ನೆಲಮೂಲವನ್ನೇ ನಾಶ ಮಾಡುವ ವ್ಯಾಕ್ಯೂಮ್ ಬಾಂಬ್

Update: 2022-03-05 18:38 GMT

ಉಕ್ರೇನ್ ಮೇಲೆ ಸಮರ ಸಾರಿದ ರಶ್ಯ ಇಡೀ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲಿನ ನಾಗರಿಕರು, ಮಹಿಳೆಯರು, ಮಕ್ಕಳು ಅನುಭವಿಸುತ್ತಿರುವ ನರಕ ಯಾತನೆಯನ್ನು ಗಮನಿಸಿದರೆ, ಯುದ್ಧೋನ್ಮಾದದಲ್ಲಿ ತೇಲುತ್ತಿರುವ ರಶ್ಯಕ್ಕೆ ಕರುಣೆ ಇಲ್ಲವೇನೋ ಎಂಬಂತಾಗಿದೆ. ಮನೆ, ಕುಟುಂಬದ ಸದಸ್ಯರನ್ನು ಕಳೆದುಕೊಂಡ ಮಹಿಳೆಯರು ಮತ್ತು ಕಂದಮ್ಮಗಳ ಕಣ್ಣೀರು ಒರೆಸಲು ವಿಶ್ವಸಂಸ್ಥೆಯೂ ಸೇರಿದಂತೆ ಯಾವ ರಾಷ್ಟ್ರಗಳೂ ಮುಂದೆ ಬಾರದಿರುವುದು ಶೋಚನೀಯ. ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಹಿರಿಯಣ್ಣ ಎನಿಸಿದ ಅಮೆರಿಕವೂ ಈ ವಿಷಯದಲ್ಲಿ ಮೌನ ತಾಳಿರುವುದರ ಹಿಂದೆ ಅನೇಕ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಇವೆಲ್ಲದರ ಮಧ್ಯೆ ರಶ್ಯವು ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ನಲ್ಲಿ ನಿಯೋಜಿಸಿದೆ ಎಂಬುದು ಈಗ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳೆಂದರೇನು? ಅದರಿಂದ ಯಾವ ರೀತಿಯ ತೊಂದರೆಗಳಾಗುತ್ತವೆ ಎಂಬುದನ್ನು ಈ ವಾರದ ಸಂಚಿಕೆಯಲ್ಲಿ ತಿಳಿಯೋಣ.

ರಶ್ಯವು ಉಕ್ರೇನ್‌ನಲ್ಲಿ ವ್ಯಾಕ್ಯೂಮ್ ಬಾಂಬ್‌ಗಳೆಂದು ಕರೆಯಲ್ಪಡುವ ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ ಎಂಬ ಆರೋಪಗಳು ದಾಳಿಯಿಂದ ಉಂಟಾಗುವ ಸಂಭಾವ್ಯ ವಿನಾಶದ ಬಗ್ಗೆ ಭಯವನ್ನು ಹುಟ್ಟುಹಾಕಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿನಲ್ಲಿರುವ ಉಕ್ರೇನ್‌ನ ರಾಯಭಾರಿ ಒಕ್ಸಾನಾ ಮಾರ್ಕರೋವಾ ಅವರು ಈ ಆರೋಪ ಮಾಡಿದ್ದಾರೆ. ರಶ್ಯದ ಮಿಲಿಟರಿ ನಿರ್ವಾತ ಬಾಂಬ್ ಅನ್ನು ಬಳಸಿದೆ, ಅದು ಗಾಳಿಯಿಂದ ಆಮ್ಲಜನಕವನ್ನು ಹೀರಿಕೊಂಡು ಬೃಹತ್ ಸ್ಫೋಟವನ್ನು ಪ್ರಚೋದಿಸುತ್ತದೆ ಎಂದು ಹೇಳಿದರು.

 ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಮತ್ತು ಮಾನವ ಹಕ್ಕುಗಳ ಕಣ್ಗಾವಲು ಸಮಿತಿ ಸೇರಿದಂತೆ ಹಲವಾರು ಮಾನವ ಹಕ್ಕುಗಳ ಸಂಘಟನೆಗಳು ದನಿಗೂಡಿಸಿರುವ ಆಪಾದನೆಯಿಂದ ಮತ್ತಷ್ಟು ಕಳವಳ ಹೆಚ್ಚುತ್ತಿದೆ. ರಶ್ಯವು ಜನನಿಬಿಡ ನಾಗರಿಕ ಪ್ರದೇಶಗಳಲ್ಲಿ ವಿವೇಚನೆಯಿಲ್ಲದ ದಾಳಿಗಳನ್ನು ನಡೆಸುವ ಮೂಲಕ ಯುದ್ಧ ಅಪರಾಧಗಳನ್ನು ರೂಪಿಸಿದೆ. ಯುದ್ಧದ ಅಗತ್ಯವೇ ಇರದ ಸಂದರ್ಭದಲ್ಲಿ ಥರ್ಮೋಬಾರಿಕ್‌ನಂತಹ ಅಪಾಯಕಾರಿ ಯುದ್ಧಸಾಮಗ್ರಿಗಳನ್ನು ಬಳಸುತ್ತಿರುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬುದು ಪರಾಮರ್ಶಿಸಬೇಕಾದ ವಿಷಯ. ಥರ್ಮೋಬಾರಿಕ್ ಅಥವಾ ವ್ಯಾಕ್ಯೂಮ್ ಬಾಂಬ್ ಕೇವಲ ಒಂದು ಭಯಾನಕ ಬಾಂಬ್ ಆಗಿರದೆ ವಿನಾಶಕಾರಿ ಬಾಂಬ್ ಆಗಿದೆ.

ನಿರ್ವಾತ ಬಾಂಬ್ ಎಂದರೇನು?

ಥರ್ಮೋಬಾರಿಕ್ ಶಸ್ತ್ರಾಸ್ತ್ರ ಅಥವಾ ವ್ಯಾಕ್ಯೂಮ್ ಬಾಂಬುಗಳು, ಅಗಾಧವಾದ ಸ್ಫೋಟಗಳನ್ನು ಸೃಷ್ಟಿಸುವ ಎರಡು ಹಂತದ ಯುದ್ಧಸಾಮಗ್ರಿಗಳ ಒಂದು ವಿಧವಾಗಿದೆ. ರಾಕೆಟ್ ಅಥವಾ ಫಿರಂಗಿ ಶೆಲ್‌ನಲ್ಲಿ ಉಡಾವಣೆಯಾದ ಮೊದಲ ಸ್ಫೋಟಕ ಚಾರ್ಜ್ ಪ್ರದೇಶದ ಮೇಲೆ ಆವಿಯಾದ ಗ್ಯಾಸೋಲಿನ್‌ಗೆ ಹೋಲುವ ದಟ್ಟವಾದ ಹೊಗೆಯ ಮೋಡವನ್ನು ಹರಡುತ್ತದೆ. ಎರಡನೇ ಚಾರ್ಜ್ ನಂತರ ಹೊಗೆಯ ಮೋಡವನ್ನು ಹೊತ್ತಿಸುತ್ತದೆ. ದೊಡ್ಡ ಸ್ಫೋಟ, ಜ್ವಾಲೆಗಳು, ಅಗಾಧ ಪ್ರಮಾಣದ ಒತ್ತಡದ ತರಂಗಗಳು ಸುತ್ತಮುತ್ತಲಿನ ಗಾಳಿಯಿಂದ ಆಮ್ಲಜನಕವನ್ನು ಹೀರಿಕೊಳ್ಳುವುದರಿಂದ ನಿರ್ವಾತವನ್ನು ಸೃಷ್ಟಿಸುತ್ತದೆ. ಹಾಗಾಗಿ ಇದನ್ನು ನಿರ್ವಾತ ಬಾಂಬ್ ಎಂದೂ ಕರೆಯುತ್ತಾರೆ. ಥರ್ಮೋಬಾರಿಕ್ ಯುದ್ಧಸಾಮಗ್ರಿಗಳನ್ನು ಕೆಲವೊಮ್ಮೆ ‘ಬಡವರ ಪರಮಾಣು ಶಸ್ತ್ರಾಸ್ತ್ರ’ ಎಂದು ಕರೆಯಲಾಗುತ್ತದೆ. ಏಕೆಂದರೆ ಅವುಗಳು ಸುತ್ತಮುತ್ತಲಿನ ಪರಿಸರ ನಾಶ ಮಾಡುತ್ತದೆ. ಬಲಿಪಶುಗಳು ಸ್ಫೋಟ ಅಥವಾ ಅದರ ಜೊತೆಗಿನ ಆಘಾತ ತರಂಗದಿಂದ ಕೊಲ್ಲಲ್ಪಡಬಹುದು ಮತ್ತು ನಂತರದ ನಿರ್ವಾತವು ಜನರ ಶ್ವಾಸಕೋಶವನ್ನು ಛಿದ್ರಗೊಳಿಸಬಹುದು. ಉಕ್ರೇನ್‌ನಲ್ಲಿ ರಶ್ಯದ ಬೆಂಗಾವಲು ಪಡೆಗಳೊಂದಿಗೆ ಗುರುತಿಸಲಾದ ಥರ್ಮೋಬಾರಿಕ್ ಆಯುಧದ ಪ್ರಕಾರವನ್ನು ಖ1ಅ 

