ಬರಡಾಗಿರುವ ವಾರಣಾಸಿಯ ಹಸುವಿನ ಕೆಚ್ಚಲು!

Update: 2022-03-07 04:06 GMT

ವಾರಣಾಸಿಯಲ್ಲಿಯೂ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ವಿರೋಧ ಪಕ್ಷಗಳ ಮೇಲೆ ದಾಳಿ ಮತ್ತು ರೇಷನ್ ಕಾರ್ಡ್ ಮೂಲಕ ವಿತರಿಸುತ್ತಿರುವ ಅಕ್ಕಿ, ಗೋಧಿ, ಸಕ್ಕರೆ ಉಪ್ಪು ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರವನ್ನು ಸಾಧನೆಯಾಗಿ ಬಿಂಬಿಸುತ್ತಿಲ್ಲ. ಒಂದು ಕಾಲದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನೇ ಹಿಂದುತ್ವದ ಪರ ಪ್ರಚಾರಕ್ಕೆ ಬಳಸಿಕೊಂಡ ಬಿಜೆಪಿ ನಾಯಕರು ಈ ಬಾರಿಯ ಚುನಾವಣೆಯಲ್ಲಿ ತಪ್ಪಿಯೂ ಗೋವುಗಳ ಬಗ್ಗೆ ಬಾಯಿಬಿಚ್ಚುತ್ತಿಲ್ಲ. ಒಂದಷ್ಟು ಮತಗಳನ್ನು ತಂದು ಕೊಡುತ್ತಿದ್ದ ಗೋವುಗಳು ಈ ಬಾರಿ ಬಿಜೆಪಿಯಿಂದ ಮತಗಳನ್ನು ಕಿತ್ತುಕೊಳ್ಳುವ ಹಾಗೆ ಕಾಣುತ್ತಿದೆ.

ದಿಲ್ಲಿಯ ಪ್ರಧಾನಿ ಕಾರ್ಯಾಲಯದಲ್ಲಿಯೇ ಕೂತು ಇಡೀ ದೇಶವನ್ನು ನಿಯಂತ್ರಿಸಬಲ್ಲ ರೆಂದು ಭಕ್ತಗಣ ಕೊಂಡಾಡುತ್ತಿರುವ ನರೇಂದ್ರ ಮೋದಿಯವರು ಉಕ್ರೇನ್-ರಶ್ಯ ನಡುವಿನ ಯುದ್ಧ ಕಾಲದ ನಡುವೆ ಮೂರು ದಿನ ತಮ್ಮ ಸ್ವಂತ ಕ್ಷೇತ್ರ ವಾರಣಾಸಿಯ ಬೀದಿಗಳಲ್ಲಿ ಬೆವರು ಸುರಿಸುತ್ತಾ ಸುತ್ತಾಡಿದ್ದಾರೆ ಎಂದರೆ?

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ತಥಾಕಥಿತ ಚಾಣಕ್ಯ ಅಮಿತ್ ಶಾ ಸೇರಿದಂತೆ ರಾಷ್ಟ್ರ-ರಾಜ್ಯಗಳ ನಾಯಕರು ಕೊನೆಯ ಹಂತದ ಮತದಾನ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಕೈಮುಗಿಯುತ್ತಾ ಮನೆಮನೆಗೆ ಹೋಗಿ ಮತದಾರರ ಕಾಲಿಗೆ ಬೀಳುತ್ತಿದ್ದಾರೆ ಎಂದರೆ?

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಅವರೇ ಖುದ್ದಾಗಿ ಸಂಘಟನೆಯ ಪ್ರಮುಖರ ಜೊತೆ ವೀಡಿಯೊ ಸಂವಾದ ನಡೆಸಿ ಸಂಘದ ಪ್ರತಿಯೊಬ್ಬ ಕಾರ್ಯಕರ್ತರು ಬೀದಿಗಿಳಿದು ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಬೇಕೆಂದು ಫರ್ಮಾನು ಹೊರಡಿಸಿದ್ದಾರೆ ಎಂದರೆ?.

