ಉಕ್ರೇನ್: ಸಾಧ್ಯತೆ, ತಿರುವು ಮತ್ತು ಪರಿಣಾಮ
ಉಕ್ರೇನಿನ ಮೇಲೆ ರಶ್ಯ ನಡೆಸಿದ ಏಕಪಕ್ಷೀಯ ಆಕ್ರಮಣವು ಈಗ ಕ್ಷಿಪಣಿ ಮತ್ತು ವೈಮಾನಿಕ ಬಾಂಬ್ ದಾಳಿಗಳ ಮೊದಲ ಹಂತವನ್ನು ದಾಟಿ, ನೆಲದ ಮೇಲಿನ ನೇರ ಚಕಮಕಿಯ ಹಂತ ಮುಟ್ಟಿದೆ. ಈ ಸಂದರ್ಭದಲ್ಲಿ ಮುಂದೇನಾಗಬಹುದು? ಈ ಯುದ್ಧವು ಯಾವ ತಿರುವುಗಳನ್ನು ಪಡೆದುಕೊಳ್ಳಲು ಸಾಧ್ಯ? ಪರಿಣಾಮಗಳೇನು? ಒಂದು ಸರಳ ವಿಶ್ಲೇಷಣೆ.
ಯುದ್ಧದಂತಹ ಒಂದು ಭಯಾನಕವಾದ ವಿಷಯವನ್ನು ಅರ್ಥ ಮಾಡಿಕೊಳ್ಳಲು ಭಾವನಾತ್ಮಕ ಊಹೆ, ಆಟಾಟೋಪಗಳ ಬದಲು ನೆಲದ ಮೇಲಿನ ವಾಸ್ತವಾಂಶ, ಸ್ಥಿತಿಗತಿಗಳನ್ನು ಮೊದಲಿಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಳ್ಳುವುದು ತುಂಬಾ ಅಗತ್ಯ. ಅಂತೆಯೇ ಇದನ್ನು ಬರೆಯುವ ಹೊತ್ತಿಗೆ ಇದ್ದ ಸ್ಥಿತಿಯನ್ನು ಒಮ್ಮೆ ಚುಟುಕಾಗಿ ನೋಡೋಣ.
ಉಕ್ರೇನ್ ಬಹಳಷ್ಟು ವಿಸ್ತಾರವಾದ ದೇಶವಾಗಿರುವುದರಿಂದ, ಎಷ್ಟೇ ದೊಡ್ಡ ಸೇನೆಗೂ ಇಡೀ ದೇಶವನ್ನು ನೆಲಮಟ್ಟದಲ್ಲಿ ವಶಕ್ಕೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಆದರೆ, ಅದರ ಮುಖ್ಯ ನಗರಗಳನ್ನು ವಶಕ್ಕೆ ತೆಗೆದುಕೊಂಡು, ನಿಷ್ಕ್ರಿಯಗೊಳಿಸಿ, ರಾಜಧಾನಿ ಕೀವ್‌ನ್ನು ವಶಪಡಿಸಿಕೊಂಡು, ಸರಕಾರವನ್ನು ಉರುಳಿಸಿ, ಆಡಳಿತ ಯಂತ್ರವನ್ನು ಬುಡಮೇಲು ಮಾಡಿದರೆ, ಇಡೀ ದೇಶದಲ್ಲಿ ಅರಾಜಕ ಪರಿಸ್ಥಿತಿ ಉಂಟಾಗುತ್ತದೆ. ಆಲ್ಲಿಂದ ಮುಂದಿನ ಹೋರಾಟವೆಲ್ಲಾ ನೇರ ಸಾಮೂಹಿಕ ನಾಯಕತ್ವ ಇಲ್ಲದ ಬಿಡಿ ಬಿಡಿ ಸೇನಾ ಘಟಕಗಳು ಮತ್ತು ನಾಗರಿಕರ ಪ್ರತಿರೋಧವನ್ನೇ ನೇರವಾಗಿ ಅವಲಂಬಿಸಬೇಕಾಗುತ್ತದೆ. ರಶ್ಯ ಪ್ರಯತ್ನಿಸುತ್ತಿರುವುದು ಇದನ್ನೇ.
