ಎಲ್ಲವೂ ನೀರಿನಿಂದಲೇ...

Update: 2022-03-22 05:44 GMT
ವಿಶ್ವ ಜಲ ದಿನ

ವಿಶ್ವಸಂಸ್ಥೆ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ಆಚರಿಸುತ್ತಾ ಬರುತ್ತಿದ್ದು ಮೊದಲ ವಿಶ್ವ ಜಲ ದಿನವನ್ನು 1993ರಲ್ಲಿ ಪ್ರಾರಂಭಿಸಲಾಯಿತು. ಈ ವರ್ಷ ‘ಶುದ್ಧ ನೀರು’ ಬಗೆಗಿನ ಪ್ರಾಮುಖ್ಯತೆಯ ಯೋಜನೆಗಳನ್ನು ತೆಗೆದುಕೊಂಡಿದ್ದು, ಈ ದಿನವನ್ನು ‘ಸಿಹಿನೀರು ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ’ ಪ್ರತಿಪಾದಿಸಲು ವಿಶ್ವ ಜಲ ದಿನವನ್ನು ಬಳಸಿಕೊಳ್ಳಲಾಗುತ್ತಿದೆ.

ಶುದ್ಧ ನೀರು, ನೈರ್ಮಲ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರೀಕರಿಸಲಾಗಿ ಸುಸ್ಥಿರ ನೀರನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ವಿಶ್ವಸಂಸ್ಥೆಯು ವಿಶ್ವ ಜಲ ಅಭಿವೃದ್ಧಿಯ ವರದಿಯನ್ನು ಪ್ರತಿ ವರ್ಷ ವಿಶ್ವ ಜಲ ದಿನದ ಆಸುಪಾಸಿನಲ್ಲಿ ಬಿಡುಗಡೆ ಮಾಡುತ್ತದೆ. ವಿಶ್ವ ಸಂಸ್ಥೆ ಪ್ರತಿ ವರ್ಷ ಒಂದು ಥೀಮನ್ನು ಆಯ್ಕೆ ಮಾಡಿಕೊಂಡು ಅದರ ಬಗ್ಗೆ ಇಡೀ ವರ್ಷ ಒತ್ತು ನೀಡುತ್ತದೆ. 2021ರಲ್ಲಿ ನೀರನ್ನು ಮೌಲ್ಯೀಕರಿಸುವುದರ ಬಗೆಗಿನ ವಿಷಯವನ್ನು ತೆಗೆದುಕೊಳ್ಳಲಾಗಿತ್ತು.

ಸಾರ್ವಜನಿಕ ಅಭಿಯಾನದೊಂದಿಗೆ ನೀರಿನ ಬಗ್ಗೆ ಜನರ ಕಥೆಗಳು, ಆಲೋಚನೆಗಳು ಮತ್ತು ಭಾವನೆಗಳನ್ನು ಮಾಧ್ಯಮಗಳ ಮೂಲಕ ಹಂಚಿಕೊಳ್ಳುವಂತೆ ಮಾಡಲಾಗಿತ್ತು. 2020ರಲ್ಲಿ ‘ನೀರು ಮತ್ತು ಹವಾಮಾನ ಬದಲಾವಣೆ’, 2016ರಿಂದ 2019ರ ನಡುವೆ ‘ನೀರು ಮತ್ತು ಉದ್ಯೋಗಗಳು’, ‘ನೀರನ್ನು ಏಕೆ ವ್ಯರ್ಥ ಮಾಡುವುದು’ ‘ನೀರಿನ ಪ್ರಕೃತಿ’ ಮತ್ತು ‘ಯಾರನ್ನೂ ಹಿಂದೆ ಬಿಟ್ಟು ಹೋಗಬಾರದು’ ವಿಷಯಗಳನ್ನು ಕ್ರಮವಾಗಿ ತೆಗೆದುಕೊಂಡು ಅಭಿಯಾನಗಳನ್ನು ನಡೆಸಲಾಗಿತ್ತು. ವಿಶ್ವ ಜಲ ದಿನವನ್ನು ಜಗತ್ತಿನಾದ್ಯಂತ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗತ್ತದೆ. ನಾಟಕಗಳು, ಸಂಗೀತ ಮತ್ತು ಜಗತ್ತಿನ ರಾಷ್ಟ್ರ ನಾಯಕರ, ಸಂಸ್ಥೆಗಳ ಸಾರ್ವಜನಿಕ ಸಭೆಗಳು ಮತ್ತು ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಗುತ್ತದೆ. ನೀರಿಗೆ ಸಂಬಂಧಿತ ವಿಷಯಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ವಿಶ್ವದಾದ್ಯಂತ ಜನರನ್ನು ಪ್ರೇರೇಪಿಸುವುದು ಕೂಡ ಇದರ ಒಂದು ಭಾಗವಾಗಿದೆ.

