ಮಾಯಾವತಿಯ ವಿಲಕ್ಷಣ ಮೌನ!

Update: 2022-03-06 12:07 GMT

ಮಾಯಾವತಿಯವರು ಹೀಗೆ ಯಾಕೆ ಮಾಡಿದರು? ಇಲ್ಲವೇ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಉತ್ತರಪ್ರದೇಶದ ಚುನಾವಣೆಯ ತಾಲೀಮು ಶುರುವಾದ ದಿನದಿಂದ ಎಲ್ಲರನ್ನೂ ಕಾಡತೊಡಗಿದೆ.

 ಉತ್ತರಪ್ರದೇಶ ಮಾತ್ರವಲ್ಲ, ಇಡೀ ದೇಶದ ಭವಿಷ್ಯದ ರಾಜಕಾರಣದ ದಿಕ್ಸೂಚಿಯಾಗುವಂತಹ ಆ ರಾಜ್ಯದ ವಿಧಾನಸಭಾ ಚುನಾವಣೆಗೆ ವರ್ಷದ ಮೊದಲೇ ಬಿಜೆಪಿ,ಸಮಾಜವಾದಿ ಪಕ್ಷ, ಕಾಂಗ್ರೆಸ್ ಮಾತ್ರವಲ್ಲ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳು ಭರದ ಸಿದ್ದತೆ ನಡೆಸುತ್ತಿದ್ದರೆ, ಮಾಯಾವತಿಯವರು ಮಾತ್ರ ಲಕ್ನೋದ ಮಾಲ್ ರೋಡ್ ನಲ್ಲಿರುವ 71,000 ಚದರ ಅಡಿಯ ಬಂಗಲೆಯಲ್ಲಿ ಶಸ್ತ್ರತ್ಯಾಗ ಮಾಡಿದಂತೆ ಆರಾಮಾಗಿ ಕೂತಿದ್ದರು. ಮಾಯಾವತಿಯವರು ನಾಲ್ಕು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದವರು, 2007ರಲ್ಲಿ ಶೇಕಡಾ 30ರಷ್ಟು ಮತಗಳನ್ನು ಗಳಿಸಿ 206 ಸ್ಥಾನಗಳನ್ನು ಗೆದ್ದು ಸ್ವಂತಬಲದಿಂದ ಮುಖ್ಯಮಂತ್ರಿಯಾದವರು. ಕಳೆದ ವಿಧಾನಸಭೆಯಲ್ಲಿ ಕೇವಲ 19 ಸ್ಥಾನಗಳಲ್ಲಿ ಗೆದ್ದಿದ್ದರೂ ಶೇಕಡಾ 23ರಷ್ಟು ಮತಗಳನ್ನು ಉಳಿಸಿಕೊಂಡವರು. ಇನ್ನೊಂದು ರಾಜಕೀಯ ಜಿಗಿತಕ್ಕೆ ಬೇರೆ ಏನು ಬೇಕಿತ್ತು? ಸರಿಯಾಗಿ ರಾಜಕೀಯ ದಾಳ ಉರುಳಿಸಿದ್ದರೆ ಇಂದು ಮಮತಾ ಬ್ಯಾನರ್ಜಿ ಸ್ಥಾನದಲ್ಲಿ ಮಾಯಾವತಿಯವರು ಇರುತ್ತಿದ್ದರು. ಮಮತಾ ಬ್ಯಾನರ್ಜಿಯವರಿಗೆ ಪಶ್ಚಿಮಬಂಗಾಳ ಬಿಟ್ಟರೆ ಬೇರೆ ಯಾವ ರಾಜ್ಯದಲ್ಲಿಯೂ ಬೆಂಬಲಿಗರು, ಅಭಿಮಾನಿಗಳ ಪಡೆ ಇಲ್ಲ. ಮಾಯಾವತಿಯವರ ರಾಜಕೀಯ ಕ್ಷೇತ್ರ ಇಡೀ ದೇಶದ ದಲಿತ ಸಮುದಾಯದ ವ್ಯಾಪ್ತಿಯದ್ದು. ಮಾಯಾವತಿ ಕಳೆದುಕೊಂಡದ್ದೇನು ಮತ್ತು ಆ ಮೂಲಕ ದೇಶದ ದಲಿತ ಸಮುದಾಯ ಕಳೆದುಕೊಂಡದ್ದೇನು ಎನ್ನುವುದನ್ನು ಇತಿಹಾಸಕಾರರು ಮುಂದಿನ ದಿನಗಳಲ್ಲಿ ಖಂಡಿತ ಬರೆಯಲಿದ್ದಾರೆ.

ನರೇಂದ್ರಮೋದಿ ಸರಕಾರದ ಐಟಿ,ಇಡಿ,ಸಿಬಿಐ ದಾಳಿಗೆ ಹೆದರಿ ಮಾಯಾವತಿಯವರು ಮರೆಗೆ ಸರಿದರು ಎನ್ನುವ ಸಾಮಾನ್ಯ ಕಾರಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಉತ್ತರಪ್ರದೇಶದಲ್ಲಿ ಬೆಹನ್ ಜಿಯ ರಾಜಕಾರಣವನ್ನು ಸಮೀಪದಿಂದ ನೋಡಿದ ಯಾರೂ ಈ ಕಾರಣವನ್ನು ಪೂರ್ಣವಾಗಿ ಒಪ್ಪಲಾರರು. ಹಾಗೆ ಹೆದರು ಪುಕ್ಕಲು ಆಗಿದ್ದರೆ 1995ರಲ್ಲಿ ಮುಲಾಯಂಸಿಂಗ್ ಗ್ಯಾಂಗ್ ನೀರು,ವಿದ್ಯುತ್,ಪೋನ್ ಎಲ್ಲವನ್ನೂ ಕಟ್ ಮಾಡಿ ಗೆಸ್ಟ್ ಹೌಸ್ ನಲ್ಲಿ ಕೂಡಿ ಹಾಕಿದ್ದಾಗಲೇ ಅವರು ರಾಜಕೀಯ ಬಿಟ್ಟು ಓಡಿಹೋಗಬೇಕಾಗಿತ್ತು. ನಿಜ ಹೇಳಬೇಕೆಂದರೆ ಮಾಯಾವತಿ ಎಂಬ ರಾಜಕೀಯ ನಾಯಕಿ ಮರು ಹುಟ್ಟುಪಡೆದದ್ದೇ ಆ ಸಂದರ್ಭದಲ್ಲಿ.

ಒಂದೊಮ್ಮೆ ನರೇಂದ್ರ ಮೋದಿ ಸರಕಾರ ಐಟಿ,ಇಡಿ,ಸಿಬಿಐಗಳನ್ನು ಮಾಯಾವತಿಯವರ ವಿರುದ್ದ ಛೂ ಬಿಟ್ಟಿದ್ದರೆ ಏನಾಗುತ್ತಿತ್ತು? ಗಲ್ಲು ಆ-ಗುತ್ತಿತ್ತೇ? ಹೆಚ್ಚೆಂದರೆ ಒಂದಷ್ಟು ದಿನ ಜೈಲು ಸೇರುತ್ತಿದ್ದರು. ರಾಜ್ಯದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವುಗಳನ್ನೆಲ್ಲ ಎದುರಿಸಿ ಈಗಲೂ ರಾಜಕೀಯವಾಗಿ ಸಕ್ರಿಯವಾಗಿಲ್ಲವೇ? ಶಿವಕುಮಾರ್ ಅವರಿಗಿಂತಲೂ ಮಾಯಾವತಿಯವರು ದುರ್ಬಲ ರಾಜಕಾರಣಿಯೇ? ಹತ್ತುವರ್ಷಗಳಿಂದ ಮಾಯಾವತಿಯವರು ಅಧಿಕಾರದಲ್ಲಿ ಇಲ್ಲದೆ ಇದ್ದರೂ ಈಗಲೂ ಅವರಿಗೆ ನಿಷ್ಠರಾಗಿರುವ ಕನಿಷ್ಠ ಶೇಕಡಾ 20ರಷ್ಟು ಮತದಾರರಿದ್ದಾರೆ. ಆ ರಾಜ್ಯದಲ್ಲಿ ಶೇಕಡಾ 11ರಷ್ಟಿರುವ ಜಾಟವರು ಈಗಲೂ ಮಾಯಾವತಿಯವರಿಗೆ ನಿಷ್ಠರಾಗಿ ಉಳಿದಿದ್ದಾರೆ. ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದರೆ ಮತಹಾಕುತ್ತಾರೋ ಇಲ್ಲವೋ ಚರ್ಚಾಸ್ಪದ. ಆದರೆ ಮಾಯಾವತಿಯವರನ್ನು ಬಂಧಿಸಿ ಸೇಡು ತೀರಿಸಿಕೊಳ್ಳಲು ಹೊರಟಿದ್ದರೆ ಇಡೀ ದೇಶದ ದಲಿತರನ್ನು ಎದುರುಹಾಕಿಕೊಳ್ಳುವಂತಹ ಪರಿಸ್ಥಿತಿ ಎದುರಾಗಬಹುದೆಂಬ ಸಾಮಾನ್ಯ ಜ್ಞಾನ ಬಿಜೆಪಿ ನಾಯಕರಿಗೂ ಇದ್ದಿರಬಹುದು. ಆದ್ದರಿಂದ ಕೇಂದ್ರ ಸರಕಾರ ಅವರನ್ನು ಬಂಧಿಸುವಂತಹ ಅತಿರೇಕದ ಕ್ರಮಕ್ಕೆ ಖಂಡಿತ ಮುಂದಾಗುತ್ತಿರಲಿಲ್ಲ. ಈಗಿನ ಸ್ಥಿತಿಯಲ್ಲಿ ಐಟಿ-ಇಡಿ-ಸಿಬಿಐ ಬೆದರಿಕೆ ಯಾವ ರಾಜಕಾರಣಿಗಿಲ್ಲ? ಮಮತಾ ಬ್ಯಾನರ್ಜಿ, ಶರದ್ ಪವಾರ್, ಸ್ಟಾಲಿನ್, ಚಂದ್ರಶೇಖರ ರಾವ್, ಅಖಿಲೇಶ್ ಸಿಂಗ್ ಮೊದಲಾದ ಎಲ್ಲ ವಿರೋಧಪಕ್ಷಗಳ ನಾಯಕರು ಒಂದಲ್ಲ ಒಂದು ಸಂದರ್ಭದಲ್ಲಿ ಈ ಬೆದರಿಕೆಯನ್ನು ಎದುರಿಸಿದವರೇ ಆಗಿದ್ದಾರೆ. ಹೀಗಿರುವಾಗ ಮಾಯಾವತಿಯವರು ಮಾತ್ರ ಸಿಬಿಐಗೆ ಹೆದರಿ ಮೌನವಾದರೇ?.