ಮಲ್ಟಿಪಲ್ ರಾಕೆಟ್ ಲಾಂಚರ್ ಎಂದು ಕರೆಯಲಾಗುತ್ತದೆ. ಇದು ಸುಮಾರು 2.5 ಮೈಲುಗಳ ವ್ಯಾಪ್ತಿಯನ್ನು ಹೊಂದಿದೆ ಮತ್ತು ಸುಮಾರು 1,000 ಅಡಿಗಳಷ್ಟು ವಿಸ್ತರಿಸುವ ಬ್ಲಾಸ್ಟ್ ತ್ರಿಜ್ಯವನ್ನು ಹೊಂದಿರುತ್ತದೆ.

ನಿರ್ವಾತ ಬಾಂಬ್ ಹೇಗೆ
ಕೆಲಸ ಮಾಡುತ್ತದೆ?

ನಿರ್ವಾತ ಬಾಂಬ್ ಅನ್ನು ಏರೋಸಾಲ್ ಬಾಂಬ್ ಅಥವಾ ಇಂಧನ ಗಾಳಿಯ ಸ್ಫೋಟಕ ಎಂದೂ ಕರೆಯುತ್ತಾರೆ. ಇದು ಎರಡು ಪ್ರತ್ಯೇಕ ಸ್ಫೋಟಕ ಚಾರ್ಜ್‌ಗಳೊಂದಿಗೆ ಇಂಧನ ಧಾರಕವನ್ನು ಒಳಗೊಂಡಿರುತ್ತದೆ. ಇದನ್ನು ರಾಕೆಟ್ ಆಗಿ ಉಡಾಯಿಸಬಹುದು ಅಥವಾ ವಿಮಾನದಿಂದ ಬಾಂಬ್ ಆಗಿ ಬಿಡಬಹುದು. ಅದು ತನ್ನ ಗುರಿಯನ್ನು ಮುಟ್ಟಿದಾಗ, ಮೊದಲ ಸ್ಫೋಟಕ ಚಾರ್ಜ್ ಕಂಟೇನರ್ ಅನ್ನು ತೆರೆಯುತ್ತದೆ ಮತ್ತು ಇಂಧನ ಮಿಶ್ರಣವನ್ನು ಮೋಡದಂತೆ ವ್ಯಾಪಕವಾಗಿ ಹರಡುತ್ತದೆ.
 ಈ ಮೋಡವು ಬಲಿಷ್ಠವಾದ ರಕ್ಷಣಾತ್ಮಕ ವ್ಯವಸ್ಥೆ ಹೊಂದಿದ ಕಟ್ಟಡವನ್ನೂ ಭೇದಿಸಬಲ್ಲದು. ಎರಡನೇ ಚಾರ್ಜ್ ನಂತರ ಮೋಡವನ್ನು ಸ್ಫೋಟಿಸುತ್ತದೆ, ಇದರ ಪರಿಣಾಮವಾಗಿ ಒಂದು ದೊಡ್ಡ ಫೈರ್‌ಬಾಲ್, ಬೃಹತ್ ಸ್ಫೋಟದ ಅಲೆ ಮತ್ತು ನಿರ್ವಾತವು ಸುತ್ತಮುತ್ತಲಿನ ಎಲ್ಲಾ ಆಮ್ಲಜನಕವನ್ನು ಹೀರಿಕೊಳ್ಳುತ್ತದೆ. ಆಯುಧವು ಬಲವರ್ಧಿತ ಕಟ್ಟಡಗಳು, ಉಪಕರಣಗಳನ್ನು ನಾಶಪಡಿಸಬಹುದು ಮತ್ತು ಜನರನ್ನು ಕೊಲ್ಲಬಹುದು ಅಥವಾ ಗಾಯಗೊಳಿಸಬಹುದು.

