ಭಾರತ ಜನಾಂಗೀಯ ಹತ್ಯೆಯ ಅಂಚಿನಲ್ಲಿದೆಯೇ?
ಭಾರತವು ಜನಾಂಗೀಯ ರಕ್ತಪಾತದ ಅಪಾಯವನ್ನು ಎದುರಿಸುತ್ತಿದೆಯೇ? ಹಿಂದುತ್ವದ ಕಲ್ಪನೆಯಲ್ಲಿ ‘ಜನಾಂಗೀಯ ಹತ್ಯೆ’ ಎನ್ನುವುದು ಅಂತರ್ಗತವಾಗಿದೆಯೇ? ನಿಜವಾಗಿಯೂ, ಜನಾಂಗೀಯ ಹತ್ಯೆ ಎನ್ನುವುದು ಹಿಂದುತ್ವ ಯೋಜನೆಯ ಅನಿವಾರ್ಯ ಫಲಿತಾಂಶವೇ? ಇಂದು ನಾವು ಇಂತಹ ಪ್ರಶ್ನೆಗಳನ್ನು ಪರಿಶೀಲಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವುದೇ ಅತ್ಯಂತ ಭಯಾನಕ ಸಂಗತಿಯಾಗಿದೆ. ಆದರೆ, ಇದಕ್ಕಿಂತಲೂ ಹೆಚ್ಚಿನ ಭಯಾನಕ ಸಂಗತಿಯೆಂದರೆ, ಈ ಮೇಲಿನ ಪ್ರತಿಯೊಂದು ಪ್ರಶ್ನೆಗೆ ಉತ್ತರ ‘ಹೌದೆನ್ನುವುದರಲ್ಲಿ ಸಂದೇಹವಿಲ್ಲ’ ಎಂಬ ಭೀತಿಯನ್ನು ಹೊಂದಿರುವವರ ಸಂಖ್ಯೆ ಭಾರತ ಮತ್ತು ಜಗತ್ತಿನ ಇತರ ಭಾಗಗಳಲ್ಲಿ ದಿನೇ ದಿನೇ ಹೆಚ್ಚುತ್ತಿರುವುದು.
ಜನಾಂಗೀಯ ಹತ್ಯೆಯಲ್ಲಿ ಒಂದು ಜನಾಂಗಕ್ಕೆ ಸೇರಿದ ಜನರನ್ನು ಸಂಪೂರ್ಣವಾಗಿ ಅಥವಾ ಆಂಶಿಕವಾಗಿ ನಾಶ ಮಾಡಲು ಪ್ರಯತ್ನಿಸಲಾಗುತ್ತದೆ. ಭಾರತವು ಜನಾಂಗೀಯ ರಕ್ತಪಾತದ ಅಪಾಯವನ್ನು ಎದುರಿಸುತ್ತಿದೆಯೇ? ಹಿಂದುತ್ವದ ಕಲ್ಪನೆಯಲ್ಲಿ ‘ಜನಾಂಗೀಯ ಹತ್ಯೆ’ ಎನ್ನುವುದು ಅಂತರ್ಗತವಾಗಿದೆಯೇ? ನಿಜವಾಗಿಯೂ, ಜನಾಂಗೀಯ ಹತ್ಯೆ ಎನ್ನುವುದು ಹಿಂದುತ್ವ ಯೋಜನೆಯ ಅನಿವಾರ್ಯ ಫಲಿತಾಂಶವೇ? ಇಂದು ನಾವು ಇಂತಹ ಪ್ರಶ್ನೆಗಳನ್ನು ಪರಿಶೀಲಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವುದೇ ಅತ್ಯಂತ ಭಯಾನಕ ಸಂಗತಿಯಾಗಿದೆ. ಆದರೆ, ಇದಕ್ಕಿಂತಲೂ ಹೆಚ್ಚಿನ ಭಯಾನಕ ಸಂಗತಿಯೆಂದರೆ, ಈ ಮೇಲಿನ ಪ್ರತಿಯೊಂದು ಪ್ರಶ್ನೆಗೆ ಉತ್ತರ ‘ಹೌದೆನ್ನುವುದರಲ್ಲಿ ಸಂದೇಹವಿಲ್ಲ’ ಎಂಬ ಭೀತಿಯನ್ನು ಹೊಂದಿರುವವರ ಸಂಖ್ಯೆ ಭಾರತ ಮತ್ತು ಜಗತ್ತಿನ ಇತರ ಭಾಗಗಳಲ್ಲಿ ದಿನೇ ದಿನೇ ಹೆಚ್ಚುತ್ತಿರುವುದು.