  ಮಾಯಾವತಿಯವರ ಭ್ರಷ್ಟಾಚಾರ, ಐಷಾರಾಮಿ ಜೀವನದ ಶೋಕಿ, ಸರ್ವಾಧಿಕಾರಿ ನಡವಳಿಕೆ ಬಗ್ಗೆ ಬಹಳಷ್ಟು ಚರ್ಚೆ ಆಗಿವೆ. ಆದರೆ ಮಾಯಾವತಿ ಒಬ್ಬ ದುರ್ಬಲ ಹೆಣ್ಣುಮಗಳೆಂದು ಯಾರೂ ದೂರಿಲ್ಲ. ಮಾಯಾವತಿ ಪ್ರತಿಬಾರಿ ಮುಖ್ಯಮಂತ್ರಿಯಾಗಿದ್ದಾಗಲೂ ಉತ್ತರಪ್ರದೇಶದ ಶಾಂತಿ ಮತ್ತು ಸುವ್ಯವಸ್ಥೆ ನಿಯಂತ್ರಣದಲ್ಲಿರುತ್ತಿತ್ತು. ಅಪರಾಧ ಜಗತ್ತಿನ ಬಾಹುಬಲಿಗಳು ಒಂದೋ ಜೈಲಲ್ಲಿರುತ್ತಿದ್ದರು, ಇಲ್ಲವೇ ಬಿಎಸ್‌ಪಿ ಸೇರಿಕೊಳ್ಳುತ್ತಿದ್ದರು. ವಿರೋಧಿಗಳನ್ನು ಮನೆ ಎದುರಿನ ಕೆರೆಯಲ್ಲಿನ ಮೊಸಳೆಗೆ ಎಸೆಯುತ್ತಿದ್ದ ಎಂಬಿತ್ಯಾದಿ ಕುಖ್ಯಾತಿಗಳನ್ನು ಹೊಂದಿದ್ದ ಪ್ರತಾಪ್ ಘಡದ ರಾಜು ಭಯ್ಯಾನ ಕೈಗೆ ಕೋಳ ಹಾಕಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದವರು ಮಾಯಾವತಿ. ಇಂತಹ ಹೆಣ್ಣುಮಗಳು ಬಂಧನ, ಜೈಲುಗಳಿಗೆ ಹೆದರಿ ಸುಮ್ಮನಾಗಿದ್ದಾರೆ ಎಂದು ನಂಬುವುದು ಕಷ್ಟ.

