ಗುಜರಾತ್ ಹತ್ಯಾಕಾಂಡವನ್ನು ಯಾಕೆ ಮರೆಯಲು ಸಾಧ್ಯವಾಗುತ್ತಿಲ್ಲ?
ನ್ಯಾಯಕ್ಕಾಗಿ ನಿರಂತರವಾದ ಕಾನೂನು ಹೋರಾಟ ಮಾಡಿದರೂ, ಅವರಲ್ಲಿ ಅನೇಕ ಮಂದಿ ರಾಜಿ ಮಾಡಿಕೊಂಡರು. ಕೆಲವರು ಈ ರಾಜಿಗೆ ಕ್ಷಮೆ ನೀಡಿಕೆಯ ಘನತೆಯ ಪದವನ್ನು ಲೇಪಿಸಿದರು. ಆದರೆ ನಿಜಕ್ಕೂ ತಾವು ಶರಣಾಗಿದ್ದೇವೆಂಬುದನ್ನು ಅವರ ಅಂತರಾಳಕ್ಕೆ ಗೊತ್ತಿತ್ತು. ಆದರೆ ತಮ್ಮ ಪುತ್ರಿಯರನ್ನು ಅತ್ಯಾಚಾರಗೈದ, ತಂದೆಯನ್ನು ಹತ್ಯೆಗೈದ, ತಮ್ಮ ಮನೆಗಳನ್ನು ಕೊಳ್ಳೆ ಹೊಡೆದ ಹಾಗೂ ಕಷ್ಟಪಟ್ಟು ಕೂಡಿಹಾಕಿದ ಉಳಿತಾಯದ ಹಣವನ್ನು ದೋಚಿದಂತಹ ಈ ದುರುಳರು ಪ್ರತಿ ದಿನವೂ ತಮ್ಮ ಗ್ರಾಮದ ಧೂಳುತುಂಬಿದ ಬೀದಿಗಳಲ್ಲಿ ಸ್ವಚ್ಛಂದವಾಗಿ ನಡೆದುಕೊಂಡು ಹೋಗುವುದನ್ನು ಅವರು ನೋಡುವುದು ಸುಲಭವೇನಲ್ಲ.
ಭಾಗ-2
ಗುಜರಾತ್ ನರಮೇಧದ ರೂವಾರಿಗಳ ವಿರುದ್ಧ ಕಾನೂನುಕ್ರಮವನ್ನು ಕೈಗೊಳ್ಳದೆ ಇರುವುದರಿಂದ ಈ ದುರುಳರು ನಿರ್ಭಿಡೆಯಿಂದ ತಿರುಗಲು ಅವಕಾಶ ಮಾಡಿಕೊಟ್ಟಂತಾಗಿದೆ. ಹಲವಾರು ಮಂದಿ ಮಾನವಹಕ್ಕುಗಳ ಹೋರಾಟಗಾರರು ಗುಜರಾತ್ ಗಲಭೆ ಸಂತ್ರಸ್ತರಿಗೆ ಕಾನೂನಾತ್ಮಕ ನ್ಯಾಯವನ್ನು ದೊರಕಿಸಿಕೊಡಲು ದಿಟ್ಟತನ ಹಾಗೂ ದೃಢನಿಶ್ಚಯದೊಂದಿಗೆ ಹೋರಾಟಗಳನ್ನು ನಡೆಸಿದರು. ಇದರ ಫಲಿತಾಂಶವಾಗಿ 2002ರಲ್ಲಿ ಗುಜರಾತ್ ಗಲಭೆಯಲ್ಲಿ ದ್ವೇಷಪರಾಧಗಳನ್ನು ಎಸಗಿದವರಲ್ಲಿ ಕೆಲವರು ದೋಷಿಗಳೆಂದು ಪರಿಗಣಿಸಲ್ಪಟ್ಟರು ಹಾಗೂ ಕಾನೂನುಕ್ರಮಕ್ಕೆ ಒಳಗಾದರು. ಆದರೆ ಹೀಗೆ ಜೈಲು ಸೇರಿದವರಲ್ಲಿ ಹೆಚ್ಚಿನವರು ಹಿಂದುಳಿದ ಜಾತಿ ಹಾಗೂ ಬುಡಕಟ್ಟು ಪಂಗಡಗಳಿಗೆ ಸೇರಿದ ಶ್ರಮಿಕವರ್ಗದವರಾಗಿದ್ದಾರೆ. ಆದರೆ ಈ ನರಮೇಧದ ಸಂಚು ಹೂಡಿದ ಹಾಗೂ ಸಂಘಟಿಸಿದ ಶ್ರೀಮಂತ ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ಯಾವುದೇ ಶಿಕ್ಷೆಯಾಗಿಲ್ಲ. ಗುಜರಾತ್‌ನ ಜಾತಿ ನಿರ್ಮೂಲನ ಸಮಿತಿ ಹೊರತಂದಿರುವ ಕೈಪಿಡಿಯೊಂದರಲ್ಲಿ, 2002ರ ಗುಜರಾತ್ ಗಲಭೆ ಪ್ರಕರಣಗಳಿಗೆ ಸಂಬಂಧಿಸಿ ಸಬರಮತಿ ಜೈಲಿನಲ್ಲಿ ಬಂಧಿತರಾಗಿರುವವರ ಜಾತಿ ಸಂಯೋಜನೆಗಳನ್ನು ವಿವರಿಸಲಾಗಿದೆ. ಬಂಧಿತರಲ್ಲಿ ಕೇವಲ ಇಬ್ಬರು ಬ್ರಾಹ್ಮಣರು, ನಾಲ್ವರು ಬನಿಯಾಗಳು, 17 ಮಂದಿ ಪಟೇಲರು ಹಾಗೂ ಇತರ ಮೇಲ್ಜಾತಿಗಳಿಗೆ ಸೇರಿದ 27 ಅಥವಾ 37 ಮಂದಿಯಿದ್ದು ಅವರ ಸಂಖ್ಯೆ ಹೆಚ್ಚೆಂದರೆ 100 ಇರಬಹುದಷ್ಟೆ. ಆದರೆ ಈ ಪ್ರಕರಣದಲ್ಲಿ 746 ಒಬಿಸಿಗಳು ಹಾಗೂ 797 ದಲಿತರು ಬಂಧನದಲ್ಲಿದ್ದಾರೆ.
ಗುಜರಾತ್ ಹಿಂಸಾಚಾರದ ಹಲವು ಕ್ರಿಮಿನಲ್ ಪ್ರಕರಣಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಕೊಲೆಗಡುಕ ಗುಂಪುಗಳ ನಾಯಕರು ಬಂಧಿತರಾಗಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರಕಾರದಲ್ಲಿ ಸಚಿವೆಯಾಗಿದ್ದ ಸ್ತ್ರೀರೋಗ ತಜ್ಞೆ ಮಾಯಾ ಕೊಡ್ನಾನಿ ಅವರನ್ನು ಕೋಮುಭಾವನೆಯನ್ನು ಕೆರಳಿಸಿದ ಹಾಗೂ ನರೋಡಾ ಪಾಟಿಯಾದಲ್ಲಿ ಅತ್ಯಂತ ಬೀಭತ್ಸವಾದ ಹತ್ಯಾಕಾಂಡ ನಡೆಸಿದ ಗುಂಪಿನ ನೇತೃತ್ವ ವಹಿಸಿದ್ದಕಾಗಿ ದೋಷಿಯೆಂದು ಪರಿಗಣಿಸಿದ ನ್ಯಾಯಾಲಯವು, ಆಕೆ ಜೀವನಪೂರ್ತಿ ಜೈಲಿನಲ್ಲಿ ಕಳೆಯಬೇಕೆಂದು ತೀರ್ಪು ನೀಡಿತ್ತು. ಆದರೂ ಆಕೆಗೆ 2013ರ ನವೆಂಬರ್‌ನಲ್ಲಿ ಜಾಮೀನು ನೀಡಲಾಯಿತು ಹಾಗೂ 2014ರಲ್ಲಿ ಕೇಂದ್ರದಲ್ಲಿ ಸರಕಾರ ಬದಲಾದಾಗ ಅನಾರೋಗ್ಯದ ಕಾರಣದಲ್ಲಿ, ಆಕೆಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತುಗೊಳಿಸಲಾಗಿತ್ತು. ನಾಲ್ಕು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಗುಜರಾತ್ ಹೈಕೋರ್ಟ್ ಆಕೆಯನ್ನು ನರೋಡಾ ಪಾಟಿಯಾ ಹತ್ಯಾಕಾಂಡ ಪ್ರಕರಣದಿಂದ ದೋಷಮುಕ್ತಗೊಳಿಸಿತು.
