ಹೆಣ್ಣಿನ ಆಧುನಿಕತುಮುಲಗಳನ್ನು ಕಟ್ಟಿಕೊಡುವ ಮುಂಬೈ ಬೇಗಮ್ಸ್

Update: 2022-03-16 08:05 GMT

ಮುಂಬೈ ಕಾರ್ಪೊರೇಟ್ ಜಗತ್ತಿನಲ್ಲಿ ಪುರುಷರು ಮಾತ್ರವಲ್ಲ, ಮಹಿಳೆಯರೂ ಸುದ್ದಿ ಮಾಡುತ್ತಿರುತ್ತಾರೆ. ಈ ಕಾರ್ಪೊರೇಟ್ ಜಗತ್ತನ್ನು ವಸ್ತುವಾಗಿಟ್ಟುಕೊಂಡು ಹಿಂದೊಮ್ಮೆ ಮಧುರ್ ಭಂಡಾರ್ಕರ್ ಸಿನೆಮಾ ಮಾಡಿ ಸುದ್ದಿಯಾಗಿದ್ದರು. ಎರಡು ಬೃಹತ್ ಕಾರ್ಪೊರೇಟ್ ಸಂಸ್ಥೆಯ ಪೈಪೋಟಿಗಳಲ್ಲಿ ಹೇಗೆ ತಳಸ್ತರದ ಅಧಿಕಾರಿಗಳು ಕಾಲಾಳುಗಳಾಗಿ ಬಳಸಿ ಎಸೆಯಲ್ಪಡುತ್ತಾರೆ ಎನ್ನುವುದನ್ನು ಇದು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿತ್ತು. ಸಜ್ಜನ ನಗುವಿನ ಮರೆಯಲ್ಲೇ ಹೊಂಚು ಹಾಕಿ ಕುಳಿತಿರುವ ಕ್ರೌರ್ಯಗಳನ್ನು ಕೂಡ ತಣ್ಣಗೆ ಕಟ್ಟಿಕೊಟ್ಟ ಚಿತ್ರ ಇದು. ಹೆಸರು ‘ಕಾರ್ಪೊರೇಟ್’. ಬಿಪಾಸ ಬಸು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಆದರೆ ಸಿನೆಮಾ ಪುರುಷಾಳ್ವಿಕೆಯ ಕಾರ್ಪೊರೇಟ್ ಜಗತ್ತನ್ನು ತೆರೆದಿಟ್ಟಿತ್ತು. ನೆಟ್‌ಫ್ಲಿಕ್ಸ್ 2021 ಮಾರ್ಚ್ ತಿಂಗಳಲ್ಲಿ ಬಿಡುಗಡೆಗೊಂಡು ಇದೀಗ ಒಂದು ವರ್ಷ ಪೂರೈಸಿರುವ ‘ಮುಂಬೈ ಬೇಗಮ್ಸ್’ ಸರಣಿ, ಕಾರ್ಪೊರೇಟ್ ಚಿತ್ರಕ್ಕಿಂತಲೂ ಭಿನ್ನವಾದುದು.

ಮಹಿಳಾ ಕೇಂದ್ರಿತ ಕಾರ್ಪೊರೇಟ್ ಜಗತ್ತಿನಲ್ಲಿ ಆಕೆ ಅನುಭವಿಸಬೇಕಾದ ಒಳ ಸಂಘರ್ಷಗಳನ್ನು ಈ ಸರಣಿ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಅಲಂಕೃತಾ ಶ್ರೀವಾಸ್ತವ ಮತ್ತು ಬೋರ್ನಿಲಾ ಚಟರ್ಜಿ ಜೊತೆಯಾಗಿ ನಿರ್ದೇಶಿಸಿರುವ ಈ ಸರಣಿ ಒಟ್ಟು ಆರು ಕಂತುಗಳನ್ನು ಹೊಂದಿದೆ. ಮಹಿಳೆಯೇ ಮುಖ್ಯಸ್ಥೆಯಾಗಿರುವ ಮಹಿಳೆಯರೇ ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತಿರುವ ‘ರೋಯಲ್ ಬ್ಯಾಂಕ್ ಆಫ್ ಬಾಂಬೆ’ ಸಂಸ್ಥೆಯ ಏಳು ಬೀಳುವಿನ ಕತೆಯೇ ‘ಮುಂಬೈ ಬೇಗಮ್ಸ್’. ಶ್ರೀಮಂತವರ್ಗದ ಅತ್ಯುನ್ನತ ಹುದ್ದೆಗಳಲ್ಲಿರುವ ಮಹಿಳೆಯ ರನ್ನು ಸ್ವಾವಲಂಬಿಗಳೆಂದು ನಾವು ಬಣ್ಣಿಸುತ್ತೇವೆ. ಹೊರ ಜಗತ್ತು ಅವರನ್ನು ನೋಡುವ ಬಗೆಯೇ ಬೇರೆ. ಆದರೆ ಈ ಮಹಿಳೆಯರು ಅನುಭವಿಸುವ ಬಗೆ ಬಗೆಯ ಶೋಷಣೆಗಳ, ಒತ್ತಡಗಳ, ಸಂಘರ್ಷಗಳ ಅರಿವು ಬಾಹ್ಯ ಜಗತ್ತಿಗಿರುವುದಿಲ್ಲ. ಕ್ಯಾಮರಾಗಳ ಮುಂದೆ ಸದಾ ನಗುನಗುತ್ತಾ, ಅಂತರಂಗದಲ್ಲಿ ಸದಾ ವಿಲ ವಿಲ ಒದ್ದಾಡುತ್ತಾ ಬದುಕುವ ಐದು ಪ್ರಮುಖ ಪಾತ್ರಗಳನ್ನು ಇಟ್ಟುಕೊಂಡು ಮುಂಬೈ ‘ರಾಣಿ’ಯರ ಜಗತ್ತನ್ನು ಈ ಸರಣಿಯಲ್ಲಿ ತೆರೆದಿಡಲಾಗಿದೆ.

Writer - -ಮುಸಾಫಿರ್

contributor

Editor - -ಮುಸಾಫಿರ್

contributor

Similar News