ಕಾಂಗ್ರೆಸ್ ‘ಹಸ್ತ’ವ್ಯಸ್ತ!

Update: 2022-02-27 09:25 GMT

ಉತ್ತರಪ್ರದೇಶದಲ್ಲಿನ ರಾಜಕೀಯ ಸಂಚಲನಗಳಿಗೂ ಮತ್ತು ನೆಹರೂ ಕುಟುಂಬದ ರಾಜಕೀಯಕ್ಕೂ ಮತ್ತು ನೆಹರೂ ಕುಟುಂಬವನ್ನೇ ನಂಬಿಕೊಂಡಿರುವ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಏಳುಬೀಳುಗಳಿಗೂ ಪರಸ್ಪರ ಸಂಬಂಧವಿದೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ರಾಜಕೀಯ ಆಧಿಪತ್ಯದ ಬೇರುಗಳು ಸಡಿಲಗೊಳ್ಳುತ್ತಿದ್ದಂತೆಯೇ ಅಖಿಲ ಭಾರತ ಮಟ್ಟದಲ್ಲಿಯೂ ಪಕ್ಷ ಹಿನ್ನಡೆಗೆ ಸರಿಯುತ್ತಾ ಹೋಗಿದೆ. ಕಾಂಗ್ರೆಸ್ ಪಕ್ಷ ತನ್ನಗತವೈಭವದ ದಿನಗಳಿಗೆ ಮರಳಬೇಕಾದರೆ ಮೊದಲು ಉತ್ತರಪ್ರದೇಶದಲ್ಲಿ ಆ ಹಳೆಯ ವೈಭವದ ದಿನಗಳಿಗೆ ಮರಳಬೇಕು. ಸದ್ಯಕ್ಕೆ ಉತ್ತರಪ್ರದೇಶದಲ್ಲಿ ಅಂತಹ ಸಾಧ್ಯತೆ ಇದೆ ಎಂದು ಆ ಪಕ್ಷದ ಕಡು ಆಶಾವಾದಿ ಕೂಡಾ ಭವಿಷ್ಯ ನುಡಿಯಲಾರ.

 ದೇಶದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರಪ್ರದೇಶವನ್ನು 23 ವರ್ಷಗಳ ಕಾಲ ಸ್ವಂತ ಬಲದಿಂದ ಆಳಿದ್ದ ಕಾಂಗ್ರೆಸ್ ಪಕ್ಷ 1989ರ ಸೋಲಿನ ನಂತರ ಚೇತರಿಸಿಕೊಳ್ಳಲಿಲ್ಲ. 1985ರಲ್ಲಿ 269 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಪಕ್ಷ ನಂತರದ ಚುನಾವಣೆಗಳಲ್ಲಿ ತನ್ನ ಸದಸ್ಯ ಬಲವನ್ನು ಮೂರಂಕಿಗೆ ದಾಟಿಸಲಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದದ್ದು ಆರು ಸದಸ್ಯರು, ಉಳಿದಿರುವವರು ಮೂವರು ಮಾತ್ರ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉಳಿಸಿಕೊಂಡಿರುವುದು ಸೋನಿಯಾಗಾಂಧಿಯವರ ರಾಯಬರೇಲಿ ಮಾತ್ರ. ಇದು ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಸ್ಥಿತಿ.