ಉಕ್ರೇನಿನ ಸೇನಾ ನೆಲೆಗಳು, ವಿಮಾನ ನಿಲ್ದಾಣಗಳು ಮುಂತಾದವುಗಳನ್ನು ನಾಶ ಮಾಡಿ ಪ್ರಮುಖ ನಗರಗಳನ್ನು ಕ್ಷಿಪಣಿ ಮತ್ತು ಬಾಂಬ್ ದಾಳಿಗಳ ಮೂಲಕ ತತ್ತರಗೊಳಿಸಿದ ನಂತರ ರಶ್ಯವು ಉತ್ತರ, ಪೂರ್ವ ಮತ್ತು ದಕ್ಷಿಣದ ನಗರಗಳ ವಶಕ್ಕೆ ಹಂತಹಂತವಾಗಿ ಪ್ರಯತ್ನಿಸಲಿದೆ. ಪೂರ್ವದಲ್ಲಿ ಎರಡನೇ ದೊಡ್ಡ ನಗರವಾದ ಕಾರ್ಕಿಯೇವ್ ಮೇಲೆ ದಾಳಿ ನಡೆಸುತ್ತಿರುವಂತೆಯೇ ಅದು ದಕ್ಷಿಣದಲ್ಲಿ ಕಪ್ಪು ಸಮುದ್ರದ ಒಡೆಸ್ಸಾ ಬಂದರು ನಗರವನ್ನು ವಶಕ್ಕೆ ತೆಗೆದುಕೊಂಡು ಉಕ್ರೇನಿನ ಜಲಮಾರ್ಗವನ್ನು ಮುಚ್ಚಿದೆ. ಆದರೆ, ಚಿಂತೆಗೆ ಕಾರಣವಾಗಿರುವ ವಿಷಯ ಎಂದರೆ, ರಾಜಧಾನಿ ಕೀವ್, ಉತ್ತರ ಗಡಿಯಲ್ಲಿ ರಶ್ಯ ಬಂಟ ಬೆಲಾರೂಸ್‌ನಿಂದ ಕೇವಲ 50-60 ಕಿ.ಮೀ. ದೂರದಲ್ಲಿರುವುದು ಮತ್ತು ಉಕ್ರೇನ್ ಸೇನೆಯ ನಿಯೋಜನೆಯ ವಿಳಂಬದ ಲಾಭ ಪಡೆದ ರಶ್ಯ, ಉನ್ನತ ತರಬೇತಿಯ ಸೈನಿಕ ಘಟಕಗಳನ್ನು ಬಳಸಿಕೊಂಡು ಗಡಿಯಲ್ಲಿರುವ ಚೆರ್ನೋಬಿಲ್ ಅಣು ಸ್ಥಾವರವನ್ನು ವಶಪಡಿಸಿಕೊಂಡ ನಂತರ ಕೀವ್ ನಗರದ ಹೊರವಲಯ ತಲಪಿರುವುದು. ಆದರೆ, ಇದು ಸುಲಭದಲ್ಲಿ ನಡೆದಿಲ್ಲ. ಮೊದಲ ದಿನವೇ ಸುಮಾರು 450 ಸೈನಿಕರನ್ನು ಕಳೆದುಕೊಂಡಿರುವುದಾಗಿ ಸ್ವತಃ ರಶ್ಯ ಒಪ್ಪಿಕೊಂಡಿದೆ.
ಟಿವಿಗಳಲ್ಲಿ ಕೀವ್ ಹೊರವಲಯದಲ್ಲಿ ಸಂಸತ್ತಿಗೆ ಕೇವಲ 10-15 ಕಿ.ಮೀ. ದೂರದಲ್ಲಿ ರಶ್ಯನ್ ಟ್ಯಾಂಕುಗಳ ಓಡಾಟದ ಚಿತ್ರಗಳು ಕಂಡುಬಂದಾಗ, ನಗರವು ಒಂದೆರಡು ದಿನಗಳಲ್ಲೇ ಪತನವಾಗುವುದು ಎಂದು ಭಾವಿಸಲಾಗಿತ್ತು. ಆದರೀಗ ಪರಿಸ್ಥಿತಿ ಬೇರೆಯಾಗಿದೆ ಎಂದು ರಕ್ಷಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಉಕ್ರೇನ್ ಸೇನೆ ತಡವಾಗಿಯಾದರೂ ರಾಜಧಾನಿಯಲ್ಲಿ ನಿಯೋಜನೆಗೊಂಡಿರುವ ಮತ್ತು ನಾಗರಿಕ ಸ್ವಯಂಸೇವಕರು ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುತ್ತಿರುವ ಸುದ್ದಿಗಳು ಬರುತ್ತಿದ್ದು, ಪ್ರತಿರೋಧ ಹಲವು ದಿನಗಳ ತನಕ ಮುಂದುವರಿಯುವ ಲಕ್ಷಣಗಳಿವೆ.
