ಕೋವಿಡ್ ಭರಾಟೆಯಲ್ಲಿ ಮರೆತ ‘ಬಡವರ ರೋಗ ಟಿಬಿ’

Update: 2022-03-24 08:08 GMT

ಜಗತ್ತಿನಲ್ಲಿ, ಅದರಲ್ಲೂ ಮುಖ್ಯವಾಗಿ ಬಡದೇಶಗಳಲ್ಲಿ ಪ್ರತಿದಿನ ನಾಲ್ಕು ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಳ್ಳುವ ಟಿಬಿ ಆಥವಾ ಕ್ಷಯ ರೋಗವು ಹರಡುರೋಗವಾಗಿದ್ದರೂ, ಜೀವನ ಪರಿಸ್ಥಿತಿ, ಶೈಲಿಯ ಕಾರಣದಿದಾಗಿ ಬಡವರಿಗೇ ಹೆಚ್ಚಾಗಿ ಬರುತ್ತದೆ. ಇಂದು (ಮಾರ್ಚ್ 24) ವಿಶ್ವ ಕ್ಷಯ ದಿನವಾದರೂ, ಇತ್ತೀಚೆಗೆ ಕೋವಿಡ್ ಭರಾಟೆಯಲ್ಲಿ ಮರೆತೇ ಹೋಗಿರುವ ಈ ಮಾರಕ ರೋಗದ ಸುತ್ತ ಒಂದೆರಡು ಕಹಿ ಚಿಂತನೆ.

ಅಪ್ಪನ ದಿನ, ಅಮ್ಮನ ದಿನ, ಗೆಳೆತನದ ದಿನ, ಪ್ರೇಮಿಗಳ ಕಾವ್ಯ ದಿನ... ಹೀಗೆ ತರತರಾವರಿ ದಿನಗಳು ಬರುತ್ತವೆ. ಮಾರುಕಟ್ಟೆಯ ನಿಯಂತ್ರಣದಲ್ಲಿರುವ ಸಮಾಜದಲ್ಲಿ ವಿಧವಿಧದ ಹೊಸಹೊಸ ಸರಕುಗಳನ್ನು ಮಾರಲು ಇವು ಅನುಕೂಲ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಮಧ್ಯಮ ವರ್ಗಗಳ ಯುವಜನರು ಸಾಕಷ್ಟು ಸಂಭ್ರಮಿಸಿ, ಒಂದಿಷ್ಟು ಶಾಪಿಂಗ್ ಮಾಡುತ್ತಾರೆ. ಅದೇ ರೀತಿ, ನಿನ್ನೆ ಮೊನ್ನೆ- ಮಾರ್ಚ್ 22, 23ರಂದು ವಿಶ್ವ ನೀರಿನ, ಹವಾಮಾನ ದಿನಗಳು ಬಂದುಹೋದವು ಒಂದೆರಡು ಪತ್ರಿಕಾಬರಹಗಳು ಬಂದವು, ಸೇವೆಯನ್ನೇ ವ್ಯಾಪಾರ ಮಾಡಿಕೊಂಡಿರುವ ಹಲವಾರು ಎನ್‌ಜಿಒಗಳು ವಿಚಾರಗೋಷ್ಠಿಗಳನ್ನು ನಡೆಸಿ ಪ್ರಬಂಧಗಳನ್ನು ಮಂಡಿಸಿದರು. (ಗಂಭೀರವಾಗಿ, ಒಳ್ಳೆಯ ಕೆಲಸ ಮಾಡುತ್ತಿರುವ ಕೆಲವು ಎನ್‌ಜಿಒಗಳನ್ನು ಹೊರತುಪಡಿಸಿ) ಆಗುವ ಪ್ರಯೋಜನ? ನೀರು, ಪರಿಸರ, ಹವಾಮಾನ ಇತ್ಯಾದಿಯಾಗಿ ನಮ್ಮ ಜೀವನದ ಮೇಲೆ ನಿತ್ಯ ಪರಿಣಾಮ ಬೀರುವ, ಮಾನವ ಕುಲದ ಭವಿಷ್ಯವನ್ನೇ ಹೊಸಕಿ ಹಾಕಬಲ್ಲ ಸಮಸ್ಯೆಗಳು ಅಂದಿಗೇ ಮರೆತು ಹೋಗುತ್ತವೆ. ಇವುಗಳಿಗೆ ಸಂಬಂಧಿಸಿದ ವಿಚಾರಗಳಾಗಲೀ, ಜಾಗೃತಿಯಾಗಲೀ ಯುವಜನರನ್ನು, ಅವುಗಳಿಂದ ನೇರ ಬಾಧಿತರಾಗುನ ಸಾಮಾನ್ಯ ಜನರನ್ನು ತಲುಪುವುದಿಲ್ಲ.

