ಬ್ಯಾಟರಿಗೆ ಖನಿಜಗಳಿಲ್ಲದಿದ್ದರೆ ಇಲೆಕ್ಟ್ರಿಕ್ ವಾಹನ ಯಾಕೆ?
ಅಗತ್ಯ ಕಚ್ಚಾ ವಸ್ತುಗಳ ಕೊರತೆಯು ಬ್ಯಾಟರಿ ಉದ್ಯಮದ ಹಾದಿಯಲ್ಲಿ ತಡೆಯಾಗಿದೆ ಎಂಬುದಾಗಿ ವರ್ಲ್ಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ದಾಸ್‌ಗುಪ್ತಾ ವರದಿಯಲ್ಲಿ ಹೇಳಿದ್ದಾರೆ. ‘‘ಸಂಪನ್ಮೂಲಗಳ ಲಭ್ಯತೆಯು ಭವಿಷ್ಯದಲ್ಲಿ ಗಣನೀಯ ಹಿನ್ನಡೆಯಾಗಲಿದೆ’’ ಎಂದು ವರದಿ ಅಭಿಪ್ರಾಯಪಟ್ಟಿದೆ.
ಬ್ಯಾಟರಿಗಳು ಇಲೆಕ್ಟ್ರಿಕ್ ವಾಹನಗಳ ಅತ್ಯಂತ ಮಹತ್ವದ ಘಟಕ ಹಾಗೂ ಈ ಬ್ಯಾಟರಿಗಳ ತಯಾರಿಕೆಯಲ್ಲಿ ಕೋಬಾಲ್ಟ್ ಮತ್ತು ಲಿಥಿಯಮ್ ಮುಂತಾದ ಖನಿಜಗಳು ಅತಿ ಮುಖ್ಯ ಪಾತ್ರ ವಹಿಸುತ್ತವೆ. ಇಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಭಾರತ ಉತ್ತೇಜಿಸುತ್ತಿದೆ. ಆದರೆ, ಈ ಪ್ರಮುಖ ಕಚ್ಚಾ ವಸ್ತುಗಳ ನಿಕ್ಷೇಪದ ಕೊರತೆಯನ್ನು ಅದು ಎದುರಿಸುತ್ತಿದೆ.
ಈ ವಿಷಯಕ್ಕೆ ಸಂಬಂಧಿಸಿ ವಿಶ್ವ ಸಂಪನ್ಮೂಲಗಳ ಸಂಸ್ಥೆಯು ಇತ್ತೀಚೆಗೆ ಅಧ್ಯಯನವೊಂದನ್ನು ನಡೆಸಿತು. ಭಾರತದಲ್ಲಿ ಇಲೆಕ್ಟ್ರಿಕ್ ವಾಹನಗಳ ಬೆಳವಣಿಗೆಯ ಹಾದಿ ಸುಗಮವಾಗಬೇಕಾದರೆ, ಇಂತಹ ಖನಿಜಗಳನ್ನು ಇತರ ದೇಶಗಳಿಂದ ಪಡೆದುಕೊಳ್ಳಲು ವ್ಯಾಪಕ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂಬುದಾಗಿ ಅಧ್ಯಯನವು ಶಿಫಾರಸು ಮಾಡಿದೆ.
ದೇಶದಲ್ಲಿ ಇಲೆಕ್ಟ್ರಿಕ್ ವಾಹನಗಳಿಗೆ ರಾಷ್ಟ್ರೀಯ ಗುರಿಯನ್ನೇನೂ ನಿಗದಿಪಡಿಸಿಲ್ಲವಾದರೂ, ಇಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಸಮಗ್ರ ಪರಿಸರ ವ್ಯವಸ್ಥೆಯೊಂದನ್ನು ನಿರ್ಮಿಸುವ ನಿಟ್ಟಿನಲ್ಲಿ ಭಾರತ ಸರಕಾರವು ನೀತಿಗಳನ್ನು ರೂಪಿಸುತ್ತಿದೆ.