ಭಾರತೀಯ ಜನತಾ ಪಕ್ಷಕ್ಕೆ ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ದು:ಸ್ವಪ್ನ ಬೀಳುತ್ತಿದೆಯೆಂದೇ ಅರ್ಥ.

ಪ್ರಧಾನಿ ನರೇಂದ್ರ ಮೋದಿಯವರ ಸ್ವಂತ ಲೋಕಸಭಾ ಕ್ಷೇತ್ರ ವಾರಣಾಸಿಯ ವಿಧಾನಸಭಾ ಕ್ಷೇತ್ರಗಳೂ ಸೇರಿದಂತೆ ಕೊನೆಯ ಹಂತದ 54 ಕ್ಷೇತ್ರಗಳ ಚುನಾವಣೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗಿಂತಲೂ ಮೋದಿ ಅವರಿಗೆ ಹೆಚ್ಚು ಪ್ರತಿಷ್ಠೆಯದ್ದು. ಹಿಂದಿನ ಆರು ಹಂತದ ಮತದಾನ ನಡೆದಿದ್ದ ಕ್ಷೇತ್ರಗಳಂತೆ ಈ ಹಂತದಲ್ಲಿಯೂ ಬಿಜೆಪಿಯ ಸವಾಲು ಗಳಿಸುವುದಲ್ಲ, ಗಳಿಸಿದ್ದನ್ನು ಉಳಿಸುವುದು. ಚುನಾವಣೆಯಲ್ಲಿ ಮತಗಳನ್ನು ಗಳಿಸುವುದು ಎಷ್ಟು ಕಷ್ಟವೋ, ಅದಕ್ಕಿಂತಲೂ ಕಷ್ಟ ಗಳಿಸಿದ್ದನ್ನು ಉಳಿಸುವುದು.

 ಈವರೆಗೆ ನಡೆದಿರುವ ಆರು ಸುತ್ತಿನ ಚುನಾವಣೆಗಳಲ್ಲಿ ಸಾಮಾನ್ಯ ಜನರಿಂದ ಹಿಡಿದು ಚುನಾವಣಾ ಪಂಡಿತರವರೆಗೆ ಯಾರೂ ಕೂಡಾ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಭವಿಷ್ಯ ನುಡಿದಿಲ್ಲ. ಪ್ರತಿಹಂತದಲ್ಲಿಯೂ ಬಿಜೆಪಿ ಸ್ಥಾನಗಳನ್ನು ಕಳೆದುಕೊಂಡಿದೆ ಎನ್ನುವುದು ಸತ್ಯ. ಈ ರೀತಿ ಕಳೆದುಕೊಂಡಿರುವ ಸ್ಥಾನಗಳೆಷ್ಟು ಎನ್ನುವುದಷ್ಟೇ ಈಗಿನ ಚರ್ಚೆ. ಈ ಕುಸಿತ ಬಿಜೆಪಿಯನ್ನು 200ರ ಆಜುಬಾಜಿನಲ್ಲಿ ನಿಲ್ಲಿಸಲಿದೆಯೇ? ಇಲ್ಲವೇ ಅದಕ್ಕಿಂತಲೂ ಕೆಳಗೆ ತಳ್ಳಲಿದೆಯೇ ಎನ್ನುವುದಷ್ಟೇ ಈಗಿನ ಕುತೂಹಲ.

ಏಳನೇ ಸುತ್ತಿನ ಮತದಾನ ನಡೆಯುವ 54 ಕ್ಷೇತ್ರಗಳಲ್ಲಿ 29 ಕ್ಷೇತ್ರಗಳನ್ನು ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದರೆ ಏಳು ಕ್ಷೇತ್ರಗಳನ್ನು ಬಿಜೆಪಿಯ ಮಿತ್ರಪಕ್ಷಗಳು ಗೆದ್ದಿದ್ದವು. ಸಮಾಜವಾದಿ ಪಕ್ಷ ಹನ್ನೊಂದು ಕ್ಷೇತ್ರಗಳಲ್ಲಿ ಮತ್ತು ಬಿಎಸ್‌ಪಿ ಆರು ಕ್ಷೇತ್ರಗಳಲ್ಲಿ ಗೆದ್ದಿತ್ತು. ಹೀಗಿದ್ದರೂ ಬಿಜೆಪಿ ನಾಯಕರು ಚಿಂತಾಕ್ರಾಂತರಾಗಿದ್ದಾರೆ. ಇದಕ್ಕೆ ಕಾರಣಗಳಿವೆ.