ಇವುಗಳಂತೆಯೇ ಆರೋಗ್ಯಕ್ಕೆ ಸಂಬಂಧಿಸಿಯೂ ಕೆಲವು ದಿನಗಳಿವೆ. ವಿಶ್ವ ಆರೋಗ್ಯ ದಿನ, ಹೃದಯರೋಗ ದಿನ, ಕ್ಯಾನ್ಸರ್ ದಿನ, ಡಯಾಬಿಟಿಸ್ ದಿನ... ಹಿಂದೆ ಸೇವೆಯಾಗಿದ್ದ ಆರೋಗ್ಯ ಕ್ಷೇತ್ರವು ಇಂದು ಅತ್ಯಂತ ಲಾಭದ ಉದ್ಯಮವಾಗಿರುವುದರಿಂದ ಮತ್ತು ಅದರ ಜೊತೆಗೆ ವಿಮಾ ಕ್ಷೇತ್ರವೂ ಬೆಸೆದುಕೊಂಡಿರುವುದರಿಂದ ಈ ದಿನಗಳಲ್ಲಿ ಭಯ ಹುಟ್ಟಿಸುವ ಪ್ರಚಾರಾಭಿಯಾನವೇ ನಡೆದುಬಿಡುತ್ತದೆ. ಆದರೆ, ಅವುಗಳ ಗುರಿ ಬಡವರಾಗಿರದೆ, ಶ್ರೀಮಂತರು ಮತ್ತು ಮಧ್ಯಮ ವರ್ಗದವರೇ ಆಗಿರುತ್ತಾರೆ. ಇದೇ ಕ್ಷೇತ್ರದಲ್ಲಿ ಬರುವ ಟಿಬಿಯ ಬಗ್ಗೆ ಇಂತಹ ಯಾವ ಅಬ್ಬರಗಳೂ ಇರುವುದಿಲ್ಲ: ಕಾಟಾಚಾರದ ಸರಕಾರಿ ಸಮಾರಂಭ, ಜಾಹೀರಾತು ಮತ್ತು ಅದೇ ಹಳೆಯ ಪೋಸ್ಟರುಗಳ ಹೊರತು. ಇಂದು ಬೆಳಗ್ಗಿನಿಂದ ಸಂಜೆಯವರೆಗೆ ಕೇಳಿಸುವ ಕೋವಿಡ್ ಭಜನೆಯ ನಡುವೆ, ಭಾರತದಲ್ಲಿ ಲಕ್ಷಗಳ ಸಂಖ್ಯೆಯಲ್ಲಿ ಜನರನ್ನು ಬಲಿ ತೆಗೆದುಕೊಳ್ಳುವ ಟಿಬಿ, ಅತಿಸಾರ (ಡಯಾರಿಯ), ಮಲೇರಿಯ ಇತ್ಯಾದಿ ರೋಗಗಳು ಜಗತ್ತಿನಿಂದ ಏಕಾಏಕಿಯಾಗಿ ಮಾಯವಾಗಿವೆಯೇ ಎಂಬಂತೆ ಮಾಧ್ಯಮಗಳಾಗಲೀ ಇತರರಾಗಲೀ ಅವುಗಳ ಬಗ್ಗೆ ಒಂದು ಶಬ್ದವನ್ನೂ ಮಾತಾಡುತ್ತಿಲ್ಲ.

