ಕಳೆದ ಬಜೆಟ್: ಸಂಕಷ್ಟಕ್ಕೆ ಬೆನ್ನು ಹಾಕುವ ಸರಕಾರದ ಸಿನಿಕತನದ ಪುರಾವೆ
ಜಿಎಸ್‌ಟಿ ಆದಾಯ, ಹಣಕಾಸು ಆಯೋಗದ ಪಾಲಿನಲ್ಲಿ ಕಡಿತ ಎಲ್ಲವನ್ನೂ ಲೆಕ್ಕ ಹಾಕಿದರೆ ಕೇಂದ್ರ ಸರಕಾರದಿಂದ ಬರಬೇಕಾದ ಅನುದಾನ ಕಡಿತ ಏನಿಲ್ಲವೆಂದರೂ ರೂ. 30 ಸಾವಿರ ಕೋಟಿ ಮೀರುತ್ತದೆ. ಈ ನ್ಯಾಯೋಚಿತ ಪಾಲು ಪಡೆಯಲು ಹಕ್ಕೊತ್ತಾಯ ಮಂಡಿಸುವ ಧೈರ್ಯ ನಮ್ಮ ಸರಕಾರಕ್ಕಿಲ್ಲ.
ಕಳೆದ ಮೂರು ವರ್ಷಗಳಿಂದ ಕರ್ನಾಟಕವು ಕೋವಿಡ್ ಸಾಂಕ್ರಾಮಿಕ ಮತ್ತು ಅಭೂತ ಪೂರ್ವ ಪ್ರಾಕೃತಿಕ ವಿಕೋಪಗಳಿಂದ ಬಸವಳಿದಿದೆ. ಲಾಕ್ ಡೌನ್‌ನಿಂದ ಹಿಡಿದು ವಾರಾಂತ್ಯದ ಕರ್ಫ್ಯೂವರೆಗೆ ಹತ್ತು ಹಲವು ನಿಷೇಧಗಳ ಕಾರಣದಿಂದ ಆರ್ಥಿಕತೆ ಕುಂಟಿತು. ಶಾಲಾ ಕಾಲೇಜುಗಳು ರಜಾ ಪಡೆದವು. ಕಲಿಕೆಗಾಗಿ ಸರಕಾರವು ಅಪಕ್ವ ಕಲಿಕಾ ನೀತಿಗಳನ್ನು ಜಾರಿಗೊಳಿಸಿತು.
ಕೋವಿಡ್ ನಮ್ಮ ಆರೋಗ್ಯ ವ್ಯವಸ್ಥೆಯ ಲೋಪಗಳನ್ನು ಜಾಹೀರುಗೊಳಿಸಿತು. ಒಂದೆಡೆ ಖಾಸಗಿ ಆಸ್ಪತ್ರೆಗಳು ಅಮಾನುಷ ಸುಲಿಗೆಗೆ ನಿಂತರೆ ಸರಕಾರ ಆಮ್ಲಜನಕ ಪೂರೈಕೆ ಮಾಡಲೂ ಸೋತಿತು. ನಮ್ಮ ಆರೋಗ್ಯ ವ್ಯವಸ್ಥೆ ಸಂಪೂರ್ಣ ಶೈಶವ ಘಟ್ಟದಲ್ಲಿರುವುದನ್ನು ಕೋವಿಡ್ ಸಾಬೀತು ಪಡಿಸಿತು. ಶಿಕ್ಷಣದಲ್ಲಿ ಮಕ್ಕಳು ಆನ್‌ಲೈನ್ ಎಂಬ ಸಿಕ್ಕಿನಲ್ಲಿ ಬಳಲಿ ನೈಜ ಕಲಿಕೆಗೇ ಎರವಾದರು. ಗ್ರಾಮೀಣ ಭಾಗದ ಮಕ್ಕಳಂತೂ ಸ್ಮಾರ್ಟ್‌ಫೋನ್, ನೆಟ್‌ವರ್ಕ್ ಎರಡೂ ಇಲ್ಲದೆ ಬಳಲಿದ ವಿವರಗಳು ದಂಡಿಯಾಗಿವೆ.