ಹನ್ನೊಂದು ವರ್ಷಗಳಿಂದ ಅದರ ಮತಗಳಿಕೆ ಪ್ರಮಾಣ ಶೇಕಡಾ ಎಂಟರ ಆಜುಬಾಜಿನಲ್ಲಿದೆ. ಆದರೆ ಉತ್ತರಪ್ರದೇಶದ ಮತದಾರರು ಅನಿರೀಕ್ಷಿತ ಫಲಿತಾಂಶ ನೀಡುವುದರಲ್ಲಿ ನಿಸ್ಸೀಮರು. 2007ರ ವಿಧಾನಸಭಾ ಚುನಾವಣೆಯಲ್ಲಿ ಅಷ್ಟೊಂದು ಹೀನಾಯವಾಗಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ್ದ ಅಲ್ಲಿನ ಮತದಾರರು ಎರಡೇ ವರ್ಷಗಳ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ 25 ಕಾಂಗ್ರೆಸ್ ಸದಸ್ಯರನ್ನು ಲೋಕಸಭೆಗೆ ಕಳಿಸಿದ್ದರು. ಮತಗಳಿಕೆಯ ಪ್ರಮಾಣ ಶೇಕಡಾ ಎಂಟರಿಂದ ಹದಿನೆಂಟಕ್ಕೆ ಏರಿತ್ತು. ಉತ್ತರಪ್ರದೇಶದಲ್ಲಿ ಪಕ್ಷಕ್ಕೆ ಪುನಶ್ಚೇತನ ನೀಡಲು ಸಿಕ್ಕಿದ್ದ ಅದೊಂದು ಸುವರ್ಣವಕಾಶವನ್ನು ಕೂಡಾ ಬಳಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಹಡಗು ಮುಳುಗಿರುವುದಕ್ಕೆ ಆ ಪಕ್ಷದ ನಾಯಕರ ಮೇಲೆ ಮುಖ್ಯವಾಗಿ ನೆಹರೂ ಕುಟುಂಬದ ಮೇಲೆ ನೂರೆಂಟು ಆರೋಪಗಳನ್ನು ಮಾಡುತ್ತಾ ಹೋಗಬಹುದು. ಅವುಗಳಲ್ಲಿ ಬಹಳಷ್ಟು ಆರೋಪಗಳನ್ನು ಅಲ್ಲಗಳೆಯಲಾಗದೆ ಇದ್ದರೂ ಅಲ್ಲಿನ ಕಾಂಗ್ರೆಸ್ ಹಿನ್ನಡೆಗೆ ಆ ರಾಜ್ಯದ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಬಂದ ದೇಶದ ಬೇರೆ ಕಡೆ ಕಾಣಲಾಗದ ಅಲ್ಲಿನ ವಿಲಕ್ಷಣ ಜಾತಿ ರಾಜಕಾರಣವೂ ಒಂದು ಕಾರಣ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಪಾರಂಪರಿಕ ಬೆಂಬಲಿಗರಾಗಿದ್ದವರು ಬ್ರಾಹ್ಮಣರು, ದಲಿತರು ಮತ್ತು ಅಲ್ಪಸಂಖ್ಯಾತರು. ಸಾಮಾನ್ಯವಾಗಿ ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಪಕ್ಷದ ಮತಬ್ಯಾಂಕ್ ಎಂದು ಹೇಳಲಾಗುತ್ತದೆ. ಆದರೆ ಈ ಮತಬ್ಯಾಂಕಿನ ಮುಖ್ಯ ಪಾಲುದಾರರಾದ ಹಿಂದುಳಿದ ಜಾತಿಗಳು ಉತ್ತರಪ್ರದೇಶದಲ್ಲಿ ಎಂದೂ ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿರಲಿಲ್ಲ. ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ದೂರ ಇರುವ ಬ್ರಾಹ್ಮಣ ಸಮುದಾಯ ಉತ್ತರಪ್ರದೇಶದಲ್ಲಿ ಮಾತ್ರ ಕಾಂಗ್ರೆಸ್ ಜೊತೆಗಿದ್ದರು. ರಾಮಮನೋಹರ ಲೋಹಿಯಾ ನೇತೃತ್ವದ ಸಮಾಜವಾದಿ ಚಳವಳಿಯಲ್ಲಿ ಉತ್ತರಪ್ರದೇಶದ ಹಿಂದುಳಿದ ಜಾತಿಗಳು ಮತ್ತು ಅವುಗಳ ನಾಯಕರು ಸಕ್ರಿಯರಾಗಿದ್ದರು. ಕೊನೆಗೂ 1989ರಲ್ಲಿ ಲೋಹಿಯಾ ಗರಡಿಯಿಂದ ಬಂದಿರುವ ಮುಲಾಯಂ ಸಿಂಗ್ ಎಂಬ ಪೈಲ್ವಾನ್ ಕಾಂಗ್ರೆಸ್ ಪಕ್ಷವನ್ನು ಅದರ ಮೂಲ ಅಖಾಡದಲ್ಲಿಯೇ ಕೆಡವಿ ಹಾಕಿದರು. ಅಂದು ನೆಲಹಿಡಿದ ಕಾಂಗ್ರೆಸ್ ಪಕ್ಷ ಇಲ್ಲಿಯವರೆಗೆ ಮೇಲೆ ಏಳಲಾಗಿಲ್ಲ.

