ಭಾರತದಲ್ಲಿ ಮುಸ್ಲಿಮ್ ಸೈನಿಕರ ಇಳಿಕೆ

Update: 2022-03-18 18:18 GMT

ನೂರಾರು ವರ್ಷಗಳ ಕಾಲ ಭಾರತವನ್ನು ಆಳಿದವರು ಮುಸ್ಲಿಮ್ ದೊರೆಗಳು. ಅದೆಷ್ಟೋ ಮೈಲು ದೂರಗಳಿಂದ, ಮರುಭೂಮಿ, ಕಾಡು, ಗುಡ್ಡಗಳನ್ನು ದಾಟಿ ಭಾರತವನ್ನು ತಲುಪಿದ ಮುಸ್ಲಿಮ್ ಯೋಧರು ಅಂತಿಮವಾಗಿ ಭಾರತದಲ್ಲೇ ಉಳಿದು, ಭಾರತೀಯ ದೊರೆಗಳಾಗಿ ಈ ನೆಲವನ್ನು ಶತ್ರುಗಳ ಮುಖ್ಯವಾಗಿ ಮಂಗೋಲಿಯನ್ನರಂತಹ ದಾಳಿಕೋರರಿಂದ ರಕ್ಷಿಸಿದರು. ಬ್ರಿಟಿಷರಿಗಿಂತ ಮೊದಲು ಚೂರು ಚೂರಾಗಿದ್ದ ಭಾರತದ ತುಂಡುಗಳನ್ನು ಜೋಡಿಸಿದ ಹೆಗ್ಗಳಿಕೆಯೂ ಮುಸ್ಲಿಮ್ ದೊರೆಗಳಿಗೇ ಸಲ್ಲಬೇಕು. ಬ್ರಿಟಿಷರ ಮುಂದೆ ದೇಶದ ಆಳರಸರು, ತುಂಡರಸರು ತಲೆಬಾಗಿದಾಗ ಅವರನ್ನು ದಿಟ್ಟತನದಿಂದ ಎದುರಿಸಿದವರಲ್ಲಿ ಮುಸ್ಲಿಮ್ ಯೋಧರೇ ಪ್ರಮುಖರು. ಪ್ಲಾಸಿ ಕದನದಿಂದ ಹಿಡಿದು, ಟಿಪ್ಪುಸುಲ್ತಾನನವರೆಗೆ ಸಾಲು ಸಾಲು ಉದಾಹರಣೆಗಳು ದೊರಕುತ್ತವೆ. ಪ್ರಥಮ ಸ್ವಾತಂತ್ರ ಹೋರಾಟದಲ್ಲಿ ಪಾಲುಗೊಂಡವರಲ್ಲಿ ಮುಸ್ಲಿಮ್ ಯೋಧರ ಸಂಖ್ಯೆ ಬಹುದೊಡ್ಡದು. ಸ್ವಾತಂತ್ರ ಹೋರಾಟದಲ್ಲಿ ಸಾವಿರಾರು ಮುಸ್ಲಿಮರು ಹುತಾತ್ಮರಾದರು. ಸುಭಾಶ್‌ಚಂದ್ರ ಭೋಸರ ಸೇನೆಯಲ್ಲೂ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿದ್ದರು. ಯುದ್ಧ, ಸಂಘರ್ಷ, ಎದೆಗಾರಿಕೆ ಅವರ ರಕ್ತದಲ್ಲೇ ಹರಿದುಕೊಂಡು ಬಂದಿತ್ತು.

