ಕಾಡು ಬರೀ ಕಾಡಲ್ಲ, ಅದು ಬದುಕಿನ ಬಣ್ಣ

Update: 2022-03-19 19:30 GMT

ಕಾಡಿನ ಸಾಂಗತ್ಯವೇ ಒಂದು ವಿಶೇಷ ಅನುಭೂತಿ. ಕಾಡು ನೊಂದ ಮನಸ್ಸಿಗೆ ಸಾಂತ್ವನ ಕೇಂದ್ರ ಅಂದರೂ ತಪ್ಪಲ್ಲ. ಅನಾದಿ ಕಾಲದಿಂದಲೂ ಕಾಡಿನೊಂದಿಗಿನ ನಮ್ಮ ನಂಟು ಉಳಿದುಕೊಂಡೇ ಬಂದಿದೆ. ಆದರೆ ಇತ್ತೀಚಿನ ದಶಕಗಳಲ್ಲಿ ಕಾಂಕ್ರೀಟ್ ಕಾಡಿನಲ್ಲಿ ವಾಸಿಸತೊಡಗಿದ ಮೇಲೆ ನೈಸರ್ಗಿಕ ಕಾಡಿನ ನಂಟು ದೂರವಾಗುತ್ತಿದೆ. ನಮಗೆಲ್ಲಾ ಕಾಡಿನ ಉಪಯೋಗಗಳ ಸ್ಪಷ್ಟ ಅರಿವು ಇದೆ. ಉಸಿರಾಡಲು ಬೇಕಾದ ಶುದ್ಧ ಗಾಳಿಯಿಂದ ಹಿಡಿದು, ಮಾನವನ ಐಶಾರಾಮಿ ಜೀವನಕ್ಕೆ ಬೇಕಾದ ಸಕಲ ಸಂಪತ್ತನ್ನು ಕಾಡು ಒದಗಿಸುತ್ತದೆ ಎಂಬುದು ನಮಗೆಲ್ಲಾ ತಿಳಿದೇ ಇದೆ. ಆದರೆ ಅತಿಯಾದ ಐಶಾರಾಮಿತನ ಮನುಕುಲಕ್ಕೆ ಕಂಟಕ ಎಂಬುದನ್ನು ನಾವಿಂದು ಮರೆಯುತ್ತಿದ್ದೇವೆ. ವಿವಿಧ ಕಾರಣಗಳಿಗಾಗಿ ಕಾಡನ್ನು ನಾಶ ಮಾಡಿಕೊಳ್ಳುವ ಮೂಲಕ ನಮ್ಮ ಬದುಕಿಗೆ ನಾವೇ ಕೊಳ್ಳಿ ಇಟ್ಟುಕೊಳ್ಳುತ್ತಿದ್ದೇವೆ. ಜನಜೀವನಕ್ಕೆ ಅಗತ್ಯವಾದ ಕಾಡನ್ನು ಸಂರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂಬ ಪ್ರಜ್ಞೆ ಮೊಳಕೆಯೊಡೆದ ಪ್ರತಿ ಮಾನವನೂ ಅದರ ಸಂರಕ್ಷಣೆಯಲ್ಲಿ ತೊಡಗಿಕೊಂಡ. ಇದಕ್ಕೆ ಸ್ಫೂರ್ತಿಯಾದದ್ದು, ಚಿಪ್ಕೋ ಚಳವಳಿ. 1973ರಲ್ಲಿ ಸರಕಾರಿ ಗುತ್ತಿಗೆದಾರರು ಹಿಮಾಲಯದಲ್ಲಿನ ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸುವ ಕುಕೃತ್ಯದಲ್ಲಿ ತೊಡಗಿಸಿಕೊಂಡರು. ಇದನ್ನು ಅರಿತ ಸುಂದರಲಾಲ್ ಬಹುಗುಣ ಅವರು ವಿಭಿನ್ನ ರೀತಿಯಲ್ಲಿ ಚಳವಳಿ ಪ್ರಾರಂಭಿಸಿದರು. ಮರಗಳನ್ನು ಅಪ್ಪಿಕೊಳ್ಳುವ ಮೂಲಕ ಅವುಗಳ ಸಂರಕ್ಷಣೆಗೆ ಮುಂದಾದರು. ಮುಂದೆ ಇದು 'ಅಪ್ಪಿಕೋ ಚಳವಳಿ' ಎಂಬ ಹೆಸರಿನೊಂದಿಗೆ ಇಡೀ ದೇಶದ ಗಮನ ಸೆಳೆಯಿತು.