1991ರಲ್ಲಿ ಬಾಬರಿ ಮಸೀದಿ ಧ್ವಂಸವನ್ನು ತಡೆಯಲು ಪ್ರಯತ್ನಿಸದೆ ಪರೋಕ್ಷವಾಗಿ ಬಿಜೆಪಿಯ ಅಜೆಂಡಾ ಜಾರಿಗೆ ಸಹಕರಿಸಿದ್ದರು ಎಂಬ ಆರೋಪ ಹೊತ್ತ ಆಗಿನ ಪ್ರಧಾನಿ ಪಿ.ವಿ.ನರಸಿಂಹರಾಯರ ನಿಗೂಢ ಮೌನ ಉತ್ತರಪ್ರದೇಶದ ಮುಸ್ಲಿಮ್ ಸಮುದಾಯವನ್ನು ಕೆರಳಿಸಿತ್ತು. ಕಾಂಗ್ರೆಸ್ ಪಕ್ಷದ ವಿರುದ್ಧ ತಿರುಗಿಬಿದ್ದ ಮುಸ್ಲಿಮರಿಗೆ ರಥಯಾತ್ರೆ ವಿರುದ್ಧ ಗುಡುಗುತ್ತಿದ್ದ ಮುಲಾಯಂ ಸಿಂಗ್ ಯಾದವ್ ತಮ್ಮ ರಕ್ಷಕರಂತೆ ಕಂಡದ್ದರಲ್ಲಿ ಅಸಹಜವಾದುದೇನಿಲ್ಲ. ಇದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಜೊತೆಗಿದ್ದ ಬ್ರಾಹ್ಮಣರು ಕೂಡಾ ಅಡ್ವಾಣಿ ರಥ ಏರಿಬಿಟ್ಟಿದ್ದರು. ಆ ಸಮಯಕ್ಕೆ ಸರಿಯಾಗಿ ದಲಿತ ಸಮುದಾಯದ ಆಶಾಕಿರಣವಾಗಿ ಮೂಡಿಬಂದ ಕಾನ್ಶಿರಾಮ್ ಎಂಬ ಚಾಣಾಕ್ಷ ರಾಜಕಾರಣಿ ದಲಿತ ಮತದಾರರನ್ನು ಕೂಡಾ ಸೆಳೆದುಕೊಂಡು ಹೋದರು. ಹೀಗೆ ಬ್ರಾಹ್ಮಣರು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಕಳೆದುಕೊಂಡು ಖಾಲಿ ಮಾಡಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ತನ್ನ ಮತಬುಟ್ಟಿಯನ್ನು ಇನ್ನೂ ತುಂಬಿಸಲಾಗಿಲ್ಲ. ಕಾಂಗ್ರೆಸ್ ಮತಬುಟ್ಟಿ ಖಾಲಿಯಾಗಿದೆ. ಈ ಎಲ್ಲ ಬೆಳವಣಿಗೆಗಳು ಹೆಚ್ಚು ಕಡಿಮೆ ಹತ್ತು ವರ್ಷಗಳ ಅವಧಿಯಲ್ಲಿ ಚಕಚಕನೆ ನಡೆದುಹೋಯಿತು.. ಕಾಂಗ್ರೆಸ್ ನಾಯಕರು ಕಣ್ಣುಕಣ್ಣು ಬಿಡುತ್ತಿದ್ದ ಹಾಗೆ ಅವರ ಕಾಲಡಿಯ ನೆಲ ಜಾರಿಹೋಗಿತ್ತು.