2002ರ ಗುಜರಾತ್ ಗಲಭೆ ಸಂದರ್ಭ ಹಿಂಸಾಚಾರ ಎಸಗಿದ ತಮ್ಮ ನೆರೆಹೊರೆಯವರ ವಿರುದ್ಧ ಆರೋಪ ಹೊರಿಸಿದ ಹಲವಾರು ಮಂದಿಯ ಮೇಲೆಯೇ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿತ್ತು ಹಾಗೂ ಹಲವಾರು ಮಂದಿ ಜೈಲಿನಲ್ಲಿ ಹಲವಾರು ತಿಂಗಳುಗಳು ಅಥವಾ ವರ್ಷಗಳನ್ನು ಕಳೆಯಬೇಕಾಗಿ ಬಂದಿತು.
ಹಾಗಾಗಿ ತಾವಾಗಿಯೇ ಜೈಲು ಸೇರುವುದನ್ನು ತಪ್ಪಿಸಿಕೊಳ್ಳಲು ಹಲವಾರು ಮಂದಿ ತಮ್ಮ ನೆರೆಹೊರೆಯವರ ವಿರುದ್ಧ ಆರೋಪಗಳನ್ನು ಹಿಂದೆಗೆದುಕೊಂಡರು. ಹಲವಾರು ಮುಸ್ಲಿಮ್ ಯುವಕರ ವಿರುದ್ಧ ಭಯೋತ್ಪಾದಕರೆಂದು ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಯಿತು. ಉಳಿದ ಹಲವಾರು ಮಂದಿಯ ವಿರುದ್ಧ ಕೃತ್ರಿಮ ಆರೋಪಗಳನ್ನು ಹೊರಿಸಿ ಅವರು ಹಲವು ವರ್ಷಗಳ ಕಾಲ ಜೈಲಿನ ನಾಲ್ಕು ಗೋಡೆಗಳ ನಡುವೆ ದಿನಗಳೆಯುವಂತೆ ಮಾಡಲಾಯಿತು. ಕಟ್ಟಕಡೆಗೆ ಅವರನ್ನು ಬಿಡುಗಡೆಗೊಳಿಸಲಾಯಿತು. ಆದರೆ ಕಳೆದು ಹೋದ ಅಮೂಲ್ಯವಾದ ವರ್ಷಗಳಿಗೆ ಅವರಿಗೆ ಮತ್ತು ಅಷ್ಟು ವರ್ಷಗಳ ಕಾಲವೂ ನೋವು ಹಾಗೂ ಹತಾಶೆಯೊಂದಿಗೆ ತಮ್ಮ ಪ್ರೀತಿಪಾತ್ರರಿಗಾಗಿ ಕಾದುನಿಂತಹವರ ಸಮಯವನ್ನು ಯಾರು ತಾನೇ ಮರಳಿ ನೀಡಲು ಸಾಧ್ಯ?. ಗೋಧ್ರಾ ರೈಲು ದುರಂತದಲ್ಲಿ ಬಿದ್ದ ಬೆಂಕಿಯು ರೈಲಿನ ಕೇವಲ ಒಂದು ಬೋಗಿಯನ್ನು ಮಾತ್ರವೇ ಸುಟ್ಟುಹಾಕಿಲ್ಲ, ಬದಲಿಗೆ ಇಡೀ ಗುಜರಾತ್‌ಗೆ ಬೆಂಕಿ ಬೀಳುವಂತೆ ಮಾಡಿತು.
