ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ: ಏಳು ದಾಖಲೆಗಳನ್ನು ಸೃಷ್ಟಿಸಿದ ಆದಿತ್ಯನಾಥ್, ಬಿಜೆಪಿ

Update: 2022-03-10 08:15 GMT

ಹೊಸದಿಲ್ಲಿ: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಮುನ್ನಡೆ ಹಾಗೂ ಗೋರಖ್ಪುರ (ನಗರ) ಕ್ಷೇತ್ರದಿಂದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಸನ್ನಿಹಿತ ಗೆಲುವಿನೊಂದಿಗೆ ಹಲವು ದಾಖಲೆಗಳು ಸೃಷ್ಟಿಯಾಗಿವೆ. ಗುರುವಾರ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಬಿಜೆಪಿ ಹಾಗೂ  ಆದಿತ್ಯನಾಥ್ ಕನಿಷ್ಠ ಏಳು ದಾಖಲೆಗಳನ್ನು ಸೃಷ್ಟಿಸುವ ಹಾದಿಯಲ್ಲಿದ್ದಾರೆ.

1. ಆದಿತ್ಯನಾಥ್ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಹಾಗೂ ಎರಡನೇ ಅವಧಿಗೆ ಆಯ್ಕೆಯಾಗಲಿರುವ ಮೊದಲ ಮುಖ್ಯಮಂತ್ರಿ

ಭಾರತದ ಅತ್ಯಂತ ಜನಸಂದಣಿ ಇರುವ  ರಾಜ್ಯ ಉತ್ತರ ಪ್ರದೇಶದ ಮೊದಲ ಅಸೆಂಬ್ಲಿ ಮೇ 20, 1952 ರಂದು ರಚನೆಯಾಯಿತು. ರಾಜ್ಯವು ಸುಮಾರು 70 ವರ್ಷಗಳಲ್ಲಿ 21 ಮುಖ್ಯಮಂತ್ರಿಗಳನ್ನು ಕಂಡಿದೆ. 70 ವರ್ಷಗಳ ಉತ್ತರಪ್ರದೇಶದ ಚುನಾವಣಾ ಇತಿಹಾಸದಲ್ಲಿ ಐದು ವರ್ಷಗಳ ಪೂರ್ಣ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಹಾಗೂ  ಸತತ ಎರಡನೇ ಅವಧಿಗೆ ಜಯ ಗಳಿಸಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಆದಿತ್ಯನಾಥ್ ಸಜ್ಜಾಗಿದ್ದಾರೆ.

2. ಆದಿತ್ಯನಾಥ್ ಸತತ ಎರಡನೇ ಅವಧಿಗೆ ಗೆದ್ದ ಐದನೇ ಮುಖ್ಯಮಂತ್ರಿ 

ಆದಿತ್ಯನಾಥ್ ಸೇರಿದಂತೆ ಐವರು ಮುಖ್ಯಮಂತ್ರಿಗಳು ಮಾತ್ರ ಉತ್ತರಪ್ರದೇಶದಲ್ಲಿ ಸತತ ಎರಡನೇ ಅವಧಿಗೆ ಗೆದ್ದಿದ್ದಾರೆ. 1957 ರಲ್ಲಿ ಸಂಪೂರ್ಣಾನಂದ, 1962 ರಲ್ಲಿ ಚಂದ್ರಭಾನು ಗುಪ್ತಾ, 1974 ರಲ್ಲಿ ಹೇಮಾವತಿ ನಂದನ್ ಬಹುಗುಣ ಹಾಗೂ  1985 ರಲ್ಲಿ ನಾರಾಯಣ್ ದತ್ ತಿವಾರಿ ಅವರು ಈ ಹಿಂದೆ ಅವಧಿ ಪೂರ್ಣಗೊಳಿಸಿರುವ ನಾಲ್ವರು ಮುಖ್ಯಮಂತ್ರಿಗಳಾಗಿದ್ದಾರೆ.

