ಉಕ್ರೇನ್ ನ್ಯಾಯ: ಚೀನಾಕ್ಕೆ ಆಯ, ಭಾರತಕ್ಕೆ ಗಾಯ?

Update: 2022-03-07 07:03 GMT

ಉಕ್ರೇನ್ ಬಿಕ್ಕಟ್ಟು ದಿನೇದಿನೇ ಉಲ್ಬಣಿಸುತ್ತಿದ್ದು, ರಶ್ಯವು ಕೀವ್‌ನಲ್ಲಿರುವ ಯುರೋಪಿನ ಅತಿದೊಡ್ಡ ಪರಮಾಣು ಸ್ಥಾವರಕ್ಕೆ ಶೆಲ್ ದಾಳಿ ನಡೆಸಿ, ಇಡೀ ವಿಶ್ವವನ್ನು ವಿಕಿರಣದ ಅಪಾಯಕ್ಕೆ ತಳ್ಳುವ ದುಸ್ಸಾಹಸ ನಡೆಸಿರುವಂತೆಯೇ, ರಾಜತಾಂತ್ರಿಕವಾಗಿ ಬೇಲಿಯ ಮೇಲೆ ಕುಳಿತಂತೆ ಕಾಣುವ ಭಾರತ ಮತ್ತು ಚೀನಾದ ಮೇಲೆ ಆಗಬಹುದಾದ ಪರಿಣಾಮಗಳು ಏನು? ಅವು ಎದುರಿಸುತ್ತಿರುವ ರಾಜತಾಂತ್ರಿಕ ಸವಾಲುಗಳುಗಳು ಏನು? ಇವು ವಾಸ್ತವಿಕವಾಗಿ ಶಸ್ತ್ರಾಸ್ತ್ರ, ತೈಲ, ತಂತ್ರಜ್ಞಾನ ಸೇರಿದಂತೆ ಆರ್ಥಿಕ ವ್ಯವಹಾರಗಳಿಗೆ ಮಾತ್ರವಲ್ಲ, ಮುಂದೆ ಯುದ್ಧ್ಧಕ್ಕೂ ಎಳೆಯಬಲ್ಲ ಸಂಕೀರ್ಣ ಪ್ರಶ್ನೆಗಳಾಗಿವೆ. ಇಲ್ಲಿ ಅವುಗಳನ್ನು ಸರಳವಾಗಿ ಗುರುತಿಸುವ ಪ್ರಯತ್ನ ಮಾತ್ರ ಮಾಡಲಾಗಿದೆ.

ದೇಶ, ದೇಶಗಳ ನಡುವಿನ ಅಂತರ್‌ರಾಷ್ಟ್ರೀಯ ಸಂಬಂಧಗಳು, ಶತ್ರುತ್ವ ಮತ್ತು ಮಿತ್ರತ್ವಗಳು ಜನ ಸಾಮಾನ್ಯರು ನಂಬಿರುವಂತೆ-ಒಳ್ಳೆಯದು-ಕೆಟ್ಟದ್ದು, ನ್ಯಾಯ-ಅನ್ಯಾಯ, ಪ್ರೀತಿ-ದ್ವೇಷ ಹಿಂದಿನ ಇತಿಹಾಸ ಇತ್ಯಾದಿ ಭಾವನಾತ್ಮಕ ವಿಷಯಗಳ ಮೇಲೆ ನಿಂತಿರದೆ, ಶಸ್ತ್ರಾಸ್ತ್ರ, ತೈಲ, ತಂತ್ರಜ್ಞಾನ ಸೇರಿದಂತೆ ಆರ್ಥಿಕ ವ್ಯವಹಾರಗಳ ಮೆಲೆ ನಿಂತಿವೆ ಎಂಬುದು ಕಟು ಸತ್ಯ. ಇಲ್ಲಿ ರಾಜಕೀಯದಂತೆ ಶಾಶ್ವತ ಶತ್ರುತ್ವ ಅಥವಾ ಮಿತ್ರತ್ವಗಳೂ ಇಲ್ಲವೆಂಬುದಕ್ಕೆ ಉದಾರಣೆಗಾಗಿ ಮಹಾಯುದ್ಧ್ಧದಲ್ಲಿ ಕಚ್ಚಾಡಿದ ಯುಎಸ್‌ಎ, ಯು.ಕೆ., ಫ್ರಾನ್ಸ್, ಇಟಲಿ, ಜರ್ಮನಿ, ಜಪಾನ್ ಹಾಗೂ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ರಶ್ಯ, ಉಕ್ರೇನ್ ಮುಂತಾದ ದೇಶಗಳ ಈಗಿನ ಬದಲಾದ ಸಂಬಂಧಗಳು ಬಲವಾದ ಉದಾಹರಣೆಗಳು. ದೇಶಪ್ರೇಮ, ಪ್ರಜಾಪ್ರಭುತ್ವ, ರಾಜಕೀಯ ತತ್ವಗಳು, ಮಾನವ ಕುಲದ ರಕ್ಷಣೆ ಇವೆಲ್ಲಾ ಕೇವಲ ತೋರಿಕೆಗಳಷ್ಟೇ. ನಿಜವಾದ ಉದ್ದೇಶವೆಂದರೆ, ಆಳುವ ವರ್ಗಗಳಿಗೆ ಬೇಕಾಗಿರುವ ಬಂಡವಾಳ, ಸಂಪನ್ಮೂಲ ಮತ್ತು ಅವುಗಳನ್ನು ಒದಗಿಸುವ ಪ್ರದೇಶಗಳ ನಿಯಂತ್ರಣ. ಮೂಲಭೂತವಾಗಿ ಇದನ್ನು ಅರ್ಥ ಮಾಡಿಕೊಳ್ಳದೆ, ಅಂತರ್‌ರಾಷ್ಟ್ರೀಯ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ.