ಹೀಗಿರುವಾಗ ಸ್ವಾತಂತ್ರೋತ್ತರ ದಿನಗಳಲ್ಲಿ ಭಾರತದ ಸೇನೆಯಲ್ಲೇಕೆ ಮುಸ್ಲಿಮರ ಸಂಖ್ಯೆ ಇಳಿಕೆಯಾಗುತ್ತಾ ಬರುತ್ತಿವೆ ಎನ್ನುವ ಪ್ರಶ್ನೆ ನಮ್ಮ ಮುಂದಿದೆ. ಇತ್ತೀಚೆಗೆ ಹುತಾತ್ಮರಾದ ಯೋಧ ಅಲ್ತಾಫ್ ಅವರ ಮೃತದೇಹ ತವರೂರಿಗೆ ಬಂದಾಗ, ಪತ್ರಿಕೆಗಳು ಅಲ್ತಾಫ್‌ನ ತ್ಯಾಗವನ್ನು ಹಾಡಿಹೊಗಳಿದವು. ಆದರೆ ಒಬ್ಬ ರೌಡಿಗೆ ರಾಜಕಾರಣಿಗಳು ನೀಡಿದ ಗೌರವವನ್ನು ಯೋಧನಿಗೆ ನೀಡದೆ ಇರುವ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದರು. ಯೋಧರಲ್ಲೂ ಧರ್ಮವನ್ನು ಹುಡುಕುವ ರಾಜಕಾರಣಿಗಳು ಇರುವವರೆಗೆ ಈ ದೇಶ ಜಾತ್ಯತೀತವಾಗಿ ಬೆಳೆಯುವುದು ಕಷ್ಟವೇ ನಿಜ. ಈ ಹಿನ್ನೆಲೆಯಲ್ಲಿ ದೇಶದ ಸೇನೆಯಲ್ಲಿ ಮುಸ್ಲಿಮರ ಸಂಖ್ಯೆಯ ಇಳಿಕೆಯ ಹಿಂದಿರುವ ವಾಸ್ತವವನ್ನು ಗುರುತಿಸುವ ಕೆಲಸ ಆದ್ಯತೆಯಿಂದ ನಡೆಯಬೇಕಾಗಿದೆ. ಭಾರತದ ಇಂದಿನ 123.7 ಕೋಟಿ ಜನಸಂಖ್ಯೆಯಲ್ಲಿ ಶೇ. 12 ಜನರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರು. 2005ರಲ್ಲಿ, ಭಾರತೀಯ ಮುಸ್ಲಿಮರ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯ ಬಗ್ಗೆ ವರದಿಯೊಂದನ್ನು ತಯಾರಿಸಲು ಪ್ರಧಾನಿ ಮನಮೋಹನ್ ಸಿಂಗ್ ಸಾಚಾರ್ ಸಮಿತಿಯನ್ನು ನೇಮಿಸಿದರು. ಉದ್ಯೋಗ ಕ್ಷೇತ್ರದಲ್ಲಿ ಮುಸ್ಲಿಮರ ವಿರುದ್ಧ ಗಣನೀಯ ಪ್ರಮಾಣದಲ್ಲಿ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎನ್ನುವುದನ್ನು ಸಾಚಾರ್ ವರದಿಯು ಹೊರಗೆಡವಿತು. ಭಾರತೀಯ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ ಶೇ. 12 ಆಗಿದ್ದರೂ, ಸರಕಾರಿ ಉದ್ಯೋಗದಲ್ಲಿ ಅವರ ಪ್ರಮಾಣ ಕೇವಲ ಶೇ. 2.5 ಆಗಿದೆ.

ಇದೇ ಸಂದರ್ಭದಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆಯಿರುವ ಇನ್ನೊಂದು ಕ್ಷೇತ್ರವಾಗಿ ಭಾರತೀಯ ಸೇನೆಯನ್ನು ಗುರುತಿಸಲಾಗಿದೆ. ಸಕ್ರಿಯವಾಗಿ ಕಾರ್ಯಾಚರಿಸುತ್ತಿರುವ ಮುಸ್ಲಿಮ್ ಸೈನಿಕರನ್ನು ಲೆಕ್ಕ ಮಾಡಲಾಗುತ್ತಿಲ್ಲ ಎಂದು ಅಂದಿನ ಸೇನಾ ಮುಖ್ಯಸ್ಥ ಜನರಲ್ ಜೆ.ಜೆ. ಸಿಂಗ್ ಹೇಳಿದ್ದರು. ಹೀಗೆ ಮಾಡುವುದು ಸೇನೆಯ ಜಾತ್ಯತೀತ ಸ್ವರೂಪದ ಘೋರ ಉಲ್ಲಂಘನೆಯಾಗುತ್ತದೆ ಎಂದು ಅವರು ಹೇಳಿದ್ದರು. ಕೋಟಾ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಸೇನೆಯಲ್ಲಿ ಮುಸ್ಲಿಮ್ ಪ್ರಾತಿನಿಧ್ಯವನ್ನು ಹೆಚ್ಚಿಸಬೇಕೆಂಬ ಸಲಹೆಗೂ ಸೇನಾ ಹೈಕಮಾಂಡ್ ಅಸಹನೆ ವ್ಯಕ್ತಪಡಿಸಿತ್ತು. ಅದರ ಪರಿಣಾಮವಾಗಿ, ಭಾರತೀಯ ಸೇನೆಯಲ್ಲಿರುವ ಮುಸ್ಲಿಮ್ ಸೈನಿಕರ ಸಂಖ್ಯೆಯ ಬಗ್ಗೆ ಯಾವುದೇ ಅಧಿಕೃತ ಗಣತಿ ಲಭ್ಯವಿಲ್ಲ.

