ಕೊರೋನ ಕಾಲದಲ್ಲಿ ಶಾಲೆ ಮುಚ್ಚುಗಡೆಯಿಂದ ಹಿಂದುಳಿದ ಒಂದಿಡೀ ತಲೆಮಾರು
ಬಾಲಕಿಯರು ಬಾಲಕರಿಗಿಂತಲೂ ಹೆಚ್ಚಿನ ಕಷ್ಟವನ್ನು ಅನುಭವಿಸಿದರು. ಬಡವರು ಶ್ರೀಮಂತರಿಗಿಂತ ಹೆಚ್ಚು ನರಳಿದರು. ತಮ್ಮ ಹೆತ್ತವರನ್ನು ಕಡು ಬಡತನದಿಂದ ಪಾರು ಮಾಡುವ ಸಣ್ಣ ಅವಕಾಶವೊಂದನ್ನು ಈ ಅವಕಾಶವಂಚಿತ ಮಕ್ಕಳು ಹೊಂದಿದ್ದರು. ಆದರೆ ಶಾಲೆಗಳು ಅನಿರ್ದಿಷ್ಟಾವಧಿಗೆ ಮುಚ್ಚಿದ ಕಾರಣ ಮಕ್ಕಳು ಆ ಅವಕಾಶವನ್ನೂ ಕಳೆದುಕೊಂಡರು. ಅಷ್ಟೇ ಅಲ್ಲ, ಇತರ ಮಕ್ಕಳೊಂದಿಗೆ ಸಮಯವನ್ನು ಕಳೆಯುವ ಅವಕಾಶವನ್ನು ಹಾಗೂ ತಮ್ಮ ಪೌಷ್ಟಿಕ ಆಹಾರವನ್ನೂ ಕಳೆದುಕೊಂಡರು.
‘‘ಶಿಕ್ಷಕರು ವಾಟ್ಸ್‌ಆ್ಯಪ್‌ನಲ್ಲಿ ಪಾಠ ಮಾಡುತ್ತಾರೆ ಎನ್ನುವುದನ್ನು ನಾನು ಕೇಳಿದ್ದೇನೆ’’ ಎಂದು 13 ವರ್ಷದ ಹಮೀದುಲ್ ಇಸ್ಲಾಮ್ ಹೇಳುತ್ತಾನೆ. ‘‘ಆದರೆ ನನ್ನಲ್ಲಿ ದೊಡ್ಡ ಫೋನ್ (ಸ್ಮಾರ್ಟ್‌ಫೋನ್) ಇಲ್ಲ. ಒಂದು ಸಣ್ಣ (ಬೇಸಿಕ್) ಫೋನ್ ತೆಗೆದುಕೊಳ್ಳುವ ಸಾಮರ್ಥ್ಯವೂ ನಮ್ಮಲ್ಲಿಲ್ಲ. ನಾನು ಹೇಗೆ ಕಲಿಯುವುದು?’’ ಎಂದು ಅವನು ಪ್ರಶ್ನಿಸುತ್ತಾನೆ.
ನಾಲ್ಕು ಮಕ್ಕಳ ಪೈಕಿ ಹಮೀದುಲ್ ಇಸ್ಲಾಮ್ ಅತ್ಯಂತ ಕಿರಿಯ. ಅವರ ಕುಟುಂಬವು ಅಸ್ಸಾಮ್‌ನ ದೈತ್ಯ ಬ್ರಹ್ಮಪುತ್ರ ನದಿಯಲ್ಲಿರುವ ನೂರಾರು ಹೂಳು ದ್ವೀಪಗಳ ಪೈಕಿ ಒಂದರಲ್ಲಿ ವಾಸಿಸುತ್ತಿದೆ. ಈ ಹೂಳು ದ್ವೀಪಗಳಿಗೆ ‘ಚಾರ್’ ಎನ್ನುತ್ತಾರೆ.
‘‘ಇಂದು ದೊಡ್ಡ ಫೋನ್‌ಗಳನ್ನು ಹೊಂದಿದವರು ಮಾತ್ರ ಪರೀಕ್ಷೆಗೆ ಕುಳಿತುಕೊಳ್ಳಬಹುದಾಗಿದೆ’’ ಎಂದರು. ‘‘ದೊಡ್ಡ ಫೋನ್ ತರಲು ನಮ್ಮಲ್ಲಿ ಹಣವಿಲ್ಲ. ನಮಗೆ ಸಹಾಯ ಮಾಡುವವರು ಯಾರೂ ಇಲ್ಲ’’ ಎಂದು ಹಮೀದುಲ್ ಇಸ್ಲಾಮ್ ಹೇಳುತ್ತಾನೆ.
‘‘ನಾವು ಊಟ ಮಾಡುವುದೇ ಕಷ್ಟ. ಮತ್ತೆ ನಾವು ಟ್ಯೂಶನ್‌ಗೆ ಹೋಗುವುದು ಹೇಗೆ?’’ ಎಂದು ಅವನು ಪ್ರಶ್ನಿಸುತ್ತಾನೆ. ‘‘ನನಗೆ ಕಲಿಸಿ ಎಂದು ನನ್ನ ಅಣ್ಣ-ಅಕ್ಕಂದಿರಲ್ಲಿ ಕೇಳುವಂತಿಲ್ಲ. ಅವರಿಗೆ ಕಲಿಯುವ ಅವಕಾಶವೇ ಸಿಕ್ಕಿಲ್ಲ. ಯಾಕೆಂದರೆ ಅವರನ್ನು ಶಾಲೆಗೆ ಕಳುಹಿಸುವ ಸಾಮರ್ಥ್ಯ ನಮ್ಮ ಹೆತ್ತವರಲ್ಲಿರಲಿಲ್ಲ. ನನಗೆ ಅರ್ಥವಾಗದ ಯಾವುದಾದರೂ ವಿಷಯವನ್ನು ವಿವರಿಸಿ ಎಂದು ನಾನು ಅವರನ್ನು ಕೇಳಿದರೆ, ಅವರಿಗೆ ನಾಚಿಕೆಯಾಗುತ್ತದೆ. ಯಾಕೆಂದರೆ ಅವರಿಗೆ ಅದು ಗೊತ್ತಿಲ್ಲ’’.