ಈಗ ಉಕ್ರೇನ್ ಸಂದರ್ಭದಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಚೀನಾ ಎರಡೂ ನಡೆದು ಕೊಂಡ ರೀತಿಯನ್ನು ಗಮನಿಸಬಹುದು. ಭದ್ರತಾ ಮಂಡಳಿಯ ಸಭೆಗಳಲ್ಲಿ ಈ ಎರಡು ಶತ್ರು ರಾಷ್ಟ್ರಗಳು ತಟಸ್ಥವಾಗಿ ಉಳಿದವು. (ಮಾನವಹಕ್ಕುಗಳ ಸಭೆಯಲ್ಲಿ ಚೀನಾ ಗೊತ್ತುವಳಿ ವಿರುದ್ಧ ಮತ ಚಲಾಯಿಸಿತು.) ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರಶ್ಯ ವಿರುದ್ಧ ಗೊತ್ತುವಳಿಯ ಮೇಲಿನ ಮತದಾನದ ಒಟ್ಟು ಚಿತ್ರಣ ನೋಡಿದರೆ, ಪರಿಸ್ಥಿತಿ ಅರ್ಥವಾಗುತ್ತದೆ. ಗೊತ್ತುವಳಿಯ ಪರವಾಗಿ 141 ದೇಶಗಳು, ವಿರುದ್ಧವಾಗಿ ಐದು ದೇಶಗಳು ಮತ ಚಲಾಯಿಸಿದರೆ, 35 ದೇಶಗಳು ತಟಸ್ಥವಾಗಿ ಉಳಿದವು. ವಿರುದ್ಧವಾಗಿ ಮತ ಚಲಾಯಿಸಿದ ದೇಶಗಳೆಂದರೆ, ರಶ್ಯ, ಯುಎಸ್‌ಎಯ ಬದ್ಧ ವಿರೋಧಿ ಉತ್ತರ ಕೊರಿಯಾ, ರಶ್ಯದ ಬಂಟ ಬೆಲಾರೂಸ್, ರಶ್ಯವನ್ನು ತೀರಾ ಅವಲಂಬಿಸಿರುವ ಸಿರಿಯಾ ಮತ್ತು ಇರಿಟ್ರಿಯಾ. ಭಾರತ ದಂತೆ ನೆರೆಯ ಚೀನಾ, ಪಾಕಿಸ್ತಾನ, ಬಾಂಗ್ಲಾದೇಶದ, ಶ್ರೀಲಂಕಾ ತಟಸ್ಥವಾಗಿ ಉಳಿದವು.

ವಿಶೇಷವೆಂದರೆ, ಹೆಚ್ಚಾಗಿ ಭಾರತವನ್ನೇ ಅವಲಂಬಿಸಿರುವ ನೇಪಾಳ, ಭೂತಾನ್ ಮತ್ತು ಮಾಲ್ಡೀವ್ಸ್ ಅಚ್ಚರಿಕಾರಕವಾಗಿ ಗೊತ್ತುವಳಿ ಪರ ಮತ ಚಲಾಯಿಸಿದವು. ಇದಕ್ಕೆ ಚೀನಾದ ಭಯ ಮತ್ತು ಯುಎಸ್‌ಎಯನ್ನು ತೃಪ್ತಿಪಡಿಸಲು ಭಾರತ ಹೇರಿದ ಒತ್ತಡ ಕಾರಣವೆಂದು ಊಹಿಸಲು ಸಾಧ್ಯವಿದೆ. ಪುಟ್ಟ ದೇಶಗಳು ಹೇಗೆ ಮತ ಚಲಾಯಿಸಿದರೂ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಭಾರತದಂತ ಪರಮಾಣುಶಕ್ತ ದೇಶ ಎಷ್ಟು ಕಾಲ ತಟಸ್ಥವಾಗಿ ಉಳಿದಿರಲು ಸಾಧ್ಯವಿದೆ?! ಅದರ ಸ್ಥಿತಿ ಅತ್ತ ದರೆ, ಇತ್ತ ಪುಲಿ ಎಂಬಂತಾಗಿದೆ. ಆದರೆ, ನೆರೆಯ ಇನ್ನೆರಡು ಪರಮಾಣುಶಕ್ತ ದೇಶಗಳಿಗೆ ಆ ತಲೆ ಬಿಸಿ ಇದ್ದಂತಿಲ್ಲ. ಚೀನಾ ಮತ್ತು ಪಾಕಿಸ್ತಾನ ತಟಸ್ಥವಾಗಿ ಮತ ಚಲಾಯಿಸಿದರೂ ಮಾನಸಿಕವಾಗಿ, ವ್ಯೆಹಾತ್ಮಕವಾಗಿ ರಶ್ಯ ಜೊತೆಗಿರುವುದು ಎಲ್ಲರಿಗೂ ಗೊತ್ತು. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಂತೂ ದಾಳಿಯ ಸಮಯದಲ್ಲೇ ಪುಟಿನ್ ಜೊತೆ ಊಟ ಮಾಡಿ ಬಂದಿದ್ದಾರೆ.

