ಇತಿಹಾಸ ಸೇರಲಿದೆ ಮೋದಿಯಿಂದ ಹೊಗಳಿಸಿಕೊಂಡ ಕಾಶ್ಮೀರದ ‘ಪೆನ್ಸಿಲ್ ಹಳ್ಳಿ’
ಕಾಶ್ಮೀರದ ಒಂದು ಹಳ್ಳಿ 100ಕ್ಕೂ ಹೆಚ್ಚು ದೇಶಗಳಿಗೆ ಪೆನ್ಸಿಲ್‌ನಲ್ಲಿ ಬಳಸುವ ವಿಶೇಷವಾದ ಮರದ ಪಟ್ಟಿ (slat)ಗಳನ್ನು ಕಳಿಸುತ್ತದೆ. ಭಾರತದಲ್ಲಿ ಬಳಕೆಯಾಗುವ ಪೆನ್ಸಿಲ್‌ಗಳಲ್ಲಿ ಬಳಕೆಯಾಗುವ 90 ಶೇಕಡಾದಷ್ಟು ಮರ ಇಲ್ಲಿಯವೇ! ಕಳೆದ ವರ್ಷವಷ್ಟೇ ಪ್ರಧಾನಿ ನರೇಂದ್ರ ಮೋದಿಯಿಂದ ಭಯಂಕರ ಹೊಗಳಿಸಿಕೊಂಡ ಈ ಗ್ರಾಮ ಸದ್ಯದಲ್ಲೇ ಮರೆಗೆ ಸರಿಯಲಿದೆ. ಈ ಐತಿಹಾಸಿಕ ‘ಸ್ಟಾರ್ಟ್‌ಅಪ್’ ಉದ್ಯಮವನ್ನು ‘ಫಿನಿಷ್‌ಅಪ್’ ಮಾಡಲು ಅಧಿಕಾರಸ್ಥರು ಲಗುಬಗೆಯಿಂದ ತೊಡಗಿದ್ದಾರೆ.
ಶಾಲೆಗೆ ಹೋಗುವ ಮಕ್ಕಳು ಮೊದಲು ಅಕ್ಷರಾಭ್ಯಾಸ ಮಾಡುತ್ತಿದ್ದುದು ನೆಲದಲ್ಲಿ ಹರಡಿದ ಮರಳಲ್ಲಿ. ನಂತರ ಸ್ಲೇಟು ಮತ್ತು ಕಡ್ಡಿ ಬಂತು. ಇದರಲ್ಲಿ ಪಳಗಿದ ಮೇಲಷ್ಟೇ ದಕ್ಕುತ್ತಿದ್ದುದು ಪೆನ್ಸಿಲು. ಪೆನ್ನಿಗೆ ಭಡ್ತಿ ಪಡೆಯುವ ಮೊದಲು ಪೆನ್ಸಿಲು ಎಲ್ಲಾ ಮಕ್ಕಳ ಮೆಚ್ಚಿನ ಸಂಗಾತಿ. ದೊಡ್ಡ ಕಟ್ಟಡ ಸೇತುವೆ, ಕಟ್ಟಡಗಳ ವಿನ್ಯಾಸದಿಂದ ಹಿಡಿದು, ಮಹಾನ್ ಕಲಾಕೃತಿಗಳ ಸ್ಕೆಚ್ಚುಗಳಿಗೆ ಪೆನ್ಸಿಲೇ ಮೂಲ ಹತ್ಯಾರು. ಇವತ್ತು ಕಲಾವಿದರು ಒಂದರಿಂದ ಆರರ ತನಕ ಶ್ರೇಣಿ ಇರುವ ಬಿ, ಎಂದರೆ ಮೃದು ಮತ್ತು ಕಪ್ಪು, ಎಂದರೆ ಕಠಿಣ ಗ್ರಾಫೈಟ್ ಮೊನೆಗಳಿರುವ ಪೆನ್ಸಿಲುಗಳನ್ನು ಬಳಸುತ್ತಾರೆ. (6H...H, HB, B...2B..6B ಹೀಗೆ ಶ್ರೇಣಿಗಳಿವೆ) ಶಾಲೆಯಲ್ಲಿ ಬ್ರಾಂಡ್‌ಗಳೇನೇ ಇರಲಿ, ಮಕ್ಕಳು ಸಾಮಾನ್ಯವಾಗಿ ಬಳಸುವುದು ಕಠಿಣತೆ ಮತ್ತು ಮೃದುತ್ವ/ಕಪ್ಪು ಎರಡೂ ಬೆರೆತಿರುವ HB ಪೆನ್ಸಿಲ್‌ಗಳನ್ನು. ಪೆನ್ಸಿಲ್‌ಗಳ ಬಗ್ಗೆ ಇಷ್ಟೆಲ್ಲಾ ತಿಳಿದವರು, ಅವು ಎಲ್ಲಿ ತಯಾರಾಗುತ್ತವೆ, ಅವುಗಳಲ್ಲಿರುವ ಮರದ ವಿಶೇಷತೆ ಏು ಎಂದು ಯೋಚನೆ ಮಾಡಿರಲಾರರು.