ಉತ್ತರ ಪ್ರದೇಶಕ್ಕೆ ನೆಹರೂ ಕುಟುಂಬದ ಸದಸ್ಯರೇ ರಾಜ್ಯದ ನಾಯಕರಾಗಿರುವ ಕಾರಣ ಆ ಪಕ್ಷದಲ್ಲಿ ಪ್ರಾದೇಶಿಕವಾದ ಬಲಿಷ್ಠ ನಾಯಕತ್ವ ಬೆಳೆಯಲೇ ಇಲ್ಲ ಎ  ಂದರೂ ಸರಿ, ಬೆಳೆಸಲೇ ಇಲ್ಲ ಎಂದರೂ ಸರಿ. ದಲಿತರಿಗೆ ಮಾಯಾವತಿ, ಹಿಂದುಳಿದವರಿಗೆ ಮುಲಾಯಂ ಸಿಂಗ್, ಬಿಜೆಪಿಗೆ ಕಲ್ಯಾಣ್ ಸಿಂಗ್, ರಾಜನಾಥ್ ಸಿಂಗ್ ರೀತಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಾದೇಶಿಕ ನಾಯಕರು ಬೆಳೆಯಲೇ ಇಲ್ಲ. ಎನ್.ಡಿ.ತಿವಾರಿ ಎಂಬ ಬ್ರಾಹ್ಮಣ ನಾಯಕನೇ ಕೊನೆಯ ಪ್ರಾದೇಶಿಕ ನಾಯಕ. ಈಗಲೂ ಆ ರಾಜ್ಯದಲ್ಲಿ ದಲಿತ,ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. 2007ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ರೀಟಾ ಬಹುಗಣರನ್ನು ಬಿಂಬಿಸಲಾಗಿತ್ತು. ಹೆಣ್ಣುಹುಲಿಯಂತೆ ಘರ್ಜಿಸುತ್ತಿದ್ದ ಮಾಯಾವತಿ ಎದುರು ರೀಟಾ ಬಹುಗುಣ ಮಕ್ಕಳನ್ನು ಗದರಿಸುವ ಶಾಲಾ ಶಿಕ್ಷಕಿಯಂತೆ ಕಾಣುತ್ತಿದ್ದರು.

ಬಹಳಮುಖ್ಯವಾಗಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಘಟನೆಯೇ ಇಲ್ಲ, ಹಳೆಯ ಕಾರ್ಯಕರ್ತರು ಎರಡು ದಶಕಗಳ ಅವಧಿಯಲ್ಲಿ ಅಧಿಕಾರ ಇಲ್ಲದ ಪಕ್ಷವನ್ನು ಬಿಟ್ಟು ತಮ್ಮ ದಾರಿ ನೋಡಿಕೊಂಡಿದ್ದಾರೆ. ಪಕ್ಷದ ಪ್ರತಿಷ್ಠೆಯ ಎರಡು ಕ್ಷೇತ್ರಗಳಾದ ರಾಯಬರೇಲಿ ಮತ್ತು ಅಮೇಠಿಯಲ್ಲಿಯೂ ಪಕ್ಷಕ್ಕೆ ಕಾರ್ಯಕರ್ತರಿಲ್ಲ. ಅಲ್ಲಿರುವುದು ನೆಹರೂ ಕುಟುಂಬದ ಅಭಿಮಾನಿಗಳು ಅಷ್ಟೆ. ಈ ಅಭಿಮಾನವನ್ನು ಮತಗಳಾಗಿ ಪರಿವರ್ತಿಸಲು ಕಾರ್ಯಕರ್ತರೇ ಇಲ್ಲ.