ಉಕ್ರೇನ್‌ನಲ್ಲಿ ಏನೇ ಸಂಭವಿಸಿದರೂ, ಅದು ಉಲ್ಬಣಗೊಂಡರೂ ಅತ್ಯಂತ ಹೆಚ್ಚು ಲಾಭ ಪಡೆಯುವ ಸ್ಥಿತಿಯಲ್ಲಿ ಚೀನಾ ಇದೆ. ರಶ್ಯವನ್ನು ಯುದ್ಧ್ಧದಿಂದ ಹಿಂದೆಗೆಯುವಂತೆ ಮಾಡುವ ಸಾಮರ್ಥ್ಯ ಇರುವ ಒಂದೇ ಒಂದು ದೇಶವೆಂದರೆ, ಅದು ಚೀನಾವೇ ಹೊರತು, ಪ್ರಧಾನಿ ನರೇಂದ್ರ ಮೋದಿ ಭಕ್ತರು ಹಾಸ್ಯಾಸ್ಪದವಾಗಿ ನಂಬಿರುವಂತೆ ಭಾರತವಲ್ಲ. ಇದಕ್ಕೆ ಹಲವು ಕಾರಣಗಳನ್ನು ಕೊಡಬಹುದು.

 ಚೀನಾಕ್ಕೆ ಲಾಭ

ದಶಕಗಳ ಶತ್ರುತ್ವ ಮತ್ತು ಸ್ಪರ್ಧೆಗಳ ಬಳಿಕ ಚೀನಾ ಮತ್ತು ರಶ್ಯ ಮಿತಿಯಿಲ್ಲದ ಸಹಕಾರವನ್ನು ಘೋಷಿಸುವ ಮತ್ತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತನ್ನ ಅತ್ಯಂತ ಹತ್ತಿರದ ಗೆಳೆಯರಲ್ಲೊಬ್ಬರು ಮತ್ತು ಮಹಾನ್ ಸಹೋದ್ಯೋಗಿ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಫೆಬ್ರವರಿ 4ರ ಶೃಂಗಸಭೆಯ ಬಳಿಕ ಬಹಿರಂಗವಾಗಿ ಹೇಳಿಕೆ ನೀಡುವ ಮಟ್ಟಕ್ಕೆ ಇದು ಹೋಗಿದೆ. ತೈವಾನ್ ಬಿಸಿ, ಆಸ್ಟ್ರೇಲಿಯ-ಚೀನಾ ಬಿಕ್ಕಟ್ಟು, ಪಶ್ಚಿಮ ಚೀನಾದಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರ ಮೇಲೆ ಚೀನಾ ದಬ್ಬಾಳಿಕೆ, ಯುಎಸ್‌ಎಯಿಂದ ಚಳಿಗಾಲದ ಒಲಿಂಪಿಕ್ಸ್ ಬಹಿಷ್ಕಾರ ಇತ್ಯಾದಿಗಳ ಹಿನ್ನೆಲೆಯಲ್ಲಿ ಇದು ಬಂದಿದೆ. ಉಕ್ರೇನ್ ಕುರಿತ ರಶ್ಯ ನಿಲುವು ಮತ್ತು ತೈವಾನ್ ಕುರಿತ ಚೀನಾದ ಆಕ್ರಮಣಕಾರಿ ನಿಲುವು ಒಂದೇ ರೀತಿಯದ್ದು ಎಂಬುದನ್ನು ಗುರುತಿಸಬೇಕು.