ನೀರಿನ ಯೋಜನೆಗಳಿಗೆ ಹಣವನ್ನು ಸಂಗ್ರಹಿಸುವ ಅಭಿಯಾನವನ್ನು ಮಾಡಲಾಗುತ್ತದೆ. ನೀರಿನ ಕೊರತೆ, ಜಲ ಮಾಲಿನ್ಯ, ಅಸಮರ್ಪಕ ನೀರು ಪೂರೈಕೆ, ನೈರ್ಮಲ್ಯದ ಕೊರತೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಸಂಬಂಧಪಟ್ಟ ಪ್ರಮುಖ ಸಮಸ್ಯೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಭೂಮಿ ಶೇ. 71 ನೀರಿನಿಂದ ಆವರಿಸಿಕೊಂಡಿದ್ದು ಉಳಿದ ಶೇ. 29 ಬೆಟ್ಟಗುಡ್ಡ, ಕಾಡು, ಕಣಿವೆ, ನೆಲದಿಂದ ಕೂಡಿದೆ. ಒಟ್ಟು ನೀರಿನಲ್ಲಿ ಶೇ. 97.63 ನೀರು ಉಪ್ಪುನೀರಾದರೆ ಉಳಿದ ಶೇ. 2.37 ನೀರು ಮಾತ್ರ ಕುಡಿಯಲು ಯೋಗ್ಯವಾದ ಸಿಹಿ ನೀರಾಗಿದೆ. ಈ ಸಿಹಿ ನೀರಿನ ಬಹುಭಾಗ ಧ್ರುವ ಪ್ರದೇಶಗಳಲ್ಲಿ, ಹಿಮಪರ್ವತಗಳಲ್ಲಿ ಮತ್ತು ಆಳವಾದ ಶಿಲಾಸ್ತರಗಳಲ್ಲಿ ಗಟ್ಟಿಗೊಂಡಿದೆ. ಭೂಮಿಯಲ್ಲಿ ನೀರು ಘನ, ದ್ರವ, ಅನಿಲ ಮೂರೂ ರೂಪಗಳಲ್ಲಿ ದೊರಕುತ್ತದೆ. ವಾತಾವರಣ ಝೀರೋ ಡಿಗ್ರಿ ಸೆಂಟಿಗ್ರೇಡ್ ಕೆಳಕ್ಕೆ ಹೋದಾಗ ಘನರೂಪ, 100 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚಾದಾಗ ಆವಿಯಾಗಿ ಮತ್ತು ಇದರ ಮಧ್ಯದ ತಾಪಮಾನದಲ್ಲಿ ದ್ರವ ರೂಪದಲ್ಲಿ ನೀರು ದೊರಕುತ್ತದೆ. ಎಲ್ಲಾ ಸಮುದ್ರಗಳಲ್ಲಿ ಶೇ. 97.2 ನೀರು ತುಂಬಿಕೊಂಡಿದ್ದರೆ, ಹಿಮನದಿಗಳು ಮತ್ತು ಮಂಜುಗಡ್ಡೆ ಶೇ. 2.15, ಅಂತರ್ಜಲ ಶೇ. 0.61, ಸರೋವರಗಳು ಶೇ. 0.009, ಒಳಸಮುದ್ರಗಳು ಶೇ. 0.008, ಮಣ್ಣಿನಲ್ಲಿರುವ ನೀರಿನಾಂಶ ಶೇ. 0.005, ವಾತಾವರಣದಲ್ಲಿರುವ ತೇವಿನಾಂಶ ಶೇ.0.001 ಮತ್ತು ನದಿಗಳಲ್ಲಿ ಶೇ. 0.0001 ನೀರಿದೆ. ಇನ್ನು ಮನುಷ್ಯನ ದೇಹದಲ್ಲಿರುವ ಸರಾಸರಿ ನೀರಿನಾಂಶ ಶೇ.65, ಎಲ್ಲಾ ಪ್ರಾಣಿ-ಪಕ್ಷಿಗಳು ಹೆಚ್ಚು ಕಡಿಮೆ ಅಷ್ಟೇ ನೀರಿನಾಂಶವನ್ನು ಹೊಂದಿರುತ್ತವೆ. ಗಿಡಮರಗಳಂತೂ ಶೇ. 50ರಿಂದ 95ರಷ್ಟು ನೀರನ್ನು ಹೊಂದಿರುತ್ತವೆ.