ಕರ್ನಾಟಕದ ಇತಿಹಾಸದಲ್ಲೇ ಮೂರೂ ವರ್ಷ ಅಕಾಲಿಕ/ ತೀವ್ರ ಮಳೆಯಿಂದಾಗಿ ಉಂಟಾದ ಬೆಳೆ ನಾಶ, ಆಸ್ತಿಪಾಸ್ತಿ ನಷ್ಟ ಭವಿಷ್ಯದ ಬಗ್ಗೆಯೇ ಆತಂಕಸೃಷ್ಟಿ ಮಾಡಿದೆ. ಮೂರು ವರ್ಷದ ಅಂದಾಜು ನಷ್ಟವೇ ಸುಮಾರು ರೂ. 75 ಸಾವಿರ ಕೋಟಿ. ಇದು ಹವಾಮಾನ ಬದಲಾವಣೆಯ ಪರಿಣಾಮ ಎಂಬುದರ ಬಗ್ಗೆ ವೈಜ್ಞಾನಿಕ ಒಮ್ಮತ ಇದೆ. ಐಐಎಸ್‌ಸಿ ಸಂಸ್ಥೆಯ ಅಧ್ಯಯನದ ಪ್ರಕಾರ ಮುಂದಿನ 40ವರ್ಷಗಳಲ್ಲಿ ಕನಿಷ್ಠ 18ವರ್ಷ ಇಂತಹ ವಿಕೋಪ ಸಂಭವಿಸಬಹುದು.
ಈ ಮೂರೂ ಆಪತ್ತುಗಳನ್ನು ಎದುರಿಸುವ ಬಗ್ಗೆ: 1. ಸಾಂಕ್ರಾಮಿಕ ಪರಿಣಾಮದ ಆರೋಗ್ಯ ವ್ಯವಸ್ಥೆಯ ಸುಧಾರಣೆ. 2. ಶಿಕ್ಷಣ/ಕಲಿಕೆಯ ದಾರುಣ ಕುಸಿತದ ಸುಧಾರಣೆ. 3. ಕೃಷಿ ಕ್ಷೇತ್ರದಲ್ಲಿ ಸಂಭವಿಸಿರುವ/ ಸಂಭವಿಸಬಹುದಾದ ವಿಕೋಪಗಳ ಬಗ್ಗೆ ದೀರ್ಘ ಕಾಲೀನ ಯೋಜನೆಗಳು. ಈ ಬಗ್ಗೆ ನಮ್ಮ ಸರಕಾರ ಗಂಭೀರ ಹೆಜ್ಜೆ ಇಟ್ಟಿದೆಯಾ ಎಂದು ನೋಡಿದರೆ ತೀವ್ರ ನಿರಾಸೆ ಮೂಡುತ್ತದೆ.
ಉದಾ: ಕೋವಿಡ್ ಸಂದರ್ಭದಲ್ಲಿ ತಮಿಳುನಾಡು ರೂ. 30 ಸಾವಿರ ಕೋಟಿ ವೆಚ್ಚ ಮಾಡಿದರೆ ಕೇರಳ ರೂ. 40 ಸಾವಿರ ಕೋಟಿ ವೆಚ್ಚ ಮಾಡಿರುವ ವರದಿಗಳಿವೆ. ಆದರೆ ಕರ್ನಾಟಕ ಸರಕಾರ ವೆಚ್ಚ ಮಾಡಿರುವ ಮೊತ್ತ ರೂ. 10 ಸಾವಿರ ಕೋಟಿ ದಾಟುವುದಿಲ್ಲ.