ಭಾರತವು ಮಾನವತೆಯ ವಿರುದ್ಧದ ಘನಘೋರ ಅಪರಾಧವಾಗಿರುವ ಜನಾಂಗೀಯ ಹತ್ಯೆಯ ಹೊಸ್ತಿಲಲ್ಲಿ ನಿಂತಿದೆ ಎಂಬುದಾಗಿ ಇತ್ತೀಚಿನ ಎರಡು ವಿಶ್ವಾಸಾರ್ಹ ಅಂತರ್‌ರಾಷ್ಟ್ರೀಯ ವರದಿಗಳು ಎಚ್ಚರಿಸಿವೆ. 1948ರ ವಿಶ್ವಸಂಸ್ಥೆಯ ಜನಾಂಗೀಯ ಹತ್ಯೆ ಒಡಂಬಡಿಕೆಯ ಪ್ರಕಾರ, ರಾಷ್ಟ್ರೀಯ, ಜನಾಂಗೀಯ ಅಥವಾ ಧಾರ್ಮಿಕ ಗುಂಪೊಂದರ ಸದಸ್ಯರನ್ನು ಕೊಲ್ಲುವ ಅಥವಾ ಅವರಿಗೆ ಹಾನಿ ಮಾಡುವ ಮೂಲಕ ಅಥವಾ ಅವರ ಭೌತಿಕ ವಿನಾಶಕ್ಕೆ ಕಾರಣವಾಗುವ ಪರಿಸ್ಥಿತಿಯನ್ನು ಹೇರುವ ಮೂಲಕ ಆ ಗುಂಪನ್ನು ನಾಶ ಮಾಡುವ ಉದ್ದೇಶವನ್ನು ಜನಾಂಗೀಯ ಹತ್ಯೆ ಹೊಂದಿದೆ.
ಜನಾಂಗೀಯ ಹತ್ಯೆ ಮತ್ತು ಇತರ ಹಿಂಸಾತ್ಮಕ ಅಪರಾಧಗಳ ನಡುವಿನ ವ್ಯತ್ಯಾಸವೆಂದರೆ, ಒಂದು ನಿರ್ದಿಷ್ಟ ಗುಂಪಿಗೆ ಸೇರಿದ ಒಂದೇ ಕಾರಣಕ್ಕಾಗಿ ಜನರನ್ನು ಹತ್ಯೆ ಮಾಡುವುದು ಜನಾಂಗೀಯ ಹತ್ಯೆಯಾಗುತ್ತದೆ.
‘ಜೆನೋಸೈಡ್ ವಾಚ್’ನ ಸ್ಥಾಪಕ ನಿರ್ದೇಶಕ ಗ್ರೆಗರಿ ಸ್ಟಾಂಟನ್ ಈ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಅವರದು ಹಗುರವಾಗಿ ತೆಗೆದುಕೊಳ್ಳಬಹುದಾದ ದನಿಯಲ್ಲ. ರುವಾಂಡದಲ್ಲಿ 8 ಲಕ್ಷ ಟುಟ್ಸಿಗಳ ಹತ್ಯಾಕಾಂಡ ನಡೆಯುತ್ತದೆ ಎಂಬುದಾಗಿ ಅವರು ಐದು ವರ್ಷಗಳ ಮೊದಲೇ ಭವಿಷ್ಯ ನುಡಿದಿದ್ದರು. ಕೊನೆಗೂ ಅದು 1994ರಲ್ಲಿ ಸತ್ಯವಾಯಿತು. ನಂತರ ನಡೆದ ಹಲವು ಜನಾಂಗೀಯ ಹತ್ಯೆಗಳ ಬಗ್ಗೆಯೂ ಅವರು ಖಚಿತ ಭವಿಷ್ಯ ನುಡಿದಿದ್ದರು. ಭಾರತದಲ್ಲಿ ಮುಸ್ಲಿಮರ ಜನಾಂಗೀಯ ಹತ್ಯೆ ನಡೆಯಬಹುದು ಎಂಬುದಾಗಿ ಅವರು ಎಚ್ಚರಿಸಿದ್ದಾರೆ. ಭಾರತದಲ್ಲಿ ನಡೆಯಬಹುದಾದ ಜನಾಂಗೀಯ ಹತ್ಯೆಯ ಹಲವು ಪೂರ್ವ ‘ಲಕ್ಷಣಗಳು ಮತ್ತು ಪ್ರಕ್ರಿಯೆಗಳನ್ನು’ ಅವರು ಗುರುತಿಸಿದ್ದಾರೆ. ದ್ವೇಷ ಭಾಷಣದ ಮೂಲಕ ಮುಸ್ಲಿಮರ ಮೇಲೆ ಕಳಂಕ ಹೊರಿಸುವುದು, ಅವರ ಮಾನವ ಘನತೆಯನ್ನು ತಗ್ಗಿಸುವುದು (ಉದಾಹರಣೆಗೆ; ಅವರನ್ನು ಗೆದ್ದಲುಗಳು ಎಂಬುದಾಗಿ ಕರೆಯುವುದು) ಮತ್ತು ಅವರನ್ನು ಗುರಿಯಾಗಿಸಿ ದ್ವೇಷಾಪರಾಧದ ಕೃತ್ಯಗಳನ್ನು ಮಾಡುವುದು- ಈ ಪೈಕಿ ಕೆಲವು.