ಅಂದರೆ ಭೂಮಿಯಲ್ಲಿರುವ ಪ್ರತಿಯೊಂದು ವಸ್ತುವೂ ನೀರಿನಿಂದಲೇ ತುಂಬಿಕೊಂಡಿದೆ ಎಂದರೆ ನೀರಿನ ಪ್ರಾಮುಖ್ಯತೆಯನ್ನು ಒತ್ತಿ ಹೇಳಬೇಕಿಲ್ಲ. ನೀರಿನ ಗುಣಮಟ್ಟವನ್ನು ಮುಖ್ಯವಾಗಿ ಎರಡು ರೀತಿಯಲ್ಲಿ ಗುರುತಿಸಲಾಗುತ್ತದೆ. ಒಂದು ಪಿಎಚ್ ಮೌಲ್ಯ. ಎರಡು ಟಿಡಿಎಸ್. ಪಿಎಚ್ ಎಂದರೆ ನೀರಿನಲ್ಲಿರುವ ಆಮ್ಲೀಯತೆ (ಆ್ಯಸಿಡಿಕ್) ಮತ್ತು ಕ್ಷಾರೀಯತೆ (ಆಲ್ಕಲೈನ್). ನೀರಿನಲ್ಲಿ ಜಲಜನಕ ಮತ್ತು ಹೈಡ್ರಾಕ್ಸಿಲ್ ಅಯಾನುಗಳು ಸಮನಾಗಿದ್ದರೆ ನೀರಿನ ಪಿಎಚ್ 7 ಎನ್ನುತ್ತೇವೆ. ಜಲಜನಕದ ಅಂಶಗಳು ಜಾಸ್ತಿ ಇದ್ದರೆ ಪಿಎಚ್ 7ಕ್ಕಿಂತ ಕಡಿಮೆ, ಹೈಡ್ರಾಕ್ಸಿಲ್ ಅಯಾನುಗಳು ಜಾಸ್ತಿ ಇದ್ದರೆ ಪಿಎಚ್ 7ಕ್ಕಿಂತ ಜಾಸ್ತಿ ಇರುತ್ತದೆ. ಇಂಡಿಯನ್ ಬ್ಯೂರೋ ಆಫ್ ಸ್ಟ್ಯಾಂಡರ್ಡ್ (ಐಬಿಎಸ್) ಮಾನದಂಡದ ಪ್ರಕಾರ ಪಿಎಚ್ ಅಂಶವು 6.5ರಿಂದ 8.5 ಮಧ್ಯ ಇದ್ದರೆ ನೀರು ಕುಡಿಯಲು ಯೋಗ್ಯ. ಪಿಎಚ್ 6.5ಕ್ಕಿಂತ ಕಡಿಮೆ 8.5ಕ್ಕಿಂತ ಹೆಚ್ಚಿದ್ದರೆ ಕುಡಿಯಲು ಯೋಗ್ಯವಲ್ಲ. ಇಂತಹ ನೀರನ್ನು ಸತತವಾಗಿ ಕುಡಿಯುತ್ತಿದ್ದರೆ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಇನ್ನು ನೀರಿನಲ್ಲಿ ವಿಲೀನವಾಗಿರುವ ಲವಣಾಂಶಗಳ ಒಟ್ಟು ಮೊತ್ತವನ್ನು (ಟಿಡಿಎಸ್) ಎನ್ನಲಾಗುತ್ತದೆ.