ಆದರೆ, ಇಲ್ಲೊಂದು ಅನಧಿಕೃತ ಸಂಖ್ಯೆಯಿದೆ. ಸಿಎನ್‌ಎನ್ ಐಬಿಎನ್‌ನ ಅಲ್ಪಸಂಖ್ಯಾತ ವರದಿಯ ಪ್ರಕಾರ, ಭಾರತದ ಸುಮಾರು 10 ಲಕ್ಷ ಸೈನಿಕರಲ್ಲಿ ಕೇವಲ ಶೇ. 3 ಅಥವಾ ಸುಮಾರು 29,000 ಮಂದಿ ಮುಸ್ಲಿಮರು. ಜಮ್ಮು ಮತ್ತು ಕಾಶ್ಮೀರ ಲಘು ಪದಾತಿ ದಳದಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರನ್ನು ಹೊರಗಿಟ್ಟರೆ (ಈ ದಳದಲ್ಲಿರುವ ಸೈನಿಕರ ಪೈಕಿ ಶೇ. 50 ಮಂದಿ ಮುಸ್ಲಿಮರು), ಈ ಶೇಕಡಾವಾರು ಸಂಖ್ಯೆ ಇನ್ನಷ್ಟು ಕಡಿಮೆಯಾಗುತ್ತದೆ. ಅಂದರೆ ದೇಶದಲ್ಲಿರುವ 15 ಕೋಟಿ ಮುಸ್ಲಿಮರ ಪೈಕಿ 29,000 ಮಂದಿ ಮಾತ್ರ ಸೇನೆಯಲ್ಲಿ ಸೇವೆ ಸಲ್ಲಿಸಲು ಅರ್ಹರಾಗಿದ್ದಾರೆ. ಈ ವಿಷಯದಲ್ಲಿ ಸರಕಾರದ ಸಂದೇಹಾಸ್ಪದ ವೌನವು ತಾರತಮ್ಯದ ಶಂಕೆಯನ್ನು ಪುಷ್ಟೀಕರಿಸುತ್ತದೆ.

ಭಾರತೀಯ ಸೇನೆಯಲ್ಲಿ ಈವರೆಗೆ ಎಂಟು ಮುಸ್ಲಿಮ್ ಮೇಜರ್ ಜನರಲ್‌ಗಳು ಸೇವೆ ಸಲ್ಲಿಸಿದ್ದಾರೆ. ಒಮ್ಮೆ ಓರ್ವ ಮುಸ್ಲಿಮ್ ಭಾರತೀಯ ವಾಯು ಪಡೆಯ ಮುಖ್ಯಸ್ಥ, ಅಂದರೆ ಏರ್ ಚೀಫ್ ಮಾರ್ಶಲ್ ಆಗಿದ್ದರು. ಭಾರತೀಯ ಸೇನಾ ಅಕಾಡಮಿಯು ಒಮ್ಮೆ ಮುಸ್ಲಿಮ್ ಕಮಾಂಡೆಂಟ್‌ರನ್ನು ಹೊಂದಿತ್ತು ಹಾಗೂ ನ್ಯಾಶನಲ್ ಡಿಫೆನ್ಸ್ ಅಕಾಡಮಿಯು ಇಬ್ಬರು ಮುಸ್ಲಿಮ್ ಮುಖ್ಯಸ್ಥರನ್ನು ಹೊಂದಿತ್ತು.

