ಬೆಂಗಳೂರು: ಭದ್ರತೆ ಉಲ್ಲಂಘಿಸಿ ಮೈದಾನದೊಳಗೆ ನುಸುಳಿ ಕೊಹ್ಲಿಯೊಂದಿಗೆ ಸೆಲ್ಫಿ ತೆಗೆದುಕೊಂಡ ಕ್ರಿಕೆಟ್ ಅಭಿಮಾನಿಗಳು
ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯವು ಸಣ್ಣದೊಂದು ಭದ್ರತಾ ಉಲ್ಲಂಘನೆಗೆ ಸಾಕ್ಷಿಯಾಯಿತು. ಮೂವರು ಕ್ರಿಕೆಟ್ ಅಭಿಮಾನಿಗಳು ರವಿವಾರ 2 ನೇ ದಿನದ ಮುಕ್ತಾಯದ ಹಂತಕ್ಕೆ ಮೈದಾನದೊಳಗೆ ನುಸುಳಿದ ಘಟನೆ ನಡೆದಿದೆ.
ಮೂವರಲ್ಲಿ ಇಬ್ಬರು ಭಾರತದ ಮಾಜಿ ನಾಯಕ ಕೊಹ್ಲಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಲ್ಲಿಯೂ ಯಶಸ್ವಿಯಾದರು. ತಕ್ಷಣ ಎಚ್ಚತ್ತುಕೊಂಡ ಭದ್ರತಾ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಶ್ರೀಲಂಕಾದ ಎರಡನೇ ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಮುಹಮ್ಮದ್ ಶಮಿ ಬೌಲಿಂಗ್ ವೇಳೆ ಚೆಂಡು ತಗಲಿ ಗಾಯಗೊಂಡಿದ್ದ ಕುಸಾಲ್ ಮೆಂಡಿಸ್ ಅವರನ್ನು ಫಿಸಿಯೋ ಪರೀಕ್ಷಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಈ ಸಮಯದಲ್ಲಿ ಮೂವರು ಕ್ರಿಕೆಟ್ ಅಭಿಮಾನಿಗಳು ಭದ್ರತೆಯನ್ನು ಉಲ್ಲಂಘಿಸಿ ಸೆಲ್ಫಿಗೆ ಒತ್ತಾಯಿಸಿ ಕೊಹ್ಲಿಯ ಹತ್ತಿರ ತೆರಳಿದರು ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಮುಂದಾದ ಭದ್ರತಾ ಸಿಬ್ಬಂದಿಯನ್ನು ತಡೆಯಲು ಪ್ರಯತ್ನಿಸಿದರು.
ಘಟನೆಯ ವೀಡಿಯೊ ತಕ್ಷಣವೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಏನೂ ಮಾಡಬೇಡಿ ಎಂದು ಭದ್ರತಾ ಸಿಬ್ಬಂದಿಗೆ ಕೊಹ್ಲಿ ಹೇಳುತ್ತಿರುವುದನ್ನು ಕೆಲವು ಅಭಿಮಾನಿಗಳು ಶ್ಲಾಘಿಸಿದರು.
ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಒಬ್ಬ ಪ್ರೇಕ್ಷಕರು ಆಟದ ಪ್ರದೇಶವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದ.
Tell me how can you hate Virat Kohli @imVkohli pic.twitter.com/GTXINyIfP9
— Arafat (KB9 era) (@imarafaat7) March 13, 2022