ನೋಟಿಸ್ ನೀಡದೆ 200 ಕೋವಿಡ್ ಯೋಧರನ್ನು ಕೆಲಸದಿಂದ ವಜಾಗೊಳಿಸಿದ ಉತ್ತರ ಪ್ರದೇಶ ಸರಕಾರ: ವರದಿ

Update: 2022-03-26 15:00 GMT

ಲಕ್ನೋ, ಮಾ.26: ಕೋವಿಡ್ ಸಾಂಕ್ರಾಮಿಕದ ಸಂದರ್ಭ 2020, ಮಾರ್ಚ್ ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದ್ದ ಇಲ್ಲಿಯ ಡಾ.ರಾಮ ಮನೋಹರ ಲೋಹಿಯಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 200 ಆರೋಗ್ಯ ಕಾರ್ಯಕರ್ತರನ್ನು ಎ.1ರಿಂದ ಜಾರಿಗೆ ಬರುವಂತೆ ಕೆಲಸದಿಂದ ವಜಾಗೊಳಿಸಲಾಗಿದೆ. ಆದಿತ್ಯನಾಥ್ ಅವರು ಶುಕ್ರವಾರ ಸತತ ಎರಡನೇ ಅವಧಿಗೆ ಉ.ಪ್ರ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮುನ್ನಾದಿನ ಈ ಬೆಳವಣಿಗೆ ನಡೆದಿದೆ ಎಂದು newsclick.in ವರದಿ ಮಾಡಿದೆ.

ಈ ಉದ್ಯೋಗಿಗಳು ಕೋವಿಡ್ ಲಸಿಕೆ ನೀಡಿಕೆ, ಶಂಕಿತ ರೋಗಿಗಳ ತಪಾಸಣೆ ಕರ್ತವ್ಯ ನಿರ್ವಹಿಸುತ್ತಿದ್ದು, ಹೊರರೋಗಿಗಳಿಗೆ ಅಗತ್ಯ ಸೇವೆಗಳನ್ನೂ ಒದಗಿಸುತ್ತಿದ್ದರು. ಶಸ್ತ್ರಚಿಕಿತ್ಸಾ ಕೊಠಡಿ ಸಹಾಯಕರಾಗಿ, ವೆಂಟಿಲೇಟರ್ ತಂತ್ರಜ್ಞರಾಗಿ, ಸ್ಟಾಫ್ ನರ್ಸ್ ಗಳಾಗಿ ಮತ್ತು ವಾರ್ಡ್ ಬಾಯ್ ಗಳಾಗಿ ಕೆಲಸ ಮಾಡಲು ನೇಮಕಗೊಂಡಿದ್ದ ಈ ಉದ್ಯೋಗಿಗಳು ತಮ್ಮ ಮರುನೇಮಕಕ್ಕೆ ಆಗ್ರಹಿಸಿ ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ಪ್ರತಿಭಟನೆಯನ್ನು ನಡೆಸಿದ್ದಾರೆ.

ಹೋಳಿ ಹಿನ್ನೆಲೆಯಲ್ಲಿ ಈ ಉದ್ಯೋಗಿಗಳನ್ನು ಮಾರ್ಚ್ ನಲ್ಲಿ ವಜಾಗೊಳಿಸಿಲ್ಲ ಎಂದು ಅವರನ್ನು ನೇಮಕಗೊಳಿಸಿದ್ದ ಏಜೆನ್ಸಿಗೆ ಕಳುಹಿಸಿರುವ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯ ಸರಕಾರವು ತಮಗೆ ಒಂದು ತಿಂಗಳ ನೋಟಿಸ್ ನೀಡಬೇಕಿತ್ತು ಎಂದು ಹೊರಗುತ್ತಿಗೆ ಉದ್ಯೋಗಿಗಳು ಹೇಳಿದ್ದಾರೆ. ‘ನಮಗೆ ಮಾಹಿತಿ ನೀಡದೇ ದಿಢೀರ್ ಆಗಿ ಕೆಲಸದಿಂದ ವಜಾ ಮಾಡಲಾಗಿದೆ. ಆರೋಗ್ಯ ಇಲಾಖೆಯು ವಜಾ ನಿರ್ಧಾರವನ್ನು ಕೈಗೊಳ್ಳುವ ಮೊದಲು ನಾವು ನಮ್ಮ ಕುಟುಂಬಗಳನ್ನು ಅಪಾಯದಲ್ಲಿ ಸಿಲುಕಿಸಿ ಕೋವಿಡ್ ರೋಗಿಗಳಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿಲ್ಲ’ ಎಂದು ಆಕ್ರೋಶಿತ ನರ್ಸ್ ಓರ್ವರು newsclick.in ಸುದ್ದಿಸಂಸ್ಥೆಯೊಂದಿಗೆ ಅಳಲು ತೋಡಿಕೊಂಡರು.

‘ರಾಜ್ಯ ಸರಕಾರವು ನಮ್ಮ ಬೇಡಿಕೆಗಳ ಬಗ್ಗೆ ಜಾಣಗುರುಡು ಪ್ರದರ್ಶಿಸುತ್ತಿರುವಂತಿದೆ. ಕೋವಿಡ್ ಸಂದರ್ಭದಲ್ಲಿ ನಮಗೆ ಪುಷ್ಪಹಾರಗಳನ್ನು ತೊಡಿಸಿ ಸನ್ಮಾನಿಸಲಾಗಿತ್ತು,ಆದರೆ ಈಗ ಸರಕಾರವು ನಮ್ಮ ಜೀವನೋಪಾಯವನ್ನೇ ಕಿತ್ತುಕೊಂಡಿದೆ’ ಎಂದು ವಜಾಗೊಂಡಿರುವ ಲ್ಯಾಬ್ ಟೆಕ್ನಿಷಿಯನ್ ಓರ್ವರು ಹೇಳಿದರು.

ತಮಗೆ ಉದ್ಯೋಗ ಭರವಸೆಯನ್ನು ನೀಡಲಾಗಿತ್ತು ಎಂದು ಪ್ರತಿಪಾದಿಸಿದ ಪ್ರತಿಭಟನಾಕಾರರು,ಸಂಸ್ಥೆಯಲ್ಲಿ ಭಾರೀ ಪ್ರಮಾಣದಲ್ಲಿ ಹುದ್ದೆಗಳು ಖಾಲಿಯಿದ್ದರೂ ತಮ್ಮನ್ನು ಸೇರಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಪ್ರತಿಭಟನಾನಿರತ ಉದ್ಯೋಗಿಗಳಿಗೆ ಬೆಂಬಲವನ್ನು ವ್ಯಕ್ತಪಡಿಸಿರುವ ಎಡಪಕ್ಷಗಳು, ಅವರ ಮರುನೇಮಕಕ್ಕೆ ಆಗ್ರಹಿಸಿವೆ.

ಹೊರಗುತ್ತಿಗೆ ಉದ್ಯೋಗಿಗಳನ್ನು ದಿಢೀರ್ ವಜಾಗೊಳಿಸಿದ್ದು ಇದೇ ಮೊದಲ ಸಲವೇನಲ್ಲ. ಮಾ.7ರಂದು ‘ಆರ್ಥಿಕ ದಿವಾಳಿತನ’ವನ್ನು ಉಲ್ಲೇಖಿಸಿ ಲಕ್ನೋ ಮಹಾನಗರ ಪಾಲಿಕೆಯ 1,944 ಸ್ವಚ್ಛತಾ ಕಾರ್ಮಿಕರನ್ನು ವಜಾಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News