ಹೌದು, ಭಾರತೀಯ ಸೇನೆಯಲ್ಲಿ ಮುಸ್ಲಿಮ್ ಸೈನಿಕರು ಮತ್ತು ಅಧಿಕಾರಿಗಳ ಸಂಖ್ಯೆ ಇತರ ಧರ್ಮಗಳ ಸೈನಿಕರು ಮತ್ತು ಅಧಿಕಾರಿಗಳ ಸಂಖ್ಯೆಗೆ ಹೋಲಿಸಿದರೆ ಕಡಿಮೆಯೆಂದು ಕಾಣಬಹುದು. ಐತಿಹಾಸಿಕವಾಗಿ ಹೇಳುವುದಾದರೆ, ಸ್ವಾತಂತ್ರಪೂರ್ವದಲ್ಲಿ ಮುಸ್ಲಿಮ್ ಸೈನಿಕರ ನೇಮಕಾತಿ ಹೆಚ್ಚಿನ ಪ್ರಮಾಣದಲ್ಲಿ ಪಂಜಾಬ್, ನಾರ್ತ್‌ವೆಸ್ಟ್ ಫ್ರಂಟಿಯರ್ ಮತ್ತು ಬಲೂಚಿಸ್ತಾನಗಳಿಂದ ಆಗುತ್ತಿತ್ತು. ಈಗ ಅವುಗಳೆಲ್ಲವೂ ಪಾಕಿಸ್ತಾನದ ಭಾಗಗಳಾಗಿವೆ. ಹಾಗಾಗಿ, ವಿಭಜನೆಯ ಬಳಿಕ, ಈ ವಲಯಗಳಿಗೆ ಸೇರಿರುವ ಎಲ್ಲ ರೆಜಿಮೆಂಟ್‌ಗಳು ಪಾಕಿಸ್ತಾನಕ್ಕೆ ಹೋಗಿವೆ.

ಸೇನೆಯಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆಯಿರುವಂತೆಯೇ, ಬಂಗಾಳಿಗಳು, ಬಿಹಾರಿಗಳು, ಒರಿಯಾಗಳು, ದಕ್ಷಿಣ ಭಾರತೀಯರು ಮತ್ತು ಗುಜರಾತಿಗಳ ಸಂಖ್ಯೆಯೂ ಕಡಿಮೆಯಿದೆ. ಸೇನೆಯಲ್ಲಿ ಸಿಖ್ಖರ ಪ್ರಾತಿನಿಧ್ಯ ಗರಿಷ್ಠವಾಗಿದೆ. ಹಾಗೆಯೇ ಜಾಟರು, ಡೋಗ್ರಾಗಳು, ಗರ್‌ವಾಲಿಗಳು, ಕುಮಾಂವ್‌ನಿಗಳು, ಗೂರ್ಖಾಗಳು ಮತ್ತು ಮರಾಠರ ಸಂಖ್ಯೆಯೂ ಜಾಸ್ತಿಯಿದೆ. ಭಾರತೀಯ ಸೇನೆಯ ನೇಮಕಾತಿ ವಿನ್ಯಾಸವನ್ನು 160 ವರ್ಷಗಳ ಹಿಂದೆ, ಅಂದರೆ 1857ರ ಪ್ರಥಮ ಸ್ವಾತಂತ್ರ ಸಂಗ್ರಾಮದ ಬಳಿಕ ನಿರ್ಧರಿಸಲಾಯಿತು. ದಂಗೆಯಿಂದ ಆಘಾತಗೊಂಡ ಬ್ರಿಟಿಷ್ ಸೇನೆಯು, ಬ್ರಿಟಿಷರ ವಿರುದ್ಧ ದಂಗೆಯೆದ್ದ ಗುಂಪುಗಳನ್ನು ಶಿಕ್ಷಿಸುವ ಹಾಗೂ ಬ್ರಿಟಿಷರಿಗೆ ನಿಷ್ಠೆ ತೋರಿಸಿದ ಗುಂಪುಗಳನ್ನು ಪುರಸ್ಕರಿಸುವ ಉದ್ದೇಶದ ನೇಮಕಾತಿ ವಿಧಾನವೊಂದನ್ನು ರೂಪಿಸಿತು.