ವಾರಣಾಸಿ-ಗೋರಖ್‌ಪುರ ನಡುವಿನ ಸಾಸಿವೆ ಗಿಡಗಳ ಹಳದಿ ಹೂ ಚೆಲ್ಲಿದ ಹಾದಿಯನ್ನು ಹಾದು ಬರುವಾಗ ಅದರ ಹಿಂದೆ ಅವಿತಿರುವ ಹಸಿವು-ಅವಮಾನ-ಅಸಹಾಯಕತೆಗಳ ನೋಟ ಕಣ್ಣಿಗೆ ಬೀಳಲಾರದು. ಪೂರ್ವಾಂಚಲದ ಶೇಕಡಾ 80ರಷ್ಟು ಜನರ ಕೈಯಲ್ಲಿ ಕೇವಲ ಒಂದರಿಂದ ಒಂದುವರೆ ಎಕರೆಯಷ್ಟು ಮಾತ್ರ ಜಮೀನು ಇದೆ ಎಂದು ಹತ್ತು ವರ್ಷಗಳ ಹಿಂದಿನ ಸರಕಾರದ ಅಧಿಕೃತ ಮಾಹಿತಿ ಹೇಳಿತ್ತು. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಯಾವ ಸರಕಾರವೂ ಪ್ರಗತಿಪರವಾದ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸದೆ ಇದ್ದ ಕಾರಣ ಈಗಿನ ಪರಿಸ್ಥಿತಿ ಭಿನ್ನವಾಗಿರಲಿಕ್ಕಿಲ್ಲ.

ಭೂಮಾಲಕರ ದೌರ್ಜನ್ಯದಿಂದಾಗಿ ನಲುಗಿ ಹೋಗಿದ್ದ ವಾರಣಾಸಿ- ಮವು-ಘಾಝಿಪುರ ಕ್ಷೇತ್ರಗಳು ಒಂದು ಕಾಲದಲ್ಲಿ ಕಮ್ಯುನಿಸ್ಟರು ಸಕ್ರಿಯ ರಾಗಿದ್ದ ಪ್ರದೇಶ. ‘‘ಯುಪಿ ಬಿ ಬಂಗಾಲ್ ಬನೇಗಾ, ಪೂರ್ವಾಂಚಲ್ ಸೇ ಶುರುವಾತ್ ಹೋಗಾ’’ ಎಂದು ಬೀದಿಗಳಲ್ಲಿ ಮೊಳಗುತ್ತಿದ್ದ ಘೋಷಣೆಗಳನ್ನು ಇನ್ನೂ ನೆನಪು ಮಾಡಿಕೊಳ್ಳುವ ಹಿರಿಯ ಕಮ್ಯುನಿಸ್ಟರು ಈಗಲೂ ವಾರಣಾಸಿಯ ಬೀದಿಗಳಲ್ಲಿ ಸಿಗುತ್ತಾರೆ.