‘‘ಕೊರೋನ ವೈರಸ್ ಸಾಂಕ್ರಾಮಿಕದ ದಾಳಿಯ ಮೊದಲು, ನಾನು ಮತ್ತು ನನ್ನ ಸಹೋದರರು ನಮ್ಮ ಮನೆ ಮತ್ತು ನಮ್ಮ ಹೊಲಗಳಲ್ಲಿನ ಎಲ್ಲ ಕೆಲಸವನ್ನು ಮಾಡುತ್ತಿದ್ದೆವು. ಕೆಲವು ಸಲ ತಡವಾಗುತ್ತಿತ್ತು. ನನಗೆ ಸರಿಯಾದ ಸಮಯಕ್ಕೆ ಶಾಲೆ ತಲುಪಲು ಆಗುತ್ತಿರಲಿಲ್ಲ’’ ಎಂದು ಅವನು ಹೇಳುತ್ತಾನೆ. ‘‘ಶಾಲೆಯು ಇನ್ನೊಂದು ದ್ವೀಪದಲ್ಲಿದೆ. ನಾನು ದೋಣಿಯಲ್ಲಿ ಹೋಗಬೇಕಾಗುತ್ತಿತ್ತು. ದೋಣಿಯಲ್ಲಿ ಹೋಗಿ ಬರಲು 10 ರೂಪಾಯಿ ಬೇಕಾಗುತ್ತಿತ್ತು’’.
ಹಲವು ದಿನಗಳಲ್ಲಿ ಈ ಮೊತ್ತವನ್ನು ಹೊಂದಿಸಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಕೆಲವು ದಿನಗಳಲ್ಲಿ ಬಾಳೆ ಗಿಡಗಳ ತೆಪ್ಪವೊಂದನ್ನು ನಿರ್ಮಿಸಿ ನಮ್ಮ ದನಕ್ಕೆ ಹುಲ್ಲು ತರಲು ನದಿ ದಾಟುತ್ತಿದ್ದೆ’’ ಎಂದು ಆತ ಹೇಳುತ್ತಾನೆ.
‘‘ನನಗೆ ಕಾಪಿ ಪುಸ್ತಕ ಮತ್ತು ಪೆನ್ನು ಖರೀದಿಸಬೇಕಾಗಿದೆ. ಆದರೆ ನಮ್ಮಲ್ಲಿ ಅಕ್ಕಿ ತರಲೂ ಹಣವಿಲ್ಲ’’ ಎನ್ನುತ್ತಾನೆ.
ದಿನಗೂಲಿ ಕಾರ್ಮಿಕರಾಗಿರುವ ಅವನ ತಂದೆಯ ಬೆನ್ನುಮೂಳೆ ಅಪಘಾತವೊಂದರಲ್ಲಿ ಮುರಿದಿದೆ. ‘‘ಅವರ ಚಿಕಿತ್ಸೆಗೆ ನಮ್ಮಲ್ಲಿ ಹಣವಿಲ್ಲ. ನಮ್ಮ ಸಾಲಗಳನ್ನು ತೀರಿಸುವುದಕ್ಕಾಗಿ ನಾವು ನಮ್ಮ ದನ ಮತ್ತು ಅದರ ಕರುವನ್ನು ಮಾರಿದೆವು’’ ಎಂದು ಹಮೀದುಲ್ ಇಸ್ಲಾಮ್ ಹೇಳುತ್ತಾನೆ.
‘‘ಶಾಲಾ ಸಮವಸ್ತ್ರವನ್ನು ಖರೀದಿಸುವುದಕ್ಕಾಗಿ ನನ್ನ ತಾಯಿ ತುಂಬಾ ಕಷ್ಟಪಟ್ಟರು. ಅವರು ಬಣ್ಣದ ಸಮವಸ್ತ್ರವನ್ನು ಖರೀದಿಸಬೇಕಾಗಿತ್ತು, ಆದರೆ ಬಿಳಿಯದ್ದನ್ನು ಖರೀದಿಸಿದರು. ಅದಕ್ಕಾಗಿ ಶಿಕ್ಷಕರು ನನ್ನನ್ನು ಶಿಕ್ಷಿಸಿದರು. ಆದರೆ, ನಾನು ಏನು ಮಾಡಲಿ? ನಾನು ಮನೆಗೆ ಬಂದು ಹೆತ್ತವರಿಗೆ ಹೇಳಿದೆ. ಅವರು ಹೇಳಿದರು: ‘ನಾವು ಬದುಕುವುದೇ ಹೀಗೆ. ನೀನು ಯಾಕೆ ಅರ್ಥ ಮಾಡಿಕೊಳ್ಳುವುದಿಲ್ಲ? ನಾವು ಬಡವರು’. ಶಾಲೆಯಲ್ಲಿ ಇತರ ವಿದ್ಯಾರ್ಥಿಗಳು ನನ್ನನ್ನು ನೋಡಿ ನಗುತ್ತಾರೆ. ‘ಅವನನ್ನು ನೋಡಿ, ಅವನ ತಂದೆ ಒಬ್ಬ ದಿನಗೂಲಿ ಕಾರ್ಮಿಕ’ ಎಂದು ಅವರು ಹೇಳುತ್ತಾರೆ. ನಾನು ಅದನ್ನು ಲೆಕ್ಕಿಸುವುದಿಲ್ಲ. ಬದಲಿಗೆ, ನಾನು ನನ್ನ ಸಮಸ್ಯೆಗಳತ್ತ ಗಮನ ಹರಿಸುತ್ತೇನೆ’’.