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಪತನದ ಕತೆಯನ್ನು ಅಲ್ಲಿನ ಎರಡು ಕ್ಷೇತ್ರಗಳಾದ ರಾಯಬರೇಲಿ ಮತ್ತು ಅಮೇಠಿಯೇ ಹೇಳುತ್ತಿವೆ. ಈ ಎರಡು ಲೋಕಸಭಾ ಕ್ಷೇತ್ರಗಳು ಒಂದು ಕಾಲದ ಕಾಂಗ್ರೆಸ್ ಪಕ್ಷದ ಭದ್ರಕೋಟೆಗಳು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರು 1998ರಲ್ಲಿ ಮೊದಲ ಬಾರಿ ಸಂಸತ್ ಪ್ರವೇಶಿಸಿದ್ದು ಅಮೇಠಿ ಲೋಕಸಭಾ ಕ್ಷೇತ್ರದಿಂದ. 2004ರಲ್ಲಿ ಈ ಕ್ಷೇತ್ರವನ್ನು ಮಗ ರಾಹುಲ್ ಗಾಂಧಿಯವರಿಗೆ ಬಿಟ್ಟುಕೊಟ್ಟು ತಮ್ಮ ಅತ್ತೆ ಸ್ಪರ್ಧಿಸುತ್ತಿದ್ದ ರಾಯಬರೇಲಿಗೆ ಹೋಗಿಬಿಟ್ಟರು. ಅಮೇಠಿ ಕ್ಷೇತ್ರದಿಂದ ಮೂರು ಬಾರಿ ಗೆದ್ದ ರಾಹುಲ್ 2019ರಲ್ಲಿ ಬಿಜೆಪಿಯ ಸ್ಮತಿ ಇರಾನಿ ಎದುರು 55,000 ಮತಗಳಿಂದ ಸೋತುಹೋದರು. ಈಗ ಉಳಿದಿರುವುದು ರಾಯಬರೇಲಿ ಮಾತ್ರ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವ ಏಕೈಕ ಕ್ಷೇತ್ರ ರಾಯಬರೇಲಿ. ಮುಂದಿನ ಚುನಾವಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅಲ್ಲಿ ಸ್ಪರ್ಧೆಗಿಳಿಯಲೂ ಬಹುದು. ಲೋಕಸಭಾ ಚುನಾವಣೆಯ ಬದಲಿಗೆ ಈಗಿನ ವಿಧಾನಸಭಾ ಚುನಾವಣೆಯಲ್ಲಿಯೇ ಪ್ರಿಯಾಂಕಾ ಗಾಂಧಿಯವರು ಗೋರಖ್ ಪುರದಿಂದ ಯೋಗಿ ಆದಿತ್ಯನಾಥ್ ವಿರುದ್ಧ್ದವೇ ಸ್ಪರ್ಧಿಸಬೇಕಿತ್ತು ಎನ್ನುವವರಿದ್ದಾರೆ. ಅವರು ಸೋತಿದ್ದರೂ ಪರಿಣಾಮ ಬೇರೆಯಾಗುತ್ತಿತ್ತು. ಬಹುಷ: ಪ್ರಿಯಾಂಕಾ ಆ ಸವಾಲು ಸ್ವೀಕರಿಸಿದ್ದರೆ ಸಮಾಜವಾದಿ ಪಕ್ಷ ಅಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿರಲಿಲ್ಲ. ಯೋಗಿ ವಿರುದ್ಧ ಒಳಗಿಂದೊಳಗೆ ಬುಸುಗುಡುತ್ತಿರುವ ಬ್ರಾಹ್ಮಣ ಮತದಾರರು ಮತ್ತು ಯೋಗಿಯನ್ನು ಹಣಿಯಬೇಕೆಂದು ಜಾಲ ಹರಡುತ್ತಿರುವ ಮೋದಿ-ಶಾ ಕೂಟದಿಂದಲೂ ಸಹಕಾರ ಸಿಗುತ್ತಿತ್ತೋ ಏನೋ? ಕಾಂಗ್ರೆಸ್ ಅಂತಹದ್ದೊಂದು ಅವಕಾಶವನ್ನು ಕಳೆದುಕೊಂಡಿದೆ.