20-21ರ ಸಾಲಿನ ಬಜೆಟ್‌ನಲ್ಲಿ ಪರಿಹಾರ ರೂಪವಾದ ದೀರ್ಘಕಾಲೀನ ಯೋಜನೆಗಳ ಸುಳಿವೇ ಇಲ್ಲ. ಉದಾ: 2017ರಲ್ಲಿ ಕರ್ನಾಟಕದಲ್ಲಿದ್ದ ಸರಕಾರಿ ಆಸ್ಪತ್ರೆಗಳ ಸಂಖ್ಯೆ 414. 2021ರ ವೇಳೆಗೆ ಅದು 415 ಆಗಿದೆ ಅಷ್ಟೇ. ಆರೋಗ್ಯ ಸಿಬ್ಬಂದಿ ಸಂಖ್ಯೆ ಈಗ 10,000 ಜನ ಸಂಖ್ಯೆಗೆ 72 ಇದ್ದು ಅದನ್ನು ತುರ್ತಾಗಿ 82ಕ್ಕೆ ಏರಿಸಬೇಕು ಎಂಬ ಶಿಫಾರಸು ಇದ್ದರೆ, ಅದನ್ನು ಅನುಷ್ಠಾನಗೊಳಿಸುವ ಯಾವ ವಿವರಗಳೂ ಬಜೆಟ್‌ನಲ್ಲಿಲ್ಲ. ತಾಯಂದಿರ ಮತ್ತು ಶಿಶು ಮರಣ ಪ್ರಮಾಣವನ್ನು ಇಳಿಸಬೇಕೆಂಬ ಶಿಫಾರಸಿಗೂ ಅಷ್ಟೇ; ಸುಸ್ಥಿರ ಅಭಿವೃದ್ಧಿಯ ಈ ಗುರಿ ತಲುಪಲು ಸರಕಾರ ಬದ್ಧವಾಗಿದೆ ಎಂಬ ಅಮೋಘ ವಚನವಿದೆ.
ಈ ಬಾರಿ ಮಕ್ಕಳ ಕುಂಠಿತ ಕಲಿಕೆಯನ್ನು ಪರಾಮರ್ಶೆಗೊಳಿಸುವ ಧೈರ್ಯ ಮಾಡದ ಸರಕಾರ 10ನೇ ತರಗತಿ ಮತ್ತು ಪಿಯುಸಿ ಮಕ್ಕಳನ್ನು ಸಾರಾ ಸಗಟು ಪಾಸು ಮಾಡಿ ಕೈತೊಳೆದುಕೊಂಡಿದೆ. ಇದರ ಪರಿಣಾಮವಾಗಿ ಪಿಯು/ ಡಿಗ್ರಿ ಕಾಲೇಜುಗಳಲ್ಲಿ ಹಿಂದೆಂದೂ ಕಾಣದ ಅಡ್ಮಿಶನ್ ರಶ್ ಕಾಣಿಸಿಕೊಂಡಿದೆ! ಈ ಮಕ್ಕಳು ತಾಲೂಕು ಕೇಂದ್ರಕ್ಕೋ, ಜಿಲ್ಲಾ ಕೇಂದ್ರಕ್ಕೋ ವಿದ್ಯಾಭ್ಯಾಸಕ್ಕೆ ಬಂದರೆ ಹಾಸ್ಟೆಲ್ ವ್ಯವಸ್ಥೆ, ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯದ ವ್ಯವಸ್ಥೆ ಅದೇ ಪ್ರಮಾಣದಲ್ಲಿ ಹೆಚ್ಚಿಸಬೇಕಲ್ಲವೇ?
ಬಜೆಟ್ ನೋಡಿದರೆ 50 ಹಾಸ್ಟೆಲ್‌ಗಳಿಗೆ ನೂರು ಕೋಟಿ ವೆಚ್ಚ ಮಾಡಿ 5,000 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ. ಒಂದೊಂದು ತಾಲೂಕಲ್ಲೂ ಸಾವಿರಾರು ಮಕ್ಕಳು ಪಿಯು/ ಡಿಗ್ರಿ ವಿದ್ಯಾಭ್ಯಾಸಕ್ಕೆ ಸೇರ್ಪಡೆಗೊಳ್ಳುವಾಗ ಸರಕಾರದ ಈ ಅಸಡ್ಡೆಗೆ ಏನು ಹೇಳಬೇಕು.?