 ಹಾಗಿದ್ದರೆ ಮಾಯಾವತಿಯವರ ನಿಷ್ಕ್ರಿಯತೆ, ನಿರುತ್ಸಾಹ, ಮತ್ತು ವಿಲಕ್ಷಣವಾದ ಮೌನಕ್ಕೆ ಕಾರಣವೇನು? ಈ ಕಾರಣವನ್ನು ಶೋಧಿಸಲು ಅವರ ರಾಜಕೀಯ ಬದುಕಿನ ಅವಲೋಕನ ಮಾಡಬೇಕಾಗುತ್ತದೆ. ಮಾಯಾವತಿಯವರ ಇಡೀ ರಾಜಕೀಯ ಬದುಕನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದು ಕಾನ್ಶಿರಾಮ್ ಬದುಕಿದ್ದ 1985ರಿಂದ 2006ರ ವರೆಗಿನದ್ದು, ಇನ್ನೊಂದು ಅವರ ಗೈರುಹಾಜರಿಯ 2007ರ ನಂತರದ ದಿನಗಳದ್ದು. 2007ರಲ್ಲಿ ಬಿಎಸ್ ಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಾಗ ಆ ದಿನವನ್ನು ನೋಡಲು ಕಾನ್ಸಿರಾಮ್ ಇರಲಿಲ್ಲ.

ಉತ್ತರಪ್ರದೇಶದ ರಾಜಕಾರಣಕ್ಕೆ ಕೇವಲ ಅಲ್ಲಿದ್ದ ಶೇಕಡಾ 21ರಷ್ಟಿದ್ದ ದಲಿತ ಸಮುದಾಯವನ್ನು ನಂಬಿಕೊಂಡು ಕಾನ್ಶಿರಾಮ್‌ಕಾಲಿಟ್ಟವರಲ್ಲ. ಕೇವಲ ದಲಿತರ ಪಕ್ಷವಾಗಿ ಬಿಎಸ್ ಪಿಯನ್ನು ಅಧಿಕಾರದ ಗದ್ದುಗೆಯ ಬಳಿ ಕೊಂಡೊಯ್ಯಲಾಗುವುದಿಲ್ಲ ಎಂದು ಅವರಿಗೆ ಗೊತ್ತಿತ್ತು. ಇದಕ್ಕಾಗಿ ಅವರು ಉತ್ತರಪ್ರದೇಶದಲ್ಲಿ ನಡೆಸಿದ್ದ ಸೋಷಿಯಲ್ ಇಂಜನಿಯರಿಂಗ್ ಸಮಾಜ ವಿಜ್ಞಾನಿಗಳ ಅಧ್ಯಯನಕ್ಕೆ ಯೋಗ್ಯವಾದುದು.. ಕಾನ್ಶಿರಾಮ್ ಕಂಡಿದ್ದ ಬಹುಜನರ ವ್ಯಾಪ್ತಿ ವಿಶಾಲ ಸ್ವರೂಪದ್ದಾಗಿತ್ತು. ದಲಿತ ಸಮುದಾಯದ ಜೊತೆ ಯಾದವೇತರ ಹಿಂದುಳಿದ ಜಾತಿಗಳು ಮತ್ತು ಮುಸ್ಲಿಮರನ್ನು ಒಲಿಸಿಕೊಳ್ಳುವುದು ಅವರ ತಕ್ಷಣದ ಗುರಿಯಾಗಿತ್ತು. ಈ ಎರಡು ಸಮುದಾಯಗಳು ಆ ಕಾಲದಲ್ಲಿ ಸಮಾಜವಾದಿ ಪಕ್ಷದ ಮತಬ್ಯಾಂಕ್ ಆಗಿತ್ತು. ಈಗಿನ ಚುನಾವಣೆಯಲ್ಲಿ ಮಾತ್ರವಲ್ಲ ಹಿಂದಿನ ಕನಿಷ್ಠ ಮೂರು ಚುನಾವಣೆಗಳಲ್ಲಿಯೂ ನಿರ್ಣಾಯಕ ಪಾತ್ರ ವಹಿಸಿರುವ ಯಾದವೇತರ ಅತಿಹಿಂದುಳಿದ ಜಾತಿ ಗಳನ್ನು ಮೊದಲು ಸಂಘಟಿಸಿ, ರಾಜಕೀಯವಾಗಿ ಜಾಗೃತಿಗೊಳಿಸಿ ಅವರಿಗೆ ಸಾಮಾಜಿಕವಾದ ಗುರುತನ್ನು ಕೊಟ್ಟವರು ಕಾನ್ಶಿರಾಮ್. ಈ ಮೂಲಕ ಅವರನ್ನು ಬಹುಬೇಗ ಸಮಾಜವಾದಿ ಪಕ್ಷದಿಂದ ಹೊರಗೆಳೆದು ತಮ್ಮ ಜೊತೆ ಸೇರಿಸಿಕೊಂಡಿದ್ದರು. ಬಾಬರಿ ಮಸೀದಿ ಧ್ವಂಸದ ಪ್ರಮುಖ ಆರೋಪಿಗಳಲ್ಲೊಬ್ಬರಾದ ಕಲ್ಯಾಣ್ ಸಿಂಗ್ ಜೊತೆಗಿನ ಮೈತ್ರಿಯೂ ಸೇರಿದಂತೆ ಮುಲಾಯಂ ಸಿಂಗ್ ಯಾದವ್ ಅವರ ಸಂಗದೋಷದಿಂದಾದ ಹಲವಾರು ತಪ್ಪು ನಿರ್ಧಾರಗಳಿಂದಾಗಿ ದೂರವಾಗುತ್ತಿದ್ದ ಮುಸ್ಲಿಮ್ ಸಮುದಾಯ ಕೂಡಾ ಬಿಎಸ್‌ಪಿ ಕಡೆ ವಾಲಿದ್ದವು.