ಪೂರ್ವಾಂಚಲಕ್ಕೆ ಸೇರಿರುವ ಈ 54 ಕ್ಷೇತ್ರಗಳಲ್ಲಿ ಬಹುತೇಕ ಕ್ಷೇತ್ರಗಳು ಸ್ವತಂತ್ರ ಪಾಳೆಪಟ್ಟುಗಳಂತಿವೆ. ಸರಕಾರಿ ಕಚೇರಿಗಳಲ್ಲಿರುವ ಸರಕಾರ ಜನರ ಬದುಕಿನ ಭಾಗವಾಗಿ ಉಳಿದಿಲ್ಲ. ರಾಜಕೀಯ ಪಕ್ಷಗಳು ಕೂಡಾ ಯಾವುದಾದರೂ ಭೂಗತದೊರೆಗಳ ಸಾಮ್ರಾಜ್ಯದ ಅಂಗ ಸಂಸ್ಥೆಗಳಾಗಿಯೇ ಕೆಲಸ ಮಾಡುತ್ತವೆ. ಸರಕಾರಿ ಕಚೇರಿ, ಪೊಲೀಸ್ ಠಾಣೆ, ಶಾಲೆ-ಆಸ್ಪತ್ರೆಗಳಲ್ಲಿ ಬಾಹುಬಲಿಗಳ ಒಂದು ಧಮ್ಕಿಯಿಂದ ಕೆಲಸ ನಡೆದು ಹೋಗುತ್ತದೆ. ಕಾನೂನಿನ ಮೂಲಕ ಪರಿಹರಿಸಲು ಸಾಧ್ಯವಿಲ್ಲದ ಸಾಲವಸೂಲಿ, ಮನೆಬಿಡಿಸುವುದು, ಮಕ್ಕಳ ಪ್ರೇಮಪ್ರಕರಣ ಮೊದಲಾದ ವೈಯಕ್ತಿಕ ಸಮಸ್ಯೆಗಳನ್ನು ಈ ಬಾಹುಬಲಿಗಳು ಸುಲಭದಲ್ಲಿ ಪರಿಹರಿಸಬಲ್ಲರು. ರಾಜಕಾರಣಿಗಳೇ ಈ ಬಾಹುಬಲಿಗಳಿಗೆ ತಲೆಬಾಗಿಸುತ್ತಿರುವುದರಿಂದ ರಾಜಕಾರಣಿಗಳ ಬಗೆಗಿನ ತಿರಸ್ಕಾರ ಜನರನ್ನು ಇನ್ನಷ್ಟು ಪಾತಕಿಗಳ ಸಮೀಪ ಕೊಂಡೊಯ್ದು ನಿಲ್ಲಿಸಿದೆ. ಇದರ ಜೊತೆಗೆ ಅಕ್ರಮ ಹಣ ಗಳಿಕೆಗೆ ದಾರಿಯಾಗಿರುವ ಸರಕಾರಿ ಗುತ್ತಿಗೆ, ಕಳ್ಳಭಟ್ಟಿ ಸೆರೆ, ಭೂ ವ್ಯಾಜ್ಯ ಇತ್ಯರ್ಥಗಳ ಜೊತೆಯಲ್ಲಿ ಈಗ ಮಾದಕ ವಸ್ತುಗಳ ವಹಿವಾಟು ಹೆಚ್ಚುತ್ತಿದೆ. ಈಸ್ಟ್ ಇಂಡಿಯಾ ಕಂಪೆನಿಯೇ ಸ್ಥಾಪಿಸಿದ್ದ ಏಶ್ಯದ ಅತಿ ದೊಡ್ಡ ಅಫೀಮು ಕಾರ್ಖಾನೆ ಇರುವುದು ಘಾಝಿಪುರದಲ್ಲಿ.

ಈ ಪ್ರದೇಶ ಹೇಗಿದೆ ಎನ್ನುವುದಕ್ಕೆ ನಾಳೆ ಮತದಾನ ನಡೆಯಲಿರುವ ಮೂರು ಕ್ಷೇತ್ರಗಳನ್ನು ಸ್ಯಾಂಪಲ್ ಆಗಿ ನೋಡಬಹುದು. ಮವು ವಿಧಾನಸಭಾ ಕ್ಷೇತ್ರಕ್ಕೆ ಪೂರ್ವಾಂಚಲದ ಕುಖ್ಯಾತ ಬಾಹುಬಲಿ ಮುಖ್ತಾರ್ ಅನ್ಸಾರಿ 1996ರಿಂದ ಇಲ್ಲಿಯವರೆಗೆ ಶಾಸಕ. ಮೂರು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಎರಡು ಬಾರಿ ಬಿಎಸ್ ಪಿಯಿಂದ ಗೆದ್ದಿದ್ದಾನೆ. ಈ ಬಾರಿ ಮುಖ್ತಾರ್ ಮಗ ಅಬ್ಬಾಸ್ ಅನ್ಸಾರಿ ಸುಹೇಲ್ ದೇವ್ ಭಾರತೀಯ ಸಮಾಜ ಪಾರ್ಟಿ ಅಭ್ಯರ್ಥಿ. ಈ ಪಕ್ಷದ ಜೊತೆ ಸಮಾಜವಾದಿ ಪಕ್ಷದ ಮೈತ್ರಿ ಇದೆ. ಮುಖ್ತಾರ್ ಅನ್ಸಾರಿ ಇನ್ನೊಬ್ಬ ಮಗ ಬಿಎಸ್‌ಪಿಯಿಂದ ಘಾಝಿಪುರ ಲೋಕಸಭಾ ಕ್ಷೇತ್ರದ ಸದಸ್ಯ. ಇದೇ ಪೂರ್ವಾಂಚಲದ ಕುಂಡಾ ಕ್ಷೇತ್ರದಲ್ಲಿ ಕುಂಡಾದ ಗೂಂಡಾನೆಂದೇ ಕುಖ್ಯಾತಿ ಪಡೆದಿರುವ ರಘುರಾಜ್ ಸಿಂಗ್ 1993ರಿಂದ ಇಲ್ಲಿಯ ವರೆಗೆ ಶಾಸಕ. ಕಳೆದ ಆರೂ ಚುನಾವಣೆಗಳನ್ನು ಈತ ಪಕ್ಷೇತರ ಅಭ್ಯರ್ಥಿಯಾಗಿಯೇ ಗೆದ್ದಿದ್ದಾನೆ. ಅಜಮ್ ಗಡ ಕ್ಷೇತ್ರದಿಂದ ಕ್ರಿಮಿನಲ್ ಹಿನ್ನೆಲೆಯ ದುರ್ಗಾಪ್ರಸಾದ್ ಯಾದವ್ 1996ರಿಂದ ಇಲ್ಲಿಯ ವರೆಗೆ ಶಾಸಕ. ಐದೂ ಚುನಾವಣೆಗಳಲ್ಲಿಯೂ ಈತ ಸಮಾಜವಾದಿ ಪಕ್ಷದ ಅಭ್ಯರ್ಥಿ.

ಬುಲ್‌ಡೋಜರ್ ನುಗ್ಗಿಸಿ ಇಡೀ ಉತ್ತರಪ್ರದೇಶವನ್ನು ಗೂಂಡಾಗಳಿಂದ ಮುಕ್ತಗೊಳಿಸಿದ್ದೇನೆ ಎಂದು ಗರ್ಜಿಸುತ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಈ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸುವ ಶಕ್ತಿ ಇಲ್ಲ. ಪ್ರಧಾನಿ ನರೇಂದ್ರಮೋದಿಯವರೂ ೇರಿದಂತೆ ಯಾವ ಬಿಜೆಪಿ ನಾಯಕರೂ ಈ ಬಾಹುಬಲಿಗಳ ಕ್ಷೇತ್ರದಲ್ಲಿ ರೋಡ್ ಶೋ ನಡೆಸುವುದಿಲ್ಲ. ಪ್ರಜಾ ಪ್ರಭುತ್ವದ ಅಣಕದಂತೆ ನಡೆಯುವ ಚುನಾವಣೆ ಕೂಡಾ ಪಾತಕ ಜಗತ್ತಿನ ನಿಯಂತ್ರಣಕ್ಕಾಗಿ ನಡೆಯುವ ಇನ್ನೊಂದು ಹೋರಾಟವೇ ಆಗಿದೆ.