ಪ್ರತಿ ಮಳೆಗಾಲದಲ್ಲೂ ಈ ಅಸಂಖ್ಯಾತ ಪುಟ್ಟ ನದಿ ದ್ವೀಪಗಳು ಪ್ರವಾಹದ ನೀರಿನಲ್ಲಿ ಮುಳುಗುತ್ತವೆ. ಹೆಚ್ಚಿನವುಗಳು ಖಾಯಂ ಆಗಿ ಕೊರೆತಕ್ಕೊಳಗಾಗುತ್ತವೆ. ಇತರ ದ್ವೀಪಗಳು ಸಂಪೂರ್ಣವಾಗಿ ಕೊಚ್ಚಿಹೋಗುತ್ತವೆ. ಈ ಚಾರ್ ದ್ವೀಪಗಳ 30 ಲಕ್ಷ ಅತ್ಯಂತ ಬಡ ನಿವಾಸಿಗಳಿಗೆ ಬದುಕು ಎನ್ನುವುದು ಯಾವತ್ತೂ ಕಠಿಣ ಮತ್ತು ಅನಿಶ್ಚಿತ. ಆದರೆ, ಕೊರೋನ ವೈರಸ್ ಸಾಂಕ್ರಾಮಿಕವು ಅವರ ಬದುಕನ್ನು ಛಿದ್ರಗೊಳಿಸಿತು. ಅದರಲ್ಲೂ ಮುಖ್ಯವಾಗಿ ಹಮೀದುಲ್‌ನಂತಹ ಮಕ್ಕಳ ಬದುಕು ನಾಶವಾಯಿತು.
ಒಂದು ವರ್ಷಕ್ಕೂ ಹೆಚ್ಚು ಕಾಲ ಶಾಲೆಗಳು ಮುಚ್ಚಿದವು. ‘‘ಮೊದಲು ನಾನು ಶಾಲೆಯಲ್ಲಿ ಮಧ್ಯಾಹ್ನದ ಊಟ ಮಾಡುತ್ತಿದ್ದೆ. ಮನೆಯಲ್ಲಿ ದಿನಕ್ಕೆ ಒಮ್ಮೆ ಮಾತ್ರ ಊಟ ಮಾಡುತ್ತಿದ್ದೆ’’ ಎಂದು ಹಮೀದುಲ್ ಹೇಳುತ್ತಾನೆ. ‘‘ಈ ಮೂಲಕ ನಾವು ಸ್ವಲ್ಪ ಅಕ್ಕಿಯನ್ನು ಕುಟುಂಬಕ್ಕಾಗಿ ಉಳಿಸುತ್ತಿದ್ದೆವು. ಆದರೆ, ಈಗ ಹಾಗಿಲ್ಲ’’.
‘‘ಈಗ ನಾನು ಮನೆಯಲ್ಲಿ ಒಂದು ಬಾರಿ ಮಾತ್ರ ಊಟ ಮಾಡುತ್ತಿದ್ದೇನೆ. ಈ ಒಂದೇ ಊಟವನ್ನು ಇಡೀ ಕುಟುಂಬ ಹಂಚಿಕೊಳ್ಳಬೇಕಾಗಿದೆ. ಹಾಗಾಗಿ, ನಾವೆಲ್ಲರೂ ಕಡಿಮೆ ತಿನ್ನುತ್ತೇವೆ’’ ಎನ್ನುತ್ತಾನೆ.
ತಾನು ಶಾಲೆ ಬಿಡಬೇಕಾಗಬಹುದು ಎಂಬ ಭೀತಿಯನ್ನು ಹಮೀದುಲ್ ಹೊಂದಿದ್ದಾನೆ. ಈ ಭೀತಿಯನ್ನು ಹೊಂದಿರುವುದು ಅವನೊಬ್ಬನೇ ಅಲ್ಲ. 17 ತಿಂಗಳುಗಳಲ್ಲಿ, 12 ಕೋಟಿ ಮಕ್ಕಳನ್ನು ಸರಕಾರಿ ಶಾಲೆಗಳಿಂದ ಹೊರಗಿಡಲಾಗಿದೆ. ಹೆಚ್ಚಿನ ಮಕ್ಕಳು ಒಂದು ಹೊತ್ತಿನ ಊಟಕ್ಕಾಗಿ ಈ ಶಾಲೆಗಳನ್ನೇ ಆಶ್ರಯಿಸಿದ್ದರು. ಶಾಲೆ ಮುಚ್ಚುಗಡೆಯ ದಿನಗಳು ಹೆಚ್ಚಾಗುತ್ತಿರುವಂತೆಯೇ, ಉತ್ತಮ ಭವಿಷ್ಯವನ್ನು ಹೊಂದುವ ಅವರ ಹಿಂದಿನ ನಿರೀಕ್ಷೆಗಳೂ ಹುಸಿಯಾಗುತ್ತಿವೆ. ಯಾಕೆಂದರೆ, ಶಾಲೆಗಳು ಈಗ ಆನ್‌ಲೈನ್ ಮೂಲಕ ಮಾತ್ರ ಪಾಠಗಳನ್ನು ಮಾಡುತ್ತಿವೆ ಹಾಗೂ ಬಡ ಕುಟುಂಬಗಳ ಲಕ್ಷಾಂತರ ಮಕ್ಕಳಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಇಂಟರ್‌ನೆಟ್ ಸಂಪರ್ಕಗಳಿಲ್ಲ.