ಜನಾಂಗೀಯ ಹತ್ಯೆಗೆ ಸಂಬಂಧಿಸಿದ ಇನ್ನೊಂದು ವರದಿಯನ್ನು ಯುನೈಟೆಡ್ ಸ್ಟೇಟ್ಸ್ ಹೋಲೊಕಾಸ್ಟ್ ಮೆಮೋರಿಯಲ್ ಮ್ಯೂಸಿಯಮ್ ನೀಡಿದೆ. ಇದು ಮೊದಲ ವರದಿಗಿಂತಲೂ ಹೆಚ್ಚಿನ ಭಯಾನಕ ಸಂಗತಿಗಳನ್ನು ನಿರೀಕ್ಷಿಸಿದೆ. ಜಗತ್ತಿನ ಎಲ್ಲ ದೇಶಗಳಿಗೆ ಹೋಲಿಸಿದರೆ, ಶೀಘ್ರದಲ್ಲೇ ಸಾಮೂಹಿಕ ಹತ್ಯಾಕಾಂಡ ನಡೆಯಬಹುದಾದ ಎರಡನೇ ಗರಿಷ್ಠ ಸಾಧ್ಯತೆಯನ್ನು ಭಾರತ ಹೊಂದಿದೆ ಎಂದು ಅದು ಹೇಳುತ್ತದೆ. (ಜನಾಂಗೀಯ ಹತ್ಯಾಕಾಂಡದ ಮೊದಲ ಗರಿಷ್ಠ ಸಾಧ್ಯತೆಯಿರುವುದು ಪಾಕಿಸ್ತಾನದಲ್ಲಿ. ಭಾರತದ ನಂತರದ ಸ್ಥಾನಗಳಲ್ಲಿ ಯೆಮನ್ ಮತ್ತು ಅಫ್ಘಾನಿಸ್ತಾನಗಳಿವೆ). ಒಂದು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಸಶಸ್ತ್ರ ಪಡೆಗಳು (ಸರಕಾರಿ ಪಡೆಗಳಾಗಿರಬಹುದು ಅಥವಾ ಸರಕಾರೇತರ ಗುಂಪುಗಳಾಗಿರಬಹುದು) ಒಂದು ಸಾವಿರ ಅಥವಾ ಅದಕ್ಕಿಂತಲೂ ಹೆಚ್ಚಿನ ಜನರನ್ನು ಅವರು ನಿರ್ದಿಷ್ಟ ಗುಂಪೊಂದರ ಸದಸ್ಯರಾಗಿರುವ ಕಾರಣಕ್ಕಾಗಿ ಕೊಂದರೆ, ಅದನ್ನು ಜನಾಂಗೀಯ ಹತ್ಯೆ ಎಂಬುದಾಗಿ ಯುನೈಟೆಡ್ ಸ್ಟೇಟ್ಸ್ ಹೋಲೊಕಾಸ್ಟ್ ಮೆಮೋರಿಯಲ್ ಮ್ಯೂಸಿಯಮ್ ಪರಿಗಣಿಸುತ್ತದೆ. ಸರಕಾರದ ಬೆಂಬಲ ಪಡೆದ ಖಾಸಗಿ ಸಶಸ್ತ್ರ ಗುಂಪುಗಳು ಕೋಮುಗಲಭೆ ನಡೆಸಿ ಜನರನ್ನು ಕೊಲ್ಲುವ ವ್ಯವಸ್ಥೆಗೆ ಭಾರತ ಶೀಘ್ರವೇ ತೆರೆದುಕೊಳ್ಳಲಿದೆ ಎಂದು ಅದು ನಿರೀಕ್ಷಿಸಿದೆ.
