‘ಫೇಮ್ ಗೇಮ್’ ನಟಿಯೊಬ್ಬಳ ಬದುಕಿನ ಸುತ್ತ.....
ಒಟಿಟಿಯ ಈ ದಿನಗಳಲ್ಲಿ ಸರಣಿ ಚಿತ್ರಗಳು ಸರಣಿಯಲ್ಲಿ ಸುದ್ದಿ ಮಾಡುತ್ತಿವೆ. ನೆಟ್‌ಫ್ಲಿಕ್ಸ್ ನಂತಹ ತಾಣದಲ್ಲಿ ಸ್ತ್ರೀ ಪ್ರಧಾನ ಭೂಮಿಕೆಯ ಸರಣಿಗಳು ಹೆಚ್ಚು ಬರುತ್ತಿವೆ. ಒಂದು ಕಾಲದಲ್ಲಿ ಮಿಂಚಿದ್ದ ತಾರೆಯರೆಲ್ಲ ಮತ್ತೆ ಮರು ಪ್ರವೇಶಕ್ಕೆ ಈ ತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಪೂಜಾಭಟ್ ನಾಯಕತ್ವದ ‘ಮುಂಬೈ ಬೇಗಮ್ಸ್’ ಜನಪ್ರಿಯವಾದಂತೆಯೇ, ಇದೀಗ ಮಾಧುರಿ ದೀಕ್ಷಿತ್ ನಾಯಕಿಯಾಗಿ ನಟಿಸಿರುವ ‘ಫೇಮ್ ಗೇಮ್’ ಸುದ್ದಿಯಲ್ಲಿದೆ.
ಫೇಮ್‌ಗೇಮ್ ಸರಣಿಯನ್ನು ಬಿಜಯ್ ನಂಬಿಯಾರ್ ಮತ್ತು ಕರಿಶ್ಮಾ ಕೊಹ್ಲಿ ಅವರು ನಿರ್ದೇಶಿಸಿದ್ದಾರೆ. ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಅನಾಮಿಕಾ ಎನ್ನುವ ನಾಯಕಿಯ ಬದುಕನ್ನು ಇಡೀ ಸರಣಿ ವಸ್ತುವಾಗಿಸಿಕೊಂಡಿದೆ. ಈ ಹಿಂದೆ ಮಧುರ್ ಭಂಡಾರ್ಕರ್ ಅವರ ‘ಹಿರೋಯಿನ್’ ಚಿತ್ರ ಬಾಲಿವುಡ್ ಒಳಗಿರುವ ರಾಜಕೀಯವನ್ನು, ಇಲ್ಲಿನ ನಟಿಯರ ವಾಸ್ತವ ಬದುಕನ್ನು ತೆರೆದಿಡುವ ಪ್ರಯತ್ನ ನಡೆಸಿತ್ತು. ಫೇಮ್‌ಗೇಮ್ ಬಾಲಿವುಡ್‌ನ್ನು ಗುರಿ ಮಾಡದೇ ಒಬ್ಬ ನಟಿ ಸಾರ್ವಜನಿಕವಾಗಿ ತಾರೆಯಾಗಿ ಗುರುತಿಸುತ್ತಲೇ, ಖಾಸಗಿ ಬದುಕಿನಲ್ಲಿ ಅಸಹಾಯಕಳಾಗುತ್ತಾಳೆ ಎನ್ನುವುದನ್ನು ಭಿನ್ನವಾಗಿ ತೆರೆದಿಟ್ಟಿದೆ. ಬಾಲಿವುಡ್‌ನಲ್ಲಿ ದುರ್ಬಲವಾಗುತ್ತಿರುವ ತನ್ನ ಅಸ್ತಿತ್ವವನ್ನು ಮತ್ತೆ ಗಟ್ಟಿಗೊಳಿಸಲು ಆಕೆ ನಡೆಸುವ ಪ್ರಯತ್ನ ಇವೆಲ್ಲವನ್ನೂ ಅತ್ಯಂತ ಕುತೂಹಲಕಾರಿಯಾಗಿ ಸರಣಿಯಲ್ಲಿ ಕಟ್ಟಿಕೊಡಲಾಗಿದೆ.
