ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಚೀನಾದ ಭಾರತೀಯ ವಿದ್ಯಾರ್ಥಿಗಳ ಭವಿಷ್ಯ
ಯುದ್ಧಪೀಡಿತ ಉಕ್ರೇನ್‌ನಿಂದ ಮರಳಿರುವ ಮತ್ತು ಅಲ್ಲಿನ ಜರ್ಜರಿತ ನಗರಗಳಲ್ಲಿ ಇನ್ನೂ ಸಿಕ್ಕಿಬಿದ್ದಿರುವ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಚಿಂತೆ ಹೆಚ್ಚುತ್ತಿರುವಂತೆಯೇ, ಎರಡು ವರ್ಷಗಳ ಹಿಂದೆ ಚೀನಾದಿಂದ ಮರಳಿದ್ದ 23,000 ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಸರಕಾರ ಮರೆತೇ ಬಿಟ್ಟಂತಿದೆ. ಅವರೀಗ ದಿಲ್ಲಿ ಹೈಕೋರ್ಟಿನ ಮೆಟ್ಟಲೇರಿದ್ದು, ಮಾರ್ಚ್ 21ರಂದು ವಿಚಾರಣೆ ನಡೆಯಲಿದೆ.
ಚೀನಾದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಕಲಿಯುತ್ತಿದ್ದು, ಎರಡು ವರ್ಷಗಳ ಹಿಂದೆ ಅಲ್ಲಿ ಕೋವಿಡ್ ಪಿಡುಗು ಕಾಣಿಸಿಕೊಂಡಾಗ ಮರಳಿ ಬಂದಿದ್ದ 28,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಉದ್ದಕ್ಕೆ ಎಳೆಯಲಾಗುತ್ತಿರುವ ಮತ್ತು ಮೋದಿ ಸರಕಾರ ಈಗ ತೆಪ್ಪಗೆ ಮುಚ್ಚಿಡಲು ಬಯಸುತ್ತಿರುವ ಗಡಿ ಬಿಕ್ಕಟ್ಟಿನ ಕಾರಣದಿಂದ ರಾಜತಾಂತ್ರಿಕವಾಗಿ ಚೀನಾವು ಭಾರತದ ಕುರಿತು ತಳೆದಿರುವ ತಣ್ಣಗಿನ ನಿಲುವಿನಿಂದ ಈ ವಿದ್ಯಾರ್ಥಿಗಳು ಇನ್ನಷ್ಟು ಆತಂಕಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಹೆಚ್ಚುವರಿಯಾಗಿ, ಚೀನಾದಲ್ಲಿ ಮತ್ತೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಕೋವಿಡ್ ಮರುಕಳಿಸಿ ವಿವಿಧ ನಗರಗಳಲ್ಲಿ ಹೊಸ ಲಾಕ್‌ಡೌನ್‌ಗಳನ್ನು ಹೇರಲಾಗುತ್ತಿರುವುದು ಆವರ ಆತಂಕಗಳನ್ನು ಇನ್ನಷ್ಟು ಹೆಚ್ಚಿಸಿದೆ.
ಚೀನಾದಲ್ಲಿ ಈಗ 13 ನಗರಗಳಲ್ಲಿ ಮೂರು ಕೋಟಿ ಜನರು ಕಠಿಣ ಲಾಕ್‌ಡೌನ್‌ನಲ್ಲಿ ಇದ್ದಾರೆ. ಭಾರತೀಯ ವಿದ್ಯಾರ್ಥಿಗಳು ಶೆನ್‌ಝೆನ್, ಚಾಂಗ್‌ಚುನ್, ಹರ್ಬಿನ್, ನಿಂಗ್ಬೋ, ಅನ್‌ಹುಯ್, ಶಾನ್‌ಡೋಂಗ್ ಮುಂತಾದ ವಿಶ್ವವಿದ್ಯಾನಿಲಯಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಇವುಗಳಲ್ಲಿ ಮೊದಲ ಎರಡು ನಗರಗಳು ಲಾಕ್‌ಡೌನ್‌ನಲ್ಲಿವೆ. ಈ ಎಲ್ಲಾ ಕಾರಣಗಳಿಂದ ಚೀನಾವು ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ನಿರಾಕರಿಸುತ್ತಿದೆ. ವಿಶೇಷವೆಂದರೆ ಅದು ಪಾಕಿಸ್ತಾನ, ಮಂಗೋಲಿಯಾ ಮತ್ತು ಸಿಂಗಾಪುರದ ವಿದ್ಯಾರ್ಥಿಗಳಿಗೆ ವೀಸಾ ನೀಡುತ್ತಿರುವುದು.