ಈ ಬಾರಿ ಬಿಜೆಪಿ ಮುಂದಿನ ಸವಾಲುಗಳು ದಿನದಿಂದ ದಿನಕ್ಕೆ ಕಠಿಣವಾಗುತ್ತಾ ಹೋಗಲು ಮುಖ್ಯ ಕಾರಣ- ಹಿಂದುತ್ವದ ಹು ವಿನ ಕೆಚ್ಚಲಿನಿಂದ ಹಾಲು ಹೀರಿ ಹೀರಿ ಅದು ಬರಡಾಗಿರುವುದು. ವಾರಾಸಿಯಲ್ಲಿಯೂ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ವಿರೋಧ ಪಕ್ಷಗಳ ಮೇಲೆ ದಾಳಿ ಮತ್ತು ರೇಷನ್ ಕಾರ್ಡ್ ಮೂಲಕ ವಿತರಿಸುತ್ತಿರುವ ಅಕ್ಕಿ, ಗೋಧಿ, ಸಕ್ಕರೆ ಉಪ್ಪು ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರವನ್ನು ಸಾಧನೆಯಾಗಿ ಬಿಂಬಿಸುತ್ತಿಲ್ಲ. ಒಂದು ಕಾಲದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನೇ ಹಿಂದುತ್ವದ ಪರ ಪ್ರಚಾರಕ್ಕೆ ಬಳಸಿಕೊಂಡ ಬಿಜೆಪಿ ನಾಯಕರು ಈ ಬಾರಿಯ ಚುನಾವಣೆಯಲ್ಲಿ ತಪ್ಪಿಯೂ ಗೋವುಗಳ ಬಗ್ಗೆ ಬಾಯಿಬಿಚ್ಚುತ್ತಿಲ್ಲ. ಒಂದಷ್ಟು ಮತಗಳನ್ನು ತಂದುಕೊಡುತ್ತಿದ್ದ ಗೋವುಗಳು ಈ ಬಾರಿ ಬಿಜೆಪಿಯಿಂದ ಮತಗಳನು್ನ ಕಿತ್ತುಕೊಳ್ಳುವ ಹಾಗೆ ಕಾಣುತ್ತಿದೆ.

ರಾಜ್ಯ ಸರಕಾರದ ಸಮೀಕ್ಷೆಯ ಪ್ರಕಾರ ಉತ್ತರಪ್ರದೇಶದಲ್ಲಿ ಸುಮಾರು ಹದಿನಾರು ಲಕ್ಷ ದನಗಳು ಬೀದಿಯಲ್ಲಿವೆ. ಗೋರಖ್ ಪುರದಲ್ಲಿಯೇ ಸುಮಾರು ಮೂರು ಲಕ್ಷ ಬೀಡಾಡಿ ದನಗಳಿವೆಯಂತೆ. ಮಿರ್ಜಾಪುರದಲ್ಲಿ ಐದು ಲಕ್ಷಕ್ಕಿಂತ ಅಧಿಕ ದನಗಳು ಬೀದಿಗೆ ಬಿದ್ದಿವೆ. ಈ ಬೀಡಾಡಿ ದನಗಳು ಬೀದಿಯಲ್ಲಿಯಷ್ಟೇ ಇದ್ದರೆ ಜನ ಇಷ್ಟೊಂದು ಆಕ್ರೋಶಗೊಳ್ಳುತ್ತಿರಲಿಲ್ಲ. ಅವುಗಳು ಕಂಡಕಂಡಲ್ಲಿ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿರುವುದರಿಂದ ರೈತರು ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸರಕಾರ ಒಂದಷ್ಟು ಗೋಶಾಲೆಗಳನ್ನು ಸ್ಥಾಪಿಸಿದ್ದರೂ ಅಲ್ಲಿರುವ ಗೋವುಗಳಿಗೆ ಪ್ರತಿದಿನದ ಮೇವಿಗೆ ನೀಡುತ್ತಿರುವ ಅನುದಾನ ತಲಾ 30 ರೂಪಾಯಿಯಂತೆ. ಗೋಶಾಲೆ ನಿರ್ವಾಹಕರ ಪ್ರಕಾರ ಪ್ರತಿದಿನದ ಮೇವಿಗಾಗಿ ಅವರು ಕನಿಷ್ಠ ನೂರು ರೂಪಾಯಿ ಖರ್ಚು ಮಾಡಬೇಕಾಗಿದೆಯಂತೆ. ಇದರಿಂದಾಗಿ ಗೋಶಾಲೆಗಳನ್ನು ನಡೆಸುವವರು ಕೂಡಾ ರೈತರಿಂದ ಗೋವುಗಳನ್ನು ಪಡೆಯಲು ನಿರಾಕರಿಸುತ್ತಿದ್ದಾರಂತೆ.ಕರ್ನಾಟಕವೂ ಸೇರಿದಂತೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಹೊರಟಿರುವ ರಾಜ್ಯಗಳಿಗೆಲ್ಲ ಉತ್ತರಪ್ರದೇಶದ ಅನುಭವದಲ್ಲಿ ಪಾಠವಿದೆ.