ಈ ನೀತಿಗಳು ಮತ್ತು ಉಪಕ್ರಮಗಳು ಬೃಹತ್ ಕೈಗಾರಿಕೆಗಳ ಇಲಾಖೆ, ನೀತಿ ಆಯೋಗ, ಇಂಧನ ಸಚಿವಾಲಯ, ನಗರಾಭಿವೃದ್ಧಿ ಸಚಿವಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸೇರಿದಂತೆ ಕೇಂದ್ರ ಸರಕಾರದ ಹಲವು ಸಚಿವಾಲಯಗಳ ವ್ಯಾಪ್ತಿಯನ್ನು ಹೊಂದಿವೆ.
ಬೃಹತ್ ಕೈಗಾರಿಕೆಗಳ ಇಲಾಖೆಯ ‘ಫೇಮ್- ಐಐ’ ಯೋಜನೆಯು ಇಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಒದಗಿಸುತ್ತದೆ ಹಾಗೂ ನೀತಿ ಆಯೋಗದ ‘ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆ’ಯು ಲಿಥಿಯಮ್-ಅಯಾನ್ ಬ್ಯಾಟರಿ ತಯಾರಕ ಕಾರ್ಖಾನೆಗಳಿಗೆ ಸಬ್ಸಿಡಿ ನೀಡುತ್ತದೆ. ಸಾರಿಗೆ ಕ್ಷೇತ್ರದಲ್ಲಿನ ಬದಲಾವಣೆಯನ್ನು ಕ್ಷಿಪ್ರಗೊಳಿಸುವ ಉದ್ದೇಶವನ್ನು ಈ ಯೋಜನೆಗಳು ಹೊಂದಿವೆ. ಮೂರು ಚಕ್ರಗಳ ವಾಹನಗಳನ್ನು 2023ರ ವೇಳೆಗೆ ಮತ್ತು 150 ಸಿಸಿಗಿಂತ ಕಡಿಮೆ ಇಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳನ್ನು 2025ರ ವೇಳೆಗೆ ಸಂಪೂರ್ಣವಾಗಿ ಇಲೆಕ್ಟ್ರಿಕ್ ವಾಹನಗಳನ್ನಾಗಿಸುವ ಯೋಜನೆಯನ್ನು ನೀತಿ ಆಯೋಗ ಹೊಂದಿದೆ.
ಪ್ರಮುಖ ಸವಾಲುಗಳು
ಇಲೆಕ್ಟ್ರಿಕ್ ವಾಹನ ಬ್ಯಾಟರಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಧ್ಯಯನವು, ಇಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಭಾರತದ ಈವರೆಗಿನ ಸವಾಲುಗಳನ್ನು ಗುರುತಿಸಿದೆ. ಆ ಸವಾಲುಗಳೆಂದರೆ- ವಾಹನಗಳ ಅಧಿಕ ಆರಂಭಿಕ ವೆಚ್ಚ, ಚಾರ್ಜಿಂಗ್ ಮತ್ತು ನಿರ್ವಹಣೆ ಮೂಲಸೌಕರ್ಯಗಳಲ್ಲಿನ ಕೊರತೆ ಮತ್ತು ಬ್ಯಾಟರಿ ನಿರ್ವಹಣೆಗೆ ಸಂಬಂಧಿಸಿ ಬಳಕೆದಾರರ ಸಂಶಯಗಳು. ದೇಶದಲ್ಲಿನ ಸೀಮಿತ ಬ್ಯಾಟರಿ ತಯಾರಿಕಾ ಸಾಮರ್ಥ್ಯ ಮತ್ತು ಸರಬರಾಜು ಸರಪಳಿಯ ಅನುಪಸ್ಥಿತಿಯು ಭಾರತದಲ್ಲಿ ಇಲೆಕ್ಟ್ರಿಕ್ ವಾಹನಗಳ ನಿರ್ಮಾಣದಲ್ಲಿ ಎದುರಾಗಿರುವ ಪ್ರಮುಖ ಅಡೆತಡೆಗಳಾಗಿವೆ.
ಆದರೆ, ಒಳ್ಳೆಯ ಸುದ್ದಿಯೆಂದರೆ, ಯಾವುದೇ ರಾಷ್ಟ್ರೀಯ ಗುರಿ ಇಲ್ಲದ ಹೊರತಾಗಿಯೂ, ಇಲೆಕ್ಟ್ರಿಕ್ ವಾಹನಗಳ ಉತ್ತೇಜನೆಗಾಗಿ ಕನಿಷ್ಠ 15 ರಾಜ್ಯಗಳು ವಿಸ್ತೃತ ನೀತಿಗಳನ್ನು ರೂಪಿಸಿವೆ.