ನೀರಿನಲ್ಲಿ ಅತ್ಯಲ್ಪವಾಗಿ ವಿಲೀನವಾಗಿರುವ ಲವಣಾಂಶಗಳಿಂದ ಅದನ್ನು ದಶಲಕ್ಷ (ಪಾರ್ಟ್ಸ್ ಪರ್ ಮಿಲಿಯನ್) ಭಾಗಗಳಲ್ಲಿ ನಮೂದಿಸಲಾಗುತ್ತದೆ. ಒಂದು ಪಿಪಿಎಮ್ ಎಂದರೆ ಒಂದು ಲೀಟರ್ ನೀರಿನಲ್ಲಿ ಒಂದು ಮಿಲಿಗ್ರಾಮ್ (1/1,000,000) ಅಂಶ. ಐಬಿಎಸ್ ಮಾನದಂಡದ ಪ್ರಕಾರ ಟಿಡಿಎಸ್ 500 ರಿಂದ 2000 ಪಿಪಿಎಮ್ ಇರಬಹುದು. ಇದರ ಜೊತೆಗೆ ನಾವು ಕುಡಿಯುವ ನೀರಿನಲ್ಲಿ ಅನೇಕ ಖನಿಜಗಳು, ನೀರಿನಲ್ಲಿ ಕರಗಿದ ಆಮ್ಲಜನಕದ ಮಟ್ಟ (5-14 ಪಿಪಿಎಮ್), ಬ್ಯಾಕ್ಟೀರಿಯಾಗಳು ನಿರ್ದಿಷ್ಟ (ಕಡಿಮೆ) ಅಂಶದಲ್ಲಿ ಮಾತ್ರ ಇರಬೇಕು. ಹೆಚ್ಚು ಅಥವಾ ಕಡಿಮೆ ಇದ್ದರೂ ಆರೋಗ್ಯಕ್ಕೆ ಮಾರಕವಾಗುತ್ತದೆ. ಇಷ್ಟಕ್ಕೂ ಶುದ್ಧ ನೀರಿನ ಬಗ್ಗೆ ಇಷ್ಟೊಂದು ಜಾಗೃತಿ ಮೂಡಿಸುವ ಅಗತ್ಯವಾದರೂ ಏನು ಎನ್ನುವ ಪ್ರಶ್ನೆಗಳು ಹಲವರನ್ನು ಕಾಡಬಹುದು. ನೀರನ್ನು ‘ಜೀವ ಜಲ’ ಎಂದು ಕರೆಯಲಾಗುತ್ತದೆ. ನೀರಿನ ಅಂಶವಿಲ್ಲದೆ ಭೂಮಿಯ ಮೇಲೆ ಯಾವುದೇ ಗಿಡಮರ, ಪಕ್ಷಿ-ಪ್ರಾಣಿ, ಮನುಷ್ಯ, ಬ್ಯಾಕ್ಟೀರಿಯಾ-ವೈರಸ್ ಜೀವ ಪಡೆಯಲಾಗದು ಮತ್ತು ಬದುಕು ನಡೆಸಲಾಗದು. ನೀರಿಲ್ಲದೆ ಭೂಮಿಯ ಮೇಲೆ ಯಾವುದೇ ಭೂಭೌತಿಕರಾಸಾಯನಿಕ ಪ್ರಕ್ರಿಯೆಗಳು ನಡೆಯುವುದಿಲ್ಲ. ಗಿಡಮರ, ಪಕ್ಷಿ-ಪ್ರಾಣಿಗಳು ಮತ್ತು ಮನುಷ್ಯರಲ್ಲಿ ಜೈವಿಕ ಪ್ರಕ್ರಿಯೆಗಳು ನಡೆಯುವುದೇ ನೀರಿನಿಂದ.