ತೀರಾ ಇತ್ತೀಚೆಗಷ್ಟೇ ಚೀನಾದ ಅಧಿಕಾರಿಗಳು ಈ ಕುರಿತು ಕೆಲವು ಟ್ವೀಟ್‌ಗಳನ್ನು ಮಾಡುತ್ತಿರುವುದು ಈ ವಿದ್ಯಾರ್ಥಿಗಳಲ್ಲಿ ಚಿಕ್ಕ ಮಟ್ಟಿನ ಆಸೆ ಮೂಡಿಸಿದೆಯಾದರೂ, ಅವು ನಿರ್ದಿಷ್ಟ ದಿನಾಂಕ, ಕಾರ್ಯಸೂಚಿ, ಪ್ರಯಾಣದ ವಿವರಗಳು ಇತ್ಯಾದಿಗಳ ಕುರಿತು ಏನನ್ನೂ ಹೇಳಿಲ್ಲ.
ಎರಡು ವರ್ಷಗಳ ಹಿಂದೆ ಭಾರತಕ್ಕೆ ಮರಳಿರುವ ಈ ವಿದ್ಯಾರ್ಥಿಗಳು ತಾಂತ್ರಿಕವಾಗಿ ಆಯಾ ಚೀನಿ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳೇ. ಅವರಿಗೆ ಪ್ರಸ್ತುತ ಆನ್‌ಲೈನ್ ಕ್ಲಾಸುಗಳು ನಡೆಯುತ್ತಿವೆ. ಚೀನಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಸಾರ್ವಜನಿಕರ ಕಣ್ಣಿಗೆ ಬೀಳದಿರುವ ಅಲಿಬಾಬಾ ಸಂಸ್ಥೆಯ ಜಾಕ್ ಮಾ ಅವರ ಜಿಂಗ್ ಟಾಕ್ ಆ್ಯಪ್‌ನ ಮೂಲಕ ಕೆಲವು ದಿನಗಳಲ್ಲಿ ಭಾರತೀಯ ಕಾಲಮಾನ ಬೆಳಿಗ್ಗೆ 5:30ರಿಂದ 9:30 ಮತ್ತು ಕೆಲವು ದಿನಗಳಲ್ಲಿ 10:00ರಿಂದ 1:00ರ ತನಕ ಕ್ಲಾಸುಗಳು ನಡೆಯುತ್ತಿವೆ. ಆದರೆ, ವೈದ್ಯಕೀಯದಂತಹ ಪ್ರಾಯೋಗಿಕ ವಿಷಯದಲ್ಲಿ ಆನ್‌ಲೈನ್ ತರಬೇತಿ ಸಾಕಾಗದು. ಪದವಿ ಪಡೆಯಬೇಕಾದಲ್ಲಿ ಪ್ರತ್ಯಕ್ಷ ತರಬೇತಿಯ ಅಗತ್ಯವಿದೆ. ಇದಲ್ಲದೆ, ನೂರಾರು ವಿದ್ಯಾರ್ಥಿಗಳು ಆನ್‌ಲೈನ್ ತರಬೇತಿ ಒಗ್ಗದ ಕಾರಣದಿಂದ ತಮ್ಮ ಕಲಿಕೆಯನ್ನು ಅಮಾನತು ಮಾಡಿದ್ದು, ಪ್ರತ್ಯಕ್ಷ ತರಬೇತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಂತಹವರು ಇನ್ನಷ್ಟು ಕಷ್ಟಕ್ಕೆ ಒಳಗಾಗಿದ್ದಾರೆ. ಉದಾರಣೆಗೆ, ನಿಂಗ್ಬೋ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮತ್ತು ನೇರ ತರಗತಿಯ ಆಯ್ಕೆಯನ್ನು ನೀಡಿ ಬಹುಮತದ ನಿರ್ಧಾರವನ್ನು ಅನುಸರಿಸುವುದಾಗಿ ಹೇಳಿತ್ತು. ದಕ್ಷಿಣ ಭಾರತದ ವಿದ್ಯಾರ್ಥಿಗಳು ಹೆಚ್ಚಾಗಿ ನೇರ ತರಗತಿಯೇ ಬೇಕು ಎಂದು ಹೇಳಿದುದರಿಂದ ಅದು ಆನ್‌ಲೈನ್ ಕ್ಲಾಸುಗಳನ್ನು ನಡೆಸುತ್ತಿಲ್ಲ. ತಮಿಳುನಾಡು ಮತ್ತು ಕೇರಳದಂತಹ ರಾಜ್ಯಗಳ ವೈದ್ಯಕೀಯ ಶಿಕ್ಷಣ ಮಂಡಳಿಗಳು ಮೂರು ಸೆಮಿಸ್ಟರ್‌ಗಳಿಗಿಂತ ಹೆಚ್ಚು ಆನ್‌ಲೈನ್ ಶಿಕ್ಷಣ ಪಡೆಯುವುದರ ವಿರುದ್ಧ ನಿರ್ದಿಷ್ಟವಾದ ನಿಯಮಗಳನ್ನು ಹೊಂದಿವೆ. ಈ ಕಾರಣದಿಂದಲೇ ಈ ವಿದ್ಯಾರ್ಥಿಗಳು ನೇರ ಶಿಕ್ಷಣ ಬಯಸಿದ್ದರು. ಇದರಿಂದಾಗಿ ಅವರು ಸ್ನಾತಕೋತ್ತರ ನೀಟ್ (NEET-PG) ನ್ಯಾಷನಲ್ ಎಕ್ಸಿಟ್ ಟೆಸ್ಟ್ (NEXT)ಗಳಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ಅಲ್ಲದೆ, ನಾಲ್ಕನೇ ಮತ್ತು ಐದನೇ ವರ್ಷದಲ್ಲಿ ಕಲಿಯುತ್ತಿರುವವರಿಗೆ ಪ್ರಾತ್ಯಕ್ಷಿಕ/ಪ್ರಾಯೋಗಿಕ ತರಬೇತಿ ಅನಿವಾರ್ಯ. ಇಂತಹವರೀಗ ಹೆಚ್ಚಿನ ಸಮಸ್ಯೆಗೆ ಒಳಗಾಗಿದ್ದಾರೆ. ಇವರೆಲ್ಲರೂ ಇದೇ ಸೆಪ್ಟಂಬರ್ ಹೊತ್ತಿಗೆ ಚೀನಾಕ್ಕೆ ಮರಳುವ ಆಸೆಯಲ್ಲಿದ್ದರು. ಸದ್ಯಕ್ಕೆ ಅದು ಸಾಧ್ಯವಾಗುವಂತೆ ಕಾಣುತ್ತಿಲ್ಲ. ಅಲ್ಲದೆ, ಅವರು ಹಾಸ್ಟೆಲ್‌ಗಳಲ್ಲಿ ಬಿಟ್ಟು ಬಂದಿದ್ದ ವಸ್ತುಗಳನ್ನೆಲ್ಲಾ ತೆಗೆದುಹಾಕಲಾಗಿದೆ ಎಂಬ ಸುದ್ದಿಯೂ ಈ ವಿದ್ಯಾರ್ಥಿಗಳನ್ನು ತಲುಪಿದೆ. ಇದೀಗ, ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಒಂದು ಆದೇಶವನ್ನು ದೃಢಪಡಿಸಿದ್ದು, ಅದರ ಪ್ರಕಾರ, ಆನ್‌ಲೈನ್ ಮೂಲಕ ಪಡೆದ ವೈದ್ಯಕೀಯ ಪದವಿಯು ಭಾರತದಲ್ಲಿ ಸಿಂಧುವಲ್ಲ. ಅಲ್ಲದೆ ಈ ಕಾರಣಕ್ಕಾಗಿಯೇ ವೈದ್ಯಕೀಯ ಶಿಕ್ಷಣಕ್ಕಾಗಿ ಚೀನಾದ ವಿಶ್ವವಿದ್ಯಾನಿಲಯಗಳಿಗೆ ಹೋಗಬೇಡಿ ಎಂದೂ ಎನ್‌ಎಂಸಿ ಎಚ್ಚರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಏನು ಮಾಡಬೇಕು?
