪುಗಳು ಅಸಮಾನತೆ ಅಥವಾ ಸಮಾನತೆಯನ್ನು ನ್ಯಾಯೋಚಿತ ಮತ್ತು ಅನ್ಯಾಯ ಎಂದು ಪರಿಗಣಿಸಬಹುದು. ನ್ಯಾಯ ಮತ್ತು ಸಮಾನತೆಯ ಪರಿಕಲ್ಪನೆಗಳ ಅರ್ಥ ಮತ್ತು ವ್ಯಾಪ್ತಿ ಯಾವಾಗಲೂ ಬದಲಾವಣೆಗೆ ಒಳಪಡುತ್ತಲೇ ಸಾಗಿದೆ. ಸಮಾನತೆ ಎಂಬ ಪದವು ಎಲ್ಲರೂ ಒಂದೇ ಎಂಬ ತತ್ವದಲ್ಲಿ ಸಾಕಾರಗೊಳ್ಳುತ್ತದೆ. ಸೌಲಭ್ಯಗಳ ಲಭಿಸುವಿಕೆಯಲ್ಲಿ, ವರ್ಗ ಹಾಗೂ ಶ್ರೇಣಿಗಳ ತಾರತಮ್ಯದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ನಿಂತಿದೆ.
ಬ್ರಿಟಿಷರ ಆಡಳಿತ ಮತ್ತು ಅದಕ್ಕೂ ಮುನ್ನ ಕೇವಲ ಜಾತಿ ಆಧಾರಿತ ಸಾಮಾಜಿಕ ಅನ್ಯಾಯಗಳು ನಡೆಯುತ್ತಿದ್ದವು. ಆದರೆ ಸ್ವಾತಂತ್ರ್ಯಾನಂತರ ಇದು ಎಲ್ಲಾ ಕ್ಷೇತ್ರಗಳಿಗೂ ಪಸರಿಸಿ ತನ್ನ ಕಬಂದ ಬಾಹುಗಳನ್ನು ಚಾಚಿಕೊಂಡಿತು. ಒಂದು ಕಾಲಘಟ್ಟದಲ್ಲಿ ದೇವರಾಜ ಅರಸುರವರು ಸಾಮಾಜಿಕ ನ್ಯಾಯ ಎಂಬ ರಾಜಕೀಯ ಸಿದ್ಧಾಂತವನ್ನು ಗಟ್ಟಿಯಾಗಿ ನೆಲೆಯೂರಿಸಲು ಪ್ರಯತ್ನಿಸಿದರು. ಸ್ವಾತಂತ್ರ್ಯಾನಂತರ ದೇಶದಲ್ಲಿ ಬಹಳಷ್ಟು ಸಾಧನೆಗಳು ನಡೆದಿವೆ. ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ನಡೆದಿವೆ. ಅಕ್ಷರ, ಆರೋಗ್ಯ, ಸರಾಸರಿ ಆಯಸ್ಸು, ಆಹಾರ ಧಾನ್ಯಗಳ ಸ್ವಾವಲಂಬನೆ, ಜನರ ತಲಾ ಆದಾಯದಲ್ಲಿ ಹೆಚ್ಚಳ, ಕೈಗಾರಿಕೆಗಳು ಹಾಗೂ ಮೂಲ ಸೌಕರ್ಯ ಕ್ಷೇತ್ರಗಳಾದ ರಸ್ತೆ, ನೀರು, ನೈರ್ಮಲ್ಯ, ಸಾರಿಗೆ, ಸಂವಹನ, ಆರೋಗ್ಯ ಸೇರಿದಂತೆ ಹಲವು ರಂಗಗಳಲ್ಲಿ ಉತ್ತಮವಾದ ಬೆಳವಣಿಗೆಯನ್ನು ಸಾಧಿಸಲಾಗಿದೆ. ಆದರೆ ಈ ಬೆಳವಣಿಗೆ ಮತ್ತು ಅಭಿವೃದ್ಧಿಯ ಫಲ ಕೇವಲ ಕೆಲವೇ ವರ್ಗಗಳಿಗೆ ಮಾತ್ರ ಲಭಿಸಿದೆ. ಈ ದೇಶದ ಬಹುಸಂಖ್ಯಾತರು ಇವುಗಳಿಂದ ಇದುವರೆಗೂ ಹೆಚ್ಚಿನದೇನನ್ನೂ ಪಡೆಯಲಾಗಿಲ್ಲ. ಸಾಮಾಜಿಕ ಸಮಾನತೆ ಸಾಧಿಸಬೇಕಾದರೆ ನಿರುದ್ಯೊಗಿಗಳ ಸಂಖ್ಯೆ ಕೂಡ ಕಡಿಮೆಯಾಗಬೇಕು. ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವ ಕೆಲಸ ಆಗಬೇಕು. ಆದರೆ ಇತ್ತೀಚಿನ ದಶಕಗಳಲ್ಲಿ ಉದ್ಯೋಗಗಳು ಗುತ್ತಿಗೆ ಆಧಾರಿತವಾಗಿರುವ ಜೊತೆಗೆ ತಾತ್ಕಾಲಿಕ ಸ್ವರೂಪದ್ದಾಗಿವೆ. ಸಂಘಟಿತ ಮತ್ತು ಅಸಂಘಟಿತ ಹೀಗೆ ಎಲ್ಲಾ ವಲಯಗಳಲ್ಲೂ ಈ ಪ್ರವೃತ್ತಿ ಇಂದು ಹೆಮ್ಮರವಾಗಿ ಬೆಳೆದುನಿಂತಿದೆ. ಈ ರೀತಿಯ ಉದ್ಯೋಗಗಳಿಂದ ಸಾಮಾಜಿಕ ಭದ್ರತೆ ಸಿಗಲು ಹೇಗೆ ಸಾಧ್ಯ? ಈ ರೀತಿಯ ಉದ್ಯೋಗದ ಸ್ವರೂಪವು ಆರ್ಥಿಕ ಅಸಮಾನತೆ ಮತ್ತಷ್ಟು ಬೆಳೆಯಲು ದಾರಿ ಮಾಡಿಕೊಡುತ್ತದೆ.
ಜನರಿಗೆ ಶಿಕ್ಷಣ, ಉದ್ಯೋಗ, ಆಹಾರ ಭದ್ರತೆ, ಆರೋಗ್ಯ ಹಾಗೂ ಸಾಮಾಜಿಕ ಭದ್ರತೆಗಳು ಸಮಾನವಾಗಿ ದೊರೆಯುತ್ತಿಲ್ಲ ಮತ್ತು ಕೆಲವರಿಗೆ ಕೈಗೆಟಕುತ್ತಿಲ್ಲ ಎಂಬ ಕೂಗು ನಿರಂತರವಾಗಿ ಕೇಳಿಬರುತ್ತಲೇ ಇದೆ. ಹಾಗಾದರೆ ಸರಕಾರಗಳು ಸಂಗ್ರಹಿಸುವ ತೆರಿಗೆ ಹಾಗೂ ಯೋಜನೆಗಳಿಗಾಗಿ ಮಾಡುವ ಭಾರೀ ಪ್ರಮಾಣದ ಹಣ ಎಲ್ಲಿ ವ್ಯರ್ಥವಾಗುತ್ತಿದೆ? ಇಂದಿಗೂ ಮಲ ಹೊರುವ ಪದ್ಧತಿ ಅನೇಕ ಕಡೆ ಜೀವಂತವಾಗಿದೆ. ಶೌಚಗುಂಡಿಗಳನ್ನು ಸ್ವಚ್ಛಪಡಿಸಲು ಸಂಪೂರ್ಣವಾಗಿ ಯಾಂತ್ರೀಕೃತ ವ್ಯವಸ್ಥೆಗಳನ್ನು ಮಾಡದೆ ಕೇವಲ ಕಾನೂನುಗಳನ್ನು ಜಾರಿಗೆ ತಂದರೆ ಏನು ಪ್ರಯೋಜನ? ಮಲ ಹೊರುವ ಪದ್ಧತಿ ಒಂದು ನೆಪವಷ್ಟೇ. ಇಂತಹ ಅನೇಕ ಅನಿಷ್ಟಗಳು ಇಂದಿಗೂ ನಮ್ಮ ಕಣ್ಣೆದುರು ನಡೆಯುತ್ತಿವೆ. ಅನೇಕ ಕಾನೂನುಗಳನ್ನು ಜಾರಿ ಮಾಡಿದ್ದರೂ ವರದಕ್ಷಿಣೆ ಪದ್ಧತಿ, ದಲಿತರ ಮತ್ತು ದುರ್ಬಲರ ಮೇಲಿನ ದೌರ್ಜನ್ಯಗಳು, ದಬ್ಬಾಳಿಕೆಗಳು, ಕಾರ್ಮಿಕರ ಶೋಷಣೆಗಳೇನೂ ಕಡಿಮೆಯಾಗಿಲ್ಲ. ಯಾವುದೇ ಕಾನೂನು ಸಾಮಾಜಿಕ ನ್ಯಾಯವನ್ನು ಅಸ್ತಿತ್ವಕ್ಕೆ ತರಲು ವಿಫಲವಾದರೆ ಅಂತಹ ಕಾನೂನುಗಳಿಂದ ಪ್ರಯೋಜನವಾದರೂ ಏನು? ಕೇವಲ ಕಾನೂನುಗಳನ್ನು ಜಾರಿಗೆ ತಂದರೆ ಸಾಲದು ಅವುಗಳನ್ನು ಜಾರಿಗೆ ತರುವ ಸಂಸ್ಥೆಗಳಿಗೆ ಸಂಪೂರ್ಣವಾದ ಅಧಿಕಾರ ಮತ್ತು ಸ್ವಾತಂತ್ರ್ಯವನ್ನು ಕೊಡಬೇಕಾಗುತ್ತದೆ. ಇಲ್ಲದಿದ್ದರೆ ಅಂತಹ ಕಾನೂನುಗಳು ಕೇವಲ ಪುಸ್ತಕದಲ್ಲಿರುತ್ತವೆಯೇ ಹೊರತು ಜನರ ಬದುಕನ್ನು ಬದಲಿಸಲಾರವು.
ಸಾಮಾಜಿಕ ಕಟ್ಟುಪಾಡು, ಜಾತಿ ಪದ್ಧತಿ, ಆರ್ಥಿಕ ಅಸಮಾನತೆಗಳು ದೇಶದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತವೆ. ಸಾಮಾಜಿಕ ನ್ಯಾಯದ ವ್ಯವಸ್ಥೆಯ ಮೂಲಕ ಈ ನ್ಯೂನತೆಗಳನ್ನು ಸರಿಪಡಿಸಬಹುದು. ಸಾಮಾಜಿಕ ನ್ಯಾಯವನ್ನು ಮಾನವ ಹಕ್ಕುಗಳ ವ್ಯಾಪ್ತಿಗೆ ತರುವ ಮೂಲಕ ಸಮಾಜದಲ್ಲಿ ತುಳಿತಕ್ಕೊಳಗಾದವರ ಹಕ್ಕುಗಳ ರಕ್ಷಣೆಯನ್ನು ಮಾಡಬೇಕಾಗಿದೆ. ಕೇವಲ ಮೀಸಲಾತಿ ಒಂದರಿಂದಲೇ ಸಾಮಾಜಿಕ ನ್ಯಾಯವನ್ನು ಸಾಧಿಸಲು ಸಾಧ್ಯವಾಗದು.
ಇತ್ತೀಚಿನ ದಿನಗಳಲ್ಲಿ ಸರಕಾರಿ ವಲಯಗಳನ್ನು ಖಾಸಗಿ ವಲಯಗಳನ್ನಾಗಿ ರೂಪಾಂತರ ಮಾಡುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದ್ದು ಮೀಸಲಾತಿ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಮೀಸಲಾತಿ ಸೌಕರ್ಯವಿಲ್ಲದ ಖಾಸಗಿ ಕ್ಷೇತ್ರದಲ್ಲಿ ಎಲ್ಲಾ ವರ್ಗದ ಜನರಿಗೆ ಸಮಾನವಾದ ಪ್ರಾತಿನಿಧ್ಯವನ್ನು ನಿರೀಕ್ಷಿಸುವುದು ನೀರಿನಲ್ಲಿ ಮೀನಿನ ಹೆಜ್ಜೆಯನ್ನು ಗುರುತಿಸುವ ವಿಫಲ ಪ್ರಯತ್ನದಂತಾಗುತ್ತದೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿ ವಲಯಗಳನ್ನಾಗಿ ಮಾಡುತ್ತಿರುವುದರ ಹಿಂದೆ ಹಲವು ಹುನ್ನಾರಗಳಿದ್ದು ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಪ್ರಕ್ರಿಯೆಯಾಗಿದೆ.