1985ರಲ್ಲಿ ಮೊದಲಬಾರಿ ಬಿಎಸ್‌ಪಿ ಚುನಾವಣೆಗೆ ಇಳಿದಾಗ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಅದಾದ ಹತ್ತು ವರ್ಷಗಳ ನಂತರ ಉತ್ತರಪ್ರದೇಶದ ಮುಖ್ಯಮಂತ್ರಿ ಕುರ್ಚಿಯಲ್ಲಿ ಮಾಯವತಿ ಕುಳಿತಿದ್ದರು. ಇದು ಸ್ವತಂತ್ರ ಭಾರತ ಕಂಡ ಅದ್ಭುತ ಸಂಘಟಕ ಕಾನ್ಶಿರಾಮ್‌ಅವರ ಅಲಿ ತಾಕತ್ತು.

ಶೇಕಡಾ 11ರಷ್ಟು ಜಾಟವಾರು ಸೇರಿದಂತೆ ಶೇಕಡಾ 21ರಷ್ಟಿರುವ ಪರಿಶಿಷ್ಟ ಜಾತಿಗಳ ಮತಗಳ ಬಲದಿಂದಲೇ ಸ್ವತಂತ್ರವಾಗಿ ಸರಕಾರ ರಚಿಸುವುದು ಸಾಧ್ಯವಿಲ್ಲ ಎಂದು ಗೊತ್ತಿದ್ದ ಕಾನ್ಸಿರಾಮ್ ಬ್ರಾಹ್ಮಣರ ಜೊತೆಗಿನ ಭಾಯಿಚಾರಾ ಪ್ರಾರಂಭಿಸಿದ್ದರು. ಉತ್ತರಪ್ರದೇಶದ ಗ್ರಾಮೀಣ ಪ್ರದೇಶದಲ್ಲಿನ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಠಾಕೂರು, ಕಾಯಸ್ತ ಮಾತ್ರವಲ್ಲ ಭೂಮಿ ಹೊಂದಿರುವ ಯಾದವ,ಕುರ್ಮಿಗಳ ಜೊತೆಯಲ್ಲಿಯೂ ಬಿಎಸ್ ಪಿ ಸಾಮಾಜಿಕ ಮೈತ್ರಿ ಹೊಂದಿಕೊಳ್ಳಲಾರದು, ಇನ್ನು ರಾಜಕೀಯ ಮೈತ್ರಿ ಇನ್ನೂ ಕಷ್ಟ ಎಂದು ಬಿಜೆಪಿಇದಕ್ಕಿಂತ ಬ್ರಾಹ್ಮಣರ ಜೊತೆಯೇ ಮೈತ್ರಿ ಬಾಳಬಹುದು ಎಂಬ ಲೆಕ್ಕಾಚಾರ ಅವರದ್ದಾಗಿತ್ತು.