‘‘ಇಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸಲು ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಉತ್ತರಪ್ರದೇಶ, ಕೇರಳ, ಉತ್ತರಾಖಂಡ ಮತ್ತು ದಿಲ್ಲಿ ಸೇರಿದಂತೆ ಹಲವಾರು ರಾಜ್ಯ ಸರಕಾರಗಳು ಕ್ರಮಗಳನ್ನು ತೆಗೆದುಕೊಂಡಿವೆ. ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲು ನಿಧಿಗಳನ್ನು ಒದಗಿಸುವುದು, ಶುದ್ಧ ಇಂಧನ ಸ್ಟಾರ್ಟ್-ಅಪ್‌ಗಳಿಗಾಗಿ ವ್ಯಾಪಾರ ಮತ್ತು ತಾಂತ್ರಿಕ ಸಲಹೆ ಕೇಂದ್ರಗಳ ಸ್ಥಾಪನೆ, ಇಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ವಿನಾಯಿತಿ, ಕೌಶಲ ಅಭಿವೃದ್ಧಿ ಚಟುವಟಿಕೆಗಳಿಗೆ ಉತ್ತೇಜನೆ, ನಗರದೊಳಗಿನ ಸಾರ್ವಜನಿಕ ಸಾರಿಗೆಗಾಗಿ ಇ-ಬಸ್‌ಗಳ ಬಳಕೆ ಮತ್ತು ಚಾರ್ಜಿಂಗ್ ಮೂಲಸೌಕರ್ಯಗಳ ಸ್ಥಾಪನೆ ಸೇರಿದಂತೆ ವಿವಿಧ ಉಪಕ್ರಮಗಳನ್ನು ಈ ರಾಜ್ಯಗಳು ತೆಗೆದುಕೊಂಡಿವೆ’’ ಎಂದು ಅಧ್ಯಯನ ತಿಳಿಸಿದೆ.
ಈ ಉಪಕ್ರಮಗಳು ಯೋಜನೆಯ ಭಿನ್ನ ಹಂತಗಳಲ್ಲಿವೆ. ಅವುಗಳ ಪೈಕಿ ಕೆಲವು ಈಗಾಗಲೇ ಉದ್ಘಾಟನೆಗೊಂಡಿವೆ.
ಕಚ್ಚಾ ವಸ್ತುಗಳ ಕೊರತೆ
ವರದಿಯ ಪ್ರಕಾರ, ಇಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳಿಗೆ ಮ್ಯಾಂಗನೀಸ್, ನಿಕಲ್, ಕೋಬಾಲ್ಟ್, ತಾಮ್ರ, ಅಲ್ಯೂಮಿನಿಯಮ್, ಗ್ರಾಫೈಟ್ ಮತ್ತು ಟೈಟಾನಿಯಮ್ ಮುಂತಾದ ಎಂಟು ಪ್ರಮುಖ ಕಚ್ಚಾ ವಸ್ತುಗಳ ಅಗತ್ಯವಿದೆ.
‘‘ಸ್ಥಳೀಯ ಮತ್ತು ಅಂತರ್‌ರಾಷ್ಟ್ರೀಯ ಬ್ಯಾಟರಿ ತಯಾರಕ ಕಂಪೆನಿಗಳು ಬಳಸಬಹುದಾದ ಉನ್ನತ ಸಾಮರ್ಥ್ಯದ ಬ್ಯಾಟರಿ ಘಟಕಗಳನ್ನು ತಯಾರಿಸುವುದಕ್ಕಾಗಿ ಈ ಅದಿರುಗಳನ್ನು ಪಡೆಯಲು ಪ್ರಯತ್ನಗಳನ್ನು ನಡೆಸಬೇಕು’’ ಎಂದು ಅಧ್ಯಯನ ಹೇಳಿದೆ. ‘‘ಗ್ರಾಫೈಟ್‌ಗೆ ಸಂಬಂಧಿಸಿ, ಈಗಿರುವ ನಿಕ್ಷೇಪಗಳ ಸಮೀಕ್ಷೆ ನಡೆಸಿ ದೊಡ್ಡ ಗಾತ್ರದ ಗ್ರಾಫೈಟ್ ಫಲಕಗಳು ಲಭಿಸುತ್ತವೆಯೇ ಎನ್ನುವುದನ್ನು ಪತ್ತೆಹಚ್ಚಬೇಕು. ಇತರ ಕಚ್ಚಾವಸ್ತುಗಳ (ಕೋಬಾಲ್ಟ್ ಮತ್ತು ಲಿಥಿಯಮ್) ನಿಕ್ಷೇಪಗಳನ್ನು ಭಾರತ ಹೊಂದಿಲ್ಲ. ಹಾಗಾಗಿ, ಅವುಗಳನ್ನು ಪಡೆಯಲು ಇತರ ದೇಶಗಳೊಂದಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು’’ ಎಂಬುದಾಗಿ ವರದಿ ಶಿಫಾರಸು ಮಾಡಿದೆ.