ಸರಣಿ ಆರಂಭವಾಗುವುದೇ, ಖ್ಯಾತ ತಾರೆ ಅನಾಮಿಕ ಆನಂದ್(ಮಾಧುರಿ ಧೀಕ್ಷಿತ್) ನಾಪತ್ತೆಯಾಗುವುದರಿಂದ. ದೇಶಾದ್ಯಂತ ಈ ಸುದ್ದಿ ಸಂಚಲನವನ್ನು ಸೃಷ್ಟಿಸುತ್ತದೆ. ಪೊಲೀಸ್ ಅಧಿಕಾರಿ ಶೋಭಾ ತ್ರಿವೇದಿ (ರಾಜಶ್ರೀ ದೇಶಪಾಂಡೆ) ಅನಾಮಿಕಳ ತನಿಖೆಯನ್ನು ಕೈಗೆತ್ತಿಕೊಳ್ಳುತ್ತಾಳೆ. ಈ ತನಿಖೆಯ ಜೊತೆ ಜೊತೆಗೇ ಅನಾಮಿಕಳ ಹಿಂದಿನ ಬದುಕನ್ನು ನಿರೂಪಿಸುತ್ತಾ ಹೋಗಲಾಗುತ್ತದೆ. ಒಂದೆಡೆ ಅನಾಮಿಕ ನಾಪತ್ತೆಯಾಗುವ ಮೊದಲಿನ ಕತೆ, ಇನ್ನೊಂದೆಡೆ ನಾಪತ್ತೆಯಾದ ಸಂದರ್ಭದ ಬೆಳವಣಿಗೆಗಳು, ಇದೇ ಸಂದರ್ಭದಲ್ಲಿ ಅನಾಮಿಕ ನಾಪತ್ತೆಯಾದ ಬಳಿಕದ ಘಟನೆಗಳು ಹೀಗೆ ಮೂರು ಹಂತದಲ್ಲಿ ಚಿತ್ರ ಕತೆ ತೆರೆದುಕೊಳ್ಳುತ್ತದೆ. ಪತ್ತೇದಾರಿ ಶೈಲಿಯಲ್ಲಿ ಕತೆಯನ್ನು ಹೇಳಲಾಗಿದೆ.
ಜೊತೆ ಜೊತೆಗೆ ಅನಾಮಿಕಳ ಕೌಟುಂಬಿಕ ಸಂಘರ್ಷ, ವೈಯಕ್ತಿಕ ಪ್ರೇಮ ಸಂಕಟಗಳು, ಮಕ್ಕಳ ಜೊತೆಗಿನ ಆಕೆಯ ಹೊಣೆಗಾರಿಕೆ ಇವೆಲ್ಲವನ್ನು ಸರಣಿ ಪರಿಣಾಮಕಾರಿಯಾಗಿ ದಾಟಿಸುತ್ತದೆ. ತಾಯಿಯಾಗಿ, ನಟಿಯಾಗಿ, ಪತ್ನಿಯಾಗಿ, ಪ್ರೇಯಸಿಯಾಗಿ ಮಾಧುರಿ ದೀಕ್ಷಿತ್ ಸರಣಿಯುದ್ದಕ್ಕೂ ಆವರಿಸಿಕೊಳ್ಳುತ್ತಾರೆ. ಅನಾಮಿಕಳ ಮಗನಾಗಿ ಲಕ್ಷ್ವಿರ್ ಸರಣ್ ಪಾತ್ರವೂ ಗಮನಾರ್ಹ ಪೋಷಣೆಯಿಂದ ಕೂಡಿದೆ. ಸೂಪರ್ ಸ್ಟಾರ್ ಮನೀಶ್ ಖನ್ನಾ ಪಾತ್ರದಲ್ಲಿ ಮಾನವ್ ಕೌಲ್ ನಟನೆಯೂ ಗಟ್ಟಿಯಾಗಿದೆ. ಅನಾಮಿಕಳ ಪ್ರೇಮಿಯಾಗಿ ಆತ ಅನುಭವಿಸುವ ಸಂಕಟಗಳನ್ನು, ಆತನ ಅಂತ್ಯ ಮನಮುಟ್ಟುವಂತಿದೆ. ಸಿನೆಮಾ ತಾರೆಯಾಗುವ ಕನಸು ಕಾಣುವ ಅನಾಮಿಕಳ ಮಗಳ ಪಾತ್ರದಲ್ಲಿ ಮುಸ್ಕಾನ್ ಝಾಫರಿ ಪರಿಣಾಮಕಾರಿಯಾಗಿ ಮೂಡಿ ಬಂದಿದ್ದಾರೆ. ಅನಾಮಿಕಳ ಗಂಡನಾಗಿ ಸಂಜಯ್ ಕಪೂರ್ ಪಾತ್ರವೂ ನಿರ್ಲಕ್ಷಿಸುವಂತಹದಲ್ಲ. ಇದೊಂದು ನೆಗೆಟಿವ್ ಪಾತ್ರವಾದರೂ ಕಪೂರ್ ಅದಕ್ಕೆ ನ್ಯಾಯ ನೀಡಿದ್ದಾರೆ.
8 ಸಂಚಿಕೆಗಳನ್ನು ಈ ಸರಣಿ ಹೊಂದಿದೆ. ಕರಣ್ ಜೋಹರ್, ಸೋಮನ್ ಮಿಶ್ರಾ ಚಿತ್ರವನ್ನು ನಿರ್ಮಿಸಿದ್ದಾರೆ. ಫೆಬ್ರವರಿ 25ರಂದು ಈ ಸರಣಿ ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಗೊಂಡಿದೆ. ಮಾಧುರಿ ದೀಕ್ಷಿತ್ ಅಭಿಮಾನಿಗಳಿಗೆ ಈ ಸರಣಿ ಖುಷಿ ಕೊಡಬಹುದು.