ರಾಯಬರೇಲಿ ಮತ್ತು ಅಮೇಠಿ ನೆಹರೂ ಕುಟುಂಬದ ಪ್ರತಿಷ್ಠೆಯ ಕ್ಷೇತ್ರಗಳಾಗಿರುವ ಕಾರಣ ಆ ಕ್ಷೇತ್ರಗಳನ್ನು ಕಾಂಗ್ರೆಸ್ ಮುಕ್ತಗೊಳಿಸಿದರೆ ದೇಶದಲ್ಲಿ ಆಕೆಲಸ ಮಾಡುವುದು ಸುಲಭ ಎಂದು ಬಿಜೆಪಿಗೆ ಮಾತ್ರವಲ್ಲ ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳಿಗೂ ಗೊತ್ತು. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡ ನಂತರ ಅಧಿಕಾರಕ್ಕೆ ಬಂದ ಎಲ್ಲ ವಿರೋಧಪಕ್ಷಗಳ ಸರಕಾರಗಳು ಯಾವ ರೀತಿ ಈ ಎರಡು ಕ್ಷೇತ್ರಗಳನ್ನು ನಿರ್ಲಕ್ಷಿಸುತ್ತಾ ಬಂದಿವೆ ಎನ್ನುವುದು ಈ ಎರಡು ಕ್ಷೇತ್ರಗಳನ್ನು ಸುತ್ತಾಡಿದರೆ ಗೊತ್ತಾಗುತ್ತದೆ. ಈ ದುರುದ್ದೇಶಪೂರಿತ ನಿರ್ಲಕ್ಷ 2014ರಿಂದ ಇಲ್ಲವೇ 2017ರಿಂದ ಪ್ರಾರಂಭವಾದುದಲ್ಲ.

  ‘‘ಮಾಯಾವತಿಯವರ ಸೇಡಿನ ರಾಜಕಾರಣಕ್ಕೆ ದಾಖಲೆಗಳು ಬೇಕಾಗಿಲ್ಲ, ನೀವೇ ಪಟ್ಟಣದಲ್ಲಿ ಒಂದು ಸುತ್ತು ಹಾಕಿ ಬನ್ನಿ’’ ಎಂದು 2012ರ ವಿಧಾನಸಭಾ ಚುನಾವಣಾ ಸಮೀಕ್ಷೆಗೆ ಹೋಗಿದ್ದ ನನಗೆ ಸ್ಥಳೀಯ ಪತ್ರಕರ್ತ ಹೇಳಿದ್ದ. ಈಗ ಸಾಹು ಮಹಾರಾಜ್ ನಗರ ಎಂದು ಬದಲಾಗಿರುವ ಹೆಸರಿನ ಅಮೇಠಿ ಜಿಲ್ಲಾ ಕೇಂದ್ರದಲ್ಲಿ ಒಂದು ಸುತ್ತು ಹಾಕಿದರೆ ಸ್ವಾಗತಿಸಿದ್ದು ಗುಂಡಿಬಿದ್ದರಸ್ತೆಗಳ ು, ಬೋರ್ ವೆಲ್ ಗಳ ಮುಂದೆ ಸಾಲುಗಟ್ಟಿ ನಿಂತ ಮಹಿಳೆಯರು, ಕಣ್ಣುಮುಚ್ಚಾಲೆ ಆಡುತ್ತಿರುವ ವಿದ್ಯುತ್, ತೆರೆದ ಕೊಳಚೆ ನೀರಿನ ಚರಂಡಿಗಳು.