‘‘ವಿಶ್ವಾಸಾರ್ಹತೆ ಮತ್ತು ಶುದ್ಧತೆಗಳ ದೃಷ್ಟಿಕೋನದಿಂದ, ಲಿಥಿಯಮ್ ಧಾತುಗಳ ಸಂಸ್ಕರಣೆಯು ಸ್ಥಳೀಯವಾಗಿ ನಡೆಯುವುದು ಬ್ಯಾಟರಿ ಉದ್ಯಮಕ್ಕೆ ಉಪಯುಕ್ತವಾಗಿದೆ. ಬ್ಯಾಟರಿಗಳು ದೀರ್ಘಾವಧಿ ಬಾಳ್ವಿಕೆ ಬರಬೇಕಾದರೆ, ಲಿಥಿಯಮ್ ಕಚ್ಚಾ ವಸ್ತುಗಳ ಶುದ್ಧತೆಯ ಪ್ರಮಾಣ ಹೆಚ್ಚಿರಬೇಕಾಗುತ್ತದೆ’’.
ಅಗತ್ಯ ಕಚ್ಚಾ ವಸ್ತುಗಳ ಕೊರತೆಯು ಬ್ಯಾಟರಿ ಉದ್ಯಮದ ಹಾದಿಯಲ್ಲಿ ತಡೆಯಾಗಿದೆ ಎಂಬುದಾಗಿ ವರ್ಲ್ಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ದಾಸ್‌ಗುಪ್ತಾ ವರದಿಯಲ್ಲಿ ಹೇಳಿದ್ದಾರೆ. ‘‘ಸಂಪನ್ಮೂಲಗಳ ಲಭ್ಯತೆಯು ಭವಿಷ್ಯದಲ್ಲಿ ಗಣನೀಯ ಹಿನ್ನಡೆಯಾಗಲಿದೆ’’ ಎಂದು ವರದಿ ಅಭಿಪ್ರಾಯಪಟ್ಟಿದೆ.
‘‘ನಾವು ಎದುರಿಸುತ್ತಿರುವ ಕಚ್ಚಾ ವಸ್ತುಗಳ ಕೊರತೆಯನ್ನು ಸರಿದೂಗಿಸುವುದಕ್ಕಾಗಿ ಭವಿಷ್ಯದಲ್ಲಿ ಅವುಗಳನ್ನು ಇತರ ದೇಶಗಳಿಂದ ಪಡೆಯಲು ಸಾಧ್ಯವಾಗುವಂತೆ ಆ ದೇಶಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವುದು ಪ್ರಯೋಜನಕಾರಿಯಾಗಿದೆ’’ ಎಂದು ವರದಿಯಲ್ಲಿ ದಾಸ್‌ಗುಪ್ತಾ ಹೇಳಿದ್ದಾರೆ.
ಬ್ಯಾಟರಿಗಳ ಮರುಬಳಕೆ
ಬ್ಯಾಟರಿ ತಯಾರಕ ಕಾರ್ಖಾನೆಗಳು ಮತ್ತು ಬ್ಯಾಟರಿ ಉದ್ದಿಮೆ ಸಂಬಂಧಿ ಇತರ ಚಟುವಟಿಕೆಗಳ ಜೊತೆ ಜೊತೆಗೇ ಲಿಥಿಯಮ್-ಅಯಾನ್ ಬ್ಯಾಟರಿಗಳ ಮರುಬಳಕೆ ಉದ್ಯಮವನ್ನೂ ಸ್ಥಾಪಿಸಬೇಕು ಎಂಬುದಾಗಿ ವರದಿ ಸೂಚಿಸಿದೆ.