  ಕಾನ್ಶಿರಾಮ್ ಎಂಬ ಚಾಣಕ್ಯ ಬಹಳ ಜಾಣ್ಮೆಯಿಂದ ರೂಪಿಸಿದ್ದ ದಲಿತ್-ಬ್ರಾಹ್ಮಣ ಭಾಯಿಚಾರಾದಂತಹ ಅಸಂಪ್ರದಾಯಿಕ ಸಾಮಾಜಿಕ ಮೈತ್ರಿ ಬಿಎಸ್‌ಪಿ ಉತ್ತರಪ್ರದೇಶದ ಗದ್ದುಗೆ ಹಿಡಿಯಲು ನೆರವಾಗಿತ್ತು. ಹಾಗೆ ನೋಡಿದರೆ ದಶಕಗಳ ಕಾಲ ಕಾಂಗ್ರೆಸ್ ಪಕ್ಷ ಉತ್ತರಪ್ರದೇಶವನ್ನು ಆಳಿದ್ದು ಇದೇ ವಿಲಕ್ಷಣವಾದ ದಲಿತ-ಬ್ರಾಹ್ಮಣ-ಮುಸ್ಲಿಮ್ ಒಕ್ಕೂಟದ ಮತಬ್ಯಾಂಕಿನ ಬಲದಿಂದ. ಈ ರೀತಿ ಕಾನ್ಸಿರಾಮ್ 10-15 ವರ್ಷಗಳ ಸಣ್ಣ ಅವಧಿಯಲ್ಲಿ ಉತ್ತರಪ್ರದೇಶದ ಸಾಂಪ್ರದಾಯಿಕ ಜಾತಿ ಸಮೀಕರಣವನ್ನು ಒಡೆದು ಕಟ್ಟಿ ಆ ರಾಜ್ಯದಲ್ಲಿ ಸಕ್ರಿಯವಾಗಿದ್ದ ಬಿಜೆಪಿ,ಎಸ್ ಪಿ ಮತ್ತು ಕಾಂಗ್ರೆಸ್ ಎಂಬ ಮೂರು ಪಕ್ಷಗಳನ್ನೂ ದುರ್ಬಲಗೊಳಿಸಿದ್ದರು.

1993ರ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಮೊದಲ ಬಾರಿ ಕಾನ್ಶಿರಾಮ್ ‘‘ತಿಲಕ್ ತರಾಜು,ತಲ್ವಾರ್, ಮಾರೋ ಉನಕೋ ಜೂತೆ ಚಾರ್’ ಎಂಬ ಘೋಷಣೆಯನ್ನು ಹೊರಡಿಸಿ ನೇರವಾಗಿ ಬ್ರಾಹ್ಮಣ,ವೈಶ್ಯ, ಕ್ಷತ್ರಿಯರ ವಿರುದ್ದ ಹೋರಾಟ ಪ್ರಾರಂಭಿಸಿದ್ದರು. ಇದೇ ಕಾನ್ಶಿರಾಮ್ ಕೇವಲ ಎರಡು ವರ್ಷಗಳ ನಂತರ ಬ್ರಾಹ್ಮಣ,ವೈಶ್ಯ, ಕ್ಷತ್ರಿಯರು ಬೆಂಬಲಿಸುವ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮಾಯಾವತಿಯವರನ್ನು ಮುಖ್ಯಮಂತ್ರಿ ಮಾಡಿದ್ದರು. ಅದೊಂದೇ ಸಲವಲ್ಲ ನಂತರ ಎರಡು ಬಾರಿ ಮಾಯಾವತಿಯವರು ಮುಖ್ಯಮಂತ್ರಿಯಾಗಿದ್ದು ಬಿಜೆಪಿಯ ಬೆಂಬಲದಿಂದಲೇ. ಮೇಲ್ನೊಟಕ್ಕೆ ಇದನ್ನು ಆತ್ಮವಂಚಕತನ, ಸೈದ್ದಾಂತಿಕ ದಿವಾಳಿಕೋರತನ ಎಂದೆಲ್ಲ ವ್ಯಾಖ್ಯಾನಿಸಬಹುದು. ಎಂದೂ ದೇಶದ ಮಾಧ್ಯಮಗಳಿಗೆ ಸೊಪ್ಪು ಹಾಕದೆ ಇದ್ದ ಕಾನ್ಶಿರಾಮ್ ತನ್ನ ರಾಜಕೀಯ ನಿರ್ಧಾರಗಳ ಬಗೆಗಿನ ಟೀಕೆ-ಟಿಪ್ಪಣಿಗಳ ಬಗ್ಗೆ ತಲೆಕೆಡಿಸಿಕೊಂಡವರಲ್ಲ.

