ಅಜ್ಞಾನದ ಕತ್ತಲನ್ನು ಓಡಿಸಿದ ವಿಜ್ಞಾನದ ಬೆಳಕು

Update: 2022-02-26 19:30 GMT

ನಾಳೆ (ಫೆಬ್ರವರಿ 28) ರಾಷ್ಟ್ರೀಯ ವಿಜ್ಞಾನ ದಿನಾಚರಣೆ. ಭಾರತದ ಖ್ಯಾತ ವಿಜ್ಞಾನಿ ಸರ್.ಸಿ.ವಿ.ರಾಮನ್ ಅವರು ಬೆಳಕಿನ ವಿಕಿರಣದ ವಿದ್ಯಮಾನಗಳನ್ನು ಕಂಡುಹಿಡಿದ ದಿನ. ಆನಂತರ ಅದು ‘ರಾಮನ್ ಬೆಳಕಿನ ಪರಿಣಾಮ’ ಎಂದೇ ಪ್ರಸಿದ್ಧಿ ಪಡೆಯಿತು. 1930ರಲ್ಲಿ ಬೆಳಕಿನ ಕುರಿತ ಅದ್ವಿತೀಯ ಸಂಶೋಧನೆಗಾಗಿ ರಾಮನ್ ಅವರು ನೊಬೆಲ್ ಪುರಸ್ಕಾರವನ್ನೂ ಪಡೆದರು. ಇದು ಭಾರತದ ಪಾಲಿಗೆ ಮೊದಲನೇ ನೊಬೆಲ್ ಪುರಸ್ಕಾರವಾಗಿದೆ. ಈ ಪ್ರಸಿದ್ಧ ವಿದ್ಯಮಾನದ ನೆನಪಿಗಾಗಿ ಪ್ರತಿವರ್ಷ ಫೆಬ್ರವರಿ 28ರಂದು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಗುತ್ತದೆ.

ಏನಿದು ರಾಮನ್ ಪರಿಣಾಮ?:

ರಾಮನ್ ಪರಿಣಾಮ ಎಂಬುದು ಬೆಳಕಿನ ಕುರಿತಾದ ಭೌತವಿಜ್ಞಾನದ ಪರಿಣಾಮವಾಗಿದ್ದು ಇದನ್ನು ಕೋಲ್ಕತಾದ ಪ್ರಯೋಗಶಾಲೆಯಲ್ಲಿ ಸಂಶೋಧಿಸಲಾಯಿತು. ಬೆಳಕಿನ ಕಿರಣವನ್ನು ಅಣುಗಳಿಂದ ತಿರುಗಿಸಿದಾಗ ಸಂಭವಿಸುವ ಬೆಳಕಿನ ತರಂಗಾಂತರದ ಬದಲಾವಣೆಯೇ ರಾಮನ್ ಪರಿಣಾಮವಾಗಿದೆ. ಒಂದು ಬೆಳಕಿನ ಕಿರಣವು ಧೂಳು ಮುಕ್ತ ಪಾರದರ್ಶಕ ರಸಾಯನಿಕ ವಸ್ತುವಿನ ಮೂಲಕ ಹಾದು ಹೋದಾಗ ಮೂಲ ಕಿರಣದ ಹೊರತಾದ ಒಂದು ಸಣ್ಣ ಭಾಗವು ಬೇರೆ ಬೇರೆ ದಿಕ್ಕಿನಲ್ಲಿ ಚದುರುತ್ತದೆ. ಚದುರಿದ ಬಹುಪಾಲು ಕಿರಣಗಳ ಸ್ವರೂಪ ಮೂಲ ಕಿರಣದಂತೆಯೇ ಇರುತ್ತದೆ. ಆದಾಗ್ಯೂ ಒಂದು ಚಿಕ್ಕ ಭಾಗವು ಮೂಲ ತರಂಗಾಂತರದ ಘಟನೆಗಿಂತ ಭಿನ್ನವಾಗಿರುತ್ತದೆ. ಇದೇ ರಾಮನ್ ಬೆಳಕಿನ ಪರಿಣಾಮವಾಗಿದೆ. ಆಕಸ್ಮಿಕ ಪ್ರಶ್ನೆಯ ಜಾಡು ಹಿಡಿದಾಗ...: ರಾಮನ್ ಅವರು ಒಮ್ಮೆ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಆಗ ಅವರಿಗೆ ಸಮುದ್ರ ಯಾವಾಗಲೂ ಏಕೆ ನೀಲಿಯಾಗಿಯೇ ಕಾಣುತ್ತದೆ? ಎಂಬ ಪ್ರಶ್ನೆ ಉದ್ಭವವಾಯಿತು. ಆಕಾಶದ ನೀಲಿ ಬಣ್ಣದ ಪ್ರತಿಫಲನವೇ ಅದಕ್ಕೆ ಕಾರಣ ಇರಬೇಕು ಎಂದುಕೊಂಡು ಸುಮ್ಮನಾದರು. ಆದರೂ ಆ ಪ್ರಶ್ನೆ ಪದೇ ಪದೇ ಕಾಡತೊಡಗಿತು. ಸಮುದ್ರದ ನೀಲಿ ಬಣ್ಣದ ಹಿಂದೆ ಬೇರೇನೋ ಇದೆ ಎಂದು ತಿಳಿಯುವ ಕುತೂಹಲ ಹೆಚ್ಚಾಯಿತು. ಪ್ರಶ್ನೆ ಮತ್ತು ಕುತೂಹಲಗಳನ್ನು ತಣಿಸಲು ನೀಲಿ ಬಣ್ಣದ ಹಿಂದಿನ ರಹಸ್ಯ ಪತ್ತೆಹಚ್ಚಲು ಹೊರಟರು. ಸೂರ್ಯನ ಬೆಳಕು ನೀರಿನಲ್ಲಿ ಚದುರಿ ಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಎಂಬ ವಿಷಯ ಪತ್ತೆ ಹಚ್ಚಿದರು. ಈ ಅಂಶ ಅವರ ಮುಂದಿನ ಅಧ್ಯಯನಕ್ಕೆ ಪ್ರೇರಣೆಯಾಯಿತು.
ರಾಮನ್ ಪರಿಣಾಮಕ್ಕೆ ಏಕಿಷ್ಟು ಮಹತ್ವ?: ಬೆಳಕು ಒಂದು ಪಾರದರ್ಶಕ ವಸ್ತುವಿನ ಮೂಲಕ ಹಾದು ಹೊರ ಬರುವಾಗ ಮೂಲ ಬೆಳಕಿನ ಕಿರಣದ ಹೊರತಾದ ಚಿಕ್ಕ ಚಿಕ್ಕ ಕಿರಣಗಳ ತರಂಗಾಂತರದಲ್ಲಿ ಬದಲಾವಣೆ ಆಗುತ್ತದೆ. ತರಂಗಾಂತರದಲ್ಲಿನ ಈ ಬದಲಾವಣೆಗೂ ಪಾರದರ್ಶಕ ವಸ್ತುವಿನ ರಚನೆಗೂ ನೇರ ಸಂಬಂಧ ಇರುವುದನ್ನು ರಾಮನ್ ಪತ್ತೆಹಚ್ಚಿದರು. ಬೆಳಕಿನ ಈ ವಿದ್ಯಮಾನವನ್ನು ಅಧ್ಯಯನ ಮಾಡುವ ಮೂಲಕ ವಸ್ತುವಿನ ರಚನೆಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ರಾಮನ್ ಅವರ ಈ ಅಧ್ಯಯನದ ಫಲವಾಗಿ ಸಾವಿರಾರು ಸಂಯುಕ್ತಗಳ ರಚನೆಯನ್ನು ಅಭ್ಯಾಸ ಮಾಡುವುದು ಸಾಧ್ಯವಾಯಿತು. ರಾಮನ್ ಬೆಳಕಿನ ಪರಿಣಾಮ ಪ್ರಕಟವಾದ ಹನ್ನೆರಡು ವರ್ಷಗಳ ಅವಧಿಯಲ್ಲಿ ಆ ವಿದ್ಯಮಾನ ಕುರಿತ ಬೇರೆ ಬೇರೆ ವಿಜ್ಞಾನಿಗಳು ಬರೆದ ಒಟ್ಟು ಪ್ರೌಢಪ್ರಬಂಧಗಳ ಸಂಖ್ಯೆ 1,800. ಇದರಿಂದ ರಾಮನ್ ಬೆಳಕಿನ ಪರಿಣಾಮದ ಎಫೆಕ್ಟ್ ಎಷ್ಟಿದೆಯೆಂಬುದು ತಿಳಿಯುತ್ತದೆ.