ಗೋದ್ರಾದಲ್ಲಿ ರೈಲಿನ ಕಂಪಾರ್ಟ್ ಮೆಂಟ್‌ಗೆ ಬೆಂಕಿ ಹಚ್ಚಿದ ಆರೋಪ ಎದುರಿಸಿದವರು ದೀರ್ಘ ಸಮಯದವರೆಗೆ, ಹತಾಶೆಯಿಂದ ಜೈಲಿನಲ್ಲಿ ಕಳೆಯಬೇಕು. ಗೋಧ್ರಾ ರೈಲು ದುರಂತದಲ್ಲಿ ಹಿಂದೂಗಳು ಸಾವನ್ನಪ್ಪಿದ್ದಾಗ ಆಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಈ ಪ್ರಕರಣದಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರ ಕೈವಾಡವಿದೆಯೆಂದು ಬಹಿರಂಗವಾಗಿ ಹೇಳಿದ್ದರಾದರೂ, ಆ ಬಗ್ಗೆ ಯಾವುದೇ ಪುರಾವೆಯಿಲ್ಲವೆಂದು ನ್ಯಾಯಾಲಯ ಆರಂಭದಲ್ಲಿ ಹೇಳಿತ್ತು. ಆದಾಗ್ಯೂ ನರೇಂದ್ರ ಮೋದಿಯವರ ಈ ಆರೋಪವು ಗುಜರಾತ್‌ನಲ್ಲಿ ದ್ವೇಷದ ಕಿಡಿಯನ್ನು ಹಚ್ಟಿತು. ಗೋಧ್ರಾ ರೈಲು ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಆಲಿಕೆಯನ್ನು ಸಾಮಾನ್ಯ ಕ್ರಿಮಿನಲ್ ನ್ಯಾಯಾಲಯ ನಡೆಸಿತು ಮತ್ತು ಕೊನೆಗೂ ಅವರಲ್ಲಿ ಹಲವಾರು ಮಂದಿ ದೋಷಮುಕ್ತಗೊಂಡು ಬಿಡುಗಡೆಯಾದರು. ಹೀಗೆ ದೋಷಮುಕ್ತಗೊಂಡವರಲ್ಲಿ ಹೆಚ್ಚಿನವರು ಗೋಧ್ರಾ ರೈಲು ನಿಲ್ದಾಣದ ಸಮೀಪದ, ಬಡ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಯಲ್ಲಿರುವ ಸಿಗ್ನಲ್ ಫಾಲಿಯಾ ಪ್ರದೇಶದವರಾಗಿದ್ದಾರೆ. ತಾವು ಎಸಗದೇ ಇದ್ದ ಅಪರಾಧಕ್ಕಾಗಿ ಅವರು 9 ವರ್ಷಗಳನ್ನು ಜೈಲಿನಲ್ಲಿಯೇ ವ್ಯರ್ಥವಾಗಿ ಕಳೆಯಬೇಕಾಯಿತು. ಈ ಕುಟುಂಬಗಳನ್ನು ನಾನು ನಿಕಟವಾಗಿ ಬಲ್ಲೆ. ಕಡುಬಡತನಕ್ಕೆ ಜಾರಿದ ಅವರು ಹೊಟ್ಟೆ ತುಂಬಿಸಿಕೊಳ್ಳಲು ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಉಂಟಾಗಿತ್ತು. ಯಾಕೆಂದರೆ ಅವರ ಕುಟುಂಬಕ್ಕೆ ಆಧಾರವಾಗಿದ್ದ ಪುರುಷರೆಲ್ಲರೂ ತಾವು ಎಸಗದ ಅಪರಾಧಗಳಿಗಾಗಿ ಜೈಲು ಸೇರಿದ್ದರು. ಕೊನೆಗೂ ತಾವು ಅಮಾಯಕರೆಂದು ಸಾಬೀತುಪಡಿಸಿದ ಬಳಿಕ ಅವರೆಲ್ಲರೂ ಬಿಡುಗಡೆಗೊಂಡರು.ಆದರೆ ಇದಕ್ಕಾಗಿ ಒಂಭತ್ತು ವರ್ಷಗಳೇ ಬೇಕಾದವು.