ಪೆನ್ಸಿಲ್‌ನಲ್ಲಿ ಇರುವ ಮೊನೆಯಷ್ಟೇ ಅದರಲ್ಲಿ ಬಳಸುವ ಮರಕ್ಕೂ ಬಹಳ ಮಹತ್ವವಿದೆ. ಆ ಮರ ಮುರಿಯದಂತೆ ಗಟ್ಟಿಯಾಗಿರಬೇಕು. ಮೊನೆ ಮಾಡಲು ಸುಲಭವಾಗುವಂತೆ ಮೃದುವಾಗಿರಬೇಕು ಮತ್ತು ಬರೆಯುವಾಗ ಆಯಾಸವಾಗ ದಂತೆ ಹೂವಿನಂತೆ ಹಗುರವಾಗಿರಬೇಕು. ಯಾವ ಮರದಲ್ಲಿ ಈ ಮೂರೂ ಗುಣಗಳಿವೆ? ಈ ಮರವೇ ಸೆಡ್ಡರ್ ಅಥವಾ ದೇವದಾರು. ಅದರಲ್ಲೂ ನಿರ್ದಿಷ್ಟ ಹವಾಮಾನದಲ್ಲಿ ಬೆಳೆಯುವ ಮರವೇ ಪೆನ್ಸಿಲಿನಲ್ಲಿ ಬಳಕೆಯಾಗುತ್ತದೆ. ಮೊದಲು ಪೆನ್ಸಿಲ್‌ಗೆ ಬಳಕೆಯಾಗುವ ಸೆಡ್ಡರ್ ಮರಗಳನ್ನು ಚೀನಾ, ಜರ್ಮನಿ ಮುಂತಾದ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಕಾಶ್ಮೀರದಲ್ಲಿ 1960ರಲ್ಲಿ ಆರಂಭವಾದ ಈ ಉದ್ದಿಮೆಯಿಂದ ದೇವದಾರು ಮರಗಳು ಅಪಾಯಕ್ಕೆ ಸಿಕ್ಕಿದ್ದವು. ಆದರೆ, 2010ರಲ್ಲಿ ಸ್ಥಳೀಯರಾದ ಮನ್ಸೂರ್ ಅಹ್ಮದ್ ಇಲಾಹಿ ಎಂಬವರು ಪುಲ್ವಾಮದ ತೇವ ನೆಲದಲ್ಲಿ ಮಾತ್ರ ಬೆಳೆಯುವ ಪೋಪ್ಲರ್ ಮರಗಳು ಮೃದುವಾಗಿದ್ದು, ಪೆನ್ಸಿಲ್‌ನಲ್ಲಿ ಬಳಸಲು ಸರಿಯಾದುದು ಎಂದು ಕಂಡುಕೊಂಡು ಉದ್ಯಮ ಆರಂಭಿಸಿದರು. ಇತರರೂ ನಂತರದಲ್ಲಿ ಸೇರಿಕೊಂಡರು.