ಡಿಜಿಟಲ್ ಅಂತರ
ಗ್ರಾಮೀಣ ಪ್ರದೇಶಗಳ ಶೇ. 6 ಮತ್ತು ನಗರ ಪ್ರದೇಶಗಳ ಶೇ. 25 ಕುಟುಂಬಗಳು ಮಾತ್ರ ಕಂಪ್ಯೂಟರ್‌ಗಳನ್ನು ಹೊಂದಿವೆ ಹಾಗೂ ಗ್ರಾಮೀಣ ಪ್ರದೇಶಗಳ ಶೇ. 17 ಮತ್ತು ನಗರ ಪ್ರದೇಶಗಳ ಶೇ. 42 ಕುಟುಂಬಗಳು ಮಾತ್ರ ಇಂಟರ್‌ನೆಟ್ ಸೌಲಭ್ಯಗಳನ್ನು ಹೊಂದಿವೆ ಎಂಬುದಾಗಿ ದಿಲ್ಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾನವೀಯ ಮತ್ತು ಸಾಮಾಜಿಕ ವಿಜ್ಞಾನಗಳ ಅಧ್ಯಯನ ವಿಭಾಗದ ರೀತಿಕಾ ಖೇರ, ಕರಣ್ ಥಾಪರ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಕಂಪ್ಯೂಟರ್ ಆಗಲಿ, ಇಂಟರ್‌ನೆಟ್ ಆಗಲಿ- ಯಾವುದನ್ನೂ ದೇಶದ ಕಾರ್ಮಿಕರು ಮತ್ತು ರೈತರ ಮಕ್ಕಳ ಪೈಕಿ ಹೆಚ್ಚಿನವರು ಹೊಂದಿಲ್ಲ. ವಾಸ್ತವವಾಗಿ, ಹೆಚ್ಚಿನ ಪ್ರಮಾಣದ ಕುಟುಂಬಗಳು ಸ್ಮಾರ್ಟ್‌ಫೋನ್‌ಗಳನ್ನೇ ಹೊಂದಿಲ್ಲ. ಅದೂ ಕೂಡ, ಕುಟುಂಬದಲ್ಲಿ ಒಂದಿರುವ ಸ್ಮಾರ್ಟ್‌ಫೋನ್‌ಗಳನ್ನೇ ಮಕ್ಕಳು ಮತ್ತು ಹೆತ್ತವರು ಹಂಚಿಕೊಳ್ಳಬೇಕು. ಹಾಗಾಗಿ, ಒಂದು ಮಗುವಿಗೆ ಒಂದು ಸ್ಮಾರ್ಟ್ ಫೋನ್ ಸಿಗುವ ಸಾಧ್ಯತೆ ತುಂಬಾ ಕಡಿಮೆ.
ಒಂದು ತಲೆಮಾರಿನ ಮಕ್ಕಳು 17 ತಿಂಗಳುಗಳ ಅವಧಿಯ ಶಾಲೆಯನ್ನು ಕಳೆದುಕೊಂಡಿರುವುದರ ಪರಿಣಾಮವನ್ನು ಊಹಿಸುವುದೂ ಕಷ್ಟ ಎಂದು ಖೇರ ಹೇಳುತ್ತಾರೆ. ಈ ನಷ್ಟವನ್ನು ಸರಿದೂಗಿಸಲು ಅವರಿಗೆ ಸಾಧ್ಯವಾಗುವುದೇ ಎಂಬ ಬಗ್ಗೆಯೂ ಅವರು ಸಂಶಯಪಡುತ್ತಾರೆ. ಈ ವಿನಾಶಕಾರಿ ಹಿನ್ನಡೆಯನ್ನು ಅವರ ಬದುಕಿನ ಮೇಲೆ ಉಡಾಫೆಯಿಂದ ಹಾಗೂ ಯಾವುದೇ ಯೋಚನೆಗಳನ್ನು ಮಾಡದೆ ಹೇರಲಾಗಿತ್ತು. ಇದರ ಪರಿಣಾಮವನ್ನು ಹೋಗಲಾಡಿಸುವುದು ತುಂಬಾ ಕಷ್ಟ.
ಬಾಲಕಿಯರು ಬಾಲಕರಿಗಿಂತಲೂ ಹೆಚ್ಚಿನ ಕಷ್ಟವನ್ನು ಅನುಭವಿಸಿದರು. ಬಡವರು ಶ್ರೀಮಂತರಿಗಿಂತ ಹೆಚ್ಚು ನರಳಿದರು. ತಮ್ಮ ಹೆತ್ತವರನ್ನು ಕಡು ಬಡತನದಿಂದ ಪಾರು ಮಾಡುವ ಸಣ್ಣ ಅವಕಾಶವೊಂದನ್ನು ಈ ಅವಕಾಶವಂಚಿತ ಮಕ್ಕಳು ಹೊಂದಿದ್ದರು. ಆದರೆ ಶಾಲೆಗಳು ಅನಿರ್ದಿಷ್ಟಾವಧಿಗೆ ಮುಚ್ಚಿದ ಕಾರಣ ಮಕ್ಕಳು ಆ ಅವಕಾಶವನ್ನೂ ಕಳೆದುಕೊಂಡರು. ಅಷ್ಟೇ ಅಲ್ಲ, ಇತರ ಮಕ್ಕಳೊಂದಿಗೆ ಸಮಯವನ್ನು ಕಳೆಯುವ ಅವಕಾಶವನ್ನು ಹಾಗೂ ತಮ್ಮ ಪೌಷ್ಟಿಕ ಆಹಾರವನ್ನೂ ಕಳೆದುಕೊಂಡರು.
ವೈರಸ್ ಮಕ್ಕಳನ್ನು ಬಿಟ್ಟಿತ್ತು, ಸರಕಾರ ಬಿಡಲಿಲ್ಲ!