‘‘ಇಲೆಕ್ಟ್ರಿಕ್ ವಾಹನಗಳ ಮರುಸಂಸ್ಕರಿತ ಬ್ಯಾಟರಿಗಳು, ಹೊಸ ಬ್ಯಾಟರಿಗಳಿಗೆ ಅಗತ್ಯವಾದ ಕಚ್ಚಾವಸ್ತುಗಳ ಪ್ರಮುಖ ಮೂಲವಾಗಿ ರುತ್ತದೆ’’ ಎಂದು ಅಧ್ಯಯನ ಅಭಿಪ್ರಾಯಪಟ್ಟಿದೆ. ‘‘ಆರಂಭಿಕ ಮರುಸಂಸ್ಕರಣೆ ವ್ಯವಸ್ಥೆಗಳು ಸಣ್ಣ ಪ್ರಮಾಣದ ಲಿಥಿಯಮ್-ಅಯಾನ್ ಬ್ಯಾಟರಿಗಳನ್ನು ಮರು ಸಂಸ್ಕರಣೆ ಮಾಡುವ ಪ್ರಾಯೋಗಿಕ ಕಾರ್ಯಾಗಾರಗಳಾಗಿರಬಹುದು. ಇವುಗಳು ಕೌಶಲ ಅಭಿವೃದ್ಧಿ ಮತ್ತು ಮರುಸಂಸ್ಕರಣೆ ಪ್ರಕ್ರಿಯೆಯ ಗರಿಷ್ಠ ಬಳಕೆಯ ನಿಟ್ಟಿನಲ್ಲಿ ಅತ್ಯುತ್ತಮ ವಿಧಾನಗಳಾಗಿರಬಹುದು. ಅದೂ ಅಲ್ಲದೆ, ಮರುಸಂಸ್ಕರಣೆಯ ಮೊದಲು, ವಾಹನಗಳ ಬ್ಯಾಟರಿಗಳಿಗೆ ಪುನಶ್ಚೇತನ ನೀಡಿ ನಿಶ್ಚಲ ಉಪಕರಣಗಳಲ್ಲಿ ಬಳಸಬಹುದಾಗಿದೆ ಹಾಗೂ ಇದಕ್ಕಾಗಿ ಪುನಶ್ಚೇತನ ಸೌಕರ್ಯಗಳನ್ನು ಸ್ಥಾಪಿಸಬಹುದಾಗಿದೆ.
ಬ್ಯಾಟರಿ ಕ್ಷೇತ್ರದ ಬಗ್ಗೆ ಹೇಳುವುದಾದರೆ, 2010ರಲ್ಲಿ ಮೊಬೈಲ್ ಫೋನ್ ಉದ್ದಿಮೆ ಬೃಹತ್ ಪ್ರಮಾಣದಲ್ಲಿ ಬೆಳೆದಾಗ ಭಾರತ ಯಾವ ಸ್ಥಿತಿಯಲ್ಲಿತ್ತೋ, ಈಗಲೂ ಅದೇ ಸ್ಥಿತಿಯಲ್ಲಿದೆ ಎಂದು ಬ್ಯಾಟರಿಗಳ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ‘ದ ಎನರ್ಜಿ’ ಕಂಪೆನಿಯ ಸ್ಥಾಪಕ ರಾಹುಲ್ ಲಾಂಬ ಹೇಳುತ್ತಾರೆ. ‘‘ಇಲೆಕ್ಟ್ರಿಕ್ ವಾಹನ ಮಾರುಕಟ್ಟೆ ಅಗಾಧ ಪ್ರಮಾಣದಲ್ಲಿ ಬೆಳೆಯಲಿದೆ ಎನ್ನುವುದು ಈಗ ನಮಗೆ ಗೊತ್ತಿದೆ. ಹಾಗಾಗಿ, ಹಳೆಯ ತಪ್ಪುಗಳು ಪುನರಾವರ್ತನೆಗೊಳ್ಳುವುದನ್ನು ತಡೆಯಲು ಬ್ಯಾಟರಿ ಅಭಿವೃದ್ಧಿ ಬಗ್ಗೆ ನಾವು ಸ್ಪಷ್ಟ ಗಮನವನ್ನು ಹೊಂದಬೇಕು’’ ಎಂದು ಲಾಂಬ ಹೇಳುತ್ತಾರೆ.