ಈ ಕಾರಣದಿಂದಲೇ ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆ ದಶಕಗಳಿಂದ ಪೆನ್ಸಿಲ್‌ಗಳಿಗೆ ಹೆಸರಾಗಿದೆ. ಅದರಲ್ಲೂ ಜೀಲಂ ನದಿಯ ದಂಡೆಯಲ್ಲಿರುವ ಸುಂದರ ಹಳ್ಳಿ ಔಖಿ ಪೆನ್ಸಿಲ್ ಗ್ರಾಮವೆಂದೇ ಹೆಸರುವಾಸಿ. ದೇಶದಲ್ಲಿ ಬಳಕೆಯಾಗುವ ಪೆನ್ಸಿಲ್‌ಗಳಲ್ಲಿನ 90 ಶೇಕಡಾದಷ್ಟು ಮರ ಪೂರೈಕೆಯಾಗುವುದು ಕಾಶ್ಮೀರದ ಪುಲ್ವಾಮದಿಂದ ಅದರಲ್ಲೂ ಔಖಿ ಗ್ರಾಮದಿಂದ. (10 ಶೇಕಡಾ ಮಾತ್ರ ನೆರೆಯ ಕೇರಳದಿಂದ). ಕಾಶ್ಮೀರದ 18 ಪೆನ್ಸಿಲ್ ಕಾರ್ಖಾನೆಗಳಲ್ಲಿ 17 ಇರುವುದು ಪುಲ್ವಾಮದಲ್ಲಿ. ಅದರಲ್ಲೂ ಎಂಟು ಔಖಿಯಲ್ಲಿಯೇ ಇವೆ. ಇವು ಪೆನ್ಸಿಲ್‌ಗಳಲ್ಲಿ ಬಳಸುವ ಮರದ ಕವಚಕ್ಕೆ ಬಳಕೆಯಾಗುವ ಸ್ಲಾಟ್‌ಗಳನ್ನೂ ದೇಶದ ವಿವಿಧ ಭಾಗಗಳಿಗೆ ಮಾತ್ರವಲ್ಲ; ನೂರಕ್ಕೂ ಹೆಚ್ಚು ವಿದೇಶಗಳಿಗೆ ಕಳಿಸುತ್ತವೆ. ಈ ಉದ್ದಿಮೆಯು ಸಾವಿರಾರು ಜನರಿಗೆ, ಮುಖ್ಯವಾಗಿ ಮಹಿಳೆಯರಿಗೆ ಬದುಕುವ ದಾರಿಯಾಗಿದೆ. ಹಲವಾರು ಕುಟುಂಬಗಳಿಗೆ ಈ ಉದ್ದಿಮೆ ಬಿಟ್ಟರೆ ಬೇರೆ ಆಧಾರವಿಲ್ಲ. ಪ್ರತಿಯೊಂದು ಕುಟುಂಬದ ಒಬ್ಬರಾದರೂ ಈ ಉದ್ದಿಮೆಯಲ್ಲಿ ಇದ್ದಾರೆ. ದೇಶದಲ್ಲಿ ಸಾಕ್ಷರತೆಯ ಆಂದೋಲನ ಆರಂಭವಾಗಿ, ಶಾಲೆಗಳ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಹೆಚ್ಚಳವಾದಾಗ ಈ ಉದ್ದಿಮೆಯೂ ೆಳೆದು ಜನರಿಗೆ ಬದುಕು ಒದಗಿಸಿತು.
ಈ ಔಖಿ ಎಂಬ ಹಳ್ಳಿ ಹೆಚ್ಚು ಪ್ರಸಿದ್ಧಿಗೆ ಬಂದದ್ದು ಪ್ರಧಾನಿ ನರೇಂದ್ರ ಮೋದಿ ಒಂದು ವರ್ಷಕ್ಕೂ ಹಿಂದೆ ತನ್ನ ‘ಮನ್ ಕೀ ಬಾತ್’ ಭಾಷಣದಲ್ಲಿ, ಈ ಹಳ್ಳಿಯು ಪೆನ್ಸಿಲ್‌ಗಳನ್ನು ತಯಾರಿಸುವುದರ ಮೂಲಕ ಭಾರತದಲ್ಲಿ ಶಿಕ್ಷಣಕ್ಕೆ ನೆರವಾಗುತ್ತಿದೆ ಎಂದು ‘ಭಯಂಕರ’ವಾಗಿ ಹೊಗಳಿ ‘‘ಭಾರತದ ಪೆನ್ಸಿಲ್ ಹಳ್ಳಿ’’ ಎಂದು ಬಣ್ಣಿಸಿದ ನಂತರ. ಅವರು ಯಾರೋ ಆರಂಭಿಸಿದ್ದ ಈ ಉದ್ದಿಮೆಯನ್ನು ತನ್ನ ಸ್ಟಾರ್ಟ್ ಅಪ್ ಕಾರ್ಯಕ್ರಮದ ಪ್ರಚಾರಕ್ಕಾಗಿ ಬಳಸಿಕೊಂಡಿದ್ದರು. ಭಾರತದ ಆತ್ಮನಿರ್ಭರತೆಯಲ್ಲಿ ಕಾಶ್ಮೀರವು ನೆರವಾಗುತ್ತಿದೆ ಎಂದಿತ್ಯಾದಿಯಾಗಿ ಹೇಳಿದ್ದರು. ಆದರೆ, ಆಗಲೇ ಈ ಹಳ್ಳಿಯ ಹಣೆಬರಹ ನಿರ್ಧರಿಸುವ ಯೊೀಜನೆಯೊಂದು ರೂಪ ಪಡೆಯುತ್ತಿತ್ತು.