   ಇವೆಲ್ಲದರ ನಡುವೆ ಪೂರ್ವಾಂಚಲದ ನಿಜವಾದ ಸಮಸ್ಯೆ ಬಗ್ಗೆ ಯಾವ ಪಕ್ಷವೂ ಸೊಲ್ಲೆತ್ತುತ್ತಿಲ್ಲ. ಪೂರ್ವಾಂಚಲದ ಜಿಲ್ಲೆಗಳಲ್ಲಿ ಅಡ್ಡಾಡಿದರೆ ಅದೊಂದು ಶಾಪಗ್ರಸ್ತ ಪ್ರದೇಶದಂತೆಯೆ ಕಾಣುತ್ತದೆ. ‘‘ಪ್ರತ್ಯೇಕ ರಾಜ್ಯವಾಗದೆ ನಮಗೆ ಶಾಪದಿಂದ ಮುಕ್ತಿ ಇಲ್ಲ’’ ಎಂದು ಹದಿನೈದು ವರ್ಷಗಳ ಹಿಂದೆ ಭೇಟಿಯಾಗಿದ್ದ ಪೂರ್ವಾಂಚಲ ವಿಕಾಸ ವೇದಿಕೆಯ ಅಜಯ್ ರಾಜ್ ಮಿಶ್ರಾ ಹೇಳಿದ್ದರು.. ಪೂರ್ವಜಿಲ್ಲೆಗಳ ನಿರ್ಲಕ್ಷ್ಯದ ದೂರುಗಳ ಅಧ್ಯಯನಕ್ಕೆ ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದಾಗ ಪಟೇಲ್ ಆಯೋಗ ರಚಿಸಿದ್ದರು. ಅದರ ವರದಿ ಬೆಳಕಿಗೆ ಬರಲೇ ಇಲ್ಲ. ಪೂರ್ವಾಂಚಲವೂ ಸೇರಿದಂತೆ ರಾಜ್ಯವನ್ನು ಐದು ರಾಜ್ಯಗಳಾಗಿ ವಿಭಜಿಸಬೇಕೆಂದು ಜಯಪ್ರಕಾಶ್ ನಾರಾಯಣ್ ಸಲಹೆ ನೀಡಿದ್ದರು. ಅದರ ನಂತರ ಯೋಜನಾ ಆಯೋಗ ರಚಿಸಿದ ಸಮಿತಿಯೊಂದು ಜೆಪಿಯವರ ಸಲಹೆಯ ಮಾದರಿಯಲ್ಲಿಯೇ ರಾಜ್ಯವನ್ನು ಐದು ಆರ್ಥಿಕ ವಲಯಗಳಾಗಿ ವಿಂಗಡಿಸಬೇಕೆಂಬ ವರದಿ ನೀಡಿತ್ತು. ಅದು ಕೂಡಾ ಜಾರಿಗೆ ಬಂದಿಲ್ಲ. ಪೂರ್ವಾಂಚಲ, ಬುಂದೇಲಖಂಡ, ಹರಿತ್ ಪ್ರದೇಶ ಮತ್ತು ಅವಧ್ ಕ್ಷೇತ್ರಗಳಾಗಿ ರಾಜ್ಯವನ್ನು ಪುನರ್ ವಿಂಗಡಿಸಬೇಕೆಂಬ ಬೇಡಿಕೆ ಇದೆ. ಇದಕ್ಕಾಗಿ ಆಗಾಗ ಹೋರಾಟವೂ ನಡೆಯುತ್ತಿರುತ್ತದೆ. ಈ ಚುನಾವಣೆಯಲ್ಲಿ ಈ ಬೇಡಿಕೆ ಬಗ್ಗೆ ಗಂಭೀರವಾದ ಚರ್ಚೆ ನಡೆದಿಲ್ಲ.