ನಿತ್ಯ ರಾಮಕೃಷ್ಣ ನೇತೃತ್ವದಲ್ಲಿ ನಡೆದ ಧೀರೋದಾತ್ತ ಕಾನೂನು ಸಮರದ ಮೂಲಕ ಅವರನ್ನು ನಿರ್ದೋಷಿಗಳೆಂದು ಸಾಬೀತುಪಡಿಸಿದರು. ಆದರೆ ಜೈಲಿನಿಂದ ಬಿಡುಗಡೆಗೊಂಡಾಗ ಅವರ ಮನಸ್ಸು, ದೇಹ ಹಾಗೂ ಚೈತನ್ಯ ಎಲ್ಲವೂ ಕುಂದಿಹೋಗಿತ್ತು. ಅವರ ಕುಟುಂಬಗಳ ಬದುಕು ಮೂರಾಬಟ್ಟೆಯಾಗಿತ್ತು. ಆದರೆ ಬಹುಶಃ ಅವರು 19 ವರ್ಷದ ಯುವತಿ ಇಶ್ರತ್ ಜಹಾನ್ ಸೇರಿದಂತೆ ನಕಲಿ ಪೊಲೀಸ್ ಎನ್‌ಕೌಂಟರ್‌ಗಳಲ್ಲಿ ಸಾವನ್ನಪ್ಪಿದವರಿಗಿಂತ ಹೆಚ್ಚು ಅದೃಷ್ಟಶಾಲಿಗಳೆನ್ನಬಹುದು!.
ಅಮಾನ್ ಬಿರದಾರಿಯಲ್ಲಿ ನಾವು ನಡೆಸಿದ 'ನ್ಯಾಯಘರ್' ಅಭಿಯಾನದಲ್ಲಿ ಗುಜರಾತ್ ಹಿಂಸಾಚಾರದಲ್ಲಿ ತಮ್ಮನ್ನು ಅಥವಾ ತಮ್ಮ ಪ್ರೀತಿ ಪಾತ್ರರನ್ನು ಹತ್ಯೆಗೈದ, ಅತ್ಯಾಚಾರವೆಸಗಿದ ಅಥವಾ ದಾಳಿ ನಡೆಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿರುವ ನೂರಾರು ಸಂತ್ರಸ್ತರಿಗೆ ನೆರವಾಗಲು ನಾವು ಯತ್ನಿಸಿದ್ದೆವು. ಆದರೆ ನಾವು ಕಟ್ಟಕಡೆಗೆ ನ್ಯಾಯಾಲಯಗಳಲ್ಲಿ ಮೂರು ಪ್ರಕರಣಗಳಲ್ಲಿ ಸೋಲನ್ನಪ್ಪಿದೆವು. ಯಾಕೆಂದರೆ ಈ ಪ್ರಕರಣಗಳಲ್ಲಿ ಹಲವಾರು ಪುರುಷರು ಮತ್ತು ಮಹಿಳೆಯರು ಕೊನೆಯ ಕ್ಷಣದಲ್ಲಿ ತಮಗೆ ಯಾತನೆ ನೀಡಿದ ವ್ಯಕ್ತಿಗಳ ಹೆಸರನ್ನು ಹೇಳುವಲ್ಲಿ ಹಿಂದೇಟು ಹಾಕಿದರು. ಇವರೆಲ್ಲರೂ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಬಯಸಿದ್ದರು. ಆದರೆ ಅಪರಾಧವೆಸಗಿದವರಲ್ಲಿ ನೆರೆಹೊರೆಯವರೂ ಇದ್ದುದರಿಂದ ಅವರ ದ್ವೇಷವನ್ನು ಎದುರಿಸುವಷ್ಟು ಧೈರ್ಯ ಅವರಲ್ಲಿ ಇದ್ದಿರಲಿಲ್ಲ.