ಆದರೆ, ನಾವದನ್ನು ಕೇಳಿಸಿಕೊಳ್ಳುತ್ತಿದ್ದೇವೆಯೇ? ಭಾರತದೊಳಗೂ ಪ್ರಭಾವಿ ಹಾಗೂ ಗೌರವಾನ್ವಿತ ಧ್ವನಿಗಳು ಇಂತಹದೇ ಕಳವಳಗಳನ್ನು ವ್ಯಕ್ತಪಡಿಸುತ್ತಿವೆ. ಇಂತಹ ಕಳವಳಗಳನ್ನು ವ್ಯಕ್ತಪಡಿಸಿದವರಲ್ಲಿ ಬುದ್ಧಿಜೀವಿಗಳು, ನಿವೃತ್ತ ನ್ಯಾಯಾಧೀಶರು, ನಿವೃತ್ತ ಹಿರಿಯ ನಾಗರಿಕ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಮಾನವಹಕ್ಕುಗಳ ಕಾರ್ಯಕರ್ತರು ಹಾಗೂ ಇತ್ತೀಚೆಗೆ ಪ್ರತಿಪಕ್ಷ ರಾಜಕೀಯ ನಾಯಕರು ಸೇರಿದ್ದಾರೆ. ಆದರೆ, ಸರಕಾರ ಮತ್ತು ಆಡಳಿತಾರೂಢ ಪಕ್ಷದ ಹಿರಿಯ ನಾಯಕರು ಇದರಿಂದ ಧೃತಿಗೆಟ್ಟಿಲ್ಲ. ಅವರ ಹಿಂದುತ್ವ ಯೋಜನೆಗೆ ಭಾರತದ ಹಿಂದೂಗಳು ಮತ್ತು ದ್ವೇಷಿಸಲ್ಪಡುವ ‘ಇತರರ’ ನಡುವೆ ಹಿಂಸಾತ್ಮಕ ಕಂದಕವೊಂದು ಬೇಕಾಗಿದೆ. ಇಲ್ಲಿ ‘ಇತರರು’ ಎಂದರೆ ಭಾರತದ ಮುಸ್ಲಿಮರು ಮತ್ತು ಕ್ರೈಸ್ತರು. ದೇಶವನ್ನು ದ್ವೇಷ, ಭೀತಿ ಮತ್ತು ರಕ್ತದ ಭಯಾನಕ ದಾರಿಗೆ ದೂಡಲು ನಮ್ಮ ನಾಯಕರು ಎಂದಿನಂತೆಯೇ ದೃಢ ನಿರ್ಧಾರ ಮಾಡಿದ್ದಾರೆ.
ಹಲವು ‘ಪೂರ್ವ ಲಕ್ಷಣಗಳು’ ಎಲ್ಲೆಲ್ಲೂ ಕಾಣಿಸುತ್ತಿವೆ. ಅದನ್ನು ನೋಡಲು ನಿಮಗೆ ಕಣ್ಣು ಮತ್ತು ಗುರುತಿಸಲು ಹೃದಯ ಬೇಕಾಗಿದೆ ಅಷ್ಟೆ. ಎಲ್ಲೆಲ್ಲೂ ನಾವು ಅತ್ಯಂತ ವಿಷಕಾರಿ ದ್ವೇಷಭಾಷಣಗಳನ್ನು ಕೇಳುತ್ತಾ ಇದ್ದೇವೆ. ಎನ್‌ಡಿಟಿವಿ ಯು ‘ವಿಐಪಿ’ ದ್ವೇಷ ಭಾಷಣ ಅಥವಾ ಸರಕಾರದ ಅಥವಾ ರಾಜಕೀಯ ಪಕ್ಷಗಳ ಹಿರಿಯ ನಾಯಕರು ಮಾಡುವ ದ್ವೇಷ ಭಾಷಣಗಳನ್ನು ದಾಖಲಿಸುತ್ತಿದೆ. ಹಿಂದಿನ ಸರಕಾರದ ಅವಧಿಗೆ ಹೋಲಿಸಿದರೆ, 2014ರ ಬಳಿಕ ನರೇಂದ್ರ ಮೋದಿ ಸರಕಾರದ ಅವಧಿಯಲ್ಲಿ ದ್ವೇಷ ಭಾಷಣಗಳ ಪ್ರಮಾಣದಲ್ಲಿ ಶೇ. 1,130ರಷ್ಟು ಏರಿಕೆಯಾಗಿದೆ. ಯುಪಿಎ-2ರ ಅವಧಿಯಲ್ಲಿ ವಿಐಪಿಗಳು ದ್ವೇಷ ಭಾಷಣಗಳನ್ನು ಮಾಡುವ ಪ್ರಮಾಣ ತಿಂಗಳಿಗೆ 0.3 ಆಗಿತ್ತು. ಆದರೆ ಅದು ಮೋದಿ ಸರಕಾರದಲ್ಲಿ ತಿಂಗಳಿಗೆ 3.7ಕ್ಕೆ ಜಿಗಿದಿದೆ. ಸಹಜವಾಗಿಯೇ, ಇದರಲ್ಲಿ ಬಿಜೆಪಿಯ ಪಾಲು ಶೇ. 