ಕಳೆದ ಸೋಮವಾರ ಚೀನಾ ಹೇಳಿಕೆಯೊಂದನ್ನು ಹೊರಡಿಸಿ, ನಿಜವಾದ ಅಗತ್ಯವಿರುವ ವಿದೇಶಿ ವಿದ್ಯಾರ್ಥಿಗಳಿಗೆ ಸಣ್ಣ ಸಂಖ್ಯೆಯಲ್ಲಿ ಅವಕಾಶ ಕಲ್ಪಿಸುವ ಇಚ್ಛೆಯನ್ನೇನೋ ವ್ಯಕ್ತಪಡಿಸಿದೆ. ವಿದ್ಯಾರ್ಥಿಗಳಿಗೆ ಬಂದಿರುವ ಮಾಹಿತಿಗಳ ಪ್ರಕಾರ ಕೆಲವು ವಿಶ್ವವಿದ್ಯಾನಿಲಯಗಳು ನೇರ ತರಬೇತಿಯನ್ನು ಆರಂಭಿಸಿವೆ. ಆದರೆ, ಭಾರತೀಯ ವಿದ್ಯಾರ್ಥಿಗಳಿಗೆ ಮಾತ್ರ ಯಾವುದೇ ಸ್ಪಷ್ಟ ನಿರ್ದೇಶನ ಬಂದಿಲ್ಲ. ಭಾರತ ಸರಕಾರವೂ ಇವರಿಗೆ ಧೈರ್ಯ ನೀಡುವ ಅಥವಾ ಮಾರ್ಗದರ್ಶನ ನೀಡುವ ಯಾವುದೇ ಪ್ರಯತ್ನ ಮಾಡಿಲ್ಲ.
ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ)ದ ಪ್ರಧಾನ ಕಾರ್ಯದರ್ಶಿ ಫೈಸಲ್ ಶೇಖ್ ಅವರು ಈ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಹೀಗೆ ವಿವರಿಸುತ್ತಾರೆ: ‘‘ಈ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕಳೆದ ಎರಡು ವರ್ಷಗಳಿಂದ ನರಳುತ್ತಿದ್ದಾರೆ. ನಿರ್ಬಂಧಗಳ ಕಾರಣದಿಂದ ಅವರು ಚೀನಾಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ವಾಸ್ತವದಲ್ಲಿ ವೈದ್ಯಕೀಯ ಪದವಿಯನ್ನು ಆನ್‌ಲೈನ್‌ನಲ್ಲಿ ಪಡೆಯುವುದು ಅಸಾಧ್ಯ. ಭಾರತ ಸರಕಾರವು ಈ ಕುರಿತು ಚೀನಾದ ಸರಕಾರದೊಂದಿಗೆ ನೇರವಾಗಿ ಮಾತನಾಡಿದರೆ ಮಾತ್ರ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ.’’ ಅವರು ಈ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರವನ್ನು ಬರೆದು ಒತ್ತಾಯಿಸಿದ್ದಾರೆ.
ಹುನಾನ್ ತಂತ್ರಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿರುವ ರವೀಂದ್ರ ಬಾಬು ಕೊಂಡೂರಿಯವರು ವಿದ್ಯಾರ್ಥಿಗಳ ಜೊತೆ ಸಂಪರ್ಕದಲ್ಲಿದ್ದು, ಅವರು ಹೇಳುವ ಪ್ರಕಾರ: ‘‘ಚೀನಾದೊಂದಿಗೆ ಗೆಳೆತನದ ಸಂಬಂಧ ಹೊಂದಿರುವ ದೇಶಗಳ ವಿದ್ಯಾರ್ಥಿಗಳ ಮರಳುವಿಕೆಯ ಪ್ರಕ್ರಿಯೆ ನಡೆಯುತ್ತಿದೆ. ಭಾರತೀಯ ವಿದ್ಯಾರ್ಥಿಗಳೂ ಮರಳಿ ತಮ್ಮ ಕೋರ್ಸುಗಳನ್ನು ಮುಗಿಸುವಂತಾಗಲು ರಾಜತಾಂತ್ರಿಕ ಮಾತುಕತೆ ತುಂಬಾ ಅಗತ್ಯ. ಎರಡೂ ದೇಶಗಳ ನಡುವೆ ಮಾತುಕತೆ ನಡೆಯಬೇಕು.’’