ಜಗತ್ತಿನಾದ್ಯಂತ ಕೊರೋನ ವೈರಸ್ ಸಾಂಕ್ರಾಮಿಕದಿಂದ ಮಕ್ಕಳು ಗಂಭೀರ ಅನಾರೋಗ್ಯಕ್ಕೆ ಒಳಗಾದ ಅಥವಾ ಮೃತಪಟ್ಟ ಉದಾಹರಣೆಗಳಿಲ್ಲದಿದ್ದರೂ, ತಮ್ಮ ಮನಸ್ಸುಗಳು, ದೇಹಗಳು ಮತ್ತು ಭವಿಷ್ಯಗಳನ್ನು ಉತ್ತಮವಾಗಿ ನಿರ್ಮಿಸಲು ಸಹಾಯ ಮಾಡಬಹುದಾಗಿದ್ದ ಒಂದು ಸ್ಥಳದಿಂದ ಅವರನ್ನು ನಿರಂತರವಾಗಿ ದೂರವಿಡಲಾಯಿತು. ‘‘ರೆಸ್ಟೋರೆಂಟ್‌ಗಳು, ಬಾರ್‌ಗಳು, ಸ್ಪಾಗಳು ಮತ್ತು ಸಿನೆಮಾ ಮಂದಿರಗಳನ್ನು ತೆರೆದಾಗಲೂ ಶಾಲೆಗಳನ್ನು ಮುಚ್ಚಿಯೇ ಇಡಲಾಯಿತು. ವಾಸ್ತವವಾಗಿ, ಶಾಲೆಗಳನ್ನು ಎಲ್ಲಕ್ಕಿಂತ ಕೊನೆಗೆ ಮುಚ್ಚಬೇಕಾಗಿತ್ತು ಹಾಗೂ ಎಲ್ಲಕ್ಕಿಂತ ಮೊದಲು ತೆರೆಯಬೇಕಾಗಿತ್ತು. ಆದರೆ ಇದು ವಿಚಿತ್ರವಾಗಿದೆ ಮತ್ತು ವಿವರಣೆಗೆ ನಿಲುಕದ್ದಾಗಿದೆ’’ ಎಂಬುದಾಗಿ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ (ಯನೆಸ್ಕೊ) ಮತ್ತು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯನಿಸೆಫ್) ಜಂಟಿ ಹೇಳಿಕೆಯೊಂದರಲ್ಲಿ ಹೇಳಿವೆ.
ಕಲಿಯುವುದಕ್ಕಾಗಿ ಹೋರಾಟ
ಈಗಷ್ಟೇ ಹದಿಹರೆಯಕ್ಕೆ ಕಾಲಿಟ್ಟಿರುವ ಒವಿಯಾ ಬೆಂಗಳೂರಿನ ಕೊಳೆಗೇರಿಯೊಂದರಲ್ಲಿ ತನ್ನ ಹೆತ್ತವರು ಮತ್ತು ಐವರು ಸಹೋದರ-ಸಹೋದರಿಯರೊಂದಿಗೆ ವಾಸಿಸುತ್ತಿದ್ದಾಳೆ. ಅವಳ ತಾಯಿ ಬೇರೆ ಮನೆಗಳಲ್ಲಿ ಮನೆಗೆಲಸ ಮಾಡುತ್ತಾರೆ. ಕೊರೋನ ವೈರಸ್‌ನಿಂದಾಗಿ ಶಾಲೆ ಮುಚ್ಚಿದಾಗ ಅವರು ಮಗಳು ಒವಿಯಾರನ್ನು ತಾನು ಕೆಲಸ ಮಾಡುತ್ತಿರುವ ಐದು ಅಪಾರ್ಟ್‌ಮೆಂಟ್‌ಗಳಿಗೆ ಕರೆದುಕೊಂಡು ಹೋಗಲು ಆರಂಭಿಸಿದರು. ಅಲ್ಲಿ ಅವರು ಗುಡಿಸುವುದು, ನೆಲ ಒರೆಸುವುದು ಮತ್ತು ಪಾತ್ರೆ ತೊಳೆಯುವುದರಲ್ಲಿ ತನ್ನ ತಾಯಿಗೆ ಸಹಾಯ ಮಾಡಿದಳು.
ಒವಿಯಾಳನ್ನು ಮನೆಯಲ್ಲಿ ಒಬ್ಬಳೇ ಬಿಟ್ಟು ಬರಲು ತಾಯಿಗೆ ಆತಂಕ. ಆಕೆ ಕೆಟ್ಟವರ ಸಹವಾಸ ಮಾಡಬಹುದು ಎನ್ನುವ ಹೆದರಿಕೆ. ಅದೇ ಹೊತ್ತಿಗೆ ತಾಯಿ ಐದನೇ ಮಗುವಿನ ಗರ್ಭಿಣಿಯಾದರು. ಆಗ ಒವಿಯಾ ಸ್ವತಂತ್ರವಾಗಿ ಮನೆಗೆಲಸದ ಸಹಾಯಕಿಯಾಗಿ ಕೆಲಸ ಮಾಡಲು ಆರಂಭಿಸಿದಳು. ಆಕೆಯ ತಂದೆ ಚಾಲಕ ವೃತ್ತಿ ಮಾಡುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ತಿಂಗಳುಗಳ ಹಿಂದೆಯೇ ಅವರು ಕೆಲಸ ಕಳೆದುಕೊಂಡಿದ್ದರು. ಈಗ ಒವಿಯಾಳೇ ಕುಟುಂಬದ ಪ್ರಮುಖ ಜೀವನೋಪಾಯ ಸಂಪಾದಿಸುವವಳು. ಅವಳ ಸರಕಾರಿ ಶಾಲೆ ಆನ್‌ಲೈನ್ ತರಗತಿಗಳನ್ನು ನಡೆಸಲಿಲ್ಲ. ಆದರೆ, ಅದು ಆನ್‌ಲೈನ್ ತರಗತಿಗಳನ್ನು ನಡೆಸಿದ್ದರೂ, ತರಗತಿಗೆ ಹಾಜರಾಗಲು ಒವಿಯಾಗೆ ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ, ಮನೆಯಲ್ಲಿ ಸ್ಮಾರ್ಟ್ ಫೋನ್ ಇರಲಿಲ್ಲ. ಅದೂ ಅಲ್ಲದೆ, 17 ತಿಂಗಳುಗಳಲ್ಲಿ ಆಕೆ ಪಠ್ಯಪುಸ್ತಕವನ್ನೇ ನೋಡಿರಲಿಲ್ಲ.
‘‘ಪುಸ್ತಕಗಳನ್ನು ಮನೆಗೆ ತರಲು ಶಿಕ್ಷಕರು ನಮಗೆ ಅವಕಾಶ ನೀಡಲಿಲ್ಲ. ಯಾಕೆಂದರೆ ನಾವು ಪುಸ್ತಕಗಳನ್ನು ಹರಿಯುತ್ತೇವೆ ಎಂಬ ಆತಂಕವನ್ನು ಶಿಕ್ಷಕರು ಹೊಂದಿದ್ದರು’’ ಎಂದು Scroll.in ಜೊತೆಗೆ ಮಾತನಾಡಿದ ಒವಿಯಾ ಹೇಳಿದಳು. ತನ್ನ ಶಿಕ್ಷಕರನ್ನೂ ಭೇಟಿಯಾಗಲು ಅವಳಿಗೆ ಸಾಧ್ಯವಾಗಿರಲಿಲ್ಲ.