ವಿಜ್ಞಾನದ ಬೆಳಕು:

ಇಂದು ವಿಜ್ಞಾನದ ಬೆಳಕು ಎಲ್ಲೆಡೆ ಹರಡಿದೆ. ಇಂದಿನ ಜಗತ್ತಿನಲ್ಲಿ ವಿಜ್ಞಾನ ಎಲ್ಲೆಡೆ ಇದೆ. ಅದು ನಮ್ಮ ದೈನಂದಿನ ಜೀವನದ ಭಾಗವಾಗಿದೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಅಥವಾ ಮಲಗಿದ ನಂತರವೂ ವಿಜ್ಞಾನದಿಂದ ಆವಿಷ್ಕಾರಗೊಂಡ ವಿವಿಧ ಸಾಧನ ಸಲಕರಣೆಗಳನ್ನು ಬಳಸುತ್ತಲೇ ದೈನಂದಿನ ಜೀವನ ಕಳೆಯುತ್ತೇವೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿಗಳು ನಮ್ಮ ಜಗತ್ತನ್ನು ನಂಬಲಾಗದ ವೇಗದಲ್ಲಿ ಪರಿವರ್ತಿಸಿದೆ. ಅದೇ ರೀತಿ ನಮ್ಮ ಮಕ್ಕಳ ಭವಿಷ್ಯವು ಖಂಡಿತವಾಗಿಯೂ ನಾವು ಊಹಿಸಬಹುದಾದ ರೀತಿಯಲ್ಲಿ ತಂತ್ರಜ್ಞಾನದ ಬಳಕೆಯಿಂದ ತುಂಬಿರುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನವು ಮಾನವ ಜೀವನವನ್ನು ಸುಗಮಗೊಳಿಸಿದೆ ಮತ್ತು ನಮಗೆ ಆರಾಮದಾಯಕವಾಗಿದೆ ಮತ್ತು ಆಧುನಿಕ ಜೀವನ ವಿಧಾನದಲ್ಲಿ ಬದುಕಲು ನಮಗೆ ಅನುವು ಮಾಡಿಕೊಟ್ಟಿದೆ. ಮೈಕ್ರೋವೇವ್‌ಗಳು, ಫ್ಯಾನ್‌ಗಳು, ಸ್ಮಾರ್ಟ್‌ಫೋನ್‌ಗಳು, ನಮ್ಮ ಬದುಕನ್ನು ಇನ್ನಷ್ಟು ಸುಲಭಗೊಳಿಸಿವೆ. ವಿಜ್ಞಾನದಿಂದ ಸಾರಿಗೆ ಮತ್ತು ಸಂವಹನ ಸುಲಭ ಮತ್ತು ವೇಗಗೊಂಡಿದೆ. ಪ್ರಪಂಚದಾದ್ಯಂತದ ಇತರ ಜನರೊಂದಿಗೆ ಸಂವಹನ ನಡೆಸಲು ಮತ್ತು ಮಾಹಿತಿಯನ್ನು ಹಂಚಿಕೊಳ್ಳಲು ನಾವು ತಂತ್ರಜ್ಞಾನವನ್ನು ಬಳಸುತ್ತೇವೆ. ಇದಕ್ಕೆ ಇಂಟರ್ನೆಟ್ ಸೇರಿದಂತೆ ಮಾಹಿತಿ ತಂತ್ರಜ್ಞಾನದ ಕೊಡುಗೆ ಅಮೋಘವಾಗಿದೆ. ಡೇಟಾ ಮ್ಯಾಪಿಂಗ್ ಮತ್ತು ದೃಶ್ಯೀಕರಣ, ಕ್ರೌಡ್‌ಸೋರ್ಸಿಗ್ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ಇಂಟರ್ನೆಟ್ ಮತ್ತು ಸಂಬಂಧಿತ ಪರಿಕರಗಳು ಈಗಾಗಲೇ ಪ್ರಮುಖ ಮತ್ತು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿವೆ. ವ್ಯವಹಾರದಲ್ಲಿ ತಂತ್ರಜ್ಞಾನವೂ ಮುಖ್ಯವಾಗಿದೆ ಏಕೆಂದರೆ ವ್ಯವಹಾರಗಳು ಮತ್ತು ಇತರ ಘಟನೆಗಳು ಕಂಪ್ಯೂಟರ್ ಮೂಲಕ ನಡೆಯುತ್ತವೆ.