ರಶ್ಯವು ಚೀನಾಕ್ಕೆ ಬೇಕಾದಷ್ಟು ತೈಲ, ಸೇನಾ ಸಲಕರಣೆಗಳನ್ನು ಒದಗಿಸುತ್ತಿದ್ದರೆ, ಚೀನಾವು ಆಧುನಿಕ ತಂತ್ರಜ್ಞಾನಗಳನ್ನು ಒದಗಿಸುತ್ತಿದೆ. ರಶ್ಯದ ಮೇಲಿನ ಪಾಶ್ಚಾತ್ಯರ ಆರ್ಥಿಕ ದಿಗ್ಬಂಧನದಿಂದ ಲಾಭವಾಗುವುದು ಚೀನಾಕ್ಕೇ. ಉದಾರಣೆಗೆ ಪಾಶ್ಚಾತ್ಯರು ತ್ವರಿತ ಹಣಕಾಸು ವರ್ಗಾವಣೆಯ ಸ್ವಿಫ್ಟ್ ವ್ಯವಸ್ಥೆಯಿಂದ ರಶ್ಯವನ್ನು ಹೊರಗೆ ಹಾಕಿದ್ದಾರೆ. ಸೀಮಿತವಾದರೂ ಅಂತಹ ಬದಲಿ ವ್ಯವಸ್ಥೆ ಇರುವುದು ಚೀನಾ ಬಳಿ ಮಾತ್ರ. ಎರಡೂ ದೇಶಗಳ ನಡುವಿನ ಆರ್ಥಿಕ ಸಂಬಂಧ ವ್ಯಾಪಕವಾಗಿದ್ದು, ರಶ್ಯ ಹೆಚ್ಚುಹೆಚ್ಚಾಗಿ ಚೀನಾವನ್ನು ಅವಲಂಬಿಸಬೇಕಾಗುತ್ತದೆ. ಹಿಂದಿನ ರಶ್ಯ ವಿರುದ್ಧದ ಆರ್ಥಿಕ ದಿಗ್ಬಂಧನದ ವೇಳೆ ಅದನ್ನು ಮೇಲೆತ್ತಿದ್ದು, ರಶ್ಯ ಜೊತೆಗಿನ ಚೀನಾದ 30 ವರ್ಷಗಳ ತೈಲ ಮತ್ತು ನೈಸರ್ಗಿಕ ಅನಿಲ ಒಪ್ಪಂದ ಮತ್ತು 400 ಬಿಲಿಯನ್ ಡಾಲರ್‌ಗಳ ಪೈಪ್‌ಲೈನ್ ಒಪ್ಪಂದ. ಇದು ರಶ್ಯದ ರಫ್ತನ್ನು ಶೇ.25ರಷ್ಟು ಹೆಚ್ಚಿಸಲಿದ್ದು, ಚೀನಾದ ಇಂಧನ ತಲೆಬಿಸಿಯನ್ನು ಇಲ್ಲವಾಗಿಸಲಿದೆ. ಇದರ ಪರಿಣಾಮವಾಗಿಯೇ ತೈವಾನ್, ಜಪಾನ್, ದಕ್ಷಿಣ ಕೊರಿಯಾದ ವಿರುದ್ಧ ರಶ್ಯ ತನ್ನ ಒತ್ತಡವನ್ನು ಹೆಚ್ಚಿಸಿದ್ದು, ಈ ಪ್ರದೇಶಗಳಲ್ಲಿ ಚೀನಾ ಜೊತೆ ಜಂಟಿ ಸೈನಿಕ ಅಭ್ಯಾಸಗಳಲ್ಲೂ ಭಾಗಿಯಾಗಿದೆ. ಉಕ್ರೇನ್ ಬಿಕ್ಕಟ್ಟು ತೈವಾನಿನ ಮೇಲಿನ ಪಾಶ್ಚಾತ್ಯರ ಗಮನವನ್ನು ಬೇರೆಡೆಗೆ ಸೆಳೆದಿದೆ.

ಮೋದಿ ಸರಕಾರವು ರಕ್ಷಣೆ ಮತ್ತು ಆರ್ಥಿಕ ಸಹಕಾರ ಕ್ಷೇತ್ರಗಳಲ್ಲಿ ಪರಸ್ಪರ ತದ್ವಿರುದ್ಧ ಹಿತಾಸಕ್ತಿಗಳನ್ನು ಹೊಂದಿರುವ ದೇಶಗಳ ಜೊತೆ ಒಪ್ಪಂದ ಮಾಡಿಕೊಳ್ಳುವ ಮೂರ್ಖತನ ತೋರಿದೆ. ಉದಾರಣೆಗೆ ಬ್ರೆಝಿಲ್, ರಶ್ಯ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ಇರುವ ಬ್ರಿಕ್ಸ್ ಮತ್ತು ಪೆಸಿಫಿಕ್ ಭದ್ರತೆ ಕುರಿತು ಯುಎಸ್‌ಎ, ಜಪಾನ್, ಆಸ್ಟ್ರೇಲಿಯ, ಭಾರತ ಸೇರಿಕೊಂಡು ಚೀನಾ ವಿರುದ್ಧ ಮಾಡಿಕೊಂಡಿರುವ ಕ್ವಾಡ್ ಒಪ್ಪಂದಗಳನ್ನು ನೋಡಬಹುದು. ಇವು ರಶ್ಯ ಹಿತಾಸಕ್ತಿಗಳಿಗೂ ವಿರುದ್ಧವಾಗಿವೆ ಎಂಬುದನ್ನು ಗಮನಿಸಬೇಕು. ಒಟ್ಟಿನಲ್ಲಿ ಈಗಿನ ಪ್ರಶ್ನೆ ಎಂದರೆ, ದೇಶವನ್ನು ಭಾರೀ ಸಂಕಷ್ಟಕ್ಕೆ ತಳ್ಳಬಹುದಾದ ಈ ಗೋಜಲಿನಿಂದ ಹೊರಬರುವ ಸಾಮರ್ಥ್ಯ ಮೋದಿ ಸರಕಾರಕ್ಕೆ ಇದೆಯೇ?.