‘‘ನಾನು ಮರಳಿ ಶಾಲೆಗೆ ಹೋಗಲು ಬಯಸುತ್ತೇನೆ’’ ಎಂಬುದಾಗಿ ಆಕೆ ಆಸೆಯ ಕಣ್ಣುಗಳಿಂದ ಹೇಳುತ್ತಾಳೆ. ‘‘ನನ್ನ ಶಾಲೆ, ಸಹಪಾಠಿಗಳು ಮತ್ತು ಶಿಕ್ಷಕರ ನೆನಪಾಗುತ್ತಿದೆ’’ ಎಂದು ಅವಳು ಹೇಳುತ್ತಾಳೆ.
ಸ್ಮಾರ್ಟ್‌ಫೋನ್ ಹೊಂದುವ ಅದೃಷ್ಟ ಹೊಂದಿದ ಹಲವು ಮಕ್ಕಳಿಗೂ ಮನೆಗಳಲ್ಲಿ ಇಂಟರ್‌ನೆಟ್ ಲಭ್ಯವಿರಲಿಲ್ಲ. ಸಾಂಕ್ರಾಮಿಕದ ಅವಧಿಯಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಬಸ್ ನಿಲ್ದಾಣಗಳು, ರಸ್ತೆಗಳ ಕಾಲುದಾರಿಗಳು ಮತ್ತು ದೇವಸ್ಥಾನದ ಆವರಣಗಳಲ್ಲಿ ಹಾಜರಾಗುತ್ತಿದ್ದರು. ಬಳ್ಳಕ ಎಂಬ ಗ್ರಾಮದಲ್ಲಿ ಬಿಂದು ಕುಮಾರಿ ಎಂಬ ಬಾಲಕಿ ಆನ್‌ಲೈನ್ ತರಗತಿಗೆ ಹಾಜರಾಗಿದ್ದ ಚಿತ್ರವೊಂದು ವೈರಲ್ ಆಗಿತ್ತು. ರಸ್ತೆಗೆ ಸಮೀಪದ ಪೈಪ್ ಒಂದರ ಮೇಲೆ ಬಾಲಕಿ ತನ್ನ ಮೊಬೈಲ್ ಫೋನ್‌ನೊಂದಿಗೆ ಕುಳಿತಿದ್ದಳು ಹಾಗೂ ಆಕೆಗೆ ಮಳೆಯಿಂದ ರಕ್ಷಣೆ ನೀಡಲು ತಂದೆ ತಾಳ್ಮೆಯಿಂದ ಕೊಡೆ ಹಿಡಿದುಕೊಂಡು ನಿಂತಿದ್ದರು.
‘‘ಮನೆಯಲ್ಲಿ ನೆಟ್‌ವರ್ಕ್ ಸಿಗುವುದಿಲ್ಲ. ಹಾಗಾಗಿ, ಆಕೆಯ ಆನ್‌ಲೈನ್ ತರಗತಿಗಾಗಿ ನಾವು ಮನೆಯಿಂದ 1.5 ಕಿ.ಮೀ. ದೂರದ ಸ್ಥಳಕ್ಕೆ ಹೋಗುತ್ತೇವೆ’’ ಎಂಬುದಾಗಿ ಅಡಿಕೆ ತೋಟದಲ್ಲಿ ಕಾರ್ಮಿಕರಾಗಿರುವ ಬಾಲಕಿಯ ತಂದೆ 'The News Minute'ಗೆ ಹೇಳಿದ್ದಾರೆ. ‘‘ಸಾಮಾನ್ಯವಾಗಿ, ಮಗಳು ದಿನದ ಪಾಠವನ್ನು ಮುಗಿಸುವವರೆಗೆ ನಾನು ಅವಳೊಂದಿಗೆ ಇರುತ್ತೇನೆ. ಹಳ್ಳಿಯಲ್ಲಿ ಮೊಬೈಲ್ ಟವರ್ ಇದೆಯೋ, ಇಲ್ಲವೋ, ಅವಳ ಕಲಿಕೆಗೆ ತೊಂದರೆಯಾಗಬಾರದು’’ ಎಂದು ಅವರು ಹೇಳುತ್ತಾರೆ.