‘‘ಭಾರತದಲ್ಲಿ ಕಚ್ಚಾ ಪದಾರ್ಥಗಳಿಲ್ಲ’’ ಎಂದು ಲಾಂಬ ಹೇಳುತ್ತಾರೆ. ‘‘ಬ್ಯಾಟರಿಗಳಿಗಾಗಿ ಬೇಕಾದ ಕಚ್ಚಾ ವಸ್ತುಗಳನ್ನು ಪಡೆಯಲು ನಾವು ಇತರ ದೇಶಗಳೊಂದಿಗೆ ರಕ್ಷಣಾತ್ಮಕ ಒಪ್ಪಂದಗಳನ್ನು ಅಂತಿಮಗೊಳಿ ಸುವುದು ಅಗತ್ಯವಾಗಿದೆ. ಭಾರತೀಯ ಕಂಪೆನಿಗಳು ಈಗ ಗಣಿಗಳಲ್ಲಿ ಹಣ ಹೂಡಬೇಕು ಹಾಗೂ ಮುಂದಿನ 15-20 ವರ್ಷಗಳ ಅವಧಿಗೆ ಕಚ್ಚಾ ವಸ್ತುಗಳ ಸರಬರಾಜು ಸರಣಿಯನ್ನು ಖಚಿತಪಡಿಸಬೇಕು’’.
‘‘ಈ ನಿಟ್ಟಿನಲ್ಲಿ ಈಗಾಗಲೇ ಪ್ರಯತ್ನಗಳನ್ನು ನಡೆಸಲಾಗುತ್ತಿದೆ’’ ಎಂದು ಲಾಂಬ ಹೇಳಿದರು. ಬ್ಯಾಟರಿಗಳ ಜೊತೆಗೆ, ನಾವು ಮೋಟರ್‌ಗಳ ಮೇಲೂ ಗಮನ ಹರಿಸಬೇಕಾಗಿದೆ. ಇದು ಇಲೆಕ್ಟ್ರಿಕ್ ವಾಹನಗಳ ಇನ್ನೊಂದು ಪ್ರಮುಖ ಘಟಕವಾಗಿದೆ. ಮೋಟರ್‌ಗಳಿಗೆ ಕೆಲವು ಅಪರೂಪದ ಖನಿಜಗಳ ಅಗತ್ಯವಿದೆ. ಆದರೆ, ಈ ಖನಿಜಗಳು ಭಾರತದಲ್ಲಿ ದೊರೆಯುತ್ತವೆ.
ಸಂಶೋಧನೆಗೆ ಪ್ರೋತ್ಸಾಹ
ಬ್ಯಾಟರಿ ತಂತ್ರಜ್ಞಾನಗಳಲ್ಲಿ ಕ್ಷಿಪ್ರ ಸುಧಾರಣೆಗಳನ್ನು ಸಾಧಿಸುವುದಕ್ಕಾಗಿ ಭಾರತೀಯ ಕಂಪೆನಿಗಳು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಹೆಚ್ಚಿನ ಹಣ ಒದಗಿಸುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂಬುದಾಗಿಯೂ ಅವರು ಶಿಫಾರಸು ಮಾಡಿದ್ದಾರೆ. ‘‘ಭಾರತದಲ್ಲಿ ಬಳಸಲಾಗುವ ಉತ್ಪನ್ನಗಳು ಭಾರತೀಯ ಹವಾಮಾನಕ್ಕೆ ಒಗ್ಗಿಕೊಳ್ಳುವುದನ್ನು ನಾವು ಖಾತರಿಪಡಿಸಬೇಕು. ಯಾಕೆಂದರೆ, ಭಾರತದ ಹವಾಮಾನವು ಬ್ಯಾಟರಿ ತಂತ್ರಜ್ಞಾನಗಳು ಅಭಿವೃದ್ಧಿಗೊಳ್ಳುತ್ತಿರುವ ದೇಶಗಳ ಹವಾಮಾನಕ್ಕಿಂತ ಭಿನ್ನವಾಗಿದೆ’’ ಎಂದರು.