80ಕ್ಕಿಂತಲೂ ಅಧಿಕವಿದೆ. ಈ ದ್ವೇಷ ಭಾಷಣಗಳು ಭಾರತೀಯ ಮುಸ್ಲಿಮರ ಮೇಲೆ ಕಳಂಕ ಹೊರಿಸುತ್ತವೆ, ಅವರನ್ನು ವ್ಯಂಗ್ಯ ಮಾಡುತ್ತವೆ, ಅವಮಾನ ಮಾಡುತ್ತವೆ ಹಾಗೂ ಕೆಲವು ಸಲ ಮುಸ್ಲಿಮರ ವಿರುದ್ಧ ಹಿಂಸಾಚಾರ ನಡೆಸುವಂತೆ ಬಹಿರಂಗವಾಗಿ ಪ್ರಚೋದನೆ ನೀಡುತ್ತವೆ. ಹಲವು ಸಂದರ್ಭಗಳಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ದ್ವೇಷ ಭಾಷಣಗಳನ್ನು ಮಾಡುತ್ತಾರೆ. ಆದರೆ ಅವರ ಗೃಹ ಸಚಿವ, ಸಂಪುಟ ಸಚಿವರು ಮತ್ತು ಮುಖ್ಯಮಂತ್ರಿಗಳು ಅತ್ಯಂತ ಉದ್ವಿಗ್ನಕಾರಕ ದ್ವೇಷಭಾಷಣಗಳನ್ನು ಪದೇ ಪದೇ ಮಾಡುತ್ತಾರೆ. ಮುಸ್ಲಿಮರು ಇತಿಹಾಸದಲ್ಲಿ ಹಿಂದೂಗಳನ್ನು ಹಿಂಸಾತ್ಮಕವಾಗಿ ದಮನಿಸಿದ ಮತಾಂಧರು ಹಾಗೂ ಹಿಂದೂ ದೇವಾಲಯಗಳನ್ನು ಒಡೆದವರು ಎಂಬುದಾಗಿ ಅವರು ಬಿಂಬಿಸುತ್ತಾರೆ. ಹಾಗೂ ಸಮಕಾಲೀನ ಮುಸ್ಲಿಮರು ಪಾಕಿಸ್ತಾನಕ್ಕೆ ನಿಷ್ಠೆ ಹೊಂದಿರುವ ದೇಶದ್ರೋಹಿಗಳು, ಭಯೋತ್ಪಾದಕರು, ಲೈಂಗಿಕ ದೌರ್ಜನ್ಯಗಳನ್ನು ನಡೆಸುವವರು, ಲವ್ ಜಿಹಾದಿಗಳು, ಗೋಹಂತಕರು, ಮಕ್ಕಳನ್ನು ಉತ್ಪಾದಿಸುವವರು ಮತ್ತು ಅಕ್ರಮ ನುಸುಳುಕೋರರು ಎಂಬುದಾಗಿ ಬಣ್ಣಿಸುತ್ತಾರೆ. ಕ್ರೈಸ್ತರು ವಿದೇಶಿ ದೇಣಿಗೆಗಳನ್ನು ಪಡೆದುಕೊಂಡು ಬಡವರಿಗೆ ಹಣ ನೀಡಿ ಮಾನವೀಯ ಸೇವೆಗಳ ಹೆಸರಿನಲ್ಲಿ ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುತ್ತಾರೆ ಎಂಬುದಾಗಿ ಅವರು ಆರೋಪಿಸುತ್ತಾರೆ.
ವಿವಿಧ ಶ್ರೇಣಿಯ ಬಲಪಂಥೀಯ ಬೆಂಬಲಿಗರು ಆನ್‌ಲೈನ್ ಮಾಧ್ಯಮಗಳು ಮತ್ತು ಸಾರ್ವಜನಿಕ ಭಾಷಣಗಳ ಮೂಲಕ ತಮ್ಮ ದ್ವೇಷವನ್ನು ಯಾವುದೇ ಎಗ್ಗಿಲ್ಲದೆ ಕಾರುತ್ತಾರೆ. ಸಾಮೂಹಿಕ ಹತ್ಯೆ, ಸಾಮೂಹಿಕ ಅತ್ಯಾಚಾರ, ಬಹಿಷ್ಕಾರ ಮತ್ತು ಉಚ್ಚಾಟನೆ ನಡೆಸುವಂತೆ ಅವರು ಬಹಿರಂಗವಾಗಿ ಕರೆ ನೀಡುತ್ತಾರೆ. ಇವರಲ್ಲಿ ಕೇಸರಿ ಬಟ್ಟೆಗಳನ್ನು ಧರಿಸಿದವರು, ನಿರುದ್ಯೋಗಿ ಯುವಕರು ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರೂ ಸೇರಿದ್ದಾರೆ. ಕೆಲವು ಸಂದರ್ಭಗಳಲ್ಲಿ, ದಾಖಲೆಗಾಗಿ, ಸರಕಾರವು ಈ ‘ನಗಣ್ಯ’ ಶಕ್ತಿಗಳಿಂದ ತೆಳು ಅಂತರವನ್ನು ಕಾಯ್ದುಕೊಳ್ಳುತ್ತದೆ. ಆದರೆ, ಈ ಅಂತರವು ದಿನಗಳೆದಂತೆ ಕರಗುತ್ತದೆ. ದ್ವೇಷಭಾಷಣಗಳನ್ನು ಮಾಡಿದವರಿಗೆ ಶಿಕ್ಷೆಯಾದ ಉದಾಹರಣೆಗಳು ತೀರಾ ಕಡಿಮೆ. ಅವರ ಪೈಕಿ ಹೆಚ್ಚಿನವರನ್ನು ಬಳಿಕ ಪಕ್ಷದ ಹುದ್ದೆಗಳಿಗೆ ನೇಮಿಸಲಾಗುತ್ತದೆ.