ಅಲಹಾಬಾದ್ ಕೋ ಅಮೇಠಿ ಬನಾಯೆಂಗೆ ಎಂದು ಹೇಳಿಯೇ ಅಮಿತಾಬ್ ಬಚ್ಚನ್ ಅಲಹಾಬಾದ್ ಕ್ಷೇತ್ರವನ್ನು ಗೆದ್ದಿದ್ದರು. ಹಾಗಿತ್ತು ಅಮೇಠಿ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದ್ದರು ಜಗದೀಶ್ ಪುರದ ಒಬ್ಬ ಉದ್ಯಮಿ. ಮಾರುತಿ ಉದ್ಯೋಗ್ ಗೆ ಬಿಡಿಭಾಗಗಳನ್ನು ಪೂರೈಸುತ್ತಿದ್ದ ಅವರ ಒಡೆತನದ ಕಿರುಕೈಗಾರಿಕಾ ಘಟಕ ಮುಚ್ಚಿತ್ತು. ‘‘ಇಸ್ ಕ್ಷೇತ್ರ್ ಕೋ ವಿಕಾಸ್ ಕಾ ಪ್ರಯೋಗ್ ಶಾಲಾ ಬನಾವುಂಗಾ’’ ಎಂದು 1991ರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ರಾಜೀವ್ ಗಾಂಧಿ ಹೇಳಿದ್ದರಂತೆ. ರಾಜೀವ್ ಕಾಲದಲ್ಲಿ ಪ್ರಾರಂಭಗೊಂಡಿದ್ದ ವೆಸ್ಪಾ, ಸಾಮ್ರಾಟ್ ಬೈಸಿಕಲ್, ಉಷಾ ರೆಕ್ಟಿಪೈಸ್, ಮಾಳವಿಕಾ ಉಕ್ಕಿನ ಕಾರ್ಖಾನೆ ಹೀಗೆ ಇವೆಲ್ಲಾ ಹತ್ತು ವರ್ಷಗಳ ಹಿಂದೆಯೇ ಮುಚ್ಚಿ ಹೋಗಿವೆ. ಜಗದೀಶ್ ಪುರ ಕೈಗಾರಿಕಾ ಕ್ಷೇತ್ರ ‘‘ ಮುಚ್ಚಿಹೋಗಿರುವ ಕೈಗಾರಿಕಾ ಘಟಕಗಳ ಮ್ಯೂಸಿಯಮ್ ನಂತಿದೆ. ಬಿಎಚ್ ಇ ಎಲ್ ನ ಒಂದು ಘಟಕ ಮತ್ತು ಒಂದೆರಡು ರಸಗೊಬ್ಬರ ಕಾರ್ಖಾನೆಗಳನ್ನು ಹೊರತುಪಡಿಸಿದರೆ ಉಳಿದಿರುವುದು ರಾಜೀವ್ ಗಾಂಧಿ ಕಾಲದಲ್ಲಿ ಮುನ್ಸಿಗಂಜ್ ನಲ್ಲಿ ನಿರ್ಮಿಸಲಾಗಿದ್ದ ಸಂಜಯಗಾಂಧಿ ಸ್ಮಾರಕ ಆಸ್ಪತ್ರೆ ಮಾತ್ರ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ನಂತರದ ವರ್ಷಗಳಲ್ಲಿ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿಒಂದೇ ಒಂದು ಹೊಸ ಕೈಗಾರಿಕಾ ಘಟಕ ಪ್ರಾರಂಭವಾಗಿಲ್ಲ’’ ಎಂದು ಸಾಮಾಜಿಕ ಕಾರ್ಯಕರ್ತ ಬಬ್ಬನ್ ಸಿಂಗ್ ಹತ್ತು ವರ್ಷಗಳ ಹಿಂದೆ ನನ್ನೊಡನೆ ಹೇಳಿದ್ದರು. ಸ್ಮೃತಿ ಇರಾನಿಯವರ ಕಾಲದಲ್ಲಿಯೂ ಕ್ಷೇತ್ರ ದೊಡ್ಡ ಬದಲಾವಣೆಯನ್ನು ಖಂಡಿತ ಕಂಡಿರಲಾರದು.