ಸಾಮಾಜಿಕ ಅಸಮಾನತೆಯು ವಿಶೇಷವಾಗಿ ಜನರ ಆದಾಯದ ಮಟ್ಟದಲ್ಲಿ ಲೆಕ್ಕಹಾಕಲ್ಪಡುತ್ತದೆ. ಶ್ರೀಮಂತರ ಮಕ್ಕಳಿಗೆ ವಿಶೇಷವಾದ ವ್ಯವಸ್ಥೆ ಅಂದರೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವ ವಿಫುಲ ಅವಕಾಶಗಳಿರುತ್ತವೆ. ಆದರೆ ಶ್ರೀಮಂತರನ್ನುಳಿದ ಇತರ ವರ್ಗದವರಿಗೆ ಇದು ಕನಸಿನ ಮಾತಾಗುತ್ತದೆ. ಸಾಮಾಜಿಕ ನ್ಯಾಯದ ತತ್ವಗಳನ್ನು ನ್ಯಾಯಯುತ ಸಮಾನತೆಯ ತತ್ವಗಳೆಂದೂ ವ್ಯಾಖ್ಯಾನಿಸಲಾಗಿದೆ. ಇದನ್ನು ಪುರುಷ ಅಥವಾ ಮಹಿಳೆ ಎಂದು ಭೇದಭಾವ ಮಾಡದೆ ಸಮಾನ ಕೆಲಸಕ್ಕೆ ಸಮಾನ ವೇತನ ಸಿದ್ಧಾಂತ ಸೇರಿದಂತೆ ಇನ್ನಿತರ ಅಗತ್ಯಗಳಲ್ಲಿ ವ್ಯಕ್ತವಾಗುವುದನ್ನು ನೋಡಬಹುದು. ಮಾರುಕಟ್ಟೆ ವ್ಯವಸ್ಥೆಯು ಸಮಾಜದಲ್ಲಿ ಸಾಮಾಜಿಕ ಅನ್ಯಾಯವನ್ನು ಪ್ರೋತ್ಸಾಹಿಸುತ್ತದೆ. ಈ ರೀತಿಯ ವ್ಯವಸ್ಥೆಯಲ್ಲಿ ಆರ್ಥಿಕ ಶಕ್ತಿ ಅಥವಾ ಸಂಪತ್ತು ಕೆಲವೇ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕೃತವಾಗುತ್ತದೆ. ಇತರರು ಆರ್ಥಿಕವಾಗಿ ಪರಾವಲಂಬಿಗಳಾಗಿ ಜೀವನ ನಡೆಸಬೇಕಾಗುತ್ತದೆ. ಇದು ಆದಾಯದ ಅಸಮಾನ ಹಂಚಿಕೆಗೆ ದಾರಿ ಮಾಡಿಕೊಡುತ್ತದೆ. ಈ ರೀತಿಯ ಅಸಮಾನ ಹಂಚಿಕೆಯು ಬಡತನ ಮತ್ತು ಸಾಮಾಜಿಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಸಾಮಾಜಿಕ ನ್ಯಾಯವನ್ನು ಸಾಧಿಸಲು ಆರ್ಥಿಕ ಸಮಾನತೆಯೂ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ, ಸುಸ್ಥಿರ ಆರ್ಥಿಕ ಬೆಳವಣಿಗೆ, ಸಮಾನವಾದ ಆದಾಯದ ವಿತರಣೆ ಇವುಗಳು ಸಾಮಾಜಿಕ ನ್ಯಾಯದ ತತ್ವಗಳನ್ನು ಈಡೇರಿಸಲು ಬೇಕಾದ ಅಗತ್ಯವಾದ ಅಂಶಗಳಾಗಿವೆ. ಸಾಮಾಜಿಕ ಸಮಾನತೆಯು ಪ್ರತಿಯೊಬ್ಬ ಪ್ರಜೆಯ ಸಮಗ್ರವಾದ ಅಭಿವೃದ್ಧಿಗೆ ಸಮಾನಾಂತರವಾದ ಪರಿಸ್ಥಿತಿಗಳ ನಿರ್ಮಾಣ ಮತ್ತು ಅವನು ಕೆಲಸ ಮಾಡುವ ಸಾಮರ್ಥ್ಯ, ವ್ಯೆಯಕ್ತಿಕ ಸಂಪತ್ತನ್ನು ಪರಿಗಣಿಸದೆ ದೇಶದ ಕಾನೂನುಗಳ ಮುಂದೆ ಎಲ್ಲರಿಗೂ ಸಮಾನ ಜವಾಬ್ದಾರಿ ಮತ್ತು ಸ್ಥಾನಗಳು ನಿರ್ಧಾರವಾಗಬೇಕು. ಸಾಮಾಜಿಕ ಸಮಾನತೆಯ ತತ್ವದ ಅನುಷ್ಠಾನವು ಪ್ರತಿಯೊಬ್ಬ ವ್ಯಕ್ತಿಯ ಮತ್ತು ಒಟ್ಟಾರೆ ಸಮಾಜದ ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಪೂರೈಸುತ್ತದೆ. ಮಾರುಕಟ್ಟೆ ವ್ಯವಸ್ಥೆ ಅಥವಾ ಆರ್ಥಿಕತೆ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸಮಾನತೆಯ ತತ್ವಗಳನ್ನು ವಿರೂಪಗೊಳಿಸುತ್ತವೆ.
ಯಾವುದೇ ದೇಶದಲ್ಲಾದರೂ ಸಾಮಾಜಿಕ ನ್ಯಾಯದ ತತ್ವಗಳನ್ನು ಆ ದೇಶದ ಅಭಿವೃದ್ಧಿಯ ಒಂದು ನಿರ್ದಿಷ್ಟ ಹಂತದಲ್ಲಿ ಅನುಷ್ಠಾನಗೊಳಿಸುವ ಸಾಧ್ಯತೆಗಳು ಆರ್ಥಿಕತೆಯ ನೈಜ ಪರಿಸ್ಥಿತಿಯನ್ನು ನಿರ್ಧರಿಸುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ತೃತೀಯ ಲಿಂಗಿಗಳು, ಆದಿವಾಸಿಗಳು, ಅಲೆಮಾರಿಗಳು, ಭಿಕ್ಷುಕರು, ಹಿರಿಯ ನಾಗರಿಕರು, ವಿಕಲಚೇತನರಿಗಾಗಿ ಹಲವಾರು ಆರ್ಥಿಕ ಸಬಲೀಕರಣ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅವುಗಳು ಅನುಷ್ಠಾನದ ಹಂತದಲ್ಲಿ ಸೋತಿವೆ. ಯಾವುದೇ ಯೋಜನೆಗಳನ್ನು ಜಾರಿಗೆ ತರುವಾಗ ದುರ್ಬಲ ವರ್ಗಗಳ ಅಭಿವೃದ್ಧಿಗಾಗಿ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಆಧಾರಿತ ಸಮಾಜವನ್ನು ರೂಪಿಸುವ ಆಶಯಗಳನ್ನು ಹೊಂದಿರಬೇಕಾಗಿರುವುದು ಅವಶ್ಯಕವಾಗಿದೆ. ಆರ್ಥಿಕ ಪ್ರಗತಿಯ ಪ್ರಯೋಜನಗಳು ತಳ ಮಟ್ಟದ ಜನರನ್ನು ತಲುಪಬೇಕಾಗಿರುವುದು ಅಗತ್ಯವಾಗಿದೆ. ಇಂದು ಕಲ್ಯಾಣ ರಾಜ್ಯಗಳ ಪರಿಕಲ್ಪನೆಗೆ ಧಕ್ಕೆ ಉಂಟಾಗುವಂತಹ ಅನೇಕ ಘಟನೆಗಳು ನಡೆಯುತ್ತಿವೆ. ಭ್ರಾತೃತ್ವ ಮತ್ತು ಸಮಾನತೆಯನ್ನು ಬೆಳೆಸದೆ ಯಾವುದೇ ದೇಶ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಧಾರದ ಮೇಲೆ ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ದೇಶವನ್ನಾಗಿ ಉಳಿಸಿಬೆಳೆಸಿಕೊಂಡು ಹೋಗಬೇಕಾಗಿರುವುದು ಇಂದಿನ ಅಗತ್ಯವಾಗಿದೆ.