2020ರಲ್ಲಿ ದಿಲ್ಲಿಯಲ್ಲಿ ನಡೆದ ಕೋಮು ಗಲಭೆಗೆ ನಾಂದಿ ಹಾಡಿದ ಪ್ರಚೋದನಾತ್ಮಕ ದ್ವೇಷ ಭಾಷಣಗಳನ್ನು ಮಾಡಿದ ಬಿಜೆಪಿ ನಾಯಕರ ವಿರುದ್ಧ ಕನಿಷ್ಠ ಪೊಲೀಸ್ ದೂರನ್ನಾದರೂ ದಾಖಲಿಸಿ ಎಂದು ಕೋರಿ ನಾನು ಹೈಕೋರ್ಟ್‌ಗೆ ಹೋದೆ. ಆದರೆ, ನ್ಯಾಯಾಲಯದಲ್ಲಿ ಸರಕಾರವು ಅದನ್ನು ತೀವ್ರವಾಗಿ ವಿರೋಧಿಸಿತು. ಈಗ ಪ್ರಕರಣ ಎಲ್ಲಿತ್ತೋ ಅಲ್ಲೇ ಸ್ಥಗಿತಗೊಂಡಿದೆ. ಕೆಲವು ಅತ್ಯಂತ ವಿಷಕಾರಿ ದ್ವೇಷ ಪ್ರಸಾರಕರನ್ನು ಸ್ವತಃ ಪ್ರಧಾನಿಯೇ ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ.
ಜನಾಂಗೀಯ ಹತ್ಯೆಯ ಇತರ ಲಕ್ಷಣಗಳೆಂದರೆ, ಭಾರತೀಯ ಮುಸ್ಲಿಮರನ್ನು ಗುರಿಯಾಗಿಸಿ ಅವರ ಮೇಲೆ ಹಿಂಸೆಯನ್ನು ಹರಿಯಬಿಡುವುದು. ಗೋರಕ್ಷಣೆ ಹೆಸರಿನಲ್ಲಿ ಗುಂಪುಗಳು ಮುಸ್ಲಿಮರನ್ನು ಥಳಿಸಿ ಕೊಲ್ಲುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ದೇವಸ್ಥಾನವೊಂದರಲ್ಲಿ ನೀರು ಕುಡಿದದ್ದಕ್ಕಾಗಿ ಮಗುವೊಂದನ್ನು ಥಳಿಸಲಾಗಿತ್ತು, ಹಿಂದೂ ಹುಡುಗಿಯರಿಗೆ ಬಳೆಗಳನ್ನು ಮಾರಾಟ ಮಾಡುವ ಧೈರ್ಯ ತೋರಿಸಿರುವುದಕ್ಕಾಗಿ ಓರ್ವ ಯುವಕನ ಮೇಲೆ ಹಲ್ಲೆ ನಡೆಸಲಾಯಿತು, ಮಾಂಸ ಮಾರಾಟ ಮಾಡಿದ್ದಕ್ಕಾಗಿ ಇನ್ನೋರ್ವನಿಗೆ ಹೊಡೆಯಲಾಯಿತು. ಮುಸ್ಲಿಮರಂತೆ ಕಾಣುತ್ತಾರೆ ಎಂಬ ಏಕೈಕ ‘ಅಪರಾಧ’ಕ್ಕಾಗಿ ಜನರ ಮೇಲೆ ನಡೆಯುವ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಕ್ರೈಸ್ತರ ಆರಾಧನಾಲಯಗಳನ್ನು ನಡೆಸುತ್ತಿರುವುದಕ್ಕಾಗಿಯೂ ಜನರ ಮೇಲೆ ಹಲ್ಲೆ ನಡೆಸಲಾಗುತ್ತಿದೆ.