ಕರ್ನಾಟಕದಲ್ಲೂ ಅಪ್ಪಿಕೋ ಚಳವಳಿಯ ಕಾವು ಫಲ ನೀಡಿತ್ತು. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹಳ್ಳಿಗರು ತಮ್ಮ ಕಾಡುಗಳನ್ನು ಉಳಿಸಲು ಇದೇ ರೀತಿಯ ಚಳವಳಿಯನ್ನು ಪ್ರಾರಂಭಿಸಿದರು. ಸೆಪ್ಟಂಬರ್ 1983ರಲ್ಲಿ, ಸಲ್ಕಾನಿಯ ಪುರುಷರು, ಮಹಿಳೆಯರು ಮತ್ತು ಮಕ್ಕಳು ಕಳಸೆ ಕಾಡಿನಲ್ಲಿ ಮರಗಳನ್ನು ತಬ್ಬಿಕೊಳ್ಳುವ ಮೂಲಕ ಮರಗಳ ರಕ್ಷಣೆಗೆ ಸ್ವಯಂ ಜಾಗೃತರಾದರು. ನಂತರದಲ್ಲಿ ಅಪ್ಪಿಕೋ ಆಂದೋಲನವು ದಕ್ಷಿಣ ಭಾರತದಾದ್ಯಂತ ಹೊಸ ಜಾಗೃತಿಯನ್ನು ಹುಟ್ಟುಹಾಕಿತು. ಕಳೆದ ಐದು ದಶಕಗಳ ಅರಣ್ಯ ಪ್ರದೇಶದ ಮಾಹಿತಿಯನ್ನು ಗಮನಿಸಿದರೆ ಒಂದಿಷ್ಟು ಆಶಾದಾಯಕ ಭಾವನೆ ಮೂಡುತ್ತದೆ. 1987ರಲ್ಲಿ ಭಾರತದ ಒಟ್ಟು ಭೂಪ್ರದೇಶದ 640,819 (ಶೇ.19.49) ಚದರ ಕಿಲೋಮೀಟರ್‌ನಷ್ಟಿದ್ದ ಅರಣ್ಯ ಪ್ರದೇಶ, 2019ರಲ್ಲಿ 712,249(ಶೇ.21.67) ಚದರ ಕಿ.ಮೀ.ಗೆ ಹೆಚ್ಚಾಗಿದೆ. ಜನಸಂಖ್ಯೆಯ ಹೆಚ್ಚಳ, ಕ್ಷಿಪ್ರ ನಗರೀಕರಣ ಮತ್ತು ಅರಣ್ಯಗಳಂತಹ ಸಂಪನ್ಮೂಲಗಳ ಮೇಲೆ ಪ್ರಚಂಡ ಒತ್ತಡದ ಹೊರತಾಗಿಯೂ ಶೇ.2ಕ್ಕಿಂತ ಸ್ವಲ್ಪ ಹೆಚ್ಚು ಅರಣ್ಯದ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಬಹುಶಃ ಕಾಡುಗಳಲ್ಲಿನ ಬದಲಾವಣೆ ಮತ್ತು ಅವುಗಳ ಪ್ರಾಮುಖ್ಯತೆಯು ಜನರಲ್ಲಿ ಮೂಡಿದುದು ಕಾರಣವೇ ಅಥವಾ ಇಲಾಖೆಯ ದಿಟ್ಟ ಯೋಜನೆಗಳು ಕಾರಣವೇ ಗೊತ್ತಿಲ್ಲ. ಆದರೂ ಅರಣ್ಯ ಪ್ರದೇಶದ ಹೆಚ್ಚಳ ಆಶಾದಾಯಕವಾಗಿದೆ. ಭಾರತದಲ್ಲಿ ಅರಣ್ಯ ಪ್ರದೇಶದ ಪ್ರಮಾಣ ಹೆಚ್ಚಳವಾಗಿರುವುದು ಒಂದು ರೀತಿಯಲ್ಲಿ ಖುಷಿಯ ವಿಚಾರ. ಏಕೆಂದರೆ ದೇಶದ ಅರಣ್ಯದಲ್ಲಿ ಒಟ್ಟು ಇಂಗಾಲದ ಸಂಗ್ರಹವು 7,204 ಮಿಲಿಯನ್ ಟನ್‌ಗಳು ಎಂದು ಅಂದಾಜಿಸಲಾಗಿದೆ. ಅಂದರೆ ಪರಿಸರಕ್ಕೆ ಸೇರಿ, ತಾಪಮಾನ ಏರಿಕೆಗೆ ಕಾರಣವಾಗಬೇಕಿದ್ದ ಇಷ್ಟು ಪ್ರಮಾಣದ ಇಂಗಾಲವನ್ನು ಅರಣ್ಯವು ಹಿಡಿದಿಟ್ಟುಕೊಂಡಿದೆ. ಇದರಿಂದ ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯಲ್ಲಿ ಅರಣ್ಯಗಳ ಪಾತ್ರ ಎಷ್ಟಿದೆ ಎಂಬುದು ತಿಳಿಯುತ್ತದೆ. ಆದರೆ ಇನ್ನೊಂದು ಅಂಶವನ್ನು ನಾವೆಲ್ಲರೂ ಗಮನಿಸಲೇಬೇಕು. ಅದೇನೆಂದರೆ ಅರಣ್ಯ ಪ್ರದೇಶ ಹೆಚ್ಚಾಗಿರುವುದು ಮೊದಲು ಅರಣ್ಯ ಇದ್ದ ಪ್ರದೇಶದ ಸುತ್ತಮುತ್ತ ಎಂಬುದು ಗಮನಾರ್ಹ. ಬಹುತೇಕ ಅರಣ್ಯ ಪ್ರದೇಶವು ಕರಾವಳಿ ಮತ್ತು ಅರಾವಳಿ ಪ್ರದೇಶದ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚಾಯಿತೇ ವಿನಹ ಬಯಲು ಸೀಮೆಗಳಲ್ಲಿ ಅಲ್ಲ.