ಇತ್ತ ಕೃಷಿ ಕ್ಷೇತ್ರ ನೋಡಿದರೆ, ಕಳೆದ ಮೂರು ವರ್ಷಗಳಿಂದ ಕಿಸಾನ್ ಸಮ್ಮಾನ ಯೋಜನೆಯಲ್ಲಿ ಕೇಂದ್ರ ಸರಕಾರ 6,000 ಕೊಟ್ಟರೆ ರಾಜ್ಯ ಸರಕಾರ 4,000 ನೀಡುತ್ತಿದೆ. ಆದರೆ ಬೆಲೆ ಏರಿಕೆ ಲೆಕ್ಕ ಹಾಕಿದರೆ ಈ ಮೌಲ್ಯ ಏಳು ಸಾವಿರಕ್ಕಿಳಿದಿದೆ. ಅದಿರಲಿ, ರಾಜ್ಯದ ಬಹುಮುಖ್ಯ ಕೃಷಿ ಸಮಸ್ಯೆ, ಸಾವಯವ ಇಂಗಾಲದ ಕೊರತೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಸಾವಯವ ಇಂಗಾಲದ ಪ್ರಮಾಣ ಶೇ. 0.5ಕ್ಕೆ ಇಳಿದಿದೆ. ವೈಜ್ಞಾನಿಕವಾಗಿ ಇದು ಮರುಭೂಮಿಯೇ ಸರಿ. ಅಕಾಲಿಕ ಮಳೆ, ಬರ ಇತ್ಯಾದಿ ವಿಕೋಪಗಳನ್ನು ಎದುರಿಸುವ ಮೂಲ ಚೈತನ್ಯ ಪ್ರಾಪ್ತವಾಗುವುದೇ ಸಾವಯವ ಇಂಗಾಲ ಸಮೃದ್ಧಿಯಿಂದ. ಇಂತಹ ದೂರಗಾಮಿ ಹೆಜ್ಜೆ ಇಡಬೇಕಾದ ಸಂದರ್ಭದಲ್ಲಿ ಸರಕಾರ ಇದು ಎಷ್ಟು ಮುಖ್ಯ ಎಂದು ಹಾರು ಹೇಳಿಕೆ ನೀಡಿ ಕೇವಲ 5 ಕೋಟಿ ಅನುದಾನ ನಿಗದಿ ಮಾಡಿದೆ! ವಿಕೋಪ ಎದುರಿಸಬಲ್ಲ ಸಿರಿ ಧಾನ್ಯ ಬೆಳೆಯಲು ಹೆಕ್ಟೇರಿಗೆ ರೂ. 10,000 ಸಹಾಯಧನ ಎಂದು ಗ್ರಾಂಡ್ ಆಗಿ ಘೋಷಿಸಿ, ನೀಡಿರುವ ಅನುದಾನ ರೂ. 5 ಕೋಟಿ. ಅದರಲ್ಲೂ ಬಿಡುಗಡೆ ಮಾಡಿದ್ದು ರೂ. 2.5 ಕೋಟಿ. ವೆಚ್ಚವಾಗಿದ್ದು ರೂ. 1 ಕೋಟಿ!!
ಹವಾಮಾನ ಬದಲಾವಣೆಯಂತಹ ದೀರ್ಘಕಾಲೀನ ಹಾವಳಿಗೆ ತಯಾರಾಗುವ ಹೆಜ್ಜೆಗಳೇನು ಎಂದು ನೋಡಿದರೆ ಕಾರ್ಯಕ್ರಮಗಳು ಶೂನ್ಯ.
ಇತ್ತ ಸಾಮಾಜಿಕ ನ್ಯಾಯ ಎಂದು ನೋಡಿದರೆ ಪ.ಜಾತಿ/ಪಂಗಡಗಳಿಗೆ ಕಾನೂನು ಬದ್ಧವಾಗಿ ನೀಡಬೇಕಾದ ಶೇ.25ರ ಅನುದಾನದಲ್ಲಿ ಸಾವಿರ ಕೋಟಿ ಕಡಿತ ಮಾಡಲಾಗಿದೆ. ರಾಜ್ಯದ ಯೋಜನಾ ಗಾತ್ರ 2,42,000 ಕೋಟಿ ರೂ. ಇದರಲ್ಲಿ 1,42,000 ಕೋಟಿ ರೂ. ಯೋಜನೇತರ ವೆಚ್ಚ/ ಸಾಲ ತೀರುವಳಿಗೆ ಹೋಗುತ್ತದೆ ಎಂದು ಅಲವತ್ತುಕೊಂಡು ಪ.ಜಾ/ಪ.ಪಂ ಅನುದಾನ ಕಡಿತವನ್ನು ಸಮರ್ಥಿಸಿಕೊಳ್ಳಲಾಗಿದೆ.