ಅತ್ಯಂತ ಹೆಚ್ಚು ಆಘಾತಕಾರಿಯಾಗಿರುವುದು, ಬಹಿರಂಗವಾಗಿ ಮುಸ್ಲಿಮರನ್ನು ಗುರಿಯಾಗಿಸಿ ಸರಕಾರ ತೆಗೆದುಕೊಳ್ಳುವ ಕ್ರಮಗಳು. 2019ರ ಪೌರತ್ವ ತಿದ್ದುಪಡಿ ಕಾಯ್ದೆಯ ಸಂಭಾವ್ಯ ಪರಿಣಾಮಗಳ ಬಗ್ಗೆ ಮುಖ್ಯವಾಗಿ ‘ಜೆನೋಸೈಡ್ ವಾಚ್’ ಚಿಂತಿತವಾಗಿದೆ. ಈ ಕಾಯ್ದೆಯು ಮ್ಯಾನ್ಮಾರ್‌ನಲ್ಲಿ ನಡೆದ ಪ್ರಕ್ರಿಯೆಗಳಿಗೆ ಹೋಲುತ್ತದೆ. ಅಲ್ಲಿ ರೊಹಿಂಗ್ಯಾ ಮುಸ್ಲಿಮರನ್ನು ಮೊದಲು ದೇಶದ ನಾಗರಿಕರಲ್ಲ ಎಂಬುದಾಗಿ ಘೋಷಿಸಲಾಯಿತು ಹಾಗೂ ಬಳಿಕ ಅವರ ಮೇಲೆ ಭೀಕರ ದಾಳಿ ನಡೆಸಿ ಹೊರಗಟ್ಟಲಾಯಿತು. ಪೌರತ್ವ ತಿದ್ದುಪಡಿ ಕಾಯ್ದೆಯೊಂದಿಗೆ ರಾಷ್ಟ್ರೀಯ ಭಾರತೀಯ ನಾಗರಿಕರ ನೋಂದಣಿಯನ್ನು ಅನುಷ್ಠಾನಗೊಳಿಸಿಸುವುದೆಂದರೆ, ನಾಝಿ ಕಾಲದ ಜರ್ಮನಿಯ ನುರೆಂಬರ್ಗ್ ಕಾನೂನುಗಳನ್ನು ಜಾರಿಗೊಳಿಸಿದಂತೆ ಎಂಬ ಭೀತಿ ಎಲ್ಲೆಡೆ ಇದೆ.
ಹಲವು ರಾಜ್ಯ ಸರಕಾರಗಳು ‘ಲವ್ ಜಿಹಾದ್’ ಕಾನೂನನ್ನು ಜಾರಿಗೆ ತಂದಿವೆ. ಮುಸ್ಲಿಮ್ ಪುರುಷರು ಹಿಂದೂ ಮಹಿಳೆಯರನ್ನು ಅವರ ಒಪ್ಪಿಗೆಯೊಂದಿಗೆ ಮದುವೆಯಾಗುವುದನ್ನು ಈ ಕಾನೂನು ಅಪರಾಧವಾಗಿಸುತ್ತದೆ. ದನದ ಮಾಂಸದ ವ್ಯಾಪಾರ ನಡೆಸುತ್ತಿದ್ದರೆನ್ನಲಾದ ಹಲವರನ್ನು ರಾಷ್ಟ್ರೀಯ ಭದ್ರತಾ ಕಾನೂನುಗಳಡಿ ಜೈಲಿಗೆ ಹಾಕಲಾಗಿದೆ. ಮುಸ್ಲಿಮರು ಮಾಡಿರುವ ಹೊಲ ‘ಒತ್ತುವರಿಗಳನ್ನು’ ತೆರವುಗೊಳಿಸುವ ಅಭಿಯಾನವೊಂದನ್ನು ಅಸ್ಸಾಮ್ ಮುಖ್ಯಮಂತ್ರಿ ಆರಂಭಿಸಿದ್ದಾರೆ. ಈ ಜಮೀನುಗಳನ್ನು ‘ಮೂಲನಿವಾಸಿ’ಗಳಿಗೆ ನೀಡಲಾಗುವುದು ಎಂಬುದಾಗಿ ಅವರು ಘೋಷಿಸಿದ್ದಾರೆ.