ಮೊದಲೆಲ್ಲಾ ಬಯಲು ಸೀಮೆಯ ರಸ್ತೆಯ ಬದಿಗಳಲ್ಲಿ ಅಲ್ಲೊಂದು ಇಲ್ಲೊಂದು ಮರಗಳು ಕಾಣಿಸುತ್ತಿದ್ದವು. ರಸ್ತೆ ಅಭಿವೃದ್ದಿ ಮತ್ತು ಅಗಲೀಕರಣದ ಹೆಸರಿನಲ್ಲಿ ರಸ್ತೆ ಬದಿಯ ಮರಗಳನ್ನೆಲ್ಲಾ ನಾಶ ಮಾಡಲಾಯಿತು. ಬಯಲು ಸೀಮೆಗಳಲ್ಲಿ ಬಹುತೇಕ ಜೀವಗಳಿಗೆ ಆಶ್ರಯ ತಾಣವಾಗಿದ್ದ ರಸ್ತೆಯ ಬದಿಯ ಮರಗಳು ಇಲ್ಲವಾದ್ದರಿಂದ ಅವುಗಳನ್ನು ಆಶ್ರಯಿಸಿದ್ದ ಜೀವಿಗಳು ನಾಶ ಹೊಂದಿದವು. ಹಾಗಾದರೆ ಪರಿಸರ ಸಂರಕ್ಷಣೆ ಮತ್ತು ಜೀವವೈವಿಧ್ಯ ಸಂರಕ್ಷಣೆ ಎಂಬುದು ಕೇವಲ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವೇ ಎಂಬ ಪ್ರಶ್ನೆ ಮೂಡುತ್ತದೆ. ಜೀವವೈವಿಧ್ಯ ತಾಣಗಳಲ್ಲಿ ಅರಣ್ಯ ಸಂರಕ್ಷಣೆಗೆ ನೀಡುವ ಮಹತ್ವ ಮತ್ತು ಕಾಳಜಿಯನ್ನು ಬಯಲ ಸೀಮೆಗೂ ನೀಡುವಂತಾಗಬೇಕು, ಬಯಲ ಸೀಮೆಗಳಲ್ಲಿ ಕನಿಷ್ಠ ರಸ್ತೆ ಬದಿ ಮರಗಳನ್ನಾದರೂ ಉಳಿಸುವ, ಬೆಳೆಸುವ ಕಾರ್ಯ ತ್ವರಿತವಾಗಬೇಕಿದೆ. ಕಾಡುಗಳು ಸುಸ್ಥಿರ ಅಭಿವೃದ್ಧಿಯ ಸಂಕೇತ ಎಂದು ಹೇಳುತ್ತೇವೆ. ಅಲ್ಲಿನ ಜೀವರಾಶಿಯು ದೇಶದ ಸಂಪತ್ತಿನ ಪ್ರತೀಕ ಎಂದೆಲ್ಲಾ ಹೇಳುತ್ತೇವೆ. ಆದಾಗ್ಯೂ ಕಾಡು ರಕ್ಷಣೆಗೆ ಇನ್ನಷ್ಟು ಬಲ ತುಂಬುವ ಅಗತ್ಯವಿದೆ. ಇತ್ತೀಚಿನ ವರ್ಷಗಳಲ್ಲಿ ಕಾಡಿನ ಕಾಳಜಿ ಕಡಿಮೆಯಾಗಿದೆ ಎಂದೇ ಹೇಳಬಹುದು. ಕಾಡಿನಲ್ಲಿರುವ ಬೆಲೆ ಬಾಳುವ ಮರಗಳು ಮರಗಳ್ಳರ ಪಾಲಾಗುತ್ತಿವೆ. ಇದರ ಹಿಂದೆ ದೊಡ್ಡ ದೊಡ್ಡ ಕುಳಗಳಿವೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇಲಾಖೆ ಮತ್ತು ಅಧಿಕಾರಿಗಳು ಸುಮ್ಮನೆ ಇರುವುದು ಅವರ ಸಪೋರ್ಟನ್ನು ಎತ್ತಿ ತೋರುತ್ತಿದೆ. ಕಾಡು ರಕ್ಷಣೆಯ ಹರಿಕಾರರಾಗಿದ್ದ ಬಹುತೇಕ ಬುಡಕಟ್ಟು ಜನರನ್ನು ಅಭಿವೃದ್ಧಿಯ ಹೆಸರಿನಲ್ಲಿ ಒಕ್ಕಲೆಬ್ಬಿಸಿದ್ದು ಕಾಡು ರಕ್ಷಣೆಯ ಬಹು ದೊಡ್ಡ ಹಿನ್ನಡೆ ಎನ್ನಬಹುದು. ಈಗ ಅವರಿಗೆ ಕಾಡು ಇಲ್ಲ, ನಿಲ್ಲಲು ಸರಿಯಾದ ಸೂರು ಮತ್ತು ಇನ್ನಿತರ ಮೂಲಭೂತ ಸೌಲಭ್ಯಗಳೂ ಇಲ್ಲದಂತಾಗಿದೆ. ಅವರು ಕಾಡಿನಲ್ಲಿದ್ದರೆ ಸ್ವಯಂ ಪ್ರೇರಿತರಾಗಿ ಕಾಡ ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು.

ಕಾಂಕ್ರಿಟ್ ಕಾಡು ಎಲ್ಲರನ್ನು, ಎಲ್ಲವನ್ನು ನಾಶ ಮಾಡುತ್ತಿದೆ ಎಂಬ ಅರಿವು ನಮೆಗಲ್ಲರಿಗೂ ಇದೆ. ಆದರೆ ಯಾರೂ ಇದನ್ನು ದೂರ ಮಾಡಲು ಮನಸ್ಸು ಮಾಡುತ್ತಿಲ್ಲ. ಎಲ್ಲರೂ ಅದರತ್ತಲೇ ಆಕರ್ಷಿತರಾಗುತ್ತಿದ್ದಾರೆ. ಇದು ಅಭಿವೃದ್ಧಿಯ ಮಾದರಿಯಲ್ಲ. ನಮ್ಮ ಬದುಕಿನ ಸೌಂದರ್ಯಕ್ಕೆ ಬಣ್ಣಗಳು ಬೇಕು. ಸದ್ಯದ ಮಟ್ಟಿಗೆ ಹೇಳುವುದಾದರೆ ನಮ್ಮ ಜೀವನ ಬಣ್ಣಗಳಿಲ್ಲದೆ ಕಪ್ಪುಬಿಳುಪಿನ ಯಾಂತ್ರಿಕ ಬದುಕಾಗಿದೆ. ಆ ಬದುಕು ಮತ್ತೆ ಬಣ್ಣಗಳನ್ನು ಪಡೆದು ಜೀವಂತವಾಗಬೇಕಾದರೆ ಕಾಡನ್ನು ಇನ್ನಷ್ಟು ಜೀವಂತವಾಗಿರಿಸುವ ಪಣ ತೊಡಬೇಕಿದೆ. ಈಗಾಗಲೇ ಅದೆಷ್ಟೊ ಕಾಡಿನ ಸಂಪತ್ತು ಕಳೆದುಹೋಗಿದೆ. ಈಗಿರುವ ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸುವ ಜೊತೆಗೆ ಇನ್ನಷ್ಟು ಅರಣ್ಯ ಪ್ರದೇಶವನ್ನು ವಿಸ್ತರಿಸುವ ಯೋಜನೆಗಳು ಆದಷ್ಟು ಬೇಗನೆ ಕಾರ್ಯಗತಗೊಳ್ಳಲಿ, ಎಲ್ಲರೂ ಕಾಡ ರಕ್ಷಣೆಯತ್ತ ಚಿತ್ತ ಹರಿಸುವ ಮೂಲಕ ಬದುಕಿಗೆ ಬಣ್ಣದ ರಂಗನ್ನು ಪಡೆದುಕೊಳ್ಳೋಣ. ಪ್ರಸ್ತುತ ಸಂದರ್ಭದಲ್ಲಿ ಹತ್ತನೇ ತರಗತಿಯ ದ್ವೀತಿಯ ಭಾಷೆ ಇಂಗ್ಲಿಷ್‌ನ ಒಂದು ಪಾಠ ಹೆಚ್ಚು ಮಹತ್ವ ಎನಿಸುತ್ತದೆ. 'ಜಂಟಲ್‌ಮನ್ ಆಫ್ ರಿಯೋ ಎನ್ ಮಿಡಿಯೋ' ಪಾಠದಲ್ಲಿ ಡಾನ್ ಆನ್‌ಸೆಲ್ಮೋ ಎಂಬ ಪಾತ್ರವು ನನ್ನನ್ನು ಸದಾ ಕಾಡುತ್ತದೆ.