‘‘ಭಾರತದಲ್ಲಿ ಸುಧಾರಿತ ತಂತ್ರಜ್ಞಾನಗಳ ಅಭಿವೃದ್ಧಿಯಾಗಬೇಕಾದರೆ ಉದ್ದಿಮೆಗಳು ಮತ್ತು ವಿಜ್ಞಾನಿಗಳ ನಡುವೆ ಪ್ರಬಲ ಹಾಗೂ ಪರಸ್ಪರ ಪೂರಕ ಸಹಕಾರ ಇರಬೇಕು’’ ಎಂದಿದ್ದಾರೆ.
‘‘ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಅಭಿವೃದ್ಧಿಗೊಳ್ಳುವ ಹೆಚ್ಚಿನ ಸಂಶೋಧನೆಗಳು ಮುಂದಿನ ಹಂತದ ಅಭಿವೃದ್ಧಿ ಹಂತಕ್ಕೆ ಹೋಗುವುದಿಲ್ಲ’’ ಎಂದು ವರದಿ ಹೇಳಿದೆ. ‘‘ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಹಾಗೂ ತಾಂತ್ರಿಕ ಸಲಹೆ ಕೇಂದ್ರಗಳ ಸುಸಜ್ಜಿತ ಜಾಲವು ಉದ್ದಿಮೆ ಮತ್ತು ವಿಜ್ಞಾನಿಗಳ ನಡುವಿನ ಅಂತರವನ್ನು ನಿವಾರಿಸಲು ಸಹಾಯ ಮಾಡಬಲ್ಲದು ಹಾಗೂ ಶುದ್ಧ ಇಂಧನ ತಂತ್ರಜ್ಞಾನ ಕ್ಷೇತ್ರದಲ್ಲಿ ನೂತನ ಉದ್ಯಮ ಆರಂಭಕ್ಕೆ ಪರಿಸರ ವ್ಯವಸ್ಥೆಯೊಂದನ್ನು ಸೃಷ್ಟಿಸಬಹುದು’’.
ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಸಮುದಾಯದಿಂದ ಮುಂದಿನ ತಲೆಮಾರಿನ ತಂತ್ರಜ್ಞಾನಗಳನ್ನು ಭಾರತ ಪಡೆಯಲು ಸಾಧ್ಯವಾಗುವ ನಿಟ್ಟಿನಲ್ಲಿ ಸಮರ್ಪಕ ಪರಿಸರವೊಂದನ್ನು ನಿರ್ಮಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದಾಗಿಯೂ ವರದಿ ಹೇಳಿದೆ.
ಬ್ಯಾಟರಿಗಳ ಮರು ಬಳಕೆ ತಂತ್ರಜ್ಞಾನಗಳನ್ನು ಪಡೆಯುವುದಕ್ಕೂ ಆದ್ಯತೆ ನೀಡಬೇಕು. ಅದರ ಜೊತೆಗೆ ಬ್ಯಾಟರಿಗಳನ್ನು ಸಂಗ್ರಹಿಸಿಡುವ ತಂತ್ರಜ್ಞಾನವನ್ನೂ ಸಂಪಾದಿಸಬೇಕು ಎಂಬ ಸಲಹೆಯನ್ನೂ ಅಧ್ಯಯನ ನೀಡಿದೆ. ಬೃಹತ್ ಪ್ರಮಾಣದಲ್ಲಿ ಬ್ಯಾಟರಿಗಳನ್ನು ತಯಾರಿಸಬೇಕಾದರೆ, ಲಿಥಿಯಮ್-ಅಯಾನ್ ಬ್ಯಾಟರಿಗಳ ಉತ್ಪಾದನೆ ಕ್ಷೇತ್ರದಲ್ಲಿನ ಪರಿಣತಿಯನ್ನು ಹೆಚ್ಚಿಸಿಕೊಳ್ಳುವುದೂ ಅಗತ್ಯವಾಗಿದೆ.
ಕೃಪೆ: scroll.in