ಆದರೆ, ಈ ಪ್ರತಿರೋಧ ರಶ್ಯದ ಭಾರೀ ಮಿಲಿಟರಿ ಸಾಮರ್ಥ್ಯದ ಎದುರು ಬಹಳ ದಿನ ಮುಂದುವರಿಯುವಂತಹದ್ದಲ್ಲ. ಇಡೀ ಪ್ರಪಂಚವೇ ನಮ್ಮ ಬೆಂಬಲಕ್ಕಿದ್ದರೂ, ನಮ್ಮನ್ನು ಏಕಾಂಗಿಯಾಗಿ ಹೋರಾಡಲು ಬಿಟ್ಟಿದೆ ಎಂಬ ಬೇಸರವನ್ನು ಉಕ್ರೇನಿನ ಅಧ್ಯಕ್ಷ ವೊಲಾದಿಮಿರ್ ಝೆಲೆನ್‌ಸ್ಕಿ ಹೇಳಿಕೊಂಡಿದ್ದಾರೆ. ಭಾರತದಂತಹ ದೇಶದ ತಟಸ್ಥ ನಿಲುವಿಗೂ ಅವರು ನಿರಾಸೆ ವ್ಯಕ್ತಪಡಿಸಿದ್ದಾರೆ. ತಾನು ಮತ್ತು ತನ್ನ ಕುಟುಂಬವೇ ರಶ್ಯದ ಮೊದಲ ಗುರಿಯಾಗಿದ್ದರೂ, ಕೊನೆಯ ತನಕ ತಾನು ದೇಶ ಬಿಟ್ಟು ಹೋಗುವುದಿಲ್ಲ ಎಂದು ಅವರು ಘೋಷಿಸಿದ್ದಾರೆ. ಹಿಂದೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದು, ಈಗ ನ್ಯಾಟೊ ಕೂಟ ಸೇರಿರುವ ದೇಶಗಳೂ ಸೇರಿರುವ ‘ಬುಕಾರೆಸ್ಟ್ ನೈನ್’ ಎಂಬ ಕೂಟಕ್ಕೂ ಅವರು ನೆರವಿನ ಮನವಿ ಮಾಡಿದ್ದಾರೆ. ಅವರಿಗೆ ಸದ್ಯಕ್ಕೆ ಬೇಕಾಗಿರುವುದು ಮಿಲಿಟರಿ ನೆರವಾದರೂ, ಅದು ಯಾವುದೇ ಕಡೆಯಿಂದಲೂ ಬರುವ ಲಕ್ಷಣಗಳಿಲ್ಲ.