ಭಾರತಕ್ಕೆ ವ್ಯತಿರಿಕ್ತವಾಗಿ ಚೀನಾ ಅತ್ಯಂತ ಚಾಣಾಕ್ಷತನದಿಂದ ಹೆಜ್ಜೆ ಇಡುತ್ತಿದ್ದು, ಯುರೋಪಿನ ಗಡಿಯಲ್ಲಿ ರಶ್ಯ ನಡೆಸಿದ ಸೈನಿಕ ಅಭ್ಯಾಸಗಳಲ್ಲಿ ಅದು ಭಾಗವಹಿಸಲಿಲ್ಲ. ಏಕೆಂದರೆ, ಬಿಡಿಬಿಡಿ ಐರೋಪ್ಯ ದೇಶಗಳು ಮತ್ತು ತೃತೀಯ ಜಗತ್ತಿನ ದೇಶಗಳ ಜೊತೆ ಅದು ವ್ಯಾಪಕ ವ್ಯಾಪಾರ ಸಂಬಂಧಗಳನ್ನು ಹೊಂದಿದೆ. ಆದುದರಿಂದಲೇ ಅದು ಉಕ್ರೇನ್ ವಿಷಯದಲ್ಲಿ ತೋರಿಕೆಯ ತಟಸ್ಥತೆಯ ಪ್ರಯತ್ನ ಮಾಡುತ್ತಿರುವುದು. ಮೇಲಾಗಿ ರಕ್ಷಣಾ ವಲಯದಲ್ಲಿ ಭಾರತಕ್ಕೆ ವ್ಯತಿರಿಕ್ತವಾಗಿ ಚೀನಾ ಸ್ವಾವಲಂಬನೆ ಹೊಂದಿದ್ದು, ರಫ್ತು ರಾಷ್ಟ್ರವೂ ಆಗಿದೆ. ಇದಕ್ಕೆ ಹೆಚ್ಚುವರಿಯಾಗಿ ಎಲ್ಲರೂ ಮರೆಯುವ ವಿಷಯ ಎಂದರೆ, ರಶ್ಯವು ಚೀನಾ ಜೊತೆ ಅತ್ಯಂತ ಉದ್ದವಾದ ಗಡಿಯನ್ನು ಹೊಂದಿದ್ದು, ಯಾವಾಗ ಬೇಕಾದರೂ, ಬಣ್ಣ ಬದಲಾಯಿಸಿ ರಶ್ಯ ವಿರುದ್ಧ ತೂಗುಗತ್ತಿಯಂತೆ ಬಳಸಬಹುದು. ಎಲ್ಲಾ ಕಡೆಗಳಿಂದ ಬೆದರಿಕೆ ಎದುರಿಸುವುದು ರಶ್ಯಕ್ಕೆ ಸಾಧ್ಯವಾಗದು. ಇಸ್ಪೀಟ್ ಭಾಷೆ ಬಳಸುವುದಾದರೆ ಚೀನಾ ಬಹಳಷ್ಟು ಟ್ರಂಪ್ ಕಾರ್ಡುಗಳನ್ನು ಹೊಂದಿದೆ.