ಅವದ್, ಬಿಹಾರ ಮತ್ತು ಪಶ್ಚಿಮ ಬಂಗಾಳದ ಮುಸ್ಲಿಮರು 1857ರ ಬಂಡಾಯದ ನೇತೃತ್ವವನ್ನು ವಹಿಸಿರುವುದಕ್ಕಾಗಿ ಬ್ರಿಟಿಷ್ ಸೇನೆಯು ಈ ರಾಜ್ಯಗಳಿಂದ ಸೈನಿಕರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಿತು. ಈ ಪ್ರದೇಶಗಳ ಮೇಲ್ಜಾತಿಯ ಹಿಂದೂಗಳನ್ನೂ ಬ್ರಿಟಿಷ್ ಸೇನೆಯು ನಿಷೇಧಿತ ಗುಂಪುಗಳ ಪಟ್ಟಿಗೆ ಸೇರಿಸಿತು. ಬಂಗಾಳದಲ್ಲಿದ್ದ ಮೇಲ್ಜಾತಿಯ ಗುಂಪುಗಳ ರೆಜಿಮೆಂಟ್‌ಗಳೂ ಬಂಡಾಯದಲ್ಲಿ ಭಾಗವಹಿಸಿದ್ದವು. ಭಾರತೀಯ ಸೇನೆಯು ಪ್ರದೇಶ ಮತ್ತು ಜಾತಿ ಆಧಾರದ ರೆಜಿಮೆಂಟ್ ವ್ಯವಸ್ಥೆಯನ್ನು ಅನುಸರಿಸುತ್ತಿದೆ. ಇದೇ ಪದ್ಧತಿಯನ್ನು ಇಂದಿನ ಹಲವು ಕಾಮನ್‌ವೆಲ್ತ್ ದೇಶಗಳ ಸೇನೆಗಳಲ್ಲೂ ಕಾಣಬಹುದಾಗಿದೆ.

ಹಾಗಾಗಿ, ನಮ್ಮಲ್ಲಿ ಸಿಖ್ ರೆಜಿಮೆಂಟ್, ಮರಾಠಾ ಲಘು ಪದಾತಿ ದಳ, ಕುಮಾಂವ್ ರೈಫಲ್ಸ್ ಮತ್ತು ಗೂರ್ಖಾ ಸೇರಿದಂತೆ ಇನ್ನೂ ಹಲವಾರು ರೆಜಿಮೆಂಟ್‌ಗಳಿವೆ. ಈ ರೆಜಿಮೆಂಟ್‌ಗಳಲ್ಲಿ ಸಾಮಾನ್ಯವಾಗಿ ನಿರ್ದಿಷ್ಟ ಜಾತಿ ಅಥವಾ ಪ್ರದೇಶಕ್ಕೆ ಸೇರಿದ ಸೈನಿಕರಿರುತ್ತಾರೆ. ಬ್ರಿಟಿಷರು ಈ ವ್ಯವಸ್ಥೆಯನ್ನು ತಮ್ಮ ‘‘ಸಮರ ಜನಾಂಗಗಳು’’ ಸಿದ್ಧಾಂತದ ಆಧಾರದಲ್ಲಿ ಜಾರಿಗೆ ತಂದಿದ್ದಾರೆ. ಆದುದರಿಂದ ಜಮ್ಮು ಮತ್ತು ಕಾಶ್ಮೀರ ಲಘು ಪದಾತಿ ದಳವನ್ನು ಹೊರತುಪಡಿಸಿ ಸೇನೆಯಲ್ಲಿ ಸಂಪೂರ್ಣ ಮುಸ್ಲಿಮ್ ರೆಜಿಮೆಂಟ್ ಇಲ್ಲ. ಜಮ್ಮು ಮತ್ತು ಕಾಶ್ಮೀರ ಲಘು ಪದಾತಿ ದಳದಲ್ಲೂ ಮುಸ್ಲಿಮರ ಪ್ರಮಾಣ ಇರುವುದು ಶೇ. 50 ಮಾತ್ರ. ಇದೇ ವಾದವನ್ನು ಆಂಧ್ರಪ್ರದೇಶ ಅಥವಾ ಪಶ್ಚಿಮ ಬಂಗಾಳ ರಾಜ್ಯಗಳಿಗೆ ಸಂಬಂಧಿಸಿಯೂ ಮಾಡಬಹುದು. ಆ ರಾಜ್ಯಗಳಲ್ಲಿ ಭೌಗೋಳಿಕ ಪ್ರದೇಶದ ಆಧಾರದಲ್ಲಿ ಯಾವುದೇ ಸೇನಾ ರೆಜಿಮೆಂಟ್ ಇಲ್ಲ.

ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಸೇನೆಯ ಕುರಿತಂತೆ ಆಸಕ್ತಿ ಇಳಿಕೆಯಾಗಿದೆ ಎಂದು ಹಿಂದೊಮ್ಮೆ ಸೇನಾಧಿಕಾರಿಯೊಬ್ಬರು ಹೇಳಿದ್ದರು. ಸೇನೆಯೊಳಗಿನ ಕೆಲವು ಅಸಮಾನತೆಗಳೂ ಇದಕ್ಕೆ ಕಾರಣವಾಗಿರಬಹುದು. ಇತ್ತೀಚಿನ ದಿನಗಳಲ್ಲಿ ಸೇನೆಯನ್ನು ರಾಜಕೀಯ ಶಕ್ತಿಗಳು ನಿಯಂತ್ರಿಸಲು ಯತ್ನಿಸುವುದು, ಸೇನೆಯ ಮುಖ್ಯಸ್ಥರೇ ‘ರಾಜಕೀಯ ಮಾತನಾಡುತ್ತಿರುವುದು’ ಸೇನೆಯ ಜಾತ್ಯತೀತ ಘನತೆಗೆ ಕುಂದುಂಟು ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸೇನಾ ನೇಮಕಾತಿಯಲ್ಲಿ ಖಾಸಗಿರಂಗ ಕಾಲಿಟ್ಟಿರುವುದು ಮತ್ತು ಆರೆಸ್ಸೆಸ್‌ನಂತಹ ಜಾತೀಯ ಸಂಘಟನೆಗಳು ಸೇನೆಯ ನೇಮಕಾತಿಯಲ್ಲಿ ಆಸಕ್ತಿ ತೋರಿಸುತ್ತಿರುವುದು ಸೇನೆಯ ಪಾಲಿಗೆ ಒಳಿತಿನ ಸಂಗತಿಯಲ್ಲ. ಇಂತಹ ಸಂದರ್ಭದಲ್ಲಿ, ಮುಸ್ಲಿಮರನ್ನು ಉದ್ದೇಶಪೂರ್ವಕವಾಗಿ ಸೇನೆಯಿಂದ ಹೊರಗಿಡಲಾಗುತ್ತದೆಯೇ ಎನ್ನುವ ಅಂಶವೂ ಚರ್ಚೆಗೆ ಬರಬೇಕಾಗಿದೆ. ಸೇನೆಯ ನೇಮಕಾತಿ ಅರ್ಹತೆಯ ಆಧಾರದಲ್ಲಿಯೇ ನಡೆಯುತ್ತದೆ. ಅಲ್ಲಿ ಮೀಸಲಾತಿ ಎನ್ನುವುದು ಇಲ್ಲ ನಿಜ. ಆದರೆ ತಳಸ್ತರದ ಜವಾನರೆಲ್ಲ ಬಹುತೇಕ ಕೆಳಜಾತಿ, ವರ್ಗಕ್ಕೆ ಸೇರಿದವರೇ ಆಗಿರುತ್ತಾರೆ. ಮೇಲ್ ಸ್ತರದಲ್ಲಿರುವ ಅಧಿಕಾರಿಗಳೆಲ್ಲ ಮೇಲ್‌ವರ್ಗ, ಮೇಲ್‌ಜಾತಿಗೆ ಸೇರಿದವರಾಗಿರುವುದು ಆಕಸ್ಮಿಕ ಖಂಡಿತಾ ಅಲ್ಲ. ನಮ್ಮ ಸೇನೆಯನ್ನು ಎಲ್ಲ ಜಾತಿ, ಧರ್ಮಗಳನ್ನು ಒಳಗೊಳ್ಳುವಂತೆ ಮಾಡುವುದು ಭಾರತದ ಸೇನೆಯ ಘನತೆಗೆ ಅತ್ಯಗತ್ಯವಾಗಿದೆ. ಭಾರತದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಇದರಿಂದ ಬಹಳಷ್ಟು ಪ್ರಯೋಜನಗಳಿವೆ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News