ಅವುಗಳನ್ನು ಈ ಮೊದಲು ಬಳಸಲಾಗಿದೆಯೇ?
ಈ ರೀತಿಯ ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳು 1970ರ ದಶಕದಿಂದಲೂ ಅಭಿವೃದ್ಧಿಯಲ್ಲಿವೆ. ಅವುಗಳನ್ನು 1990ರ ದಶಕದಲ್ಲಿ ಚೆಚೆನ್ಯಾದಲ್ಲಿ ರಶ್ಯದ ಪಡೆಗಳು ಬಳಸಿದವು ಮತ್ತು 2016ರಲ್ಲಿ ಸಿರಿಯನ್ ಸರಕಾರಿ ಪಡೆಗಳು ಮತ್ತು ಅಲೆಪ್ಪೊದಲ್ಲಿ ರಶ್ಯದ ಮಿತ್ರರಾಷ್ಟ್ರಗಳಿಂದ ನಿರ್ವಾತ ಬಾಂಬ್‌ಗಳನ್ನು ನಿಯೋಜಿಸಲಾಗಿತ್ತು ಎಂಬುದಕ್ಕೆ ಕೆಲವು ಪುರಾವೆಗಳಿವೆ ಎಂದು ನಿವೃತ್ತ ಯುಎಸ್ ಆರ್ಮಿ ಕರ್ನಲ್ ಡೇವಿಡ್ ಜಾನ್ಸನ್ ಹೇಳುತ್ತಾರೆ. ಗುಹೆ ಮತ್ತು ಸುರಂಗದಂತಹ ಸಂಕೀರ್ಣ ಪ್ರದೇಶಗಳನ್ನು ತೆರವು ಮಾಡಲು ಯುಎಸ್ ಪಡೆಗಳು 2017ರಲ್ಲಿ ಅಫ್ಘಾನಿಸ್ತಾನದಲ್ಲಿ ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳನ್ನು ಬಳಸಿದವು ಎಂದು ಜಾನ್ಸನ್ ಹೇಳಿದರು.

ಈ ಆಯುಧಗಳನ್ನು ಕೆಲವೊಮ್ಮೆ ಬಂಕರ್ ಬಸ್ಟರ್ಸ್ ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. ಏಕೆಂದರೆ ಅವುಗಳು ಬಿಲಿಷ್ಠವಾದ ರಕ್ಷಣಾತ್ಮಕ ಅಡೆತಡೆಗಳನ್ನೂ ಪರಿಣಾಮಕಾರಿಯಾಗಿ ನಾಶಮಾಡುವ ಸಾಮರ್ಥ್ಯ ಪಡೆದಿವೆ. ಒಂದು ವೇಳೆ ನಿರ್ವಾತ ಬಾಂಬ್ ಆವರಿಸಿರುವ ಜಾಗದಲ್ಲಿ ಏನೂ ಉಳಿಯುವುದಿಲ್ಲ. ಎಲ್ಲವೂ ನಾಶವಾಗುತ್ತದೆ. ಮಾನವರು ತಕ್ಷಣ ಸಾಯದಿದ್ದರೂ, ಅಲ್ಲಿ ನಿರ್ಮಾಣವಾದ ಒತ್ತಡವು ನಮ್ಮ ಆಂತರಿಕ ಅಂಗಗಳನ್ನು ಛಿದ್ರಗೊಳಿಸುತ್ತದೆ. ಹಾಗಾಗಿ ಇದು ನಿಜವಾಗಿಯೂ ಭಯಾನಕವಾಗಿದೆ.