ಸಂಭಾವ್ಯ ಜನಾಂಗೀಯ ಹತ್ಯೆಯ ಎಚ್ಚರಿಕೆಯನ್ನು ಅಪಪ್ರಚಾರ, ದುರುದ್ದೇಶಪೂರಿತ ಹಾಗೂ ವಿದೇಶಿ ಹಸ್ತಕ್ಷೇಪ ಎಂಬುದಾಗಿ ಸರಕಾರದ ಬೆಂಬಲಿಗರು ಸುಲಭವಾಗಿ ಬಣ್ಣಿಸುತ್ತಾರೆ. ಇದು ‘‘ದೇಶದ ಆತ್ಮಸಾಕ್ಷಿಯನ್ನು ಎಚ್ಚರಿಸುವ’’ ಪ್ರಯತ್ನಗಳಲ್ಲ ಎಂಬುದಾಗಿ ಅವರು ವಾದಿಸುತ್ತಾರೆ. ಆದರೆ, ಇಂತಹ ನಿರಾಕರಣೆಗಳ ಅಪಾಯಗಳ ಬಗ್ಗೆಯೂ ಹೋಲೊಕಾಸ್ಟ್ ಮೆಮೋರಿಯಲ್ ಮ್ಯೂಸಿಯಮ್ ರಿಪೋರ್ಟ್ ಎಚ್ಚರಿಸುತ್ತದೆ. ‘‘ಮುಂಚಿತ ಎಚ್ಚರಿಕೆಯ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಏನು ಆಗಬಹುದು ಎನ್ನುವುದನ್ನು ನಾವು ನಾಝಿಗಳು ನಡೆಸಿದ ಯೆಹೂದಿಗಳ ನರಮೇಧದಿಂದ ಕಲಿತುಕೊಂಡಿದ್ದೇವೆ. ಜನಾಂಗೀಯ ಹತ್ಯೆ ಮತ್ತು ಅದಕ್ಕೆ ಸಂಬಂಧಿಸಿದ ಮಾನವತೆಯ ವಿರುದ್ಧದ ಅಪರಾಧಗಳ ಪ್ರಮಾಣ ಮತ್ತು ವ್ಯಾಪ್ತಿಯಲ್ಲಿ ಅತ್ಯಂತ ವಿನಾಶಕಾರಿಯಾಗಿರುತ್ತವೆ ಎನ್ನುವುದನ್ನು ಅದು ನಮಗೆ ನೆನಪಿಸುತ್ತದೆ. ಅವುಗಳು ಬದುಕುಳಿದವರು ಮತ್ತು ಅವರ ಕುಟುಂಬ ಸದಸ್ಯರಲ್ಲಿ ಆರದ ಗಾಯವನ್ನೂ, ಸಮಾಜಗಳಲ್ಲಿ ದೀರ್ಘಕಾಲೀನ ಆಘಾತವನ್ನು ಉಂಟು ಮಾಡುತ್ತವೆ’’ ಎಂದು ಹೋಲೊಕಾಸ್ಟ್ ಮೆಮೋರಿಯಲ್ ಮ್ಯೂಸಿಯಮ್ ರಿಪೋರ್ಟ್ ಹೇಳುತ್ತದೆ.
ಇತರ ದೇಶಗಳು ಜರ್ಮನಿಯಿಂದ ಏನು ಕಲಿಯಬಹುದು ಎಂಬ ಬಗ್ಗೆ ಸೂಸಾನ್ ನೈಮರ್ ಜೊತೆ ಮಾತನಾಡುತ್ತಾ ಪೂರ್ವ ಜರ್ಮನಿಯ ಪಾಸ್ಟರ್ ಶೋರ್ಲೆಮರ್ ಹೀಗೆ ಹೇಳಿದ್ದಾರೆ. ‘‘ನಾವು ಬಿದ್ದ ಪ್ರಪಾತಕ್ಕೆ ಯಾವುದೇ ದೇಶ, ಯಾವುದೇ ಸಂಸ್ಕೃತಿ ಮತ್ತು ಯಾವುದೇ ಧರ್ಮವೂ ಬೀಳಬಹುದು ಎನ್ನುವುದನ್ನು ನೀವು ಕಲಿಯಬಹುದು. ಒಮ್ಮೆ ಅದು ಆರಂಭಗೊಂಡ ಬಳಿಕ, ಜನರು ತಮ್ಮ ಆತ್ಮಸಾಕ್ಷಿಯನ್ನು ಮುಚ್ಚಿಕೊಳ್ಳುತ್ತಾರೆ ಹಾಗೂ ಬಲಿಷ್ಠ ವ್ಯಕ್ತಿಯ ಪರವಾಗಿ ನಿಲ್ಲುತ್ತಾರೆ’’ ಎಂದು ಅವರು ಹೇಳುತ್ತಾರೆ. ಇದನ್ನು ನಾವು ಕೇಳಿಸಿಕೊಳ್ಳಲು ಸಿದ್ಧರಾಗಿದ್ದೇವೆಯೇ?
ನಮ್ಮ ನಾಯಕರು ಭಾರತವನ್ನು ಪ್ರಪಾತದ ಅಂಚಿಗೆ ತಂದು ನಿಲ್ಲಿಸಿದ್ದಾರೆ ಎನ್ನುವುದನ್ನಾದರು ಗುರುತಿಸಲು ನಮಗೆ ಸಾಧ್ಯವಾಗುತ್ತದೆಯೇ? ನಮ್ಮವರು ಸಾಕಷ್ಟು ಸಂಖ್ಯೆಯಲ್ಲಿ ತಮ್ಮ ಆತ್ಮಸಾಕ್ಷಿಯನ್ನು ಮುಚ್ಚಿಕೊಳ್ಳಲಾರರು ಎನ್ನುವುದಷ್ಟೇ ನನ್ನ ಹತಾಶ ಬಯಕೆಯಾಗಿದೆ.