3. 37 ವರ್ಷಗಳ ಬಳಿಕ ಅಧಿಕಾರ ಉಳಿಸಿಕೊಂಡ ಮೊದಲ ಮುಖ್ಯಮಂತ್ರಿ

ಕಾಂಗ್ರೆಸ್ ನ ಎನ್ಡಿ ತಿವಾರಿ ಅವರು 1985 ರಲ್ಲಿ ರಾಜ್ಯ ಚುನಾವಣೆ ನಡೆದಾಗ ಅವಿಭಜಿತ ಉತ್ತರಪ್ರದೇಶದ ಸಿಎಂ ಆಗಿದ್ದರು. ಆಗ ಕಾಂಗ್ರೆಸ್ ಜಯ ಗಳಿಸಿತು ಹಾಗೂ  ತಿವಾರಿ ಅವರು ಸತತ ಎರಡನೇ ಅವಧಿಗೆ ಸಿಎಂ ಸ್ಥಾನವನ್ನು ಉಳಿಸಿಕೊಳ್ಳಲು ಸಫಲರಾದರು. ಆ ಬಳಿಕ ಸತತ ಎರಡನೇ ಅವಧಿಗೆ ಸಿಎಂ ಕುರ್ಚಿ ಉಳಿಸಿಕೊಳ್ಳುವಲ್ಲಿ ಯಾವ ಮುಖ್ಯಮಂತ್ರಿಯೂ ಯಶಸ್ವಿಯಾಗಿರಲಿಲ್ಲ. ಆ ಬಳಿಕ ಈ ಸಾಧನೆ ಮಾಡಿದ ಮೊದಲ ಸಿಎಂ ಆದಿತ್ಯನಾಥ್.

4. ಅಧಿಕಾರ ಉಳಿಸಿಕೊಂಡ ಮೊದಲ ಬಿಜೆಪಿ ಮುಖ್ಯಮಂತ್ರಿ ಆದಿತ್ಯನಾಥ್ 

ಉತ್ತರಪ್ರದೇಶ ಇದುವರೆಗೆ ನಾಲ್ವರು ಬಿಜೆಪಿ ಸಿಎಂಗಳನ್ನು ಕಂಡಿದೆ. ಆದಿತ್ಯನಾಥ್ ಅವರಿಗಿಂತ ಮೊದಲು ಕಲ್ಯಾಣ್ ಸಿಂಗ್, ರಾಮ್ ಪ್ರಕಾಶ್ ಗುಪ್ತಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಹುದ್ದೆಯನ್ನು ಅಲಂಕರಿಸಿದ್ದರು. ಆದಾಗ್ಯೂ, ಅವರಲ್ಲಿ ಯಾರೂ ಸತತ ಎರಡನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದಿತ್ಯನಾಥ್ ಈ ಸಾಧನೆ ಮಾಡಿದ ಮೊದಲ ಬಿಜೆಪಿ ಸಿಎಂ.

5. 15 ವರ್ಷಗಳಲ್ಲಿ ಮೊದಲ ʼಶಾಸಕ ಸಿಎಂʼ

ಆದಿತ್ಯನಾಥ್ ಅವರು ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಅವರು 15 ವರ್ಷಗಳಲ್ಲಿ ಮೊದಲ ಶಾಸಕ (ವಿಧಾನಸಭೆಯ ಸದಸ್ಯ) ಸಿಎಂ ಆಗಲಿದ್ದಾರೆ. ಅವರಿಗಿಂತ ಮೊದಲು, ಮಾಯಾವತಿ ಅವರು 2007 ಹಾಗೂ  2012 ರ ನಡುವೆ ಸಿಎಂ ಆಗಿದ್ದಾಗ ಎಂಎಲ್ಸಿ (ವಿಧಾನ ಪರಿಷತ್ ಸದಸ್ಯರಾಗಿದ್ದರು) ಆಗಿದ್ದರು. ಅಖಿಲೇಶ್ ಯಾದವ್ ಅವರು 2012 ಹಾಗೂ  2017 ರ ನಡುವೆ ಸಿಎಂ ಆಗಿದ್ದಾಗ ಕೂಡ ಎಂಎಲ್ಸಿ ಆಗಿದ್ದರು. 

ಆದಿತ್ಯನಾಥ್ ಅವರು ಸಿಎಂ ಆಗಿ ಆಯ್ಕೆಯಾದಾಗ ಲೋಕಸಭೆ ಸಂಸದರಾಗಿದ್ದರು. ಅಧಿಕಾರ ವಹಿಸಿಕೊಂಡ ನಂತರ, ಅವರು ಆರು ತಿಂಗಳೊಳಗೆ ಶಾಸಕರಾಗುವ ಬದಲು ಎಂಎಲ್ ಸಿ ಆಗಲು ಬಯಸಿದರು. ಈ ಪ್ರಕ್ರಿಯೆಯಲ್ಲಿ ಅವರು ಯುಪಿಯ ನಾಲ್ಕನೇ ಎಂಎಲ್ಸಿ ಸಿಎಂ ಆದರು. ಬಿಜೆಪಿಯ ರಾಮ್ ಪ್ರಕಾಶ್ ಗುಪ್ತಾ ಅವರು ನವೆಂಬರ್ 1999 ರಲ್ಲಿ ರಾಜ್ಯದ ಮೊದಲ ಎಂಎಲ್ಸಿ ಸಿಎಂ ಆಗಿದ್ದರು.

6. ಅಧಿಕಾರಾವಧಿ ಪೂರ್ಣಗೊಳಿಸಿದ ಮೂರನೇ ಸಿಎಂ

ಆದಿತ್ಯನಾಥ್ ಈಗಾಗಲೇ ತನ್ನ ಹೆಸರಲ್ಲಿ ದಾಖಲೆ ನಿರ್ಮಿಸಿದ್ದಾರೆ. 70 ವರ್ಷಗಳಲ್ಲಿ 21 ಸಿಎಂಗಳ ಪೈಕಿ ಮೂವರು ಮಾತ್ರ ಐದು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿದ್ದಾರೆ. ಬಹುಜನ ಸಮಾಜ ಪಕ್ಷದ ಅಧಿನಾಯಕಿ ಮಾಯಾವತಿ ಮೊದಲಿಗರು (2007-2012) ಹಾಗೂ  ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಎರಡನೆಯವರು (2012-2017).

7. ನೋಯ್ಡಾ ಕುರಿತ ಮೂಢನಂಬಿಕೆ ಮುರಿದ ಮೊದಲ ಮುಖ್ಯಮಂತ್ರಿ

"ನೋಯ್ಡಾ ಕುರಿತ ಮೂಢನಂಬಿಕೆ" ಉತ್ತರಪ್ರದೇಶದ ರಾಜಕೀಯದಲ್ಲಿ ಭಯ ಹುಟ್ಟಿಸುವ ವಿದ್ಯಮಾನವಾಗಿದೆ. ನೋಯ್ಡಾ ಬಗೆಗಿನ ಮೂಢನಂಬಿಕೆಯ ಪ್ರಕಾರ, ಯಾವ ಸಿಎಂ ತಮ್ಮ ಅಧಿಕಾರಾವಧಿಯಲ್ಲಿ ಈ ನಗರಕ್ಕೆ ಭೇಟಿ ನೀಡುತ್ತಾರೋ ಅವರು ಮುಂದಿನ ಚುನಾವಣೆಯಲ್ಲಿ ಸೋಲುತ್ತಾರೆ ಅಥವಾ ಅವರು ಅವಧಿಯನ್ನು ಪೂರ್ಣಗೊಳಿಸುವುದಿಲ್ಲ. ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಹಾಗೂ  ಆದಿತ್ಯನಾಥ್ ಇಬ್ಬರೂ ಇಂತಹ ಮೂಢನಂಬಿಕೆಗಳನ್ನು ನಿರ್ಲಕ್ಷಿಸಿದರು ಹಾಗೂ  ಡಿಸೆಂಬರ್ 25, 2018 ರಂದು ದಿಲ್ಲಿ ಮೆಟ್ರೋದ ಮೆಜೆಂಟಾ ಲೈನ್ ಅನ್ನು ಉದ್ಘಾಟಿಸಲು ನೋಯ್ಡಾಗೆ ಭೇಟಿ ನೀಡಿದ್ದರು.

ಮೋದಿ ಮತ್ತು ಆದಿತ್ಯನಾಥ್ ಅವರು ಮುಂದಿನ ಲೋಕಸಭೆ ಹಾಗೂ  ಯುಪಿ ವಿಧಾನಸಭಾ ಚುನಾವಣೆಯಲ್ಲಿ ಸೋಲುತ್ತಾರೆ ಎಂದು ಅಖಿಲೇಶ್ ಯಾದವ್ ನಂತರ ಪ್ರತಿಕ್ರಿಯಿಸಿದ್ದರು. ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಗೆದ್ದು ಬಂದರೆ, ಆದಿತ್ಯನಾಥ್ ಕೂಡ ಗೆದ್ದು ಬರುವ ಹಾದಿಯಲ್ಲಿದ್ದಾರೆ.

ಅಖಿಲೇಶ್ ಅವರ ತಂದೆ ಮುಲಾಯಂ ಸಿಂಗ್ ಯಾದವ್, ಕಲ್ಯಾಣ್ ಸಿಂಗ್ ಹಾಗೂ ರಾಜನಾಥ್ ಸಿಂಗ್ ಅವರು ಸಿಎಂ ಆಗಿದ್ದಾಗ ನೋಯ್ಡಾಕ್ಕೆ ಭೇಟಿ ನೀಡಲಿಲ್ಲ. ಅಕ್ಟೋಬರ್ 2000 ಹಾಗೂ  ಮಾರ್ಚ್ 2002 ರ ನಡುವೆ ಆಗಿನ ಯುಪಿ  ಸಿಎಂ ಆಗಿದ್ದ ರಾಜನಾಥ್ ಸಿಂಗ್ ಅವರು ನೋಯ್ಡಾ ಬದಲಿಗೆ ದಿಲ್ಲಿಯಿಂದ ದಿಲ್ಲಿ-ನೋಯ್ಡಾ-ದಿಲ್ಲಿ (ಡಿಎನ್ಡಿ) ಫ್ಲೈವೇ ಅನ್ನು ಉದ್ಘಾಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News