ಕೊನೆಗೆ 2003ರ ಸುಮಾರಿಗೆ ಕಾನ್ಶಿರಾಮ್ ಪ್ರಾರಂಭಿಸಿದ್ದ ದಲಿತ್-ಬ್ರಾಹ್ಮಣ್ ಭಾಯಿಚಾರಾ ಅಭಿಯಾನದ ನಂತರ 2007ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ಪಿ 86 ಬ್ರಾಹ್ಮಣರಿಗೆ ಟಿಕೆಟ್ ನೀಡಿದ್ದು ಅವರಲ್ಲಿ 43 ಅಭ್ಯರ್ಥಿಗಳು ಗೆದ್ದಿದ್ದರು. ಚುನಾವಣೆಯಲ್ಲಿ ಬೇರೆ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತನ್ನ ಸಮುದಾಯದ ಮತದಾರರಿಂದ ಮತಹಾಕಿಸಬಲ್ಲ ಶಕ್ತಿ ದೇಶದಲ್ಲಿ ಬಹಳ ಮಂದಿ ರಾಜಕೀಯನಾಯಕರಿಗಿಲ್ಲ. ಕಾನ್ಶಿರಾಮ್‌ಮತ್ತು ಮಾಯಾವತಿಯವರು ಈ ಶಕ್ತಿ ಪ್ರದರ್ಶನವನ್ನು ತಮ್ಮ ರಾಜಕೀಯ ಜೀವನದುದ್ದ್ಕೂ ಮಾಡಿಕೊಳ್ಳುತ್ತಲೇ ಬಂದಿದ್ದಾರೆ.

     2007ರಲ್ಲಿ ಸ್ವಯಂಶಕ್ತಿಯಿಂದ ಮುಖ್ಯ ಮಂತ್ರಿಯಾಗುವ ವರೆಗೆ ಸೋಷಿಯಲ್ ಇಂಜನಿಯರಿಂಗ್ ಸೇರಿದಂತೆ ಎಲ್ಲ ಕಾರ್ಯತಂತ್ರಗಳು ಸುಗಮವಾಗಿ ನಡೆದು ರಾಜಕೀಯ ಪ್ರತಿಫಲವನ್ನು ಬಿಎಸ್ ಪಿಗೆ ತಂದುಕೊಟ್ಟಿದ್ದು ನಿಜ. ಆದರೆ 2006ರಲ್ಲಿ ಕಾನ್ಶಿರಾಮ್ ನಿಧನರಾದ ನಂತರ ಮಾಯಾವತಿಯವರ ರಾಜಕೀಯ ಸಂಪೂರ್ಣವಾಗಿ ದಿಕ್ಕು ತಪ್ಪಿ ಹೋಯಿತು. 2007ರಲ್ಲಿ ಅವರ ಸುತ್ತಲಿನ ಭಟ್ಟಂಗಿಗಳು ಮಾಯಾವತಿಯವರಿಗೆ ರಾಷ್ಟ್ರರಾಜಕಾರಣದ ಹುಚ್ಚು ಹತ್ತಿಸಿಬಿಟ್ಟರು. ಇದರಿಂದಾಗಿ ಆಡಳಿತ ಹಳಿ ತಪ್ಪಿಹೋಯಿತು. ಬೆಹೆನ್ ಜಿ ದಿನದಿಂದ ದಿನಕ್ಕೆ ಸರ್ವಾಧಿಕಾರಿಯಾಗುತ್ತಾ ಹೋದರು. ಕಾನ್ಶಿರಾಮ್ ಅವರಂತಹ ಚಾಣಾಕ್ಯನ ಸ್ಥಾನದಲ್ಲಿ ಕುತಂತ್ರ ರಾಜಕಾರಣದ ಸತೀಶ್ ಚಂದ್ರ ಮಿಶ್ರಾನಂತಹವರು ಸೇರಿಕೊಂಡರು. ಕಾನ್ಶಿರಾಮ್ ಕಾಲದ ನಿಷ್ಠಾವಂತ ಅನುಯಾಯಿಗಳಾದ ಅತಿ ಹಿಂದುಳಿದ ಜಾತಿಗೆ ಸೇರಿರುವ ಬಾಬುಸಿಂಗ್ ಕುಶವಾಹಾ, ಬಿಎಸ್ ಪಿಯ ಮುಸ್ಲಿಮ್ ಮುಖವೆಂದೇ ಪರಿಗಣಿಸಲಾಗಿದ್ದ ನಜೀಮುದ್ದೀನ್ ಸಿದ್ದಿಕಿ ಅವರನ್ನು ಮಾಯಾವತಿ ಪಕ್ಷದಿಂದ ಹೊರಗಟ್ಟಿದ್ದರು.

 ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮುಖ್ಯವಾಗಿ ಅಖಿಲೇಶ್ ಸಿಂಗ್ ಸಮಾಜವಾದಿ ಪಕ್ಷದ ಸಾರಥ್ಯವಹಿಸಿದ ನಂತರ ಮುಸ್ಲಿಮರು ಆ ಪಕ್ಷಕ್ಕೆ ಮರಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಕ್ಕೆ ನಿಂತಿದ್ದ ಅತಿಹಿಂದುಳಿದ ಜಾತಿಗಳು ಬಿಜೆಪಿ ಮತ್ತು ಎಸ್‌ಪಿ ನಡುವೆ ಹಂಚಿಹೋಗಿವೆ. ಬ್ರಾಹ್ಮಣರು ಮೂಲಪಕ್ಷಕ್ಕೆ ಮರಳಿದ್ದಾರೆ.ಮಾಯಾವತಿಯವರು ದಿಕ್ಕೆಟ್ಟು ನಿಂತಿದ್ದಾರೆ. ಇಡೀ ದೇಶದ ದಲಿತ ರಾಜಕಾರಣಕ್ಕೆ ದಿಕ್ಕು ತೋರಿಸಬಹುದಾಗಿದ್ದ ನಾಯಕತ್ವ ಹರಾಕಿರಿ ಮಾಡಿಕೊಂಡಿದೆ.

ಮೂವತ್ತೆಂಟು ವರ್ಷಗಳ ಹಿಂದೆ ನೆರೆಯ ಪಂಜಾಬ್ ನಿಂದ ಬಂದು ‘ದಲಿತ್ ಶೋಷಿತ್ ಸಮಾಜ ಸಂಘರ್ಷ ಸಮಿತಿ (ಡಿಎಸ್4) ಸ್ಥಾಪಿಸುವ ಮೂಲಕ ಬಹುಜನ ಸಮಾಜದ ಸಂಘಟನೆ ಪ್ರಾರಂಭಿಸಿ ನಂತರದ ಹನ್ನೊಂದು ವರ್ಷಗಳ ಅವಧಿಯಲ್ಲಿ ಉತ್ತರಪ್ರದೇಶದ ಅಧಿಕಾರದ ಸ್ಥಾನದಲ್ಲಿ ಬಹುಜನ ಸಮಾಜಪಕ್ಷವನ್ನು ಕಾನ್ಶಿರಾಮ್ ಕಟ್ಟಿ ನಿಲ್ಲಿಸಿದ್ದರು. ಜಾತಿಗ್ರಸ್ತ ಮತ್ತು ಊಳಿಗಮಾನ್ಯ ವ್ಯವಸ್ಥೆಯ ಸಮಾಜದಲ್ಲಿ ಒಬ್ಬ ದಲಿತ ಮಹಿಳೆಯನ್ನು ಒಂದಲ್ಲ ಎರಡಲ್ಲ ನಾಲ್ಕು ಬಾರಿ ಮುಖ್ಯಮಂತ್ರಿ ಮಾಡಿದ್ದರು. ಉತ್ತರಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷದ ಈಗಿನ ಸ್ಥಿತಿಯನ್ನು ನೋಡಿ ಅದೇ ಕಾನ್ಶಿರಾಮ್ ಆತ್ಮ ತನ್ನ ಸಮಾಧಿಯಲ್ಲಿಯೇ ಮರುಗುತ್ತಿರಬಹುದು.

Writer - ದಿನೇಶ್ ಅಮಿನ್ ಮಟ್ಟು

contributor

Editor - ದಿನೇಶ್ ಅಮಿನ್ ಮಟ್ಟು

contributor

Similar News