ಸಾಮಾನ್ಯವಾಗಿ ಹೊರಗಿನ ಜನ ತಿಳಿದುಕೊಂಡಂತೆ ಉತ್ತರಪ್ರದೇಶ ಯಾರೂ ಭೇದಿಸಲಾಗದ ಬಿಜೆಪಿಯ ಸುಭದ್ರ ಕೋಟೆ ಅಲ್ಲ. ಕಾಂಗ್ರೆಸ್ ಪಕ್ಷದ ಕೋಟೆ ಕುಸಿದುಬಿದ್ದ ನಂತರ ಆ ರಾಜ್ಯ ಯಾರ ಕೋಟೆಯಾಗಿಯೂ ಉಳಿದಿಲ್ಲ. ಬಾಬರಿ ಮಸೀದಿ ಧ್ವಂಸದ ನಂತರದ ಮೂರು ಚುನಾವಣೆಗಳಲ್ಲಿ ಬಿಜೆಪಿ (1991, 1993, 1996) ಕ್ರಮವಾಗಿ 221,177,174 ಸ್ಥಾನಗಳನ್ನು ಗಳಿಸಿದ್ದು, ಮತಪ್ರಮಾಣ ಕೂಡಾ ಶೇಕಡಾ 30-33ರಷ್ಟಕ್ಕೆ ಹೆಚ್ಚಿದ್ದು ನಿಜ.

ಆದರೆ, 2002ರಿಂದ 2017ರ ವರೆಗಿನ ಮೂರು ಚುನಾವಣೆಗಳಲ್ಲಿ ಬಿಜೆಪಿ ಗೆದ್ದ ಕ್ಷೇತ್ರಗಳು ಕ್ರಮವಾಗಿ 88, 51 ಮತ್ತು 47ಕ್ಕೆ ಕುಸಿದಿತ್ತು. ಹೌದು, 2012ರ 47 ಸ್ಥಾನ ಮತ್ತು ಶೇಕಡಾ 15ರಷ್ಟು ಮತಗಳಿಂದ 2017ರಲ್ಲಿ ಒಮ್ಮಿಂದೊಮ್ಮೆಲೇ 312 ಸ್ಥಾನಗಳು ಮತ್ತು ಶೇಕಡಾ 39.7ರಷ್ಟು ಮತಗಳನ್ನು ಪಡೆಯುವ ಮಟ್ಟಿನ ಉತ್ಕರ್ಷಕ್ಕೆ ಕಾರಣ ಏನೆಂದು ವಿವರಿಸುವ ಅಗತ್ಯ ಇಲ್ಲ. ಅದು ಮುಝಾಪ್ಫರ್ ನಗರದ ಕೋಮುಗಲಭೆಯಿಂದ ಬಡಿದೆಬ್ಬಿಸಲಾದ ಕೋಮುದ್ವೇಷದಿಂದಾಗಿ ಸೃಷ್ಟಿಯಾದ ಕೋಮುಧ್ರುವೀಕರಣದ ಕೊಡುಗೆ. ಇದು ಮತದಾರರು ಯೋಚಿಸಿ, ಇತರ ಪಕ್ಷಗಳ ಜೊತೆ ಹೋಲಿಸಿ, ಪರಾಮರ್ಶಿಸಿ ನೀಡಿರುವ ಮತಗಳಲ್ಲ್ಲ. ಅದೊಂದು ಭಾವೋದ್ರೇಕದ ಪ್ರತಿಕ್ರಿಯೆ. ಈ ರೀತಿ ಕ್ಷಿಪ್ರ ಗತಿಯಲ್ಲಿ ಏರಿದ್ದು ಅದೇ ಗತಿಯಲ್ಲಿ ಇಳಿಯುವುದು ಪ್ರಕೃತಿಯ ಸಾಮಾನ್ಯ ನಿಯಮ. ಇದು ಬಿಜೆಪಿಯ ಚಿಂತೆ ಕೂಡಾ ಹೌದು.

Writer - ದಿನೇಶ್ ಅಮಿನ್ ಮಟ್ಟು

contributor

Editor - ದಿನೇಶ್ ಅಮಿನ್ ಮಟ್ಟು

contributor

Similar News