ಆದರೆ, ಭಾರತ ಸರಕಾರ ಮಾತುಕತೆ ನಡೆಸುವುದು ಬಿಡಿ, ಈ ವಿದ್ಯಾರ್ಥಿಗಳ ವಿಷಯದಲ್ಲಿ ಚಿಂತೆಯನ್ನೇ ಮಾಡುತ್ತಿರುವಂತೆ ಕಾಣುವುದಿಲ್ಲ. ಈ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ತೋಡಿಕೊಳ್ಳುತ್ತಿರುವ ಅಳಲು ಎಂದರೆ, ಉಕ್ರೇನ್‌ನ ವಿದ್ಯಾರ್ಥಿಗಳ ಅಳಲು, ಆವರ ಸಂಕಷ್ಟ, ಅವರ ಭವಿಷ್ಯ ಇತ್ಯಾದಿಗಿಂತ ಹೆಚ್ಚಾಗಿ, ಸರಕಾರದ ‘ಸಾಧನೆ’, ‘ಅಪರೇಷನ್ ಗಂಗಾ’ದ ‘ಯಶಸ್ಸು’ ಇತ್ಯಾದಿಗಳ ಕುರಿತು ಪುಂಗಿ ಊದುತ್ತಾ, ಸರಕಾರವನ್ನು ಹೊಗಳಿದ ವಿದ್ಯಾರ್ಥಿಗಳಿಗೆ ಪ್ರಚಾರ ನೀಡುತ್ತಾ, ಸರಕಾರವನ್ನು ಟೀಕಿಸಿದ ಮಕ್ಕಳನ್ನು ದೇಶದ್ರೋಹಿಗಳು, ಉಪಕಾರ ಸ್ಮರಣೆ ಇಲ್ಲದವರು ಇತ್ಯಾದಿಯಾಗಿ ನಿಂದಿಸಿದ ಟಿವಿ ಮಾಧ್ಯಮಗಳು ಎರಡು ವರ್ಷಗಳಲ್ಲಿ ಚೀನಾದಿಂದ ಮರಳಿದ ಸಮಸ್ಯೆಗಳಿಗೆ ಸಂಪೂರ್ಣ ಕುರುಡಾಗಿವೆ ಎಂಬುದು.
ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳ ಪ್ರಶ್ನೆ ಬಂದಾಗ, ಸರಕಾರದ ಮಂತ್ರಿಗಳು ಮತ್ತು ಭಟ್ಟಂಗಿಗಳು- ಆ ವಿದ್ಯಾರ್ಥಿಗಳು ಅರ್ಹತೆ ಇಲ್ಲದವರು, ದೇಶ ಪ್ರೇಮ ಇಲ್ಲದವರು, ಅಲ್ಲಿಗೆ ಯಾಕೆ ಹೋಗಬೇಕಿತ್ತು, ಹೋದವರು ಹಣವಂತರು ಇತ್ಯಾದಿಯಾಗಿ ಅಸೂಕ್ಷ್ಮ ಸುಳ್ಳುಗಳ ಮೂಲಕ ಮೋದಿ ಸರಕಾರದ ವೈಫಲ್ಯಗಳನ್ನು ಸಮರ್ಥಿಸಿದ್ದರು. ಸ್ವತಃ ಮೋದಿ, ತನ್ನ ಕಾಲದಲ್ಲಿ ಗುಜರಾತಿನಲ್ಲಿ ಒಂದೆರಡು ಮತ್ತು ಸಂಸ್ಕೃತ ವಿವಿ ಇತ್ಯಾದಿ ಕೆಲಸಕ್ಕೆ ಬಾರದವುಗಳನ್ನು ಬಿಟ್ಟರೆ, ಯಾವೊಂದು ಹೊಸ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸದೆ ಖಾಸಗೀಕರಣಕ್ಕೆ ಒತ್ತು ನೀಡಿರುವಾಗ, ದೇಶದ ಬಹುತೇಕ ಮಹಾನ್ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದ ನೆಹರೂ, ಇಂದಿರಾ, ರಾಜೀವ್ ಗಾಂಧಿಯವರನ್ನು ದೂರುತ್ತಾ, ಭಾರತೀಯ ವಿದ್ಯಾರ್ಥಿಗಳು ಇಲ್ಲಿಯೇ ಶಿಕ್ಷಣ ಪಡೆಯಬೇಕು ಎಂಬ ಪುಕ್ಕಟೆ ಸಲಹೆಯನ್ನು