ವಿಶ್ವ ಕ್ಷಯ ದಿನವನ್ನು ಮೇ 24ರಂದು ಆಚರಿಸುವುದು ಏಕೆಂದರೆ, ಅಂದು ಡಾ. ರಾಬರ್ಟ್ ಕೋಷ್ ಎಂಬವರು ಟಿಬಿಗೆ ಕಾರಣವಾದ ಬ್ಯಾಕ್ಟೀರಿಯಾವನ್ನು ಗುರುತಿಸಿ ಪ್ರತ್ಯೇಕಿಸಿದ ದಿನ. ಇದರಿಂದಾಗಿಯೇ ಟಿಬಿಗೆ ಔಷಧಿ ಕಂಡುಹಿಡಿಯಲು ಸಾಧ್ಯವಾಯಿತು.

ಟ್ಯೂಬರ್‌ಕ್ಯುಲೋಸಿಸ್ ಎಂದು ಕರೆಯಲ್ಪಡುವ ಈ ಹರಡುರೋಗವು ಟಿಬಿ ಅಥವಾ ಕ್ಷಯ ಎಂಬ ಹೆಸರಿನಿಂದಲೇ ಜನಜನಿತ. ಇದು ಮೈಕೋಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ಇದು ಸಾಮಾನ್ಯವಾಗಿ ಶ್ವಾಸಕೋಶ, ಕಿಡ್ನಿ, ಎಲುಬು, ಬೆನ್ನುಮೂಳೆ, ಮೆದುಳು ಇತ್ಯಾದಿಯಾಗಿ ದೇಹದ ಯಾವ ಭಾಗದ ಮೇಲಾದರೂ ದಾಳಿ ಮಾಡಬಹುದು. ಇವುಗಳಲ್ಲಿ ಎರಡು ವಿಧಗಳಿವೆ. ಒಂದು ಯಾವುದೇ ಲಕ್ಷಣಗಳನ್ನು ತೋರಿಸದೆ ದೇಹದಲ್ಲಿ ಸುಮ್ಮನೇ ಮಲಗಿರುವಂತವುಗಳು (ಲ್ಯಾಟೆಂಟ್- ಎಲ್‌ಟಿಬಿ) ಮತ್ತು ಸಕ್ರಿಯವಾಗಿರುವಂತವು. ಎರಡನೆಯದರಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಇದ್ದರೆ, ಸಾವು ಖಂಡಿತ. ಈ ರೋಗದ ಲಕ್ಷಣಗಳು ರೋಗ ತೀವ್ರತೆಗೆ ಮತ್ತು ತಗುಲಿದ ದೇಹ ಭಾಗಕ್ಕೆ ಅನುಗುಣವಾಗಿ ಇರುತ್ತವೆ. ಶ್ವಾಸಕೋಶದ ಟಿಬಿಯಲ್ಲಿ ಸತತ ಕೆಮ್ಮು, ಎದೆ ನೋವು, ಕಫದಲ್ಲಿ ರಕ್ತಬರುವುದು, ತೂಕ ಕಡಿಮೆಯಾಗುವುದು, ಹಸಿವಿಲ್ಲದಿರುವುದು, ಮೈಕೈನೋವು ಇತ್ಯಾದಿ ಹಲವಿವೆ. ವೈದ್ಯಕೀಯ ಪರೀಕ್ಷೆ ಇಲ್ಲದೆ ಈ ರೋಗ ಪತ್ತೆಯಾಗುವುದಿಲ್ಲ. ಆದುದರಿಂದ ರೋಗ ಲಕ್ಷಣಗಳು ಕಂಡಾಕ್ಷಣ ವೈದ್ಯರಲ್ಲಿ ಹೋಗಬೇಕು. ರೋಗ ಪತ್ತೆಯಾದರೆ, ಭಯಪಡಬೇಕಾಗಿಲ್ಲ. ಈಗ ಇದು ಗುಣಪಡಿಸಬಹುದಾದ ರೋಗ. ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆಯು ಎರಡು ಹೊಸ, ಹೆಚ್ಚು ಪರಿಣಾಮಕಾರಿ ಔಷಧಿಗಳನ್ನೂ ಅಂಗೀಕರಿಸಿದೆ. ಇದು ಹರಡುವ (ಹೆಚ್ಚಾಗಿ ಉಸಿರು ಮತ್ತು ಕಫದಿಂದ) ಸ್ವಭಾವ ಹೊಂದಿರುವುರಿಂದ ಸಾಂಸ್ಥಿಕ ಚಿಕಿತ್ಸೆಯೇ ಒಳ್ಳೆಯದು. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಇದ್ದು, ಹಲವು ಕಡೆಗಳಲ್ಲಿ ಅದಕ್ಕೆಂದೇ ಮೀಸಲಾದ ಆಸ್ಪತ್ರೆಗಳೂ ಇವೆ. ಆದರೂ, ಭಾರತವೂ ಸೇರಿದಂತೆ ಬಡದೇಶಗಳಲ್ಲಿ ಇಂದಿಗೂ- ಚಿಕಿತ್ಸೆ ಲಭ್ಯವಿರುವ ಈ ರೋಗಕ್ಕೆ ಲಕ್ಷಾಂತರ ಜನರು ಬಲಿಯಾಗುತ್ತಿರುವ ಕಹಿ ಸತ್ಯಕ್ಕೆ ಕಾರಣಗಳೇನು? ಇದನ್ನು ಮಾನವ ಕುಲದ ಅಸಡ್ಡೆ ಎನ್ನಬೇಕೆ? ಬೇಜವಾಬ್ದಾರಿ ಎನ್ನಬೇಕೆ?