13 ವರ್ಷದ ಶ್ರೀ ಪೂರ್ಣ ಆನ್‌ಲೈನ್ ತರಗತಿಗಾಗಿ ಪ್ರತಿದಿನ ಒಂದು ಕಿಲೋಮೀಟರ್ ದೂರದಲ್ಲಿರುವ ಬಸ್ ನಿಲ್ದಾಣಕ್ಕೆ ನಡೆಯುತ್ತಾಳೆ. ಆಕೆಯ ಅಜ್ಜ ಮತ್ತು ತಮ್ಮ ಆಕೆಯ ಜೊತೆಗೆ ನಡೆಯುತ್ತಾರೆ. ಬಸ್ ನಿಲ್ದಾಣ ತಲುಪಿದ ಬಳಿಕ, ವೌನವಾಗಿರುವಂತೆ ಶ್ರೀಪೂರ್ಣ ಅಜ್ಜ ಮತ್ತು ತಮ್ಮನಿಗೆ ಸಂಜ್ಞೆ ಮಾಡುತ್ತಾಳೆ. ಆಕೆ ತನ್ನ ಬ್ಯಾಗನ್ನು ಮೊಣಕಾಲಿನ ಮೇಲಿರಿಸಿ ನೋಟ್ಸ್ ಬರೆಯಲು ತೊಡಗುತ್ತಾಳೆ ಹಾಗೂ ಆನ್‌ಲೈನ್ ತರಗತಿಗೆ ಹಾಜರಾಗಲು ಅಮ್ಮನ ಮೊಬೈಲ್ ಫೋನ್ ಬಳಸುತ್ತಾಳೆ. ಆಕೆಯ ತಮ್ಮ ಪಕ್ಕದಲ್ಲೇ ಆಡುತ್ತಾನೆ. ರಸ್ತೆಯಲ್ಲಿ ಕಾರುಗಳು ಮತ್ತು ಮೋಟರ್‌ಬೈಕ್‌ಗಳು ಹಾದು ಹೋಗುವಾಗ ಉಂಟಾಗುವ ಶಬ್ದದಿಂದಾಗಿ ಪಾಠ ಕೇಳಲು ಕಷ್ಟಪಡುತ್ತಾಳೆ.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಬಳ್ಳಕ ಗ್ರಾಮದ ವೈದ್ಯಕೀಯ ವಿದ್ಯಾರ್ಥಿನಿ ಸೌಜನ್ಯಾ ತನ್ನ ಮನೆಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ದೇವಸ್ಥಾನದ ಆವರಣದಲ್ಲಿ ತನ್ನ ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಾಳೆ. ಅಲ್ಲಿ ಇತರ 15 ಮಂದಿ ಅವರಂತೆಯೇ ಆನ್‌ಲೈನ್ ತರಗತಿಗಾಗಿ ಬರುತ್ತಾರೆ. ಕೆಲವರು ಭತ್ತದ ಗದ್ದೆಗಳಲ್ಲಿ, ತೋಟಗಳಲ್ಲಿ ಅಥವಾ ಕಾಡುಗಳಲ್ಲಿ- ಹೀಗೆ ಎಲ್ಲಿ ನೆಟ್‌ವರ್ಕ್ ಸ್ಥಿರವಾಗಿ ಸಿಗುತ್ತದೆಯೋ ಅಲ್ಲೆಲ್ಲ ವಿದ್ಯಾರ್ಥಿಗಳು ಆನ್‌ಲೈನ್ ಪಾಠ ಕೇಳುತ್ತಾರೆ. ಅಲ್ಲಿಗೆ ಹೋಗುವಾಗ ಅವರು ತಮ್ಮಾಂದಿಗೆ ಸೊಳ್ಳೆ ಬತ್ತಿಗಳು ಮತ್ತು ಪ್ರಾಣಿಗಳನ್ನು ಓಡಿಸಲು ಬೆತ್ತಗಳನ್ನು ಒಯ್ಯುತ್ತಾರೆ.
ಆನ್‌ಲೈನ್ ತರಗತಿಗಳಿಗೆ ಹಾಜರಾಗುವ ಅದೃಷ್ಟ ಹೊಂದಿರುವ ಮಕ್ಕಳನ್ನೂ ಅವರ ಹೆತ್ತವರಿಗೆ ಶಾಲಾ ಶುಲ್ಕ ಕಟ್ಟಲು ಸಾಧ್ಯವಾಗಿಲ್ಲ ಎನ್ನುವ ಕಾರಣಕ್ಕಾಗಿ ಕೆಲವು ಸಲ ದಿಢೀರಾಗಿ ತರಗತಿಯಿಂದ ಹೊರಗೆ ಹಾಕಲಾಗುತ್ತದೆ.
ಹರ್ಯಾಣದ 8,900 ಖಾಸಗಿ ಶಾಲೆಗಳ ನೋಂದಣಿ ಪುಸ್ತಕಗಳಿಂದ 12.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ ಎಂಬುದಾಗಿ ‘ದ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಈ ಪೈಕಿ ಹೆಚ್ಚಿನ ಮಕ್ಕಳನ್ನು ಶಾಲೆಗಳಿಂದ ತೆಗೆಯಲಾಗಿದೆ. ಯಾಕೆಂದರೆ, ಅವರ ಹೆತ್ತವರು ಸಾಂಕ್ರಾಮಿಕದ ಅವಧಿಯಲ್ಲಿ ಕೆಲಸ ಮತ್ತು ವರಮಾನಗಳನ್ನು ಕಳೆದುಕೊಂಡಿದ್ದರಿಂದ ಖಾಸಗಿ ಶಾಲಾ ಶುಲ್ಕವನ್ನು ಪಾವತಿಸಲು ಅವರಿಗೆ ಸಾಧ್ಯವಾಗಿಲ್ಲ.
ಕಲಿಕಾ ಕೊರತೆ
Scroll.inನಲ್ಲಿ ವಿಜೈತಾ ಲಲ್ವಾನಿ 13 ವರ್ಷದ ರೋಹಿತ್ ಕುಮಾರ್‌ನ ಬಗ್ಗೆ ವರದಿಯೊಂದನ್ನು ಮಾಡಿದ್ದಾರೆ. ರೋಹಿತ್ ಕುಮಾರ್‌ನನ್ನು ಗುರುಗ್ರಾಮದ ಖಾಸಗಿ ಶಾಲೆ ಯುರೋ ಇಂಟರ್‌ನ್ಯಾಶನಲ್‌ಗೆ ದಾಖಲಿಸಲಾಗಿತ್ತು. ಅವನಿಗೆ ಒಮ್ಮೆಲೆ ತನ್ನ ಶಾಲೆಯ ಆನ್‌ಲೈನ್ ವೇದಿಕೆಗೆ ಸಂಪರ್ಕ ಹೊಂದಲು ಅಸಾಧ್ಯವಾಯಿತು. ಪಾಸ್‌ವರ್ಡ್ ಬದಲಾಯಿಸಲಾಗಿದೆ ಎಂಬುದಾಗಿ ಅದು ಪದೇ ಪದೇ ಹೇಳಿತು. ಹೆತ್ತವರು ಶಾಲೆಯನ್ನು ಸಂಪರ್ಕಿಸಿದರು. ಅದೊಂದು ‘ತಾಂತ್ರಿಕ ಸಮಸ್ಯೆ’ಯಾಗಿದೆ ಹಾಗೂ ಅದನ್ನು ಶಾಲೆಯು ಸರಿಪಡಿಸುವುದು ಎಂಬುದಾಗಿ ಅವರಿಗೆ ತಿಳಿಸಲಾಯಿತು. ಆದರೆ, ಈ ‘ತಾಂತ್ರಿಕ ಸಮಸ್ಯೆ’ ಒಂದು ವಾರಕ್ಕೂ ಹೆಚ್ಚು ಅವಧಿಗೆ ಮುಂದುವರಿದಾಗ, ತಮ್ಮ ಮಗನನ್ನು ಆನ್‌ಲೈನ್ ತರಗತಿಗಳಿಂದ ಶಾಲೆ ಹೊರದಬ್ಬಿದೆ ಎನ್ನುವುದನ್ನು ಹೆತ್ತವರು ಅರ್ಥ ಮಾಡಿಕೊಂಡರು.