ಇಂತಹ ಸಂದರ್ಭದಲ್ಲಿ ಯುಎಸ್‌ಎ, ಯುಕೆ, ಐರೋಪ್ಯ ಒಕ್ಕೂಟ, ಜಪಾನ್, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯ ಇನ್ನಷ್ಟು ಕಠಿಣ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದೆ. ಇದು ಬಹಳ ಕಾಲ ಪರಿಣಾಮ ಮಾಡಿ ರಶ್ಯದ ಆರ್ಥಿಕತೆಯನ್ನು ಹಲವು ವರ್ಷಗಳ ಕಾಲ ಹಿಂದಕ್ಕೆ ತಳ್ಳಬಹುದಾದರೂ, ತಕ್ಷಣದ ಪರಿಣಾಮ ರಶ್ಯದ ಮೇಲೆ ಹೆಚ್ಚು ಆಗದು ಎಂದು ತಜ್ಞರು ಹೇಳುತ್ತಿದ್ದಾರೆ. ಇದೀಗ ಅಂತರ್‌ರಾಷ್ಟ್ರೀಯ ತ್ವರಿತ ಇಲೆಕ್ಟ್ರಾನಿಕ್ ಹಣ ವರ್ಗಾವಣೆ ಜಾಲದಿಂದ ರಶ್ಯವನ್ನು ಹೊರಗಿಡುವ ಮಾತು ನಡೆಯುತ್ತಿದೆ. ಬಹುತೇಕ ದೇಶಗಳು ಇದನ್ನು ಬಳಸುತ್ತಿರುವುದರಿಂದ, ರಶ್ಯದ ವಿದೇಶ ವ್ಯಾಪಾರಕ್ಕೆ ದೊಡ್ಡ ತೊಂದರೆ ಆಗಬಹುದು. ಆದರೆ, ಚೀನಾ ಕೂಡಾ ಇಂತಹ ವ್ಯವಸ್ಥೆ ಹೊಂದಿದೆ. ಅಲ್ಲದೇ ಇಂತಹ ದಿಗ್ಬಂಧನಗಳನ್ನು ಮೊದಲೇ ಊಹಿಸಿದ ರಶ್ಯ, ಒಂದೂವರೆ ಟ್ರಿಲಿಯನ್ ಡಾಲರ್‌ಗಳ ಮೀಸಲು ನಿಧಿ ಕಾದಿರಿಸಿದೆ ಎಂದು ತಜ್ಞರು ಹೇಳುತ್ತಾರೆ.
ಏನೇ ಇದ್ದರೂ, ನ್ಯಾಟೊ ಕೂಟವು ಸದಸ್ಯ ರಾಷ್ಟವಲ್ಲದ ಉಕ್ರೇನಿನಲ್ಲಿ ನೇರ ಸೈನಿಕ ಕಾರ್ಯಾಚರಣೆ ನಡೆಸುವ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಹೆಚ್ಚೆಂದರೆ ಅದು ಶಸ್ತ್ರಾಸ್ತ್ರಗಳನ್ನು ಪೂರೈಸಬಹುದಷ್ಟೇ. ಆದರೆ, ಒಂದು ವೇಳೆ ಯಾವುದೇ ನ್ಯಾಟೊ ದೇಶದ ಮೇಲೆ ದಾಳಿ ನಡೆದರೆ, ನೇರವಾಗಿ ಭಾಗವಹಿಸುವುದಾಗಿ ಹೇಳಿ, ಕಠಿಣ ಎಚ್ಚರಿಕೆ ನೀಡಿದೆ. ಪುಟಿನ್ ಇಂತಹ ದುಸ್ಸಾಹಸಕ್ಕೆ ಮುಂದಾಗುವ ಸಾಧ್ಯತೆ ಇಲ್ಲವಾದರೂ, ಇತಿಹಾಸ ಈ ತನಕ ಕಂಡಿರುವ ಅಹಂಕಾರಿ, ಹುಚ್ಚು ಸರ್ವಾಧಿಕಾರಿಗಳನ್ನು ಗಮನಿಸಿದರೆ, ಯಾವುದನ್ನೂ ಅಲ್ಲಗೆಳೆಯಲಾಗುವುದಿಲ್ಲ. ಇದೇ ಹೊತ್ತಿಗೆ ಚೀನಾದ ಅಧ್ಯಕ್ಷ ಕ್ಸಿಜಿನ್‌ಪಿಂಗ್, ಪುಟಿನ್ ಜೊತೆ ಮಾತುಕತೆ ನಡೆಸಿ ಸಂಧಾನಕ್ಕೆ ಒತ್ತಾಯಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಪುಟಿನ್ ಷರತ್ತುಬದ್ಧ ಮಾತುಕತೆಗೆ ಒಪ್ಪಿರುವುದೂ ಇದರ ಫಲವಾಗಿರಬಹುದು.