ಈಗ ಟಿಬಿಗೆ ಸಂಬಂಧಿಸಿ ಅಧಿಕೃತ ಜಾಗತಿಕ ಆಂಕಿಅಂಶಗಳನ್ನು ಒಮ್ಮೆ ನೋಡೋಣ. ವರ್ಷಗಳಿಂದ ಟಿಬಿಯು ಪ್ರಪಂಚದ ಅತ್ಯಂತ ಮಾರಕ ಹರಡು ರೋಗವೆನಿಸಿಕೊಂಡಿದೆ. ಪ್ರತೀ ದಿನ 4,100ಕ್ಕೂ ಹೆಚ್ಚು ಜನ ಸಾಯುತ್ತಾರೆ ಮತ್ತು 28,000 ಹೊಸ ರೋಗಿಗಳು ಪತ್ತೆಯಾಗುತ್ತಾರೆ. ವೈದ್ಯರ ಮುಖವನ್ನೇ ಕಾಣದೇ, ತಮಗೆ ಈ ರೋಗ ಇದೆಯೆಂದೇ ಗೊತ್ತಿಲ್ಲದೆ, ಅದರೊಂದಿಗೆ ಹೆಣಗಿ ಸತ್ತ ಕಡುಬಡವರ ಲೆಕ್ಕ ಇದರಲ್ಲಿ ಇರಲಿಕ್ಕಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆಯಂತೆ, 2000ನೇ ಇಸವಿಯ ನಂತರದಲ್ಲಿ, ಆರು ಕೋಟಿ, ಅರುವತ್ತು ಲಕ್ಷ ಟಿಬಿ ರೋಗಿಗಳನ್ನು ಬದುಕಿಸಲಾಗಿದೆ. ಅದೇ ವರದಿಯಲ್ಲಿ ಆದು ಒಪ್ಪಿಕೊಂಡಿರುವುದು ಏನೆಂದರೆ, ಕೋವಿಡ್-19 ಸಾಂಕ್ರಾಮಿಕ ರೋಗವು ವರ್ಷಗಳ ಪ್ರಗತಿಯನ್ನು ಬುಡಮೇಲು ಮಾಡಿದೆ ಎಂದು. 2020ರಲ್ಲಿ ಟಿಬಿ ಸಾವುಗಳು ಕಳೆದ ಹತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಭಾರೀ ಏರಿಕೆ ಕಂಡಿವೆ. ಸಿರಿಯಾ, ಯೆಮನ್, ಆಫ್ರಿಕನ್, ಲ್ಯಾಟಿನ್ ಅಮೆರಿಕ ಮುಂತಾದ ಕಡೆ ನಡೆಯುತ್ತಿರುವ ಯುದ್ಧ, ಬರಗಳಿಂದ ಲಕ್ಷಾಂತರ ಮಂದಿ ನಿರಾಶ್ರಿತರಾಗಿರುವುದು ಈ ರೋಗದ ವಿರುದ್ಧ ಹೋರಾಟದಲ್ಲಿ ತೊಡಕಾಗಿದೆ ಎಂದೂ ಅದು ಹೇಳಿದೆ.

ಭಾರತದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮವೊಂದಿದೆ. ಅದುವೇ ಅಂಕಿ-ಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಒದಗಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ 2020ರ ವರದಿ ಮತ್ತು ಭಾರತ ಟಿಬಿ ವರದಿ 2021ರ ಪ್ರಕಾರ ಭಾರತದ ಸ್ಥಿತಿ ಹೀಗಿದೆ: ಭಾರತದಲ್ಲಿ ಅಧಿಕೃತವಾಗಿ ಆ ವರ್ಷದ ಟಿಬಿ ರೋಗಿಗಳ ಸಂಖ್ಯೆ 26.64 ಲಕ್ಷ. ಸಾವಿಗೀಡಾದವರ ಸಂಖ್ಯೆ 4.36 ಲಕ್ಷ. 2019ರ ವರದಿ ಪ್ರಕಾರ ಕೆಲವು ಪ್ರಮುಖ ರಾಜ್ಯಗಳಲ್ಲಿ ಟಿಬಿ ರೋಗಿಗಳ ಸಂಖ್ಯೆ ಹೀಗಿದೆ: ಉತ್ತರ ಪ್ರದೇಶದಲ್ಲಿ 3,22,305 ರೋಗಿಗಳಿದ್ದು, ಅದು ಮೊದಲ ಸ್ಥಾನದಲ್ಲಿತ್ತು. ಮಧ್ಯಪ್ರದೇಶದಲ್ಲಿ 1,39,111, ರಾಜಸ್ಥಾನದಲ್ಲಿ 1,22,852, ಮಹಾರಾಷ್ಟ್ರದಲ್ಲಿ 1,44,120 ಗುಜರಾತ್‌ನಲ್ಲಿ 1,04,696, ಕರ್ನಾಟಕದಲ್ಲಿ 72,112 ಮತ್ತು ಒಟ್ಟು ಭಾರತದಲ್ಲಿ 17,25,920 ರೋಗಿಗಳಿದ್ದರು. ಇದು ಬಡವರಿಗೆ ಮಾತ್ರ ಬರುವ ರೋಗವೆಂದು ಭಾವಿಸಿದ್ದರೆ ಎಚ್ಚರ! ಇದೇ ವರದಿಯ ಪ್ರಕಾರ 40 ಶೇಕಡಾ ಭಾರತೀಯರು ಟಿಬಿ ಸೋಂಕು ಹೊಂದಿದ್ದಾರೆ ಎಂದರೆ ಅನೇಕರು ಬೆಚ್ಚಿಬೀಳಬಹುದು. ಆದರೆ, ಗಾಬರಿಯಾಗಬೇಕಿಲ್ಲ. ಹೆಚ್ಚಿನವರ ದೇಹದಲ್ಲಿರುವುದು ಸುಮ್ಮನೇ ವಾಸಿಸುವ (ಲ್ಯಾಟೆಂಟ್) ಬ್ಯಾಕ್ಟೀರಿಯಾಗಳು.