ಈ ಆಯುಧಗಳು ಎಷ್ಟು ಅಪಾಯಕಾರಿ?
ಥರ್ಮೋಬಾರಿಕ್ ಯುದ್ಧಸಾಮಗ್ರಿಗಳು ಉಂಟು ಮಾಡಬಹುದಾದ ಭಯಾನಕ ವಿನಾಶದ ಹೊರತಾಗಿಯೂ, ಯುದ್ಧದಲ್ಲಿ ಅವುಗಳ ಬಳಕೆಯನ್ನು ನಿಷೇಧಿಸುವ ಯಾವುದೇ ಕಾನೂನುಗಳಿಲ್ಲ. ಆದರೂ ಅವುಗಳನ್ನು ಅಂತರ್‌ರಾಷ್ಟ್ರೀಯ ಮಟ್ಟದ ಸರಕಾರೇತರ ಸಂಸ್ಥೆಗಳು ವ್ಯಾಪಕವಾಗಿ ಖಂಡಿಸಲ್ಪಟ್ಟಿವೆ. ಆದಾಗ್ಯೂ, ನಾಗರಿಕರ ವಿರುದ್ಧ ಅಂತಹ ಶಸ್ತ್ರಾಸ್ತ್ರಗಳ ಬಳಕೆಯನ್ನು ಜಿನೀವಾ ಒಪ್ಪಂದಗಳಿಂದ ನಿಷೇಧಿಸಲಾಗಿದೆ ಮತ್ತು ಅಂತಹವರ ವಿರುದ್ಧ ಯುದ್ಧ ಅಪರಾಧಗಳನ್ನು ಹೂಡಬಹುದು.

ಕಟ್ಟಳೆಗಳಿಲ್ಲದ ಬಳಕೆ

ಇದು ಒಂದು ರೀತಿಯ ನ್ಯೂಟ್ರಾನ್ ಬಾಂಬ್ ಇದ್ದಂತೆ. ಅದು ಭಯಾನಕ ಮತ್ತು ವಿನಾಶಕಾರಿಯಾದುದು ಎಂಬ ಅರಿವು ಎಲ್ಲರಿಗೆ ಇದ್ದರೂ ಅದರ ವಿರುದ್ಧ ಯಾವುದೇ ನಿಷೇಧ ಹೇರದಿರುವುದು ಶ್ರೀಮಂತ ರಾಷ್ಟ್ರಗಳ ಅಹಮಿಕೆಯನ್ನು ಎತ್ತಿ ತೋರಿಸುತ್ತಿದೆ. ಏಕೆಂದರೆ ಇಂತಹ ವಿನಾಶಕಾರಿ ಬಾಂಬ್‌ಗಳನ್ನು ಹೊಂದಿರುವುದು ಕೇವಲ ಶ್ರೀಮಂತ ರಾಷ್ಟ್ರಗಳು ಎಂಬುದನ್ನು ನಾವಿಲ್ಲಿ ಗಮನಿಸಲೇಬೇಕು. ಅವುಗಳ ಬಳಕೆಯನ್ನು ನಿರ್ದಿಷ್ಟವಾಗಿ ನಿಷೇಧಿಸುವ ಯಾವುದೇ ಅಂತರ್‌ರಾಷ್ಟ್ರೀಯ ಕಾನೂನುಗಳಿಲ್ಲ. ಆದರೆ ಯಾವುದೇ ದೇಶವು ನಿರ್ಮಿಸಿದ ಪ್ರದೇಶಗಳು, ಶಾಲೆಗಳು, ಮಾರುಕಟ್ಟೆ ಅಥವಾ ಅಥವಾ ಇನ್ನಿತರ ಜನವಸತಿ ಪ್ರದೇಶಗಳಲ್ಲಿ ನಾಗರಿಕರ ಸಂಖ್ಯೆಯನ್ನು ಗುರಿಯಾಗಿಸಿಕೊಂಡು ಅವರ ಮೇಲೆ ಬಳಸಿದರೆ, ಅದು 1899 ಮತ್ತು 1907ರ ಕೋಪನ್ ಹೇಗ್ ಕನ್ವೆನ್ಷನ್‌ಗಳ ಅಡಿಯಲ್ಲಿ ಯುದ್ಧ ಅಪರಾಧಕ್ಕೆ ಶಿಕ್ಷೆಯಾಗಬಹುದು. ಇದರ ಹೊರತಾಗಿ ಯಾವುದೇ ಬಲಿಷ್ಠವಾದ ಕಾನೂನುಗಳಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಾದರೂ ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಿ ಇಂತಹ ವಿನಾಶಕಾರಿ ಅಸ್ತ್ರಗಳ ವಿರುದ್ದ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸೂಕ್ತ ಕಾನೂನುಗಳನ್ನು ಜಾರಿಗೊಳಿಸಿದರೆ ನಾಗರಿಕರ ಜೀವಗಳು ಉಳಿದಾವು.

Writer - ಆರ್.ಬಿ.ಗುರುಬಸವರಾಜ

contributor

Editor - ಆರ್.ಬಿ.ಗುರುಬಸವರಾಜ

contributor

Similar News