ವಿಶ್ವಸಂಸ್ಥೆ ಕೂಡಾ ರಶ್ಯದ ಆಕ್ರಮಣವನ್ನು ಖಂಡಿಸಿ, ಸೇನಾ ಹಿಂದೆಗೆತಕ್ಕೆ ಒತ್ತಾಯಿಸಿದೆಯಾದರೂ, ಅದು ವಿಶ್ವ ಅಭಿಪ್ರಾಯದ ಒಂದು ವೇದಿಕೆ ಎಂಬುದನ್ನು ಬಿಟ್ಟರೆ, ನಿಜವಾಗಿಯೂ ಹಲ್ಲಿಲ್ಲದ ಹುಲಿ ಎಂದು ಭದ್ರತಾ ಮಂಡಳಿಯ ಸಭೆಯಲ್ಲಿ ಮತ್ತೆ ಗೊತ್ತಾಗಿದೆ. ಬಹುನಿರೀಕ್ಷಿತ ಸಭೆಯ ನಿರ್ಣಯವು ನಿರೀಕ್ಷಿತವಾಗಿಯೇ ನಡೆದಿದೆ. ಅದರ ನಿರ್ಣಯವನ್ನು ಹತ್ತು ದೇಶಗಳು ಬೆಂಬಲಿಸಿ, ರಶ್ಯ ವಿರೋಧಿಸಿದರೆ, ಭಾರತ, ಚೀನಾ, ಯುಎಇ ತಟಸ್ಥವಾಗಿ ಉಳಿದಿವೆ. ಉಕ್ರೇನಿನಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತತೆಯ ಬಗ್ಗೆ ಆತಂಕ, ಶಾಂತಿ ಕಾಪಾಡಬೇಕು, ಮಾತುಕತೆ ನಡೆಸಬೇಕು ಎಂಬ ಮಾಮೂಲಿ ಹೇಳಿಕೆ ಬಿಟ್ಟರೆ, ಭಾರತದ ರಾಯಭಾರಿಯ ಭಾಷಣದಲ್ಲಿ ರಚನಾತ್ಮಕವಾದದ್ದು ಏನೂ ಇರಲಿಲ್ಲ. ತಟಸ್ಥವಾಗಿದ್ದ ದೇಶಗಳಲ್ಲಿ ಚೀನಾ ರಶ್ಯ ಪರ ಮತ್ತು ಯುಎಇ ಯುಎಸ್‌ಎ ಪರ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಅತ್ತವೂ ಇಲ್ಲದ, ಇತ್ತವೂ ಇಲ್ಲದ, ಎತ್ತವೂ ಇಲ್ಲದ ಎಡೆಬಿಡಂಗಿಯಾಗಿ ಕಾಣಿಸಿಕೊಂಡದ್ದು ಭಾರತ ಮಾತ್ರ.
ಇಂತಹ ಸ್ಥಿತಿಯಲ್ಲಿ ಈ ಯುದ್ಧವು ಯಾವ ತಿರುವನ್ನು ಪಡೆದುಕೊಳ್ಳಲು ಸಾಧ್ಯವಿದೆ ಎಂದು ವಸ್ತುನಿಷ್ಟವಾಗಿ ನೋಡೋಣ. ಯಾವುದೇ ನೆರವಿಲ್ಲದೆ ಉಕ್ರೇನ್ ಬಹಳ ಕಾಲ ಉಳಿಯಲಾರದು ಎಂಬುದು ಸ್ಪಷ್ಟ. ಉಕ್ರೇನ್ ಪತನವಾಗಿ ಕೀವ್ ರಶ್ಯದ ನಿಯಂತ್ರಣಕ್ಕೆ ಬಂತೆನ್ನೋಣ. ಆಗ ರಶ್ಯ ಏನು ಮಾಡಬಹುದು? ಒಂದು: ಝೆಲೆನ್‌ಸ್ಕಿ ಸರಕಾರವನ್ನು ಉರುಳಿಸಿ, ಹಿಂದಿನಂತೆ ಕೈಗೊಂಬೆ ಸರಕಾರವನ್ನು ಸ್ಥಾಪಿಸುವುದು, ಉಕ್ರೇನಿನ ಸೇನೆಯನ್ನು ದುರ್ಬಲ ಗೊಳಿಸುವುದು, ಸಾಕಷ್ಟು ಸೈನಿಕರನ್ನು ಅಲ್ಲಿಯೇ ಉಳಿಸಿಕೊಂಡು ಹಿಂದಿರುಗುವುದು. ಪುಟಿನ್‌ಗೆ ಬೇಕಾಗಿರುವುದು ಇದೇ. ಇದನ್ನು ಡಿಮಿಲಿಟರೈಸೇಶನ್ ಮತ್ತು ಡಿನಾಜಿಫಿಕೇಶನ್ ಎಂದು ಅವರು ಹೇಳಿಕೊಂಡಿದ್ದಾರೆ. ಇದರಲ್ಲಿ ಎರಡನೆಯದು ಶುದ್ಧ ಅಪಪ್ರಚಾರ. ವಾಸ್ತವದಲ್ಲಿ ಅತಿಯಾದ ನಿಯೋ ನಾಝಿ ಪ್ರಭಾವ, ನಾಝಿ ಆಡಳಿತ ಶೈಲಿ ಇರುವುದು ರಶ್ಯದಲ್ಲಿಯೇ. ಈ ಆಕ್ರಮಣವು ಪೋಲ್ಯಾಂಡ್ ಮೇಲೆ ಹಿಟ್ಲರನ ದಾಳಿಯನ್ನು ನೆನಪಿಸಿದರೆ ಆಶ್ಚರ್ಯವಿಲ್ಲ. ಆದರೆ, ಅದು ಸಾವಿರಪಟ್ಟು ಕ್ರೂರ ಮತ್ತು ಭಯಾನಕವಾಗಿತ್ತು ಅಷ್ಟೇ. ಆದರೆ, ಪರಿಣಾಮ ಏನಾದೀತು? ಮತ್ತೆ ಜನರ ಬಂಡು, ಜನಪ್ರಿಯ ಸರಕಾರದ ಸ್ಥಾಪನೆ. ಮರಳಿ ಸ್ವೇರ್ ವನ್.
ಎರಡು: ಹಾಗಾದರೆ, ಅಲ್ಲಿ ಸ್ಥಿರವಾಗಿ ಬೇರೂರುವುದೆ? ಇದು ಎಷ್ಟು ಕಷ್ಟ ಎಂಬುದನ್ನು ಹಿಂದೆ ಅಫ್ಘಾನಿಸ್ತಾನದಲ್ಲಿ ಸೋವಿಯತ್ ಒಕ್ಕೂಟ, ನಂತರ ಯುಎಸ್‌ಎ ಸ್ವತ ಅನುಭವಿಸಿವೆ. ಇರಾಕ್, ಅಫ್ಘಾನಿಸ್ತಾನದಲ್ಲಿ ಮಾಡಿದಂತೆ ಒಂದು ದೇಶವನ್ನು ಸುಲಭವಾಗಿ ಯುದ್ಧದಲ್ಲಿ ಸೋಲಿಸಬಹುದು. ಆದರೆ, ಒಂದು ದೇಶದ ಜನರು ಬಂಡೆದ್ದು ನೂರಾರು ಗುಂಪುಗಳಾಗಿ ಒಡೆದರೆ, ಅದನ್ನು ಹಿಡಿದಿಡುವುದು ಬಹಳ ಖರ್ಚು ಮತ್ತು ಜೀವಹಾನಿಯ ಬಾಬ್ತು.