ತಾನು ಪ್ರತೀ ವರ್ಷ ಮಾರ್ಚ್ 24ರಂದು ಟಿಬಿ ಕುರಿತು, ಅದು ತರುವ ಸಾವುನೋವು, ಆರ್ಥಿಕತೆ, ಸಾಮಾಜಿಕ ವಿಷಯಗಳ ಮೇಲೆ ಮಾಡುವ ಭಯಾನಕ ಪರಿಣಾಮಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುತ್ತಿರುವುದಾಗಿಯೂ ವಿಶ್ವ ಆರೋಗ್ಯ ಸಂಸ್ಥೆಯು ಹೇಳುತ್ತಿದೆ. ಆದರೆ, ಟಿಬಿಯನ್ನು ನಿವಾರಿಸುವ ಜವಾಬ್ದಾರಿ ಕೊನೆಗೂ ಇರುವುದು ಆಯಾ ದೇಶಗಳ ಸರಕಾರಗಳ ಮೇಲೆ. ಆರೋಗ್ಯ ಸಂಸ್ಥೆಯ ಕಾರ್ಯಾಚರಣೆಗಳಿಗೆ ದೊಡ್ಡ ಮೊತ್ತದ ಹಣ ಬೇಕಾಗುತ್ತದೆ ಎಂಬುದು ನಿಜ. ಅದರ ಟಿಬಿ ನಿಧಿಯ ಗುರಿಯಾಗಿರುವ 13 ಬಿಲಿಯನ್ ಡಾಲರ್‌ಗಳ ಅರ್ಧದಷ್ಟೂ ಸಂಗ್ರಹವಾಗಿಲ್ಲ. ಈ ಬಾರಿಯ ಅದರ ಮುಖ್ಯ ಗಮನ ಅದರದ್ದೇ ಭಾಷೆಯಲ್ಲಿ ತುರ್ತು ಹೂಡಿಕೆಯ ಮೇಲಿದೆ. ಈ ರೀತಿಯ ಹೂಡಿಕೆಯಿಂದ ದೇಶಗಳಿಗೆ ಲಕ್ಷಾಂತರ ಜೀವಗಳು ಉಳಿಯುವುದರ ಜೊತೆಗೆ, ಆರೋಗ್ಯ ನಿರ್ವಹಣಾ ವೆಚ್ಚ ಉಳಿತಾಯವಾಗುತ್ತದೆ ಎಂಬ ಲೆಕ್ಕಾಚಾರವನ್ನು ಅದು ನೀಡಿದೆ. ಉತ್ಪಾದಕತೆ ಬಿಡಿ, ದುಡಿಯುವ ಕೈಗಳಿಗೇ ಕೆಲಸ ಕೊಡಲಾಗದ ಸರಕಾರಗಳು ಇಂತಹ ಹೂಡಿಕೆಯಲ್ಲಿ ಎಷ್ಟರ ಮಟ್ಟಿಗೆ ಆಸಕ್ತಿ ತೋರಬಹುದು? ಈ ಹೂಡಿಕೆ ಎಂಬ ಬಂಡವಾಳಿಗರ ವ್ಯಾಪಾರಿ ಶಬ್ದವೇ ಸೇವೆಯಾಗಿದ್ದ ಆರೋಗ್ಯ ಕ್ಷೇತ್ರವು ಉದ್ಯಮವಾಗಿ; ಬಡ ಜನರ ಆರೋಗ್ಯವು ಒಂದು ಮೂಲಭೂತ ಹಕ್ಕಾಗದೇ, ದಾನ-ಭಿಕ್ಷೆಗಳ ಮೇಲೆ ನಿಂತಿದೆ ಎಂಬುದನ್ನು ಸೂಚಿಸುತ್ತದೆ. ಅದುವೇ ಲಾಭದ ಆಧಾರದಲ್ಲಿ ಆದ್ಯತೆಗಳನ್ನು ನಿರ್ಧರಿಸುತ್ತದೆ. ಆದುದರಿಂದಲೇ ಬಡವರ ರೋಗ ಎನಿಸಿದ ಕ್ಷಯದಂತಹ ರೋಗಗಳು ಆದ್ಯತೆಯ ಪಟ್ಟಿಯ ತಳದಲ್ಲಿವೆ.