 ಭಾರತದ ಸ್ಥಿತಿ ಇಕ್ಕಟ್ಟಿನಲ್ಲಿ

ಭಾರತದ ಸ್ಥಿತಿಯಂತೂ ಈಗ ಎರಡೂ ಕಡೆಗಳಿಂದ ಹೊಡೆಸಿಕೊಳ್ಳುವ ಮೃದಂಗದಂತಾಗಿದೆ. ರಶ್ಯ ಮತ್ತು ಭಾರತ ನೆಹರೂ ಕಾಲದಿಂದಲೂ ಐತಿಹಾಸಿಕ ಸಂಬಂಧಗಳನ್ನು ಹೊಂದಿರುವುದು ನಿಜ. ಹೀಗಿದ್ದರೂ, ಅದು ನಂತರದಲ್ಲಿ ಯುಎಸ್‌ಎ ಮತ್ತು ಸೋವಿಯತ್ ಒಕ್ಕೂಟದ ನಡುವೆ ಸಮಾನ ದೂರ ಇಟ್ಟುಕೊಂಡ ಅಲಿಪ್ತ ರಾಷ್ಟ್ರಗಳ ಚಳವಳಿ (ಎನ್‌ಎಎಂ)ಯ ನಾಯಕನಾಗಿ ಪ್ರಭಾವಶಾಲಿಯಾಗಿ, ಮೂರನೇ ಜಗತ್ತಿನಲ್ಲಿ ಬೆಂಬಲಿಗರನ್ನೂ, ಎರಡೂ ಬಣಗಳಲ್ಲಿ ಮಿತ್ರರನ್ನೂ ಹೊಂದಿತ್ತು. ಆದರೆ, ಎನ್‌ಡಿಎ ಸರಕಾರ ಬಂದ ಮೇಲೆ ಭಾರತವು ಯುಎಸ್‌ಎಗೆ ಹತ್ತಿರವಾಗುವ ಪ್ರಯತ್ನದಲ್ಲಿ ಇಡೀ ಸಮತೋಲನವನ್ನೇ ಹಾಳುಗೆಡವಿತು. ಮೋದಿ ಬಂದಮೇಲಂತೂ ವೈಯಕ್ತಿಕ ವರ್ಚಸ್ಸು, ವಿಶ್ವಗುರು ಇತ್ಯಾದಿ ನಾರ್ಸಿಸಸ್ ಮನೋವೃತ್ತಿಯ ಭ್ರಮಾಧೀನ ಪೊಳ್ಳು ಕನವರಿಕೆಗಳಿಂದಾಗಿ ಐತಿಹಾಸಿಕವಾಗಿದ್ದ ಭಾರತದ ರಾಜತಾಂತ್ರಿಕ ವಿಶ್ವಾಸಾರ್ಹತೆ ಮತ್ತು ಗೌರವಗಳನ್ನೇ ಎಡೆಬಿಡಂಗಿ ನೀತಿಗಳಿಂದ ಹಾಳುಗೆಡವಲಾಗಿದೆ. ಉಕ್ರೇನ್ ಬಿಕ್ಕಟ್ಟಿನಲ್ಲಿ ಇದು ಬೆತ್ತಲಾಗುತ್ತಿದೆ. ಪ್ರಪಂಚದ ಯಾವುದೇ ದೇಶದಲ್ಲಿ ಬಿಕ್ಕಟ್ಟಾದರೂ, ಸಾವಿರಾರು ಭಾರತೀಯ ಪ್ರಜೆಗಳನ್ನು ಯಾವುದೇ ಪ್ರಚಾರವಿಲ್ಲದೆ ಮೌನವಾಗಿ ಮರಳಿ ತಂದಿರುವಾಗ, ಮೋದಿ ಸರಕಾರ ಮಾತ್ರ ಇಪ್ಪತ್ತು ಸಾವಿರ ಭಾರತೀಯರನ್ನು ಮರಳಿ ತರಲು ಪರದಾಡುತ್ತಿರುವುದೇ ಅಲ್ಲದೆ, ಅದರಿಂದ ಅಗ್ಗದ ಪ್ರಚಾರ ಮತ್ತು ಮತಗಳ ಲಾಭ ಪಡೆಯಲು ಹವಣಿಸುತ್ತಿದೆ. ಈ ವೈಫಲ್ಯವನ್ನು ಮುಚ್ಚಿ ಹಾಕಲು ಮೋದಿ ಭಕ್ತರು ಮತ್ತು ಮಂತ್ರಿಗಳು ಆ ಬಡಪಾಯಿ ವಿದ್ಯಾರ್ಥಿಗಳನ್ನೇ ದೂರುವ, ಅಶ್ಲೀಲವಾಗಿ ನಿಂದಿಸುವ, ಮೋದಿ ಸಾಮರ್ಥ್ಯದ ಬಗ್ಗೆ ನಿಮಗಾಗಿ ರಶ್ಯ ಆರು ಗಂಟೆ ಯುದ್ಧ್ಧ ನಿಲ್ಲಿಸಿತು ಎಂದು ಸುಳ್ಳು ಬಡಾಯಿ ಕೊಚ್ಚುವ ಕೀಳು ತಂತ್ರದಲ್ಲಿ ತೊಡಗಿದ್ದಾರೆ. ಯುದ್ಧ್ಧ ನಿಲ್ಲಿಸಿದ ಬಡಾಯಿಯಂತೂ ಉಕ್ರೇನ್ ಮತ್ತು ಯುಎಸ್‌ಎಯಲ್ಲಿ ಭಾರತವು ರಶ್ಯ ಜೊತೆ ಶಾಮೀಲಾಗಿರುವ ಸಂಶಯ ಮೂಡಿಸಿ, ಭಾರತವು ಇದು ಸುಳ್ಳೆಂದು ಸಮಜಾಯಿಸಿ ನೀಡುವ ಇರಿಸುಮುರಿಸಿಗೆ ಗುರಿಯಾಯಿತು. ರಾಜತಾಂತ್ರಿಕ ವ್ಯವಹಾರಗಳಲ್ಲಿ ಮಾತಿನಷ್ಟೇ ಮೌನಕ್ಕೆ ಮಹತ್ವವಿದೆ ಮತ್ತು ಬಡಾಯಿಗೆ ಅಲ್ಲಿ ಸ್ಥಾನವಿಲ್ಲ ಎಂದು ಈ ಭ್ರಮಾಧೀನರಿಗೆ ಅರ್ಥವಾದಂತಿಲ್ಲ.