ವಿಜ್ಞಾನವು ಮನುಷ್ಯನಿಗೆ ಸಂಸ್ಕೃತಿಗಳನ್ನು ಸೃಷ್ಟಿಸಲು, ನೈತಿಕತೆ, ಸೌಂದರ್ಯಶಾಸ್ತ್ರ ಮತ್ತು ನ್ಯಾಯದಂತಹ ಸಾಮಾಜಿಕ ಕಾಳಜಿಗಳನ್ನು ಅನುಸರಿಸಲು ಮತ್ತು ಮಾನವ ಪರಿಸ್ಥಿತಿಗಳನ್ನು ಸುಧಾರಿಸಲು ಅವಕಾಶವನ್ನು ನೀಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನವು ನಮ್ಮನ್ನು ವಿಭಿನ್ನವಾಗಿ ಯೋಚಿಸುವಂತೆ ಮಾಡುತ್ತದೆ. ವಿಭಿನ್ನವಾಗಿ ಭಾವಿಸುವಂತೆ ಮತ್ತು ವಿಭಿನ್ನವಾಗಿ ಕನಸು ಕಾಣುವಂತೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಕೃತಕ ಬುದ್ಧಿಮತ್ತೆಯು ಸೃಷ್ಟಿಯಾಗಿದೆ. ವರ್ಚುಯಲ್ ರಿಯಾಲಿಟಿ ಮೂಲಕ ವಿಭಿನ್ನವಾದ ದೃಶ್ಯಗಳನ್ನು ಆಸ್ವಾದಿಸುತ್ತೇವೆ. ಕೆಲವು ತಾಂತ್ರಿಕ ಸಾಧನಗಳು ಮತ್ತು ಅಪ್ಲಿಕೇಶನ್‌ಗಳು ನಮ್ಮ ಕಾರ್ಯಸ್ಮರಣೆ, ಬುದ್ಧಿವಂತಿಕೆ ಮತ್ತು ಬಹುಕಾರ್ಯಕೌಶಲ್ಯಗಳನ್ನು ಸುಧಾರಿಸುತ್ತವೆ. ಶಿಕ್ಷಣ ಕ್ಷೇತ್ರಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ದೊಡ್ಡ ಕೊಡುಗೆ ನೀಡಿದೆ. ವಿಜ್ಞಾನದ ಪ್ರಕ್ರಿಯೆಯು ತಂತ್ರಜ್ಞಾನದ ಅನ್ವಯಗಳೊಂದಿಗೆ ಹೆಣೆದುಕೊಂಡಿದೆ. ವಿಜ್ಞಾನವು ನಮಗೆ ಅಗಾಧವಾದ ಜ್ಞಾನವನ್ನು ನೀಡಿದೆ ಮತ್ತು ಅದರಿಂದ ತಂತ್ರಜ್ಞಾನವು ಶಿಕ್ಷಣವನ್ನು ಸುಲಭಗೊಳಿಸುತ್ತಿದೆ. ನಮ್ಮ ಅಧ್ಯಯನ ಮತ್ತು ಕಲಿಕೆ ವಿಶೇಷತೆಯಿಂದ ಕೂಡಿರಲು ಅದು ನಮಗೆ ಸ್ಮಾರ್ಟ್ ತರಗತಿಗಳು, ಇಲೆಕ್ಟ್ರಾನಿಕ್ ಲೈಬ್ರರಿಗಳು, ಇ-ಪುಸ್ತಕಗಳು, ಮಲ್ಟಿಮೀಡಿಯಾ ಸಾಧನಗಳು ಮುಂತಾದ ಆಯ್ಕೆಗಳನ್ನು ಒದಗಿಸಿದೆ. ತಾಂತ್ರಿಕ ಸಾಕ್ಷರತೆ, ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆ-ಪರಿಹರಿಸುವ ಬೋಧನೆಯು ಮಕ್ಕಳು ತಮ್ಮದೇ ಆದ ಕಲಿಕೆಯ ವೇಗಕ್ಕೆ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಅವರಿಗೆ ಶಾಲೆಯಲ್ಲಿ ಮತ್ತು ಅದರಾಚೆಗೆ ಯಶಸ್ವಿಯಾಗಲು ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನವನ್ನು ನೀಡುತ್ತದೆ.