ಇದು ಯಾಕೆಂದರೆ, ಅವರು ಶಾಲೆಯ ವಾರ್ಷಿಕ ಶುಲ್ಕ 32,000 ರೂಪಾಯಿಯನ್ನು ಪಾವತಿಸಿರಲಿಲ್ಲ. ಆದರೆ, ಅವರು ತಿಂಗಳ ಬೋಧನಾ ಶುಲ್ಕವನ್ನು ನಿಯಮಿತವಾಗಿ ಪಾವತಿಸುತ್ತಿದ್ದರು. ‘‘ನನಗೆ ಸ್ವಲ್ಪ ಹೆದರಿಕೆಯಾಯಿತು. ಆದರೆ ಇದನ್ನು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ. ಶಾಲೆ ಇದನ್ನು ಗಣನೆಗೇ ತೆಗೆದುಕೊಳ್ಳಲಿಲ್ಲ’’ ಎಂದು ರೋಹಿತ್ ಕುಮಾರ್ ಹೇಳುತ್ತಾನೆ.
ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಮ್ ಹೀಗೆ ಹೇಳುತ್ತಾರೆ: ‘‘ಭಾರತದ ಒಂದು ಸಾಮಾನ್ಯ ಮಗು ಕಲಿಕಾ ಕೊರತೆಯೊಂದಿಗೇ ಶಾಲೆಗೆ ಹೋಗಲು ಆರಂಭಿಸುತ್ತದೆ. 16 ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ ಏನೂ ಕಲಿಯದಿದ್ದರೆ, ಮಗುವಿನ ಹಿಮ್ಮುಖ ನಡೆ ಎಷ್ಟು ವೇಗವಾಗಿರುತ್ತದೆ ಎನ್ನುವುದನ್ನು ಊಹಿಸಿ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಸಹಾಯಕವಾಗಿ ನಿಂತಿವೆ. ಒಂದು ದೇಶವಾಗಿ ನಾವು ನಮ್ಮ ಮಕ್ಕಳ ಕೈಬಿಟ್ಟಿದ್ದೇವೆ ಹಾಗೂ ಈ ವಿಪತ್ತಿನ ಪರಿಣಾಮವನ್ನು ಕಡಿಮೆಗೊಳಿಸುವ ವಿಧಾನವೊಂದನ್ನು ಕಂಡುಹಿಡಿಯಲು ಯಾವುದೇ ಪ್ರಯತ್ನಗಳನ್ನು ಮಾಡಿಲ್ಲ’’.
17 ತಿಂಗಳುಗಳ ಲಾಕ್‌ಡೌನ್ ಬಳಿಕ ಆರಂಭಗೊಂಡ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಅನುರಾಗ್ ಬೆಹರ್ Mint ಗಾಗಿ ಮಾಡಿರುವ ವರದಿಯೊಂದು ಇಲ್ಲಿದೆ: ‘‘ಮೂರನೇ ತರಗತಿಯಿಂದ 8ನೇ ತರಗತಿವರೆಗಿನ ಮಕ್ಕಳಿಗೆ ನಾನು ಒಂದೇ ಪ್ರಶ್ನೆಗಳನ್ನು ಕೇಳಿದೆ. ಹಾಗೂ ಅವರಿಂದ ಒಂದೇ ಉತ್ತರಗಳು ಬಂದವು. ‘2020 ಮಾರ್ಚ್‌ನಲ್ಲಿ ನೀವು ಕೊನೆಯದಾಗಿ ಶಾಲೆಗೆ ಬಂದ ದಿನ ಕಲಿತಿರುವುದರಿಂದ ಏನನ್ನು ನೆನಪಿನಲ್ಲಿಟ್ಟುಕೊಂಡಿದೀರಿ?’ ‘ಏನೂ ಇಲ್ಲ.’ ‘ಹಾಗಾದರೆ, ಈಗೇನು ಮಾಡುತ್ತಿದ್ದೀರಿ?’ ‘ಪುಸ್ತಕವೊಂದರಿಂದ ಬರಹವೊಂದನ್ನು ನಕಲಿ ಮಾಡುತ್ತಿದ್ದೇನೆ.’ ‘ಇದು ನಿಮಗೆ ಏನಾದರೂ ಅರ್ಥವಾಯಿತೇ?’ ‘ಇಲ್ಲ, ಯಾಕೆಂದರೆ ಅದಕ್ಕಿಂತ ಹಿಂದಿನ ಎರಡು ತರಗತಿಗಳಲ್ಲಿ ಏನು ಕಲಿತಿದ್ದೇವೆಯೋ ಆ ಪೈಕಿ ಹೆಚ್ಚಿನವುಗಳನ್ನು ಮರೆತಿದ್ದೇವೆ. ಈಗ ಇದನ್ನೆಲ್ಲ ಗ್ರಹಿಸಲು ಅಸಾಧ್ಯವಾಗಿದೆ.’ ‘ಈಗೇನು ಮಾಡುತ್ತೀರಿ?’ ‘ಏನು ಮಾಡಬೇಕೆಂದು ನಮ್ಮ ಶಿಕ್ಷಕರು ಹೇಳುತ್ತಾರೆ’’.
ಕೃಪೆ: Scroll.in