ರೋಗಿಗಳನ್ನು ಬಡವರ-ಶ್ರೀಮಂತರ ಎಂದು ಗುರುತಿಸಬಾರದು; ರೋಗಕ್ಕೆ ಬಡವ ಶ್ರೀಮಂತ ಭೇದವಿಲ್ಲ; ಅದು ದೇವರು ಕೊಡುವಂತಹದ್ದು... ಇತ್ಯಾದಿಯಾಗಿ ಕೆಲವು ವೈದ್ಯರ ಸಹಿತ ತುಂಬಾ ಜನ ಒಣ ಪ್ರವಚನ ಮಾಡುತ್ತಾರೆ. ಆದರೆ, ಉಳ್ಳವರು ಹೇಗಾದರೂ ಬದುಕುತ್ತಾರೆ; ಬಡವರು ಒದ್ದಾಡಿ ಸಾಯುತ್ತಾರೆ ಎಂಬುದನ್ನು ಕೋವಿಡ್ ಸಂದರ್ಭದಲ್ಲಿ ವಿದೇಶಗಳಿಗೆ ಹಾರಿದ ಗಣ್ಯರು, ಆಕ್ಸಿಜನ್ ಇಲ್ಲದೆ ನರಳಿ ಸತ್ತವರು, ಗಂಗೆಯಲ್ಲಿ ತೇಲಿದ ಹೆಣಗಳು ನಮಗೆ ತೋರಿಸಿಕೊಟ್ಟಿಲ್ಲವೆ? ಟಿಬಿ ಬಡವರ ರೋಗ ಏಕೆಂದರೆ, ಅದು ಹೆಚ್ಚಾಗಿ ಅಪೌಷ್ಟಿಕತೆ, ಸ್ವಚ್ಚತೆಯ ಕೊರತೆ, ಹತ್ತಿರ ಹತ್ತಿರ ವಾಸ ಇತ್ಯಾದಿಗಳಿಂದ ಹರಡುತ್ತದೆ. ಬಡವರಲ್ಲಿ ಇರುವ ತಿಳುವಳಿಕೆಯ ಕೊರತೆ, ಮೌಢ್ಯ ಇತ್ಯಾದಿಗಳಿಂದಾಗಿ ಸಾಯುವವರು ಬಡವರೇ ಎಂಬುದು ಅಂಕಿ ಅಂಶಗಳಿಂದ ಗೊತ್ತಾಗುತ್ತದೆ. ಆಫ್ರಿಕಾ, ಏಶ್ಯದ ಬಡ ಮತ್ತು ಭಾರತದಂತಹ ಕುಬೇರರ ರಾಜ್ಯಭಾರವಿದ್ದು ಕೋಟ್ಯಂತರ ಕಡುಬಡವರಿಂದ ತುಂಬಿದ ಶ್ರೀಮಂತ ದೇಶಗಳಲ್ಲೇ ಟಿಬಿ ಹೆಚ್ಚು. ಆದರೂ ಸುಮ್ಮನೇ ನೋಡಿ: ಉಕ್ರೇನ್ ಯುದ್ಧದಲ್ಲಿ ಕೊಲ್ಲಲು ಬಳಕೆಯಾದ ಒಂದೊಂದು ವಿಮಾನ, ಕ್ಷಿಪಣಿ, ಟ್ಯಾಂಕ್, ಬಾಂಬ್ ಇತ್ಯಾದಿಗಳಿಗೆ ಸುರಿಯಲಾಗುವ ಬಿಲಿಯಗಟ್ಟಲೆ ಡಾಲರ್ ಹಣದ ಲೆಕ್ಕಾಚಾರ ಹಾಕಿನೋಡಿ. ನಮ್ಮ ಜಗತ್ತಿನಲ್ಲಿ ಕೊಲ್ಲಲು ಹಣವಿದೆ; ಬದುಕಿಸಲು ಹಣವಿಲ್ಲ!

Writer - ನಿಖಿಲ್ ಕೋಲ್ಪೆ

contributor

Editor - ನಿಖಿಲ್ ಕೋಲ್ಪೆ

contributor

Similar News