ಅಷ್ಟೇ ಅಲ್ಲ ನಿಸರ್ಗದಲ್ಲಿರುವ ಪ್ರತಿಯೊಂದು ಖನಿಜ, ಅನಿಲ ಚಕ್ರಗಳು ನಡೆಯಬೇಕಾದರೂ ನೀರು ಬೇಕೇಬೇಕು. ಜೈವಿಕ ಭೂರಾಸಾಯನಿಕ, ಆಮ್ಲಜನಕ, ಇಂಗಾಲ, ಜಲಜನಕ ಹೀಗೆ ಪ್ರತಿಯೊಂದು ಜೈವಿಕ ಚಕ್ರವೂ ನೀರಿನ ಸಹಾಯದಿಂದಲೇ ನಡೆಯಬೇಕು. ಎಲ್ಲಾ ಕಡೆಯೂ ಶುದ್ಧನೀರು ಬಳಸುವುದು ಬಹಳ ಮುಖ್ಯ. ಮನುಷ್ಯ, ಪಕ್ಷಿ-ಪ್ರಾಣಿಗಳು ಮತ್ತು ಗಿಡಮರಗಳಿಗೂ ಶುದ್ಧನೀರು ಬೇಕಿದೆ. ಕಲ್ಮಷ ಅಥವಾ ಮಾಲಿನ್ಯಗೊಂಡ ನೀರು ಕುಡಿದರೆ ಆರೋಗ್ಯ ಏರುಪೇರಾಗುತ್ತದೆ. ನಾವು ಬೆಳೆಸುವ ಬೆಳೆಗಳಿಗೂ ಶುದ್ಧ ನೀರನ್ನೇ ಉಣಿಸಬೇಕಿದೆ. ಕಲ್ಮಶ ನೀರಿನಿಂದ ಬೆಳೆದ ಹಣ್ಣು, ತರಕಾರಿ, ಆಹಾರ ಧಾನ್ಯಗಳನ್ನು ತಿಂದರೆ ಆರೋಗ್ಯಕ್ಕೆ ಧಕ್ಕೆಯಾಗುತ್ತದೆ. ಪ್ರತಿಯೊಂದು ಪಕ್ಷಿ-ಪ್ರಾಣಿ, ಜಾನುವಾರುಗಳಿಗೂ ಶುದ್ಧನೀರು ಮತ್ತು ಸಾಧ್ಯವಾದಷ್ಟು ವಿಷಮುಕ್ತ ಆಹಾರ ದೊರಕುವಂತೆ ಮಾಡಬೇಕು. ಇಲ್ಲವೆಂದರೆ ಅವುಗಳ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರಿ ಸಾವುಗಳು ಸಂಭವಿಸುತ್ತವೆ. ಇದಕ್ಕಾಗಿಯೇ ಭೂಮಿಯ ಮೇಲಿರುವ ಶುದ್ಧ ಮತ್ತು ಸಿಹಿನೀರನ್ನು ನಾವು ಉಳಿಸಿಕೊಳ್ಳಬೇಕಿದೆ. ಇಲ್ಲವೆಂದರೆ ಜೀವಜಾಲದ ಜೊತೆಗೆ ನಾವೂ ಭೂಮಿಯ ಮೇಲೆ ಉಳಿಯುವುದಿಲ್ಲ. ಇಂದಿಗೂ ಒಂದು ಆಶ್ಚರ್ಯದ ಸಂಗತಿ ಎಂದರೆ ನೀರು ಭೂಮಿಗೆ ಹೇಗೆ ಬಂದಿತು? ಯಾವ ಕಾಲದಲ್ಲಿ ಬಂದಿತು? ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರವನ್ನು ಯಾರಿಂದಲೂ ನಿಖರವಾಗಿ ಕೊಡಲು ಸಾಧ್ಯವಾಗಿಲ್ಲ.

Writer - ಡಾ.ಎಂ.ವೆಂಕಟಸ್ವಾಮಿ

contributor

Editor - ಡಾ.ಎಂ.ವೆಂಕಟಸ್ವಾಮಿ

contributor

Similar News