ಐಪಿಎಲ್: ಮುಂಬೈಯನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್
ಮುಂಬೈ, ಮಾ.27: ಲಲಿತ್ ಯಾದವ್ ಹಾಗೂ ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 4 ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗೆಲುವಿನಾರಂಭ ಮಾಡಿದೆ.
ರವಿವಾರ ನಡೆದ 2ನೇ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು. ಗೆಲ್ಲಲು 178 ರನ್ ಬೆನ್ನಟ್ಟಿದ ಡೆಲ್ಲಿ 104 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಭೀತಿಯಲ್ಲಿತ್ತು. ಆಗ ತಂಡಕ್ಕೆ ಆಸರೆಯಾದ ಲಲಿತ್ ಯಾದವ್(ಔಟಾಗದೆ 48, 38 ಎಸೆತ, 4 ಬೌಂ, 2 ಸಿ.)ಹಾಗೂ ಅಕ್ಷರ್ ಪಟೇಲ್(ಔಟಾಗದೆ 38, 17 ಎಸೆತ, 2 ಬೌಂ., 3 ಸಿ.)7ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 75 ರನ್ ಸೇರಿಸಿದರು. ಈ ಇಬ್ಬರ ಸಾಹಸದಿಂದ ಡೆಲ್ಲಿ 18.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಗೆಲುವಿನ ದಡ ಸೇರಿತು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಪರ ಇನಿಂಗ್ಸ್ ಆರಂಭಿಸಿದ ಇಶಾನ್ ಕಿಶನ್(81 ರನ್, 48 ಎಸೆತ, 11 ಬೌಂ, 2 ಸಿ.)ಹಾಗೂ ರೋಹಿತ್ ಶರ್ಮಾ(41, 32 ಎಸೆತ, 4 ಬೌಂ, 2 ಸಿ.)ಮೊದಲ ವಿಕೆಟಿಗೆ 67 ರನ್ ಜೊತೆಯಾಟ ನಡೆಸಿ ಭರ್ಜರಿ ಆರಂಭ ಒದಗಿಸಿದರು. ಆದರೆ ಉತ್ತಮ ಆರಂಭದ ಲಾಭ ಪಡೆಯಲು ವಿಫಲವಾದ ಮುಂಬೈ ತಂಡ ಕುಲದೀಪ್ ಯಾದವ್(3-18) ಹಾಗೂ ಖಲೀಲ್ ಅಹ್ಮದ್(2-27)ನಿಖರ ದಾಳಿಗೆ ತತ್ತರಿಸಿ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು. ್