ನೀಡಿದರು. ‘ವಿಶ್ವಗುರು’ ಭಾರತದಲ್ಲಿ ಸಾಕಷ್ಟು ಸೀಟುಗಳು ಲಭ್ಯವಿಲ್ಲ; ಅವುಗಳನ್ನು ಪೂರೈಸಲು ಸರಕಾರಕ್ಕೆ ಯೋಗ್ಯತೆಯಿಲ್ಲ, ಇಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಕೋಟಿಗಟ್ಟಲೆ ಹಣ ಬೇಕಾಗುತ್ತದೆ, ಆದುದರಿಂದಲೇ ವಿದ್ಯಾರ್ಥಿಗಳು ಅಗ್ಗದ ಶಿಕ್ಷಣದ ಆಸೆಯಿಂದ ಉಕ್ರೇನ್, ಚೀನಾದಂತಹ ದೇಶಗಳಿಗೆ ರಿಸ್ಕ್ ತೆಗೆದುಕೊಂಡು ಹೋಗುತ್ತಾರೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಂತೆ ವರ್ತಿಸಿದರು. ಮೋದಿಯವರ ಮಾತನ್ನು ಇಡೀ ವಿಶ್ವವೇ ಕೇಳುತ್ತದೆ ಎನ್ನುವವರಿಗೆ, ಉಕ್ರೇನ್ ಮತ್ತು ಚೀನಾದಿಂದ ಮರಳಿದ ವಿದ್ಯಾರ್ಥಿಗಳಿಗೆ ಸಂಬಂಧಿಸಿ ಮೋದಿ ಮಾತಿಗೆ ಚಿಕ್ಕಾಸು ಬೆಲೆಯೂ ಸಿಕ್ಕಿಲ್ಲ; ಚಿಕ್ಕ ಪುಟ್ಟ ದೇಶಕ್ಕಿಂತಲೂ ಹೆಚ್ಚಿನ ಅಸಡ್ಡೆಯನ್ನು ಭಾರತೀಯರ ಬಗ್ಗೆ ತೋರಿಸಲಾಗುತ್ತಿದೆ ಎಂಬ ಸತ್ಯ ಅರಿವಾದೀತೆ? ಇದೀಗ ಚೀನಾದಿಂದ ಮರಳಿದ ವಿದ್ಯಾರ್ಥಿಗಳ ಬಗ್ಗೆ ಅವರು ಎಲ್ಲಿಯೂ ಒಂದು ಮಾತೂ ಆಡದಿರುವಾಗ, ಅವರ ಭಟ್ಟಂಗಿಗಳು, ‘ಶತ್ರು’ ರಾಷ್ಟ್ರ ಚೀನಾಕ್ಕೆ ಕಲಿಯಲು ಹೋದವರು ದೇಶದ್ರೋಹಿಗಳು ಎಂಬ ಹೊಸ ವರಾತ ತೆಗೆದರೆ ಅಚ್ಚರಿಯಿಲ್ಲ!
ಇದೀಗ ಎನ್‌ಎಂಸಿ ಹೇಳಿಕೆಯಿಂದ ಆತಂಕಕ್ಕೆ ಒಳಗಾಗಿರುವ ನೂರೈವತ್ತರಷ್ಟು ವಿದ್ಯಾರ್ಥಿಗಳು ದಿಲ್ಲಿ ಹೈಕೋರ್ಟಿನ ಮೊರೆ ಹೋಗಿದ್ದಾರೆ. ಅದು ನ್ಯಾಯಮೂರ್ತಿಗಳಾದ ಡಿ.ಎನ್. ಪಟೇಲ್ ಮತ್ತು ಜ್ಯೋತಿ ಸಿಂಗ್ ಅವರ ಪೀಠದ ಮುಂದಿದ್ದು, ಮಾರ್ಚ್ 21ರಂದು ವಿಚಾರಣೆಗೆ ಬರಲಿದೆ. ವಿಶ್ವಕ್ಕೇ ಕಲಿಸುವ ವಿಶ್ವಗುರು ಭ್ರಮೆಯ ಮೋದಿ ಆಡಳಿತದಲ್ಲಿ ಈ ವಿದ್ಯಾರ್ಥಿಗಳು ಮಾತ್ರವಲ್ಲದೆ, ಕೋವಿಡ್, ಹಿಜಾಬ್, ದಿಕ್ಕಿಲ್ಲದ ಶಿಕ್ಷಣ ನೀತಿ ಇತ್ಯಾದಿ ಕಾರಣಗಳಿಂದ ಇಡೀ ದೇಶದ ವಿದ್ಯಾರ್ಥಿಗಳು ಒಂದಲ್ಲ ಒಂದು ರೀತಿಯಲ್ಲಿ ಅತಂತ್ರರಾಗಿರುವುದು ದೇಶದ ಭವಿಷ್ಯಕ್ಕೆ ಮಾರಕವಾಗಲಿರುವ ದುರಂತ.