ವಿವಿಧ ದೀರ್ಘಕಾಲದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಮೂಲಕ ವಿಜ್ಞಾನವು ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡಿದೆ. ಕ್ಷ-ಕಿರಣಗಳು, ಸ್ಕ್ಯಾನ್‌ಗಳು, ವಿವಿಧ ಪರೀಕ್ಷಣಗಳು, ಶಸ್ತ್ರಚಿಕಿತ್ಸಾ ಉಪಕರಣಗಳ ಮೂಲಕ ವೇಗವಾಗಿ ರೋಗ ಪತ್ತೆ ಮತ್ತು ಚಿಕಿತ್ಸೆ ಪಡೆಯುವಲ್ಲಿ ನಾವು ತಂತ್ರಜ್ಞಾನದಿಂದ ಪ್ರಯೋಜನ ಪಡೆಯುತ್ತೇವೆ. ಆಧುನಿಕ ವಿಜ್ಞಾನವು ಕೃಷಿ ಮತ್ತು ತೋಟಗಾರಿಕೆಯಲ್ಲಿ ಮಹತ್ತರವಾದ ಬೆಳೆವಣಿಗೆಗೆ ಕಾರಣವಾಗಿದೆ. ಅಧಿಕ ಇಳುವರಿ ನೀಡುವ ಹಾಗೂ ರೋಗಮುಕ್ತವಾಗಿರುವ ಹೊಸ ತಳಿಗಳ ಸೃಷ್ಟಿ ಕಾರ್ಯ ನಡೆಯುತ್ತಲೇ ಇದೆ. ಮಣ್ಣಿನ ಗುಣಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುವ ಹಾಗೂ ಬೆಳೆದ ಬೆಳೆಗಳನ್ನು ಸಂರಕ್ಷಿಸಲು ತಂತ್ರಜ್ಞಾನ ಸಹಾಯ ಮಾಡಿದೆ.