2001ರಲ್ಲಿ ತರಲಾದ ಭೂಸುಧಾರಣಾ ಕಾಯ್ದೆ ‘ರೋಷನಿ ಆ್ಯಕ್ಟ್’ ಮೂಲಕ ಸರಕಾರವು ರಾಜ್ಯದಲ್ಲಿ ಜನರಿಗೆ ಅವರು ಕೃಷಿ ಮಾಡುತ್ತಿದ್ದ ಜಮೀನಿನ ಒಡೆತನ ನೀಡಿತ್ತು. ಆದರೆ, ರಾಜ್ಯದ ಸ್ಥಾನಮಾನವನ್ನು ಕಿತ್ತುಕೊಂಡು ಮೂರಾಗಿ ವಿಭಜಿಸಿ, 2018ರಲ್ಲಿ ರಾಜ್ಯಪಾಲರ ಆಡಳಿತ ಬಂದಾಗ ಸರಕಾರವು, ಪಶ್ಚಿಮ ಚೀನಾದ ಕಾಶ್ಮೀರದಂತದ್ದೇ ಪ್ರದೇಶದಲ್ಲಿ ಮುಸ್ಲಿಮ್ ಉಯ್ಗರ್ ಸಮುದಾಯವನ್ನು ದಮನಿಸಲು ಅಲ್ಲಿನ ಸರಕಾರ ಅನುಸರಿಸಿದ ತಂತ್ರವನ್ನೇ ಅನುಸರಿಸಿತು. ಅದು ರೋಷನಿ ಕಾಯ್ದೆಯನ್ನು ಭೂ ಹಗರಣ ಎಂದು ಕರೆದು ರದ್ದುಗೊಳಿಸಿತು. ಕಾಶ್ಮೀರಿ ಜನರನ್ನು ಅವರು ತಲೆತಲಾಂತರಗಳಿಂದ ಕೃಷಿ ಮಾಡುತ್ತಿದ್ದ ಜಮೀನನ್ನು ಸರಕಾರಿ ಜಮೀನು ಎಂದು ಹೇಳಿ ಹೊರದಬ್ಬಲು ಆರಂಭಿಸಿತು.
ಆ ನಂತರ ಕಾಶ್ಮೀರದಲ್ಲಿ ಸೇನೆ, ಮತ್ತು ಅರೆಸೇನಾ ಪಡೆಗಳ ದಟ್ಟಣೆ ತೀರಾ ಹೆಚ್ಚಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಯ ಮೂರನೇ ಎರಡರಷ್ಟು ಜವಾನರು ಜಮ್ಮು ಮತ್ತು ಕಾಶ್ಮೀರದಲ್ಲಿಯೇ ನಿಯೋಜನೆಗೊಂಡಿದ್ದಾರೆ. ಅವರಿಗೆ ವಸತಿಯ ಕೊರತೆ ಉಂಟಾಗಿದೆ. ಆದುದರಿಂದ ಸರಕಾರ ಹಲವಾರು ಕಡೆಗಳಲ್ಲಿ ಹೊಸದಾಗಿ ಭದ್ರತಾ ಶಿಬಿರಗಳನ್ನು ಆರಂಭಿಸಲು ಹೊರಟಿದೆ. ಕಳೆದ ಅಕ್ಟೋಬರ್‌ನಲ್ಲಿ ಪುಲ್ವಾಮ, ಸೋಫಿಯಾನ್ ಮತ್ತು ಅನಂತ್‌ನಾಗ್ ಜಿಲ್ಲೆಗಳ 10 ಕಡೆಗಳಲ್ಲಿ ಭದ್ರತಾ ಶಿಬಿರಗಳನ್ನು ಸ್ಥಾಪಿಸಲು ಆದೇಶ ಹೊರಡಿಸಲಾಗಿದೆ. ಇವುಗಳಲ್ಲಿ ಔಖಿ ಗ್ರಾಮವೂ ಒಂದು. ಅಲ್ಲಿನ ಸರಕಾರಿ ಜಮೀನು ಮತ್ತು ಗೋಮಾಳಗಳಲ್ಲಿ ಈ ಶಿಬಿರಗಳು ಬರುತ್ತಿವೆ. ಇಲ್ಲಿ ಸಿಆರ್‌ಪಿಎಫ್ ಶಿಬಿರ ಬರಲಿದೆ.