ಒಂದು ಕಡೆ ನೆಹರೂ ಮತ್ತು ಅಲಿಪ್ತ ನೀತಿಯನ್ನು ದೂರುತ್ತಲೇ, ಭಾರತದ ಹಿತಾಸಕ್ತಿಗಳ ರಕ್ಷಣೆಗಾಗಿ ತಟಸ್ಥ ಧೋರಣೆ ಅನುಸರಿಸಲಾಗುತ್ತಿದೆ ಎಂದು ಪ್ರತಾಪ ಸಿಂಹರಂತಹ ಸಂಸದರು ಎಡಬಿಡಂಗಿ ವಿರೋಧಾಭಾಸದ ಹೇಳಿಕೆ ನೀಡುತ್ತಾರೆ. ಸೋವಿಯತ್ ಒಕ್ಕೂಟ ಇದ್ದ ಸ್ಥಿತಿಗೂ ಈಗಿನದಕ್ಕೂ ವ್ಯತ್ಯಾಸವಿದೆ. ಹಿಂದೆ ಬಂಡವಾಳಶಾಹಿ-ಕಮ್ಯುನಿಸಂ ಶೀತಲ ಯುದ್ಧ್ಧವಿತ್ತು. ಭಾರತವು ಎರಡರ ಕಸಿ ಮಾಡಲು ಯತ್ನಿಸಿತ್ತು. ಇಂದು ಎಲ್ಲೆಲ್ಲೂ ಬಂಡವಾಳ ಶಾಹಿ ವ್ಯವಸ್ಥೆಯಿದೆ. ಚೀನಾ ಕೂಡಾ ತನ್ನದೇ ಬ್ರಾಂಡಿನ ಬಂಡವಾಳವಾದ ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ನಿಂತಿರುವುದು ಅಧಿಕಾರಯುತ ತಟಸ್ಥ ಸ್ಥಾನದಲ್ಲಿ ಅಲ್ಲ; ಬದಲಾಗಿ ಎಡಬಿಡಂಗಿ ಗೋಡೆಯ ಮೇಲೆ ಎಂಬುದನ್ನು ಇಂತಹವರು ಒಪ್ಪಿಕೊಳ್ಳುವುದಿಲ್ಲ.

ತಟಸ್ಥ ನೀತಿ ಒಳ್ಳೆಯದೇ. ಆದರೆ, ಅಣ್ವಸ್ತ್ರ ಹೊಂದಿದ ಸರ್ವಾಧಿಕಾರಿಯೊಬ್ಬ ಅಣ್ವಸ್ತ್ರ ಇರದ ನೆರೆಯ ದೊಡ್ಡ ಪ್ರಜಾಪ್ರಭುತ್ವವೊಂದರ ಮೇಲೆ ದಾಳಿ ಮಾಡಿದಾಗ ತಟಸ್ಥವಾಗಿ ಇರಲು ಸಾಧ್ಯವೇ? ಒಂದು ವೇಳೆ ಹಾಗಿದ್ದರೂ, ತನ್ನ ನೈತಿಕ ನಿಲುವನ್ನು ಸ್ಪಷ್ಟಪಡಿಸಬೇಕಿತ್ತು. ಆದರೆ, ಹಾಗೆ ಮಾಡಲಾಗದ ಸ್ಥಿತಿಗೆ ಭಾರತವನ್ನು ತಂದು ಮೋದಿ ಸರಕಾರ ನಿಲ್ಲಿಸಿದೆ. ಅದು ಏಕೆ ಎಂಬುದನ್ನು ಚುಟುಕಾಗಿ ನೋಡೋಣ.

ಭಾರತವು ಮಿಲಿಟರಿ ಸಲಕರಣೆಗಳು, ಬಿಡಿ ಭಾಗಗಳು ಮತ್ತು ತಂತ್ರಜ್ಞಾನಗಳಿಗೆ ರಶ್ಯವನ್ನು ಬಹುವಾಗಿ ಅವಲಂಬಿಸಿದೆ. ಈ ಅವಲಂಬನೆ ಈಗಾಗಲೇ ಕೊಳ್ಳಲಾಗಿರುವ ಸಲಕರಣೆಗಳಿಗೆ ಸಂಬಂಧಿಸಿದಂತೆ ದಶಕಗಳ ಕಾಲ ಮುಂದುವರಿಯಲಿದೆ. ಜೊತೆಗೆ ಭಾರತವು ಎಲ್ಲರನ್ನೂ ಮೆಚ್ಚಿಸುವ ಭರದಲ್ಲಿ ಫ್ರಾನ್ಸ್ (ರಫೇಲ್), ಯುಎಸ್‌ಎ (22,000 ಕೋಟಿ ರೂ.ಗಳ 30 ಡ್ರೋನ್, ಹೆಲಿಕಾಪ್ಟರ್ ಇತ್ಯಾದಿ) ಇಸ್ರೇಲ್ (ಎರಡನೇ ದೊಡ್ಡ ರಫ್ತುದಾರ, ಕ್ಷಿಪಣಿ ವ್ಯವಸ್ಥೆ ಇತ್ಯಾದಿ) ಜೊತೆಗೆ ಶಸ್ತ್ರಾಸ್ತ್ರ ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿದೆ. ಈ ಕಾರಣದಿಂದಲೂ ಅದು ಆ ದೇಶಗಳ ಮೇಲೆ ಅವಲಂಬಿತವಾಗಿದೆ. ಭಾರತವು ರಶ್ಯ ಜೊತೆ ಮಾಡಿಕೊಂಡಿರುವ ಎಸ್-400 ಮಲ್ಟಿ ಬ್ಯಾರೆಲ್ ಕ್ಷಿಪಣಿ ಒಪ್ಪಂದವನ್ನು ಮುಂದುವರಿಸಿದರೆ, ಯುಎಸ್‌ಎ ಭಾರತದ ವಿರುದ್ಧ ಕೆಲವು ದಿಗ್ಬಂಧನಗಳನ್ನು ಹೇರುವ ಸಾಧ್ಯತೆಗಳಿವೆ.