ಮೌಢ್ಯದ ಕತ್ತಲು:
ಇಷ್ಟೆಲ್ಲಾ ಬದಲಾವಣೆಗಳಾದರೂ ನಮ್ಮಲ್ಲಿ ಇನ್ನೂ ಮೌಢ್ಯ ತೊಲಗಿಲ್ಲ. ಭೂ ಕೇಂದ್ರ ಸಿದ್ಧಾಂತದಿಂದ ಹೊರಬಂದರೂ ಮೌಢ್ಯಕೇಂದ್ರಿತ ಸಿದ್ಧಾಂತವನ್ನು ತೊಲಗಿಸಲು ಇನ್ನೂ ಸಾಧ್ಯವಾಗಿಲ್ಲ. ಪ್ರತಿದಿನ, ಪ್ರತಿಕ್ಷಣ ವಿಜ್ಞಾನದಿಂದಲೇ ರೂಪುಗೊಂಡ ಅನೇಕ ಸಾಧನ ಸಲಕರಣೆಗಳನ್ನು ಬಳಸುತ್ತಿದ್ದರೂ ನಮ್ಮ ಮನಸ್ಸು ಮೌಢ್ಯತೆಯಿಂದ ಹೊರಬರಲು ಆಗುತ್ತಿಲ್ಲ. ವಿಮರ್ಶಾತ್ಮಕವಾಗಿ ಯೋಚಿಸಲು ಕಲಿಸಲಾಗಿದ್ದರೂ ಅಥವಾ ಸಮಸ್ಯೆ ಅಥವಾ ಪರಿಸ್ಥಿತಿಯನ್ನು ವಿಶ್ಲೇಷಿಸಲು ಮತ್ತು ಪರೀಕ್ಷಿಸಲು ಸಾಧನಗಳು ಲಭ್ಯವಿದ್ದರೂ, ನಾವು ಮತ್ತದೇ ಮೌಢ್ಯದ ಕೂಪದಲ್ಲಿ ಬಿದ್ದು ಒದ್ದಾಡುತ್ತಿದ್ದೇವೆ. ಪ್ರತಿನಿತ್ಯ ನಾವು ನೋಡುವ ಬಹುತೇಕ ಚಿತ್ರಗಳು, ವೀಡಿಯೊಗಳು ಕಂಪ್ಯೂಟರ್ ತಂತ್ರಜ್ಞಾನದಿಂದ ಸೃಷ್ಟಿಯಾಗಿರುವಂತಹವು ಎಂಬ ವಾಸ್ತವಸತ್ಯ ಗೊತ್ತಿದ್ದರೂ ಅದೇ ಅಂತಿಮ ಸತ್ಯ ಎಂಬಂತೆ ನಂಬುತ್ತೇವೆ. ಮೌಢ್ಯದ ಕತ್ತಲೆಯಿಂದ ಆಚೆ ಬಂದು ವಿಜ್ಞಾನದ ಬೆಳಕನ್ನು ಕಾಣದ ಹೊರತು ನಮ್ಮ ಬದುಕಿಗೆ ಅರ್ಥವೆಲ್ಲಿದೆ?
ಪ್ರಸ್ತುತ ನಡೆಯುತ್ತಿರುವ ಬಹುತೇಕ ಸಮಸ್ಯೆಗಳಿಗೆ ವಿಜ್ಞಾನ ಮಾತ್ರ ಉತ್ತರವಾಗಬಲ್ಲದು. ವೈಜ್ಞಾನಿಕ ಜ್ಞಾನದ ಅನ್ವಯವು ಮಾನವನ ಮೂಲಭೂತ ಅಗತ್ಯಗಳನ್ನು ಪೂರೈಸಲು ಮತ್ತು ಜೀವನ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವೌಢ್ಯದ ಮಾರಿಯನ್ನು ಓಡಿಸಿ, ವಿಜ್ಞಾನದ ಬೆಳಕನ್ನು ಹಚ್ಚುವ ಮತ್ತು ಹಂಚುವ ಕಾರ್ಯ ವೇಗ ಪಡೆದುಕೊಳ್ಳಬೇಕಾದ ಸಂದಿಗ್ಧತೆ ಸೃಷ್ಟಿಯಾಗಿದೆ. ಎಲ್ಲರೂ ಕೈಜೋಡಿಸಿ ವಿಜ್ಞಾನದ ಬೆಳಕನ್ನು ಎಲ್ಲೆಡೆ ಹಂಚೋಣ.

Writer - ಆರ್.ಬಿ.ಗುರುಬಸವರಾಜ

contributor

Editor - ಆರ್.ಬಿ.ಗುರುಬಸವರಾಜ

contributor

Similar News