ಮೂರನೆಯದು ಅತ್ಯಂತ ಅಪಾಯಕಾರಿ ಮತ್ತು ಜಾಗತಿಕ ವಿನಾಶದ ಸಾಧ್ಯತೆ. ಮೊದಲಿಗೆ ರಶ್ಯ ಮತ್ತು ಉಕ್ರೇನಿಗೆ ನೇರ ತಾಗಿಕೊಂಡಿರುವ ನ್ಯಾಟೊ ದೇಶಗಳು ಯಾವುವು ಎಂಬುದನ್ನು ನೋಡೋಣ. ರಶ್ಯಕ್ಕೆ ತಾಗಿಕೊಂಡು ನಾರ್ವೆ, ಎಸ್ಟೋನಿಯಾ, ಲಾತ್ವಿಯಾ, ಲಿಥುವೇನಿಯಾ, ಪೋಲ್ಯಾಂಡ್ ಇವೆ. ಉಳಿದಂತೆ ಪಾಶ್ಚಾತ್ಯಪರ ಫಿನ್‌ಲ್ಯಾಂಡ್, ಜಾರ್ಜಿಯಾ, ಅಜರ್‌ಬೈಜಾನ್ ಇವೆ. ಈ ನಿಟ್ಟಿನಲ್ಲಿ ನೋಡಿದಲ್ಲಿ ಉಕ್ರೇನ್ ನ್ಯಾಟೊ ಸೇರುವ ಕುರಿತ ರಶ್ಯದ ಆತಂಕ ಸಂಪೂರ್ಣ ಅಕಾರಣವಾದುದಲ್ಲ ಎಂಬುದು ಗೊತ್ತಾಗುತ್ತದೆ. ಆದರಿದು ಆಕ್ರಮಣಕ್ಕೆ ಸಮರ್ಥನೆಯಲ್ಲ. ಉಕ್ರೇನಿಗೆ ತಾಗಿಕೊಂಡು ಇರುವ ನ್ಯಾಟೊ ದೇಶಗಳೆಂದರೆ, ಪೋಲ್ಯಾಂಡ್, ಸ್ಲೊವಾಕಿಯ, ಹಂಗರಿ ಮತ್ತು ರೊಮಾನಿಯ. ಉಳಿದಂತೆ ಮಾಲ್ಡೋವ. ರಶ್ಯ ಉಕ್ರೇನನ್ನು ಆಕ್ರಮಿಸಿದರೆ, ಇವೂ ನೇರ ಗಡಿಗಳಾಗುತ್ತವೆ. ನ್ಯಾಟೊವನ್ನು ದೂರವಿಡುವ ಪುಟಿನ್ ಉದ್ದೇಶವೇ ಬಿಗಡಾಯಿಸುತ್ತದೆ. ಹಾಗಾದರೆ, ಈ ದುಸ್ಸಾಹಸದ ಪರಿಣಾಮವೇನು? ಮತ್ತೆ ಸ್ಕ್ವೇರ್ ವನ್!
ಹಿಂದೆ ರಶ್ಯವು ಉಕ್ರೇನಿನ ಮೇಲೆ ಸೈಬರ್ ದಾಳಿ ನಡೆಸಿ, ವಿದ್ಯುತ್ ವ್ಯವಸ್ಥೆ ಇತ್ಯಾದಿ ಹಾನಿಗೆಡವಿತ್ತು. ಇದು ಈಗಿನ ಸಂದರ್ಭದಲ್ಲಿ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ಒಂದು ವೇಳೆ ಕ್ರಾಸ್ ಡೊಮೈನ್ (ಅಂತರ್ಜಾಲ) ಮೂಲಕ ನೆರೆಯ ನ್ಯಾಟೊ ದೇಶಗಳ ವ್ಯವಸ್ಥೆಗಳಿಗೆ ಹಾನಿ ಮಾಡಿದಲ್ಲಿ ಅದು ಯುದ್ಧ ಕೃತ್ಯ- ಆ್ಯಕ್ಟ್ ಆಫ್ ವಾರ್ ಆಗುತ್ತದೆಯಂತೆ. ಇದು ನೇರ ದಾಳಿ ಮಾಡಲು ನ್ಯಾಟೊಗೆ ಕಾರಣ, ಪ್ರಚೋದನೆ ಎರಡೂ ಆಗಬಹುದು. ಉಕ್ರೇನ್ ಸೇರಿದಂತೆ ಬೇರೆ ದೇಶಗಳ ಯುದ್ಧದಲ್ಲಿ ಭಾಗವಹಿಸಲು ಯುಎಸ್‌ಎ ಸರಕಾರವು ಕಾಂಗ್ರೆಸ್ ಅನುಮೋದನೆ ಪಡೆಯಬೇಕಾಗುತ್ತದೆ. ನ್ಯಾಟೊ ಮೇಲೆ ದಾಳಿಯಾದರೆ, ಇಂತಹ ಅನುಮೋದನೆ ಬೇಕಿಲ್ಲ. ಇಂತಹ ಸಾಧ್ಯತೆ ಕಡಿಮೆಯಾದರೂ, ಒಂದು ಕಿಡಿಯಿಂದ ಎಲ್ಲವೂ ಹೊತ್ತಿಹೋಗಬಹುದು. ಚೀನಾ, ಭಾರತ, ಉತ್ತರ-ದಕ್ಷಿಣ ಕೊರಿಯಾ, ಹಾಂಕಾಂಗ್, ಜಪಾನ್ ನಡುವಿನ ಗಡಿ ಮತ್ತಿತರ ಬಿಕ್ಕಟ್ಟುಗಳೂ ಇದಕ್ಕೆ ಸೇರಿಕೊಂಡರೆ, ಪರಮಾಣು ಅಸ್ತ್ರಗಳನ್ನು ಹೊಂದಿರುವ ಹಲವು ರಾಷ್ಟ್ರಗಳಿರುವಾಗ ಇಂತಹದ್ದೊಂದು ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದಕ್ಕೂ ಭಯವಾಗುತ್ತದೆ.