ಆದರೆ ಇದೇ ಸರಕಾರ ಮೇಲ್ಜಾತಿಗಳಾದ ಲಿಂಗಾಯತ, ಒಕ್ಕಲಿಗ ಅಭಿವೃದ್ಧಿ ಮಂಡಳಿಗಳಿಗೆ ತಲಾ ರೂ. 500 ಕೋಟಿ ಮತ್ತು ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ರೂ. 50 ಕೋಟಿ ನೀಡುವ ಔದಾರ್ಯ ತೋರಿದೆ.
ಜಿಎಸ್‌ಟಿ ಆದಾಯ, ಹಣಕಾಸು ಆಯೋಗದ ಪಾಲಿನಲ್ಲಿ ಕಡಿತ ಎಲ್ಲವನ್ನೂ ಲೆಕ್ಕ ಹಾಕಿದರೆ ಕೇಂದ್ರ ಸರಕಾರದಿಂದ ಬರಬೇಕಾದ ಅನುದಾನ ಕಡಿತ ಏನಿಲ್ಲವೆಂದರೂ ರೂ. 30 ಸಾವಿರ ಕೋಟಿ ಮೀರುತ್ತದೆ.
ಈ ನ್ಯಾಯೋಚಿತ ಪಾಲು ಪಡೆಯಲು ಹಕ್ಕೊತ್ತಾಯ ಮಂಡಿಸುವ ಧೈರ್ಯ ನಮ್ಮ ಸರಕಾರಕ್ಕಿಲ್ಲ. ಹೋಗಲಿ, ಇರುವ ಸಂಪನ್ಮೂಲದಲ್ಲಿ ಚೊಕ್ಕಟವಾದ ಸಂಕಷ್ಟ ನಿವಾರಣೆಯ ಹೆಜ್ಜೆ ಇಡುವ ಧೀಮಂತಿಕೆ ಇದೆಯಾ ಅಂದರೆ ಅದೂ ಇಲ್ಲ. ಚುನಾವಣೆಯ ಹಪಾಹಪಿಯಲ್ಲಿ ಕಂಡ ಕಂಡ ಜಾತಿ/ ಮಠಗಳಿಗೆ; ಪ್ರತಿಮೆಗಳಿಗೆ ದುಡ್ಡು ಸುರಿಯುವ ಸಿನಿಕತನವನ್ನು ಈ ಸರಕಾರ ಪ್ರದರ್ಶಿಸಿದೆ. ಸಂಕಷ್ಟಕ್ಕೀಡಾಗಿರುವ ಜನತೆಯನ್ನು ಒಟ್ಟಾಗಿ ಗಮನಿಸಿ ದೀರ್ಘಕಾಲೀನ ಪರಿಹಾರೋಪಾಯದ ಕಾರ್ಯಕ್ರಮಗಳ ಮೂಲಕ ಹೆಜ್ಜೆಯಿಡಬೇಕಾದ ಸರಕಾರ ಜನತೆಯನ್ನು ಜಾತಿಗಳ ಕನ್ನಡಕದಿಂದ ನೋಡಿ ಕಾಸೆಸೆದು ಮತ ನಿಷ್ಠೆ ಗಳಿಸುವ ಹುಂಬತನ ಪ್ರದರ್ಶಿಸಿದೆ.
ಕಷ್ಟ ಸಂಕಷ್ಟಗಳು ಜಾತ್ಯತೀತ! ಈ ಬರ/ ಪ್ರವಾಹ/ ರೋಗಗಳು ಎಲ್ಲರನ್ನೂ ಆವರಿಸುವ ಸಂಕಷ್ಟ ಎಂಬುದು ನಮ್ಮ ಜನರಿಗೆ ಗೊತ್ತು. ಈ ನೋವು ಅರಿಯುವ ಸಂಬಂಧ ಇನ್ನೂ ಹಳ್ಳಿಗಳಲ್ಲಿ ಇದೆ. ಸರಕಾರಕ್ಕೆ ಗೊತ್ತಾಗಬೇಕಷ್ಟೇ.