ೊತೆಗೆ ಅದು ಯುಎಸ್‌ಎ ಮತ್ತು ಐರೋಪ್ಯ ದೇಶಗಳು ಮತ್ತು ಆಸ್ಟ್ರೇಲಿಯ, ದಕ್ಷಿಣ ಕೊರಿಯಾ ಮುಂತಾದ ದೇಶಗಳೊಂದಿಗೆ ಕೋಟ್ಯಂತರ ರೂಪಾಯಿಗಳ ವ್ಯಾಪಾರ ವಹಿವಾಟು ಹೊಂದಿರುವುದು ಮಾತ್ರವಲ್ಲ ಲಕ್ಷಾಂತರ ಭಾರತೀಯರು ಆ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಷ್ಟು ಮಾತ್ರವಲ್ಲ; ಭಾರತವು ತೈಲಕ್ಕಾಗಿ ಅವಲಂಬಿಸುತ್ತಿರುವ ದೇಶಗಳೆಲ್ಲವೂ ಪಾಶ್ಚಾತ್ಯ ಬಣದಲ್ಲಿವೆ. ಇರಾನ್ ಜೊತೆಗಿನ ತೈಲ ಒಪ್ಪಂದವೂ ಯುಎಸ್‌ಎ ಒತ್ತಡದ ಎದುರು ಮೋದಿ ಸರಕಾರದ ಎಡಬಿಡಂಗಿ ನೀತಿಯಿಂದಲೇ ನೆನಗುದಿಗೆ ಬಿತ್ತು.

 ಇಷ್ಟು ಮಾತ್ರವಲ್ಲದೆ ಮೋದಿ ಸರಕಾರವು ರಕ್ಷಣೆ ಮತ್ತು ಆರ್ಥಿಕ ಸಹಕಾರ ಕ್ಷೇತ್ರಗಳಲ್ಲಿ ಪರಸ್ಪರ ತದ್ವಿರುದ್ಧ ಹಿತಾಸಕ್ತಿಗಳನ್ನು ಹೊಂದಿರುವ ದೇಶಗಳ ಜೊತೆ ಒಪ್ಪಂದ ಮಾಡಿಕೊಳ್ಳುವ ಮೂರ್ಖತನ ತೋರಿದೆ. ಉದಾರಣೆಗೆ ಬ್ರೆಝಿಲ್, ರಶ್ಯ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ಇರುವ ಬ್ರಿಕ್ಸ್ ಮತ್ತು ಪೆಸಿಫಿಕ್ ಭದ್ರತೆ ಕುರಿತು ಯುಎಸ್‌ಎ, ಜಪಾನ್, ಆಸ್ಟ್ರೇಲಿಯ, ಭಾರತ ಸೇರಿಕೊಂಡು ಚೀನಾ ವಿರುದ್ಧ ಮಾಡಿಕೊಂಡಿರುವ ಕ್ವಾಡ್ ಒಪ್ಪಂದಗಳನ್ನು ನೋಡಬಹುದು. ಇವು ರಶ್ಯ ಹಿತಾಸಕ್ತಿಗಳಿಗೂ ವಿರುದ್ಧವಾಗಿವೆ ಎಂಬುದನ್ನು ಗಮನಿಸಬೇಕು. ಒಟ್ಟಿನಲ್ಲಿ ಈಗಿನ ಪ್ರಶ್ನೆ ಎಂದರೆ, ದೇಶವನ್ನು ಭಾರೀ ಸಂಕಷ್ಟಕ್ಕೆ ತಳ್ಳಬಹುದಾದ ಈ ಗೋಜಲಿನಿಂದ ಹೊರಬರುವ ಸಾಮರ್ಥ್ಯ ಮೋದಿ ಸರಕಾರಕ್ಕೆ ಇದೆಯೇ?

Writer - ನಿಖಿಲ್ ಕೋಲ್ಪೆ

contributor

Editor - ನಿಖಿಲ್ ಕೋಲ್ಪೆ

contributor

Similar News