ಸದ್ಯಕ್ಕೆ, ಯಾವುದಾದರೂ ಪರಿಹಾರ ಸಾಧ್ಯವೇ? ರಶ್ಯದ ಮೇಲೆ ಅಸಾಧಾರಣ ಒತ್ತಡ ಹೇರಬಲ್ಲ ಚೀನಾದ (ಈ ಕುರಿತೇ ಪ್ರತ್ಯೇಕವಾಗಿ ಹೇಳಬಹುದು) ಸಲಹೆಗೆ ಒಪ್ಪಿಯೋ, ಇಡೀ ಜಗತ್ತಿನ ಬಹುತೇಕ ದೇಶಗಳು ತನ್ನ ಪರವಾಗಿ ಇಲ್ಲದಿರುವುದನ್ನು ಕಂಡೋ, ‘‘ಉಕ್ರೇನ್ ಸೇನೆ ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾದರೆ, ಮಿನ್ಸ್ಕ್‌ನಲ್ಲಿ ಮಾತುಕತೆಗೆ ಸಿದ್ಧ’’ ಎಂಬ ಸೂಚನೆಯನ್ನು ಪುಟಿನ್ ನೀಡಿದ್ದಾರೆ. ಆದರೆ, ಇಂತಹ ಅವಮಾನಕಾರಿ ನಡೆಯನ್ನು ಉಕ್ರೇನ್‌ನಿಂದ ಸದ್ಯಕ್ಕೆ ನಿರೀಕ್ಷಿಸುವುದು ಸಾಧ್ಯವಿಲ್ಲ. ಆದರೂ, ಅದು ತನ್ನ ಸಾರ್ವಭೌಮತೆಯ ರಕ್ಷಣೆಯ ಖಾತರಿ ಸಿಕ್ಕಿದರೆ ಮತ್ತು ಪೋಲ್ಯಾಂಡಿನ ವಾರ್ಸಾದಲ್ಲಿ ಮಾತುಕತೆ ನಡೆದರೆ, ತಾನೂ ಸಿದ್ಧ ಎಂಬ ಸೂಚನೆಯನ್ನು ನೀಡಿದೆ. ದಿನಾಂಕ ನಿಗದಿಯ ಬಗ್ಗೆ ಮೂರನೇ ಪಕ್ಷಗಳು ಮಾತುಕತೆ ನಡೆಸುತ್ತಿವೆ ಎಂಬ ಸುದ್ದಿಗಳೂ ಇವೆ. ಏನೇ ಇದ್ದರೂ, ಚೀನಾ ಅಥವಾ ಬೇರಾವುದೇ ‘ವಿಶ್ವಗುರು’ಗಳು ಕಷ್ಟ ಸಾಧ್ಯವಾದ ಈ ಅವಕಾಶವನ್ನು ಬಳಸಿಕೊಂಡು ಸಂಧಾನ ಏರ್ಪಡಿಸುವ ಸಂದರ್ಭವಂತೂ ಇದೆ. ಒಂದು ವೇಳೆ ಸಂಧಾನವು ನಡೆದರೂ ಆಗುವುದೇನು? ಮತ್ತೆ ಸ್ಕ್ವೇರ್ ವನ್! ಎಲ್ಲವೂ ಮೊದಲಿನ ಸ್ಥಿತಿಗೆ; ಹೋದ ಜೀವಗಳು, ಆದ ಹಾನಿ, ನೋವಿನ ಹೊರತಾಗಿ!