‘‘ಮೊದಲು ರೈಲ್ವೆಗಾಗಿ ಕೆಲಸದ ಆಸೆ ತೋರಿಸಿ ನಮ್ಮ ಜಮೀನು ವಶಪಡಿಸಿಕೊಂಡರು, ಕೆಲಸವನ್ನೂ ಕೊಡಲಿಲ್ಲ; ಈಗ ಇದು’’ ಎಂದು ಗ್ರಾಮಸ್ಥರು ಗೋಳಾಡುತ್ತಿದ್ದಾರೆ. ಹೊಸ ಜೀವನೋಪಾಯ, ಉದ್ಯೋಗ ನೀಡಲಾಗದ ಸರಕಾರ, ವರ್ಷಗಳಿಂದ ಇರುವ ಜೀವನೋಪಾಯವನ್ನು ಹೀಗೇಕೆ ಕಿತ್ತುಕೊಳ್ಳಬೇಕು ಎಂಬ ಪ್ರಶ್ನೆಯಲ್ಲಿ ನ್ಯಾಯವಿದೆ. ಕಾಶ್ಮೀರದಲ್ಲಿ ಜನವಸತಿ ವಿರಳವಾದ ಜಮೀನು ಎಲ್ಲೆಡೆ ಧಾರಾಳವಾಗಿ ಬಿದ್ದಿರುವಾಗ ಜನರ ವಸತಿಯ ಪ್ರದೇಶಗಳನ್ನೇ ಆಯ್ದುಕೊಂಡು ಅವರ ಜೀವನವನ್ನು ಬೀದಿಪಾಲು ಮಾಡುವುದರ ಉದ್ದೇಶವಾದರೂ ಏನು?
ಔಖಿಯ ಪೆನ್ಸಿಲ್ ಉದ್ದಿಮೆಯು ಮೊದಲು ನೋಟು ನಿಷೇಧದ ಹೊಡೆತಕ್ಕೆ ಸಿಕ್ಕಿತು. ನಂತರ ಕೋವಿಡ್ ಹಾವಳಿ ಆರಂಭವಾದ ಬಳಿಕ ದೇಶದ ಉದ್ದಗಲಕ್ಕೂ ಶಾಲೆಗಳು ಮುಚ್ಚಿ ಬೇಡಿಕೆ ತಳಮುಟ್ಟಿತು. ಮುಕ್ಕಾಲು ಭಾಗ ಜನರು ಕೆಲಸ ಕಳೆದುಕೊಂಡರು. ಇದೀಗ, ಕೋವಿಡ್ ಹಿಂದೆ ಸರಿದು ಶಾಲೆಗಳು ಆರಂಭವಾಗಿ ಬೇಡಿಕೆ ಹೆಚ್ಚಿ, ಚೇತರಿಕೆಯ ಆಸೆ ಚಿಗುರಿರುವಾಗಲೇ ಸರಕಾರ ಈ ಉದ್ದಿಮೆಯನ್ನೇ ನಾಶಗೊಳಿಸುವ ಮತಿಹೀನ ಕೆಲಸದಲ್ಲಿ ತೊಡಗಿದೆ: ಕಾಶ್ಮೀರದಲ್ಲಿ ಈ ಪ್ರಸಿದ್ಧ ಹಳ್ಳಿ ಬಿಟ್ಟು ಬೇರೆ ಹಳ್ಳಿಯೇ ಇಲ್ಲ ಎಂಬಂತೆ!. ವಿಫಲವಾಗಿರುವ ‘ಸ್ಟಾರ್ಟ್‌ಅಪ್’ ಕಾರ್ಯಕ್ರಮದ ಗುಣಗಾನ ಮಾಡುತ್ತಿರುವವರು, ಹಿಂದೆಯೇ ಸ್ಥಾಪನೆಯಾಗಿ ಸಫಲವಾದ ಸ್ಟಾರ್ಟ್‌ಅಪ್ ಉದ್ದಿಮೆಗಳನ್ನು ‘ಕ್ಲೋಸ್ ಡೌನ್’ ಮಾಡಲು ಹೊರಟಿರುವುದರ ಹಿಂದಿನ ಅಸಲಿ ಉದ್ದೇಶವಾದರೂ ಏನು?