ಆದಾಗ್ಯೂ ನ್ಯಾಯಕ್ಕಾಗಿ ನಿರಂತರವಾದ ಕಾನೂನು ಹೋರಾಟ ಮಾಡಿದರೂ, ಅವರಲ್ಲಿ ಅನೇಕ ಮಂದಿ ರಾಜಿ ಮಾಡಿಕೊಂಡರು. ಕೆಲವರು ಈ ರಾಜಿಗೆ ಕ್ಷಮೆ ನೀಡಿಕೆಯ ಘನತೆಯ ಪದವನ್ನು ಲೇಪಿಸಿದರು. ಆದರೆ ನಿಜಕ್ಕೂ ತಾವು ಶರಣಾಗಿದ್ದೇವೆಂಬುದನ್ನು ಅವರ ಅಂತರಾಳಕ್ಕೆ ಗೊತ್ತಿತ್ತು. ತಮ್ಮ ಪುತ್ರಿಯರನ್ನು ಅತ್ಯಾಚಾರಗೈದ, ತಂದೆಯನ್ನು ಹತ್ಯೆಗೈದ, ತಮ್ಮ ಮನೆಗಳನ್ನು ಕೊಳ್ಳೆ ಹೊಡೆದ ಹಾಗೂ ಕಷ್ಟಪಟ್ಟು ಕೂಡಿಹಾಕಿದ ಉಳಿತಾಯದ ಹಣವನ್ನು ದೋಚಿದಂತಹ ಈ ದುರುಳರು ಪ್ರತಿ ದಿನವೂ ತಮ್ಮ ಗ್ರಾಮದ ಧೂಳುತುಂಬಿದ ಬೀದಿಗಳಲ್ಲಿ ಸ್ವಚ್ಛಂದವಾಗಿ ನಡೆದುಕೊಂಡು ಹೋಗುವುದನ್ನು ನೋಡುವುದು ಸುಲಭವೇನಲ್ಲ.
ಆದಾಗ್ಯೂ, ಈ ಪ್ರತಿದಿನವೂ ಭಯ, ಬೆದರಿಕೆ ಹಾಗೂ ದಾರಿದ್ರದ ಪರಿಸ್ಥಿತಿಯಲ್ಲಿ ತಮ್ಮನ್ನು ರಕ್ಷಿಸಬೇಕಾದಂತಹ ಸರಕಾರದ ಎಲ್ಲಾ ಸಂಸ್ಥೆಗಳು ಹಾಗೂ ಆಡಳಿತದ ಪಾತ್ರಧಾರಿಗಳಿಂದಲೇ ದ್ರೋಹ ಹಾಗೂ ಬೆದರಿಕೆಗೆ ಒಳಗಾಗಿರುವ ಈ ಸನ್ನಿವೇಶದಲ್ಲಿ 'ರಾಜಿ'ಯ ದಾರಿಯನ್ನು ಆಯ್ಕೆ ಮಾಡಿದವರನ್ನು ವಿಮರ್ಶಿಸಲು ನಮಗೆ ಹಕ್ಕಿಲ್ಲ.