ಎರಡು ವರ್ಷಗಳ ಅಂತರದ ನಂತರ ಅಂತಾರಾಷ್ಟ್ರೀಯ ವಿಮಾನಯಾನ ಪುನರಾರಂಭಿಸಿದ ಭಾರತ

Update: 2022-03-27 19:38 GMT

ಹೊಸದಿಲ್ಲಿ, ಮಾ. 25: ಕೊರೋನ ಸಾಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದ್ದ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವನ್ನು ಎರಡು ವರ್ಷಗಳ ಬಳಿಕ ರವಿವಾರ ಮರು ಆರಂಭಿಸಲಾಗಿದೆ.

ಈ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಭಾರತವನ್ನು ಜಗತ್ತಿನೊಂದಿಗೆ ಸಂಪರ್ಕ ಕಲ್ಪಿಸಲು ನೆರವಾಗಲಿದೆ ಎಂದು ಕೇಂದ್ರ ನಾಗರಿಕ ವಾಯು ಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರು ಹೇಳಿದ್ದಾರೆ. 

ಭಾರತವನ್ನು 63 ದೇಶಗಳೊಂದಿಗೆ ಸಂಪರ್ಕ ಕಲ್ಪಿಸಲು 6 ಭಾರತೀಯ ವಾಯು ಯಾನ ಸಂಸ್ಥೆಗಳು ಹಾಗೂ 60 ವಿದೇಶಿ ವಾಯು ಯಾನ ಸಂಸ್ಥೆಗಳು ವಿಮಾನ ಸಂಚಾರವನ್ನು ಇಂದು ಮರು ಆರಂಭಿಸಿವೆ ಎಂದು ನಾಗರಿಕ ವಾಯು ಯಾನದ ಮಹಾ ನಿರ್ದೇಶನಾಲಯ ತಿಳಿಸಿದೆ.

ಬೇಸಿಗೆ ಕಾಲದ ಹೊಸ ವೇಳಾಪಟ್ಟಿಯಂತೆ ವಿದೇಶಿ ವಾಯು ಯಾನ ಸಂಸ್ಥೆಗಳ 1,783 ವಿಮಾನಗಳು, ಭಾರತದ ವಾಯು ಯಾನ ಸಂಸ್ಥೆಗಳ 1,466 ವಿಮಾನಗಳು ಪ್ರತಿ ವಾರ ದೇಶದಿಂದ ನಿರ್ಗಮಿಸಲಿವೆ.

ಇಂಡಿಗೊ ವಾಯು ಯಾನ ಸಂಸ್ಥೆಯ 505 ವಿಮಾನಗಳು, ಇದರೊಂದಿಗೆ ಟಾಟಾ ಸಮೂಹ ಮಾಲಕತ್ವದ ಏರ್ ಇಂಡಿಯಾ ವಾಯು ಯಾನ ಸಂಸ್ಥೆಯ 361 ವಿಮಾನಗಳು, ಇದರ ಸಹ ಸಂಸ್ಥೆ ಏರ್ ಇಂಡಿಯಾ ಎಕ್ಸ್ಪ್ರೆಸ್ ನ 340 ವಿಮಾನಗಳು ಪ್ರತಿ ವಾರ ಸಂಚರಿಸಲಿವೆ ಎಂದು ಅದು ತಿಳಿಸಿದೆ.

ಮಾರ್ಚ್ 27ರಿಂದ ಅಕ್ಟೋಬರ್ 29ರ ವರೆಗಿನ ಅವಧಿಯನ್ನು ಬೇಸಿಗೆ ಕಾಲದ ವೇಳಾಪಟ್ಟಿ ಎಂದು ಹೇಳಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News