ಲೇಖಕ ಜುವಾನ್ ಎ.ಎ. ಸೆಡಿಲ್ಲೋ ಅವರು ಆ ಪಾತ್ರದ ಮೂಲಕ ನೆಲ ಮತ್ತು ಮರಗಳ ಪ್ರೀತಿಯನ್ನು ಎತ್ತಿ ತೋರಿಸುತ್ತಾರೆ. ಆ ಹಳ್ಳಿಯಲ್ಲಿ ಯಾವುದೇ ಮನೆಯಲ್ಲಿ ಮಗು ಜನಿಸಲಿ, ಮಗುವಿನ ಹೆಸರಿನಲ್ಲಿ ಡಾನ್ ಆನ್‌ಸೆಲ್ಮೋ ಒಂದು ಹಣ್ಣಿನ ಸಸಿ ನೆಟ್ಟು ಬೆಳೆಸುತ್ತಾನೆ. ಹೀಗೆ ಬೆಳೆಸಿದ ಸಸಿಗಳೆಲ್ಲಾ ಬೆಳೆದು ಹೆಮ್ಮರಗಳಾಗಿ ಫಲ ನೀಡುತ್ತವೆ. ಕಾರಣಾಂತರಗಳಿಂದ ಆ ಹಣ್ಣಿನ ತೋಟವನ್ನು ಮಾರುತ್ತಾನೆ. ಕೆಲವು ದಿನಗಳ ನಂತರ ತೋಟ ಕೊಂಡುಕೊಂಡವರು ''ಹಣ್ಣಿನ ತೋಟದೊಳಗೆ ಮಕ್ಕಳು ಬರುತ್ತಾರೆ, ಹಣ್ಣುಗಳನ್ನು ಕಿತ್ತು ತಿನ್ನುತ್ತಾರೆ, ದಬಾಯಿಸಿದರೆ ನಮ್ಮನ್ನೇ ದಬಾಯಿಸುತ್ತಾರೆ'' ಎಂದು ಡಾನ್ ಆನ್‌ಸೆಲ್ಮೋಗೆ ದೂರು ನೀಡುತ್ತಾರೆ. ಇದನ್ನು ಕೇಳಿದ ಆನ್‌ಸೆಲ್ಮೋ, ''ನಾನು ತೋಟವನ್ನು ಮಾತ್ರ ಮಾರಿದ್ದೇನೆ. ಮರಗಳನ್ನಲ್ಲ. ತೋಟದಲ್ಲಿನ ಮರಗಳು ನನಗೆ ಸೇರಿಲ್ಲ, ಆ ಮಕ್ಕಳಿಗೆ ಸೇರಿದ್ದು'' ಎಂದು ಹೇಳುವ ಮೂಲಕ ಮಕ್ಕಳು ಹಾಗೂ ಮರಗಳ ಪ್ರೀತಿಯನ್ನು ಮರೆಯುತ್ತಾನೆ. ಇಂತಹ ಮೌಲ್ಯಯುತ ಪಾಠವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ, ಪ್ರತಿಯೊಬ್ಬರೂ ಕನಿಷ್ಠ ಒಂದು ಮರ ನೆಟ್ಟು ಬೆಳೆಸುವ ಪ್ರಯತ್ನವನ್ನು ನಾವೆಲ್ಲರೂ ಮಾಡಲೇಬೇಕಾದ ಅನಿವಾರ್ಯತೆ ಇದೆ. ಅಲ್ಲವೇ?

Writer - ಆರ್.ಬಿ.ಗುರುಬಸವರಾಜ

contributor

Editor - ಆರ್.ಬಿ.ಗುರುಬಸವರಾಜ

contributor

Similar News