  ‘‘ಪ್ರತಿಕಾರ್ ಕಾ ರಾಜನೀತಿ’’ ಎಂದು ಹೇಳುತ್ತಿದ್ದವರಲ್ಲಿ ಬಹಳಷ್ಟು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಅದೇ ದನಿಯಲ್ಲಿ ‘’ ನೆಹರೂ ಕುಟುಂಬದ ಸದಸ್ಯರು ಇಲ್ಲಿನ ಎಂಪಿಗಳಾಗದೆ ಇದ್ದಿದ್ದರೆ ರಾಜ್ಯ ಸರಕಾರದಿಂದ ಒಂದಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿತ್ತೋ ಏನೋ ಎಂದು ನಿಟ್ಟುಸಿರು ಬಿಡುತ್ತಿದ್ದರು. ಬಹುಷ: ಆ ನಿಟ್ಟುಸಿರು ನಂತರದ ಚುನಾವಣೆಗಳಲ್ಲಿ ನಿರ್ಧಾರವಾಗಿ ಬದಲಾಗಿರಬಹುದು.

ಉತ್ತರಪ್ರದೇಶದಲ್ಲಿ ನೆಹರೂ ಕುಟುಂಬ ತನ್ನ ತನುಮನಧನವನ್ನು ಅರ್ಪಿಸಿ ಗಂಭೀರವಾಗಿ ಅರ್ಪಿಸಿಕೊಳ್ಳುತ್ತದೆ. ಅಲ್ಲಿನ ಚುನಾವಣೆ ಎಂದರೆ ಒಂದಷ್ಟು ಶಾಸಕರು, ಸಂಸತ್ ಸದಸ್ಯರು ಇಲ್ಲವೇ ಸರಕಾರ-ಅಧಿಕಾರ ಮಾತ್ರವಲ್ಲ. ಅದು ಕುಟುಂಬದ ಪ್ರತಿಷ್ಠೆಯ ಪ್ರಶ್ನೆ. ಜಾವೇದ್ ಅಖ್ತರ್ ಚಿತ್ರಕತೆ ಬರೆದ ಹಳೆಯ ಹಿಂದಿ ಸಿನೆಮಾಗಳಲ್ಲಿ ನಾಯಕ ನಟ ‘‘ಬೀಸ್ ಸಾಲ್ ಬಾದ್ ಪ್ರವೇಶಿಸಿ ತನ್ನ ಕುಟುಂಬಕ್ಕೆ ಆಗಿರುವ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ’’ ಇಂದಿರಾಗಾಂಧಿಯ ಮೊಮ್ಮಕ್ಕಳು ಪ್ರತಿ ಚುನಾವಣಾ ಕಾಲದಲ್ಲಿ ಉತ್ತರಪ್ರದೇಶ ಪ್ರವೇಶಿಸುತ್ತಾರೆ.

  ಉತ್ತರಪ್ರದೇಶವನ್ನು ಕಳೆದುಕೊಂಡು ಬೀಸ್ ಸಾಲ್ ಕಳೆದು ತೀಸ್ ಸಾಲ್ ಆಗಿದೆ. ಆದರೆ ತಮ್ಮ ಕುಟುಂಬದಿಂದ ಕಿತ್ತುಕೊಂಡ ಉತ್ತರಪ್ರದೇಶವನ್ನು ಮರಳಿ ಪಡೆಯಲು ನೆಹರೂ ಕುಟುಂಬದ ರಾಜಕೀಯ ಉತ್ತರಾಧಿಕಾರಿಗಳಾದ ರಾಹುಲ್ ಮತ್ತು ಪ್ರಿಯಾಂಕಾ ಅವರಿಗೆ ಸಾಧ್ಯವಾಗಲಿಲ್ಲ. ಸದ್ಯಕ್ಕೆ ಆ ಸಾಧ್ಯತೆಗಳೂ ಕಾಣುತ್ತಿಲ್ಲ.

Writer - ದಿನೇಶ್ ಅಮಿನ್ ಮಟ್ಟು

contributor

Editor - ದಿನೇಶ್ ಅಮಿನ್ ಮಟ್ಟು

contributor

Similar News